ರೈಲ್ವೇ ಸಚಿವಾಲಯ
azadi ka amrit mahotsav

ಭಾರತೀಯ ರೈಲ್ವೆಯಲ್ಲಿ ಸ್ವಚ್ಛತೆಯನ್ನು ವ್ಯವಸ್ಥೆಯಲ್ಲಿ ಶಾಶ್ವತವಾಗಿ ಅಳವಡಿಸಲು ಮತ್ತು ಬಾಕಿ ಇರುವ ವಿಷಯಗಳ ವಿಲೇವಾರಿಗಾಗಿ ʻವಿಶೇಷ ಅಭಿಯಾನ 6ʼ ಕ್ಕೆ ಸಿದ್ಧತೆಗಳು ಪ್ರಗತಿಯಲ್ಲಿವೆ


ಇ-ತ್ಯಾಜ್ಯ ವಿಲೇವಾರಿ, ಗುಜರಿ ವಿಲೇವಾರಿ, ಸ್ಥಳ ನಿರ್ವಹಣೆ ಮತ್ತು ಬಾಕಿ ಇರುವ ವಿಷಯಗಳ ವಿಲೇವಾರಿಗೆ ವಿಶೇಷ ಗಮನ

ಅಭಿಯಾನದ ಚಟುವಟಿಕೆಗಳ ಮೇಲ್ವಿಚಾರಣೆ ಮತ್ತು ಸಮನ್ವಯಕ್ಕಾಗಿ 150 ಕ್ಕೂ ಹೆಚ್ಚು ನೋಡಲ್ ಅಧಿಕಾರಿಗಳ ನೇಮಕ

ಪ್ರಕಟಣಾ ದಿನಾಂಕ: 21 SEP 2026 1:32PM by PIB Bengaluru

ಸರ್ಕಾರಿ ಕಚೇರಿಗಳಲ್ಲಿ ಸ್ವಚ್ಛತೆಯನ್ನು ವ್ಯವಸ್ಥೆಯಲ್ಲಿ ಶಾಶ್ವತವಾಗಿ ಅಳವಡಿಸಲು ಮತ್ತು ಬಾಕಿ ಉಳಿದಿರುವ ಕಾರ್ಯಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಭಾರತ ಸರ್ಕಾರವು ʻವಿಶೇಷ ಅಭಿಯಾನ 6ʼ ಅನ್ನು ಪ್ರಾರಂಭಿಸಿದೆ. ಈ ಅಭಿಯಾನವನ್ನು ಎರಡು ಹಂತಗಳಲ್ಲಿ ವಿನ್ಯಾಸಗೊಳಿಸಲಾಗಿದೆ: ಗುರಿಗಳನ್ನು ನಿಗದಿಪಡಿಸಲು ಸೆಪ್ಟೆಂಬರ್ 15 ರಿಂದ 30, 2026 ರವರೆಗೆ ಸಿದ್ಧತಾ ಹಂತ, ತದನಂತರ ಅಕ್ಟೋಬರ್ 2 ರಿಂದ 31, 2026 ರವರೆಗೆ ಮುಖ್ಯ ಅನುಷ್ಠಾನ ಹಂತ ಇರಲಿದೆ.

ಹಿಂದಿನ ಅಭಿಯಾನ 5.0 ರ ಅವಧಿಯಲ್ಲಿ, ರೈಲ್ವೆ ಸಚಿವಾಲಯವು ಸಾರ್ವಜನಿಕ ಕುಂದುಕೊರತೆಗಳು, ವಿ.ಐ.ಪಿ  ಮನವಿಗಳು ಮತ್ತು ಇತರ ಬಾಕಿ ಇರುವ ವಿಷಯಗಳ ವಿಲೇವಾರಿಗೆ ಸಂಬಂಧಿಸಿದಂತೆ ಗುರುತಿಸಲಾದ ಗುರಿಗಳಲ್ಲಿ 100% ಸಾಧನೆ ಮಾಡುವ ಮೂಲಕ ಗಮನಾರ್ಹ ಪ್ರಗತಿಯನ್ನು ಪ್ರದರ್ಶಿಸಿತ್ತು. ಈ ಪೈಕಿ 6.06 ಲಕ್ಷ ಚದರ ಅಡಿ ಸ್ಥಳವನ್ನು ಮುಕ್ತಗೊಳಿಸಿದ್ದು ಮತ್ತು ₹570 ಕೋಟಿ ಆದಾಯವನ್ನು ಗಳಿಸಿದ್ದು ಗಮನಾರ್ಹ ಸಾಧನೆಗಳಾಗಿದ್ದವು.

