ಹಣಕಾಸು ಸಚಿವಾಲಯ
ಡಿಆರ್‌ಐನಿಂದ ದೇಶಾದ್ಯಂತ ಚಿನ್ನದ ಕಳ್ಳಸಾಗಣೆ ವಿರುದ್ಧ ಕಾರ್ಯಾಚರಣೆ ತೀವ್ರ; ಸುಮಾರು ₹62 ಕೋಟಿ ಮೌಲ್ಯದ 41 ಕೆಜಿ ವಿದೇಶಿ ಮೂಲದ ಚಿನ್ನ ವಶ; ಮೂವರು ವಿದೇಶಿಯರು ಸೇರಿ 24 ಮಂದಿ ಬಂಧನ
ವಿಮಾನ ನಿಲ್ದಾಣಗಳು, ರೈಲು ಮಾರ್ಗಗಳು ಹಾಗೂ ಭಾರತ-ಬಾಂಗ್ಲಾದೇಶ ಗಡಿಯ ಮೂಲಕ ಕಾರ್ಯನಿರ್ವಹಿಸುತ್ತಿದ್ದ ಚಿನ್ನ ಕಳ್ಳಸಾಗಣೆಯ ಸಂಘಟಿತ ಜಾಲಗಳು ಮತ್ತು ಅತ್ಯಾಧುನಿಕ ಮರೆಮಾಚುವ ವಿಧಾನಗಳು ಕಾರ್ಯಾಚರಣೆಗಳಿಂದ ಬಯಲಾಗಿವೆ
ಪ್ರಕಟಣಾ ದಿನಾಂಕ:
10 SEP 2026 5:30PM by PIB Bengaluru
ಸಂಘಟಿತ ಚಿನ್ನ ಕಳ್ಳಸಾಗಣೆ ವಿರುದ್ಧದ ತನ್ನ ನಿರಂತರ ಕಾರ್ಯಾಚರಣೆಯನ್ನು ಮುಂದುವರಿಸಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ), ಇತ್ತೀಚಿನ ದಿನಗಳಲ್ಲಿ ಗುಪ್ತಚರ ಮಾಹಿತಿ ಆಧಾರಿತ ಆರು ಕಾರ್ಯಾಚರಣೆಗಳಲ್ಲಿ ಒಟ್ಟು ಸುಮಾರು 41 ಕೆ.ಜಿ. ವಿದೇಶಿ ಮೂಲದ ಚಿನ್ನವನ್ನು ವಶಪಡಿಸಿಕೊಂಡಿದೆ. ಇದರ ಒಟ್ಟು ಮೌಲ್ಯ ಸುಮಾರು ₹62 ಕೋಟಿಯಾಗಿದೆ. ಈ ಕಾರ್ಯಾಚರಣೆಗಳಲ್ಲಿ ಮೂವರು ವಿದೇಶಿ ಪ್ರಜೆಗಳು ಸೇರಿದಂತೆ 24 ಮಂದಿಯನ್ನು ಬಂಧಿಸಲಾಗಿದ್ದು, ವಿಮಾನ ನಿಲ್ದಾಣಗಳು, ರೈಲು ಮಾರ್ಗಗಳು ಹಾಗೂ ಭಾರತ-ಬಾಂಗ್ಲಾದೇಶ ಗಡಿಯ ಮೂಲಕ ಕಾರ್ಯನಿರ್ವಹಿಸುತ್ತಿದ್ದ ಸಂಘಟಿತ ಕಳ್ಳಸಾಗಣೆ ಜಾಲಗಳು ಮತ್ತು ಚಿನ್ನವನ್ನು ಅಡಗಿಸಿಡುವ ಅತ್ಯಂತ ನವೀನ ವಿಧಾನಗಳು ಬಹಿರಂಗವಾಗಿವೆ.
