ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜೆ.ಪಿ. ನಡ್ಡಾ ಅವರು ನಾಳೆ ಭಾರತ ಮಂಟಪದಲ್ಲಿ ಜೋಶ್ (ಜೆಒಎಸ್‌ಎಚ್‌) ತಂಡಗಳ ರಾಷ್ಟ್ರೀಯ ಚಾಲನೆಗೆ ನೇತೃತ್ವ ವಹಿಸಲಿದ್ದಾರೆ


ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ, ರಕ್ಷಣಾ ರಾಜ್ಯ ಖಾತೆ ಸಚಿವರಾದ ಶ್ರೀ ಸಂಜಯ್ ಸೇಠ್ ಹಾಗೂ ದೆಹಲಿ ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ ಅವರು ಜೋಶ್ ತಂಡಗಳ ರಾಷ್ಟ್ರೀಯ ಚಾಲನೆಯಲ್ಲಿ ಭಾಗವಹಿಸಲಿದ್ದಾರೆ

ಕ್ಷಯರೋಗ ಮುಕ್ತ ಭಾರತ‌ʼಕ್ಕಾಗಿ ಯುವಜನರ ನೇತೃತ್ವದಲ್ಲಿ ಸಮುದಾಯ ಸಂಘಟನೆಯನ್ನು ಬಲಪಡಿಸಲು ಮೊದಲ ಹಂತದಲ್ಲಿ 11 ರಾಜ್ಯಗಳ 55 ಜಿಲ್ಲೆಗಳಲ್ಲಿ ಜೋಶ್‌ ತಂಡಗಳನ್ನು ನಿಯೋಜಿಸಲಾಗುವುದು

ಜೋಶ್ ತಂಡಗಳು ಕ್ಷಯರೋಗ ಮುಕ್ತ ಭಾರತದ ಸಂದೇಶವನ್ನು ತಳಮಟ್ಟಕ್ಕೆ ಕೊಂಡೊಯ್ಯಲಿವೆ; ಪ್ರಥಮ ದರ್ಜೆ ಅಧಿಕಾರಿಗಳು, ಮೈ ಭಾರತ್ ಸ್ವಯಂಸೇವಕರು ಹಾಗೂ ಎನ್‌ಸಿಸಿ ಕೆಡೆಟ್‌ಗಳು ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಮುನ್ನಡೆಸಲಿದ್ದಾರೆ  

ಭಾರತದಲ್ಲಿ ಕ್ಷಯರೋಗ ನಿರ್ಮೂಲನಾ ಪ್ರಯತ್ನಗಳಲ್ಲಿ ತಳಮಟ್ಟದ ಜನರ ಪಾಲ್ಗೊಳ್ಳುವಿಕೆಯನ್ನು ಜೋಶ್ ತಂಡಗಳು ಬಲಪಡಿಸಲಿವೆ; 2025ರಲ್ಲಿ 697 ಜಿಲ್ಲೆಗಳ 67,933 ಪಂಚಾಯಿತಿಗಳು ಕ್ಷಯರೋಗ ಮುಕ್ತವೆಂದು ಗುರುತಿಸಲ್ಪಟ್ಟ ಸಾಧನೆಯ ಆಧಾರದ ಮೇಲೆ ಈ ಉಪಕ್ರಮ ಮುಂದುವರಿಯಲಿದೆ

ಕ್ಷಯರೋಗದ ವಿರುದ್ಧದ ಹೋರಾಟದಲ್ಲಿ ಆರೋಗ್ಯ, ಯುವಜನತೆ ಮತ್ತು ರಕ್ಷಣಾ ವಲಯಗಳ ಜಾಲಗಳನ್ನು ಸಂಯೋಜಿಸುವ ಮೂಲಕ ಸಮಗ್ರ ಸರ್ಕಾರ ಹಾಗೂ ಸಮಗ್ರ ಸಮಾಜದ ಪಾಲ್ಗೊಳ್ಳುವಿಕೆಯ ವಿಧಾನವನ್ನು ಈ ಉಪಕ್ರಮ ಪ್ರತಿಬಿಂಬಿಸುತ್ತದೆ