ರೈಲ್ವೆ ಸಚಿವಾಲಯವು ತನ್ನ ಎಲ್ಲಾ ಕ್ಷೇತ್ರ ಘಟಕಗಳು, ಸಂಬಂಧಪಟ್ಟ ಮತ್ತು ಅಧೀನ ಕಚೇರಿಗಳು, ಸಾರ್ವಜನಿಕ ವಲಯದ ಉದ್ಯಮಗಳು (ಪಿಎಸ್ ಯು) ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ 'ಬಾಕಿ ಇರುವ ವಿಷಯಗಳ ವಿಲೇವಾರಿಗಾಗಿ ವಿಶೇಷ ಅಭಿಯಾನ 6' (ಎಸ್ ಸಿ ಡಿ ಪಿ ಎಂ6) ಅನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಂಪೂರ್ಣವಾಗಿ ಸಜ್ಜಾಗಿದೆ. ಈ ಅಭಿಯಾನಕ್ಕೆ ಅತ್ಯುನ್ನತ ಆದ್ಯತೆ ನೀಡಲು ರೈಲ್ವೆ ಮಂಡಳಿಯು ಸಿದ್ಧತೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ತಳಮಟ್ಟದ ಸಿಬ್ಬಂದಿಯನ್ನು ಸಜ್ಜುಗೊಳಿಸಲು, ಅಭಿಯಾನದ ಸ್ಥಳಗಳನ್ನು ಗುರುತಿಸಲು ಮತ್ತು ಸ್ಥಳ ನಿರ್ವಹಣೆಗೆ ಯೋಜನೆ ರೂಪಿಸಲು ಆಡಳಿತಾತ್ಮಕ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆಯ (ಡಿಎ ಆರ್ ಪಿ ಜಿ) ವಿವರವಾದ ಮಾರ್ಗಸೂಚಿಗಳನ್ನು ಎಲ್ಲಾ ಕ್ಷೇತ್ರ ಘಟಕಗಳಿಗೆ ರವಾನಿಸಲಾಗಿದೆ. ಈ ಸಂಬಂಧ ರೈಲ್ವೆ ಮಂಡಳಿಯ ಕಾರ್ಯದರ್ಶಿಯವರಿಂದ ಎಲ್ಲಾ ಜನರಲ್ ಮ್ಯಾನೇಜರ್ಗಳು (ವ್ಯವಸ್ಥಾಪಕರು) ಮತ್ತು ಇತರ ಘಟಕಗಳ ಮುಖ್ಯಸ್ಥರಿಗೆ ಡಿ.ಒ. ಪತ್ರವನ್ನೂ ಹೊರಡಿಸಲಾಗಿದೆ.

ಪೂರ್ಣ ಪ್ರಮಾಣದ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ವಲಯ ರೈಲ್ವೆಗಳು, ವಿಭಾಗೀಯ ಕಚೇರಿಗಳು, ಸಾರ್ವಜನಿಕ ವಲಯದ ಉದ್ಯಮಗಳು , ಉತ್ಪಾದನಾ ಘಟಕಗಳು ಮತ್ತು ಕೇಂದ್ರೀಯ ತರಬೇತಿ ಸಂಸ್ಥೆಗಳಿಗೆ ವಿವರವಾದ ಸೂಚನೆಗಳನ್ನು ನೀಡಲಾಗಿದೆ. ಭಾರತೀಯ ರೈಲ್ವೆಯಾದ್ಯಂತ ಈ ಕಾರ್ಯವನ್ನು ಸಮನ್ವಯಗೊಳಿಸಲು 150ಕ್ಕೂ ಹೆಚ್ಚು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಇವರು ಪ್ರತಿದಿನ ಪ್ರಗತಿಯ ಮಾಹಿತಿಯನ್ನು ಸಂಗ್ರಹಿಸಿ ರೈಲ್ವೆ ಮಂಡಳಿಗೆ ಕಳುಹಿಸಲಿದ್ದಾರೆ. ಇದು ಡಿ.ಎ.ಆರ್.ಪಿ.ಜಿ.ಯ ಕೇಂದ್ರೀಯ ಎಸ್ ಸಿ ಡಿ ಪಿ ಎಂ ಮೇಲ್ವಿಚಾರಣಾ ಪೋರ್ಟಲ್ ಗೆ ನೇರವಾಗಿ ತಲುಪಲಿದ್ದು, ನೈಜ-ಸಮಯದ ಪ್ರಗತಿ ಪರಿಶೀಲನೆ (ಟ್ರ್ಯಾಕಿಂಗ್) ಮತ್ತು ವಾರಕ್ಕೊಮ್ಮೆ ಉನ್ನತ ಮಟ್ಟದ ಪರಾಮರ್ಶೆಗೆ ಅನುಕೂಲವಾಗಲಿದೆ.

