ಸಂವಹನ ಸಚಿವಾಲಯ
azadi ka amrit mahotsav

ಇಂಡಿಯಾ ಪೋಸ್ಟ್‌ ನಿಂದ ಇತಿಹಾಸ ಸೃಷ್ಟಿ: ಸತತ ಎರಡು ತ್ರೈಮಾಸಿಕಗಳಲ್ಲಿ ₹4,000 ಕೋಟಿ ಆದಾಯದ ಗಡಿ ದಾಟಿದ ಅಂಚೆ ಇಲಾಖೆ


2026–27ನೇ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಅಂಚೆ ಇಲಾಖೆ ಶೇ. 24ರ ಆದಾಯ ಬೆಳವಣಿಗೆ ದಾಖಲಿಸಿ, ₹8,212.7 ಕೋಟಿ ಆದಾಯ ಗಳಿಸಿದೆ; ಪಾರ್ಸೆಲ್‌ ವಿಭಾಗದಲ್ಲಿ ಶೇ. 71ರಷ್ಟು ಬೆಳವಣಿಗೆ ದಾಖಲು

ಬೆಳವಣಿಗೆಯ ವೇಗವನ್ನು ಉಳಿಸಿಕೊಳ್ಳಲು ಗ್ರಾಹಕಕೇಂದ್ರಿತ ಸೇವೆಗಳು, ವ್ಯವಹಾರ ವೈವಿಧ್ಯೀಕರಣ, ನಾವೀನ್ಯತೆ ಮತ್ತು ಡಿಜಿಟಲೀಕರಣಕ್ಕೆ ಕೇಂದ್ರ ಸಂವಹನ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಒತ್ತು

ಪ್ರಕಟಣಾ ದಿನಾಂಕ: 22 OCT 2026 4:22PM by PIB Bengaluru

ಅಂಚೆ ಇಲಾಖೆಯು ಸತತ ಎರಡು ತ್ರೈಮಾಸಿಕಗಳಲ್ಲಿ ₹4,000 ಕೋಟಿ ತ್ರೈಮಾಸಿಕ ಆದಾಯದ ಗಡಿಯನ್ನು ದಾಟುವ ಮೂಲಕ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ. ಇದೇ ಮೊದಲ ಬಾರಿಗೆ ಈ ಸಾಧನೆ ಮಾಡಲಾಗಿದೆ. 2026–27ನೇ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ (ಏಪ್ರಿಲ್–ಸೆಪ್ಟೆಂಬರ್ 2026) ಇಲಾಖೆ ₹8,212.7 ಕೋಟಿ ಆದಾಯ ದಾಖಲಿಸಿದೆ. ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಗಳಿಸಿದ ₹6,636 ಕೋಟಿ ಆದಾಯಕ್ಕೆ ಹೋಲಿಸಿದರೆ, ವರ್ಷದಿಂದ ವರ್ಷಕ್ಕೆ ಶೇ. 24ರಷ್ಟು ಬೆಳವಣಿಗೆ ಸಾಧಿಸಿದೆ.

(ಎಡದಿಂದ ಬಲಕ್ಕೆ) ಎರಡನೇ ತ್ರೈಮಾಸಿಕದ (ಕ್ಯೂ2) ಪರಿಶೀಲನಾ ಸಭೆಯ ಸಂದರ್ಭದಲ್ಲಿ ಡಿಜಿಪಿಎಸ್ ಶ್ರೀಮತಿ ಮನೀಷಾ ಸಿನ್ಹಾ; ಕೇಂದ್ರ ಸಂವಹನ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವರಾದ ಡಾ. ಚಂದ್ರಶೇಖರ್ ಪೆಮ್ಮಸಾನಿ; ಕೇಂದ್ರ ಸಂವಹನ ಹಾಗೂ ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ; ಮತ್ತು ಅಂಚೆ ಇಲಾಖೆಯ ಕಾರ್ಯದರ್ಶಿ ಶ್ರೀ ಸುಬ್ರತ್ ದಾಸ್