ಪ್ರಕಟಣಾ ದಿನಾಂಕ: 07 OCT 2026 10:05AM by PIB Bengaluru

ಕ್ಷಯರೋಗದ (ಟಿಬಿ) ವಿರುದ್ಧ ಭಾರತದ ಹೋರಾಟದಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಹಾಗೂ ರಕ್ಷಣಾ ಸಚಿವಾಲಯದ ಸಹಯೋಗದೊಂದಿಗೆ ಜೋಶ್ (ಆರೋಗ್ಯಕ್ಕಾಗಿ ಜಂಟಿ ತಂಡ) ತಂಡಗಳಿಗೆ 2026ರ ಅಕ್ಟೋಬರ್ 8ರಂದು ನವದೆಹಲಿಯ ಭಾರತ ಮಂಟಪದಲ್ಲಿ ಚಾಲನೆ ನೀಡಲಿದೆ. ಮೊದಲ ಹಂತದಲ್ಲಿ 11 ರಾಜ್ಯಗಳ 55 ಜಿಲ್ಲೆಗಳಲ್ಲಿ ಜೋಶ್ ತಂಡಗಳನ್ನು ನಿಯೋಜಿಸಲಾಗುವುದು. ಯುವಜನರ ನೇತೃತ್ವದ ಸಮುದಾಯ ಸಂಘಟನೆಯನ್ನು ಬಲಪಡಿಸುವುದು ಮತ್ತು ಕ್ಷಯರೋಗ ಮುಕ್ತ ಭಾರತದ ಸಂದೇಶವನ್ನು ತಳಮಟ್ಟಕ್ಕೆ ಕೊಂಡೊಯ್ಯುವುದು ಇದರ ಉದ್ದೇಶವಾಗಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರು ಜೋಶ್ ತಂಡಗಳ ರಾಷ್ಟ್ರೀಯ ಚಾಲನೆಯ ನೇತೃತ್ವ ವಹಿಸಲಿದ್ದು, ಈ ಸಂದರ್ಭದಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ, ರಕ್ಷಣಾ ರಾಜ್ಯ ಖಾತೆ ಸಚಿವರಾದ ಶ್ರೀ ಸಂಜಯ್ ಸೇಠ್ ಹಾಗೂ ದೆಹಲಿ ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ ಉಪಸ್ಥಿತರಿರುತ್ತಾರೆ. ಭಾಗವಹಿಸುವ ಸಚಿವಾಲಯಗಳ ಹಿರಿಯ ನಾಯಕರು ಮತ್ತು ವಿವಿಧ ಪಾಲುದಾರರು, ಚುನಾಯಿತ ಪ್ರತಿನಿಧಿಗಳು, ಪ್ರಥಮ ದರ್ಜೆ ಅಧಿಕಾರಿಗಳು, ಮೈ ಭಾರತ್ ಸ್ವಯಂಸೇವಕರು, ಎನ್‌ಸಿಸಿ ಕೆಡೆಟ್‌ಗಳು ಹಾಗೂ ಭಾರತದ ಕ್ಷಯರೋಗ ನಿರ್ಮೂಲನಾ ಪ್ರಯತ್ನಗಳಿಗೆ ಸಂಬಂಧಿಸಿದ ಇತರ ಪಾಲುದಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕ್ಷಯರೋಗ ಮುಕ್ತ ಭಾರತ ಅಭಿಯಾನದ ಪ್ರಮುಖ ಮೈಲಿಗಲ್ಲುಗಳನ್ನು ಬಿಂಬಿಸುವ ಸಾಧನೆಯ ವಿಡಿಯೊವನ್ನು ಪ್ರದರ್ಶಿಸಲಾಗುವುದು. ಬಳಿಕ ಜೋಶ್ ತಂಡಗಳಿಗೆ ಔಪಚಾರಿಕ ಚಾಲನೆ ದೊರೆಯಲಿದೆ. ಕ್ಷಯರೋಗ ಮುಕ್ತ ಭಾರತ ಅಭಿಯಾನಕ್ಕೆ ಸಂಬಂಧಿಸಿದ ಹೊಸ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಸಾಮಗ್ರಿಗಳನ್ನೂ ಬಿಡುಗಡೆ ಮಾಡಲಾಗುವುದು. ಕ್ಷಯರೋಗ ನಿರ್ಮೂಲನೆಯ ರಾಷ್ಟ್ರೀಯ ಪ್ರಯತ್ನದಲ್ಲಿ ಸಾರ್ವಜನಿಕರ ಅರಿವು, ಸಮುದಾಯದ ತೊಡಗಿಸಿಕೊಳ್ಳುವಿಕೆ ಮತ್ತು ಪಾಲ್ಗೊಳ್ಳುವಿಕೆಯನ್ನು ಬಲಪಡಿಸುವ ಉದ್ದೇಶ ಹೊಂದಿರುವ ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಬಾಟ್ ‘ಖುಷಿ ಅವತಾರ್’ ಅನ್ನು ಸಹ ಈ ಸಂದರ್ಭದಲ್ಲಿ ಪ್ರಾರಂಭಿಸಲಾಗುವುದು.

