ಸಂಪುಟ
azadi ka amrit mahotsav

92 GWh ಗ್ರಿಡ್-ಸ್ಕೇಲ್ ಇಂಧನ ಶೇಖರಣಾ ವ್ಯವಸ್ಥೆಗಳ ಅಭಿವೃದ್ಧಿಗಾಗಿ ರೂ. 14,500 ಕೋಟಿ ಮೊತ್ತದ 'ವಯಾಬಿಲಿಟಿ ಗ್ಯಾಪ್ ಫಂಡಿಂಗ್' (ವಿಜಿಎಫ್) ಯೋಜನೆಗೆ ಸಂಪುಟ ಅನುಮೋದನೆ


30 GWh ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ಸ್, 60 GWh ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್‌ಗಳು ಮತ್ತು 2 GWh ಉದಯೋನ್ಮುಖ ಶೇಖರಣಾ ತಂತ್ರಜ್ಞಾನಗಳಿಗೆ ಬೆಂಬಲ ನೀಡಲಿರುವ ಯೋಜನೆ

ನವೀಕರಿಸಬಹುದಾದ ಇಂಧನ ಸಂಯೋಜನೆಯನ್ನು ತ್ವರಿತಗೊಳಿಸಲಿದೆ, ಗ್ರಿಡ್ ಸ್ಥಿರತೆಯನ್ನು ಬಲಪಡಿಸಲಿದೆ ಮತ್ತು ಚವೀಸಾದ ಹಾಗೂ ವಿಶ್ವಾಸಾರ್ಹ 24/7 ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಲಿದೆ

ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ಆಮದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಬಿ ಇ ಎಸ್ ಎಸ್ ಗಾಗಿ ಕಡ್ಡಾಯ ದೇಶೀಯ ಕಂಟೆಂಟ್ ಅಗತ್ಯತೆ

ಪ್ರಕಟಣಾ ದಿನಾಂಕ: 04 NOV 2026 3:27PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು, 2026-27 ರ ಹಣಕಾಸು ವರ್ಷದಿಂದ 2030-31 ರ ವರೆಗಿನ ಹಣಕಾಸು ವರ್ಷದ ಅವಧಿಗೆ ಒಟ್ಟು 14,500 ಕೋಟಿ ರೂ.ಗಳ ಆರ್ಥಿಕ ಬೆಂಬಲದೊಂದಿಗೆ 'ಗ್ರಿಡ್-ಸ್ಕೇಲ್ ಎನರ್ಜಿ ಸ್ಟೋರೇಜ್ ಸಿಸ್ಟಮ್ಸ್' (ಗ್ರಿಡ್-ಮಟ್ಟದ ಇಂಧನ ಶೇಖರಣಾ ವ್ಯವಸ್ಥೆಗಳ) ಅಭಿವೃದ್ಧಿಗಾಗಿ 'ವಯಾಬಿಲಿಟಿ ಗ್ಯಾಪ್ ಫಂಡಿಂಗ್' (ವಿಜಿಎಫ್) ಯೋಜನೆಗೆ ಅನುಮೋದನೆ ನೀಡಿದೆ. ಈ ಯೋಜನೆಯು ದೇಶಾದ್ಯಂತ ಇನ್ನೂ ಕಾರ್ಯಾರಂಭ ಮಾಡಬೇಕಿರುವ 92 GWh ನಷ್ಟು ಇಂಧನ ಶೇಖರಣಾ ಸಾಮರ್ಥ್ಯದ ಅಭಿವೃದ್ಧಿಗೆ ಬೆಂಬಲ ನೀಡುವ ಗುರಿಯನ್ನು ಹೊಂದಿದೆ. ಈ ಯೋಜನೆಯು ದೇಶದಲ್ಲಿ ಪ್ರಸ್ತುತ ಇರುವ ಗ್ರಿಡ್-ಸ್ಕೇಲ್ ಇಂಧನ ಶೇಖರಣಾ ವ್ಯವಸ್ಥೆಯ ಸಾಮರ್ಥ್ಯದ ಶೇ. 170 ಕ್ಕೆ ಸಮಾನವಾದ ಹೊಸ ಸಾಮರ್ಥ್ಯಗಳ ಸೃಷ್ಟಿಗೆ ಬೆಂಬಲ ನೀಡಲಿದ್ದು, 2031-32 ರ ವೇಳೆಗೆ ಅಗತ್ಯವಿರುವ 411 GWh ಗ್ರಿಡ್-ಸ್ಕೇಲ್ ಇ ಎಸ್ ಎಸ್ ಸಾಮರ್ಥ್ಯವನ್ನು ತಲುಪಲು ನೆರವಾಗಲಿದೆ.

