ಪ್ರಕಟಣಾ ದಿನಾಂಕ:
23 OCT 2026 1:08PM by PIB Bengaluru
ಪರಮ ಪೂಜ್ಯ ಸ್ವಾಮಿ ತೇಜೋಮಯಾನಂದ ಜಿ, ಪೂಜ್ಯ ಸ್ವಾಮಿ ಸ್ವರೂಪಾನಂದ ಜಿ, ಪೂಜ್ಯ ಸ್ವಾಮಿ ಮಿತ್ರಾನಂದ ಜಿ, ಪೂಜ್ಯ ಸ್ವಾಮಿ ವಿವಿಕ್ತಾನಂದ ಜಿ, ಇಲ್ಲಿರುವ ಎಲ್ಲಾ ಪೂಜ್ಯ ಸಾಧು ಸಂತರು, ಆಚಾರ್ಯರು, ಚಿನ್ಮಯ ಮಿಷನ್ನ ಸಮರ್ಪಿತ ಸೇವಕರು, ದೇಶ ಮತ್ತು ವಿದೇಶಗಳಿಂದ ಆಗಮಿಸಿರುವ ಭಕ್ತರೆ ಮತ್ತು ಸಾಧಕರೆ.
ನಿಮ್ಮೆಲ್ಲರ ಸೌಜನ್ಯದಿಂದ ಇಂದು ನನಗೆ ಚಿನ್ಮಯ ಮಿಷನ್ನ 'ಅಮೃತ ಮಹೋತ್ಸವ'ದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ. ಇದೊಂದು ವಿಶಿಷ್ಟ ಆಧ್ಯಾತ್ಮಿಕ ಅನುಭವವಾಗಿದೆ. ಇದು ನಮ್ಮ ಸಾಧು ಸಂತರು ನನ್ನ ಮೇಲೆ ತೋರಿದ ವಿಶೇಷ ವಾತ್ಸಲ್ಯ ಮತ್ತು ಆಶೀರ್ವಾದವಾಗಿದೆ. ಏಕೆಂದರೆ, ಚಿನ್ಮಯ ಮಿಷನ್ ಕೇವಲ ಒಂದು ಸಂಸ್ಥೆಯಲ್ಲ, ಇದೊಂದು 'ಚಿನ್ಮಯ' ಆದರ್ಶವಾಗಿದೆ, ಇದನ್ನು ಒಬ್ಬ 'ಚಿನ್ಮಯ ಋಷಿ' ಸ್ಥಾಪಿಸಿದರು. ದಶಕಗಳ ಕಾಲದ ಇದರ ಪಯಣವು ಶುದ್ಧ ಮತ್ತು ಪ್ರಜ್ಞಾಪೂರ್ವಕ ಸಂಕಲ್ಪಗಳಿಂದ ಕೂಡಿದೆ. 'ಚಿನ್ಮಯ'ವಾಗಿರುವ ಜತೆಗೆ, ಅದು ಸಹಜವಾಗಿಯೇ ಅಮರ ಮತ್ತು ಅಮೃತಮಯವಾಗಿರುತ್ತದೆ. ಆದ್ದರಿಂದ, ಇಂದು 'ಭಾರತ ಮಂಟಪ'ದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ 'ಚಿನ್ಮಯ ಅಮೃತ ಮಹೋತ್ಸವ' ಎಂದು ಹೆಸರಿಟ್ಟಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. ಜಗತ್ತಿನಾದ್ಯಂತ ಚಿನ್ಮಯ ಮಿಷನ್ನೊಂದಿಗೆ ಸಂಪರ್ಕ ಹೊಂದಿರುವ ಸಾಧು ಸಂತರು, ಆಚಾರ್ಯರು ಹಾಗೂ ಲಕ್ಷಾಂತರ ಸಾಧಕರು ಮತ್ತು ಅನುಯಾಯಿಗಳಿಗೆ 'ಚಿನ್ಮಯ ಅಮೃತ ಮಹೋತ್ಸವ'ದ ಸಂದರ್ಭದಲ್ಲಿ ನಾನು ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೆ,
ಇಂದು ಇಲ್ಲಿಗೆ ಬಂದಾಗ ನನ್ನ ಹೃದಯದಲ್ಲಿ ಮೂಡಿದ ಭಾವನೆಯು, ಆಧುನಿಕ ತಂತ್ರಜ್ಞಾನದ ಮೂಲಕ ಇನ್ನಷ್ಟು ಜೀವಂತವಾಯಿತು. ಪೂಜ್ಯ ಗುರುದೇವ ಸ್ವಾಮಿ ಚಿನ್ಮಯಾನಂದ ಜಿ ಅವರ ಈ ರೂಪದ ದರ್ಶನ ಮತ್ತು ಅವರ 'ಹೋಲೋಬಾಟ್' ಜತೆ ಸಂವಾದ ನಡೆಸುವ ಅವಕಾಶದಿಂದ ನಾನು 33 ವರ್ಷಗಳ ಹಿಂದಕ್ಕೆ ಪ್ರಯಾಣ ಬೆಳೆಸಿದಂತೆ ಭಾಸವಾಯಿತು. 