ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
ಕೇಂದ್ರ ಸಚಿವರಾದ ಶ್ರೀ ಮನೋಹರ್ ಲಾಲ್ ಅವರಿಂದ ನವದೆಹಲಿಯಲ್ಲಿ ಇಂದು ಸ್ವಚ್ಛತೆಗಾಗಿ 50 ಮಾದರಿ ನಗರಗಳನ್ನು ಅಭಿವೃದ್ಧಿಪಡಿಸುವ 'ಪ್ರಗತಿ-50' ಉಪಕ್ರಮಕ್ಕೆ ಚಾಲನೆ
ಸಿ ಎಸ್ ಐ ಆರ್-ಸಿ ಎಂ ಇ ಆರ್ ಐ ಅಭಿವೃದ್ಧಿಪಡಿಸಿದ ʻಸ್ವಚ್ಛ ಭಾರತ್ ಪರೀಕ್ಷಾ ಕೇಂದ್ರʼಕ್ಕೆ ಚಾಲನೆ
ಐಐಟಿ ಕಾನ್ಪುರ ಸಹಯೋಗದೊಂದಿಗೆ ಸ್ವಚ್ಛತಾ ನವೋದ್ಯಮಗಳ 3ನೇ ತಂಡದ ಸೇರ್ಪಡೆ
ನವದೆಹಲಿಯ ಸಂಕಲ್ಪ ಭವನದಲ್ಲಿ 'ತಗ್ಗಿಸಿ, ಮರುಬಳಕೆ ಮಾಡಿ ಮತ್ತು ಮರುಸಂಸ್ಕರಿಸಿ' ಕೇಂದ್ರ ಉದ್ಘಾಟನೆ
ʻಸ್ವಚ್ಛತಾ ನಡವಳಿಕೆ ಬದಲಾವಣೆ ಡಿಜಿಟಲ್ ಕೋಶʼ ಪ್ರಾರಂಭ
ಪ್ರಕಟಣಾ ದಿನಾಂಕ:
29 SEP 2026 3:51PM by PIB Bengaluru
51ನೇ ಪ್ರಗತಿ (PRAGATI) ಸಭೆಯ ಸಂದರ್ಭದಲ್ಲಿ ಗೌರವಾನ್ವಿತ ಪ್ರಧಾನಮಂತ್ರಿಯವರ ನಿರ್ದೇಶನದಂತೆ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ʻಸ್ವಚ್ಛ ಭಾರತ್ ಮಿಷನ್-ಅರ್ಬನ್ 2.0ʼ ಚೌಕಟ್ಟಿನಡಿಯಲ್ಲಿ, ನಿರ್ದಿಷಷ್ಟ ಗುರಿ ಆಧಾರಿತ, ಕೆಪಿಐ ಆಧಾರಿತ ಕ್ರಮಗಳು ಮತ್ತು ತಂತ್ರಜ್ಞಾನ ಆಧಾರಿತ ತೀವ್ರ ಉಸ್ತುವಾರಿಯ ಮೂಲಕ 'ಸ್ವಚ್ಛತೆ'ಯ ಉನ್ನತ ಮಟ್ಟವನ್ನು ಪ್ರದರ್ಶಿಸಲು 'ಪ್ರಗತಿ-50' ಉಪಕ್ರಮದಡಿಯಲ್ಲಿ 50 ಮಾದರಿ ನಗರಗಳನ್ನು ಗುರುತಿಸಿದೆ.
