ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಸಾರ್ವಜನಿಕ ಸಹಭಾಗತ್ವ ಮತ್ತು ವೈಜ್ಞಾನಿಕ ದತ್ತಾಂಶ ಸಂಗ್ರಹಣೆಯನ್ನು ಬಲಪಡಿಸಲು ಜನಸಂಖ್ಯಾ ಬದಲಾವಣೆಗಳ ಕುರಿತಾದ ಉನ್ನತ ಮಟ್ಟದ ಸಮಿತಿಯ (ಎಚ್ ಎಲ್ ಸಿ ಡಿ ಸಿ) ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಪ್ರಕಾಶ್ ಪ್ರಭಾಕರ್ ನಾವಲೇಕರ್ ಅವರಿಂದ ಅಧಿಕೃತ ವೆಬ್ ಪೋರ್ಟಲ್ಗೆ ಚಾಲನೆ


ಈ ವೆಬ್ ಪೋರ್ಟಲ್ https://demography.mha.gov.in ನಲ್ಲಿ ಲಭ್ಯವಿದ್ದು, ಸಾರ್ವಜನಿಕರ ಬಳಕೆ, ಸಂಬಂಧಪಟ್ಟವರ  ಸಲ್ಲಿಕೆಗಳು ಮತ್ತು ದತ್ತಾಂಶ ಸಂವಹನಕ್ಕಾಗಿ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ

ಈ ಪೋರ್ಟಲ್ ಕೇಂದ್ರ ಸಚಿವಾಲಯಗಳು, ಇಲಾಖೆಗಳು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು, ಸರ್ಕಾರೇತರ ಸಂಸ್ಥೆಗಳು   ಮತ್ತು ವ್ಯಕ್ತಿಗಳಿಗೆ ಅಸ್ವಾಭಾವಿಕ ಜನಸಂಖ್ಯಾ ಬದಲಾವಣೆಗಳು, ಅವುಗಳ ಕಾರಣಗಳು ಮತ್ತು ಹಿನ್ನೆಲೆಯಲ್ಲಿರುವ ಅಂಶಗಳ ಕುರಿತು ಮಾಹಿತಿ ನೀಡಲು ಅನುಕೂಲ ಮಾಡಿಕೊಡುತ್ತದೆ

ಈ ಮಾಹಿತಿಗಳು ಸಮಿತಿಗೆ ಜನಸಂಖ್ಯಾ ಬದಲಾವಣೆಗಳ ಕಾರಣಗಳನ್ನು ವಿಶ್ಲೇಷಿಸಲು ಮತ್ತು ಗುರುತಿಸಲು ಹಾಗೂ ದೇಶದಲ್ಲಿ ನೆಲೆಸಿರುವ ಅಕ್ರಮ ವಲಸಿಗರನ್ನು ಕಾನೂನುಬದ್ಧ, ನ್ಯಾಯಯುತ ಮತ್ತು ಕಾಲಮಿತಿಯಲ್ಲಿ ಗುರುತಿಸಲು, ವಶಕ್ಕೆ ಪಡೆದುಕೊಳ್ಳಲು  ಮತ್ತು ಗಡೀಪಾರು ಮಾಡಲು ಒಂದು ಸುಸಂಘಟಿತ ಹಾಗೂ ಶಾಶ್ವತ ಕಾರ್ಯಾಚರಣೆ ವ್ಯವಸ್ಥೆಯನ್ನು ಶಿಫಾರಸು ಮಾಡಲು ನೆರವಾಗಲಿವೆ

ಪ್ರಕಟಣಾ ದಿನಾಂಕ: 14 OCT 2026 5:54PM by PIB Bengaluru

ಜನಸಂಖ್ಯಾ ಬದಲಾವಣೆಗಳ ಕುರಿತಾದ ಉನ್ನತ ಮಟ್ಟದ ಸಮಿತಿಯ (ಎಚ್ ಎಲ್ ಸಿ ಡಿ ಸಿ)  ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಪ್ರಕಾಶ್ ಪ್ರಭಾಕರ್ ನಾವಲೇಕರ್ ಅವರು ನವದೆಹಲಿಯಲ್ಲಿ ಸಮಿತಿಯ ವಿಶೇಷ ಡಿಜಿಟಲ್ ವೆಬ್ ಪೋರ್ಟಲ್ ಗೆ ಚಾಲನೆ ನೀಡಿದರು.

