ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಭಾರತದ ರಾಷ್ಟ್ರಪತಿಯವರಿಂದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ; ಶ್ರೀ ಅನಂತ್ ನಾಗ್ ಅವರಿಗೆ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ' ಪ್ರದಾನ


ಭಾರತೀಯ ಚಲನಚಿತ್ರ ರಂಗವು ಭಾರತೀಯ ಜನರ ಕನಸುಗಳು, ಪರಂಪರೆಗಳು, ಮತ್ತು ಹೋರಾಟಗಳನ್ನು ಹಾಗೂ ಭವಿಷ್ಯದ ಸಾಧ್ಯತೆಗಳನ್ನು ಪ್ರತಿಬಿಂಬಿಸುತ್ತದೆ: ರಾಷ್ಟ್ರಪತಿ ದ್ರೌಪದಿ ಮುರ್ಮು

ಪ್ರಕಟಣಾ ದಿನಾಂಕ: 22 SEP 2026 9:12PM by PIB Bengaluru

ಭಾರತದ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಸೆಪ್ಟೆಂಬರ್ 22, 2026) ಗುಜರಾತ್‌ನ ಕೆವಾಡಿಯಾದ ಏಕತಾ ನಗರದಲ್ಲಿ ನಡೆದ ಸಮಾರಂಭದಲ್ಲಿ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಭಾರತೀಯ ಚಲನಚಿತ್ರ ರಂಗಕ್ಕೆ ನೀಡಿದ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಅವರು ಹಿರಿಯ ನಟ ಶ್ರೀ ಅನಂತ್ ನಾಗ್ ಅವರಿಗೆ 2024ರ ಸಾಲಿನ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ'ಯನ್ನು ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸನ್ಮಾನ್ಯ ರಾಷ್ಟ್ರಪತಿಯವರು, ತಮ್ಮ ಅಸಾಧಾರಣ ಪ್ರತಿಭೆ ಮತ್ತು ಕಠಿಣ ಪರಿಶ್ರಮದ ಮೂಲಕ ರಾಷ್ಟ್ರಮಟ್ಟದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ಎಲ್ಲಾ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು. ಶ್ರೀ ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು ತಮಗೆ ಸಂತಸ ತಂದಿದೆ ಎಂದು ಅವರು ಹೇಳಿದರು. ಚಲನಚಿತ್ರಗಳಲ್ಲಿ ಅವರ ನಟನೆಯು ರಂಗಭೂಮಿ ಮತ್ತು ಚಲನಚಿತ್ರ ರಂಗದ ಅತ್ಯುತ್ತಮ ಅಂಶಗಳ ಸಮ್ಮಿಲನವನ್ನು ಪ್ರತಿನಿಧಿಸುತ್ತದೆ ಎಂದು ಅವರು ತಿಳಿಸಿದರು. ಅವರು ತಮ್ಮ ಸಹಜ, ಸಂಯಮದ ಮತ್ತು ನೈಜ ಅಭಿನಯಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಮುಂಬರುವ ಪೀಳಿಗೆಯ ಕಲಾವಿದರಿಗೆ ಸೂಕ್ತ ಮಾದರಿಯನ್ನು ಹೊಂದಿಸಿದ್ದಾರೆ ಎಂದು ಸನ್ಮಾನ್ಯ ರಾಷ್ಟ್ರಪತಿಯವರು ಬಣ್ಣಿಸಿದರು.

ಎಲ್ಲಾ ಭಾಷೆಗಳು ಮತ್ತು ಪ್ರದೇಶಗಳ ಚಲನಚಿತ್ರಗಳಲ್ಲಿ ಭಾರತದ ಚಿತ್ರಣವು ಪ್ರತಿಫಲಿಸುತ್ತದೆ ಎಂದು ಸನ್ಮಾನ್ಯ ರಾಷ್ಟ್ರಪತಿಯವರು ಹೇಳಿದರು. ಭಾರತೀಯ ಚಲನಚಿತ್ರ ರಂಗವು ಭಾರತೀಯ ಜನರ ಕನಸುಗಳು, ಪರಂಪರೆಗಳು, ಮತ್ತು ಹೋರಾಟಗಳನ್ನು ಹಾಗೂ ಭವಿಷ್ಯದ ಸಾಧ್ಯತೆಗಳನ್ನು ಪ್ರತಿಬಿಂಬಿಸುತ್ತದೆ. ಅತ್ಯುತ್ತಮ ಚಲನಚಿತ್ರಗಳನ್ನು ಗೌರವಿಸುವ ಈ ಸಮಾರಂಭವನ್ನು ಏಕತೆಯ ಗೋಡೆಯ ಸಮೀಪವಿರುವ 'ಸ್ಟ್ಯಾಚ್ಯೂ ಆಫ್ ಯೂನಿಟಿ' ಆವರಣದಲ್ಲಿ ಆಯೋಜಿಸಿರುವುದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದರು. ಭಾರತದ ಏಕತೆಯ ಶಿಲ್ಪಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಉಪಸ್ಥಿತಿಯನ್ನು ಈ ಸಂದರ್ಭವು ನೆನಪಿಸುವಂತಿದೆ, ದೇಶದ ಸಾಂಸ್ಕೃತಿಕ ಏಕತೆಯನ್ನು ಆಚರಿಸುವ ಈ ಉತ್ಸವವನ್ನು ಅವರೇ ಸ್ವತಃ ಹಾರೈಸುತ್ತಿರುವಂತೆ ಭಾಸವಾಗುತ್ತಿದೆ ಎಂದು ಅವರು ಹೇಳಿದರು.