1993ರಲ್ಲಿ ವಡೋದರಾದಲ್ಲಿ ಗುರುದೇವರನ್ನು ಭೇಟಿಯಾದುದು, ಅವರೊಂದಿಗೆ ನಡೆಸಿದ ಮಾತುಕತೆ, ಅವರ ವಾತ್ಸಲ್ಯ ಮತ್ತು ಆಶೀರ್ವಾದಗಳು ಇವೆಲ್ಲವೂ ಇಂದು ಮತ್ತೆ ನನ್ನ ಕಣ್ಣ ಮುಂದೆ ಮರುಕಳಿಸಿದವು. ಒಂದು ಕ್ಷಣ, ನಾನು ಮತ್ತೆ ಗುರುದೇವರ ಸಾಕ್ಷಾತ್ ಉಪಸ್ಥಿತಿಯಲ್ಲೇ ಇದ್ದೇನೆಯೇನೋ ಎಂಬ ಭಾವನೆ ಮೂಡಿತು. ನನಗೆ ಇದೊಂದು ಅತ್ಯಂತ ಭಾವನಾತ್ಮಕ ಅನುಭವ. ಈ ಅದ್ಭುತ ಅನುಭವಕ್ಕಾಗಿ ನಾನು ಚಿನ್ಮಯ ಮಿಷನ್ನ ಎಲ್ಲಾ ಸದಸ್ಯರಿಗೆ ನನ್ನ ಹೃದಯಾಂತರಾಳದ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಸ್ನೇಹಿತರೆ,
1993ರ ಫೆಬ್ರವರಿ-ಮಾರ್ಚ್ ತಿಂಗಳ ಸುಮಾರಿಗೆ ನಾನು ಪೂಜ್ಯ ಗುರುದೇವರನ್ನು ಭೇಟಿಯಾದೆ. ಅಮೆರಿಕದ ಷಿಕಾಗೊದಲ್ಲಿ ನಡೆಯಲಿದ್ದ 'ವಿಶ್ವ ಧರ್ಮ ಸಂಸತ್ತಿನ' ಶತಮಾನೋತ್ಸವ ಸಮಾರಂಭಕ್ಕೆ ಅವರನ್ನು ಆಹ್ವಾನಿಸಲು ನಾನು ಹೋಗಿದ್ದೆ. ಅದೇ ಸಮಯದಲ್ಲಿ, ಸ್ವಾಮಿ ವಿವೇಕಾನಂದ ಜಿ ಅವರ ಐತಿಹಾಸಿಕ ಭಾಷಣಕ್ಕೆ 100 ವರ್ಷ ತುಂಬಿದ ಸಂದರ್ಭ ಆಚರಿಸಲಾಗುತ್ತಿತ್ತು. ಪೂಜ್ಯ ಗುರುದೇವರು ಆ ಆಹ್ವಾನ ಸ್ವೀಕರಿಸಿದರು. ಅವರು ಅಮೆರಿಕಕ್ಕೆ ತೆರಳಿ, ಅಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ 'ವಿಶ್ವ ಧರ್ಮ ಸಂಸತ್ತಿನ' ಶತಮಾನೋತ್ಸವದ ಬಗ್ಗೆ ಜನರಿಗೆ ಅರಿವು ಮೂಡಿಸಿದರು, ಅದರಲ್ಲಿ ಭಾಗವಹಿಸುವಂತೆ ಜನರನ್ನು ಪ್ರೇರೇಪಿಸಿದರು. ಆದರೆ ವಿಧಿಯಾಟ ಬೇರೆಯೇ ಇತ್ತು. 'ವಿಶ್ವ ಧರ್ಮ ಸಂಸತ್ತು' ನಡೆಯುವುದಕ್ಕೆ ಕೆಲವೇ ವಾರಗಳ ಮೊದಲು, ಅಂದರೆ ಆಗಸ್ಟ್ 3ರಂದು ಗುರುದೇವರು ಅಮೆರಿಕದ ಸ್ಯಾನ್ ಡಿಯಾಗೊದಲ್ಲಿ ತಮ್ಮ ಭೌತಿಕ ದೇಹ ತ್ಯಜಿಸಿ, ನಮ್ಮೆಲ್ಲರನ್ನೂ ಅಗಲಿದರು. ಸೆಪ್ಟೆಂಬರ್ 11ರಂದು ಷಿಕಾಗೊದಲ್ಲಿ 'ವಿಶ್ವ ಧರ್ಮ ಸಂಸತ್ತು' ನಡೆದಾಗ, ಅದೃಷ್ಟವಶಾತ್ ನಾನು ಅಲ್ಲಿ ಉಪಸ್ಥಿತನಿದ್ದೆ. ಪೂಜ್ಯ ಗುರುದೇವರ ಅನುಪಸ್ಥಿತಿಯನ್ನು ನಾವೆಲ್ಲರೂ ತೀವ್ರವಾಗಿ ಅನುಭವಿಸಿದೆವು. ಗುರುದೇವರು ಆಡಿದ ಅನೇಕ ಮಾತುಗಳು ನನ್ನ ಮನಸ್ಸಿನಲ್ಲಿ ಪ್ರತಿಧ್ವನಿಸುತ್ತಲೇ ಇದ್ದವು. ಅವರೊಂದಿಗಿನ ನನ್ನ ಕೊನೆಯ ಭೇಟಿ ಸಂದರ್ಭದಲ್ಲಿ ನಡೆದ ಆಳವಾದ ಚರ್ಚೆಯು ಇಂದಿಗೂ ನನ್ನ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ. ಆ ಚರ್ಚೆಯ ಮೂಲ ಸಾರಾಂಶ ಇದಾಗಿತ್ತು: ಯುವ ಶಕ್ತಿಯ ನಿರ್ಮಾಣ! ಮತ್ತು, ಆ ಯುವ ಶಕ್ತಿಯ ಮೂಲಕ ಒಂದು ಸಬಲ ಹಾಗೂ ಸಮರ್ಥ ಭಾರತದ ಸೃಷ್ಟಿ!