ಈ ವೆಬ್ ಪೋರ್ಟಲ್ https://demography.mha.gov.in ನಲ್ಲಿ ಲಭ್ಯವಿದ್ದು, ಇದನ್ನು ಸಾರ್ವಜನಿಕರ ಬಳಕೆಗಾಗಿ, ಸಂಬಂಧಪಟ್ಟವರಿಂದ ಮಾಹಿತಿ ಒದಗಿಸಲು ಮತ್ತು ದತ್ತಾಂಶ-ಸಂಬಂಧಿತ ಸಂವಹನಕ್ಕಾಗಿ ಸಂಪೂರ್ಣವಾಗಿ ಮುಕ್ತವಾಗಿದೆ. 

ಅಸ್ವಾಭಾವಿಕ ಜನಸಂಖ್ಯಾ ಬದಲಾವಣೆಗಳು, ಅವುಗಳ ಕಾರಣಗಳು, ಇದರ ಹಿನ್ನೆಲೆಯಲ್ಲಿರುವ ಅಂಶಗಳು ಮತ್ತು ಅಸಹಜ ವಸತಿ ಮಾದರಿಗಳ ಕುರಿತು ಮಾಹಿತಿ, ದತ್ತಾಂಶ ಹಾಗೂ ಸಲಹೆಗಳನ್ನು ನೀಡಲು ಈ ಪೋರ್ಟಲ್ ಕೇಂದ್ರ ಸರ್ಕಾರದ ಸಚಿವಾಲಯಗಳು,ಇಲಾಖೆಗಳು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು, ಸರ್ಕಾರೇತರ ಸಂಘ ಸಂಸ್ಥೆಗಳು  ಮತ್ತು ವ್ಯಕ್ತಿಗಳಿಗೆ ನೆರವಾಗುತ್ತದೆ. ಈ ಮಾಹಿತಿಗಳು ಸಮಿತಿಗೆ ಜನಸಂಖ್ಯಾ ಬದಲಾವಣೆಗಳ ಕಾರಣಗಳನ್ನು ವಿಶ್ಲೇಷಿಸಲು ಮತ್ತು ಗುರುತಿಸಲು ಹಾಗೂ ದೇಶದಲ್ಲಿ ಈಗಾಗಲೇ ನೆಲೆಸಿರುವ ಅಕ್ರಮ ವಲಸಿಗರನ್ನು ಕಾನೂನುಬದ್ಧ, ನ್ಯಾಯಯುತ ಮತ್ತು ಕಾಲಮಿತಿಯಲ್ಲಿ ಗುರುತಿಸಲು, ವಶಪಡಿಸಿಕೊಳ್ಳಲು  ಮತ್ತು ಗಡೀಪಾರು ಮಾಡಲು ಸೂಕ್ತವಾದ ಶಾಶ್ವತ ಕಾರ್ಯಾಚರಣೆ ವ್ಯವಸ್ಥೆಯನ್ನು ಶಿಫಾರಸು ಮಾಡಲು ನೆರವಾಗಲಿವೆ.

ಈ ಸಮಿತಿಯನ್ನು ಕೇಂದ್ರ ಗೃಹ ಸಚಿವಾಲಯವು  ಮೇ 26, 2026 ರಂದು ಅಧಿಕೃತವಾಗಿ ರಚಿಸಿತ್ತು.

ಸಮಿತಿಯ ಕಾರ್ಯನಿರ್ವಹಣೆಯ ನಿಯಮಗಳು ಈ ಕೆಳಗಿನಂತಿವೆ: -

1. ಅಕ್ರಮ ವಲಸೆ ಸೇರಿದಂತೆ ಜನಸಂಖ್ಯಾ ಬದಲಾವಣೆಗಳಿಂದ ಉದ್ಭವಿಸುವ ಸವಾಲುಗಳ ಕುರಿತು ಸಮಗ್ರ ಪರಿಶೀಲನೆ ನಡೆಸುವುದು.

