ಕೃಷಿ ಸಚಿವಾಲಯ
ಭಾರತವನ್ನು ಜಾಗತಿಕ ಆಹಾರ ಬುಟ್ಟಿಯನ್ನಾಗಿ ಮಾಡಲು 'ಟೀಮ್ ಅಗ್ರಿಕಲ್ಚರ್' ರಚನೆಗೆ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಕರೆ ನೀಡಿದರು
ರೈತರಿಗೆ ಮೊದಲ ಸ್ಥಾನ ನೀಡಲು ಕೇಂದ್ರ, ರಾಜ್ಯಗಳು ರಾಜಕೀಯವನ್ನು ಮೀರಿ ನಿಲ್ಲಬೇಕು: ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಹೊಸ ವ್ಯಾಪಾರ ಅವಕಾಶಗಳ ಮೂಲಕ ಭಾರತದ ಕೃಷಿ ಉತ್ಪನ್ನಗಳು ಜಾಗತಿಕ ವ್ಯಾಪ್ತಿಗೆ ತಲುಪಲು ಸಜ್ಜಾಗಿವೆ: ಶ್ರೀ ಶಿವರಾಜ್ ಸಿಂಗ್ ಚೌಹಾಣ್
ʻರಾಷ್ಟ್ರೀಯ ಕೃಷಿ ಸಮ್ಮೇಳನʼದಲ್ಲಿ 10 ʻಪಿಎಂ-ಆರ್‌ಕೆವಿವೈʼ ಅಡಿಯಲ್ಲಿ ರಾಜ್ಯಗಳಿಗೆ 1200 ಕೋಟಿ ರೂ.ಗೂ ಅಧಿಕ ಆರ್ಥಿಕ ಬೆಂಬಲ ಮಂಜೂರು
ಬಲವಾದ ಕೇಂದ್ರ-ರಾಜ್ಯ ಸಮನ್ವಯ ಮತ್ತು ರಾಷ್ಟ್ರವ್ಯಾಪಿ 'ಖೇತ್ ಬಚಾವೋ ಅಭಿಯಾನ'ದ ಘೋಷಣೆ ಮಾಡಿದ ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಸುಸ್ಥಿರ ಕೃಷಿ ಕ್ಷೇತ್ರಕ್ಕೆ ನೈಸರ್ಗಿಕ ಕೃಷಿ, ಸಮಗ್ರ ಕೃಷಿ ಮತ್ತು ಬೆಳೆ ವೈವಿಧ್ಯೀಕರಣವೇ ಪ್ರಮುಖವಾಗಿದೆ: ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಪ್ರಕಟಣಾ ದಿನಾಂಕ:
29 SEP 2026 2:15PM by PIB Bengaluru
‘ರಾಷ್ಟ್ರೀಯ ಕೃಷಿ ಸಮ್ಮೇಳನ - ಹಿಂಗಾರು ಅಭಿಯಾನ 2026’ರ ಎರಡನೇ ದಿನದಂದು, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ವಿವಿಧ ರಾಜ್ಯಗಳ ಕೃಷಿ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದ ಅಧಿವೇಶನದ ಅಧ್ಯಕ್ಷತೆ ವಹಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಶ್ರೀ ಚೌಹಾಣ್ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಕೇಂದ್ರ ಮತ್ತು ರಾಜ್ಯಗಳು ಪಕ್ಷ ರಾಜಕೀಯವನ್ನು ಮೀರಿ ದೇಶದ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ರೈತರ ಜೀವನೋಪಾಯವನ್ನು ಸುಧಾರಿಸಲು 'ಟೀಮ್ ಅಗ್ರಿಕಲ್ಚರ್' ಮನೋಭಾವದಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು. "ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳು ಬರುತ್ತವೆ ಮತ್ತು ಹೋಗುತ್ತವೆ; ಪಕ್ಷಗಳು ರೂಪುಗೊಳ್ಳುತ್ತವೆ ಮತ್ತು ವಿಸರ್ಜನೆಗೊಳ್ಳುತ್ತವೆ, ಆದರೆ ದೇಶ ಮತ್ತು ಅದರ ರೈತರು ಶಾಶ್ವತವಾಗಿರುತ್ತಾರೆ," ಎಂದು ಅವರು ಹೇಳಿದರು. ಈ ವೇದಿಕೆಯು ರಾಜಕೀಯದ ಬಗ್ಗೆ ಅಲ್ಲ, ಬದಲಿಗೆ ಕೃಷಿಯನ್ನು ಸುಧಾರಿಸಲು ಮತ್ತು ರೈತರ ಹಿತಾಸಕ್ತಿಗಳನ್ನು ಮುನ್ನಡೆಸಲು ಪ್ರಾಯೋಗಿಕ ಮಾರ್ಗಗಳನ್ನು ಕಂಡುಹಿಡಿಯುವ ಕುರಿತಾದ್ದು ಎಂದು ಸಚಿವರು ಒತ್ತಿ ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಪ್ರತಿಯೊಂದು ಪ್ರಮುಖ ನೀತಿ ನಿರ್ಧಾರ ಮತ್ತು ಅಂತರರಾಷ್ಟ್ರೀಯ ಒಪ್ಪಂದಗಳಲ್ಲಿ ರೈತರ ಹಿತಾಸಕ್ತಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಶ್ರೀ ಚೌಹಾಣ್ ಒತ್ತಿ ಹೇಳಿದರು. ಸಮ್ಮೇಳನದಲ್ಲಿ ಶ್ರೀ ಚೌಹಾಣ್ ಅವರು ʻಪ್ರಧಾನಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆʼ (ಪಿಎಂ-ಆರ್‌ಕೆವಿವೈ) ಅಡಿಯಲ್ಲಿ 10 ರಾಜ್ಯಗಳ ಕೃಷಿ ಸಚಿವರಿಗೆ 1200 ಕೋಟಿ ರೂ.ಗಿಂತಲೂ ಅಧಿಕ ಮೌಲ್ಯದ ಆರ್ಥಿಕ ಮಂಜೂರಾತಿ ಪತ್ರಗಳನ್ನು ಹಸ್ತಾಂತರಿಸಿದರು. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಹಾಯಕ ಸಚಿವರಾದ ಶ್ರೀ ರಾಮನಾಥ್ ಠಾಕೂರ್ ಹಾಗೂ ಶ್ರೀ ಭಗೀರಥ್ ಚೌಧರಿ; ಕೃಷಿ ಕಾರ್ಯದರ್ಶಿ ಶ್ರೀ ಅತಿಶ್ ಚಂದ್ರ, ʻಐಸಿಎಆರ್ʼ ಮಹಾನಿರ್ದೇಶಕರಾದ ಡಾ. ಎಂ.ಎಲ್. ಜಾಟ್; ಕೇಂದ್ರ ಮತ್ತು ರಾಜ್ಯಗಳ ಹಿರಿಯ ಅಧಿಕಾರಿಗಳು, ವಿಜ್ಞಾನಿಗಳು ಮತ್ತು ವಿವಿಧ ಕೃಷಿ ಸಂಸ್ಥೆಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಉಪಸ್ಥಿತರಿದ್ದರು.