ಸ್ನೇಹಿತರೆ,
ಅವರನ್ನು ಭೇಟಿಯಾದ ಕೆಲವು ವರ್ಷಗಳ ನಂತರ, ಸಾರ್ವಭೌಮ ಪ್ರಜೆಗಳು ನನಗೆ ಗುಜರಾತ್ನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಿಕೊಟ್ಟರು. ಅಂದಿನಿಂದ ಇಂದಿನವರೆಗೆ, ಕಳೆದ 25 ವರ್ಷಗಳಿಂದ ಸರ್ಕಾರದ ಮುಖ್ಯಸ್ಥನಾಗಿ, ನನ್ನ ಸಾಮರ್ಥ್ಯಕ್ಕನುಗುಣವಾಗಿ ನಾನು ನಿರಂತರವಾಗಿ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿದ್ದೇನೆ. ಇದರಲ್ಲಿ ಗುರೂಜಿಯವರ ಆಶೀರ್ವಾದವೂ ನನ್ನೊಂದಿಗಿದೆ. ಈ ಪಯಣದಲ್ಲಿ, ದೇಶದ ಯುವ ಜನರು ನನ್ನ ಪ್ರಯತ್ನಗಳು ಮತ್ತು ನೀತಿಗಳ ಕೇಂದ್ರಬಿಂದುವಾಗಿದ್ದಾರೆ. 'ಚಿನ್ಮಯ ಅಮೃತ ಮಹೋತ್ಸವ'ದಲ್ಲೂ ಯುವ ಜನರೇ ಪ್ರಮುಖ ಜವಾಬ್ದಾರಿಗಳನ್ನು ಹೊತ್ತುಕೊಂಡಿರುವುದು ನನಗೆ ಸಂತೋಷ ತಂದಿದೆ. ನಮ್ಮ ಅನೇಕ ಯುವ ಸಂಗಾತಿಗಳು ಸುಮಾರು 300 ದಿನಗಳ ಅವಧಿಯಲ್ಲಿ 40,000 ಕಿಲೋಮೀಟರ್ಗಳಷ್ಟು ದೂರದ ಪ್ರಯಾಣ ಕೈಗೊಂಡರು. ಈ ಅವಧಿಯಲ್ಲಿ, 1 ಲಕ್ಷಕ್ಕೂ ಹೆಚ್ಚು ಯುವಕರನ್ನು ಸಂಪರ್ಕಿಸಲಾಯಿತು. ಈ ಗಮನಾರ್ಹ ಪ್ರಯತ್ನಕ್ಕಾಗಿ ನಾನು ಇಡೀ ತಂಡವನ್ನು ಅಭಿನಂದಿಸುತ್ತೇನೆ.
ಸ್ನೇಹಿತರೆ,
ನಮ್ಮ ಉಪನಿಷತ್ತುಗಳ ಘೋಷಣೆಯಿದು: "ವಯಮ್ ಅಮೃತಸ್ಯ ಪುತ್ರಾಃ". ಅಂದರೆ, ನಾವೆಲ್ಲರೂ ಅಮರತ್ವದ ಮಕ್ಕಳು. ಈ ಪರಿಕಲ್ಪನೆಯು ಕೇವಲ ಆಧ್ಯಾತ್ಮಿಕ ತತ್ತ್ವಚಿಂತನೆಯಲ್ಲ, ಇದು ನಮ್ಮ ಸಾಂಸ್ಕೃತಿಕ ದೃಢ ನಂಬಿಕೆಯೂ ಹೌದು. ಇದರರ್ಥ ನಮ್ಮ ಭೌತಿಕ ದೇಹಗಳು ಅಮರವೆಂದಲ್ಲ; ಬದಲಾಗಿ, ನಮ್ಮ ಚೇತನ ಅಥವಾ ಪ್ರಜ್ಞೆಯು ಅಮರವಾದುದು ಎಂದರ್ಥ. ನಮ್ಮ ಜ್ಞಾನ ಮತ್ತು ನಮ್ಮ ಅರಿವು ಅಮರವಾದವು. ಇದೇ ಅರಿವಿನ ಕಾರಣದಿಂದಾಗಿ, ಈ ಭಾರತವು ಸಾವಿರಾರು ವರ್ಷಗಳಿಂದ ಅಮರವಾಗಿ ಉಳಿದುಬಂದಿದೆ. ಏಕೆಂದರೆ 'ಭಾರತ' ಎಂಬ ಪದದ ಅರ್ಥವೇ 'ಜ್ಞಾನ ಮತ್ತು ಪ್ರಕಾಶದ ಅನ್ವೇಷಣೆಯಲ್ಲಿ ತೊಡಗಿಸಿಕೊಂಡಿರುವುದು' ಎಂದಾಗಿದೆ.