ಕೇಂದ್ರ ಸಂವಹನ ಹಾಗೂ ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು ಇಂದು ನವದೆಹಲಿಯಲ್ಲಿ ನಡೆದ ಎರಡನೇ ತ್ರೈಮಾಸಿಕದ (ಕ್ಯೂ2) ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಂವಹನ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವರಾದ ಡಾ. ಚಂದ್ರಶೇಖರ್ ಪೆಮ್ಮಸಾನಿ, ಅಂಚೆ ಇಲಾಖೆಯ ಕಾರ್ಯದರ್ಶಿ ಶ್ರೀ ಸುಬ್ರತ್ ದಾಸ್, ಅಂಚೆ ಸೇವೆಗಳ ಮಂಡಳಿಯ ಸದಸ್ಯರು, ಎಲ್ಲ ಅಂಚೆ ವೃತ್ತಗಳ ಮುಖ್ಯ ಅಂಚೆ ಮಹಾನಿರ್ದೇಶಕರು ಮತ್ತು ಅಂಚೆ ನಿರ್ದೇಶನಾಲಯದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

2026ರ ಎರಡನೇ ತ್ರೈಮಾಸಿಕದಲ್ಲಿ (ಜುಲೈ–ಸೆಪ್ಟೆಂಬರ್) ಇಲಾಖೆಯು ₹4,201.5 ಕೋಟಿ ಆದಾಯ ಗಳಿಸಿದೆ. ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 25ರಷ್ಟು ಬೆಳವಣಿಗೆಯಾಗಿದ್ದು, ಮೊದಲ ತ್ರೈಮಾಸಿಕಕ್ಕೆ (ಕ್ಯೂ1) ಹೋಲಿಸಿದರೆ ಶೇ. 5ರಷ್ಟು ಹೆಚ್ಚಳವಾಗಿದೆ.

ವಿವಿಧ ವ್ಯವಹಾರ ವಿಭಾಗಗಳಲ್ಲಿ ಬೆಳವಣಿಗೆ

ಎಲ್ಲ ಆರು ವ್ಯವಹಾರ ವಿಭಾಗಗಳಲ್ಲಿಯೂ ವರ್ಷದಿಂದ ವರ್ಷಕ್ಕೆ ಆದಾಯದ ಬೆಳವಣಿಗೆ ದಾಖಲಾಗಿದೆ. ಅಂಚೆ ಜೀವ ವಿಮೆ/ಗ್ರಾಮೀಣ ಅಂಚೆ ಜೀವ ವಿಮೆ (ಪಿಎಲ್‌ಐ/ಆರ್‌ಪಿಎಲ್‌ಐ) ವಿಭಾಗದಲ್ಲಿ ಶೇ. 44ರಷ್ಟು, ಪತ್ರಗಳ ವಿಭಾಗದಲ್ಲಿ ಶೇ. 36ರಷ್ಟು, ಅಂಚೆ ಕಚೇರಿ ಉಳಿತಾಯ ಬ್ಯಾಂಕ್ (ಪಿಒಎಸ್‌ಬಿ) ವಿಭಾಗದಲ್ಲಿ ಶೇ. 18ರಷ್ಟು, ಅಂತಾರಾಷ್ಟ್ರೀಯ ಸಂಬಂಧಗಳು ಮತ್ತು ಜಾಗತಿಕ ವ್ಯವಹಾರ ವಿಭಾಗದಲ್ಲಿ ಶೇ. 38ರಷ್ಟು ಹಾಗೂ ಪಾರ್ಸೆಲ್‌ ವಿಭಾಗದಲ್ಲಿ ಶೇ. 71ರಷ್ಟು ಬೆಳವಣಿಗೆ ದಾಖಲಾಗಿದೆ.

