ಪ್ರಕಟಣಾ ದಿನಾಂಕ:
27 OCT 2026 4:34PM by PIB Bengaluru
ಲೋಕಸಭೆ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು, ನಿನ್ನೆ ಉದ್ಘಾಟಿಸಿದ್ದ 12ನೇ ಬ್ರಿಕ್ಸ್ ಸಂಸದೀಯ ವೇದಿಕೆಯು ಜಂಟಿ ಘೋಷಣೆಯ ಅಂಗೀಕಾರದೊಂದಿಗೆ ಇಂದು ಮುಕ್ತಾಯಗೊಂಡಿತು. ಈ ಘೋಷಣೆಯು ವಿಶ್ವಸಂಸ್ಥೆಯ ಚಾರ್ಟರ್ನ ತತ್ವಗಳು, ಸಾರ್ವಭೌಮ ಸಮಾನತೆ, ಪರಸ್ಪರ ಗೌರವ, ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರುವುದು ಮತ್ತು ಅಂತಾರಾಷ್ಟ್ರೀಯ ವಿವಾದಗಳ ಶಾಂತಿಯುತ ಪರಿಹಾರಕ್ಕೆ ಸದಸ್ಯ ರಾಷ್ಟ್ರಗಳ ಸಮರ್ಪಣೆಯನ್ನು ಅಧಿಕೃತವಾಗಿ ಪುನರುಚ್ಚರಿಸುತ್ತದೆ. ಪ್ರಸ್ತುತ ಅಧ್ಯಕ್ಷತೆಯಡಿಯಲ್ಲಿ ಭಾರತದ ಬೆಳೆಯುತ್ತಿರುವ ರಾಜತಾಂತ್ರಿಕ ಹೆಜ್ಜೆಗುರುತನ್ನು ಪ್ರದರ್ಶಿಸುವ ಜಂಟಿ ಘೋಷಣೆಯು ನವದೆಹಲಿಯ ಪ್ರಮುಖ ಕಾರ್ಯತಂತ್ರದ ಆದ್ಯತೆಗಳೊಂದಿಗೆ ಸರಾಗವಾಗಿ ಹೊಂದಿಕೊಂಡಿದೆ. ನವದೆಹಲಿ ಘೋಷಣೆಯ ಸಮ್ಮತಿಯನ್ನು ಪುನರುಚ್ಚರಿಸುತ್ತಾ, ಸದಸ್ಯ ಸಂಸತ್ತುಗಳು ಜಾಗತಿಕ ಆಡಳಿತವನ್ನು ಗ್ಲೋಬಲ್ ಸೌತ್ನ ಹೆಚ್ಚು ಪ್ರಾತಿನಿಧಿಕವನ್ನಾಗಿ ಮಾಡಲು - ಎನ್ಡಿಡಿ ಪ್ಯಾರಾಗ್ರಾಫ್ 13 ಅನ್ನು ಉಲ್ಲೇಖಿಸಿ - ಯುಎನ್ ಭದ್ರತಾ ಮಂಡಳಿಯ ಸುಧಾರಣೆಗೆ ಸ್ಪಷ್ಟ ಬೆಂಬಲವನ್ನು ನೀಡಿದವು.
ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ, ಭಾರತದ ದೃಢವಾದ ನಿಲುವು ಹಾಗೂ ಬಲವಾದ, ರಾಜಿ ಮಾಡಿಕೊಳ್ಳದ ಭಯೋತ್ಪಾದನೆ ವಿರೋಧಿ ಭಾಷೆಯ ಮೂಲಕ ಪ್ರಮುಖ ಜಯವನ್ನು ಗಳಿಸಿತು; ಎನ್ಡಿಡಿ ಪ್ಯಾರಾಗ್ರಾಫ್ 40 ಅನ್ನು ಆಧರಿಸಿ, ಘೋಷಣೆಯು ಗಡಿಯಾಚೆಗಿನ ಭಯೋತ್ಪಾದನೆ, ಭಯೋತ್ಪಾದನೆಗೆ ಹಣಕಾಸು ನೆರವು ಮತ್ತು ಸುರಕ್ಷಿತ ತಾಣಗಳನ್ನು ಖಂಡಿಸಿತು, ಜೊತೆಗೆ ಶೂನ್ಯ ಸಹಿಷ್ಣುತೆ ಮತ್ತು ದ್ವಂದ್ವ ನೀತಿಗಳ ಅಂತ್ಯಕ್ಕೆ ಆಗ್ರಹಿಸಿತು. ಅಂತಿಮ ಪಠ್ಯವು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಭಂಡಾರಗಳ ವಿಸ್ತರಣೆ, ನೈತಿಕ ಕೃತಕ ಬುದ್ಧಿಮತ್ತೆ ಆಡಳಿತ, ಸಾಮಾನ್ಯ ಆದರೆ ವ್ಯತ್ಯಾಸದ ಜವಾಬ್ದಾರಿಗಳ ಪಾಲನೆ ಮತ್ತು ಭಾರತದ ಬ್ರಿಕ್ಸ್ ಅಧ್ಯಕ್ಷತೆಗೆ ಸರ್ವಾನುಮತದ ಬೆಂಬಲ ಸೇರಿದಂತೆ ಭಾರತ-ನೇತೃತ್ವದ ಅಭಿವೃದ್ಧಿ ಮತ್ತು ಹವಾಮಾನ ಕಾರ್ಯಸೂಚಿಗಳನ್ನು ದೃಢವಾಗಿ ಒಳಗೊಂಡಿದೆ.
ಸಮಾರೋಪ ಭಾಷಣ ಮಾಡಿದ ಲೋಕಸಭೆ ಸ್ಪೀಕರ್, ಜಾಗತಿಕ ಸವಾಲುಗಳನ್ನು ಸಂಘರ್ಷದ ಬದಲು ದೃಢವಾದ ಸಂವಾದ, ಪರಸ್ಪರ ಶಾಂತಿ ಮತ್ತು ಸಹಯೋಗದ ಕ್ರಿಯೆಯ ಮೂಲಕ ಮಾತ್ರ ಪರಿಹರಿಸಬಹುದು ಎಂದು ಒತ್ತಿಹೇಳಿದರು.
ಬ್ರಿಕ್ಸ್ ಸದಸ್ಯ ಮತ್ತು ಪಾಲುದಾರ ರಾಷ್ಟ್ರಗಳ ಸಭಾಧ್ಯಕ್ಷರು, ಗಣ್ಯ ಪ್ರತಿನಿಧಿಗಳು ಮತ್ತು ಅಂತಾರಾಷ್ಟ್ರೀಯ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಬಿರ್ಲಾ, ಎರಡು ದಿನಗಳ ತೀವ್ರ ಚರ್ಚೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.. ಭಾಗವಹಿಸುವ ರಾಷ್ಟ್ರಗಳು ವೈವಿಧ್ಯಮಯ ಹಿನ್ನೆಲೆಗಳು, ಸನ್ನಿವೇಶಗಳು ಮತ್ತು ಸವಾಲುಗಳನ್ನು ಹೊಂದಿದ್ದರೂ, ಮಾನವೀಯತೆಯ ಕಲ್ಯಾಣ, ಶಾಂತಿ ಮತ್ತು ಸಮೃದ್ಧಿಗೆ ಅವರ ಹಂಚಿಕೆಯ ಬದ್ಧತೆಯು ಬ್ರಿಕ್ಸ್ ಒಕ್ಕೂಟದ ಅಂತಿಮ ಶಕ್ತಿಯಾಗಿ ಉಳಿದಿದೆ ಎಂದು ಅವರು ಅಭಿಪ್ರಾಯಪಟ್ಟರು.