ಆದ್ದರಿಂದ ಸ್ನೇಹಿತರೆ,
ದೇಶದ ಸ್ವಾತಂತ್ರ್ಯದ 75ನೇ ವರ್ಷದ ಸಂದರ್ಭ ಬಂದಾಗ, ಈ ಅವಕಾಶವನ್ನು ಕೇವಲ 'ವಿಕಸಿತ ಭಾರತ'ಕ್ಕಾಗಿ(ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ) ಒಂದು ಸ್ಫೂರ್ತಿದಾಯಕ ವೇದಿಕೆಯನ್ನಾಗಿ ಪರಿವರ್ತಿಸುವುದಷ್ಟೇ ಅಲ್ಲದೆ, ಭಾರತದ ಆ ಮೂಲತತ್ತ್ವವನ್ನೂ ಪುನರುಜ್ಜೀವನಗೊಳಿಸಬೇಕು ಎಂಬ ಆಲೋಚನೆ ನನ್ನ ಮನಸ್ಸಿನಲ್ಲಿ ಮೂಡಿತು. ಆ ಮೂಲತತ್ತ್ವವು ಅಮರ ವಿಚಾರಗಳೊಂದಿಗೆ ಬದುಕಬಲ್ಲದು. ಸಾವಿರಾರು ಶತಮಾನಗಳ ತನ್ನ ಅನುಭವದ ಮೂಲಕ, ಯುಗಯುಗಾಂತರಗಳಲ್ಲಿ ಮನುಕುಲವನ್ನೇ ಆರೈಕೆ ಮಾಡುವ ಸಾಮರ್ಥ್ಯ ಹೊಂದಿದೆ. ಅದಕ್ಕಾಗಿಯೇ ನಾನು ಈ ಸಂದರ್ಭವನ್ನು 'ಅಮೃತ ಮಹೋತ್ಸವ'ವನ್ನಾಗಿ ಆಚರಿಸಲು ಕರೆ ನೀಡಿದೆ. ಕಾಲ ಕಳೆದಂತೆ, ಒಂದರ ನಂತರ ಒಂದರಂತೆ ಅದ್ಭುತ ಪಯಣಗಳು ಈ ಸಂಕಲ್ಪದೊಂದಿಗೆ ಬೆಸೆದುಕೊಂಡು ಬಂದಿರುವುದನ್ನು ನಾವು ಕಾಣಬಹುದು. ಈ ಅವಧಿಯಲ್ಲಿ, ಅನೇಕ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆಗಳು ತಮ್ಮ ತಮ್ಮ ಪಯಣದ ಪ್ರಮುಖ ಹಂತಗಳಲ್ಲಿ 'ಅಮೃತ ಸಂಕಲ್ಪ'ಗಳನ್ನು ಕೈಗೊಂಡವು. ಈಗ, ಚಿನ್ಮಯ ಮಿಷನ್ ಕೂಡ ತನ್ನ 'ಅಮೃತ ಮಹೋತ್ಸವ'ದ ಮೂಲಕ ಭಾರತದ 'ಅಮೃತ ಕಾಲ'ದ ಅಭಿಯಾನದಲ್ಲಿ ಕೈಜೋಡಿಸುತ್ತಿದೆ. ಇದು ಭಾರತದ ಸಂಕಲ್ಪಗಳ ನಿಜವಾದ ಶಕ್ತಿಯಾಗಿದೆ; ನಾವೆಲ್ಲಾ 'ಅಮೃತಸ್ಯ ಪುತ್ರಾಃ' ಎಂಬುದಕ್ಕೆ ಇದೊಂದು ನೈಜ ಸಾಕ್ಷಿಯಾಗಿದೆ.
ಸ್ನೇಹಿತರೆ,
ನಮ್ಮ ವೇದಗಳ ಸಂದೇಶ ಹೀಗಿದೆ: "ವಯಂ ರಾಷ್ಟ್ರೆ ಜಾಗ್ರಿಯಾಮಾ ಪುರೋಹಿತಾಃ" - ಅಂದರೆ, ರಾಷ್ಟ್ರದ ಕಲ್ಯಾಣ ಬಯಸುವ ನಾವು, ರಾಷ್ಟ್ರವನ್ನು ಜಾಗೃತವಾಗಿ ಮತ್ತು ಉನ್ನತ ಸ್ಥಿತಿಯಲ್ಲಿ ಇರಿಸೋಣ. ಸ್ವಾಮಿ ಚಿನ್ಮಯಾನಂದ ಜಿ ಅವರು ತಮ್ಮ ಇಡೀ ಜೀವನವನ್ನು ಇದೇ ಮಂತ್ರದ ಮಾರ್ಗದರ್ಶನದಲ್ಲಿ ಕಳೆದರು. ಆಧ್ಯಾತ್ಮಿಕ ವಿಷಯಗಳ ಬಗ್ಗೆ ಅವರು ಎಷ್ಟು ಶ್ರದ್ಧೆಯಿಂದ ಮಾತನಾಡುತ್ತಿದ್ದರೋ, ಅಷ್ಟೇ ತತ್ಪರತೆಯಿಂದ ರಾಷ್ಟ್ರೀಯ ವಿಷಯಗಳ ಕುರಿತಾಗಿಯೂ ಸ್ಪಷ್ಟವಾದ ವಿಚಾರಗಳನ್ನು ಮಂಡಿಸುತ್ತಿದ್ದರು. ಏಕೆಂದರೆ, ನಮ್ಮ ರಾಷ್ಟ್ರವೇ ನಮ್ಮ ಸಂಸ್ಕೃತಿಯ ಜನ್ಮಸ್ಥಳವಾಗಿದೆ. ಈ ರಾಷ್ಟ್ರವೇ ನಮ್ಮ ಅಸ್ತಿತ್ವದ ಭದ್ರ ಬುನಾದಿಯಾಗಿದೆ. ನಮ್ಮ ಆಧ್ಯಾತ್ಮಿಕ ಪ್ರಗತಿಯನ್ನು ವೈಯಕ್ತಿಕ ಬೆಳವಣಿಗೆಯೊಂದಿಗೆ ಜೋಡಿಸಬೇಕು, ಆ ವೈಯಕ್ತಿಕ ಬೆಳವಣಿಗೆಯನ್ನೇ ರಾಷ್ಟ್ರದ ಪ್ರಗತಿಗೆ ಸಾಧನವನ್ನಾಗಿ ಮಾಡಿಕೊಳ್ಳಬೇಕು ಎಂದು ಸ್ವಾಮೀಜಿ ಸದಾ ಬೋಧಿಸುತ್ತಿದ್ದರು. ಭಾರತೀಯರಲ್ಲಿ ಭಾರತದ ಬಗ್ಗೆ ಆತ್ಮಗೌರವದ ಭಾವನೆಯನ್ನು ತುಂಬುವುದೇ ಸ್ವಾಮೀಜಿಯವರ ಧ್ಯೇಯವಾಗಿತ್ತು. ಇದೇ ಉದ್ದೇಶದಿಂದ ಅವರು 'ಗೀತಾ ಜ್ಞಾನ ಯಜ್ಞ' ಪ್ರಾರಂಭಿಸಿದರು. ಉಪನಿಷತ್ತುಗಳು, ವೇದಾಂತ ಮತ್ತು ನಮ್ಮ ಶಾಸ್ತ್ರಗಳ ಜ್ಞಾನವನ್ನು ಸಾಮಾನ್ಯ ಜನರಿಗೆ ತಲುಪಿಸುವ ಅಭಿಯಾನ ಕೈಗೊಂಡರು. ಇಂದು ಅವರ ಆ ಸಂಕಲ್ಪದ ಫಲಿತಾಂಶಗಳನ್ನು ನಾವು ಅನೇಕ ರೀತಿಯಲ್ಲಿ ಕಾಣಬಹುದು. 'ಚಿನ್ಮಯ ಮಿಷನ್'ನ ಪ್ರಯತ್ನಗಳಿಂದಾಗಿ ಇಂದು ಲಕ್ಷಾಂತರ ಯುವಕರು ಭಾರತದ ಸಾಂಸ್ಕೃತಿಕ ರಾಯಭಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಯುವಕರು ಭಾರತೀಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ದಾಟಿಸುತ್ತಿದ್ದಾರೆ. ಪೂಜ್ಯ ಗುರುದೇವ್ ಅವರ ಈ ಕೊಡುಗೆಯು ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ನವಜಾಗೃತಿಯಲ್ಲಿ ಒಂದು ಪ್ರಮುಖ ಅಧ್ಯಾಯವಾಗಿದೆ.
ಸ್ನೇಹಿತರೆ,
ಇಂದು ನನಗೆ ಪೂಜ್ಯ ಗುರುದೇವ್ ಅವರ ಜನ್ಮ ಶತಮಾನೋತ್ಸವದ ಸಂದರ್ಭವೂ ನೆನಪಾಗುತ್ತಿದೆ. 2015ರಲ್ಲಿ ಅವರ ಸ್ಮರಣಾರ್ಥವಾಗಿ ವಿಶೇಷ ನಾಣ್ಯ ಬಿಡುಗಡೆ ಮಾಡುವ ಸೌಭಾಗ್ಯ ನನಗೆ ಸಿಕ್ಕಿತ್ತು. ಆಗಲೇ ನಾನು ಹೇಳಿದ್ದೆ - ಸ್ವಾಮೀಜಿಯವರ ಜೀವನವು ಜ್ಞಾನ, ಕರ್ಮ ಮತ್ತು ಭಕ್ತಿಯ ಒಂದು ಅದ್ಭುತ ಸಂಗಮವಾಗಿತ್ತು. ಅವರ ಗುರುಗಳಾದ ಸ್ವಾಮಿ ಶಿವಾನಂದ ಜಿ ಅವರು, "ಹೋಗು, ಸಿಂಹದಂತೆ ಗರ್ಜಿಸು" ಎಂದು ಆಶೀರ್ವದಿಸಿದ್ದರು. ಅವರು ತಮ್ಮ ಇಡೀ ಜೀವನವನ್ನು ಅದೇ ಸ್ಫೂರ್ತಿಯೊಂದಿಗೆ ಕಳೆದರು. ಅವರ ಮಾತುಗಳಲ್ಲಿನ ಆತ್ಮವಿಶ್ವಾಸ ಮತ್ತು ಆಂತರಿಕ ಶಕ್ತಿಯು ಅವರ ವಿಚಾರಗಳನ್ನು ಪ್ರತಿಯೊಬ್ಬರ ಹೃದಯದಲ್ಲಿ ಅಚ್ಚಳಿಯದಂತೆ ಉಳಿಯುವಂತೆ ಮಾಡಿತು. 'ಆರ್ಟ್ ಆಫ್ ಮ್ಯಾನ್ ಮೇಕಿಂಗ್' ಎಂಬ ಅವರ ರೇಡಿಯೊ ಕಾರ್ಯಕ್ರಮವು ಅಸಂಖ್ಯಾತ ವ್ಯಕ್ತಿಗಳಿಗೆ ಸರಿಯಾದ ದಿಕ್ಕನ್ನೇ ತೋರಿಸಿಕೊಟ್ಟಿತು.
