ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ನಿರೀಕ್ಷೆಗೆ ತೆರೆ ಬಿದ್ದಿದೆ: ಸೆಪ್ಟೆಂಬರ್ 22ರಂದು ಭಾರತೀಯ ಚಿತ್ರರಂಗದ ಅತ್ಯುತ್ತಮ ಸಾಧನೆಗಳನ್ನು ಸಂಭ್ರಮಿಸಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪ್ರದಾನ


ದೆಹಲಿಯಿಂದ ಏಕತಾ ನಗರಕ್ಕೆ: ವಿವಿಧ ರಾಜ್ಯಗಳಲ್ಲಿ ಹೊಸ ಪಯಣಕ್ಕೆ ನಾಂದಿ ಹಾಡಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

ಭಾರತೀಯ ಚಿತ್ರರಂಗಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಅನಂತ್ ನಾಗ್ ಅವರಿಗೆ 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

ಅತ್ಯುತ್ತಮ ಚಲನಚಿತ್ರದಿಂದ ಅತ್ಯುತ್ತಮ ನಟ ಮತ್ತು ನಟಿಯವರೆಗೆ, ಚಿತ್ರರಂಗದ ಶ್ರೇಷ್ಠ ಸಾಧನೆಗಳು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನಾವರಣಗೊಳ್ಳಲಿವೆ

ಪ್ರಕಟಣಾ ದಿನಾಂಕ: 21 SEP 2026 3:10PM by PIB Bengaluru

ವೇದಿಕೆ ಸಜ್ಜಾಗಿದೆ, ದೀಪಗಳು ಸಿದ್ಧವಾಗಿವೆ, ಮತ್ತು ಭಾರತೀಯ ಚಿತ್ರರಂಗದ ಅತ್ಯುತ್ತಮ ಸಾಧನೆಗಳ ಮೇಲೆ ಬೆಳಕು ಚೆಲ್ಲಲು ಕ್ಷಣಗಣನೆ ಆರಂಭವಾಗಿದೆ. 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು 2026ರ ಸೆಪ್ಟೆಂಬರ್ 22ರಂದು ಗುಜರಾತ್‌ನ ಕೆವಾಡಿಯಾದ ಏಕತಾ ನಗರದಲ್ಲಿ ನಡೆಯಲಿದ್ದು, ಇದಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿವೆ. ಗೌರವಾನ್ವಿತ ರಾಷ್ಟ್ರಪತಿಯವರು 2024ನೇ ಸಾಲಿನಲ್ಲಿ ಭಾರತೀಯ ಚಿತ್ರರಂಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಗೌರವಗಳಲ್ಲಿ ಒಂದಾಗಿವೆ. 1954ರಲ್ಲಿ ಸ್ಥಾಪನೆಯಾದ ಈ ಪ್ರಶಸ್ತಿಗಳು, ವಿವಿಧ ಭಾಷೆಗಳು, ಪ್ರದೇಶಗಳು ಮತ್ತು ಚಲನಚಿತ್ರ ನಿರ್ಮಾಣದ ವಿವಿಧ ಪ್ರಕಾರಗಳನ್ನು ಒಳಗೊಂಡಂತೆ, ಫೀಚರ್‌ ಫಿಲ್ಮ್, ನಾನ್‌ ಫೀಚರ್‌ ಫಿಲ್ಮ್ ಮತ್ತು ಚಲನಚಿತ್ರ ಕುರಿತ ಬರಹಗಳ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆಗಳನ್ನು ಗುರುತಿಸಿ ಗೌರವಿಸುತ್ತವೆ.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

ಭಾರತೀಯ ಚಿತ್ರರಂಗಕ್ಕೆ ನೀಡಿದ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಹಿರಿಯ ನಟ ಅನಂತ್ ನಾಗ್ ಅವರಿಗೆ 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. 2026ರ ಸೆಪ್ಟೆಂಬರ್ 22ರಂದು ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವಾನ್ವಿತ ರಾಷ್ಟ್ರಪತಿಯವರು ಅವರಿಗೆ ಈ ಪ್ರತಿಷ್ಠಿತ ಗೌರವವನ್ನು ಪ್ರದಾನ ಮಾಡಲಿದ್ದಾರೆ.

