ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು ಕಾರವಾರದಲ್ಲಿ ಭಾರತೀಯ ನೌಕಾಪಡೆಯ ಮೊದಲ ಸ್ವದೇಶಿ ಬಹುಪಯೋಗಿ ನೌಕೆ ‘ಐಎನ್‌ಎಸ್ ಸಮರ್ಥಕ್’ ಅನ್ನು ಲೋಕಾರ್ಪಣೆ ಮಾಡಿದರು


ಶೇ. 75ಕ್ಕಿಂತ ಹೆಚ್ಚು ಸ್ವದೇಶಿ ಉತ್ಪನ್ನಗಳನ್ನು ಹೊಂದಿರುವ ಐಎನ್‌ಎಸ್ ಸಮರ್ಥಕ್, ರಕ್ಷಣಾ ಉತ್ಪಾದನೆಯಲ್ಲಿ ಭಾರತದ ಹೆಚ್ಚುತ್ತಿರುವ ಸ್ವಾವಲಂಬನೆಯನ್ನು ಪ್ರತಿಬಿಂಬಿಸುತ್ತದೆ: ಉಪರಾಷ್ಟ್ರಪತಿ

“ಭಾರತದ ಕಡಲ ಹಿತಾಸಕ್ತಿಗಳನ್ನು ರಕ್ಷಿಸಲು ಭಾರತೀಯ ನೌಕಾಪಡೆ ಸದಾ ಜಾಗರೂಕವಾಗಿದೆ, ಯುದ್ಧ ಸನ್ನದ್ಧವಾಗಿದೆ”: ಉಪರಾಷ್ಟ್ರಪತಿ

“ಐಎನ್‌ಎಸ್ ಸಮರ್ಥಕ್, ಭಾರತದ ಖಾಸಗಿ ಹಡಗು ನಿರ್ಮಾಣ ಉದ್ಯಮದ ಹೆಚ್ಚುತ್ತಿರುವ ಪಾತ್ರವನ್ನು ಪ್ರತಿಬಿಂಬಿಸುತ್ತದೆ”: ಉಪರಾಷ್ಟ್ರಪತಿ

“ಕಾರವಾರವು ಭಾರತದ ವೈಭವಯುತ ಕಡಲ ಪರಂಪರೆ ಮತ್ತು ಕಡಲ ಭವಿಷ್ಯ ಎರಡನ್ನೂ ಸಂಕೇತಿಸುತ್ತದೆ”: ಉಪರಾಷ್ಟ್ರಪತಿ

ಪ್ರಕಟಣಾ ದಿನಾಂಕ: 16 OCT 2026 3:08PM by PIB Bengaluru

ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು ಇಂದು ಕರ್ನಾಟಕದ ಕಾರವಾರದಲ್ಲಿ ಭಾರತೀಯ ನೌಕಾಪಡೆಯ ಮೊದಲ ಸ್ವದೇಶಿ ಬಹುಪಯೋಗಿ ನೌಕೆ ಐಎನ್‌ಎಸ್ ಸಮರ್ಥಕ್ ಅನ್ನು ಲೋಕಾರ್ಪಣೆ ಮಾಡಿದರು. ಈ ಲೋಕಾರ್ಪಣೆಯು ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಮತ್ತು ಅತ್ಯಾಧುನಿಕ ಸ್ವದೇಶಿ ನೌಕಾಪಡೆಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಭಾರತದ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಯವರು, ಶೇ. 75ಕ್ಕಿಂತ ಹೆಚ್ಚು ಸ್ವದೇಶಿ ಉತ್ಪನ್ನಗಳನ್ನು ಹೊಂದಿರುವ ಐಎನ್‌ಎಸ್ ಸಮರ್ಥಕ್, ಭಾರತದ ಕೈಗಾರಿಕಾ, ತಾಂತ್ರಿಕ ಮತ್ತು ಹಡಗು ನಿರ್ಮಾಣ ಸಾಮರ್ಥ್ಯಗಳ ಹೆಚ್ಚುತ್ತಿರುವ ಬಲವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವುದು ಇನ್ನು ಕೇವಲ ಆಶಯವಾಗಿ ಉಳಿದಿಲ್ಲ; ಅದು ಸಾಕಾರಗೊಳ್ಳುತ್ತಿರುವ ವಾಸ್ತವವಾಗಿದೆ ಎಂದು ಅವರು ತಿಳಿಸಿದರು. ಇದು ಭಾರತದ ಕಾರ್ಯತಂತ್ರದ ಸ್ವಾಯತ್ತತೆಯನ್ನು ಬಲಪಡಿಸುವುದರ ಜೊತೆಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತಿಪಾದಿಸಿರುವ ವಿಕಸಿತ ಭಾರತ ಮತ್ತು ಆತ್ಮನಿರ್ಭರ ಭಾರತದ ಸಂಕಲ್ಪಕ್ಕೆ ಕೊಡುಗೆ ನೀಡುತ್ತಿದೆ ಎಂದರು.

