ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
azadi ka amrit mahotsav

ಒಂದು ಜಾಲ, ಚುರುಕಾದ ಸಂಚಾರ: ದೆಹಲಿಯಲ್ಲಿ ರಿಯಲ್-ಟೈಮ್ ಸಂಚಾರ ನಿರ್ವಹಣೆಗೆ ಕೇಂದ್ರ ಸಂಪುಟ ಅನುಮೋದನೆ


ದೆಹಲಿಗಾಗಿ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್‌ಗೆ 1,789.52 ಕೋಟಿ ರೂ.  ನೀಡಲು ಅನುಮೋದನೆ

ಪ್ರಯಾಣವನ್ನು ಸುರಕ್ಷಿತ, ಸುಗಮ ಮತ್ತು ಹೆಚ್ಚು ಪರಿಣಾಮಕಾರಿಯಾಗಿಸಲು ದೆಹಲಿಯ 42 ಸಂಚಾರ ಕಾರಿಡಾರ್‌ಗಳಲ್ಲಿ ಮೂರು ಹಂತಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಧರಿಸಿದ ಅಡಾಪ್ಟಿವ್ ಟ್ರಾಫಿಕ್ ಸಿಗ್ನಲ್‌ಗಳು, ತಂತ್ರಜ್ಞಾನ ಆಧಾರಿತ ಮತ್ತು ನೈಜ-ಸಮಯದ ಸಂಚಾರ ಮಾಹಿತಿ ವ್ಯವಸ್ಥೆಯ ಅಭಿವೃದ್ಧಿ

ಆಂಬುಲೆನ್ಸ್‌ಗಳ ಆದ್ಯತೆಯ ಚಲನೆ ಮತ್ತು ದಟ್ಟಣೆ ಮತ್ತು ರಸ್ತೆ ಘಟನೆಗಳಿಗೆ ತ್ವರಿತವಾಗಿ ಸ್ಪಂದಿಸಿ ಸುಗಮಗೊಳಿಸುವ ವ್ಯವಸ್ಥೆ

ಪ್ರಕಟಣಾ ದಿನಾಂಕ: 30 SEP 2026 3:15PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಂದು ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿ (ಸಿಸಿಇಎ), ತೆರಿಗೆಗಳನ್ನು ಒಳಗೊಂಡಂತೆ 1,789.52 ಕೋಟಿ ರೂ.ಅಂದಾಜು ವೆಚ್ಚದಲ್ಲಿ ದೆಹಲಿ ಪೊಲೀಸರಿಂದ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್‌ಗೆ (ಐಟಿಎಂಎಸ್) ಯೋಜನೆಯ ಅನುಷ್ಠಾನಕ್ಕೆ ಅನುಮೋದನೆ ನೀಡಿದೆ. ಈ ಯೋಜನೆಯು ಗುರುತಿಸಲಾದ 42 ಸಂಚಾರ ಕಾರಿಡಾರ್‌ಗಳನ್ನು ಒಳಗೊಳ್ಳುತ್ತದೆ ಮತ್ತು 24 ತಿಂಗಳುಗಳಲ್ಲಿ ಮೂರು ಹಂತಗಳಲ್ಲಿ ಅನುಷ್ಠಾನಗೊಳಿಸಲಾಗುವುದು, ನಂತರ ಐದು ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಕೈಗೊಳ್ಳಲಾಗುವುದು.