ದೆಹಲಿಯಲ್ಲಿ ನಡೆದ ಪ್ರಮುಖ ಕಾರ್ಯಾಚರಣೆಯಲ್ಲಿ, ವಿದೇಶಿ ಮೂಲದ ಚಿನ್ನವನ್ನು ಖರೀದಿಸಿ ರೂಪಾಂತರಿಸುವ ಚಟುವಟಿಕೆಯಲ್ಲಿ ತೊಡಗಿದ್ದ ವ್ಯಕ್ತಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಡಿಆರ್‌ಐ ಅಧಿಕಾರಿಗಳು 07.09.2026ರಂದು ಏಕಕಾಲದಲ್ಲಿ ಶೋಧ ನಡೆಸಿದರು. ವಸತಿ ಆವರಣದಲ್ಲಿ ಚಿನ್ನವನ್ನು ಕರಗಿಸುವ, ಹಾಳೆಯಾಗಿ ಮಾಡುವ ಹಾಗೂ ಅಚ್ಚಿನ ಮೂಲಕ ಕತ್ತರಿಸುವುದಕ್ಕೆ ಬಳಸುವ ಯಂತ್ರೋಪಕರಣಗಳನ್ನು ಹೊಂದಿರುವ ಉತ್ಪಾದನಾ ಘಟಕ ಪತ್ತೆಯಾಯಿತು. ತಲಾ 1 ಕೆ.ಜಿ. ತೂಕದ ನಾಲ್ಕು ವಿದೇಶಿ ಮೂಲದ ಚಿನ್ನದ ಗಟ್ಟಿಗಳು ಹಾಗೂ ಕಳ್ಳಸಾಗಣೆ ಮಾಡಲಾದ ಚಿನ್ನದ ಗಟ್ಟಿಗಳಿಂದ ತಯಾರಿಸಲಾದ ಸುಮಾರು 6.2 ಕೆ.ಜಿ. ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಯಿತು. ಇದರಿಂದ ವಶಪಡಿಸಿಕೊಂಡ ಒಟ್ಟು ಚಿನ್ನದ ಪ್ರಮಾಣ ಸುಮಾರು 10.2 ಕೆಜಿಗೆ ತಲುಪಿದೆ. ಉತ್ಪಾದನಾ ಘಟಕದ ಮಾಲೀಕನನ್ನು ಬಂಧಿಸಲಾಗಿದೆ.

ದೆಹಲಿಯಲ್ಲಿ ವಶಪಡಿಸಿಕೊಂಡ ನಾಲ್ಕು ವಿದೇಶಿ ಮೂಲದ ಚಿನ್ನದ ಗಟ್ಟಿಗಳು
08.09.2026 ರಂದು ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ, ದೆಹಲಿಯ ಡಿಆರ್‌ಐ ಅಧಿಕಾರಿಗಳು ಪಂಜಾಬ್‌ನಿಂದ ಬರುತ್ತಿದ್ದ ವಾಹನವನ್ನು ತಡೆದು, ಸುಮಾರು ₹43.50 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಯೊಂದಿಗೆ 1.21 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ; ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.
ಇದಕ್ಕೂ ಮೊದಲು, 05-06.09.2026 ರಂದು, ಡಿಆರ್‌ಐ, ಬಿಎಸ್‌ಎಫ್ ಸಹಯೋಗದೊಂದಿಗೆ, ಇಂಡೋ-ಬಾಂಗ್ಲಾದೇಶ ಗಡಿಯ ಬಿಒಪಿ ಹಲ್ದಾರ್‌ಪಾರಾ ಬಳಿ ವ್ಯಕ್ತಿಯೊಬ್ಬನಿಂದ ಸುಮಾರು 11.3 ಕೆಜಿ ತೂಕದ 89 ವಿದೇಶಿ ಮೂಲದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದೆ. ಆ ವ್ಯಕ್ತಿಯು ಕಾನೂನುಬದ್ಧವಾಗಿ ಹೊಂದಿರುವ ದಾಖಲೆಗಳನ್ನು ನೀಡಲು ಸಾಧ್ಯವಾಗದ ಕಾರಣ, ಕಸ್ಟಮ್ಸ್ ಕಾಯಿದೆ, 1962 ರ ಅಡಿಯಲ್ಲಿ ಚಿನ್ನವನ್ನು ವಶಪಡಿಸಿಕೊಳ್ಳಲಾಯಿತು. ಬಂಧಿತ ವ್ಯಕ್ತಿಯು ಕಳ್ಳಸಾಗಣೆಯಲ್ಲಿ ತೊಡಗಿರುವುದಾಗಿ ಒಪ್ಪಿಕೊಂಡಿದ್ದು, ಕಸ್ಟಮ್ಸ್ ಕಾಯಿದೆ, 1962 ರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಆತನನ್ನು ಬಂಧಿಸಲಾಗಿದೆ.