ನಗರಗಳ ಪಟ್ಟಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
ಈ ಉಪಕ್ರಮಕ್ಕೆ ಚಾಲನೆ ನೀಡಿದ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಸಚಿವರಾದ ಶ್ರೀ ಮನೋಹರ್ ಲಾಲ್ ಈ ಮಾತುಗಳನ್ನು ಒತ್ತಿ ಹೇಳಿದರು: “24 ರಾಜ್ಯಗಳಾದ್ಯಂತ ಇರುವ ಈ 50 ನಗರಗಳು ತಮ್ಮ ದೈನಂದಿನ ನೈರ್ಮಲ್ಯ ಕೆಲಸಗಳಿಗಿಂತ ಮಿಗಿಲಾಗಿ, ಸುಸ್ಥಿರ ಹಾಗೂ ಉತ್ತಮ ಕಾರ್ಯಕ್ಷಮತೆಯ ದೃಶ್ಯ ಸ್ವಚ್ಛತೆಯ ನಿಯತಾಂಕಗಳನ್ನು ಪ್ರದರ್ಶಿಸುವ ಮೂಲಕ ದೇಶದ ಉಳಿದ ಭಾಗಗಳಿಗೆ ಸ್ವಚ್ಛ ಮಾದರಿ ನಗರಗಳಾಗಿ ಹೊರಹೊಮ್ಮಲಿವೆ. ಪ್ರಮುಖ ನಗರಗಳು, ಸಾಂಸ್ಕೃತಿಕ ಪ್ರಾಮುಖ್ಯತೆಯ ನಗರಗಳು, ಪ್ರಮುಖ ಪ್ರವಾಸಿ ತಾಣಗಳು ಮತ್ತು ಆರ್ಥಿಕ ಕೇಂದ್ರಗಳನ್ನು ಇದರಲ್ಲಿ ಸೇರಿಸಲಾಗಿದೆಯೆಂದು ನಾವು ಖಚಿತಪಡಿಸಿಕೊಂಡಿದ್ದೇವೆ. ಈ ಉಪಕ್ರಮವು ನಿಗದಿತ ಕಾಲಮಿತಿಯೊಳಗೆ ನಿರ್ದಿಷ್ಟ ಮೇಲ್ವಿಚಾರಣೆ ಮತ್ತು ಪರಾಮರ್ಶೆಯ ಚೌಕಟ್ಟಿನ ಮೂಲಕ ನಗರ ನೈರ್ಮಲ್ಯ, ಘನತ್ಯಾಜ್ಯ ನಿರ್ವಹಣೆ, ಬಳಸಿದ ನೀರಿನ ನಿರ್ವಹಣೆ, ನೈರ್ಮಲ್ಯೀಕರಣ ಮತ್ತು ಸಾರ್ವಜನಿಕರ ಭಾಗವಹಿಸುವಿಕೆಯಲ್ಲಿ ಗಮನಾರ್ಹ ಸುಧಾರಣೆಗಳನ್ನು ತರುವ ಗುರಿಯನ್ನು ಹೊಂದಿದೆ. ಫಲಿತಾಂಶ ಆಧಾರಿತ ಮೌಲ್ಯಮಾಪನಗಳು ಮತ್ತು ತಂತ್ರಜ್ಞಾನ ಆಧಾರಿತ ಉಸ್ತುವಾರಿಯ ಮೂಲಕ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಲಾಗುತ್ತದೆ. ಈ ನಗರಗಳ ಪ್ರಗತಿಯನ್ನು ಪರಾಮರ್ಶಿಸಲು ನಾನು ವೈಯಕ್ತಿಕವಾಗಿ ಪ್ರತಿ ಎರಡು ತಿಂಗಳಿಗೊಮ್ಮೆ ಪರಿಶೀಲನಾ ಸಭೆಗಳ ಅಧ್ಯಕ್ಷತೆ ವಹಿಸಲಿದ್ದೇನೆ.”

ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀ ತೋಖನ್ ಸಾಹು ಮಾತನಾಡಿ, ಕಳೆದ ಒಂದು ದಶಕದಲ್ಲಿ ಸ್ವಚ್ಛತೆಯು ಜನಾಂಧೋಲನದಿಂದ ಜೀವನಶೈಲಿಯಾಗಿ ಮಾರ್ಪಟ್ಟಿದೆ ಎಂದರು.
ಹೊಸ ಮಾದರಿ ನಗರಗಳ ಉಪಕ್ರಮದ ಬಿಡುಗಡೆಯನ್ನು ಉಲ್ಲೇಖಿಸಿದ ಶ್ರೀ ಸಾಹು, ಇದು ನಿಗದಿತ ಕಾಲಮಿತಿಯೊಳಗೆ ನಗರಗಳು ಕಸ ಮುಕ್ತ ನಗರಗಳಾಗುವ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ ಮತ್ತು ಇತರ ನಗರ ಕೇಂದ್ರಗಳಿಗೆ ಮಾದರಿಯಾಗಲು ಅನುಕೂಲ ಮಾಡಿಕೊಡುತ್ತದೆ ಎಂದು ಹೇಳಿದರು. ಅವರು ರಾಜ್ಯಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸಣ್ಣ ಹಂತದ ಕ್ರಿಯಾ ಯೋಜನೆಗಳನ್ನು ತಯಾರಿಸಲು ಹಾಗೂ ಅವುಗಳ ಶೀಘ್ರ ಮತ್ತು ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಕರೆ ನೀಡಿದರು.
