ರೈಲ್ವೇ ಸಚಿವಾಲಯ
azadi ka amrit mahotsav

ಅಖಿಲ ಭಾರತ ಪೊಲೀಸ್ ಮುಖ್ಯಸ್ಥರ ಸಮ್ಮೇಳನ ನವದೆಹಲಿಯಲ್ಲಿ ಮುಕ್ತಾಯ; ಗುಪ್ತಚರ ಆಧಾರಿತ ಪೊಲೀಸ್ ವ್ಯವಸ್ಥೆ, ಆರ್ ಪಿ ಎಫ್, ಜಿ ಆರ್ ಪಿ  ಮತ್ತು ರಾಜ್ಯ ಪೊಲೀಸರ ನಡುವಿನ ಸಮನ್ವಯವನ್ನು ಬಲಪಡಿಸುವತ್ತ ಗಮನ


ಕುಂದುಕೊರತೆಗಳ ಪರಿಹಾರ, ಸಕಾಲಿಕ ಮಾಹಿತಿ ಹಂಚಿಕೆ ಮತ್ತು ದೂರುಗಳ ಮೇಲ್ವಿಚಾರಣೆಯನ್ನು ಸುಧಾರಿಸಲು ರೈಲ್ ಮದದ್ ವೇದಿಕೆಯಲ್ಲಿ ಜಿಆರ್ಪಿ ಸಿಬ್ಬಂದಿ ಸೇರ್ಪಡೆ

ದೀಪಾವಳಿ ಮತ್ತು ಛತ್ ಹಬ್ಬಗಳ ಸಮಯದಲ್ಲಿ ಸುರಕ್ಷಿತ ರೈಲು ಪ್ರಯಾಣ: ಜನಸಂದಣಿ ನಿರ್ವಹಣೆ, ಮುಂಗಡ ಯೋಜನೆ ಮತ್ತು ಪರಿಣಾಮಕಾರಿ ಪ್ರಯಾಣಿಕರ ಸಂಚಾರ ನಿರ್ವಹಣೆಗೆ ಒತ್ತು

ಡ್ರೋನ್-ಆಧಾರಿತ "ಪಿಂಕ್ ಪಾಟ್ರೋಲ್" ನಿಂದ ಪ್ರಾಜೆಕ್ಟ್ ದಿಶಾ ವರೆಗೆ, ಜಿಆರ್ ಪಿ ಮುಖ್ಯಸ್ಥರ ಸಮ್ಮೇಳನದಲ್ಲಿ ಮಹಿಳಾ ನೇತೃತ್ವದ ಮತ್ತು ಸಮುದಾಯ ಆಧಾರಿತ ಸುರಕ್ಷತಾ ಉಪಕ್ರಮಗಳ ಬಗ್ಗೆ ನಡೆದ ಚರ್ಚೆ

ಪ್ರಕಟಣಾ ದಿನಾಂಕ: 24 OCT 2026 10:47AM by PIB Bengaluru

ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಆಯೋಜಿಸಿದ್ದ ಸರ್ಕಾರಿ ರೈಲ್ವೆ ಪೋಲಿಸ್ (ಜಿಆರ್ಪಿ) ಮುಖ್ಯಸ್ಥರ 8ನೇ ಅಖಿಲ ಭಾರತ ಸಮ್ಮೇಳನವು ಅಕ್ಟೋಬರ್ 23, 2026 ರಂದು ನವದೆಹಲಿಯಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಇದು ಭವಿಷ್ಯದ ಭದ್ರತಾ ಸವಾಲುಗಳನ್ನು ಚರ್ಚಿಸಲು, ಅತ್ಯುತ್ತಮ ಕಾರ್ಯವಿಧಾನಗಳನ್ನು ಹಂಚಿಕೊಳ್ಳಲು ಮತ್ತು ಆರ್ ಪಿಎಫ್ , ಜಿಆರ್ ಪಿ  ಹಾಗೂ ರಾಜ್ಯ ಪೋಲಿಸ್ ನಡುವಿನ ಸಮನ್ವಯವನ್ನು ಬಲಪಡಿಸಲು ಸೂಕ್ತ ವೇದಿಕೆಯನ್ನು ಒದಗಿಸಿತು.