ಸಿದ್ಧತಾ ಹಂತವು ಈಗ ಪ್ರಗತಿಯಲ್ಲಿರುವುದರಿಂದ, ಪ್ರಮುಖ ಅಭಿಯಾನದ ಮಾನದಂಡಗಳಿಗೆ ಸಂಬಂಧಿಸಿದಂತೆ ಗುರಿಗಳನ್ನು ಅಂತಿಮಗೊಳಿಸಲಾಗುತ್ತಿದೆ. ಈ ವರ್ಷದ ಆದ್ಯತೆಗೆ ಅನುಗುಣವಾಗಿ, ಇ-ತ್ಯಾಜ್ಯ (ನಿರ್ವಹಣೆ) ನಿಯಮಗಳು, 2022 ರ ಅನ್ವಯ "ಇ-ತ್ಯಾಜ್ಯದ ಪರಿಣಾಮಕಾರಿ ಸಂಗ್ರಹಣೆ, ಪ್ರತ್ಯೇಕೀಕರಣ ಮತ್ತು ವಿಲೇವಾರಿ", ಸಾಮಾನ್ಯ ಹಣಕಾಸು ನಿಯಮಗಳ (ಜಿ ಎಫ್ ಆರ್) ಅಡಿಯಲ್ಲಿ ಗುಜರಿ ವಿಲೇವಾರಿ, ಕಚೇರಿ ಸ್ಥಳದ ಸೌಂದರ್ಯೀಕರಣ, ಪ್ರಕ್ರಿಯೆ ಮತ್ತು ನಿಯಮಗಳ ಸರಳೀಕರಣ ಮತ್ತು ಬಾಕಿ ಇರುವ ವಿಷಯಗಳ ವಿಲೇವಾರಿಗೆ ವಿಶೇಷ ಒತ್ತು ನೀಡಲಾಗುತ್ತಿದೆ.

'ರೈಲ್ ಚೌಪಾಲ್' (ಎಸ್ ಸಿ ಡಿ ಪಿ ಎಂ 4.0) ಮತ್ತು 'ಅಮೃತ್ ಸಂವಾದ್' (ಎಸ್ ಸಿ ಡಿ ಪಿ ಎಂ  5.0) ನ ಯಶಸ್ವಿ ಆಯೋಜನೆಯ ನಂತರ, ಸಾರ್ವಜನಿಕರ ಜೊತೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು ಮತ್ತು ನಾಗರಿಕರೊಂದಿಗೆ ಅರ್ಥಪೂರ್ಣ ಸಂವಾದವನ್ನು ಬೆಳೆಸಲು ಸಚಿವಾಲಯವು ಎಸ್ ಸಿ ಡಿ ಪಿ ಎಂ 6 ರ ಅವಧಿಯಲ್ಲಿ "ರೈಲ್ ಜನ ಸಂವಾದ್" (ರೈಲು ಜನ ಸಂವಾದ) ಅನ್ನು ಆಯೋಜಿಸಲಿದೆ.

ಸ್ವಚ್ಛತೆಯನ್ನು ದಿನನಿತ್ಯದ ಕಾರ್ಯಾಚರಣೆಯ ಮಾನದಂಡವಾಗಿ ಅಳವಡಿಸಿಕೊಳ್ಳುವ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತಿರುವ ರೈಲ್ವೆ ಸಚಿವಾಲಯವು, ತಡೆರಹಿತ ಸಾರ್ವಜನಿಕರೊಂದಿಗಿನ ಸಂಪರ್ಕ ಮತ್ತು ಬಾಕಿ ಇರುವ ವಿಷಯಗಳ ತ್ವರಿತ ವಿಲೇವಾರಿಗೆ ಆದ್ಯತೆ ನೀಡುವುದನ್ನು ಮುಂದುವರಿಸಿದೆ. ಎಲ್ಲಾ ಘಟಕಗಳಲ್ಲಿ ಸಂಯೋಜಿತ ಯೋಜನೆ ಮತ್ತು ಸಮರ್ಪಿತ ಭಾಗವಹಿಸುವಿಕೆಯೊಂದಿಗೆ, ಸಚಿವಾಲಯವು ʻವಿಶೇಷ ಅಭಿಯಾನ 6ʼ ಅನ್ನು ಅಭೂತಪೂರ್ವ ಯಶಸ್ಸಾಗಿ ಮಾಡುವ ಗುರಿ ಹೊಂದಿದೆ.

 

*****


(ಪ್ರಕಟಣೆ ಐ.ಡಿ.: 2312944) ವಿಸಿಟರ್ ಕೌಂಟರ್ : 13
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati , Tamil , Telugu , Kannada