ತಳಮಟ್ಟದಲ್ಲಿ ಕ್ಷಯರೋಗ ನಿರ್ಮೂಲನೆಗಾಗಿ ಯುವಜನರ ವ್ಯವಸ್ಥಿತ ಪಾಲ್ಗೊಳ್ಳುವಿಕೆ

ಕ್ಷಯರೋಗ ನಿರ್ಮೂಲನೆಗಾಗಿ ಭಾರತದ ಯುವಜನರ ಉತ್ಸಾಹ ಮತ್ತು ವ್ಯಾಪಕ ತಲುಪುವಿಕೆಯನ್ನು ಸಂಘಟಿತ ಸಮುದಾಯ ಕಾರ್ಯವಾಗಿ ಪರಿವರ್ತಿಸುವ ವ್ಯವಸ್ಥಿತ ಕಾರ್ಯವಿಧಾನವಾಗಿ ಜೋಶ್ ತಂಡಗಳನ್ನು ರೂಪಿಸಲಾಗಿದೆ. ಈ ತಂಡಗಳಲ್ಲಿ ಪ್ರಥಮ ದರ್ಜೆ ಅಧಿಕಾರಿಗಳು, ಮೈ ಭಾರತ್ ಸ್ವಯಂಸೇವಕರು ಮತ್ತು ಎನ್‌ಸಿಸಿ ಕೆಡೆಟ್‌ಗಳು ಒಗ್ಗೂಡಲಿದ್ದು, ಆಡಳಿತಾತ್ಮಕ ನಾಯಕತ್ವದೊಂದಿಗೆ ಮೈ ಭಾರತ್ ಮತ್ತು ಎನ್‌ಸಿಸಿಯ ವ್ಯಾಪಕ ಯುವಜನ ಜಾಲ ಹಾಗೂ ಸಮುದಾಯದೊಂದಿಗೆ ಸಂಪರ್ಕ ಸಾಧಿಸುವ ಸಾಮರ್ಥ್ಯವನ್ನು ಸಂಯೋಜಿಸುತ್ತವೆ.

ಮೊದಲ ಹಂತದಲ್ಲಿ, ಬ್ಲಾಕ್/ವಾರ್ಡ್ ಮತ್ತು ಸಮುದಾಯ ಮಟ್ಟದಲ್ಲಿ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸುವತ್ತ ಈ ಉಪಕ್ರಮ ಗಮನಹರಿಸಲಿದೆ. ಇದರ ಮೂಲಕ ಕ್ಷಯರೋಗ ಮುಕ್ತ ಭಾರತದ ಸಂದೇಶವನ್ನು ಆರೋಗ್ಯ ಸೌಲಭ್ಯಗಳ ವ್ಯಾಪ್ತಿಯನ್ನು ಮೀರಿ, ಜನರು ವಾಸಿಸುವ, ಕೆಲಸ ಮಾಡುವ ಮತ್ತು ಪರಸ್ಪರ ಸಂಪರ್ಕದಲ್ಲಿರುವ ಸಮುದಾಯಗಳ ಸಮೀಪಕ್ಕೆ ಕೊಂಡೊಯ್ಯಲಾಗುವುದು.