ಈ ಉನ್ನತ ಮಟ್ಟದ ಸಮ್ಮೇಳನದ ಅಧ್ಯಕ್ಷತೆಯನ್ನು ಆರ್ ಪಿ ಎಫ್ ಮಹಾನಿರ್ದೇಶಕರಾದ ಶ್ರೀಮತಿ ಸೋನಾಲಿ ಮಿಶ್ರಾ ವಹಿಸಿದ್ದರು. ರೈಲ್ವೆ ಮಂಡಳಿಯ ಅಧ್ಯಕ್ಷರು ಮತ್ತು ಸಿಇಒ ಶ್ರೀ ಸತೀಶ್ ಕುಮಾರ್, ರೈಲ್ವೆ ಮಂಡಳಿಯ ಸದಸ್ಯರು ಹಾಗೂ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜಿಆರ್ ಪಿ  ಮುಖ್ಯಸ್ಥರು ಇದರಲ್ಲಿ ಭಾಗವಹಿಸಿದ್ದರು.

ಪ್ರಯಾಣಿಕರ ಕುಂದುಕೊರತೆಗಳ ಪರಿಹಾರ, ಸಕಾಲಿಕ ಮಾಹಿತಿ ಹಂಚಿಕೆ ಮತ್ತು ದೂರುಗಳ ಮೇಲ್ವಿಚಾರಣೆಯನ್ನು ಸುಧಾರಿಸುವ ಉದ್ದೇಶದಿಂದ ರೈಲ್ವೆ ಮಾಹಿತಿ ವ್ಯವಸ್ಥೆಗಳ ಕೇಂದ್ರ (ಸಿಆರ್ಐಎಸ್) ಮೂಲಕ ಜಿಆರ್ ಪಿ ಸಿಬ್ಬಂದಿಯನ್ನು 'ರೈಲ್ ಮದದ್' ವೇದಿಕೆಗೆ ಸೇರ್ಪಡೆಗೊಳಿಸಿರುವುದು ಸಮ್ಮೇಳನದ ಪ್ರಮುಖ ಅಂಶವಾಗಿತ್ತು.

ರೈಲ್ವೆ ಭದ್ರತೆ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುವ ವಿವಿಧ ಉಪಕ್ರಮಗಳ ಕುರಿತು ವಿವರವಾದ ಚರ್ಚೆಗಳು ನಡೆದವು.

ದಕ್ಷಿಣ ಮಧ್ಯ ರೈಲ್ವೆಯ "ಪಿಂಕ್ ಪಾಟ್ರೋಲ್: ಐಸ್ ಇನ್ ದಿ ಸ್ಕೈ, ಶಕ್ತಿ ಆನ್ ದಿ ಗ್ರೌಂಡ್”    ಉಪಕ್ರಮವು, ಶಕ್ತಿ ಚೌಕಟ್ಟಿನಡಿಯಲ್ಲಿ ಡ್ರೋನ್ ಆಧಾರಿತ ಕಣ್ಗಾವಲನ್ನು ಕ್ಷಿಪ್ರ ಸ್ಪಂದನೆಯ ತಂಡಗಳೊಂದಿಗೆ ಸಂಯೋಜಿಸುವ ಮಹಿಳಾ ನೇತೃತ್ವದ ಮಾದರಿಯನ್ನು ಪ್ರದರ್ಶಿಸಿತು.

ರೈಲುಗಳ ಮೇಲೆ ಕಲ್ಲು ತೂರಾಟದ ಘಟನೆಗಳನ್ನು ಒಂದು ದೊಡ್ಡ ಸವಾಲಾಗಿ ಗುರುತಿಸಲಾಯಿತು. ಹಾಟ್ ಸ್ಪಾಟ್ ಆಧಾರಿತ ಗಸ್ತು ತಿರುಗುವಿಕೆ, ಹೆಚ್ಚಿಸಿದ ಕಣ್ಗಾವಲು, ಅಪರಾಧಿಗಳ ವಿರುದ್ಧ ಕಠಿಣ ಕ್ರಮ, ಯುವಜನರನ್ನು ತಲುಪುವುದು ಮತ್ತು ಆರ್ಪಿಎಫ್-ಜಿಆರ್ ಪಿ ನಡುವೆ ಬಲವಾದ ಸಮನ್ವಯತೆಗೆ ಒತ್ತು ನೀಡಲಾಯಿತು. ಸಮುದಾಯದ ಜಾಗೃತಿ ಮತ್ತು ಮುನ್ನೆಚ್ಚರಿಕೆಯ ಉಪಕ್ರಮಗಳನ್ನು ಪ್ರಮುಖ ತಡೆಗೋಡೆಗಳಾಗಿ ಗುರುತಿಸಲಾಯಿತು.

