ಗೃಹ ವ್ಯವಹಾರಗಳ ಸಚಿವಾಲಯ
ಸೆಪ್ಟೆಂಬರ್ 22 ರಂದು ನವದೆಹಲಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎ ಎನ್ ಟಿ ಎಫ್ ಮುಖ್ಯಸ್ಥರ 3ನೇ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಲಿರುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ
ಲಕ್ನೋ ಮತ್ತು ಡೆಹ್ರಾಡೂನ್ ನಲ್ಲಿ ಎನ್ ಸಿ ಬಿ ವಲಯ ಸಂಕೀರ್ಣಗಳಿಗೆ ಶಂಕುಸ್ಥಾಪನೆ ನೆರವೇರಿಸಲಿರುವ ಗೃಹ ಸಚಿವರಾದ ಶ್ರೀ ಅಮಿತ್ ಶಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ದೇಶದ ಯುವಕರನ್ನು ಮಾದಕದ್ರವ್ಯದ ದುಷ್ಪರಿಣಾಮಗಳಿಂದ ರಕ್ಷಿಸಲು ಭಾರತ ಸರ್ಕಾರವು 'ಮಿಷನ್ ಮೋಡ್'ನಲ್ಲಿ ಕಾರ್ಯನಿರ್ವಹಿಸುತ್ತಿದೆ
ಪ್ರಧಾನಮಂತ್ರಿ ಮೋದಿ ಅವರು 2047ರ ವೇಳೆಗೆ 'ವಿಕಸಿತ ಭಾರತ'ದ ಗುರಿಯನ್ನು ಹೊಂದಿದ್ದಾರೆ. ಮಾದಕದ್ರವ್ಯ ಮುಕ್ತ ಭಾರತವನ್ನು ನಿರ್ಮಿಸದೆ ವಿಕಸಿತ ಭಾರತವನ್ನು ನಿರ್ಮಿಸಲು ಸಾಧ್ಯವಿಲ್ಲ
ಮಾದಕದ್ರವ್ಯ ನಿಯಂತ್ರಣದ ದೂರದೃಷ್ಟಿ ದಾಖಲೆ (2026-2029) ಯಲ್ಲಿ ನಿಗದಿಪಡಿಸಲಾದ ಗುರಿಗಳನ್ನು ಸಾಧಿಸುವಲ್ಲಿ ಎ ಎನ್ ಟಿ ಎಫ್ ಗಳ ಪಾತ್ರದ ಮೇಲೆ ಗಮನ ಹರಿಸಲಿರುವ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ
ಮಾದಕದ್ರವ್ಯ ಜಾಲಗಳನ್ನು ಧ್ವಂಸಗೊಳಿಸುವುದು, ಸಿಂಥೆಟಿಕ್ ಮಾದಕವಸ್ತುಗಳು ಮತ್ತು ಅಕ್ರಮ ಪ್ರಯೋಗಾಲಯಗಳನ್ನು ಎದುರಿಸುವುದು ಹಾಗೂ ಡಾರ್ಕ್ ನೆಟ್ ಮತ್ತು ಕ್ರಿಪ್ಟೋಗೆ ಸಂಬಂಧಿಸಿದ ತನಿಖೆಗಳು ಚರ್ಚೆಯ ಪ್ರಮುಖ ಕಾರ್ಯಸೂಚಿಯಲ್ಲಿವೆ
ಪ್ರಕಟಣಾ ದಿನಾಂಕ:
21 SEP 2026 12:53PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮಂಗಳವಾರ, 22 ಸೆಪ್ಟೆಂಬರ್ 2026ರಂದು ನವದೆಹಲಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಾದಕದ್ರವ್ಯ ವಿರೋಧಿ ಕಾರ್ಯಪಡೆ (ಎ ಎನ್ ಟಿ ಎಫ್) ಮುಖ್ಯಸ್ಥರ 3ನೇ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಅಮಿತ್ ಶಾ ಅವರು ಮಾದಕದ್ರವ್ಯದ ವಿರುದ್ಧ ಜಾಗೃತಿ ಮೂಡಿಸಲು ಟಿವಿ ಜಾಹೀರಾತುಗಳನ್ನು ಬಿಡುಗಡೆ ಮಾಡಲಿದ್ದಾರೆ ಮತ್ತು