ಈ ಯೋಜನೆಯು ಭಾರತದ ವಿದ್ಯುತ್ ಕ್ಷೇತ್ರ ಮೂಲಸೌಕರ್ಯವನ್ನು ಬಲಪಡಿಸುವಲ್ಲಿ, ನವೀಕರಿಸಬಹುದಾದ ಇಂಧನದ ದೊಡ್ಡ ಪ್ರಮಾಣದ ಸಂಯೋಜನೆಗೆ ಅನುಕೂಲ ಮಾಡಿಕೊಡುವಲ್ಲಿ ಮತ್ತು ವಿಶ್ವಾಸಾರ್ಹ, ಕೈಗೆಟುಕುವ ಹಾಗೂ ದಿನದ 24 ಗಂಟೆಯೂ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಇದು ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್‌ಗಳ ದೇಶೀಯ ಉತ್ಪಾದನೆಗೆ ವೇಗವನ್ನು ನೀಡುತ್ತದೆ, ಆಮದು ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ದೇಶದ ದೀರ್ಘಕಾಲೀನ ಇಂಧನ ಭದ್ರತೆಯನ್ನು ಹೆಚ್ಚಿಸುತ್ತದೆ.

ಈ ಯೋಜನೆಯು ಒಟ್ಟು 97,600 ಕೋಟಿ ರೂ.ಗಳ ಅಂದಾಜು ಹೂಡಿಕೆಯೊಂದಿಗೆ 60 GWh ಹೈಡ್ರೋ ಪಂಪ್ಡ್ ಸ್ಟೋರೇಜ್ ಪ್ಲಾಂಟ್ ಸಾಮರ್ಥ್ಯ, 30 GWh ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆ (ಬಿ ಇ ಎಸ್ ಎಸ್) ಸಾಮರ್ಥ್ಯ ಮತ್ತು ಪರ್ಯಾಯ ಇಂಧನ ಶೇಖರಣಾ ತಂತ್ರಜ್ಞಾನಗಳ ಮೂಲಕ 2 GWh ಸಾಮರ್ಥ್ಯದ ಅಭಿವೃದ್ಧಿಯನ್ನು ಪರಿಕಲ್ಪಿಸುತ್ತದೆ. ವಿಜಿಎಫ್ ಬೆಂಬಲವು ಈ ಯೋಜನೆಗಳ ಆರ್ಥಿಕ ಸಾಮರ್ಥ್ಯವನ್ನು ಸುಧಾರಿಸಲು ಮತ್ತು ದೇಶದಲ್ಲಿ ಬೃಹತ್ ಪ್ರಮಾಣದ ಇಂಧನ ಶೇಖರಣಾ ಮೂಲಸೌಕರ್ಯಗಳ ನಿಯೋಜನೆಯನ್ನು ತ್ವರಿತಗೊಳಿಸಲು ನೆರವಾಗಲಿದೆ.

ಶುಲ್ಕ ಆಧಾರಿತ ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ಇಂಧನ ಶೇಖರಣಾ ಸಾಮರ್ಥ್ಯವನ್ನು ಹಂಚಿಕೆ ಮಾಡಲಾಗುತ್ತದೆ. ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದ ವಿದ್ಯುತ್ ವಿತರಣಾ ಕಂಪನಿಗಳು ಬಿ ಇ ಎಸ್ ಎಸ್ ಮತ್ತು ಹೈಡ್ರೋ PSP ಯೋಜನೆಗಳಿಗೆ ವಿಜಿಎಫ್ ಬೆಂಬಲ ಪಡೆಯಲು ಅರ್ಹರಾಗಿರುತ್ತಾರೆ, ಆದರೆ ಪರ್ಯಾಯ ಇಂಧನ ಶೇಖರಣಾ ತಂತ್ರಜ್ಞಾನಗಳನ್ನು ಆಧರಿಸಿದ ಯೋಜನೆಗಳನ್ನು ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದ ಸಂಸ್ಥೆಗಳು ಅನುಷ್ಠಾನಗೊಳಿಸುತ್ತವೆ.