ಭಾರತ-ಬಾಂಗ್ಲಾದೇಶ ಗಡಿಯಲ್ಲಿ ವಶಪಡಿಸಿಕೊಂಡ 11.3 ಕೆ.ಜಿ. ಚಿನ್ನ

ಹೌರಾ ರೈಲು ನಿಲ್ದಾಣದಲ್ಲಿ ವಶಪಡಿಸಿಕೊಂಡ ವಿದೇಶಿ ಮೂಲದ ನಾಲ್ಕು ಚಿನ್ನದ ಗಟ್ಟಿಗಳು
ಪಶ್ಚಿಮ ಬಂಗಾಳದಲ್ಲಿ ನಡೆದ ಮತ್ತೊಂದು ಜಪ್ತಿಯಲ್ಲಿ, 03-04.09.2026 ರಂದು, ಡಿಆರ್‌ಐ ಅಧಿಕಾರಿಗಳು ಹೌರಾ ರೈಲು ನಿಲ್ದಾಣದಲ್ಲಿ ಬೇರೆ ಹೆಸರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನನ್ನು ತಡೆದರು. ದೇಹದ ಸುತ್ತಲೂ ಧರಿಸಿದ್ದ ವಿಶೇಷವಾಗಿ ವಿನ್ಯಾಸಗೊಳಿಸಲಾದ ಬಟ್ಟೆಯ ಬೆಲ್ಟ್‌ನಿಂದ 4.6 ಕೆಜಿ ತೂಕದ ನಾಲ್ಕು ರೂಪಾಂತರಗೊಳಿಸಲಾದ ವಿದೇಶಿ ಮೂಲದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಯಿತು. ಮುಂಬೈಗೆ ತಲುಪಿಸಲು ಈ ಚಿನ್ನವನ್ನು ಕರಗಿಸಿ ಗಟ್ಟಿಗಳಾಗಿ ಮಾರ್ಪಡಿಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಪ್ರಯಾಣಿಕ ಮತ್ತು ಆತನ ಸಹಚರ ಇಬ್ಬರನ್ನೂ ಬಂಧಿಸಲಾಗಿದೆ.