ಅಸ್ಥಿರತೆ, ಆರ್ಥಿಕ ಅನಿಶ್ಚಿತತೆ ಮತ್ತು ಪ್ರಾದೇಶಿಕ ಸಂಘರ್ಷಗಳ ಪ್ರಸ್ತುತ ಜಾಗತಿಕ ವಾತಾವರಣಡಾ ಬಗ್ಗೆ ಒತ್ತಿ ಹೇಳಿದ ಶ್ರೀ ಬಿರ್ಲಾ ಅವರು, ಭಾರತದ ಪ್ರಮುಖ ತತ್ವಶಾಸ್ತ್ರವನ್ನು ಪುನರುಚ್ಚರಿಸಿದರು: ದೀರ್ಘಕಾಲೀನ ಪರಿಹಾರಗಳು ಯುದ್ಧದಲ್ಲಲ್ಲ, ಸಂವಾದದಲ್ಲಿ ರೂಪುಗೊಳ್ಳುತ್ತವೆ; ಸಂಘರ್ಷದಲ್ಲಲ್ಲ, ಶಾಂತಿಯಲ್ಲಿ; ಮತ್ತು ಸ್ಪರ್ಧೆಯಲ್ಲಲ್ಲ, ಸಹಯೋಗದಲ್ಲಿ. ರಾಷ್ಟ್ರೀಯ ಸಾರ್ವಭೌಮತ್ವಕ್ಕೆ ಸಂಪೂರ್ಣ ಗೌರವ, ಅಂತಾರಾಷ್ಟ್ರೀಯ ವಿವಾದಗಳ ಶಾಂತಿಯುತ ಪರಿಹಾರ ಮತ್ತು ಎಲ್ಲರಿಗೂ ಸಮಾನ ಅಭಿವೃದ್ಧಿ ಅವಕಾಶಗಳ ಮೇಲೆ ನಿರ್ಮಿಸಲಾದ ಜಾಗತಿಕ ಚೌಕಟ್ಟಿಗೆ ಅವರು ಕರೆ ನೀಡಿದರು. "ಜಾಗತಿಕ ಶಾಂತಿ ಎಂದರೆ ನಿಜವಾದ ಅರ್ಥದಲ್ಲಿ ಪ್ರತಿಯೊಬ್ಬರಿಗೂ - ವಿಶೇಷವಾಗಿ ಯುವ ಪೀಳಿಗೆಗೆ ಭದ್ರತೆ, ಗೌರವ, ನ್ಯಾಯ ಮತ್ತು ಉತ್ತಮ ಭವಿಷ್ಯದ ಭರವಸೆಯಾಗಿದೆ," ಎಂದು ಅವರು ಹೇಳಿದರು, ಪ್ರಸ್ತುತ ನಾಯಕರನ್ನು ಅವರು ಬಿಟ್ಟುಹೋಗುವ ಪ್ರಪಂಚದ ಸುರಕ್ಷತೆ ಮತ್ತು ಸಮೃದ್ಧಿಯ ಆಧಾರದ ಮೇಲೆ ಮುಂಬರುವ ಪೀಳಿಗೆಗಳು ಮೌಲ್ಯಮಾಪನ ಮಾಡುತ್ತವೆ ಎಂದು ಅವರು ಉಲ್ಲೇಖಿಸಿದರು.
ಪ್ರಜಾಸತ್ತಾತ್ಮಕ ಸಂಸ್ಥೆಗಳ ವಿಕಸನಗೊಳ್ಳುತ್ತಿರುವ ಜವಾಬ್ದಾರಿಗಳನ್ನು ಒತ್ತಿಹೇಳಿದ ಲೋಕಸಭೆ ಸ್ಪೀಕರ್, ಸಂಸತ್ತುಗಳು ಕೇವಲ ಕಾನೂನು ಮಾಡುವ ಸಂಸ್ಥೆಗಳಲ್ಲ, ಬದಲಾಗಿ ಸಂವಾದ, ಸಮ್ಮತಿ, ಹೊಣೆಗಾರಿಕೆ ಮತ್ತು ಸಾರ್ವಜನಿಕ ವಿಶ್ವಾಸದ ಪ್ರಮುಖ ಕೇಂದ್ರಗಳಾಗಿವೆ ಎಂದು ಒತ್ತಿಹೇಳಿದರು. ಹೆಚ್ಚು ಪರಿಣಾಮಕಾರಿ, ಪಾರದರ್ಶಕ ಮತ್ತು ನಾಗರಿಕ-ಕೇಂದ್ರಿತವಾಗುವ ಮೂಲಕ ಬದಲಾಗುತ್ತಿರುವ ಸಮಯಕ್ಕೆ ತಕ್ಕಂತೆ ಹೊಂದಿಕೊಳ್ಳುವಂತೆ ಅವರು ಜಾಗತಿಕ ಶಾಸಕಾಂಗಗಳಿಗೆ ಆಗ್ರಹಿಸಿದರು. ಆಧುನಿಕ ಉಪಕರಣಗಳ ಸಂಯೋಜನೆಯ ಕುರಿತು ಮಾತನಾಡಿದ ಶ್ರೀ ಬಿರ್ಲಾ, ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ತಂತ್ರಜ್ಞಾನದ ಅಳವಡಿಕೆಯು ಸಂಸದೀಯ ಕಾರ್ಯಪ್ರವಾಹವನ್ನು ಅತ್ಯುತ್ತಮವಾಗಿ ಸುಗಮಗೊಳಿಸುತ್ತದೆ ಮತ್ತು ನಾಗರಿಕರ ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತದೆ, ಆದರೆ ಅದರ ಅಭಿವೃದ್ಧಿಯು ಮಾನವ ಮೌಲ್ಯಗಳು, ನೈತಿಕತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಸ್ಪಷ್ಟವಾಗಿ ಜೋಡಿಸಲ್ಪಟ್ಟಿರಬೇಕು ಎಂದು ಹೇಳಿದರು.
ಬ್ರಿಕ್ಸ್ ಯಶಸ್ಸು ಅದರ ಪ್ರತ್ಯೇಕ ಸದಸ್ಯ ರಾಷ್ಟ್ರಗಳ ಪ್ರಗತಿಯನ್ನು ಮೀರಿ, ವಿಶಾಲವಾದ ಅಂತಾರಾಷ್ಟ್ರೀಯ ಸಮುದಾಯಕ್ಕೆ ಅನುಕೂಲವಾಗಬೇಕು, ಜಾಗತಿಕ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ಗ್ಲೋಬಲ್ ಸೌತ್ನ ಆಕಾಂಕ್ಷೆಗಳಿಗೆ ಸೂಕ್ತ ಪ್ರಾತಿನಿಧ್ಯವನ್ನು ನೀಡಬೇಕು ಎಂದು ಶ್ರೀ ಬಿರ್ಲಾ ಒತ್ತಿಹೇಳಿದರು.
12ನೇ ಬ್ರಿಕ್ಸ್ ಸಂಸದೀಯ ವೇದಿಕೆಯು ಯಶಸ್ವಿಯಾಗಿ ಮುಕ್ತಾಯಗೊಳ್ಳುತ್ತಿದ್ದಂತೆ, ಶ್ರೀ ಬಿರ್ಲಾ ಅವರು 2027 ರ ವರ್ಷಕ್ಕೆ ಬ್ರಿಕ್ಸ್ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವ ಚೀನಾಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಕೋರಿದರು, ಅದರ ನಾಯಕತ್ವದಲ್ಲಿ ಸಹಕಾರವು ಮುಂದುವರಿಯುತ್ತದೆ ಮತ್ತು ಅಭಿವೃದ್ಧಿ ಹೊಂದುತ್ತದೆ ಎಂಬ ಸಂಪೂರ್ಣ ವಿಶ್ವಾಸವನ್ನು ವ್ಯಕ್ತಪಡಿಸಿದರು. ಶಾಂತಿ, ಸಹಕಾರ ಮತ್ತು ಹಂಚಿಕೆಯ ಸಮೃದ್ಧಿಗಾಗಿ ಶಕ್ತಿಯುತ ಧ್ವನಿಯಾಗಿ ಕಾರ್ಯನಿರ್ವಹಿಸಲು ಪ್ರಪಂಚದಾದ್ಯಂತದ ಸಂಸತ್ತುಗಳಿಗೆ ಬಲವಾದ ಕರೆಯೊಂದಿಗೆ ವೇದಿಕೆಯು ಮುಕ್ತಾಯಗೊಂಡಿತು.
ಜಂಟಿ ಘೋಷಣೆಯ ಪ್ರತಿಯ ಲಿಂಕ್ ಅನ್ನು ಇಲ್ಲಿ ಪಡೆಯಬಹುದು -
*****