ಸ್ನೇಹಿತರೆ,
ಮಹಾನ್ ವ್ಯಕ್ತಿಗಳ ಧ್ಯೇಯೋದ್ದೇಶಗಳು ಅವರು ಈ ಲೋಕವನ್ನು ತೊರೆದ ನಂತರವೂ ಜೀವಂತವಾಗಿರುತ್ತವೆ. ಅದಕ್ಕಾಗಿಯೇ ಇಂದು, ಚಿನ್ಮಯ ಮಿಷನ್ನ 100ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಲಕ್ಷಾಂತರ ಮಕ್ಕಳು ಮತ್ತು ಯುವಜನರ ಭವಿಷ್ಯವನ್ನು ರೂಪಿಸುತ್ತಿರುವುದನ್ನು ನಾವು ಕಾಣಬಹುದು. ಈ ಸಂಸ್ಥೆಗಳಲ್ಲಿ, ಅವರು ಆಧುನಿಕ ಶಿಕ್ಷಣ ಪಡೆಯುವ ಜತೆಗೆ ಭಾರತೀಯ ಮೌಲ್ಯಗಳನ್ನು ಸಹ ಅಳವಡಿಸಿಕೊಳ್ಳುತ್ತಿದ್ದಾರೆ.
ಸ್ನೇಹಿತರೆ,
ಸ್ವಾತಂತ್ರ್ಯದ ಸಮಯದಲ್ಲಿ ಸ್ವಾಮಿ ಚಿನ್ಮಯಾನಂದ ಅವರಂತಹ ದೂರದೃಷ್ಟಿಯುಳ್ಳ ವ್ಯಕ್ತಿಗಳು ಹೊಂದಿದ್ದ ಆಶಯದ ದಿಕ್ಕಿನಲ್ಲೇ, ಇಂದು ರಾಷ್ಟ್ರವು ತನ್ನ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದೆ. ನಮ್ಮ ಶಿಕ್ಷಣ ವ್ಯವಸ್ಥೆಯು 'ನವ ಭಾರತ'ದ ಅಗತ್ಯಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳಲು, ನಾವು 'ರಾಷ್ಟ್ರೀಯ ಶಿಕ್ಷಣ ನೀತಿ' ಜಾರಿಗೆ ತಂದಿದ್ದೇವೆ. ಈ ಹೊಸ ಶಿಕ್ಷಣ ನೀತಿಯಲ್ಲಿ ಭಾರತೀಯ ಜ್ಞಾನ ಪರಂಪರೆಗಳು, ಮಾತೃಭಾಷೆಯಲ್ಲಿ ಶಿಕ್ಷಣ, ಆಧುನಿಕ ವಿಜ್ಞಾನ ಮತ್ತು ಹೊಸ ತಂತ್ರಜ್ಞಾನಗಳಿಗೆ ಆದ್ಯತೆ ನೀಡಲಾಗಿದೆ.
ಸ್ನೇಹಿತರೆ,
ಸ್ವಾಮೀಜಿಯವರ ಜೀವನದ ಮತ್ತೊಂದು ಧ್ಯೇಯವೆಂದರೆ, ಭಾರತೀಯ ಪರಂಪರೆಯ ಬಗ್ಗೆ ಹೆಮ್ಮೆ ಮತ್ತು ಅದರ ಸಂರಕ್ಷಣೆ! ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಶಿಲಾ ಸ್ಮಾರಕದ ಬಗ್ಗೆ ನಿಮ್ಮೆಲ್ಲರಿಗೂ ತಿಳಿದೇ ಇದೆ. ಸಮುದ್ರದ ನಡುವೆ ಇರುವ ಆ ಬೃಹತ್ ಬಂಡೆಯ ಮೇಲೆ ಸ್ಮಾರಕ ನಿರ್ಮಿಸುವ ನಿರ್ಧಾರವನ್ನು ಶ್ರೀ ಏಕನಾಥ ರಾನಡೆ ಜಿ ಅವರು ಕೈಗೊಂಡರು. ಆ ಸಮಯದಲ್ಲಿ, ಪೂಜ್ಯ ಗುರುದೇವ್ ಅವರ ಬೆಂಬಲಕ್ಕೆ ಸದೃಢವಾಗಿ ನಿಂತರು. ಈ ಮಹಾನ್ ಕಾರ್ಯಕ್ಕೆ ಮೊದಲ ಆರ್ಥಿಕ ಕೊಡುಗೆಯನ್ನು ಕೂಡ ಪೂಜ್ಯ ಸ್ವಾಮೀಜಿಯವರೇ ನೀಡಿದರು. ಇಂದು, ವಿವೇಕಾನಂದ ರಾಕ್ ಮೆಮೋರಿಯಲ್ ದೇಶಾದ್ಯಂತ ಮತ್ತು ಪ್ರವಿಶ್ವಾದ್ಯಂತದಿಂದ ಬರುವ ಲಕ್ಷಾಂತರ ಜನರಿಗೆ ಸ್ಫೂರ್ತಿಯ ಸೆಲೆಯಾಗಿ ನಿಂತಿದೆ.
