ಜಲ ಶಕ್ತಿ ಸಚಿವಾಲಯ
azadi ka amrit mahotsav

ಗಾಂಧಿ ಜಯಂತಿಯ ಅಂಗವಾಗಿ ಆಯೋಜಿಸಲಾಗಿದ್ದ ವಿಶೇಷ ಗ್ರಾಮ ಸಭೆಯ ಭಾಗವಾಗಿ, 'ಜಲ ಜೀವನ್ ಮಿಷನ್ 2.0' ಅಡಿಯಲ್ಲಿ ಗ್ರಾಮೀಣ ನೀರು ಸರಬರಾಜು ವ್ಯವಸ್ಥೆಗಳ ಮೇಲಿನ ಸಮುದಾಯದ ಮಾಲೀಕತ್ವವನ್ನು ಬಲಪಡಿಸುವ ಸಲುವಾಗಿ ಗ್ರಾಮೀಣ ಭಾರತದಾದ್ಯಂತ 1,850ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ 'ಜಲ ಅರ್ಪಣ್' ಅನ್ನು ಆಚರಿಸಲಾಯಿತು


ಮೊದಲ ಬಾರಿಗೆ, 'ಜಲ ಅರ್ಪಣ್' ಮಾಡ್ಯೂಲ್ ಮೂಲಕ ಪ್ರಾದೇಶಿಕ ಭಾಷೆಗಳಲ್ಲಿ ಸಿದ್ಧಪಡಿಸಲಾದ 'ಹರ್ ಘರ್ ಜಲ್' ಪ್ರಮಾಣಪತ್ರಗಳನ್ನು ಗ್ರಾಮ ಪಂಚಾಯಿತಿಗಳಿಗೆ ವಿತರಿಸಲಾಯಿತು

ಪ್ರಕಟಣಾ ದಿನಾಂಕ: 03 OCT 2026 5:16PM by PIB Bengaluru

ಗಾಂಧಿ ಜಯಂತಿ ಹಾಗೂ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾದ್ಯಂತ ನಡೆದ ವಿಶೇಷ ಗ್ರಾಮ ಸಭೆಗಳ ಅಂಗವಾಗಿ, 1,850 ಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳು/ಹಳ್ಳಿಗಳಲ್ಲಿ 'ಜಲ ಅರ್ಪಣ್' (Jal Arpan) ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಇದು ಗ್ರಾಮೀಣ ಕುಡಿಯುವ ನೀರಿನ ವ್ಯವಸ್ಥೆಗಳನ್ನು ಸಮುದಾಯಗಳ ಸುಪರ್ದಿಗೆ ನೀಡುವ 'ಜಲ ಜೀವನ್ ಮಿಷನ್ 2.0' ಯೋಜನೆಯಡಿಯ ಒಂದು ಪ್ರಮುಖ ಸುಧಾರಣೆಯಾಗಿದೆ. ಇದರ ಮೂಲಕ, ಪೂರ್ಣಗೊಂಡ ಗ್ರಾಮೀಣ ನೀರು ಸರಬರಾಜು ಯೋಜನೆಗಳನ್ನು ಗ್ರಾಮ ಪಂಚಾಯತಿಗಳು ಹಾಗೂ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳಿಗೆ (VWSCs) ಅಧಿಕೃತವಾಗಿ ಹಸ್ತಾಂತರಿಸಲಾಯಿತು. ಇದು, ಸಮುದಾಯ-ಚಾಲಿತ ನಿರ್ವಹಣೆ ಮತ್ತು ಕುಡಿಯುವ ನೀರಿನ ಸೇವೆಗಳ ಸುಸ್ಥಿರ ವಿತರಣೆಯತ್ತ ಈ ಅಭಿಯಾನವು ಇಟ್ಟಿರುವ ಮಹತ್ವದ ಹೆಜ್ಜೆಯನ್ನು ಪ್ರತಿಬಿಂಬಿಸುತ್ತದೆ.