ಭಾರತದ ಶ್ರೀಮಂತ ಕಡಲ ಪರಂಪರೆಯನ್ನು ಉಲ್ಲೇಖಿಸಿದ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು, ಹಿಂದೂ ಮಹಾಸಾಗರ ಮತ್ತು ಆಗ್ನೇಯ ಏಷ್ಯಾದಾದ್ಯಂತ ಭಾರತದ ಕಡಲ ಪ್ರಭಾವವನ್ನು ವಿಸ್ತರಿಸಿದ ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಚೋಳರ ನೌಕಾಪಡೆಯ ಪರಂಪರೆಯನ್ನು ಸ್ಮರಿಸಿದರು.

ರಾಷ್ಟ್ರದ ಸಾರ್ವಭೌಮತ್ವ ಮತ್ತು ಕಡಲ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಭಾರತೀಯ ನೌಕಾಪಡೆಯ ಕಾರ್ಯವನ್ನು ಉಪರಾಷ್ಟ್ರಪತಿಯವರು ಶ್ಲಾಘಿಸಿದರು. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಪ್ರಥಮ ಪ್ರತಿಕ್ರಿಯೆ ನೀಡುವ ಪಡೆ ಹಾಗೂ ವಿಶ್ವಾಸಾರ್ಹ ಭದ್ರತಾ ಪಾಲುದಾರನಾಗಿ ನೌಕಾಪಡೆ ವಹಿಸುತ್ತಿರುವ ಪಾತ್ರವನ್ನೂ ಅವರು ಪ್ರಶಂಸಿಸಿದರು. ಕಡಲ್ಗಳ್ಳತನ ನಿಗ್ರಹ ಕಾರ್ಯಾಚರಣೆಗಳು, ಭಾರತೀಯ ನಾಗರಿಕರ ಸ್ಥಳಾಂತರ ಮತ್ತು ಮಾನವೀಯ ನೆರವು ಹಾಗೂ ವಿಪತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ನೌಕಾಪಡೆಯ ಕೊಡುಗೆಯನ್ನು ಅವರು ವಿಶೇಷವಾಗಿ ಉಲ್ಲೇಖಿಸಿದರು.

ಐಎನ್‌ಎಸ್ ಸಮರ್ಥಕ್‌ನ ಮಹತ್ವವನ್ನು ವಿವರಿಸಿದ ಉಪರಾಷ್ಟ್ರಪತಿಯವರು, ಈ ನೌಕೆಯು ಮುಂದಿನ ಪೀಳಿಗೆಯ ಶಸ್ತ್ರಾಸ್ತ್ರಗಳು, ಸಂವೇದಕಗಳು ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಪರೀಕ್ಷೆ ಹಾಗೂ ಮೌಲ್ಯಮಾಪನಕ್ಕೆ ಬಹುಮುಖ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು. ಕಡಲ ಕಣ್ಗಾವಲು ಮತ್ತು ವಿಚಕ್ಷಣೆ, ಕರಾವಳಿಯಾಚೆಯ ಸಮುದ್ರ ಪ್ರದೇಶಗಳಲ್ಲಿ ಗಸ್ತು, ಗುರಿಗಳ ಉಡಾವಣೆ ಮತ್ತು ಮರಳಿ ವಶಕ್ಕೆ ಪಡೆಯುವುದು, ಮಾನವರಹಿತ ವ್ಯವಸ್ಥೆಗಳನ್ನು ಒಳಗೊಂಡ ಕಾರ್ಯಾಚರಣೆಗಳು ಹಾಗೂ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಕಾರ್ಯಗಳಿಗೂ ಈ ನೌಕೆಯ ಸಾಮರ್ಥ್ಯಗಳು ನೆರವಾಗಲಿವೆ. ಇಂತಹ ವೇದಿಕೆಯು ತಾಂತ್ರಿಕ ಬೆಳವಣಿಗೆಗಳಿಗೆ ನೌಕಾಪಡೆ ಹೆಚ್ಚು ವೇಗವಾಗಿ ಹೊಂದಿಕೊಳ್ಳಲು ಮತ್ತು ಸ್ವದೇಶಿ ನಾವೀನ್ಯತೆಯನ್ನು ಕಾರ್ಯಾಚರಣೆಯ ಸಾಮರ್ಥ್ಯಗಳಾಗಿ ಪರಿವರ್ತಿಸಲು ನೆರವಾಗಲಿದೆ ಎಂದು ಅವರು ತಿಳಿಸಿದರು.