ಲಕ್ನೋ ಮತ್ತು ಡೆಹ್ರಾಡೂನಿನಲ್ಲಿ ಮಾದಕವಸ್ತು ನಿಯಂತ್ರಣ ಬ್ಯೂರೋ (ಎನ್ ಸಿ ಬಿ) ವಲಯಗಳ ನೂತನ ಸಂಕೀರ್ಣಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಎ ಎನ್ ಟಿ ಎಫ್ ಗಳನ್ನು ಸನ್ಮಾನಿಸಲಾಗುವುದು ಮತ್ತು ನವೀಕರಿಸಿದ ಎನ್ ಸಿ ಬಿ ಜಾಲತಾಣವನ್ನು ಉದ್ಘಾಟಿಸಲಾಗುವುದು. ಎನ್ ಸಿಬಿ ಆಯೋಜಿಸಿರುವ ಈ ಎರಡು ದಿನಗಳ ಸಮ್ಮೇಳನದಲ್ಲಿ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಎನ್ ಟಿಎಫ್ ಮುಖ್ಯಸ್ಥರು, ಇತರ ಸಂಬಂಧಿತ ಸರ್ಕಾರಿ ಇಲಾಖೆಗಳು ಮತ್ತು ಪಾಲುದಾರರ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ದೇಶದ ಯುವಜನತೆಯನ್ನು ಮಾದಕದ್ರವ್ಯದ ದುಷ್ಪರಿಣಾಮಗಳಿಂದ ರಕ್ಷಿಸಲು ಭಾರತ ಸರ್ಕಾರವು 'ಮಿಷನ್ ಮೋಡ್'ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಧಾನಮಂತ್ರಿ ಮೋದಿ ಅವರು 2047ರ ವೇಳೆಗೆ 'ವಿಕಸಿತ ಭಾರತ'ದ ಗುರಿಯನ್ನು ಹೊಂದಿದ್ದು, ಮಾದಕದ್ರವ್ಯ ಮುಕ್ತ ಭಾರತವನ್ನು ನಿರ್ಮಿಸದೆ ಈ ಕನಸನ್ನು ನನಸಾಗಿಸಲು ಸಾಧ್ಯವಿಲ್ಲ. ಈ ಸಮ್ಮೇಳನವು ಮುಂದಿನ ಪೀಳಿಗೆಯನ್ನು ಮಾದಕದ್ರವ್ಯದ ಪಿಡುಗಿನಿಂದ ರಕ್ಷಿಸಲು ಒಂದು ಶಕ್ತಿಯುತ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ.
"ಒಗ್ಗೂಡಿದ ಸಂಕಲ್ಪ, ಎಲ್ಲರ ಒಂದೇ ಜವಾಬ್ದಾರಿ" ಎಂಬ ವಿಷಯದ ಆಧಾರದ ಮೇಲೆ, ಈ ಸಮ್ಮೇಳನವು ಇತ್ತೀಚೆಗೆ ಬಿಡುಗಡೆಯಾದ ಮಾದಕದ್ರವ್ಯ ನಿಯಂತ್ರಣದ ದೂರದೃಷ್ಟಿ ದಾಖಲೆ (2026-29)ಯಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಎ ಎನ್ ಟಿ ಎಫ್ ಗಳಿಗೆ ವಹಿಸಲಾದ ಗುರಿಗಳ ಪ್ರಗತಿಯ ಬಗ್ಗೆ ಹಾಗೂ ದೇಶಾದ್ಯಂತ ಮಾದಕದ್ರವ್ಯ ಕಳ್ಳಸಾಗಣೆ ಮತ್ತು ದುರ್ಬಳಕೆಯನ್ನು ತಡೆಯಲು ಸಂಬಂಧಪಟ್ಟ ಪಾಲುದಾರರು ಕೈಗೊಂಡಿರುವ ಉಪಕ್ರಮಗಳು ಮತ್ತು ಪ್ರಯತ್ನಗಳ ಮೇಲೆ ಗಮನ ಹರಿಸಲಿದೆ. ಭಾರತ ಸರ್ಕಾರದ ಪೂರೈಕೆ ಕಡಿತ, ಬೇಡಿಕೆ ಕಡಿತ ಮತ್ತು ಹಾನಿಯನ್ನು ತಗ್ಗಿಸುವ ಕ್ರಮಗಳನ್ನು ಮತ್ತಷ್ಟು ಬಲಪಡಿಸಲು ಸೂಕ್ತ ತಂತ್ರಗಳನ್ನು ಗುರುತಿಸುವ ಮತ್ತು ಅಳವಡಿಸಿಕೊಳ್ಳುವ ವಿಷಯಗಳ ಕುರಿತಾಗಿಯೂ ಚರ್ಚಿಸಲಾಗುವುದು.
