ಸಂಪುಟ ಕಾರ್ಯಾಲಯ
azadi ka amrit mahotsav

ಬಂಗಾಳ ಕೊಲ್ಲಿಯಲ್ಲಿ ಸನ್ನಿಹಿತವಾಗುತ್ತಿರುವ ಚಂಡಮಾರುತದ ಸನ್ನದ್ಧತೆಯನ್ನು ಪರಿಶೀಲಿಸಲು ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿಯ (ಎನ್.ಸಿ.ಎಂ.ಸಿ.) ಸಭೆಯ ಅಧ್ಯಕ್ಷತೆ ವಹಿಸಿದ ಸಂಪುಟ ಕಾರ್ಯದರ್ಶಿ


ಪ್ರಕಟಣಾ ದಿನಾಂಕ: 26 OCT 2026 3:10PM by PIB Bengaluru

ಬಂಗಾಳ ಕೊಲ್ಲಿಯಲ್ಲಿ ಸನ್ನಿಹಿತವಾಗುತ್ತಿರುವ ಚಂಡಮಾರುತದ ಸನ್ನದ್ಧತೆಯನ್ನು ಪರಿಶೀಲಿಸಲು ಸಂಪುಟ ಕಾರ್ಯದರ್ಶಿ ಡಾ. ಟಿ. ವಿ. ಸೋಮನಾಥನ್ ಅವರು ಇಂದು ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿಯ (ಎನ್.ಸಿ.ಎಂ.ಸಿ.) ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಭಾರತೀಯ ಹವಾಮಾನ ಇಲಾಖೆಯ (ಐ.ಎಂ.ಡಿ.) ಮಹಾನಿರ್ದೇಶಕರು ಸಮಿತಿಗೆ ಮಾಹಿತಿ ನೀಡಿ, ಪೂರ್ವ-ಮಧ್ಯ ಮತ್ತು ಅದಕ್ಕೆ ಹೊಂದಿಕೊಂಡಿರುವ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿದ್ದ ತೀವ್ರ ವಾಯುಭಾರ ಕುಸಿತವು ಪಶ್ಚಿಮದತ್ತ ಚಲಿಸಿ ‘ಅರ್ನಾಬ್’ ಎನ್ನುವ  ಚಂಡಮಾರುತವಾಗಿ ರೂಪಾಂತರಗೊಂಡಿದೆ. ಇದು ಇಂದು ಬೆಳಿಗ್ಗೆ 5:30 ಗಂಟೆಯ ವೇಳೆಗೆ ಪೂರ್ವ-ಮಧ್ಯ ಮತ್ತು ಅದಕ್ಕೆ ಹೊಂದಿಕೊಂಡಂತಿರುವ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯ ಮೇಲಿದ್ದು, ಶ್ರೀ ವಿಜಯ ಪುರಂನಿಂದ (ಅಂಡಮಾನ್ ದ್ವೀಪಗಳು) ವಾಯುವ್ಯಕ್ಕೆ ಸುಮಾರು 590 ಕಿ.ಮೀ, ವಿಶಾಖಪಟ್ಟಣದಿಂದ (ಆಂಧ್ರಪ್ರದೇಶ) ಪೂರ್ವ-ಆಗ್ನೇಯಕ್ಕೆ 650 ಕಿ.ಮೀ, ಕಾಕಿನಾಡದಿಂದ (ಆಂಧ್ರಪ್ರದೇಶ) ಪೂರ್ವ-ಆಗ್ನೇಯಕ್ಕೆ 730 ಕಿ.ಮೀ, ಮಚಲಿಪಟ್ಟಣಂನಿಂದ (ಆಂಧ್ರಪ್ರದೇಶ) ಪೂರ್ವಕ್ಕೆ 830 ಕಿ.ಮೀ ಮತ್ತು ಬಾಪಟ್ಲದಿಂದ (ಆಂಧ್ರಪ್ರದೇಶ) ಪೂರ್ವಕ್ಕೆ 910 ಕಿ.ಮೀ ದೂರದಲ್ಲಿ ಕೇಂದ್ರೀಕೃತವಾಗಿದೆ ಎಂದು ತಿಳಿಸಿದರು.

ಇದು ಅಕ್ಟೋಬರ್ 27 ರವರೆಗೆ ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಮತ್ತು ನಂತರ ವಾಯುವ್ಯ ದಿಕ್ಕಿನಲ್ಲಿ ಆಂಧ್ರಪ್ರದೇಶದ ಕರಾವಳಿಯತ್ತ ಚಲಿಸುವ ಮುನ್ಸೂಚನೆಯಿದೆ. ಅಕ್ಟೋಬರ್ 28, 2026 ರ ಪೂರ್ವಾಹ್ನದ ವೇಳೆಗೆ ಇದು ಗಂಟೆಗೆ ಗರಿಷ್ಠ 115-125 ಕಿ.ಮೀ ನಿಂದ 140 ಕಿ.ಮೀ ವೇಗದ ಬಿರುಗಾಳಿಯೊಂದಿಗೆ ಅತ್ಯತ ತೀವ್ರ ಚಂಡಮಾರುತವಾಗಿ ಬಾಪಟ್ಲ ಮತ್ತು ವಿಶಾಖಪಟ್ಟಣ ನಡುವೆ ಆಂಧ್ರಪ್ರದೇಶ ಮತ್ತು ಯಾನಂ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ. ನಂತರ ಇದು ತೆಲಂಗಾಣ, ದಕ್ಷಿಣ ಒಡಿಶಾ, ದಕ್ಷಿಣ ಮತ್ತು ಮಧ್ಯ ಛತ್ತೀಸ್ ಗಢ ಹಾಗೂ ಪೂರ್ವ ಉತ್ತರ ಪ್ರದೇಶ ಮತ್ತು ಬಿಹಾರದ ಜಿಲ್ಲೆಗಳ ಮೇಲೆಯೂ ಪ್ರಭಾವ ಬೀರುವ ಸಾಧ್ಯತೆಯಿದೆ.