ಪಿಎಂ-ಆರ್‌ಕೆವಿವೈ ಅಡಿಯಲ್ಲಿ 10 ರಾಜ್ಯಗಳಿಗೆ ₹1200 ಕೋಟಿಗೂ ಹೆಚ್ಚು ಮಂಜೂರು
ಪಶ್ಚಿಮ ಬಂಗಾಳಕ್ಕೆ 290 ಕೋಟಿ ರೂ., ಹರಿಯಾಣಕ್ಕೆ 198 ಕೋಟಿ ರೂ., ಛತ್ತೀಸ್‌ಗಢಕ್ಕೆ 181 ಕೋಟಿ ರೂ., ಅರುಣಾಚಲ ಪ್ರದೇಶಕ್ಕೆ 154 ಕೋಟಿ ರೂ., ಬಿಹಾರಕ್ಕೆ 114 ಕೋಟಿ ರೂ., ಕರ್ನಾಟಕಕ್ಕೆ 104 ಕೋಟಿ ರೂ., ಮಿಜೋರಾಂಗೆ 75 ಕೋಟಿ ರೂ., ಹಿಮಾಚಲ ಪ್ರದೇಶಕ್ಕೆ 64 ಕೋಟಿ ರೂ., ಜಾರ್ಖಂಡ್ ಗೆ 58 ಕೋಟಿ ರೂ., ಪಂಜಾಬ್ ಗೆ 43 ಕೋಟಿ ರೂ. ಸೇರಿದಂತೆ ಒಟ್ಟು 10 ರಾಜ್ಯಗಳಿಗೆ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.
ಕೇಂದ್ರ ಸರ್ಕಾರವು ಕೇವಲ ನೀತಿ ರಚನೆಗೆ ಮಾತ್ರ ಸೀಮಿತವಾಗಿಲ್ಲ, ಯೋಜನೆಗಳ ಅನುಷ್ಠಾನವು ಯಾವುದೇ ವಿಳಂಬವಿಲ್ಲದೆ ತಳಮಟ್ಟದಲ್ಲಿ ಪ್ರಾರಂಭವಾಗುವಂತೆ ನೋಡಿಕೊಳ್ಳಲು ರಾಜ್ಯಗಳಿಗೆ ಸಕಾಲಿಕ ಸಂಪನ್ಮೂಲಗಳ ಲಭ್ಯತೆಯನ್ನು ಖಚಿತಪಡಿಸುತ್ತಿದೆ ಎಂದು ಶ್ರೀ ಚೌಹಾಣ್ ಹೇಳಿದರು.

ಕೃಷಿ ಬೆಳವಣಿಗೆ ದರ ಶೇ.4.5ಕ್ಕೆ ಏರಿಕೆ
ದೇಶದ ಕೃಷಿ ಸಾಧನೆಯನ್ನು ಎತ್ತಿ ತೋರಿಸಿದ ಶ್ರೀ ಚೌಹಾಣ್, 2015 ರಿಂದ ಕೃಷಿ ಬೆಳವಣಿಗೆ ದರವು ಶೇ. 3 ರಿಂದ ಶೇ. 4.5 ಕ್ಕೆ ಏರಿದೆ ಎಂದು ಹೇಳಿದರು. ಆಹಾರಧಾನ್ಯ ಉತ್ಪಾದನೆಯ ಸರಾಸರಿ ವಾರ್ಷಿಕ ಹೆಚ್ಚಳವು ದ್ವಿಗುಣಗೊಂಡಿದ್ದು, ಈ ಹಿಂದೆ ಇದ್ದ ಸುಮಾರು 40 ಲಕ್ಷ ಟನ್‌ಗಳಿಂದ ವರ್ಷಕ್ಕೆ 84 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ. 2023-24 ರಿಂದ 2025-26 ರವರೆಗಿನ ಕೇವಲ ಎರಡು ವರ್ಷಗಳಲ್ಲಿ, ಹಿಂಗಾರು (ರಾಬಿ) ಆಹಾರಧಾನ್ಯಗಳ ಉತ್ಪಾದನೆಯು 205 ಲಕ್ಷ ಟನ್‌ಗಳ ಅಭೂತಪೂರ್ವ ಹೆಚ್ಚಳವನ್ನು ದಾಖಲಿಸಿದೆ ಎಂದು ಅವರು ಗಮನ ಸೆಳೆದರು. ಈ ಐತಿಹಾಸಿಕ ಬೆಳವಣಿಗೆಗೆ ರಾಜ್ಯ ಕೃಷಿ ಇಲಾಖೆಗಳು, ವಿಜ್ಞಾನಿಗಳು ಮತ್ತು ರೈತರ ಸಂಘಟಿತ ಪ್ರಯತ್ನಗಳೇ ಕಾರಣ ಎಂದು ಅವರು ಶ್ಲಾಘಿಸಿದರು.
ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಲು ರಾಜ್ಯಗಳೊಂದಿಗೆ ಮಾಸಿಕ ವರ್ಚುವಲ್ ಪರಿಶೀಲನೆ

ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಹೊಸ ಕಾರ್ಯವಿಧಾನವನ್ನು ಘೋಷಿಸಿದ ಶ್ರೀ ಚೌಹಾಣ್, ಕೇಂದ್ರದಲ್ಲಿ ನಡೆಸುವ ಸಾಪ್ತಾಹಿಕ ವಿಮರ್ಶೆಗಳ ಮಾದರಿಯಲ್ಲಿ, ಪ್ರಗತಿಯನ್ನು ನಿರಂತರವಾಗಿ ನಿರ್ಣಯಿಸಲು ರಾಜ್ಯಗಳೊಂದಿಗೆ ನಿಯಮಿತ ಮಾಸಿಕ ವರ್ಚುವಲ್ ಪರಿಶೀಲನಾ ಸಭೆಗಳನ್ನು ನಡೆಸಲಾಗುವುದು ಎಂದು ಹೇಳಿದರು. ರಾಜ್ಯ ಮಟ್ಟದಲ್ಲಿ, ಕೃಷಿ ಸಚಿವರು, ಕೃಷಿ ಕಾರ್ಯದರ್ಶಿ, ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು, ಐಸಿಎಆರ್ ಸಂಸ್ಥೆಗಳು, ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆ), ʻಆತ್ಮಾʼ, ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ), ಪ್ರಗತಿಪರ ರೈತರು, ಸಂಸ್ಕರಣಾಗಾರರು, ರಫ್ತುದಾರರು ಮತ್ತು ಭಾರತ ಸರ್ಕಾರದ ನೋಡಲ್ ಅಧಿಕಾರಿಗಳನ್ನು ಒಟ್ಟುಗೂಡಿಸುವ ಮೂಲಕ ಬಲವಾದ ರಾಜ್ಯ ಕೃಷಿ ತಂಡವನ್ನು ರಚಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ, ಜಿಲ್ಲಾಧಿಕಾರಿ, ಕೃಷಿ ಉಪ ನಿರ್ದೇಶಕರು (ಡಿಡಿಎ), ಎಟಿಎಂಎ, ಕೆವಿಕೆಗಳು, ಐಸಿಎಆರ್ ವಿಜ್ಞಾನಿಗಳು, ಬ್ಯಾಂಕರ್ಗಳು ಮತ್ತು ರೈತರನ್ನು ಒಳಗೊಂಡ ಮಾಸಿಕ ಸಭೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಋತು ಪೂರ್ವ ಕೃಷಿ ಸಂಪರ್ಕ ಸಭೆಗಳ ವಾರ್ಷಿಕ ಕ್ಯಾಲೆಂಡರ್