ಮುಂಬೈನಲ್ಲಿ, ಡಿಆರ್‌ಐ ಅಧಿಕಾರಿಗಳು ಪ್ರಯಾಣಿಕರು, ವಿಮಾನ ನಿಲ್ದಾಣದ ಸಿಬ್ಬಂದಿ ಹಾಗೂ ಚಿನ್ನವನ್ನು ಸ್ವೀಕರಿಸುವ/ನಿರ್ವಹಿಸುವ ವ್ಯಕ್ತಿಯನ್ನು ಒಳಗೊಂಡ ಸಂಘಟಿತ ಜಾಲವನ್ನು ಭೇದಿಸಿದ್ದಾರೆ. 09-10.09.2026ರಂದು, ವಿಮಾನ ನಿಲ್ದಾಣದಿಂದ ಕಾರಿನಲ್ಲಿ ರಹಸ್ಯವಾಗಿ ಹೊರಬಂದ ನಂತರ ಸುಮಾರು 50 ಕಿ.ಮೀ. ದೂರದವರೆಗೆ ಬೆನ್ನಟ್ಟಿದ ಬಳಿಕ, ಕಳ್ಳಸಾಗಣೆ ಮಾಡಲಾದ ಚಿನ್ನವನ್ನು ವಿಮಾನ ನಿಲ್ದಾಣದಿಂದ ಸ್ವೀಕರಿಸಿ ರಹಸ್ಯವಾಗಿ ಹೊರತೆಗೆದು ಸಾಗಿಸುವ ಚಟುವಟಿಕೆಯಲ್ಲಿ ತೊಡಗಿದ್ದ ವಿಮಾನ ನಿಲ್ದಾಣದ ಸಿಬ್ಬಂದಿಯೊಬ್ಬರನ್ನು ಡಿಆರ್‌ಐ ಅಧಿಕಾರಿಗಳು ತಡೆದರು. ಶೋಧ ನಡೆಸಿದಾಗ, ಪೇಸ್ಟ್ ರೂಪದಲ್ಲಿ ಚಿನ್ನದ ಪುಡಿ ಹೊಂದಿದ್ದ ಮೂರು ಕ್ಯಾಪ್ಸುಲ್‌ಗಳು ಆತನ ಬಳಿ ಪತ್ತೆಯಾದವು. ತನಿಖೆಯಿಂದ, ಟ್ರಾನ್ಸಿಟ್ ಪ್ರಯಾಣಿಕನೊಬ್ಬ ವಿಮಾನ ನಿಲ್ದಾಣದ ಟ್ರಾನ್ಸಿಟ್ ಪ್ರದೇಶದಲ್ಲಿ ಈ ಚಿನ್ನದ ಕ್ಯಾಪ್ಸುಲ್‌ಗಳನ್ನು ಆತನಿಗೆ ಹಸ್ತಾಂತರಿಸಿದ್ದಾನೆ ಹಾಗೂ ಮತ್ತೊಬ್ಬ ಮಹಿಳಾ ವಿಮಾನ ನಿಲ್ದಾಣ ಸಿಬ್ಬಂದಿಯೂ ಈ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬುದು ತಿಳಿದುಬಂದಿದೆ. ತ್ವರಿತವಾಗಿ ಕೈಗೊಂಡ ಮುಂದಿನ ಕಾರ್ಯಾಚರಣೆಯಲ್ಲಿ, ಪ್ರಯಾಣಿಕರು ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ನಿಲ್ದಾಣದ ಸಿಬ್ಬಂದಿಗೆ ಐದು ಚಿನ್ನದ ಕ್ಯಾಪ್ಸುಲ್‌ಗಳನ್ನು ಹಸ್ತಾಂತರಿಸುತ್ತಿದ್ದಾಗ ಅವರನ್ನು ತಡೆದು ಪರಿಶೀಲಿಸಲಾಯಿತು. ಕಳ್ಳಸಾಗಣೆ ಮಾಡಲಾದ ಚಿನ್ನವನ್ನು ಹಸ್ತಾಂತರಿಸಿದ ಬಳಿಕ ಬ್ಯಾಂಕಾಕ್‌ಗೆ ಮುಂದಿನ ಪ್ರಯಾಣ ಕೈಗೊಳ್ಳಲು ಈ ಟ್ರಾನ್ಸಿಟ್ ಪ್ರಯಾಣಿಕರು ಮಸ್ಕಟ್ ಮತ್ತು ದುಬೈನಿಂದ ಆಗಮಿಸಿದ್ದರು. ಕಳ್ಳಸಾಗಣೆ ಮಾಡಲಾದ ಚಿನ್ನವನ್ನು ವಿಮಾನ ನಿಲ್ದಾಣದಿಂದ ರಹಸ್ಯವಾಗಿ ಹೊರತೆಗೆದ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಮಹಿಳಾ ವಿಮಾನಯಾನ ಸಿಬ್ಬಂದಿ ಹಾಗೂ ಸರಕುಗಳನ್ನು ಸ್ವೀಕರಿಸುವ ವ್ಯಕ್ತಿಯನ್ನೂ ಬಂಧಿಸಲಾಯಿತು.