ಎಲ್ಲಾ ಪ್ರಶಸ್ತಿ ವಿಜೇತ ಚಲನಚಿತ್ರಗಳನ್ನು ಸನ್ಮಾನ್ಯ ರಾಷ್ಟ್ರಪತಿಯವರು ಶ್ಲಾಘಿಸಿದರು. 'ಆರ್ಟಿಕಲ್ 370' ಚಲನಚಿತ್ರವು ದೇಶದ ಏಕತೆಯು ಎದುರಿಸುತ್ತಿರುವ ಗಂಭೀರ ಸವಾಲುಗಳು ಮತ್ತು ಅವುಗಳ ಪರಿಹಾರಗಳದ್ದೇ ಆದ ಜೀವಂತ ವಿವರಣೆಯನ್ನು ನೀಡುತ್ತದೆ ಎಂದು ಅವರು ಹೇಳಿದರು. ನಾನ್-ಫೀಚರ್ ಫಿಲ್ಮ್ 'ಭಂಗಾರ್' ಜೀವನ ಮತ್ತು ಸಾವು, ಅರ್ಥ ಮತ್ತು ಅರ್ಥಹೀನತೆಗೆ ಸಂಬಂಧಿಸಿದ ಅಸಂಖ್ಯಾತ ಆಯಾಮಗಳನ್ನು ವ್ಯಕ್ತಪಡಿಸುತ್ತದೆ. 'ಸ್ವಾತಂತ್ರ್ಯ ವೀರ್ ಸಾವರ್ಕರ್' ಸಿನಿಮಾ ವೀರ್ ಸಾವರ್ಕರ್ ಜೀ ಅವರ ಅಸಾಧಾರಣ ಜೀವನಗಾಥೆಗೆ ಸಲ್ಲಿಸಿದ ಕಲಾತ್ಮಕ ಶ್ರದ್ಧಾಂಜಲಿಯಾಗಿದೆ. 'ಭಕ್ಷಕ್' ಚಲನಚಿತ್ರವು ಮಹಿಳೆಯರ ಸುರಕ್ಷತೆಯ ಅತ್ಯಂತ ಗಂಭೀರ ವಿಷಯದ ಬಗ್ಗೆ ಸಾಮಾಜಿಕ ಜಾಗೃತಿ ಮೂಡಿಸುತ್ತದೆ. ಸಂತಾಲಿ ಭಾಷೆಯ 'ಅಂಗೆನ್' ಚಲನಚಿತ್ರಕ್ಕೆ ರಾಷ್ಟ್ರಮಟ್ಟದ ಮಾನ್ಯತೆ ಸಿಕ್ಕಿರುವುದು ಒಂದು ಅತ್ಯುತ್ತಮ ಚಲನಚಿತ್ರಕ್ಕೆ ಪ್ರೋತ್ಸಾಹ ನೀಡಿದಂತಾಗಿದೆ ಮತ್ತು ಇದು ಸಾಂಸ್ಕೃತಿಕ ವೈವಿಧ್ಯತೆ ಹಾಗೂ ಸಾಮಾಜಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸಿದೆ ಎಂದು ಅವರು ಹೇಳಿದರು.