ಸಮುದಾಯದೊಂದಿಗೆ ಸಂಪರ್ಕ ಮತ್ತು ತೊಡಗಿಸಿಕೊಳ್ಳುವಿಕೆಯ ಮೂಲಕ, ಕ್ಷಯರೋಗದ ಲಕ್ಷಣಗಳು, ತಡೆಗಟ್ಟುವಿಕೆ, ಸಕಾಲಿಕ ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಪೂರ್ಣಗೊಳಿಸುವ ಕುರಿತು ಪ್ರಮುಖ ಸಂದೇಶಗಳನ್ನು ಪ್ರಸಾರ ಮಾಡಲು ಜೋಶ್ ತಂಡಗಳು ನೆರವಾಗಲಿವೆ. ಕ್ಷಯರೋಗ ಕುರಿತ ತಪ್ಪು ನಂಬಿಕೆಗಳು ಮತ್ತು ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು, ಕಳಂಕವನ್ನು ಕಡಿಮೆ ಮಾಡುವುದು ಹಾಗೂ ಕ್ಷಯರೋಗ ನಿರ್ಮೂಲನೆಯ ರಾಷ್ಟ್ರೀಯ ಆಂದೋಲನದಲ್ಲಿ ವ್ಯಕ್ತಿಗಳು, ಕುಟುಂಬಗಳು ಮತ್ತು ಸಮುದಾಯಗಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುವ ಪ್ರಯತ್ನಗಳಿಗೂ ಅವು ಕೊಡುಗೆ ನೀಡಲಿವೆ.

ಕ್ಷಯರೋಗದ ವಿರುದ್ಧದ ಹೋರಾಟದಲ್ಲಿ ಯುವಜನರು ಸಕ್ರಿಯ ಪಾಲುದಾರರಾಗಲು ಅನುವು ಮಾಡಿಕೊಡುವುದು ಈ ಉಪಕ್ರಮದ ಉದ್ದೇಶವಾಗಿದೆ. ಜಾಗೃತಿ ಮೂಡಿಸುವಿಕೆ, ಸಾಮಾಜಿಕ ಸಜ್ಜುಗೊಳಿಸುವಿಕೆ ಮತ್ತು ಸಮುದಾಯದೊಂದಿಗೆ ತೊಡಗಿಸಿಕೊಳ್ಳುವಿಕೆಗೆ ಕೊಡುಗೆ ನೀಡಲು ಅವರಿಗೆ ನಿರ್ದಿಷ್ಟ ವೇದಿಕೆಯನ್ನು ಇದು ಒದಗಿಸಲಿದೆ. ಪ್ರಥಮ ದರ್ಜೆ ಅಧಿಕಾರಿಗಳು, ಮೈ ಭಾರತ್ ಸ್ವಯಂಸೇವಕರು ಮತ್ತು ಎನ್‌ಸಿಸಿ ಕೆಡೆಟ್‌ಗಳ ಒಗ್ಗೂಡುವಿಕೆಯು ಸರ್ಕಾರಿ ಕಾರ್ಯಕ್ರಮಗಳು ಮತ್ತು ತಳಮಟ್ಟದ ಸಮುದಾಯಗಳ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಿದೆ.