ಒಟ್ಟಾರೆಯಾಗಿ, 3.47 ಕೆಜಿ ನಿವ್ವಳ ತೂಕದ ಪೇಸ್ಟ್ ರೂಪದಲ್ಲಿ ಚಿನ್ನದ ಪುಡಿಯನ್ನು ಹೊಂದಿದ್ದ 8 ಕ್ಯಾಪ್ಸುಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಟ್ರಾನ್ಸಿಟ್ ಪ್ರಯಾಣಿಕರು, ಇಬ್ಬರು ವಿಮಾನ ನಿಲ್ದಾಣ ಸಿಬ್ಬಂದಿ ಮತ್ತು ಸ್ವೀಕರಿಸುವ ಒಬ್ಬ ವ್ಯಕ್ತಿ ಸೇರಿದಂತೆ ಐದು ಜನರನ್ನು ಬಂಧಿಸಲಾಗಿದೆ. ಸಂಘಟಿತ ಜಾಲಗಳು ಕಳ್ಳಸಾಗಣೆ ಮಾಡಿದ ಚಿನ್ನವನ್ನು ರಹಸ್ಯವಾಗಿ ಸಾಗಿಸಲು ಟ್ರಾನ್ಸಿಟ್ ಮಾರ್ಗಗಳನ್ನು ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿಯನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿರುವುದನ್ನು ಈ ಕಾರ್ಯಾಚರಣೆಯು ಮತ್ತೊಮ್ಮೆ ಎತ್ತಿ ತೋರಿಸುತ್ತದೆ.

ಮುಂಬೈನಲ್ಲಿ ವಶಪಡಿಸಿಕೊಂಡ ಪೇಸ್ಟ್ ರೂಪದಲ್ಲಿರುವ ಚಿನ್ನವನ್ನು ಹೊಂದಿದ್ದ ಎಂಟು ಕ್ಯಾಪ್ಸುಲ್‌ಗಳು
ಇದಕ್ಕೂ ಮೊದಲು, 31.08.26 ಮತ್ತು 06.09.2026 ರಂದು ನಡೆದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ, ಡಿಆರ್‌ಐ ಅಧಿಕಾರಿಗಳು ಕೋಲ್ಕತ್ತಾದಿಂದ ಮುಂಬೈಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನಿಂದ 1.6 ಕೆಜಿ ವಿದೇಶಿ ಮೂಲದ ಚಿನ್ನವನ್ನು ವಶಪಡಿಸಿಕೊಂಡು, ಆತನನ್ನು ಬಂಧಸಿದರು. ಎರಡನೇ ಕಾರ್ಯಾಚರಣೆಯಲ್ಲಿ, ಹಾಂಗ್ ಕಾಂಗ್‌ನಿಂದ ಆಮದು ಮಾಡಿಕೊಳ್ಳಲಾದ ಟ್ರೆಡ್‌ಮಿಲ್‌ನ ಮೋಟರ್‌ನಿಂದ ಸುಮಾರು 700 ಗ್ರಾಂ ತೂಕದ ಕಮಾನು-ಆಕಾರದ 24-ಕ್ಯಾರಟ್ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ. ಮುಂಬೈ, ಚೆನ್ನೈ, ತಿರುವಳ್ಳೂರ್ ಮತ್ತು ಚೆಂಗಲ್ಪಟ್ಟುವಿನಲ್ಲಿ ನಡೆಸಿದ ಸಂಬಂಧಿತ ಶೋಧನೆಗಳಿಂದ ಅಡಗಿಸಿಡಲು ಬಳಸಲಾದ ಇತರ ಬಿಡಿಭಾಗಗಳ ಯಂತ್ರಗಳು ಮತ್ತು ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಚೀನೀ ಪ್ರಜೆಯೊಬ್ಬ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ಮುಂಬೈನಲ್ಲಿ ಟ್ರೆಡ್‌ಮಿಲ್‌ನ ಮೋಟರ್‌ನಿಂದ ವಶಪಡಿಸಿಕೊಂಡ ಚಿನ್ನ