ಕೃಷಿ ಅಭಿಯಾನಗಳಿಗೆ ಮುಂಚಿತವಾಗಿ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಲು, ಶ್ರೀ ಚೌಹಾಣ್ ಅವರು ಸಮನ್ವಯ ಸಭೆಗಳ ವಾರ್ಷಿಕ ಕ್ಯಾಲೆಂಡರ್ ಅನ್ನು ಘೋಷಿಸಿದರು. ಮುಂಗಾರು ಅಭಿಯಾನಕ್ಕಾಗಿ, ಪ್ರತಿ ವರ್ಷ ಮೇ 10 ರಂದು ಜಿಲ್ಲಾ ಮಟ್ಟದ ಸಭೆಗಳು ಮತ್ತು ಮೇ 17 ರಂದು ರಾಜ್ಯ ಮಟ್ಟದ ಸಭೆಗಳು ನಡೆಯಲಿವೆ. ಅಂತೆಯೇ, ಹಿಂಗಾರು ಅಭಿಯಾನಕ್ಕಾಗಿ, ಪ್ರತಿ ವರ್ಷ ಸೆಪ್ಟೆಂಬರ್ 10 ರಂದು ಜಿಲ್ಲಾ ಮಟ್ಟದ ಸಭೆಗಳು ಮತ್ತು ಸೆಪ್ಟೆಂಬರ್ 17 ರಂದು ರಾಜ್ಯ ಮಟ್ಟದ ಸಭೆಗಳನ್ನು ನಡೆಸಲಾಗುವುದು. ಇದಲ್ಲದೆ, ರೈತರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕೃಷಿ ಸಚಿವರು, ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನಿಗಳನ್ನು ಏಕಕಾಲದಲ್ಲಿ ಒಟ್ಟುಗೂಡಿಸುವ ಸಾಮಾನ್ಯ ದಿನಾಂಕದಂದು ದೇಶಾದ್ಯಂತ ಒಂದು ದಿನದ ವಿಶೇಷ ಸಭೆಯನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಅಕ್ಟೋಬರ್ 22 ರಿಂದ ನವೆಂಬರ್ 30 ರವರೆಗೆ 'ಖೇತ್ ಬಚಾವೋ ಅಭಿಯಾನ'
ಮಣ್ಣಿನ ಆರೋಗ್ಯ ಮತ್ತು ಪರಿಸರವನ್ನು ರಕ್ಷಿಸುವ ಅಗತ್ಯವನ್ನು ಒತ್ತಿ ಹೇಳಿದ ಶ್ರೀ ಚೌಹಾಣ್ ಅವರು ಈ ವರ್ಷದ ಅಕ್ಟೋಬರ್ 22 ರಿಂದ ನವೆಂಬರ್ 30 ರವರೆಗೆ ರಾಷ್ಟ್ರವ್ಯಾಪಿ 'ಖೇತ್ ಬಚಾವೋ ಅಭಿಯಾನ'ಕ್ಕೆ ಕರೆ ನೀಡಿದರು. ವಿಜ್ಞಾನಿಗಳು ಮತ್ತು ಎಲ್ಲಾ ಪ್ರಮುಖ ಪಾಲುದಾರರು ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ. ಮಣ್ಣಿನ ಆರೋಗ್ಯ ಕಾರ್ಡ್‌ಗಳ ಆಧಾರದ ಮೇಲೆ, ಮಣ್ಣಿನ ಫಲವತ್ತತೆ ಮತ್ತು ಪ್ರಯೋಜನಕಾರಿ ಕೀಟಗಳನ್ನು ರಕ್ಷಿಸಲು ರಸಗೊಬ್ಬರಗಳ ಸಮತೋಲಿತ ಬಳಕೆಯನ್ನು ಈ ಅಭಿಯಾನವು ಉತ್ತೇಜಿಸುತ್ತದೆ. ಭತ್ತದ ಕೊಯ್ಲಿನ ನಂತರ ಪೂರ್ವ ಭಾರತದ ಪ್ರದೇಶಗಳಲ್ಲಿ, ವಿಶೇಷವಾಗಿ ಜಾರ್ಖಂಡ್, ಬಿಹಾರ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಬೇಳೆಕಾಳುಗಳ ಕೃಷಿಗೆ ದೊಡ್ಡ ಮಟ್ಟದಲ್ಲಿ ಉತ್ತೇಜನ ನೀಡುವಂತೆಯೂ ಅವರು ಕರೆ ನೀಡಿದರು.