ಐದು ದಶಕಗಳಿಗೂ ಹೆಚ್ಚು ಕಾಲದ ಚಲನಚಿತ್ರ ಜೀವನ ಹೊಂದಿರುವ ಅನಂತನಾಗ್ ಅವರು ತಮ್ಮ ವೈವಿಧ್ಯಮಯ ಅಭಿನಯದ ಮೂಲಕ ಕನ್ನಡ ಮತ್ತು ಭಾರತೀಯ ಚಿತ್ರರಂಗಕ್ಕೆ ಚಿರಸ್ಮರಣೀಯ ಕೊಡುಗೆ ನೀಡಿದ್ದಾರೆ. ಅವರ ಗಮನಾರ್ಹ ಕಲಾಯಾನ ಮತ್ತು ಭಾರತೀಯ ಚಿತ್ರರಂಗದ ಶ್ರೀಮಂತ ಪರಂಪರೆಗೆ ಅವರು ನೀಡಿದ ನಿರಂತರ ಕೊಡುಗೆಯನ್ನು ಈ ಗೌರವವು ಸ್ಮರಿಸುತ್ತದೆ.

ಭಾರತೀಯ ಚಿತ್ರರಂಗದ ಶ್ರೇಷ್ಠ ಸಾಧನೆಗಳ ಸಂಭ್ರಮ

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭವು ದೇಶದ ವಿವಿಧ ಭಾಗಗಳ ಅತ್ಯುತ್ತಮ ಚಲನಚಿತ್ರಗಳು, ಕಲಾವಿದರು ಮತ್ತು ಸೃಜನಶೀಲ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸುತ್ತದೆ.

‘ಆರ್ಟಿಕಲ್ 370’ ಚಿತ್ರವನ್ನು ಅತ್ಯುತ್ತಮ ಫೀಚರ್‌ ಫಿಲ್ಮ್‌ ಆಗಿ ಆಯ್ಕೆಯಾಗಿದ್ದರೆ, ‘ಭಂಗಾರ್’ ಚಿತ್ರವು ಅತ್ಯುತ್ತಮ ನಾನ್‌ ಫೀಚರ್‌ ಫಿಲ್ಮ್‌ ಹಾಗೂ ‘ರಾಮ್-ನಾಮಿ’ ಅತ್ಯುತ್ತಮ ಸಾಕ್ಷ್ಯಚಿತ್ರವಾಗಿ ಆಯ್ಕೆಯಾಗಿವೆ.

ಅಭಿನಯ ವಿಭಾಗದಲ್ಲಿ, ಭ್ರಮಾಯುಗಂ ಚಿತ್ರದಲ್ಲಿನ ಅಭಿನಯಕ್ಕಾಗಿ ಮಮ್ಮೂಟ್ಟಿ ಮತ್ತು ಚಂದು ಚಾಂಪಿಯನ್ ಚಿತ್ರದಲ್ಲಿನ ಅಭಿನಯಕ್ಕಾಗಿ ಕಾರ್ತಿಕ್ ಆರ್ಯನ್ ಅವರು ಅತ್ಯುತ್ತಮ ನಾಯಕ ನಟ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಆರ್ಟಿಕಲ್ 370 ಚಿತ್ರದಲ್ಲಿನ ಅಭಿನಯಕ್ಕಾಗಿ ಯಾಮಿ ಗೌತಮ್ ಅವರು ಅತ್ಯುತ್ತಮ ನಾಯಕ ನಟಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ಸ್ವಾತಂತ್ರ್ಯ ವೀರ್ ಸಾವರ್ಕರ್ ಚಿತ್ರಕ್ಕಾಗಿ ರಣದೀಪ್ ಹೂಡಾ ಅವರನ್ನು ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಭಾರತೀಯ ಚಿತ್ರರಂಗದ ವೈವಿಧ್ಯತೆ ಮತ್ತು ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವಂತೆ, ವಿವಿಧ ವಿಭಾಗಗಳಲ್ಲಿ ಇನ್ನೂ ಅನೇಕ ಚಲನಚಿತ್ರಗಳು ಮತ್ತು ಕಲಾವಿದರನ್ನು ಗೌರವಿಸಲಾಗುವುದು.