ಆಂಧ್ರಪ್ರದೇಶ, ಒಡಿಶಾ, ತೆಲಂಗಾಣ, ಛತ್ತೀಸ್ಗಢ ರಾಜ್ಯಗಳ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಅಧಿಕಾರಿಗಳು ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಆಡಳಿತ ಕೈಗೊಂಡಿರುವ ಪೂರ್ವಸಿದ್ಧತಾ ಕ್ರಮಗಳ ಕುರಿತು ಸಮಿತಿಗೆ ಮಾಹಿತಿಗಳನ್ನು ನೀಡಿದರು. ಅಗತ್ಯವಾದ ಆಶ್ರಯ ತಾಣಗಳು ಮತ್ತು ಸ್ಥಳಾಂತರ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಅಗತ್ಯ ಎನ್.ಡಿ.ಆರ್.ಎಫ್.   ಮತ್ತು ಎಸ್.ಡಿ.ಆರ್.ಎಫ್. ತಂಡಗಳನ್ನು ಸನ್ನದ್ಧವಾಗಿಡಲಾಗಿದೆ ಎಂದು ತಿಳಿಸಲಾಯಿತು. ಜಿಲ್ಲಾ ನಿಯಂತ್ರಣ ಕೊಠಡಿಗಳನ್ನು ಸಕ್ರಿಯಗೊಳಿಸಲಾಗಿದ್ದು, ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಅಕ್ಟೋಬರ್ 26 ರಿಂದ 29 ರವರೆಗೆ ನೈಋತ್ಯ ಬಂಗಾಳ ಕೊಲ್ಲಿ ಮತ್ತು ಅದಕ್ಕೆ ಹೊಂದಿಕೊಂಡಂತಿರುವ ಮಧ್ಯ ಬಂಗಾಳ ಕೊಲ್ಲಿಗೆ ಹಾಗೂ ಆಂಧ್ರಪ್ರದೇಶ, ಒಡಿಶಾ ಮತ್ತು ಯಾನಂ (ಪುದುಚೇರಿ) ಕರಾವಳಿಯುದ್ದಕ್ಕೂ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ. ಈಗಾಗಲೇ ಸಮುದ್ರದಲ್ಲಿದ್ದವರು ಮರಳಿದ್ದಾರೆ.

ಸಭೆಯಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು, ಎಲ್ಲಾ ಪ್ರಮಾಣಿತ ಕಾರ್ಯಾಚರಣೆ ವಿಧಾನಗಳನ್ನು (ಎಸ್.ಒ.ಪಿ.) ಜಾರಿಗೆ ತರಲಾಗಿದ್ದು, ಅಗತ್ಯ ಮಾರ್ಗಸೂಚಿಗಳನ್ನು ನೀಡಲಾಗಿದೆ ಮತ್ತು ಚಂಡಮಾರುತದ ಪ್ರಭಾವದಿಂದ ಉಂಟಾಗುವ ಹಾನಿಯನ್ನು ಕನಿಷ್ಠಗೊಳಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಮಿತಿಗೆ ತಿಳಿಸಿದವು.

ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (ಎನ್.ಡಿ.ಆರ್.ಎಫ್.) ತನ್ನ ತಂಡಗಳನ್ನು ನಿಯೋಜಿಸಿದ್ದು, ಹೆಚ್ಚುವರಿ ತಂಡಗಳನ್ನು ಸಿದ್ಧವಾಗಿಸಿ ಕಾಯ್ದಿರಿಸಿದೆ ಎಂದು ತಿಳಿಸಿತು. ಸೇನೆ, ನೌಕಾಪಡೆ, ವಾಯುಪಡೆ ಮತ್ತು ಭಾರತೀಯ ಕರಾವಳಿ ಕಾವಲು ಪಡೆಯ ರಕ್ಷಣಾ ಮತ್ತು ಪರಿಹಾರ ತಂಡಗಳನ್ನು ಅವುಗಳ ಹಡಗುಗಳು ಮತ್ತು ವಿಮಾನಗಳೊಂದಿಗೆ ಸಿದ್ಧವಾಗಿಡಲಾಗಿದೆ. ಭಾರತೀಯ ಕರಾವಳಿ ಕಾವಲು ಪಡೆಯು ಇದುವರೆಗೆ ಹಲವು ಹಡಗುಗಳು ಮತ್ತು ದೋಣಿಗಳನ್ನು ದಡಕ್ಕೆ ತಲುಪಿಸಿದ್ದು, ಉಳಿದ ಹಡಗುಗಳಿಗೆ ಕರಾವಳಿಗೆ ಮರಳಲು ಸೂಚನೆ  ನೀಡಿದೆ. ಗೃಹ ಸಚಿವಾಲಯ, ಎನ್.ಡಿ.ಎಂ.ಎ. ಮತ್ತು ಐ.ಎಂ.ಡಿ. ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ಇತರ ಸಚಿವಾಲಯಗಳು, ಇಲಾಖೆಗಳು, ರಾಜ್ಯ ಸರ್ಕಾರಗಳು ಮತ್ತು ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುತ್ತಿವೆ ಎಂದು ಕೇಂದ್ರ ಗೃಹ ಕಾರ್ಯದರ್ಶಿಗಳು ಸಮಿತಿಗೆ ತಿಳಿಸಿದರು.