ದೀಪಾವಳಿ, ಛತ್ ಮತ್ತು ಇತರ ಹಬ್ಬಗಳ ಸಮಯದಲ್ಲಿ ಜನಸಂದಣಿ ನಿರ್ವಹಣೆಯ ಕುರಿತು ಸಮ್ಮೇಳನದಲ್ಲಿ ಸುದೀರ್ಘ ಚರ್ಚೆ ನಡೆಯಿತು. ಉತ್ತರ ರೈಲ್ವೆಯ ದೆಹಲಿ ವಿಭಾಗವು ದೆಹಲಿ ಪೋಲಿಸ್, ಜಿಆರ್ ಪಿ ಮತ್ತು ದೆಹಲಿ ಮೆಟ್ರೋ ಅಧಿಕಾರಿಗಳೊಂದಿಗೆ ಸಮನ್ವಯಗೊಳಿಸಿದ ಪ್ರಯತ್ನಗಳನ್ನು ವಿವರಿಸಿತು. ಇದಕ್ಕೆ ಸಿಸಿಟಿವಿ ಕಣ್ಗಾವಲು, ಸಾರ್ವಜನಿಕ ಪ್ರಕಟಣೆಗಳು, ಬ್ಯಾರಿಕೇಡಿಂಗ್, ಗೊತ್ತುಪಡಿಸಿದ ಕಾಯುವ ಪ್ರದೇಶಗಳು ಮತ್ತು ಮೀಸಲಾದ ನಿಯಂತ್ರಣ ಕೊಠಡಿಗಳ ಬೆಂಬಲ ಇದೆ. ಹಬ್ಬಗಳ ಸಮಯದಲ್ಲಿನ ಜನಸಂದಣಿಯ ಸಮಯದಲ್ಲಿ ಸುರಕ್ಷಿತ ಮತ್ತು ಸುಸ್ಥಿರ ಪ್ರಯಾಣಿಕರ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಮುಂಗಡ ಯೋಜನೆ, ಪರಿಣಾಮಕಾರಿ ಪ್ರಯಾಣಿಕರ ಹರಿವಿನ ನಿರ್ವಹಣೆ ಮತ್ತು ಭದ್ರತಾ ಸಿಬ್ಬಂದಿಯ ನಿಯೋಜನೆಗೆ ಒತ್ತು ನೀಡಲಾಯಿತು.

ಮಧ್ಯ ರೈಲ್ವೆಯ ಪುಣೆ ವಿಭಾಗವು 'ಪ್ರಾಜೆಕ್ಟ್ ದಿಶಾ' ವನ್ನು ಪ್ರಸ್ತುತಪಡಿಸಿತು. ಇದು ರೈಲ್ವೆ ಹಳಿಗಳ ಬಳಿ ವಾಸಿಸುವ ಮಕ್ಕಳನ್ನು ಶೈಕ್ಷಣಿಕ ಮತ್ತು ಮನರಂಜನಾ ಚಟುವಟಿಕೆಗಳು, ಸುರಕ್ಷತಾ ಜಾಗೃತಿ ಮತ್ತು ಸಮುದಾಯ ಆಧಾರಿತ ಉಪಕ್ರಮಗಳ ಮೂಲಕ ತಲುಪುವ ಯೋಜನೆಯಾಗಿದೆ. ಸರ್ಕಾರೇತರ ಸಂಸ್ಥೆಗಳು (ಎನ್ ಜಿ ಒ), ಎನ್ ಎಸ್ ಎಸ್ ಸ್ವಯಂಸೇವಕರು ಮತ್ತು ಸ್ಥಳೀಯ ಸಮುದಾಯಗಳ ಸಹಯೋಗದೊಂದಿಗೆ ರೈಲ್ವೆ ಸುರಕ್ಷತೆ ಮತ್ತು ಜವಾಬ್ದಾರಿಯುತ ನಡವಳಿಕೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ, ಹಾಗೂ ಕಲ್ಲು ತೂರಾಟ, ಕಳ್ಳತನ, ಅತಿಕ್ರಮಣ ಮುಂತಾದ ಅಸುರಕ್ಷಿತ ಅಭ್ಯಾಸಗಳನ್ನು ತಡೆಯಲಾಗುತ್ತದೆ.