ಎರಡನೇ ತ್ರೈಮಾಸಿಕದಲ್ಲಿ ಪಾರ್ಸೆಲ್‌ ವಿಭಾಗವು ₹318.9 ಕೋಟಿ ಆದಾಯ ಗಳಿಸಿದೆ. ಕೇರಳ, ಈಶಾನ್ಯ ಪ್ರದೇಶ, ಉತ್ತರ ಪ್ರದೇಶ ಮತ್ತು ಬಿಹಾರ ಅಂಚೆ ವೃತ್ತಗಳು ತಮ್ಮ ತ್ರೈಮಾಸಿಕ ಗುರಿಗಳನ್ನು ಮೀರಿ ಸಾಧನೆ ಮಾಡಿವೆ. ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಪತ್ರಗಳ ವಿಭಾಗದ ಆದಾಯ ಶೇ. 26ರಷ್ಟು ಹೆಚ್ಚಾಗಿದೆ. 12 ಅಂಚೆ ವೃತ್ತಗಳು ಎರಡನೇ ತ್ರೈಮಾಸಿಕದ ಗುರಿಗಳನ್ನು ಸಾಧಿಸಿವೆ ಅಥವಾ ಮೀರಿವೆ. ಅಂಚೆ ಕಚೇರಿ ಉಳಿತಾಯ ಬ್ಯಾಂಕ್ (ಪಿಒಎಸ್‌ಬಿ) ವಿಭಾಗವು ₹1,987 ಕೋಟಿ ಆದಾಯ ನೀಡಿದ್ದು, ಅಂಚೆ ಜೀವ ವಿಮೆ/ಗ್ರಾಮೀಣ ಅಂಚೆ ಜೀವ ವಿಮೆ ವಿಭಾಗವು ತನ್ನ ತ್ರೈಮಾಸಿಕ ಗುರಿಯ ಶೇ. 92ರಷ್ಟನ್ನು ಸಾಧಿಸಿದೆ.

ಅಂಚೆ ವೃತ್ತಗಳ ಕಾರ್ಯಕ್ಷಮತೆ ಮತ್ತು ದಕ್ಷತೆ

ಏಳು ಅಂಚೆ ವೃತ್ತಗಳು ಎರಡನೇ ತ್ರೈಮಾಸಿಕದ ತಮ್ಮ ನಿಗದಿತ ಗುರಿಯ ಶೇ. 90 ಅಥವಾ ಅದಕ್ಕಿಂತ ಹೆಚ್ಚಿನ ಸಾಧನೆ ಮಾಡಿವೆ. ಬಿಹಾರ ಅಂಚೆ ವೃತ್ತವು ಶೇ. 97.15ರಷ್ಟು ಸಾಧನೆಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಪಶ್ಚಿಮ ಬಂಗಾಳ ಶೇ. 97.07ರಷ್ಟು ಮತ್ತು ಈಶಾನ್ಯ ಅಂಚೆ ವೃತ್ತವು ಶೇ. 94.79ರಷ್ಟು ಸಾಧನೆಯೊಂದಿಗೆ ನಂತರದ ಸ್ಥಾನಗಳಲ್ಲಿವೆ. ಆರ್ಥಿಕ ವರ್ಷದ ಮೊದಲಾರ್ಧದ ಸಾಧನೆಯನ್ನು ಪರಿಗಣಿಸಿದಾಗ, ಪಶ್ಚಿಮ ಬಂಗಾಳ ಅಂಚೆ ವೃತ್ತವು ಶೇ. 95.72ರಷ್ಟು ಸಾಧನೆಯೊಂದಿಗೆ ಮೊದಲ ಸ್ಥಾನದಲ್ಲಿದೆ. ಬಿಹಾರ ಶೇ. 95.12ರಷ್ಟು ಮತ್ತು ಆಂಧ್ರಪ್ರದೇಶ ಶೇ. 94.63ರಷ್ಟು ಸಾಧನೆ ಮಾಡಿವೆ.