ಸ್ನೇಹಿತರೆ,
ಇಂದು ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ, ಭಾರತದ ಸಾಂಸ್ಕೃತಿಕ ಕೇಂದ್ರಗಳು ನವಜಾಗೃತಿ ಕಾಣುತ್ತಿವೆ. ಕಾಶಿ ವಿಶ್ವನಾಥ ಧಾಮದ ನವೀಕೃತ ರೂಪವಿರಲಿ, ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಭವ್ಯ ದೇವಾಲಯವಿರಲಿ, ಉಜ್ಜಯಿನಿಯ 'ಮಹಾಕಾಲ್ ಮಹಾಲೋಕ'ವಿರಲಿ, ಅಥವಾ ಕೇದಾರನಾಥ ಮತ್ತು ಬದರಿನಾಥದಂತಹ ನಮ್ಮ ಪವಿತ್ರ ಕ್ಷೇತ್ರಗಳಿರಲಿ - ಇವೆಲ್ಲವೂ ಇದಕ್ಕೆ ಸಾಕ್ಷಿ. ನೀವು ಇತ್ತೀಚೆಗೆ ಕೇದಾರನಾಥಕ್ಕೆ ಭೇಟಿ ನೀಡಿದ್ದರೆ, ಅಲ್ಲಿ ಆದಿ ಶಂಕರಾಚಾರ್ಯರ ದಿವ್ಯ ಮತ್ತು ಭವ್ಯ ಪ್ರತಿಮೆ ಸ್ಥಾಪಿಸಿರುವುದನ್ನು ನೋಡಿರಬಹುದು. ಇದು ಅವರು ತಮ್ಮ ಭೌತಿಕ ದೇಹ ತ್ಯಜಿಸಿದ ಸ್ಥಳವಾಗಿದೆ. ಇಂದು ನಮ್ಮ ಈ ಕ್ಷೇತ್ರಗಳು ತಮ್ಮ ವೈಭವಯುತ ರೂಪವನ್ನು ಮರಳಿ ಪಡೆಯುತ್ತಿವೆ. ಒಂದು ಕಾಲದಲ್ಲಿ ಭಾರತದಿಂದ ಅನೇಕ ವಿಗ್ರಹಗಳನ್ನು ಕಳ್ಳತನ ಮಾಡಿ, ವಿದೇಶಗಳಿಗೆ ಸಾಗಿಸಿ, ಅಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಇದನ್ನು ತಡೆಯುವವರು ಯಾರೂ ಇರಲಿಲ್ಲ, ವಿಚಾರಿಸುವವರು ಯಾರೂ ಇರಲಿಲ್ಲ. ಅವುಗಳನ್ನು ಪೂಜಿಸುವವರ ಮಾತು ಹಾಗಿರಲಿ, ಕನಿಷ್ಠ ಪಕ್ಷ ಏನಾಯಿತು ಎಂದು ಕೇಳುವವರು ಕೂಡ ಯಾರೂ ಇರಲಿಲ್ಲ. ಕಳೆದ 12 ವರ್ಷಗಳಲ್ಲಿ ನಾವು ಅಂತಹ ಕಳ್ಳತನವಾಗಿದ್ದ 650ಕ್ಕೂ ಹೆಚ್ಚು ಪ್ರಾಚೀನ ವಿಗ್ರಹಗಳನ್ನು ಮರಳಿ ತಂದಿದ್ದೇವೆ. ನಮ್ಮ ಸಾಂಸ್ಕೃತಿಕ ಕೇಂದ್ರಗಳು ಯುನೆಸ್ಕೊ ವಿಶ್ವ ಪರಂಪರೆಯ ತಾಣಗಳ ಭಾಗವಾಗುತ್ತಿವೆ.
ಸ್ನೇಹಿತರೆ,
ಸ್ವಾಮೀಜಿಯವರು ನಮ್ಮ ಧರ್ಮ ಮತ್ತು ತತ್ತ್ವಜ್ಞಾನವನ್ನು ಜಗತ್ತಿನ ಜನರಿಗೆ ತಲುಪಿಸಿದಂತೆಯೇ, ಇಂದು 'ಅಂತರರಾಷ್ಟ್ರೀಯ ಯೋಗ ದಿನ'ವು ವಿಶ್ವಾದ್ಯಂತದ ಜನರನ್ನು ಭಾರತದೊಂದಿಗೆ ಹಾಗೂ ನಮ್ಮ ಪ್ರಾಚೀನ, ವೈಭವಯುತ ಪರಂಪರೆಯೊಂದಿಗೆ ಬೆಸೆಯುತ್ತಿದೆ. ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡುವ ಈ ಆತ್ಮವಿಶ್ವಾಸ ಮತ್ತು ಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತರಾಗುವ ಈ ಭರವಸೆಯು, ನಮ್ಮ ಋಷಿಮುನಿಗಳು ಮತ್ತು ದೇಶಭಕ್ತರು ಶತಮಾನಗಳ ಹಿಂದೆಯೇ ಕಂಡ ಕನಸಿನ ಹಾದಿಯಲ್ಲಿ ರಾಷ್ಟ್ರವು ಇಂದು ಮುನ್ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಈ ಹಾದಿಯಲ್ಲಿ ಅವರ ಆಲೋಚನಾ ಶಕ್ತಿಯೇ ನಮ್ಮ ಅತಿ ದೊಡ್ಡ ಆಸ್ತಿಯಾಗಿದೆ.