ಮಣ್ಣಿನ ತೇವಾಂಶ, ನೀರಿನ ಲಭ್ಯತೆ ಮತ್ತು ಬೆಳೆ ಸಂರಕ್ಷಣೆಯ ಮೇಲೆ ಗಮನ ಹರಿಸಲು ಹಿಂಗಾರು ಸಿದ್ಧತೆಗಳು
ಪ್ರಸ್ತುತ ಹಿಂಗಾರು ಋತುವಿನ ಸಿದ್ಧತೆಗಳ ಭಾಗವಾಗಿ, ಯಾವುದೇ ಬೆಳೆ ಮತ್ತು ಸುಧಾರಿತ ಬೀಜಗಳ ಶಿಫಾರಸುಗಳು ಮಣ್ಣಿನ ತೇವಾಂಶ ಮತ್ತು ನೀರಿನ ಲಭ್ಯತೆಯನ್ನು ಆಧರಿಸಿರಬೇಕು ಎಂದು ಶ್ರೀ ಚೌಹಾಣ್ ಒತ್ತಿ ಹೇಳಿದರು. ರೋಗಗಳು ಮತ್ತು ಕೀಟಗಳಿಂದ ಬೆಳೆಗಳನ್ನು ರಕ್ಷಿಸಲು ಪರಿಣಾಮಕಾರಿ ವ್ಯವಸ್ಥೆಗಳನ್ನು ಜಾರಿಗೆ ತರಲು, ಕಿಸಾನ್ ಕ್ರೆಡಿಟ್ ಕಾರ್ಡ್‌ಗಳೊಂದಿಗೆ (ಕೆಸಿಸಿ) ಎಲ್ಲಾ ಅರ್ಹ ರೈತರನ್ನು ತಲುಪಲು ಮತ್ತು ಬೆಳೆ ವಿಮೆ ಯೋಜನೆಯಡಿ ಪಾರದರ್ಶಕ ಬೆಳೆ ಕಟಾವು ಪ್ರಯೋಗಗಳನ್ನು (ಸಿಸಿಇ) ನಡೆಸಲು ಅವರು ರಾಜ್ಯಗಳಿಗೆ ನಿರ್ದೇಶನ ನೀಡಿದರು. ಇಲಾಖೆಯ ಯೋಜನೆಗಳ ಅನುಷ್ಠಾನವನ್ನು ರಾಜ್ಯದ ಸಚಿವರು ಖುದ್ದಾಗಿ ನಿಯಮಿತವಾಗಿ ಪರಿಶೀಲಿಸಬೇಕು ಎಂದು ಅವರು ಪ್ರತಿಪಾದಿಸಿದರು.
ನಕಲಿ ಮಾಹಿತಿಗಳ ವಿರುದ್ಧ ಕಠಿಣ ಕ್ರಮ, ಬಲವಂತದ ಟ್ಯಾಗಿಂಗ್‌ಗೆ ತೆರೆ
ದೇಶದಲ್ಲಿ ಬೀಜಗಳು ಮತ್ತು ರಸಗೊಬ್ಬರಗಳ ಲಭ್ಯತೆ ಸಮರ್ಪಕವಾಗಿದೆ ಎಂದು ಹೇಳಿದ ಶ್ರೀ ಚೌಹಾಣ್, ನಕಲಿ ರಸಗೊಬ್ಬರಗಳು, ನಕಲಿ ಬೀಜಗಳು ಮತ್ತು ಕಳಪೆ ಗುಣಮಟ್ಟದ ಕೀಟನಾಶಕಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ನಿರ್ದೇಶನ ನೀಡಿದರು. ಬಲವಂತದ ಟ್ಯಾಗಿಂಗ್ ಅನ್ನು ಸಂಪೂರ್ಣವಾಗಿ ತೊಡೆದುಹಾಕಬೇಕು ಎಂದು ಅವರು ನಿರ್ದೇಶನ ನೀಡಿದರು. ಕೃಷಿಯನ್ನು ಹೆಚ್ಚು ಸುಸ್ಥಿರ ಮತ್ತು ಲಾಭದಾಯಕವನ್ನಾಗಿಸಲು ಕರೆ ನೀಡಿದ ಅವರು, ನೈಸರ್ಗಿಕ ಕೃಷಿ, ಸಮಗ್ರ ಕೃಷಿ ವ್ಯವಸ್ಥೆಗಳು ಮತ್ತು ಬೆಳೆ ವೈವಿಧ್ಯೀಕರಣವನ್ನು ಸಮರೋಪಾದಿಯಲ್ಲಿ ಅಳವಡಿಸಿಕೊಳ್ಳುವಂತೆ ರಾಜ್ಯಗಳನ್ನು ಒತ್ತಾಯಿಸಿದರು.
