ಹಣಕಾಸು ಸಚಿವಾಲಯ
azadi ka amrit mahotsav

ದೇಶದಲ್ಲಿ ಮಾದಕವಸ್ತು ಕಳ್ಳಸಾಗಣೆಯ ವಿರುದ್ಧ ತೀವ್ರ ಕ್ರಮ ಕೈಗೊಂಡಿರುವ ಡಿ.ಆರ್.ಐ. ಏಳು ಕೆಜಿಗಿಂತ ಅಧಿಕ ಆಂಫೆಟಮೈನ್ ಮತ್ತು ಮೂರು ಕೆಜಿ ಕೊಕೇನ್ ವಶಕ್ಕೆ; ಮೂವರ ಬಂಧನ


ಬೆಂಗಳೂರು ಮತ್ತು ದೆಹಲಿ ವಿಮಾನ ನಿಲ್ದಾಣಗಳಲ್ಲಿ ಹಾಗೂ ನಾಗ್ ಪುರ್ ಬಳಿ ಗುಪ್ತಚರ ಮಾಹಿತಿಯ ಆಧಾರದ ಮೇಲೆ ನಡೆಸಿದ ಕಾರ್ಯಾಚರಣೆಗಳ ಮೂಲಕ ಪ್ರಯಾಣಿಕರ ಲಗೇಜುಗಳಲ್ಲಿ ಅಡಗಿಸಿಡಲಾಗಿದ್ದ ಕಳ್ಳಸಾಗಣೆ ವಸ್ತುಗಳ ಪತ್ತೆ

ಪ್ರಕಟಣಾ ದಿನಾಂಕ: 19 OCT 2026 4:23PM by PIB Bengaluru

ಕಂದಾಯ ಗುಪ್ತಚರ ನಿರ್ದೇಶನಾಲಯವು (ಡಿ ಆರ್ ಐ) ಸಂಘಟಿತ ಹಾಗೂ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಮಾದಕವಸ್ತು ಕಳ್ಳಸಾಗಣೆಯ ವಿರುದ್ಧ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಇದರ ಪರಿಣಾಮವಾಗಿ, ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಸುಮಾರು 71 ಕೆಜಿ ಆಂಫೆಟಮೈನ್ ಮತ್ತು ಮತ್ತೊಂದು ಕಾರ್ಯಾಚರಣೆಯಲ್ಲಿ ಸುಮಾರು 31 ಕೆಜಿ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ವಶಪಡಿಸುವ ಕಾರ್ಯಚರಣೆಯನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ನಾಗ್ ಪುರ್ ಹತ್ತಿರ ಹಾಗೂ ಹೊಸ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಸಲಾಗಿದೆ.

ಖಚಿತ ಗುಪ್ತಚರ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ಡಿ ಆರ್ ಐ ಅಧಿಕಾರಿಗಳು, ಅಕ್ಟೋಬರ್ 14, 2026 ರಂದು ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರೊಬ್ಬರನ್ನು ತಡೆದರು. ಪ್ರಯಾಣಿಕರ ಲಗೇಜುಗಳನ್ಜು ಪರಿಶೀಲಿಸಿದಾಗ 5.166 ಕೆಜಿ ಆಂಫೆಟಮೈನ್ ಪತ್ತೆಯಾಗಿದೆ. ವಶಪಡಿಸಿಕೊಂಡ ಮಾದಕ ಪದಾರ್ಥವನ್ನು 1985ರ ಮಾದಕವಸ್ತುಗಳು ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ (ಎನ್ ಡಿ ಪಿ ಎಸ್) ಕಾಯ್ದೆಯ  ನಿಬಂಧನೆಗಳ ಅಡಿಯಲ್ಲಿ ಜಪ್ತಿ ಮಾಡಲಾಗಿದ್ದು, ಪ್ರಯಾಣಿಕನನ್ನು ಬಂಧಿಸಲಾಗಿದೆ.

ಎರಡು ದಿನಗಳ ನಂತರ, ಮತ್ತೊಂದು ಗುಪ್ತಚರ ಆಧಾರಿತ ಕಾರ್ಯಾಚರಣೆಯಲ್ಲಿ, ದೆಹಲಿಯಿಂದ ಹೈದರಾಬಾದ್ ಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಭಾರತೀಯ ಪ್ರಜೆಯೊಬ್ಬರನ್ನು ನಾಗ್ಪುರದ ಹೊರವಲಯದಲ್ಲಿರುವ ಸಾವನರ್ ನ ಖಾಪಾ ಫಾಟಾ ಬಳಿ ಡಿಆರ್ಐ ಅಧಿಕಾರಿಗಳು ತಡೆದರು. ಅವರ  ಬ್ಯಾಕ್ ಪ್ಯಾಕನ್ನು ತಪಾಸಣೆ ನಡೆಸಿದಾಗ, ಹೊಸ ಮಹಿಳಾ ಸೂಟ್ ನಲ್ಲಿ ಬಿಳಿ ಸ್ಫಟಿಕದಂತಹ ವಸ್ತು ಅಡಗಿಸಿಟ್ಟಿರುವುದು ಕಂಡುಬಂದಿದೆ.