ಮೊದಲ ಬಾರಿಗೆ, 'ಜಲ ಅರ್ಪಣ್' ಮಾಡ್ಯೂಲ್ ಅರ್ಹ ಗ್ರಾಮ ಪಂಚಾಯತಿಗಳು ಮತ್ತು ಹಳ್ಳಿಗಳಿಗಾಗಿ ಪ್ರಾದೇಶಿಕ ಭಾಷೆಗಳಲ್ಲಿ 'ಹರ್ ಘರ್ ಜಲ್' ಪ್ರಮಾಣಪತ್ರಗಳನ್ನು ಸಿದ್ಧಪಡಿಸಲು ಅನುವು ಮಾಡಿಕೊಟ್ಟಿದೆ. ಅರ್ಹ ಗ್ರಾಮ ಪಂಚಾಯತಿಗಳು ಮತ್ತು ಹಳ್ಳಿಗಳಿಗಾಗಿ 346 'ಹರ್ ಘರ್ ಜಲ್' ಪ್ರಮಾಣಪತ್ರಗಳನ್ನು ಸಿದ್ಧಪಡಿಸಿ, ಪ್ರಾದೇಶಿಕ ಭಾಷೆಗಳಲ್ಲಿ ವಿತರಿಸಲಾಯಿತು. ಇದು ಪ್ರಮಾಣೀಕರಣ ಪ್ರಕ್ರಿಯೆಯನ್ನು ಜನರಿಗೆ ಹೆಚ್ಚು ಸುಲಭವಾಗಿ ನಿಲುಕುವಂತೆ ಹಾಗೂ ನಾಗರಿಕ-ಸ್ನೇಹಿಯಾಗಿ ರೂಪಿಸುವುದರ ಜೊತೆಗೆ, ಕುಡಿಯುವ ನೀರಿನ ಸೇವೆಗಳ ಮೇಲಿನ ಸಮುದಾಯದ ಒಡೆತನವನ್ನು ಮತ್ತಷ್ಟು ಬಲಪಡಿಸಿದೆ. ಸಮುದಾಯಗಳಿಗೆ ಕಾರ್ಯಕ್ರಮದ ಮಾಹಿತಿ ಮತ್ತು ಪ್ರಮಾಣೀಕರಣವನ್ನು ಅವರದೇ ಭಾಷೆಗಳಲ್ಲಿ ಪಡೆದುಕೊಳ್ಳಲು ಅನುಕೂಲವಾಗುವಂತೆ, 'ಜಲ ಅರ್ಪಣ್' ಮಾಡ್ಯೂಲ್ ಇದೀಗ ಹಿಂದಿ, ಇಂಗ್ಲಿಷ್ ಹಾಗೂ ಅಸ್ಸಾಮಿ, ಬಂಗಾಳಿ, ಬೋಡೋ, ಗುಜರಾತಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒಡಿಯಾ, ಪಂಜಾಬಿ, ಸಂಸ್ಕೃತ, ತಮಿಳು, ತೆಲುಗು ಮತ್ತು ಉರ್ದು ಸೇರಿದಂತೆ 17 ಇತರ ಪ್ರಾದೇಶಿಕ ಭಾಷೆಗಳಲ್ಲಿ 'ಹರ್ ಘರ್ ಜಲ್' ಪ್ರಮಾಣಪತ್ರಗಳನ್ನು ಸಿದ್ಧಪಡಿಸುವ ಸೌಲಭ್ಯವನ್ನು ಹೊಂದಿದೆ.