ಬೇಡಿಕೆ-ಆಧಾರಿತ ಆರ್ಥಿಕ ಬೆಂಬಲದ ಮೂಲಕ ಭಾರತದ ದೇಶೀಯ ಇಂಧನ ಶೇಖರಣಾ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಆಮದು ಮಾಡಿದ ಬಿಡಿಭಾಗಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು, ಬಿ ಇ ಎಸ್ ಎಸ್ ಯೋಜನೆಗಳು ಕನಿಷ್ಠ ಶೇ. 40 ರಷ್ಟು ದೇಶೀಯ ಕಂಟೆಂಟ್ ಅಗತ್ಯತೆಗೆ ಒಳಪಟ್ಟಿರುತ್ತವೆ. ಈ ಅಗತ್ಯತೆಯು ದೇಶೀಯ ಉತ್ಪಾದನೆಯನ್ನು ಉತ್ತೇಜಿಸುತ್ತದೆ, ಭಾರತೀಯ ಉದ್ಯಮಕ್ಕೆ ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಬ್ಯಾಟರಿ ಉತ್ಪಾದನೆಗೆ ಪ್ರಸ್ತುತ ಇರುವ ಪೂರೈಕೆ-ಕಡೆಯ ಪ್ರೋತ್ಸಾಹಕಗಳಿಗೆ ಪೂರಕವಾಗಿರುತ್ತದೆ.

ಈ ಯೋಜನೆಯು ಸುಲಭವಾಗಿ ಹೊಂದಿಕೊಳ್ಳುವ, ಚೇತರಿಸಿಕೊಳ್ಳುವ ಮತ್ತು ಭವಿಷ್ಯಕ್ಕೆ ಸಿದ್ಧವಿರುವ ವಿದ್ಯುತ್ ವ್ಯವಸ್ಥೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಮಧ್ಯಸ್ಥಿಕೆಯನ್ನು ಪ್ರತಿನಿಧಿಸುತ್ತದೆ. ಗ್ರಿಡ್-ಸ್ಕೇಲ್ ಇಂಧನ ಶೇಖರಣೆಯ ನಿಯೋಜನೆಯನ್ನು ತ್ವರಿತಗೊಳಿಸುವ ಮೂಲಕ, ಇದು ನವೀಕರಿಸಬಹುದಾದ ಇಂಧನದ ಹೆಚ್ಚಿನ ಬಳಕೆಗೆ ಅನುಕೂಲ ಮಾಡಿಕೊಡುತ್ತದೆ, ನವೀಕರಿಸಬಹುದಾದ ಇಂಧನ ಉತ್ಪಾದನೆಯ ಏರಿಳಿತಗಳನ್ನು ನಿರ್ವಹಿಸುತ್ತದೆ ಮತ್ತು 24/7 ವಿದ್ಯುತ್ ಪೂರೈಕೆಯನ್ನು ಸರಿದೂಗಿಸಲು ಸಾಂಪ್ರದಾಯಿಕ ವಿದ್ಯುತ್ ಉತ್ಪಾದನೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಈ ಉಪಕ್ರಮವು ಗ್ರಿಡ್ ಸ್ಥಿರತೆಯನ್ನು ಬಲಪಡಿಸುತ್ತದೆ, ನವೀಕರಿಸಬಹುದಾದ ಇಂಧನ ಸಂಯೋಜನೆಯನ್ನು ಸುಧಾರಿಸುತ್ತದೆ, ದೇಶೀಯ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಭಾರತದ ಇಂಧನ ಭದ್ರತೆಯನ್ನು ಹೆಚ್ಚಿಸುತ್ತದೆ, ಜೊತೆಗೆ 'ಸ್ವಾವಲಂಬಿ ಭಾರತ' ಮತ್ತು 'ವಿಕಸಿತ ಭಾರತ'ದ ದೃಷ್ಟಿಕೋನವನ್ನು ಮುನ್ನಡೆಸುತ್ತದೆ.

 

*****


(ಪ್ರಕಟಣೆ ಐ.ಡಿ.: 2332518) ವಿಸಿಟರ್ ಕೌಂಟರ್ : 14