ರೈಲ್ವೇ ಸಚಿವಾಲಯ
ಭಾರತೀಯ ರೈಲ್ವೆಯು 2025ರ ಸೆಪ್ಟೆಂಬರ್ಗೆ ಹೋಲಿಸಿದರೆ 2026ರ ಸೆಪ್ಟೆಂಬರ್ನಲ್ಲಿ ಸರಕು ಸಾಗಣೆಯಲ್ಲಿ ಶೇ.6.14 ರಷ್ಟು ಬೆಳವಣಿಗೆ ದಾಖಲಿಸಿದೆ
ಆಹಾರ ಧಾನ್ಯಗಳ ಸಾಗಣೆಯಲ್ಲಿ ಶೇ. 25ರಷ್ಟು, ಕ್ಲಿಂಕರ್ನಲ್ಲಿ ಶೇ. 20ರಷ್ಟು ಹಾಗೂ ದೇಶೀಯ ಕಂಟೈನರ್ ಸಾಗಣೆಯಲ್ಲಿ ಶೇ. 10ರಷ್ಟು ಹೆಚ್ಚಳ
2026ರ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಒಟ್ಟು ಸರಕು ಸಾಗಣೆಯು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 4.1ರಷ್ಟು ಏರಿಕೆ
ಪ್ರಕಟಣಾ ದಿನಾಂಕ:
13 OCT 2026 1:00PM by PIB Bengaluru
2026ರ ಸೆಪ್ಟೆಂಬರ್ನಲ್ಲಿ ಭಾರತೀಯ ರೈಲ್ವೆಯು ಸರಕು ಮತ್ತು ಪ್ರಯಾಣಿಕರ ವಿಭಾಗಗಳಲ್ಲಿ ನಿರಂತರ ಬೆಳವಣಿಗೆಯನ್ನು ದಾಖಲಿಸಿದೆ. ಇದರಲ್ಲಿ ಹೆಚ್ಚಿನ ಸರಕು ಸಾಗಣೆ ಮತ್ತು ಹಲವಾರು ಪ್ರಮುಖ ಸರಕು ವಿಭಾಗಗಳಲ್ಲಿನ ಬೆಳವಣಿಗೆ ಸೇರಿದೆ. ಆರ್ಥಿಕತೆಯ ಪ್ರಮುಖ ವಲಯಗಳಾದ್ಯಂತ ರೈಲು ಸಾರಿಗೆಯ ನಿರಂತರ ಬೇಡಿಕೆಯನ್ನು ಪ್ರತಿಬಿಂಬಿಸುವಂತೆ, ಪ್ರಸಕ್ತ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ ಸರಕು ಸಾಗಣೆಯು ಸುಸ್ಥಿರ ಬೆಳವಣಿಗೆಯನ್ನು ದಾಖಲಿಸಿದೆ.
ಸರಕು ಸಾಗಣೆಯಲ್ಲಿ ಶೇ.6.14 ರಷ್ಟು ಬೆಳವಣಿಗೆ
2025ರ ಸೆಪ್ಟೆಂಬರ್ನಲ್ಲಿ 127.52 ದಶಲಕ್ಷ ಟನ್ ಸರಕು ಸಾಗಣೆ ಮಾಡಿದ್ದ ಭಾರತೀಯ ರೈಲ್ವೆಯು, 2026ರ ಸೆಪ್ಟೆಂಬರ್ನಲ್ಲಿ 135.35 ದಶಲಕ್ಷ ಟನ್ ಸರಕನ್ನು ಸಾಗಣೆ ಮಾಡುವ ಮೂಲಕ, ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಶೇ. 6.14ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.
ಈ ತಿಂಗಳಲ್ಲಿ ಹಲವು ಪ್ರಮುಖ ಸರಕು ವಿಭಾಗಗಳು ಬಲವಾದ ಬೆಳವಣಿಗೆಯನ್ನು ದಾಖಲಿಸಿವೆ. ಆಹಾರ ಧಾನ್ಯಗಳ ಸಾಗಣೆಯು ಶೇ. 25ರಷ್ಟು, ಕ್ಲಿಂಕರ್ ಶೇ. 20ರಷ್ಟು, ದೇಶೀಯ ಕಂಟೈನರ್ ಶೇ. 10ರಷ್ಟು, ಕಲ್ಲಿದ್ದಲು ಶೇ. 9ರಷ್ಟು, ಇತರ ಸರಕುಗಳು ಶೇ. 8.2ರಷ್ಟು, ಖನಿಜ ತೈಲ ಶೇ. 6ರಷ್ಟು, ಸಿದ್ಧ ಉಕ್ಕು ಶೇ. 5.5ರಷ್ಟು ಮತ್ತು ಕಬ್ಬಿಣದ ಅದಿರು ಸಾಗಣೆಯು ಶೇ. 5.2ರಷ್ಟು ಬೆಳವಣಿಗೆ ಕಂಡಿದೆ.
ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆ ಬಲವರ್ಧನೆ
2026ರ ಸೆಪ್ಟೆಂಬರ್ನಲ್ಲಿ ಭಾರತೀಯ ರೈಲ್ವೆಯು ವಿದ್ಯುತ್ ಸ್ಥಾವರಗಳಿಗೆ ದೇಶೀಯ ಕಲ್ಲಿದ್ದಲು ಪೂರೈಕೆಯನ್ನು ಹೆಚ್ಚಿಸಿದೆ. 2025ರ ಸೆಪ್ಟೆಂಬರ್ನಲ್ಲಿ ದಿನವೊಂದಕ್ಕೆ ಸರಾಸರಿ 397 ಕಲ್ಲಿದ್ದಲು ರೇಕ್ಗಳನ್ನು ಪೂರೈಸಲಾಗುತ್ತಿತ್ತು, ಈ ಪ್ರಮಾಣವು ಈಗ 443 ರೇಕ್ಗಳಿಗೆ ಏರಿಕೆಯಾಗಿದ್ದು, ಶೇ. 11.6ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.
2026ರ ಸೆಪ್ಟೆಂಬರ್ನಲ್ಲಿ ಸರಕು ಸಾಗಣೆಯ ಆದಾಯವು 2025ರ ಸೆಪ್ಟೆಂಬರ್ಗೆ ಹೋಲಿಸಿದರೆ ₹1,266 ಕೋಟಿ ಹೆಚ್ಚಳವಾಗಿದ್ದು, ಶೇ. 9.3ರಷ್ಟು ಬೆಳವಣಿಗೆ ದಾಖಲಿಸಿದೆ.
833 ದಶಲಕ್ಷ ಟನ್ ದಾಟಿದ ಒಟ್ಟು ಸರಕು ಸಾಗಣೆ
ಒಟ್ಟಾರೆಯಾಗಿ, 2026ರ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಭಾರತೀಯ ರೈಲ್ವೆಯು 833.7 ದಶಲಕ್ಷ ಟನ್ ಸರಕನ್ನು ಸಾಗಣೆ ಮಾಡಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 4.1ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಇದೇ ಅವಧಿಯಲ್ಲಿ ಸರಕು ಸಾಗಣೆಯ ಆದಾಯವು ಶೇ. 3.7ರಷ್ಟು ಬೆಳವಣಿಗೆ ಕಂಡಿದೆ.
*****
(ಪ್ರಕಟಣೆ ಐ.ಡಿ.: 2322695)
ವಿಸಿಟರ್ ಕೌಂಟರ್ : 23