'ಕಲ್ಕಿ 2898 ಎಡಿ', 'ಅಮರನ್', 'ಪುಷ್ಪ: ದಿ ರೂಲ್ ಪಾರ್ಟ್-02', 'ಭೂಲ್ ಭುಲೈಯಾ 3' ಮತ್ತು 'ಸ್ತ್ರೀ 2' ಸೇರಿದಂತೆ ಹಲವಾರು ಚಿತ್ರಗಳು ವಿವಿಧ ವಿಭಾಗಗಳಲ್ಲಿ ಗೌರವಗಳನ್ನು ಪಡೆಯಲಿವೆ.

ಪ್ರಶಸ್ತಿ ಪುರಸ್ಕೃತರು ಮತ್ತು ತೀರ್ಪುಗಾರರ ಸಂಪೂರ್ಣ ಪಟ್ಟಿಯನ್ನು ವೀಕ್ಷಿಸಿ

ಭಾರತದಾದ್ಯಂತ ಪಯಣಿಸಲಿರುವ ಸಂಭ್ರಮ

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಭಾರತೀಯ ಚಿತ್ರರಂಗದ ಸಂಭ್ರಮಾಚರಣೆಯಲ್ಲಿ ಹೊಸ ಅಧ್ಯಾಯಕ್ಕೂ ನಾಂದಿ ಹಾಡಲಿವೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಗುಜರಾತ್‌ನ ಏಕತಾ ನಗರದಲ್ಲಿ ಆಯೋಜಿಸಲಾಗುತ್ತಿದ್ದು, ಈ ಮೂಲಕ ರಾಷ್ಟ್ರೀಯ ರಾಜಧಾನಿಯಿಂದಾಚೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಸಂಭ್ರಮವನ್ನು ಕೊಂಡೊಯ್ಯಲಾಗುತ್ತಿದೆ.

ಮುಂದಿನ ವರ್ಷಗಳಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಸಂಭ್ರಮವನ್ನು ದೇಶದ ವಿವಿಧ ಭಾಗಗಳಿಗೆ ಕೊಂಡೊಯ್ಯಲು ವಾರ್ತಾ ಮತ್ತು ಪ್ರಸಾರ ಸಚಿವಾಲಯ ನಿರ್ಧರಿಸಿದೆ. ಈ ಉಪಕ್ರಮದ ಮೂಲಕ ಭಾರತೀಯ ಚಿತ್ರರಂಗದ ಸಂಭ್ರಮವನ್ನು ವಿವಿಧ ಪ್ರದೇಶಗಳ ಜನರಿಗೆ ಇನ್ನಷ್ಟು ಹತ್ತಿರವಾಗಿಸುವುದರ ಜೊತೆಗೆ, ದೇಶದ ಶ್ರೀಮಂತ ಸಾಂಸ್ಕೃತಿಕ ಮತ್ತು ಚಲನಚಿತ್ರ ವೈವಿಧ್ಯತೆಯನ್ನು ಅನಾವರಣಗೊಳಿಸಲಾಗುವುದು.

ಸಿದ್ಧತೆಗಳು ಪೂರ್ಣಗೊಂಡಿದ್ದು, ವೇದಿಕೆ ಸಜ್ಜಾಗಿರುವ ಸಂದರ್ಭದಲ್ಲಿ, 2026ರ ಸೆಪ್ಟೆಂಬರ್ 22ರಂದು ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದತ್ತ ಎಲ್ಲರ ಗಮನ ನೆಟ್ಟಿದೆ. ಈ ಸಂದರ್ಭದಲ್ಲಿ ಚಲನಚಿತ್ರ ನಿರ್ದೇಶಕರು, ನಟರು, ತಂತ್ರಜ್ಞರು ಮತ್ತು ಭಾರತೀಯ ಚಿತ್ರರಂಗದ ಇತರ ಸದಸ್ಯರು ಏಕತಾ ನಗರದಲ್ಲಿ ಒಂದೆಡೆ ಸೇರಲಿದ್ದಾರೆ.

ವೇದಿಕೆ ಸಜ್ಜಾಗಿದೆ. ತಾರೆಯರು ತಯಾರಾಗಿದ್ದಾರೆ. ಭಾರತೀಯ ಚಿತ್ರರಂಗ ಸಂಭ್ರಮಿಸಲು ಸಿದ್ಧವಾಗಿದೆ.

 

*****

 


(ಪ್ರಕಟಣೆ ಐ.ಡಿ.: 2313002) ವಿಸಿಟರ್ ಕೌಂಟರ್ : 20
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati , Tamil , Telugu , Kannada