23 ಅಂಚೆ ವೃತ್ತಗಳ ಪೈಕಿ 18 ವೃತ್ತಗಳು ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ತಮ್ಮ ಗುರಿ ಸಾಧನೆಯ ಪ್ರಮಾಣವನ್ನು ಸುಧಾರಿಸಿಕೊಂಡಿವೆ. ಪಿಂಚಣಿ ವೆಚ್ಚವನ್ನು ಸೇರಿಸಿ ಲೆಕ್ಕ ಹಾಕಿದಾಗ ವೆಚ್ಚದ ಅನುಪಾತ ಶೇ. 42ರಷ್ಟಿದ್ದರೆ, ಪಿಂಚಣಿ ವೆಚ್ಚವನ್ನು ಹೊರತುಪಡಿಸಿ ಲೆಕ್ಕ ಹಾಕಿದಾಗ ಶೇ. 62ರಷ್ಟಿದೆ. 22 ಅಂಚೆ ವೃತ್ತಗಳು ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ತಮ್ಮ ವೆಚ್ಚದ ಅನುಪಾತವನ್ನು ಸುಧಾರಿಸಿಕೊಂಡಿವೆ.

ಅತ್ಯುತ್ತಮ ಸಾಧನೆ ಮಾಡಿದ ಅಂಚೆ ವೃತ್ತಗಳಿಗೆ ಗೌರವ

2026ರ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್–ಜೂನ್) ಸಾಧಿಸಿದ ಕಾರ್ಯಕ್ಷಮತೆಯನ್ನು ಗುರುತಿಸಿ, ಆಯಾ ಅವಧಿಗೆ ನಿಗದಿಪಡಿಸಲಾದ ವ್ಯವಹಾರ ಗುರಿಗಳನ್ನು ಸಾಧಿಸಿದ್ದಕ್ಕಾಗಿ ಆಂಧ್ರಪ್ರದೇಶ ಅಂಚೆ ವೃತ್ತಕ್ಕೆ ಪ್ರಶಸ್ತಿ ನೀಡಲಾಗಿದೆ. ಎರಡನೇ ತ್ರೈಮಾಸಿಕದಲ್ಲಿ (ಜುಲೈ–ಸೆಪ್ಟೆಂಬರ್) ಇದೇ ರೀತಿಯ ಸಾಧನೆಗಾಗಿ ಬಿಹಾರ ಅಂಚೆ ವೃತ್ತಕ್ಕೆ ಪ್ರಶಸ್ತಿ ನೀಡಲಾಗಿದೆ. ಬಿಹಾರ ಅಂಚೆ ವೃತ್ತವು ಶೇ. 97.15ರಷ್ಟು ಸಾಧನೆ ಮಾಡಿದ್ದು, ಪಶ್ಚಿಮ ಬಂಗಾಳ ಅಂಚೆ ವೃತ್ತವು ಶೇ. 97.07ರಷ್ಟು ಹಾಗೂ ಈಶಾನ್ಯ ಅಂಚೆ ವೃತ್ತವು ಶೇ. 94.79ರಷ್ಟು ಸಾಧನೆ ಮಾಡಿವೆ. ಈ ಸಾಧನೆಗಳು ವ್ಯವಹಾರ ವೃದ್ಧಿಗಾಗಿ ಕೈಗೊಂಡ ಉದ್ದೇಶಿತ ಪ್ರಯತ್ನಗಳನ್ನು ಮತ್ತು ಇಲಾಖೆಯ ಆದಾಯ ಗುರಿಗಳತ್ತ ಆಗಿರುವ ಪ್ರಗತಿಯನ್ನು ಪ್ರತಿಬಿಂಬಿಸುತ್ತವೆ. ಅಂಚೆ ವೃತ್ತಗಳಲ್ಲಿ ನಿರಂತರವಾಗಿ ಉತ್ತಮ ಸಾಧನೆ ಕಾಯ್ದುಕೊಳ್ಳುವುದು, ಪರಿಣಾಮಕಾರಿ ವ್ಯವಹಾರ ಯೋಜನೆ ರೂಪಿಸುವುದು ಮತ್ತು ಆದಾಯ ಗಳಿಕೆಯನ್ನು ಬಲಪಡಿಸಲು ನಿರಂತರ ಪ್ರಯತ್ನಗಳನ್ನು ಮುಂದುವರಿಸುವುದರ ಮಹತ್ವವನ್ನೂ ಈ ಗೌರವಗಳು ಒತ್ತಿಹೇಳುತ್ತವೆ.