ಜನ ಭಾಗಿದಾರಿಕೆಯ ಶಕ್ತಿಯ ಮೇಲೆ ನಿರ್ಮಾಣ

ಜೋಶ್ ತಂಡಗಳ ಉಪಕ್ರಮವು ಭಾರತದ ಕ್ಷಯರೋಗ ನಿರ್ಮೂಲನಾ ಪ್ರಯತ್ನಗಳ ಪ್ರಮುಖ ಆಧಾರಸ್ತಂಭಗಳಾಗಿರುವ ಸಮುದಾಯದ ಪಾಲ್ಗೊಳ್ಳುವಿಕೆ ಮತ್ತು ಜನ ಭಾಗಿದಾರಿಕೆಗೆ ನೀಡಲಾಗುತ್ತಿರುವ ಹೆಚ್ಚಿನ ಒತ್ತುಗಳ ಮೇಲೆ ನಿರ್ಮಿತವಾಗಿದೆ. 2025ರಲ್ಲಿ 697 ಜಿಲ್ಲೆಗಳ 67,933 ಪಂಚಾಯಿತಿಗಳನ್ನು ಕ್ಷಯರೋಗ ಮುಕ್ತವೆಂದು ಗುರುತಿಸಲಾಯಿತು. ಕ್ಷಯರೋಗ ನಿರ್ಮೂಲನೆಯ ರಾಷ್ಟ್ರೀಯ ಕಾರ್ಯಸೂಚಿಯನ್ನು ಮುನ್ನಡೆಸುವಲ್ಲಿ ಆರೋಗ್ಯ ಕಾರ್ಯಕರ್ತರು, ಚುನಾಯಿತ ಪ್ರತಿನಿಧಿಗಳು, ಸಮುದಾಯದ ಸದಸ್ಯರು ಮತ್ತು ಸ್ವಯಂಸೇವಕರು ಒಟ್ಟಾಗಿ ಮಾಡಿದ ಪ್ರಯತ್ನವನ್ನು ಇದು ಪ್ರತಿಬಿಂಬಿಸುತ್ತದೆ.

ಕ್ಷಯರೋಗ ನಿರ್ಮೂಲನೆಯ ಸಂದೇಶವನ್ನು ಕೊನೆಯ ಮೈಲಿಯವರೆಗೆ ತಲುಪಿಸುವಲ್ಲಿ ಸ್ಥಳೀಯ ನಾಯಕತ್ವ, ಸಮುದಾಯ ಒಡೆತನದ ಭಾವನೆ ಮತ್ತು ನಿರಂತರ ಪಾಲ್ಗೊಳ್ಳುವಿಕೆ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಈ ಸಾಧನೆ ತೋರಿಸುತ್ತದೆ. ಯುವಜನರ ಉತ್ಸಾಹ, ತಲುಪುವಿಕೆ ಮತ್ತು ಸಾಮಾಜಿಕ ಜಾಲಗಳನ್ನು ಬಳಸಿಕೊಂಡು ಕ್ಷಯರೋಗದ ವಿರುದ್ಧದ ಹೋರಾಟದಲ್ಲಿ ಜಾಗೃತಿ, ಸಜ್ಜುಗೊಳಿಸುವಿಕೆ ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಮತ್ತಷ್ಟು ಬಲಪಡಿಸುವ ಮೂಲಕ ಜೋಶ್ ತಂಡಗಳು ಈ ಜನ ಭಾಗಿದಾರಿಕೆಯ ಮನೋಭಾವವನ್ನು ಮುಂದುವರಿಸಲಿವೆ.

