ರೈಲ್ವೇ ಸಚಿವಾಲಯ
azadi ka amrit mahotsav

ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಅವರು ರೈಲ್ ಭವನದಲ್ಲಿ ಏಷ್ಯನ್ ಗೇಮ್ಸ್‌ 2026ರ ಚಿನ್ನದ ಪದಕ ವಿಜೇತ ಭಾರತೀಯ ಮಹಿಳಾ ಕಬಡ್ಡಿ ತಂಡವನ್ನು ಭೇಟಿಯಾದರು


ಚಿನ್ನದ ಪದಕ ಗೆದ್ದು ತ್ರಿವರ್ಣ ಧ್ವಜದ ಗೌರವ ಹೆಚ್ಚಿಸಿದ ಭಾರತೀಯ ರೈಲ್ವೆಯ ಮಹಿಳಾ ಕ್ರೀಡಾಪಟುಗಳಿಗೆ ಕೇಂದ್ರ ಸಚಿವರಿಂದ ಅಭಿನಂದನೆ

ಭಾರತೀಯ ರೈಕ್ವೆಯು ರೈಲ್ವೆ ಕ್ರೀಡಾ ಉತ್ತೇಜನ ಮಂಡಳಿಯ ಮೂಲಕ ಕ್ರೀಡಾ ಪ್ರತಿಭೆಗಳನ್ನು ಪೋಷಿಸುವುದನ್ನು ಮುಂದುವರಿಸಿದೆ

ಪ್ರಕಟಣಾ ದಿನಾಂಕ: 16 OCT 2026 7:09PM by PIB Bengaluru

ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ನವದೆಹಲಿಯ ರೈಲ್ ಭವನದಲ್ಲಿ ಭಾರತೀಯ ಮಹಿಳಾ ಕಬಡ್ಡಿ ತಂಡದ ಸದಸ್ಯರನ್ನು ಭೇಟಿಯಾದರು. ಜಪಾನ್‌ನ ಐಚಿ-ನಗೋಯಾದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್‌ನಲ್ಲಿ ಈ ತಂಡ ಚಿನ್ನದ ಪದಕ ಗೆದ್ದಿತ್ತು.

2026ರ ಸೆಪ್ಟೆಂಬರ್ 26ರಂದು ನಡೆದ ತೀವ್ರ ಪೈಪೋಟಿಯ ಅಂತಿಮ ಪಂದ್ಯದಲ್ಲಿ ಇರಾನ್ ತಂಡವನ್ನು 37–34 ಅಂಕಗಳಿಂದ ಸೋಲಿಸಿದ ಭಾರತದ ಮಹಿಳಾ ಕಬಡ್ಡಿ ತಂಡ ಚಿನ್ನದ ಪದಕ ಗೆದ್ದಿತು. ಈ ಮೂಲಕ ಏಷ್ಯನ್ ಗೇಮ್ಸ್‌ನ ತನ್ನ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡಿತು. ಚಿನ್ನದ ಪದಕದ ಸಾಧನೆಗಾಗಿ ಭಾರತೀಯ ರೈಲ್ವೆಯ ಮಹಿಳಾ ಕ್ರೀಡಾಪಟುಗಳನ್ನು ಕೇಂದ್ರ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರು ಅಭಿನಂದಿಸಿದರು. ತಮ್ಮ ಸಮರ್ಪಣೆ, ದೃಢಸಂಕಲ್ಪ ಮತ್ತು ಕ್ರೀಡಾ ನೈಪುಣ್ಯದ ಮೂಲಕ ತ್ರಿವರ್ಣ ಧ್ವಜದ ಗೌರವ ಹೆಚ್ಚಿಸಿ, ದೇಶಕ್ಕೆ ಕೀರ್ತಿ ತಂದ ಆಟಗಾರ್ತಿಯರನ್ನು ಅವರು ಶ್ಲಾಘಿಸಿದರು. ಈ ತಂಡಕ್ಕೆ ನೀತಾ ಮೋರೆಶ್ವರ್ ದಾದ್ವೆ ಅವರು ತರಬೇತಿ ನೀಡಿದ್ದು, ಪುಷ್ಪಾ ರಾಣಾ ಅವರು ತಂಡದ ನಾಯಕಿಯಾಗಿದ್ದರು.

ಸಚಿವರನ್ನು ಭೇಟಿಯಾದ ಭಾರತೀಯ ರೈಲ್ವೆಯ ಕ್ರೀಡಾಪಟುಗಳಲ್ಲಿ ದಕ್ಷಿಣ ಮಧ್ಯ ರೈಲ್ವೆಯ ಮುಖ್ಯ ತರಬೇತುದಾರರಾದ ನೀತಾ ಮೋರೆಶ್ವರ್ ದಾದ್ವೆ, ದಕ್ಷಿಣ ಮಧ್ಯ ರೈಲ್ವೆಯ ರಿತು ನೇಗಿ, ಉತ್ತರ ರೈಲ್ವೆಯ ಪೂಜಾ, ದಕ್ಷಿಣ ಮಧ್ಯ ರೈಲ್ವೆಯ ಪಿಂಕಿ ರಾಯ್ ಮತ್ತು ಪಶ್ಚಿಮ ರೈಲ್ವೆಯ ಸೋನಾಲಿ ವಿಷ್ಣು ಶಿಂಗಾಟೆ ಹಾಗೂ ರಾಜ್ ರಾಣಿ ಅವರು ಸೇರಿದ್ದರು.

ರೈಲ್ವೆ ಕ್ರೀಡಾ ಉತ್ತೇಜನ ಮಂಡಳಿಯ ಮೂಲಕ ಕ್ರೀಡಾ ಪ್ರತಿಭೆಗಳನ್ನು ಬೆಳೆಸುವಲ್ಲಿ ಭಾರತೀಯ ರೈಲ್ವೆ ದೀರ್ಘಕಾಲದಿಂದ ಮಹತ್ವದ ಪಾತ್ರ ವಹಿಸುತ್ತಿದೆ. ಭಾರತೀಯ ರೈಲ್ವೆಯ ಕ್ರೀಡಾಪಟುಗಳು ಒಲಿಂಪಿಕ್ಸ್, ವಿಶ್ವ ಚಾಂಪಿಯನ್‌ಶಿಪ್‌ಗಳು, ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಸೇರಿದಂತೆ ಹಲವು ಪ್ರಮುಖ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಸಾಂಸ್ಥಿಕ ಬೆಂಬಲ ಒದಗಿಸುವುದು ಹಾಗೂ ಉದ್ಯೋಗದ ಜೊತೆಗೆ ಕ್ರೀಡಾ ವೃತ್ತಿಯನ್ನು ಮುಂದುವರಿಸಲು ಅವಕಾಶ ಕಲ್ಪಿಸುವ ಮೂಲಕ ದೇಶದಲ್ಲಿ ಕ್ರೀಡಾ ಪ್ರತಿಭೆಗಳ ಬೆಳವಣಿಗೆಗೆ ಭಾರತೀಯ ರೈಲ್ವೆ ನಿರಂತರವಾಗಿ ಕೊಡುಗೆ ನೀಡುತ್ತಿದೆ.

 

*****

 


(ಪ್ರಕಟಣೆ ಐ.ಡಿ.: 2324584) ವಿಸಿಟರ್ ಕೌಂಟರ್ : 12
ಪ್ರಕಟಣೆಯನ್ನು ಇದರಲ್ಲಿ ಓದಿ: Malayalam , English , Urdu , हिन्दी , Marathi , Gujarati , Odia , Telugu