ಸುಸ್ಥಿರ ಬೆಳವಣಿಗೆಗೆ ಸಚಿವರ ಒತ್ತು

ಕೇಂದ್ರ ಸಂವಹನ ಹಾಗೂ ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು ಈ ಸಾಧನೆಗಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದರು. ಗ್ರಾಹಕರನ್ನು ಸೆಳೆಯುವುದು, ಅತ್ಯುತ್ತಮ ಸೇವೆ ಒದಗಿಸುವುದು ಮತ್ತು ಗ್ರಾಹಕರನ್ನು ಉಳಿಸಿಕೊಳ್ಳುವ ಮೂಲಕ ಬೆಳವಣಿಗೆಯನ್ನು ನಿರಂತರವಾಗಿ ಕಾಯ್ದುಕೊಳ್ಳುವ ಅಗತ್ಯವನ್ನು ಅವರು ಒತ್ತಿಹೇಳಿದರು. ಅನ್ವಯವಾಗುವ ನೀತಿಗಳು ಮತ್ತು ಅನುಮೋದನೆಗಳಿಗೆ ಒಳಪಟ್ಟು, ದೊಡ್ಡ ಪ್ರಮಾಣದಲ್ಲಿ ಸೇವೆ ಪಡೆಯುವ ಗ್ರಾಹಕರಿಗೆ ಹೊಂದಾಣಿಕೆಯ ದರ ನಿಗದಿಪಡಿಸುವುದು ಸೇರಿದಂತೆ ವ್ಯವಹಾರವನ್ನು ಮತ್ತಷ್ಟು ವೈವಿಧ್ಯಗೊಳಿಸುವುದು, ನಾಯಕತ್ವವನ್ನು ಬಲಪಡಿಸುವುದು, ನಾವೀನ್ಯತೆಗೆ ಉತ್ತೇಜನ ನೀಡುವುದು ಮತ್ತು ಗ್ರಾಹಕಕೇಂದ್ರಿತ ವಿಧಾನ ಅನುಸರಿಸುವಂತೆ ಅವರು ಕರೆ ನೀಡಿದರು. ಗ್ರಾಹಕರ ಅನುಭವವನ್ನು ಉತ್ತಮಪಡಿಸಲು, ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ಹಾಗೂ ಇಲಾಖೆಯ ಸ್ಪರ್ಧಾತ್ಮಕತೆಯನ್ನು ಬಲಪಡಿಸಲು ಇಂಡಿಯಾ ಪೋಸ್ಟ್ ಒದಗಿಸುವ ಸೇವೆಗಳ ಡಿಜಿಟಲೀಕರಣವನ್ನು ತ್ವರಿತಗೊಳಿಸುವ ಅಗತ್ಯವನ್ನೂ ಅವರು ಒತ್ತಿಹೇಳಿದರು.

ಕೇಂದ್ರ ಸಂವಹನ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವರಾದ ಡಾ. ಚಂದ್ರಶೇಖರ್ ಪೆಮ್ಮಸಾನಿ ಅವರು ಇಂಡಿಯಾ ಪೋಸ್ಟ್‌ ನಲ್ಲಿರುವ ಅಪಾರ ಬೆಳವಣಿಗೆಯ ಸಾಮರ್ಥ್ಯಗಳನ್ನು ಉಲ್ಲೇಖಿಸಿ, ಸಿಬ್ಬಂದಿಯ ಸಬಲೀಕರಣ, ಹೊಣೆಗಾರಿಕೆ ಮತ್ತು ಸೇವಾ ವಿತರಣೆಯ ಸುಧಾರಣೆಯ ಮಹತ್ವವನ್ನು ಒತ್ತಿಹೇಳಿದರು. ಪಾರ್ಸೆಲ್‌ಗಳ ವಿತರಣೆಯಲ್ಲಿನ ವಿಳಂಬವನ್ನು ನಿವಾರಿಸಲು ಮತ್ತು ಗ್ರಾಹಕರ ತೃಪ್ತಿಯನ್ನು ಹೆಚ್ಚಿಸಲು ಪ್ರಮಾಣೀಕೃತ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ನೈಜ ಸಮಯದ ಮೇಲ್ವಿಚಾರಣೆಯನ್ನು ಕೈಗೊಳ್ಳಬೇಕು ಎಂದು ಅವರು ಕರೆ ನೀಡಿದರು.