ಯುವಶಕ್ತಿ ಮತ್ತು ತಂತ್ರಜ್ಞಾನದ ಬೆಳೆಯುತ್ತಿರುವ ಒಮ್ಮುಖತೆಯನ್ನು ಎತ್ತಿಹಿಡಿದ ಸಚಿವರು, ಭಾರತವು ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯಾಗಿ ಹೊರಹೊಮ್ಮಿದೆ ಎನ್ನುವ ಅಂಶಕ್ಕೆ ಗಮನ ಸೆಳೆದರು. ಐಐಟಿ ಕಾನ್ಪುರದ ಸಹಯೋಗದೊಂದಿಗೆ ಮೂರನೇ ತಂಡದ ಚಾಲನೆಯು ಈ ಮಿಷನ್ ಅಡಿಯಲ್ಲಿ 75 ನವೋದ್ಯಮಗಳನ್ನು ಸೇರ್ಪಡೆಗೊಳಿಸುವ ಮತ್ತು ಅವುಗಳಿಗೆ ಅಗತ್ಯ ಬೆಂಬಲ ನೀಡಿ ಪೋಷಿಸುವ ರಾಷ್ಟ್ರೀಯ ಗುರಿಯ ಸಾಧನೆಯನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ನಗರ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಶ್ರೀ ಸತೇಂದ್ರ ಸಿಂಗ್ ಮಾತನಾಡಿ, ಉತ್ತಮ ನಾಗರಿಕ ಅನುಭವ ಮತ್ತು ಸಮಗ್ರ ಸೇವಾ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಹೇಳಿದರು. ಈ ಉಪಕ್ರಮವು "ಸಂಪೂರ್ಣ ನಗರ" ವಿಧಾನವನ್ನು ಅಳವಡಿಸಿಕೊಂಡಿದ್ದು, ಯೋಜನೆ ಮತ್ತು ಅನುಷ್ಠಾನದಲ್ಲಿ ಎಲ್ಲಾ ಪಾಲುದಾರರು, ಸಹಯೋಗಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳನ್ನು ಒಳಗೊಳ್ಳುವುದನ್ನು ಖಚಿತಪಡಿಸುತ್ತದೆ ಎಂದು ಅವರು ಒತ್ತಿ ಹೇಳಿದರು.
ಪರಿಣಾಮಕಾರಿ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು, ʻಸ್ವಚ್ಛತಮ್ ಪೋರ್ಟಲ್ʼನಲ್ಲಿ ಪ್ರಗತಿ (PRAGATI- Pro-Active Governance and Timely Implementation) ಮಾದರಿಯ ಡಿಜಿಟಲ್ ಪರಿಶೀಲನಾ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ನಿಯಮಿತ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನಕ್ಕಾಗಿ ಸಚಿವಾಲಯದ ಅಧಿಕಾರಿಗಳಿಗೆ ನಿರ್ದಿಷ್ಟ ನಗರಗಳನ್ನು ನಿಯೋಜಿಸಲಾಗುವುದು.
ಸುಸ್ಥಿರ ನಗರವಾಗಿ ಪರಿವರ್ತನೆ ಮಾಡುವುದು ,ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ನಿರಂತರ ಕಲಿಕೆಯ ಮೇಲೆ ಆಧಾರಿತವಾಗಿದೆ ಎಂಬುದನ್ನು ಗುರುತಿಸಿ, ಎಸ್ಬಿಎಂ-ಯು ತಾಂತ್ರಿಕ ಮಾರ್ಗಸೂಚಿಗಳು, ಮಾದರಿ ವಿನ್ಯಾಸಗಳು ಮತ್ತು ನಿರ್ದಿಷ್ಟ ಸಲಹೆಗಳೊಂದಿಗೆ ಸಂಬಂಧಪಟ್ಟವರನ್ನು ಸಶಕ್ತಗೊಳಿಸಿದೆ. ಯೋಜನೆಯ ಭಾಗವಾಗಿ, ಯೋಜನೆಗಳ ಶೀಘ್ರ ಅನುಷ್ಠಾನಕ್ಕೆ ಬೆಂಬಲ ನೀಡಲು, ಘನತ್ಯಾಜ್ಯ ನಿರ್ವಹಣೆ ನಿಯಮಗಳು, 2026 ರ ಅಡಿಯಲ್ಲಿ ಕಡ್ಡಾಯಗೊಳಿಸಲಾದ 'ನಿರ್ಮಾಣ ಮತ್ತು ಕೆಡವುವಿಕೆ ತ್ಯಾಜ್ಯಗಳ ʼ (ಸಿ&ಡಿ) ದ್ವಿತೀಯ ಸಂಗ್ರಹಣೆ ಕೇಂದ್ರ ಸ್ಥಾಪನೆಗೆ ಸಂಬಂಧಿಸಿದ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್ ಒ ಪಿ)' ಹಾಗೂ 'ನಗರ ಘನತ್ಯಾಜ್ಯದ ಮೂಲದಲ್ಲೇ ವಿಂಗಡಣೆಯ ಮಾರ್ಗಸೂಚಿಗಳನ್ನು' ಬಿಡುಗಡೆ ಮಾಡಲಾಯಿತು.
ಸ್ವಚ್ಛ ಭಾರತ್ ಪರೀಕ್ಷಾ ಕೇಂದ್ರ (ಸ್ವಚ್ಛ ಭಾರತ್ ಟೆಸ್ಟ್ ಬೆಡ್) ಮತ್ತು ಆವಿಷ್ಕಾರ ಕೇಂದ್ರ: ಈ ಮಿಷನ್ ಸಂಶೋಧನೆ ಮತ್ತು ಆವಿಷ್ಕಾರಗಳನ್ನು ಸ್ವಚ್ಛತೆಯ ಚಾಲನಾ ಶಕ್ತಿಯಾಗಿ ನಿರಂತರವಾಗಿ ಇರಿಸಿದೆ. ಸಿಎಸ್ ಆರ್-ಸಿಎಂಇಆರ್ ಐ ಸಹಯೋಗದೊಂದಿಗೆ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ದುರ್ಗಾಪುರದಲ್ಲಿ 'ಸ್ವಚ್ಛ ಭಾರತ್ ಪರೀಕ್ಷಾ ಕೇಂದ್ರ ಮತ್ತು ಆವಿಷ್ಕಾರ ಕೇಂದ್ರ'ವನ್ನು ಪ್ರಾರಂಭಿಸಿತು. ಇದು ನೈರ್ಮಲ್ಯ ತಂತ್ರಜ್ಞಾನಗಳಲ್ಲಿ ಸಂಶೋಧನೆ, ಉತ್ಪನ್ನ ಅಭಿವೃದ್ಧಿ, ಪರೀಕ್ಷೆ, ಮೌಲ್ಯಮಾಪನ, ಪ್ರಮಾಣೀಕರಣ ಮತ್ತು ಸಾಮರ್ಥ್ಯ ವರ್ಧನೆಗಾಗಿ ನಿರ್ಮಿಸಲಾದ ರಾಷ್ಟ್ರೀಯ ಸೌಲಭ್ಯವಾಗಿದೆ.
