ಶಿಕ್ಷಣ ಸಚಿವಾಲಯ
ಬೆಂಗಳೂರಿನ ಐಐಎಸ್‌ಸಿಯಲ್ಲಿ 'ಸೇವಾ ಫಸ್ಟ್ ಇನ್ನೋವೇಶನ್ ಚಾಲೆಂಜ್' ಉದ್ಘಾಟಿಸಲಿರುವ ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ
ಐದು ದಕ್ಷಿಣದ ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳ ಯುವ ಸ್ಪರ್ಧಿಗಳನ್ನು ಒಂದೆಡೆ ತರಲಿದೆ ಈ ಉಪಕ್ರಮ
ಕಾರ್ಯಕ್ರಮದ ನೋಂದಣಿಯು 2026ರ ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 24 ರವರೆಗೆ ತೆರೆದಿರುತ್ತದೆ
ಪ್ರಕಟಣಾ ದಿನಾಂಕ:
24 SEP 2026 4:16PM by PIB Bengaluru
ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು, ನಾಳೆ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ನಲ್ಲಿ 'ಸೇವಾ ಫಸ್ಟ್ ಇನ್ನೋವೇಶನ್ ಚಾಲೆಂಜ್' (SFIC) ಅನ್ನು ಉದ್ಘಾಟಿಸಲಿದ್ದಾರೆ. ಈ ಉಪಕ್ರಮವು ಯುವಕರು ತಮ್ಮ ಸಮುದಾಯಗಳಲ್ಲಿ ಕಾಣುವ ಸಮಸ್ಯೆಗಳನ್ನು ಗುರುತಿಸಲು ಮತ್ತು ಅವುಗಳನ್ನು ಪರೀಕ್ಷಿಸಬಹುದಾದ, ಸುಧಾರಿಸಬಹುದಾದ ಹಾಗೂ ಅನುಷ್ಠಾನಕ್ಕೆ ಕೊಂಡೊಯ್ಯಬಹುದಾದ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಪ್ರೋತ್ಸಾಹಿಸುತ್ತದೆ. ಈ ಸ್ಪರ್ಧೆ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ ಹಾಗೂ ಪುದುಚೇರಿ ಸೇರಿದಂತೆ ಐದು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಳ್ಳುತ್ತದೆ.
ಈ ಸ್ಪರ್ಧೆ ಶಾಲೆಗಳು, ಕೈಗಾರಿಕಾ ತರಬೇತಿ ಸಂಸ್ಥೆಗಳು (ITIs), ಪಾಲಿಟೆಕ್ನಿಕ್‌ಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಯುವ ಸ್ಪರ್ಧಿಗಳನ್ನು ಒಂದೆಡೆ ತರಲಿದೆ. ಇದು ಭಾಗವಹಿಸುವಿಕೆಯ ಮೂರು ಹಂತಗಳನ್ನು ಹೊಂದಿದೆ - ಜೂನಿಯರ್, ಟೆಕ್ನಿಕಲ್ ಮತ್ತು ಓಪನ್. 6 ನೇ ತರಗತಿಯಿಂದ 12 ನೇ ತರಗತಿಯವರೆಗಿನ ಶಾಲಾ ವಿದ್ಯಾರ್ಥಿಗಳು ಜೂನಿಯರ್ ಹಂತದಲ್ಲಿ ಭಾಗವಹಿಸಬಹುದು. ಈ ಹಂತದಲ್ಲಿ, ವಿದ್ಯಾರ್ಥಿಗಳು ಸ್ಥಳೀಯ ಸಮಸ್ಯೆಗಳನ್ನು ಗುರುತಿಸಬಹುದು ಮತ್ತು ಸರಳವಾದ ಕಾರ್ಯಾಚರಣಾ ಪರಿಹಾರಗಳನ್ನು ಅಥವಾ ಉತ್ತಮವಾಗಿ ತರ್ಕಬದ್ಧಗೊಳಿಸಿದ ಸೇವೆ ಮತ್ತು ಆಡಳಿತದ ಕಲ್ಪನೆಗಳನ್ನು ಅಭಿವೃದ್ಧಿಪಡಿಸಬಹುದು. ಐಟಿಐ ಮತ್ತು ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಪ್ರಾಯೋಗಿಕ ಎಂಜಿನಿಯರಿಂಗ್, ಫ್ಯಾಬ್ರಿಕೇಶನ್, ಎಲೆಕ್ಟ್ರಾನಿಕ್ಸ್ ಮತ್ತು ಪ್ರಕ್ರಿಯೆ ಪರಿಹಾರಗಳ ಮೇಲೆ ಗಮನ ಹರಿಸಲಿದ್ದಾರೆ, ಆದರೆ ಪದವಿ, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಜಾರಿಗೆ ತರಲು ಸೂಕ್ತವಾದ ಮಾದರಿಗಳು (prototypes) ಅಥವಾ ಪೈಲಟ್ ಯೋಜನೆಗಳನ್ನು ಪ್ರದರ್ಶಿಸುವ ನಿರೀಕ್ಷೆಯಿದೆ.
ಈ ಸ್ಪರ್ಧೆ ಐದು ರಾಷ್ಟ್ರೀಯ ವಿಷಯಗಳ ಮೇಲೆ ಗಮನ ಹರಿಸಲಿದೆ, ಅವುಗಳೆಂದರೆ 1) ಸ್ವಚ್ಛ ಮತ್ತು ಸುಸ್ಥಿರ ಭಾರತ, 2) ಸಮೃದ್ಧ ರೈತರು, ಸಮೃದ್ಧ ಭಾರತ, 3) ಆರೋಗ್ಯಕರ ಮತ್ತು ಸಮ್ಮಿಲಿತ ಭಾರತ, 4) ವಿದ್ಯಾವಂತ ಮತ್ತು ಕೌಶಲ್ಯಪೂರ್ಣ ಭಾರತ ಮತ್ತು 5) ಸುರಕ್ಷಿತ ಭಾರತ.
ಈ ಕಾರ್ಯಕ್ರಮದ ನೋಂದಣಿಯು 2026 ರ ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 24 ರವರೆಗೆ ತೆರೆದಿರುತ್ತದೆ. ಇದು 2026ರ ಡಿಸೆಂಬರ್ 10 ರಿಂದ 17 ರವರೆಗೆ ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಫಿನಾಲೆಯೊಂದಿಗೆ ಮುಕ್ತಾಯಗೊಳ್ಳಲಿದೆ.
ಭಾಗವಹಿಸುವವರು, ಶೈಕ್ಷಣಿಕ ಮತ್ತು ಉದ್ಯಮ ಮಟ್ಟದ ಮಾರ್ಗದರ್ಶನ, ಪ್ರಯೋಗಾಲಯಗಳು, ಫ್ಯಾಬ್ರಿಕೇಶನ್ ಸೌಲಭ್ಯಗಳು, ಪರೀಕ್ಷಾ ಬೆಂಬಲ, ಇನ್‌ಕ್ಯುಬೇಷನ್, ಸೀಡ್ ಮತ್ತು ಪೈಲಟ್ ಫಂಡಿಂಗ್, ಕ್ಷೇತ್ರ ಪರೀಕ್ಷೆಯ (field-testing) ಅವಕಾಶಗಳು ಮತ್ತು ಬೌದ್ಧಿಕ ಆಸ್ತಿ ರಕ್ಷಣೆಯ ಮಾರ್ಗದರ್ಶನವನ್ನು ಪಡೆಯಲಿದ್ದಾರೆ. ಭರವಸೆಯ ಪರಿಹಾರಗಳನ್ನು ಅಳವಡಿಸಿಕೊಳ್ಳಲು ಸಚಿವಾಲಯಗಳು, ರಾಜ್ಯ ಸರ್ಕಾರಗಳು, ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು, ಸಾರ್ವಜನಿಕ ವಲಯದ ಉದ್ದಿಮೆಗಳು ಮತ್ತು ಉದ್ಯಮಗಳೊಂದಿಗೆ ಸಂಪರ್ಕಿಸಬಹುದಾಗಿದೆ.
ಈ ಚಾಲೆಂಜ್ ಅನ್ನು ಕೇಂದ್ರ ಶಿಕ್ಷಣ ಸಚಿವಾಲಯ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE), ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಜಂಟಿಯಾಗಿ ಆಯೋಜಿಸುತ್ತಿದ್ದು, ಬೆಂಗಳೂರಿನ ಐಐಎಸ್‌ಸಿ (IISc) ನೋಡಲ್ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.
ಸಮುದಾಯ ಆಧಾರಿತ ನಾವೀನ್ಯತೆಯ ಸಂಸ್ಕೃತಿಯನ್ನು ಪೋಷಿಸುವುದು, ಯುವಕರು ಸಮಸ್ಯೆಗಳನ್ನು ಗುರುತಿಸುವುದರಿಂದ ಪರಿಹಾರಗಳನ್ನು ನಿರ್ಮಿಸುವತ್ತ ಸಾಗಲು ಅನುವು ಮಾಡಿಕೊಡುವುದು ಮತ್ತು 'ವಿಕಸಿತ ಭಾರತ @ 2047' ರ ದೃಷ್ಟಿಕೋನಕ್ಕೆ ಕೊಡುಗೆ ನೀಡುವುದು ಈ ಉಪಕ್ರಮದ ಮುಖ್ಯ ಉದ್ದೇಶವಾಗಿದೆ.
ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://sevafirst.mic.gov.in/

*****
(ಪ್ರಕಟಣೆ ಐ.ಡಿ.: 2314409)
ವಿಸಿಟರ್ ಕೌಂಟರ್ : 72