ರಾಷ್ಟ್ರ ರಾಜಧಾನಿಯಲ್ಲಿ ಸಂಚಾರ ನಿರ್ವಹಣೆ, ಸಾರಿಗೆ ಮೂಲಸೌಕರ್ಯ ಮತ್ತು ನಗರದ ಸಂಚಾರ ದಟ್ಟಣೆಯನ್ನು ಸುಧಾರಿಸಲು ಕೇಂದ್ರ ಸರ್ಕಾರ ಮತ್ತು ದೆಹಲಿಯ ಎನ್ ಸಿಟಿ ಸರ್ಕಾರದ ವ್ಯಾಪಕ ಪ್ರಯತ್ನಗಳ ಭಾಗವಾಗಿ, ಈಗ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಐಟಿಎಂಎಸ್) ಮೂಲಕ ಪ್ರಮುಖ ತಂತ್ರಜ್ಞಾನ ಆಧರಿತ ಉಪಕ್ರಮವನ್ನು ಕೈಗೊಳ್ಳಲಾಗುವುದು. ಈ ಯೋಜನೆಯು ದೆಹಲಿಯ ಅಸ್ತಿತ್ವದಲ್ಲಿರುವ ರಸ್ತೆ ಜಾಲವನ್ನು ನೈಜ-ಸಮಯದ ಸಂಚಾರ ದತ್ತಾಂಶ ಹೊಂದಾಣಿಕೆಯ ಸಂಚಾರ ಸಿಗ್ನಲ್ ಗಳು, ಸ್ವಯಂಚಾಲಿತ ಜಾರಿ ಮತ್ತು ಸಂಯೋಜಿತ ಆಜ್ಞೆ ಮತ್ತು ನಿಯಂತ್ರಣ ವ್ಯವಸ್ಥೆಗಳ ಮೂಲಕ ಹೆಚ್ಚು ಬುದ್ಧಿವಂತಿಕೆಯಿಂದ ನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ದೆಹಲಿಯಲ್ಲಿ ಸುಮಾರು 71 ಲಕ್ಷ ಸಕ್ರಿಯ ನೋಂದಾಯಿತ ವಾಹನಗಳಿವೆ. ವಾಹನಗಳ ಬೆಳವಣಿಗೆಯು ರಸ್ತೆ ಮೂಲಸೌಕರ್ಯದ ವಿಸ್ತರಣೆಯನ್ನು ಗಣನೀಯವಾಗಿ ಮೀರಿಸಿದೆ, ಆದರೆ ಸಂಚಾರ ನಿಯಂತ್ರಣವು ಸ್ಥಿರ ಸಿಗ್ನಲ್ ಸಮಯಗಳು ಮತ್ತು ಮಾನವ ಚಾಲಿತ ಕೆಲಸ ಮೇಲೆ ಗಮನಾರ್ಹವಾಗಿ ಅವಲಂಬಿತವಾಗಿದೆ. ಸಂಚಾರ ನಿರ್ವಹಣೆಯು ರಸ್ತೆಯ ನೈಜ ಪರಿಸ್ಥಿತಿಗಳಿಗೆ ಕ್ರಿಯಾತ್ಮಕವಾಗಿ ಪ್ರತಿಕ್ರಿಯಿಸಲು ಅನುವು ಮಾಡಿಕೊಡುವ ಮೂಲಕ ಲಭ್ಯವಿರುವ ರಸ್ತೆ ಸಾಮರ್ಥ್ಯವನ್ನು ಉತ್ತಮವಾಗಿ ಬಳಸಿಕೊಳ್ಳಲು ಐಟಿಎಂಎಸ್ ಪ್ರಯತ್ನಿಸುತ್ತದೆ.

ಪ್ರಯೋಜನಗಳು:

  • ಚುರುಕಾದ ಸಂಚಾರ ಸಿಗ್ನಲ್ ಗಳು ಮತ್ತು ಸುಗಮ ಸಂಚಾರ: ಅಡಾಪ್ಟಿವ್ ಸಂಚಾರ ನಿಯಂತ್ರಣ ವ್ಯವಸ್ಥೆಗಳು ಚಾಲ್ತಿಯಲ್ಲಿರುವ ಸಂಚಾರ ಪರಿಸ್ಥಿತಿಗಳಿಗೆ ಅನುಗುಣವಾಗಿ ಸಿಗ್ನಲ್ ಸಮಯವನ್ನು ಕ್ರಿಯಾತ್ಮಕವಾಗಿ ಹೊಂದಿಸುತ್ತದೆ ಮತ್ತು ಗುರುತಿಸಲಾದ ಕಾರಿಡಾರ್‌ಗಳಲ್ಲಿ ಸಿಗ್ನಲ್‌ಗಳನ್ನು ಸಂಘಟಿಸುತ್ತದೆ, ತಪ್ಪಿಸಬಹುದಾದ ನಿಲುಗಡೆಗಳು ಮತ್ತು ವಿಳಂಬಗಳನ್ನು ತಗ್ಗಿಸಲು ಸಹಾಯ ಮಾಡುತ್ತದೆ.
  • ಆಂಬ್ಯುಲೆನ್ಸ್‌ಗಳು ಮತ್ತು ತುರ್ತು ವಾಹನಗಳಿಗೆ ಆದ್ಯತೆ: ಈ ವ್ಯವಸ್ಥೆಯು ಹಸಿರು ಕಾರಿಡಾರ್‌ಗಳು ಮತ್ತು ತುರ್ತು ವಾಹನಗಳಿಗೆ ಆದ್ಯತೆಯ ಸಂಚಾರವನ್ನು ಸುಗಮಗೊಳಿಸುತ್ತದೆ, ದಟ್ಟಣೆಯ ಪ್ರದೇಶಗಳ ಮೂಲಕ ವೇಗವಾಗಿ ಹಾದುಹೋಗಲು ಅನುವು ಮಾಡಿಕೊಡುತ್ತದೆ.
  • ದಟ್ಟಣೆ ಮತ್ತು ಅಪಘಾತಗಳಿಗೆ ತ್ವರಿತ ಸ್ಪಂದನೆ; ದಟ್ಟಣೆ, ನಿಧಾನವಾಗಿ ಚಲಿಸುವ ಸಂಚಾರ ಮತ್ತು ರಸ್ತೆ ಘಟನೆಗಳ ನೈಜ-ಸಮಯದ ಪತ್ತೆ ದೆಹಲಿ ಪೊಲೀಸರಿಂದ ತ್ವರಿತ ತಿರುವುಗಳು ಮತ್ತು ಕಾರ್ಯಾಚರಣೆಯ ಸ್ಪಂದನೆಯನ್ನು ಸಕ್ರಿಯಗೊಳಿಸುತ್ತದೆ.
  • ಪ್ರಯಾಣಿಕರಿಗೆ ಸಕಾಲಿಕ ಮಾಹಿತಿ: ವೇರಿಯಬಲ್ ಸಂದೇಶ ಚಿಹ್ನಾ ಫಲಕಗಳು ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ದಟ್ಟಣೆ, ತಿರುವುಗಳು, ಪಾರ್ಕಿಂಗ್ ಲಭ್ಯತೆ ಮತ್ತು ಸಂಚಾರ ಪರಿಸ್ಥಿತಿಗಳ ಕುರಿತು ಮಾಹಿತಿಯನ್ನು ಒದಗಿಸುತ್ತವೆ. ಮಾಹಿತಿಯನ್ನು ನ್ಯಾವಿಗೇಷನ್ ಸೇವಾ ಪೂರೈಕೆದಾರರೊಂದಿಗೆ ಹಂಚಿಕೊಳ್ಳಬಹುದು, ಪ್ರಯಾಣಿಕರು ಉತ್ತಮ ಪ್ರಯಾಣ ಆಯ್ಕೆಗಳನ್ನು ಮಾಡಲು ಸಹಾಯ ಮಾಡುತ್ತದೆ.
  • ಹೆಚ್ಚು ಸ್ಥಿರ ಮತ್ತು ತಂತ್ರಜ್ಞಾನ ಆಧಾರಿತ ಜಾರಿ: ಕೆಂಪು ದೀಪ ಮತ್ತು ನಿಲುಗಡೆ ಮಾರ್ಗ ಉಲ್ಲಂಘನೆಗಳು, ವೇಗ, ತಪ್ಪು ಮಾರ್ಗ ಚಾಲನೆ, ಹೆಲ್ಮೆಟ್‌ಗಳು ಮತ್ತು ಸೀಟ್ ಬೆಲ್ಟ್‌ಗಳನ್ನು ಬಳಸದಿರುವುದು, ಅಕ್ರಮ ಪಾರ್ಕಿಂಗ್ ಮತ್ತು ಚಾಲನೆ ಮಾಡುವಾಗ ಮೊಬೈಲ್ ಫೋನ್‌ಗಳ ಬಳಕೆ ಮುಂತಾದ ಉಲ್ಲಂಘನೆಗಳ ಸ್ವಯಂಚಾಲಿತ ಪತ್ತೆಹಚ್ಚುವಿಕೆಯನ್ನು ವ್ಯವಸ್ಥೆಯು ಬಲಪಡಿಸುತ್ತದೆ. ಕದ್ದ, ಹಾಟ್-ಲಿಸ್ಟ್ ಮಾಡಲಾದ ಮತ್ತು ಕಪ್ಪುಪಟ್ಟಿಗೆ ಸೇರಿಸಲಾದ ವಾಹನಗಳು, ಪುನರಾವರ್ತಿತ ನಿಯಮ ಉಲ್ಲಂಘಿಸುವವರು ಮತ್ತು ಹಿಟ್-ಅಂಡ್-ರನ್ ಘಟನೆಗಳಿಗೆ ಸಂಬಂಧಿಸಿದ ವಾಹನಗಳನ್ನು ಗುರುತಿಸುವಲ್ಲಿ ಕೃತಕ ಬುದ್ಧಿಮತ್ತೆ ಆಧರಿಸಿದ ಸಾಧನಗಳು ಸಹಾಯ ಮಾಡುತ್ತವೆ.

ನಗರಾದ್ಯಂತ ಸಂಯೋಜಿತ ಸಂಚಾರ ನಿರ್ವಹಣೆ:

ಸಂಚಾರ ನಿಯಂತ್ರಣ, ಜಾರಿ ಮತ್ತು ಮಾಹಿತಿ ಪ್ರಸರಣವನ್ನು ಸಂಚಾರಿ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳ ಮೂಲಕ ಒಂದೇ ವೇದಿಕೆಯಡಿ ತರಲಾಗುತ್ತದೆ, ಇವು ಸುರಕ್ಷಿತ ದತ್ತಾಂಶ ಕೇಂದ್ರ ಮತ್ತು ವಿಪತ್ತು ಚೇತರಿಕೆ ಮೂಲಸೌಕರ್ಯದಿಂದ ಬೆಂಬಲಿತವಾಗಿದೆ. ಭವಿಷ್ಯದ ಏಕೀಕರಣ ಮತ್ತು ವಿಸ್ತರಣೆಯನ್ನು ಸಕ್ರಿಯಗೊಳಿಸಲು ಈ ವ್ಯವಸ್ಥೆಯು ಮುಕ್ತ ಮಾನದಂಡಗಳು ಮತ್ತು ಎಪಿಐ ಗಳನ್ನು ಅನುಸರಿಸುತ್ತದೆ.