ನವೋದ್ಯಮಗಳ ಮೂರನೇ ತಂಡ: ಕಳೆದ ದಶಕದಲ್ಲಿ, ಎಸ್ ಬಿಎಂ-ಅರ್ಬನ್ ಸಾಂಪ್ರದಾಯಿಕ ತ್ಯಾಜ್ಯ ನಿರ್ವಹಣೆಯಿಂದ ಅತ್ಯಾಧುನಿಕ, ತಂತ್ರಜ್ಞಾನ ಚಾಲಿತ ಪರಿಹಾರಗಳತ್ತ ಸಾಗಿದೆ. ಆವಿಷ್ಕಾರವನ್ನು ವೇಗಗೊಳಿಸಲು ಮಿಷನ್ ತ್ಯಾಜ್ಯ ಮೌಲ್ಯ ಸರಣಿಯಲ್ಲಿ 75 ನವೋದ್ಯಮಗಳನ್ನು ತೊಡಗಿಸಿಕೊಂಡಿದೆ. ಉದ್ಯಮಶೀಲತೆಯ ವೇಗವನ್ನು ಬಳಸಿಕೊಂಡು, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಐಐಟಿ ಕಾನ್ಪುರದ 'ಸ್ಟಾರ್ಟ್ಅಪ್ ಇನ್ಕ್ಯುಬೇಷನ್ ಅಂಡ್ ಇನ್ನೋವೇಶನ್ ಸೆಂಟರ್' (ಎಸ್ ಐ ಐ ಸಿ) ಸಹಯೋಗದೊಂದಿಗೆ, ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ನವೀನ ಪರಿಹಾರಗಳ ಮೇಲೆ ಗಮನ ಹರಿಸುವ ನವೋದ್ಯಮಗಳ ಮೂರನೇ ತಂಡವನ್ನು ಪ್ರಾರಂಭಿಸಿದೆ. 3ನೇ ತಂಡಕ್ಕೆ 13 ನವೋದ್ಯಮಗಳು ಸೇರ್ಪಡೆಗೊಳ್ಳುವುದರೊಂದಿಗೆ, ಈ ಉಪಕ್ರಮವು ಸ್ವಚ್ಛವಾದ, ತಂತ್ರಜ್ಞಾನ ಆಧಾರಿತ ನಗರ ಪರಿಹಾರಗಳನ್ನು ವೇಗಗೊಳಿಸುತ್ತಿದೆ.
ಮೀಸಲಾದ ವಾಟ್ಸ್ಯಾಪ್ ಚಾನೆಲ್: ದೂರುಗಳನ್ನು ದಾಖಲಿಸಲು ಮತ್ತು ಕುಂದುಕೊರತೆ ಪರಿಹಾರವನ್ನು ಪಡೆಯಲು ನಾಗರಿಕರಿಗೆ ಪ್ರಮುಖ ಸಂಪರ್ಕ ಸಾಧನವಾಗಿರುವ *'ಸ್ವಚ್ಛತಾ ಆ್ಯಪ್'* ಅನ್ನು ಇನ್ನಷ್ಟು ಸುಲಭಗೊಳಿಸಲು, ನಾಗರಿಕರು ತಮ್ಮ ದೂರುಗಳನ್ನು ಸಲ್ಲಿಸಲು ಮತ್ತು ತಮ್ಮ ನಗರಗಳನ್ನು ಸ್ವಚ್ಛವಾಗಿಡಲು ಸಕ್ರಿಯವಾಗಿ ಕೊಡುಗೆ ನೀಡಲು ಅನುಕೂಲವಾಗುವಂತೆ ಮೀಸಲಾದ ವಾಟ್ಸ್ಯಾಪ್ ಚಾನೆಲ್ ಅನ್ನು ಪ್ರಾರಂಭಿಸಲಾಗಿದೆ.
ಸ್ವಚ್ಛತಾ ನಡವಳಿಕೆ ಬದಲಾವಣೆ ಡಿಜಿಟಲ್ ಕೋಶ: ಸ್ವಚ್ಛ ಮತ್ತು ಸುಸ್ಥಿರ ಭಾರತಕ್ಕಾಗಿ ನಡವಳಿಕೆಯ ಬದಲಾವಣೆಯನ್ನು ಬಲಪಡಿಸಲು ಆಲೋಚನೆಗಳು, ಸೃಜನಶೀಲತೆಗಳು, ಪ್ರಚಾರಗಳು ಮತ್ತು ಸಂಪನ್ಮೂಲಗಳನ್ನು ಒಟ್ಟುಗೂಡಿಸುವ ಡಿಜಿಟಲ್ ಭಂಡಾರವಾದ 'ಸ್ವಚ್ಛತಾ ನಡವಳಿಕೆ ಬದಲಾವಣೆ ಡಿಜಿಟಲ್ ಕೋಶ'ವನ್ನು ಕೇಂದ್ರ ಸಚಿವ ಶ್ರೀ ಮನೋಹರ್ ಲಾಲ್ ಬಿಡುಗಡೆ ಮಾಡಿದರು. ಈ ವೇದಿಕೆಯು ರಾಜ್ಯಗಳು, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಾಲುದಾರರಿಗೆ ಸಿದ್ಧ-ಬಳಕೆಯ ಸಂವಹನ ಸಂಪನ್ಮೂಲಗಳು, ನವೀನ ಪ್ರಚಾರದ ಆಲೋಚನೆಗಳು ಮತ್ತು ಬೆಂಬಲ ಸಾಮಗ್ರಿಗಳನ್ನು ಒದಗಿಸುತ್ತದೆ — ಇದು ಜ್ಞಾನ ಹಂಚಿಕೆ, ಮರುಸೃಷ್ಟಿ ಮತ್ತು ನಾಗರಿಕ-ಕೇಂದ್ರೀಕೃತ ಸಂವಹನವನ್ನು ಸಕ್ರಿಯಗೊಳಿಸಿ ಸ್ವಚ್ಛತೆಯನ್ನು ಒಂದು ಅಭ್ಯಾಸ ಮತ್ತು ಜೀವನಶೈಲಿಯನ್ನಾಗಿ ಮಾಡುತ್ತದೆ.