ಜಂಟಿ ಆರ್ ಪಿಎಫ್-ಜಿಆರ್ ಪಿ ತರಬೇತಿ,  ವಿಧ್ವಂಸಕ ಕೃತ್ಯವನ್ನು ತಡೆಗಟ್ಟುವಿಕೆ ಮತ್ತು ಮಾದಕ ದ್ರವ್ಯ ಪತ್ತೆಯ ಕುರಿತು ತ್ವರಿತ ಮಾಹಿತಿ ಹಂಚಿಕೆಯ ಬಗ್ಗೆಯೂ ಚರ್ಚಿಸಲಾಯಿತು. ಡಿಜಿಟಲ್ ಸಾಕ್ಷ್ಯಾಧಾರಗಳ ನಿರ್ವಹಣೆ, ಪ್ರಮಾಣೀಕೃತ ಕಾರ್ಯವಿಧಾನಗಳು, ಗುಪ್ತಚರ ಮಾಹಿತಿ ಹಂಚಿಕೆ, ತನಿಖಾ ಸಾಮರ್ಥ್ಯಗಳನ್ನು ಬಲಪಡಿಸುವುದು ಮತ್ತು ಸೂಕ್ತ ಮೂಲಸೌಕರ್ಯಗಳನ್ನು ಬೆಂಬಲಿಸುವುದಕ್ಕೆ ಆದ್ಯತೆ ನೀಡಲಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ರೈಲ್ವೆ ಮಂಡಳಿಯ ಅಧ್ಯಕ್ಷರು ಮತ್ತು ಸಿಇಒ, ಭಾರತೀಯ ರೈಲ್ವೆಯಲ್ಲಿ ಉದ್ಭವಿಸುತ್ತಿರುವ ಭದ್ರತಾ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ರೈಲ್ವೆ ಅಧಿಕಾರಿಗಳು, ಆರ್ ಪಿಎಫ್,  ಜಿ ಆರ್ ಪಿ ಮತ್ತು ರಾಜ್ಯ ಪೋಲಿಸ್ ನಡುವಿನ ಸಮನ್ವಯ, ತಾಂತ್ರಿಕ ಪ್ರಗತಿ, ನಾವೀನ್ಯತೆ ಮತ್ತು ಹಂಚಿಕೆಯ ಬದ್ಧತೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು. ಪ್ರಯಾಣಿಕರ ಆತ್ಮವಿಶ್ವಾಸವನ್ನು ಹೆಚ್ಚಿಸುವುದು, ವೃತ್ತಿಪರ ಹಾಗೂ ವಿನಯಶೀಲ ಪೊಲೀಸ್ ವ್ಯವಸ್ಥೆಯನ್ನು ಖಚಿತಪಡಿಸುವುದು ಮತ್ತು ಕಾರ್ಯಕ್ಷಮತೆ ಹಾಗೂ ಕಾರ್ಯನಿರ್ವಹಣೆಯ ದಕ್ಷತೆಯನ್ನು ಹೆಚ್ಚಿಸಲು ತಂತ್ರಜ್ಞಾನವನ್ನು ಬಳಸುವುದು ಅತ್ಯಗತ್ಯ ಎಂದು ಅವರು ಹೇಳಿದರು.

ರೈಲ್ವೆ ಭದ್ರತೆಯನ್ನು ಬಲಪಡಿಸಲು ʻಗುಪ್ತಚರ ಆಧಾರಿತ ಪೊಲೀಸ್ ವ್ಯವಸ್ಥೆಯ ಅಗತ್ಯವನ್ನು ಒತ್ತು ನೀಡುವ ಮೂಲಕ ಆರ್ ಪಿ ಎಫ್ ಮಹಾನಿರ್ದೇಶಕರ ಸಮಾರೋಪ ನುಡಿಗಳೊಂದಿಗೆ ಸಮ್ಮೇಳನವು ಮುಕ್ತಾಯಗೊಂಡಿತು.

 

*****

 


(ಪ್ರಕಟಣೆ ಐ.ಡಿ.: 2327902) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Gujarati , Tamil , Malayalam