ಯೋಜನೆಯು 1,092 ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ ಮತ್ತು 1,029 ಜಾರಿ ಸ್ಥಳಗಳನ್ನು ಒಳಗೊಳ್ಳುತ್ತದೆ. ಇದರ ಜಾರಿಯು ಕಾರ್ಯಕ್ಷಮತೆ ಆಧರಿಸಿರುತ್ತದೆ, ನಿಗದಿತ ಪರೀಕ್ಷೆ, ಕಾರ್ಯಾರಂಭ, ಸ್ವೀಕಾರ ಮತ್ತು ಕಾರ್ಯಕ್ಷಮತೆಯ ನಿಯತಾಂಕಗಳ ವಿರುದ್ಧ ಹಿಂದಿನ ಹಂತದ ಮೌಲ್ಯಮಾಪನದ ನಂತರ ಪ್ರತಿ ನಂತರದ ಹಂತವನ್ನು ಕೈಗೊಳ್ಳಲಾಗುವುದು.

ದೆಹಲಿ ಪೊಲೀಸರು ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕ ಆಯ್ಕೆ ಮಾಡಲಾದ ಮಾಸ್ಟರ್ ಸಿಸ್ಟಮ್ ಇಂಟಿಗ್ರೇಟರ್ ಮೂಲಕ ಯೋಜನೆಯನ್ನು ಜಾರಿಗೊಳಿಸುತ್ತಾರೆ. ಅನುಷ್ಠಾನ ಮತ್ತು ಕಾರ್ಯಾಚರಣೆ ಮತ್ತು ನಿರ್ವಹಣೆಯ ಸಮಯದಲ್ಲಿ ತಾಂತ್ರಿಕ ಪರಿಶೀಲನೆ, ಮೇಲ್ವಿಚಾರಣೆ, ಪ್ರಮಾಣೀಕರಣ ಮತ್ತು ಸ್ವೀಕಾರ ಸೇರಿದಂತೆ ಯೋಜನಾ ನಿರ್ವಹಣಾ ಸಲಹೆಗಾರರಾಗಿ C-DAC ತಾಂತ್ರಿಕ ಬೆಂಬಲ ಒದಗಿಸುತ್ತದೆ.

ಐಟಿಎಂಎಸ್ ಅಸ್ತಿತ್ವದಲ್ಲಿರುವ ರಸ್ತೆ ಜಾಲವನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಲು ಅಗತ್ಯವಿರುವ ತಂತ್ರಜ್ಞಾನ ಮತ್ತು ನೈಜ-ಸಮಯದ ಗುಪ್ತಚರ ಮಾಹಿತಿಯನ್ನು ಒದಗಿಸುವ ಮೂಲಕ ದೆಹಲಿಯ ರಸ್ತೆ ಮತ್ತು ಸಾರಿಗೆ ಮೂಲಸೌಕರ್ಯವನ್ನು ಸುಧಾರಿಸಲು ನಡೆಯುತ್ತಿರುವ ಪ್ರಯತ್ನಗಳಿಗೆ ಪೂರಕವಾಗಿರುತ್ತದೆ. ಈ ಯೋಜನೆಯು ಸುಗಮ ಸಂಚಾರ, ಸುರಕ್ಷಿತ ರಸ್ತೆಗಳು, ಘಟನೆಗಳಿಗೆ ತ್ವರಿತ ಸ್ಪಂದನೆ, ಹೆಚ್ಚು ಪರಿಣಾಮಕಾರಿ ಜಾರಿ ಮತ್ತು ನಾಗರಿಕರಿಗೆ ಹೆಚ್ಚು ಊಹಿಸಬಹುದಾದ ಪ್ರಯಾಣದ ಅನುಭವಕ್ಕೆ ಕೊಡುಗೆ ನೀಡುವ ನಿರೀಕ್ಷೆಯಿದೆ.

 

*****


(ಪ್ರಕಟಣೆ ಐ.ಡಿ.: 2317039) ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ: Tamil , Telugu , English , Urdu , Marathi , हिन्दी , Assamese , Manipuri , Bengali , Gujarati , Odia , Malayalam