ಬಳಕೆ ತಗ್ಗಿಸಿ, ಮರುಬಳಕೆ ಮಾಡಿ ಮತ್ತು ಮರುಸಂಸ್ಕರಿಸಿ (ಆರ್ ಆರ್ ಆರ್): ಸ್ವಚ್ಛತೆಯೇ ಸೇವೆ (ʻಸ್ವಚ್ಛತಾ ಹಿ ಸೇವಾ) 2026 ರ ಭಾಗವಾಗಿ, ಕೇಂದ್ರ ಸಚಿವ ಶ್ರೀ ಮನೋಹರ್ ಲಾಲ್ ಅವರು ನವದೆಹಲಿಯ ಸಂಕಲ್ಪ ಭವನದಲ್ಲಿ 'ಬಳಕೆ ತಗ್ಗಿಸಿ, ಮರುಬಳಕೆ ಮಾಡಿ ಮತ್ತು ಮರುಸಂಸ್ಕರಿಸಿ' (ಆರ್ ಆರ್ ಆರ್ ) ಕೇಂದ್ರವನ್ನು ಉದ್ಘಾಟಿಸಿದರು. ಇದು ಕೇಂದ್ರ ಸಚಿವಾಲಯದ ಕಚೇರಿಯಲ್ಲಿ ಸ್ಥಾಪಿತವಾದ ಮೊದಲ ಇಂತಹ ಕೇಂದ್ರವಾಗಿದೆ. ಈ ಉಪಕ್ರಮವು ಸರ್ಕಾರಿ ಕೆಲಸದ ಸ್ಥಳಗಳಲ್ಲಿ ಸುಸ್ಥಿರ ಬಳಕೆ, ಮರುಬಳಕೆ, ಸಂಪನ್ಮೂಲ ಮರುಪಡೆಯುವಿಕೆ ಮತ್ತು ಆವರ್ತ ಆರ್ಥಿಕತೆಯನ್ನು ಉತ್ತೇಜಿಸುತ್ತದೆ.

ಭಾರತದ ನಗರ ನೈರ್ಮಲ್ಯ ಪಯಣದಲ್ಲಿ ಒಂದು ಪ್ರಮುಖ ಹೆಜ್ಜೆ — ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಚೇತರಿಕೆಯುಳ್ಳ, ಭವಿಷ್ಯಕ್ಕೆ ಸಿದ್ಧವಿರುವ ನಗರಗಳನ್ನು ರೂಪಿಸಲು ಆವಿಷ್ಕಾರ, ಪರಸ್ಪರ ಕಲಿಕೆ ಮತ್ತು ಸಾಮರ್ಥ್ಯ ವರ್ಧನೆಯನ್ನು ಮುನ್ನಡೆಸುತ್ತಿದೆ. ಭಾರತವು 'ವಿಕಸಿತ ಭಾರತ 2047' ರತ್ತ ಸಾಗುತ್ತಿರುವಾಗ, ಮುಂದಿನ ಹಾದಿ ಸ್ಪಷ್ಟವಾಗಿದೆ: ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ, ಆವರ್ತ ಆರ್ಥಿಕತೆ ಮತ್ತು ಸುಸ್ಥಿರ ನಗರ ವ್ಯವಸ್ಥೆಗಳಿಂದ ಚಾಲಿತವಾದ ಕಸ ಮುಕ್ತ ನಗರಗಳು.
*****
(ಪ್ರಕಟಣೆ ಐ.ಡಿ.: 2316580)
ವಿಸಿಟರ್ ಕೌಂಟರ್ : 15