2. ಜನನ ದರದಲ್ಲಿನ  ವ್ಯತ್ಯಾಸಗಳು, ಗಡಿ ದಾಟುವಿಕೆ (ಅಕ್ರಮ ವಲಸೆ ಸೇರಿದಂತೆ), ಆರ್ಥಿಕ ಅವಕಾಶಗಳು ಮತ್ತು ಇತರ ಸಾಮಾಜಿಕ-ಪರಿಸರ ಅಂಶಗಳಂತಹ ಜನಸಂಖ್ಯಾ ಬದಲಾವಣೆಗಳ ಸಂಭಾವ್ಯ ಕಾರಣಗಳನ್ನು ಅಧ್ಯಯನ ಮಾಡುವುದು.

3. ಅಕ್ರಮ ವಲಸೆ, ಅಸಹಜ ವಸತಿ ಮಾದರಿಗಳು ಮತ್ತು ಯೋಜಿತ ವಲಸೆ ಸೇರಿದಂತೆ ಈ ಬದಲಾವಣೆಗಳ ಹಿನ್ನೆಲೆಯಲ್ಲಿರುವ ಮೂಲ ಅಂಶಗಳನ್ನು ಗುರುತಿಸುವುದು.

4. ಧಾರ್ಮಿಕ ಅಥವಾ ಸಾಮಾಜಿಕ ಸಮುದಾಯಗಳ ಹಂತದಲ್ಲಿ, ವಿಶೇಷವಾಗಿ ಸಾಮಾನ್ಯ  ಪ್ರವೃತ್ತಿಯಿಂದ ಹೊರತಾಗಿರುವ ಜನಸಂಖ್ಯೆಯ ರಚನೆಯಲ್ಲಾಗಿರುವ ಬದಲಾವಣೆಗಳನ್ನು ವಿಶ್ಲೇಷಿಸುವುದು.
5. ದೇಶದಲ್ಲಿ ಈಗಾಗಲೇ ನೆಲೆಸಿರುವ ಅಕ್ರಮ ವಲಸಿಗರನ್ನು ಕಾನೂನುಬದ್ಧ, ನ್ಯಾಯಯುತ ಮತ್ತು ಕಾಲಮಿತಿಯಲ್ಲಿ ಗುರುತಿಸಲು, ವಶಕ್ಕೆ ಪಡೆಯಲು ಮತ್ತು ಗಡೀಪಾರು ಮಾಡಲು ಸುಸಂಘಟಿತ ಹಾಗೂ ಶಾಶ್ವತ ಕಾರ್ಯಾಚರಣೆ ವ್ಯವಸ್ಥೆಯನ್ನು ಶಿಫಾರಸು ಮಾಡುವುದು.

6. ಗಡಿ ನಿರ್ವಹಣೆ, ಜನಸಂಖ್ಯೆಯ ತುಲನಾತ್ಮಕವಾಗಿ ಸ್ಥಿರವಾಗಿರಿಸುವುದು ಮತ್ತು ಇಂತಹ ಪ್ರವೃತ್ತಿಗಳ ನಿರಂತರ ಮೇಲ್ವಿಚಾರಣೆಗಾಗಿ ಗುರುತಿನ ವ್ಯವಸ್ಥೆಯನ್ನು ಬಲಪಡಿಸಲು ಸೂಕ್ತವಾದ ಸಾಂಸ್ಥಿಕ ಕಾರ್ಯವಿಧಾನವನ್ನು ಶಿಫಾರಸು ಮಾಡುವುದು.

7. ಅಕ್ರಮ ವಲಸೆ ಮತ್ತು ಅದರಿಂದ ಉಂಟಾಗುವ ಜನಸಂಖ್ಯಾ ಅಸಮತೋಲನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯವನ್ನು ಹೆಚ್ಚಿಸಲು ಸಮಗ್ರ ನೀತಿ ಚೌಕಟ್ಟಿನ ಪ್ರಸ್ತಾಪನೆ ಮಾಡುವುದು.

8. ಅಕ್ರಮ ವಲಸೆ ಸೇರಿದಂತೆ ಜನಸಂಖ್ಯಾ ಬದಲಾವಣೆಗಳಿಂದ ಉದ್ಭವಿಸುವ ಸವಾಲುಗಳನ್ನು ಎದುರಿಸಲು ಸಮಿತಿಯು ಸೂಕ್ತವೆಂದು ಭಾವಿಸುವ ಇತರ ಯಾವುದೇ ಕ್ರಮಗಳನ್ನು ಶಿಫಾರಸು ಮಾಡಬಹುದು.

 

*****


(ಪ್ರಕಟಣೆ ಐ.ಡಿ.: 2323639) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati , Telugu , Malayalam