ಹಬ್ಬಗಳ ಸಂದರ್ಭದಲ್ಲಿ ಹಾಗೂ ಪಾರ್ಸೆಲ್‌ಗಳ ವಹಿವಾಟು ಹೆಚ್ಚಾಗುವ ಗರಿಷ್ಠ ಅವಧಿಯಲ್ಲಿ ಬೆಳವಣಿಗೆಯ ವೇಗವನ್ನು ಕಾಯ್ದುಕೊಳ್ಳಬೇಕು, ಪಾರ್ಸೆಲ್‌ ವಿಭಾಗ ಹಾಗೂ ಅಂತಾರಾಷ್ಟ್ರೀಯ ಸಂಬಂಧಗಳು ಮತ್ತು ಜಾಗತಿಕ ವ್ಯವಹಾರ ವಿಭಾಗಗಳನ್ನು ಬಲಪಡಿಸಬೇಕು, ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ನಾಗರಿಕಕೇಂದ್ರಿತ ಸೇವೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು ಮತ್ತು ವೆಚ್ಚದ ಶಿಸ್ತನ್ನು ಕಾಯ್ದುಕೊಳ್ಳಬೇಕು ಎಂದು ಸಚಿವರು ಅಂಚೆ ವೃತ್ತಗಳಿಗೆ ನಿರ್ದೇಶನ ನೀಡಿದರು.

ಪರಿಶೀಲನಾ ಸಭೆಯಲ್ಲಿ, ಕೃಷಿ ಸರಕು ಸಾಗಣೆ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳು; ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇಗಳು), ಒಂದು ಜಿಲ್ಲೆ–ಒಂದು ಉತ್ಪನ್ನ (ಒಡಿಒಪಿ) ಮತ್ತು ಪ್ರವಾಸೋದ್ಯಮ; ಹಾಗೂ ನಾಗರಿಕಕೇಂದ್ರಿತ ಸೇವೆಗಳು, ಹಣಕಾಸು ಒಳಗೊಳ್ಳುವಿಕೆ, ವಿಮೆ ಮತ್ತು ಗ್ರಾಮೀಣ ಸರಕು ಸಾಗಣೆ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸುವ ಸಮೂಹ ಆಧಾರಿತ ಕಾರ್ಯವಿಧಾನಕ್ಕೂ ಒತ್ತು ನೀಡಲಾಯಿತು. ಜನಸೇವೆಯ ಧ್ಯೇಯದಿಂದ ಮಾರ್ಗದರ್ಶಿತವಾದ ಅಂಚೆ ಇಲಾಖೆಯು, ತನ್ನ ವ್ಯಾಪಕ ಜಾಲ ಮತ್ತು ಕಾರ್ಯಪಡೆಯನ್ನು ಬಳಸಿಕೊಂಡು ಹೊಸ ವ್ಯವಹಾರ ಅವಕಾಶಗಳನ್ನು ಸೃಷ್ಟಿಸುತ್ತದೆ, ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕ ಸುಸ್ಥಿರತೆಯತ್ತ ಮುನ್ನಡೆಯಲಿದೆ.

******

 


(ಪ್ರಕಟಣೆ ಐ.ಡಿ.: 2326870) ವಿಸಿಟರ್ ಕೌಂಟರ್ : 25
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Assamese , Tamil , Malayalam