ಕಾರವಾರದ ಆಯಕಟ್ಟಿನ ಮಹತ್ವವನ್ನು ಉಲ್ಲೇಖಿಸಿದ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು, ಇಲ್ಲಿನ ಆಳವಾದ ನೈಸರ್ಗಿಕ ಬಂದರು ಮತ್ತು ಅರಬ್ಬಿ ಸಮುದ್ರಕ್ಕೆ ಇರುವ ಸಾಮೀಪ್ಯವು ಭಾರತದ ಕಡಲ ಭದ್ರತಾ ವ್ಯವಸ್ಥೆಯಲ್ಲಿ ಕಾರವಾರವನ್ನು ಅತ್ಯಂತ ಮಹತ್ವದ ತಾಣವನ್ನಾಗಿಸಿದೆ ಎಂದು ಹೇಳಿದರು. ಪ್ರಾಜೆಕ್ಟ್ ಸೀಬರ್ಡ್ ಅಡಿಯಲ್ಲಿ ಆಧುನಿಕ ನೌಕಾಪಡೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು. ಈ ಯೋಜನೆಯು ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ನೆಲೆಗೊಳಿಸಲು ಹಾಗೂ ಅವುಗಳ ಕಾರ್ಯಾಚರಣೆಯನ್ನು ನಿರಂತರವಾಗಿ ಮುಂದುವರಿಸಲು ನೌಕಾಪಡೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ. ಜೊತೆಗೆ, ಈ ಪ್ರದೇಶದಲ್ಲಿ ವ್ಯಾಪಕ ಆರ್ಥಿಕ ಅವಕಾಶಗಳನ್ನೂ ಸೃಷ್ಟಿಸುತ್ತಿದೆ ಎಂದರು.

ಭಾರತದ ರಕ್ಷಣಾ ಉತ್ಪಾದನಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಭಾರತೀಯ ನೌಕಾಪಡೆ, ರಕ್ಷಣಾ ಸಾರ್ವಜನಿಕ ವಲಯದ ಉದ್ಯಮಗಳು, ಖಾಸಗಿ ಹಡಗು ನಿರ್ಮಾಣ ಸಂಸ್ಥೆಗಳು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಶೈಕ್ಷಣಿಕ ಸಂಸ್ಥೆಗಳು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇಗಳು) ಹಾಗೂ ನವೋದ್ಯಮಗಳ ನಡುವಿನ ಹೆಚ್ಚುತ್ತಿರುವ ಸಹಭಾಗಿತ್ವದ ಮಹತ್ವವನ್ನೂ ಉಪರಾಷ್ಟ್ರಪತಿಯವರು ಒತ್ತಿಹೇಳಿದರು. ಈ ಯೋಜನೆಗೆ ಕೊಡುಗೆ ನೀಡಿದ ಲಾರ್ಸನ್ ಆ್ಯಂಡ್ ಟೂಬ್ರೊ (ಎಲ್‌ಆ್ಯಂಡ್‌ಟಿ) ಸಂಸ್ಥೆಯನ್ನು ಅವರು ಶ್ಲಾಘಿಸಿದರು. ಸ್ವದೇಶಿ ನೌಕಾಪಡೆಯ ಸಾಮರ್ಥ್ಯಗಳನ್ನು ನಿರ್ಮಿಸುವಲ್ಲಿ ನೌಕಾಪಡೆಯ ವಿನ್ಯಾಸಕರು, ತಯಾರಿಕಾ ಅಧಿಕಾರಿಗಳು, ಹಡಗುಕಟ್ಟೆಯ ಸಿಬ್ಬಂದಿ, ಎಂಜಿನಿಯರ್‌ಗಳು, ತಂತ್ರಜ್ಞರು, ಪೂರೈಕೆದಾರರು ಮತ್ತು ಪೂರಕ ಕೈಗಾರಿಕೆಗಳ ಪಾತ್ರವನ್ನು ಅವರು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್; ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ವೈಸ್-ಅಡ್ಮಿರಲ್ ಸಂಜಯ್ ವತ್ಸಾಯನ್; ಯುದ್ಧನೌಕೆ ಉತ್ಪಾದನೆ ಮತ್ತು ಸ್ವಾಧೀನ ವಿಭಾಗದ ನಿಯಂತ್ರಕ ವೈಸ್-ಅಡ್ಮಿರಲ್ ಸಂಜಯ್ ಸಾಧು; ಫ್ಲಾಗ್ ಆಫೀಸರ್ (ಕರ್ನಾಟಕ) ರಿಯರ್ ಅಡ್ಮಿರಲ್ ವಿಕ್ರಮ್ ಮೆನನ್; ಎಲ್ ಆಂಡ್ ಟಿ ಹಡಗು ನಿರ್ಮಾಣ ವಿಭಾಗದ ಮುಖ್ಯಸ್ಥ ನಿವೃತ್ತ ರಿಯರ್ ಅಡ್ಮಿರಲ್ ಜಿ. ಕೆ. ಹರೀಶ್; ಐಎನ್ಎಸ್ ಸಮರ್ಥಕ್ ಕಮಾಂಡಿಂಗ್ ಆಫೀಸರ್ ಕಮಾಂಡರ್ ಸುಶೀಲ್ ಕುಮಾರ್ ಸಿಂಗ್; ಭಾರತೀಯ ನೌಕಾಪಡೆ ಮತ್ತು ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

 

*****


(ಪ್ರಕಟಣೆ ಐ.ಡಿ.: 2324348) ವಿಸಿಟರ್ ಕೌಂಟರ್ : 27
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Bengali , Assamese , Gujarati , Tamil , Malayalam