ಸಮಾಜ ಮತ್ತು ರಾಷ್ಟ್ರಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಪರಿಹರಿಸುವ ಚಲನಚಿತ್ರಗಳನ್ನು ಆಯ್ಕೆ ಮಾಡಿದ್ದಕ್ಕಾಗಿ ಸನ್ಮಾನ್ಯ ರಾಷ್ಟ್ರಪತಿಯವರು ಜ್ಯೂರಿ ಸದಸ್ಯರನ್ನು ಮೆಚ್ಚಿದರು. ಪ್ರತಿಯೊಂದು ಪ್ರಾದೇಶಿಕ ಜ್ಯೂರಿಯಲ್ಲೂ ಮಹಿಳೆಯರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಯಾವುದೇ ಕ್ಷೇತ್ರದಲ್ಲಿ ಮಹಿಳೆಯರ ದೃಷ್ಟಿಕೋನವನ್ನು ಸಂಯೋಜಿಸುವುದರಿಂದ ಸಮಗ್ರ ಮಾನವ ದೃಷ್ಟಿಕೋನವನ್ನು ರೂಪಿಸಬಹುದು ಎಂದು ಅವರು ಒತ್ತಿಹೇಳಿದರು.

ತಂಡದ ಪ್ರತಿಯೊಬ್ಬ ಸದಸ್ಯರ ಬಗ್ಗೆ ಗೌರವ ಮತ್ತು ಸಂವೇದನಾಶೀಲತೆಯ ಭಾವನೆಯನ್ನು ಕಾಯ್ದುಕೊಳ್ಳುವುದು ಚಲನಚಿತ್ರೋದ್ಯಮದ ಕೆಲಸದ ಸಂಸ್ಕೃತಿಯ ಪ್ರಮುಖ ಭಾಗವಾಗಿರಬೇಕು ಎಂದು ಸನ್ಮಾನ್ಯ ರಾಷ್ಟ್ರಪತಿಯವರು ಹೇಳಿದರು. ಕಾರ್ಮಿಕರು, ಸಣ್ಣ ಪ್ರಮಾಣದ ಕಲಾವಿದರು, ಸಹಾಯಕರು ಮತ್ತು ಉದಯೋನ್ಮುಖ ಕಲಾವಿದರು ಸೂಕ್ತ ಗೌರವ ಮತ್ತು ಸಾಮಾಜಿಕ ಭದ್ರತೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಕ್ರಿಯೇಟಿವ್ ಎಕಾನಮಿಯ ಪ್ರಮುಖ ಪ್ರತಿನಿಧಿಗಳಿಗೆ ಅವರು ಮನವಿ ಮಾಡಿದರು.

ಜನಪ್ರಿಯ ಚಲನಚಿತ್ರ ಕಲಾವಿದರು ದೇಶದ ಜನರನ್ನು, ವಿಶೇಷವಾಗಿ ಯುವಕರನ್ನು ಪ್ರಭಾವಿಸುವ ಅಪಾರ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಸನ್ಮಾನ್ಯ ರಾಷ್ಟ್ರಪತಿಯವರು ಹೇಳಿದರು. ಯಶಸ್ವಿ ಚಲನಚಿತ್ರ ಕಲಾವಿದರು ಶಿಸ್ತಿನ ಜೀವನಶೈಲಿಯ ಪ್ರಯೋಜನಗಳ ಬಗ್ಗೆ ಮಾತನಾಡಿದಾಗ, ಲಕ್ಷಾಂತರ ಮಕ್ಕಳು ಮತ್ತು ಯುವಕರು ಅವರನ್ನು ಅನುಕರಿಸುತ್ತಾರೆ. ಆರೋಗ್ಯಕ್ಕೆ ಹಾನಿಕರವಾದ ಉತ್ಪನ್ನಗಳನ್ನು ಪ್ರಚಾರ ಮಾಡಬೇಡಿ ಎಂದು ಅವರು ಸೆಲೆಬ್ರಿಟಿಗಳಿಗೆ ಮನವಿ ಮಾಡಿದರು. ನಿಜವಾದ ನಕ್ಷತ್ರ (ಸ್ಟಾರ್) ಎಂದರೆ ಬೆಳಕನ್ನು ಹರಡುವವನೇ ಹೊರತು ಕತ್ತಲೆಯನ್ನಲ್ಲ ಎಂದು ಅವರು ಹೇಳಿದರು.

ರಾಷ್ಟ್ರಪತಿ ಅವರ ಭಾಷಣವನ್ನು ವೀಕ್ಷಿಸಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ -

 

*****


(ಪ್ರಕಟಣೆ ಐ.ಡಿ.: 2313675) ವಿಸಿಟರ್ ಕೌಂಟರ್ : 21
ಪ್ರಕಟಣೆಯನ್ನು ಇದರಲ್ಲಿ ಓದಿ: Malayalam , Assamese , English , Urdu , हिन्दी , Marathi , Tamil