ರೈತರಿಗೆ ಲಾಭದಾಯಕ ಬೆಲೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಬಹುಮುಖಿ ಕಾರ್ಯತಂತ್ರದ ಮೇಲೆ ಕಾರ್ಯನಿರ್ವಹಿಸುತ್ತಿದೆ
ರೈತರು ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಬಹು ಆಯಾಮದ ಕಾರ್ಯತಂತ್ರವನ್ನು ಅನುಸರಿಸುತ್ತಿದೆ ಎಂದು ಶ್ರೀ ಚೌಹಾಣ್ ಹೇಳಿದರು. ಈ ಕಾರ್ಯತಂತ್ರವು ಸುಗ್ಗಿಯ ನಂತರದ ನಿರ್ವಹಣೆ, ವೈಜ್ಞಾನಿಕ ಗೋದಾಮು ಮತ್ತು ಮಾರುಕಟ್ಟೆ ವ್ಯವಸ್ಥೆಗಳ ಬಲವರ್ಧಮನೆಯನ್ನು ಒಳಗೊಂಡಿದೆ. ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ತೊಗರಿ, ಉದ್ದು ಮತ್ತು ಮಸೂರ್ ಅನ್ನು ಶೇಕಡಾ 100 ರಷ್ಟು ಖಚಿತವಾಗಿ ಸರ್ಕಾರ ಖರೀದಿ ಮಾಡಲಿದೆ, 48 ಗಂಟೆಗಳಲ್ಲಿ ಪಾವತಿ ಮಾಡುವ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಗೆ ಅನುಗುಣವಾಗಿ, ಭಾರತೀಯ ಕೃಷಿ ಉತ್ಪನ್ನಗಳು, ಹಣ್ಣುಗಳು, ತರಕಾರಿಗಳು ಮತ್ತು ಆಹಾರ ಧಾನ್ಯಗಳನ್ನು ಜಾಗತಿಕ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸಲು ʻಅಂತರರಾಷ್ಟ್ರೀಯ ಮುಕ್ತ ವ್ಯಾಪಾರ ಒಪ್ಪಂದʼಗಳಿಂದ (ಎಫ್‌ಟಿಎ) ಹೊರಹೊಮ್ಮುವ ಹೊಸ ಮಾರುಕಟ್ಟೆ ಅವಕಾಶಗಳನ್ನು ಭಾರತ ಬಳಸಿಕೊಳ್ಳುತ್ತದೆ ಎಂದು ಅವರು ಹೇಳಿದರು. ಇದು ರೈತರಿಗೆ ತಮ್ಮ ಉತ್ಪನ್ನಗಳಿಗೆ ಉತ್ತಮ ಆದಾಯವನ್ನು ಪಡೆಯಲು ಸಹಾಯ ಮಾಡುತ್ತದೆ ಮತ್ತು ಭಾರತವು ವಿಶ್ವದ ಪ್ರಮುಖ 'ಆಹಾರ ಬುಟ್ಟಿ'ಯಾಗಿ ಹೊರಹೊಮ್ಮಲು ಅನುವು ಮಾಡಿಕೊಡುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
*****
(ಪ್ರಕಟಣೆ ಐ.ಡಿ.: 2316486)
ವಿಸಿಟರ್ ಕೌಂಟರ್ : 29