ಕೇಂದ್ರ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರಗಳ ಸಿದ್ದತೆಯ ಕ್ರಮಗಳನ್ನು ಪರಿಶೀಲಿಸಿದ ಸಂಪುಟ ಕಾರ್ಯದರ್ಶಿಗಳು, ಯಾವುದೇ ಜೀವಹಾನಿಯಾಗದಂತೆ ಮತ್ತು ಆಸ್ತಿ ಹಾಗೂ ಮೂಲಸೌಕರ್ಯಗಳಿಗೆ ಕನಿಷ್ಠ ಹಾನಿಯಾಗುವಂತೆ ನೋಡಿಕೊಳ್ಳುವುದೇ ಮುಖ್ಯ ಉದ್ದೇಶವಾಗಿರಬೇಕು ಎಂದು ಒತ್ತು ನೀಡಿದರು. ಯಾವುದೇ ಹಾನಿ ಸಂಭವಿಸಿದಲ್ಲಿ, ಕನಿಷ್ಠ ಸಮಯದಲ್ಲಿ ಅತ್ಯಗತ್ಯ ಸೇವೆಗಳನ್ನು ಮರುಸ್ಥಾಪಿಸಬೇಕು ಎಂದು ಸೂಚಿಸಿದರು. ಆಂಧ್ರಪ್ರದೇಶ, ಒಡಿಶಾ, ತೆಲಂಗಾಣ, ಛತ್ತೀಸ್ ಗಢ ಮತ್ತು ಪುದುಚೇರಿ ಜೊತೆಗೆ ಪೂರ್ವ ಉತ್ತರ ಪ್ರದೇಶ ಮತ್ತು ಬಿಹಾರದಲ್ಲೂ ಭಾರಿ ಮಳೆಯಾಗುವ ಸಾಧ್ಯತೆಯಿರುವುದರಿಂದ ಗೃಹ ಸಚಿವಾಲಯ ಹಾಗೂ ಐ.ಎಂ.ಡಿ. ಯಿಂದ ಅವರಿಗೂ ಸೂಕ್ತ ಮುನ್ನೆಚ್ಚರಿಕೆ ನೀಡಬೇಕೆಂದು ಸಂಪುಟ ಕಾರ್ಯದರ್ಶಿಗಳು ನಿರ್ದೇಶಿನ ನೀಡಿದರು.

ಈ ಸಭೆಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ; ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸ್ ಗಢ, ಒಡಿಶಾ ಮತ್ತು ಪುದುಚೇರಿಯ ಮುಖ್ಯ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು; ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಮೀನುಗಾರಿಕೆ ಇಲಾಖೆ, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ಹಾಗೂ ಇಂಧನ ಸಚಿವಾಲಯದ ಕಾರ್ಯದರ್ಶಿಗಳು; ಎನ್.ಡಿ.ಎಂ.ಎ. ಸದಸ್ಯ ಮತ್ತು ಇಲಾಖೆಯ ಮುಖ್ಯಸ್ಥರು; ಸಿ.ಐ.ಎಸ್.ಸಿ.; ಎನ್.ಡಿ.ಆರ್.ಎಫ್. ಮಹಾನಿರ್ದೇಶಕರು; ಐ.ಎಂ.ಡಿ. ಮಹಾನಿರ್ದೇಶಕರು; ಭಾರತೀಯ ಕರಾವಳಿ ಕಾವಲು ಪಡೆಯ ಮಹಾನಿರ್ದೇಶಕರು; ಗೃಹ ಸಚಿವಾಲಯದ ಮಾಧ್ಯಮ ಮತ್ತು ಸಂವಹನ ಮಹಾನಿರ್ದೇಶಕರು ಹಾಗೂ ಹವಾಮಾನ ಇಲಾಖೆ ಮತ್ತು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

*****


(ಪ್ರಕಟಣೆ ಐ.ಡಿ.: 2328469) ವಿಸಿಟರ್ ಕೌಂಟರ್ : 21
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Assamese , Bengali , Punjabi , Gujarati , Tamil , Telugu