ದೂರದೃಷ್ಟಿ ದಾಖಲೆಯ ನಾಲ್ಕು ಆಯಕಟ್ಟಿನ ಆಧಾರಸ್ತಂಭಗಳಾದ— (I) ಜಾರಿ, ಗುಪ್ತಚರ ಮತ್ತು ಕಾರ್ಯಾಚರಣೆಗಳು, (II) ಪೂರ್ವಗಾಮಿ ದ್ರವ್ಯಗಳು ಮತ್ತು ಸಿಂಥೆಟಿಕ್ ಮಾದಕವಸ್ತುಗಳ ನಿಯಂತ್ರಣ, (III) ಬೇಡಿಕೆ ಮತ್ತು ಹಾನಿ ತಗ್ಗಿಸುವಿಕೆ, ಮತ್ತು (IV) ಸಾಮರ್ಥ್ಯ ವೃದ್ಧಿ ಹಾಗೂ ಸಮನ್ವಯತೆ— ಇವುಗಳಿಗೆ ಅನುಗುಣವಾಗಿ ಕಾರ್ಯಕ್ರಮಕ್ಕಾಗಿ ಎಂಟು ತಾಂತ್ರಿಕ ಅಧಿವೇಶನಗಳನ್ನು ಆಯೋಜಿಸಲಾಗಿದೆ. ಅವುಗಳು ಈ ಕೆಳಗಿನಂತಿವೆ:
1. ಮಾದಕದ್ರವ್ಯ ನಿಯಂತ್ರಣದ ದೂರದೃಷ್ಟಿ ದಾಖಲೆ (2026-2029)- ಭಾಗ-I: ಸಾಂಸ್ಥಿಕ ಕಾರ್ಯವಿಧಾನಗಳು
2. ಜಾಲ ಸಂಪರ್ಕಗಳು ಮತ್ತು ಅಕ್ರಮ ಜಾಲಗಳ ನಿರ್ಮೂಲನೆ – ಭಾಗ: I
3. ಮಾದಕದ್ರವ್ಯ ನಿಯಂತ್ರಣದ ದೂರದೃಷ್ಟಿ ದಾಖಲೆ (2026-2029)- ಭಾಗ-II: ಬೇಡಿಕೆ ಕಡಿತ, ತಡೆಗಟ್ಟುವಿಕೆ ಮತ್ತು ಪುನರ್ವಸತಿ
4. ಜಾಲದ ಸಂಪರ್ಕಗಳು ಮತ್ತು ಅಕ್ರಮ ಜಾಲಗಳ ನಿರ್ಮೂಲನೆ - ಭಾಗ: II
5. ಕಾನೂನು ಜಾರಿಯ ಪರಿಣಾಮಕಾರಿಯತ್ವವನ್ನು ಸುಧಾರಿಸುವುದು
6. ಪೂರ್ವಗಾಮಿ ರಾಸಾಯನಿಕಗಳು, ಸಿಂಥೆಟಿಕ್ ಮಾದಕವಸ್ತುಗಳು ಮತ್ತು ಅಕ್ರಮ ಪ್ರಯೋಗಾಲಯಗಳು
7. ಕಾನೂನುಬಾಹಿರ ಬೆಳೆಗಳ ನಾಶ ಮತ್ತು ಪರ್ಯಾಯ ಬೆಳೆ ಪದ್ಧತಿ
8. ಡಾರ್ಕ್ ನೆಟ್ ಮತ್ತು ಕ್ರಿಪ್ಟೋ ತನಿಖೆ
ಸಂಪೂರ್ಣ ಸರ್ಕಾರದ ವಿಧಾನದ ಅಗತ್ಯವನ್ನು ಪುನರುಚ್ಚರಿಸುತ್ತಾ, ಈ ಚರ್ಚೆಗಳು ಮುಂಬರುವ ಮೂರು ವರ್ಷಗಳಲ್ಲಿ ದೇಶಾದ್ಯಂತ ಮಾದಕದ್ರವ್ಯ ಕಳ್ಳಸಾಗಣೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಭಾಗವಹಿಸುವ ರಾಜ್ಯಗಳು, ಇಲಾಖೆಗಳು ಮತ್ತು ಸಂಸ್ಥೆಗಳು ನವಚೈತನ್ಯದ ಬದ್ಧತೆಯೊಂದಿಗೆ ಮುನ್ನಡೆಯಲು ನೆರವಾಗಲಿವೆ. ಈ ಚರ್ಚೆಗಳು ಮಾದಕದ್ರವ್ಯ ಕಾನೂನು ಜಾರಿಯನ್ನು ಮತ್ತಷ್ಟು ಬಲಪಡಿಸಲು ಮತ್ತು ದೇಶದ ಯುವಜನತೆಯನ್ನು ಮಾದಕದ್ರವ್ಯದಿಂದ ದೂರವಿಡಲು ಕಾರ್ಯಸಾಧ್ಯವಾದ ತಂತ್ರಗಳನ್ನು ರೂಪಿಸುವ ನಿರೀಕ್ಷೆಯಿದೆ. ಈ ರಾಷ್ಟ್ರೀಯ ಕಾರ್ಯಕ್ರಮವು ಮಾದಕದ್ರವ್ಯ ದುರ್ಬಳಕೆಯ ವಿರುದ್ಧ ಹೋರಾಡಲು ಮತ್ತು 'ಮಾದಕದ್ರವ್ಯ ಮುಕ್ತ ಭಾರತ'ದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಎನ್ ಸಿ ಬಿ ಮತ್ತು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಎ ಎನ್ ಟಿ ಎಫ್ ಗಳ ನಡುವೆ ಭವಿಷ್ಯದ ಪಾಲುದಾರಿಕೆಯನ್ನು ಮತ್ತಷ್ಟು ಆಳವಾಗಿಸಲು ಶ್ರಮಿಸಲಿದೆ.
*****
(ಪ್ರಕಟಣೆ ಐ.ಡಿ.: 2312926)
ವಿಸಿಟರ್ ಕೌಂಟರ್ : 14