ಗ್ರಾಮೀಣ ಭಾರತದಾದ್ಯಂತ ನಡೆದ 'ಜಲ ಅರ್ಪಣ್' ಆಚರಣೆಗಳಲ್ಲಿ ಗ್ರಾಮ ಪಂಚಾಯತಿಗಳು, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳು (VWSCs), ಮುಂಚೂಣಿ ಕಾರ್ಯಕರ್ತರು, ಮಹಿಳಾ ಸ್ವಯಂಸೇವಕರು ಹಾಗೂ ಸಮುದಾಯದ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ನಿಗದಿತ ಪ್ರಾಯೋಗಿಕ ಅವಧಿಯ (trial run) ನಂತರ ಯಶಸ್ವಿಯಾಗಿ ಕಾರ್ಯಾರಂಭಗೊಂಡ ಹಾಗೂ ಪೂರ್ಣಗೊಂಡ ಗ್ರಾಮೀಣ ನೀರು ಸರಬರಾಜು ಯೋಜನೆಗಳನ್ನು ನಿರ್ವಹಣೆ, ದುರಸ್ತಿ ಮತ್ತು ದೀರ್ಘಕಾಲೀನ ಸುಸ್ಥಿರತೆಗಾಗಿ ಗ್ರಾಮ ಪಂಚಾಯತಿಗಳು ಹಾಗೂ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳಿಗೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು. 'ಜಲ ಸಂಕಲ್ಪ', 'ಜಲ ಬಂಧನ್', ಫೀಲ್ಡ್ ಟೆಸ್ಟ್ ಕಿಟ್‌ ಗಳನ್ನು (FTKs) ಬಳಸಿಕೊಂಡು ನೀರಿನ ಗುಣಮಟ್ಟವನ್ನು ಪರೀಕ್ಷಿಸುವ ಪ್ರಾತ್ಯಕ್ಷಿಕೆಗಳು, ಜಾಗೃತಿ ಕಾರ್ಯಕ್ರಮಗಳು ಮತ್ತು ಸಮುದಾಯದ ಸಾಧಕರನ್ನು ಗುರುತಿಸಿ ಸನ್ಮಾನಿಸುವಂತಹ ಚಟುವಟಿಕೆಗಳನ್ನು ಹಲವಾರು ಹಳ್ಳಿಗಳಲ್ಲಿ ಆಯೋಜಿಸಲಾಗಿತ್ತು. ಕುಡಿಯುವ ನೀರಿನ ಸೇವೆಗಳ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನೀರಿನ ಗುಣಮಟ್ಟದ ಕಣ್ಗಾವಲು ಮತ್ತು ಮೇಲ್ವಿಚಾರಣೆ, ಹಾಗೂ ಮುಂಗಾರಿನ ನಂತರದ ನೀರಿನ ಮೂಲಗಳ ಗುಣಮಟ್ಟ ಪರೀಕ್ಷೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಸಹ ಕೈಗೊಂಡವು. ಮಹಿಳೆಯರ ಸಕ್ರಿಯ ಪಾಲ್ಗೊಳ್ಳುವಿಕೆಯ ಮೂಲಕ ಸಮುದಾಯ-ಚಾಲಿತ ನೀರಿನ ಗುಣಮಟ್ಟದ ಮೇಲ್ವಿಚಾರಣೆಯನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ.

'ಜಲ ಜೀವನ್ ಮಿಷನ್ 2.0' ಅಡಿ 'ಸುಜಲಾಂ ಭಾರತ್' ಮೂಲಕ ಡಿಜಿಟಲ್ ಆಡಳಿತ ಮತ್ತು ಆಸ್ತಿ ನಿರ್ವಹಣೆಯನ್ನು ಬಲಪಡಿಸಲಾಗುತ್ತಿದ್ದು, ಇದರಡಿ ನೀರು ಸರಬರಾಜು ಆಸ್ತಿಗಳು ಹಾಗೂ ಕೊಳವೆ ನೀರು ಪೂರೈಕೆ ಮೂಲಗಳನ್ನು ಜಿಯೋ-ಟ್ಯಾಗ್ ಮಾಡಲಾಗುತ್ತಿದೆ. ಇದೇ ಸಂದರ್ಭದಲ್ಲಿ, ದೇಶಾದ್ಯಂತ ಸುಮಾರು 700 ನೀರಿನ ಮೂಲಗಳು ಸೇರಿದಂತೆ 2,691 ನೀರು ಸರಬರಾಜು ಆಸ್ತಿಗಳನ್ನು ಜಿಯೋ-ಟ್ಯಾಗ್ ಮಾಡಲಾಯಿತು. ಕುಡಿಯುವ ನೀರಿನ ಆಸ್ತಿಗಳ ಸಮಗ್ರ ಡಿಜಿಟಲ್ ಮಾಹಿತಿಕೋಶವನ್ನು ಸೃಷ್ಟಿಸುವ ಜೊತೆಗೆ, ಗ್ರಾಮೀಣ ನೀರು ಸರಬರಾಜು ವ್ಯವಸ್ಥೆಗಳ ಸುಧಾರಿತ ಯೋಜನೆ, ಮೇಲ್ವಿಚಾರಣೆ ಮತ್ತು ದೀರ್ಘಕಾಲೀನ ಸುಸ್ಥಿರತೆಗೆ ಈ ಪ್ರಯತ್ನಗಳು ಬೆಂಬಲ ನೀಡುತ್ತಿವೆ.