ಸ್ನೇಹಿತರೆ,
ವಿವಿಧ ಸಂಸ್ಥೆಗಳು ಮತ್ತು ಸಂಘಟನೆಗಳು ತಮ್ಮದೇ ಆದ ಉದ್ದೇಶಗಳನ್ನು ಹೊಂದಿರಬಹುದು, ಆದರೆ ಎಲ್ಲರನ್ನೂ ಒಗ್ಗೂಡಿಸುವ ಏಕೈಕ ಗುರಿ, ಅಂದರೆ ಎಲ್ಲಾ ಹಾದಿಗಳು ಒಂದೆಡೆ ಸೇರುವ ಆ ಗುರಿ ಯಾವುದೆಂದರೆ, ರಾಷ್ಟ್ರದ ಅಭಿವೃದ್ಧಿ ಮತ್ತು ರಾಷ್ಟ್ರದ ಹೆಮ್ಮೆ. ಸ್ವಾಮಿ ಚಿನ್ಮಯಾನಂದ ಜೀ ಅವರ ಕಾಲದಲ್ಲಿ ದೇಶದ ಮುಂದಿದ್ದ ಸವಾಲುಗಳಿಗೆ ಅನುಗುಣವಾಗಿ ಅವರು ತಮ್ಮ ಸಂಕಲ್ಪಗಳನ್ನು ರೂಪಿಸಿಕೊಂಡಿದ್ದರು. ಕಳೆದ ದಶಕಗಳಲ್ಲಿ ಕಾಲ ಬದಲಾಗಿದೆ, ರಾಷ್ಟ್ರದ ಮುಂದೆ ಹೊಸ ಸವಾಲುಗಳು ಎದುರಾಗಿವೆ, ಸಮಾಜದಲ್ಲಿ ಹೊಸ ರೀತಿಯ ವಿರೂಪಗಳು ಕಾಣಿಸಿಕೊಂಡಿವೆ. ಇಂದಿನ ದಿನಗಳಲ್ಲಿ ಇವುಗಳಿಗೆ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಮಾಜ ವಿಭಜಿಸಲು ಯತ್ನಿಸುವ ಶಕ್ತಿಗಳ ವಿರುದ್ಧ ನಾವು ಸಮಾಜವನ್ನು ಒಗ್ಗೂಡಿಸಬೇಕು, ನಮ್ಮ ನಾಗರಿಕರಿಗೆ ಸ್ವಾವಲಂಬನೆಯ ಮಹತ್ವವನ್ನು ತಿಳಿಸಿಕೊಡಬೇಕು. 2047ರ ವೇಳೆಗೆ 'ವಿಕಸಿತ ಭಾರತ' ನಿರ್ಮಿಸುವ ಸಂಕಲ್ಪದೊಂದಿಗೆ ನಾವು ಪ್ರತಿಯೊಬ್ಬ ವ್ಯಕ್ತಿಯನ್ನೂ ಜೋಡಿಸಬೇಕಿದೆ. ಈ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ನಾವೆಲ್ಲರೂ ಇನ್ನಷ್ಟು ಸಕ್ರಿಯವಾಗಿ ಮತ್ತು ಮುತುವರ್ಜಿಯಿಂದ ಕಾರ್ಯಪ್ರವೃತ್ತರಾಗಬೇಕಿದೆ.
ಸ್ನೇಹಿತರೆ,
2047ರಲ್ಲಿ ಭಾರತವು ತನ್ನ ಸ್ವಾತಂತ್ರ್ಯದ 100 ವರ್ಷಗಳನ್ನು ಪೂರೈಸುವ ಹೊತ್ತಿಗೆ, ಚಿನ್ಮಯ ಮಿಷನ್ ಕೂಡ ತನ್ನ ಶತಮಾನೋತ್ಸವವನ್ನು ಆಚರಿಸಲಿದೆ. ಅಂದರೆ, ಚಿನ್ಮಯ ಮಿಷನ್ನ ಶತಮಾನೋತ್ಸವದ ಪಯಣ ಮತ್ತು 'ವಿಕಸಿತ ಭಾರತ'ದ ಕಡೆಗಿನ ಪಯಣ ಒಟ್ಟಿಗೆ ಸಾಗಲಿವೆ. ಆದ್ದರಿಂದ ನಮ್ಮ ಗುರಿಗಳು ಒಂದೇ, ನಮ್ಮ ಉದ್ದೇಶಗಳು ಒಂದೇ. ನಾವು ಈ ಪಯಣವನ್ನು ಒಟ್ಟಾಗಿ ಮುನ್ನಡೆಸಬೇಕು. ನಿಮ್ಮ ಬಳಿ ಗುರುದೇವರಿಂದ ಬಂದ ಮಹತ್ತರವಾದ ಪರಂಪರೆ ಮತ್ತು ದಶಕಗಳ ಅನುಭವವಿದೆ. ವಿಶ್ವಾದ್ಯಂತ ಹರಡಿರುವ ಸಮರ್ಪಿತ ಆಚಾರ್ಯರು, ಸಾಧಕರು ಮತ್ತು ಕಾರ್ಯಕರ್ತರ ವಿಶಾಲವಾದ ಕುಟುಂಬ ನಿಮ್ಮೊಂದಿಗಿದೆ. 'ವಿಕಸಿತ ಭಾರತ' ನಿರ್ಮಿಸುವಲ್ಲಿ ನೀವೆಲ್ಲರೂ ಒಟ್ಟಾಗಿ ಪ್ರಮುಖ ಪಾತ್ರ ವಹಿಸುತ್ತೀರಿ ಎಂಬ ವಿಶ್ವಾಸ ನನಗಿದೆ. ಈ ದೃಢ ನಂಬಿಕೆಯೊಂದಿಗೆ, ನಾನು ಮತ್ತೊಮ್ಮೆ ಪೂಜ್ಯ ಗುರುದೇವರ ಪಾದಗಳಿಗೆ ನಮಸ್ಕರಿಸುತ್ತೇನೆ. ಚಿನ್ಮಯ ಮಿಷನ್ನ ಎಲ್ಲಾ ಸಾಧು ಸಂತರು, ಆಚಾರ್ಯರು, ಸಾಧಕರು ಮತ್ತು ಸೇವಾಪರ ಕಾರ್ಯಕರ್ತರಿಗೆ 'ಅಮೃತ ಮಹೋತ್ಸವ'ದ ಸಂದರ್ಭದಲ್ಲಿ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಹರಿ ಓಂ.
ಹರಿ ಓಂ.
ಹರಿ ಓಂ.
ತುಂಬು ಧನ್ಯವಾದಗಳು.
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****