ಸಮಗ್ರ ಸರ್ಕಾರ ಹಾಗೂ ಸಮಗ್ರ ಸಮಾಜದ ಪಾಲ್ಗೊಳ್ಳುವಿಕೆಯ ವಿಧಾನ

ಆರೋಗ್ಯ, ಯುವಜನತೆ ಮತ್ತು ರಕ್ಷಣಾ ವಲಯಗಳ ಸಾಂಸ್ಥಿಕ ಸಾಮರ್ಥ್ಯ ಹಾಗೂ ಸಂಪರ್ಕ ಜಾಲಗಳನ್ನು ಒಗ್ಗೂಡಿಸುವ ಮೂಲಕ ಕ್ಷಯರೋಗ ನಿರ್ಮೂಲನೆಗೆ ಸಮಗ್ರ ಸರ್ಕಾರ ಹಾಗೂ ಸಮಗ್ರ ಸಮಾಜದ ಪಾಲ್ಗೊಳ್ಳುವಿಕೆಯ ವಿಧಾನವನ್ನು ಜೋಶ್ ತಂಡಗಳು ಪ್ರತಿಬಿಂಬಿಸುತ್ತವೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸಾರ್ವಜನಿಕ ಆರೋಗ್ಯ ಮತ್ತು ಕ್ಷಯರೋಗ ನಿರ್ಮೂಲನೆಗೆ ಸಂಬಂಧಿಸಿದ ಒಟ್ಟಾರೆ ಚೌಕಟ್ಟನ್ನು ಒದಗಿಸಲಿದ್ದು, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಹಾಗೂ ರಕ್ಷಣಾ ಸಚಿವಾಲಯಗಳು ಕ್ರಮವಾಗಿ ಮೈ ಭಾರತ್ ಸ್ವಯಂಸೇವಕರು ಮತ್ತು ಎನ್‌ಸಿಸಿ ಕೆಡೆಟ್‌ಗಳ ಸಮುದಾಯ ಮಟ್ಟದ ಸಂಘಟನೆ ಮತ್ತು ಸಂಪರ್ಕ ಕಾರ್ಯದಲ್ಲಿ ಪಾಲ್ಗೊಳ್ಳುವಿಕೆಗೆ ನೆರವಾಗಲಿವೆ.

ಸಚಿವಾಲಯಗಳು ಮತ್ತು ವಿವಿಧ ವಲಯಗಳ ನಡುವೆ ಸಮನ್ವಯಕ್ಕೆ ಸರ್ಕಾರ ನೀಡುತ್ತಿರುವ ನಿರಂತರ ಒತ್ತನ್ನು ಈ ಉಪಕ್ರಮ ಪ್ರತಿಬಿಂಬಿಸುತ್ತದೆ. ಇದರಿಂದ ವಿವಿಧ ಸಾಂಸ್ಥಿಕ ಮತ್ತು ಸಮುದಾಯ ಜಾಲಗಳು ಒಂದು ಸಾಮಾನ್ಯ ರಾಷ್ಟ್ರೀಯ ಗುರಿಯ ಸಾಧನೆಗೆ ಕೊಡುಗೆ ನೀಡಲು ಸಾಧ್ಯವಾಗಲಿದೆ.

ಜೋಶ್ ತಂಡಗಳ ಚಾಲನೆಯು ಜನಕೇಂದ್ರಿತ, ಪಾಲ್ಗೊಳ್ಳುವಿಕೆ ಆಧಾರಿತ ಮತ್ತು ಸಮುದಾಯ ನೇತೃತ್ವದ ಕ್ಷಯರೋಗ ನಿರ್ಮೂಲನಾ ಕಾರ್ಯತಂತ್ರವನ್ನು ರೂಪಿಸುವ ಸರ್ಕಾರದ ಪ್ರಯತ್ನಗಳಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಸಚಿವಾಲಯಗಳು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ಆರೋಗ್ಯ ಕಾರ್ಯಕರ್ತರು, ಚುನಾಯಿತ ಪ್ರತಿನಿಧಿಗಳು, ಯುವಜನರು ಮತ್ತು ನಾಗರಿಕರನ್ನು ಒಳಗೊಂಡ ಸಮನ್ವಯದ ಕಾರ್ಯಾಚರಣೆಗೆ ಇದು ಒತ್ತು ನೀಡಲಿದೆ.

ತಳಮಟ್ಟದಲ್ಲಿ ಹೆಚ್ಚಿನ ತೊಡಗಿಸಿಕೊಳ್ಳುವಿಕೆ ಮತ್ತು ಬಲವಾದ ಜನ ಭಾಗಿದಾರಿಕೆಯ ಮೂಲಕ, ಕ್ಷಯರೋಗ ಮುಕ್ತ ಭಾರತ ನಿರ್ಮಿಸುವ ಸಾಮೂಹಿಕ ಸಂಕಲ್ಪವನ್ನು ಜೋಶ್ ತಂಡಗಳು ಮತ್ತಷ್ಟು ಬಲಪಡಿಸಲಿವೆ.

 

*****

 


(ಪ್ರಕಟಣೆ ಐ.ಡಿ.: 2319990) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Assamese , Punjabi , Gujarati , Tamil , Telugu