ಜಲ-ಸುಸ್ಥಿರತೆಯತ್ತ ಸಾಗುತ್ತಿರುವ ದೇಶದ ಪಯಣದಲ್ಲಿ, ಇಂದಿನವರೆಗೆ 'ಜಲ ಜೀವನ್ ಮಿಷನ್' ಅಡಿಯಲ್ಲಿ 15.96 ಕೋಟಿಗೂ ಹೆಚ್ಚು ಗ್ರಾಮೀಣ ಮನೆಗಳು ಕುಡಿಯುವ ನೀರಿನ ನಲ್ಲಿ ಸಂಪರ್ಕಗಳನ್ನು ಹೊಂದಿವೆ. ಇದು ದೇಶದ ಒಟ್ಟು ಗ್ರಾಮೀಣ ಮನೆಗಳ ಪೈಕಿ ಶೇ. 82 ಕ್ಕೂ ಅಧಿಕವಾಗಿದೆ. ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನೈಜ-ಸಮಯದ ಮೇಲ್ವಿಚಾರಣೆಯನ್ನು ತರುವ ಉದ್ದೇಶದಿಂದ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು 'ಜಲ ಜೀವನ್ ಮಿಷನ್' ಅಡಿಯಲ್ಲಿ ಮೀಸಲಾದ 'ಜಲ ಅರ್ಪಣ್' ಡಿಜಿಟಲ್ ಮಾಡ್ಯೂಲ್ ಅನ್ನು ಅಭಿವೃದ್ಧಿಪಡಿಸಿದೆ. ಈ ಮಾಡ್ಯೂಲ್ ಯೋಜನೆಗಳ ಹಸ್ತಾಂತರದ ವ್ಯವಸ್ಥಿತ ಡಿಜಿಟಲ್ ದಾಖಲೆಯನ್ನು ಒದಗಿಸುತ್ತದೆ ಮತ್ತು ಗ್ರಾಮೀಣ ಕುಡಿಯುವ ನೀರಿನ ವ್ಯವಸ್ಥೆಗಳ ಗ್ರಾಮ ಪಂಚಾಯಿತಿ ನೇತೃತ್ವದ ನಿರ್ವಹಣೆಗೆ ನೆರವಾಗುತ್ತದೆ. ಪ್ರತಿಯೊಂದು ಗ್ರಾಮೀಣ ಮನೆಗೂ ಸುರಕ್ಷಿತ, ಸಮರ್ಪಕ ಮತ್ತು ವಿಶ್ವಾಸಾರ್ಹ ಕುಡಿಯುವ ನೀರಿನ ಸೇವೆಗಳು ನಿರಂತರವಾಗಿ ದೊರೆಯುವುದನ್ನು ಖಚಿತಪಡಿಸಿಕೊಳ್ಳಲು, ಭಾರತ ಸರ್ಕಾರವು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಗ್ರಾಮ ಪಂಚಾಯಿತಿಗಳು ಮತ್ತು ಸ್ಥಳೀಯ ಸಮುದಾಯಗಳ ಸಹಭಾಗಿತ್ವದಲ್ಲಿ ಕೆಲಸ ಮಾಡಲು ಬದ್ಧವಾಗಿದೆ.

'ಜಲ ಅರ್ಪಣ್' ಆಚರಣೆಯು ಸಮುದಾಯದ ಪಾಲ್ಗೊಳ್ಳುವಿಕೆ, ಸ್ಥಳೀಯ ಸ್ವಯಮಾಡಳಿತ ಮತ್ತು ಸಾಮೂಹಿಕ ಜವಾಬ್ದಾರಿಯ ಕುರಿತಾದ ಮಹಾತ್ಮ ಗಾಂಧಿಯವರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಅಲ್ಲದೆ, ಕುಡಿಯುವ ನೀರಿನ ಸೇವೆಗಳನ್ನು ಸುಸ್ಥಿರವಾಗಿ ಕಾಯ್ದುಕೊಳ್ಳುವಲ್ಲಿ ಮತ್ತು ದೀರ್ಘಕಾಲೀನ ಜಲ ಭದ್ರತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಗ್ರಾಮ ಪಂಚಾಯಿತಿಗಳು ಮತ್ತು ಗ್ರಾಮ ಸಮುದಾಯಗಳು ಪ್ರಮುಖ ಪಾತ್ರ ವಹಿಸುವಂತೆ ಮಾಡುತ್ತದೆ.

 

*****


(ಪ್ರಕಟಣೆ ಐ.ಡಿ.: 2318722) ವಿಸಿಟರ್ ಕೌಂಟರ್ : 21
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Gujarati , Telugu , Malayalam