ಬ್ಯಾಕ್ ಪ್ಯಾಕ್ ಭಾರವು ಅಸಾಮಾನ್ಯವಾಗಿ ಇದ್ದದರಿಂದ, ಅಧಿಕಾರಿಗಳು ಅದರ ಒಳಗಿನ ಲೈನಿಂಗ್ ಅನ್ನು ಪರಿಶೀಲಿಸಿದರು. ಆಗ ಅದೇ ರೀತಿಯ ವಸ್ತುವನ್ನು ಹೊಂದಿರುವ ಮತ್ತೊಂದು ಬಚ್ಚಿಟ್ಟಿದ್ದ ಪಾಕೆಟ್ ಪತ್ತೆಯಾಯಿತು. ಸ್ಥಳದಲ್ಲೇ ನಡೆಸಿದ ಪರೀಕ್ಷೆಯಲ್ಲಿ ಅದು ಆಂಫೆಟಮೈನ್ ಎಂದು ದೃಢಪಟ್ಟಿತು. ಒಟ್ಟು 1.97 ಕೆಜಿ ಆಂಫೆಟಮೈನ್ ಅನ್ನು 1985ರ ಎನ್ ಡಿ ಪಿ ಎಸ್ ಕಾಯ್ದೆಯಡಿ ವಶಪಡಿಸಿಕೊಳ್ಳಲಾಗಿದೆ ಹಾಗೂ ಪ್ರಯಾಣಿಕರನ್ನು ಬಂಧಿಸಲಾಗಿದೆ.

2026 ಅಕ್ಟೋಬರ್ 15 ಮತ್ತು 16ರಂದು ನಡೆದ ಮತ್ತೊಂದು ಪ್ರತ್ಯೇಕ ಕಾರ್ಯಾಚರಣೆಯಲ್ಲಿ, ಘಾನಾದಿಂದ ನವದೆಹಲಿಯ ಐಜಿಐ  ವಿಮಾನ ನಿಲ್ದಾಣದ ಟರ್ಮಿನಲ್ 3ಕ್ಕೆ ಆಗಮಿಸಿದ ಭಾರತೀಯ ಪ್ರಯಾಣಿಕರೊಬ್ಬರನ್ನು ಗುಪ್ತಚರ ಮಾಹಿತಿಯ ಆಧಾರದ ಮೇಲೆ ಡಿಆರ್ ಐ ಅಧಿಕಾರಿಗಳು ತಡೆದರು. ಅವರ ಲಗೇಜನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಒಟ್ಟು 3.134 ಕೆಜಿ ತೂಕದ ಬಿಳಿ ಪುಡಿಯನ್ನು ಹೊಂದಿರುವ ಆರು ಪಾರದರ್ಶಕ ಪ್ಯಾಕೆಟ್ ಗಳು ಪತ್ತೆಯಾಗಿವೆ. ಸ್ಥಳದಲ್ಲೇ ನಡೆಸಿದ ಪರೀಕ್ಷೆಯಲ್ಲಿ ಅದು ಕೊಕೇನ್ ಎಂದು ಧೃಡಪಟ್ಟಿದೆ. 1985ರ ಎನ್ ಡಿಪಿಎಸ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಈ ವಸ್ತುವನ್ನು ಜಪ್ತಿ ಮಾಡಲಾಗಿದ್ದು, ಒಬ್ಬ ಪ್ರಯಾಣಿಕರನ್ನು ಬಂಧಿಸಲಾಯಿತು.

ಈ ಕಾರ್ಯಾಚರಣೆಗಳು ಮಾದಕವಸ್ತು ಪೂರೈಕೆ ಸರಪಳಿಯನ್ನು ಭಂಗಗೊಳಿಸಲು, ಚತುರತೆಯಿಂದ ಮರೆಮಾಚುವ ವಿಧಾನಗಳನ್ನು ಪತ್ತೆಹಚ್ಚಲು ಮತ್ತು ದೇಶದ ವಾಯು ಹಾಗೂ ರಸ್ತೆ ಜಾಲಗಳ ಮೂಲಕ ಅಪಾಯಕಾರಿ ಮಾದಕವಸ್ತುಗಳು ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ ಸಾಗಾಣಿಕೆಯನ್ನು ತಡೆಯಲು ಡಿ ಆರ್ ಐ ಮಾಡುತ್ತಿರುವ ನಿರಂತರ ಪ್ರಯತ್ನಗಳನ್ನು ಉಲ್ಲೇಖಿಸುತ್ತವೆ.

 

*****


(ಪ್ರಕಟಣೆ ಐ.ಡಿ.: 2325176) ವಿಸಿಟರ್ ಕೌಂಟರ್ : 12
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati , Tamil , Telugu