8-9.09.26 ರಂದು, ಉತ್ತರ ಪ್ರದೇಶದ ಚಂದೌಲಿ ಪೋಲೀಸರ ಸಹಯೋಗದೊಂದಿಗೆ ಡಿಆರ್‌ಐ, ಕಾರಿನ ಗೇರ್‌ಬಾಕ್ಸ್‌ನ ಕೆಳಗಿನ ಪೆಟ್ಟಿಗೆಯಲ್ಲಿ ಮರೆಮಾಚಲಾಗಿದ್ದ 22 ವಿದೇಶಿ ಮೂಲದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡ ಪ್ರಕರಣದ ತನಿಖಾ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿತು. ಕಾರಿನಲ್ಲಿದ್ದವರು ವಶಪಡಿಸಿಕೊಂಡ ಚಿನ್ನದ ಕಾನೂನುಬದ್ಧ ಮಾಲೀಕತ್ವದ ಪರವಾಗಿ ದಾಖಲೆಗಳನ್ನು ಪ್ರಸ್ತುತಪಡಿಸಲು ಸಾಧ್ಯವಾಗಲಿಲ್ಲ. ಪ್ರಾಥಮಿಕ ತನಿಖೆಯಿಂದ ವಶಪಡಿಸಿಕೊಂಡ ಚಿನ್ನವನ್ನು ಬಾಂಗ್ಲಾದೇಶದಿಂದ ಕಳ್ಳಸಾಗಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಅದರಂತೆ, ಸುಮಾರು 2.56 ಕೆಜಿ ತೂಕದ ವಶಪಡಿಸಿಕೊಂಡ ಚಿನ್ನವನ್ನು ಜಪ್ತಿ ಮಾಡಲಾಗಿದೆ ಮತ್ತು ಕಸ್ಟಮ್ಸ್ ಕಾಯಿದೆ, 1962 ರ ನಿಬಂಧನೆಗಳ ಅಡಿಯಲ್ಲಿ ಡಿಆರ್‌ಐ ಇಬ್ಬರನ್ನು ಬಂಧಿಸಿದೆ.

ಡಿಆರ್‌ಐ ವಾರಾಣಸಿಯಲ್ಲಿ ವಶಪಡಿಸಿಕೊಂಡ 22 ಚಿನ್ನದ ಗಟ್ಟಿಗಳು
8-9.09.2026ರಂದು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ದೇಶೀಯ ಆಗಮನ ಪ್ರದೇಶದಲ್ಲಿ ಡಿಆರ್‌ಐ ಅಧಿಕಾರಿಗಳು ಒಬ್ಬ ಪ್ರಯಾಣಿಕನನ್ನು ತಡೆದು ಪರಿಶೀಲಿಸಿದರು. ಆತ ನಕಲಿ ಗುರುತಿನ ಮೂಲಕ ಪ್ರಯಾಣಿಸುತ್ತಿರುವುದು ಪತ್ತೆಯಾಗಿದ್ದು, ವಿಮಾನದೊಳಗೆ ಮರೆಮಾಚಲಾಗಿದ್ದ ಕಳ್ಳಸಾಗಣೆ ಚಿನ್ನವನ್ನು ಹೊರತೆಗೆದಿರುವ ಶಂಕೆ ವ್ಯಕ್ತವಾಗಿತ್ತು. ಪರಿಶೀಲನೆ ವೇಳೆ ಆತನ ಲಗೇಜ್ ನಿಂದ ಸುಮಾರು 1 ಕೆ.ಜಿ. ತೂಕದ ಐದು ಚಿನ್ನದ ಗಟ್ಟಿಗಳ ತುಂಡುಗಳನ್ನು ವಶಪಡಿಸಿಕೊಳ್ಳಲಾಯಿತು. ಒಬ್ಬ ವ್ಯಕ್ತಿಯನ್ನು ಬಂಧಿಸಲಾಯಿತು.
ಚೆನ್ನೈನಲ್ಲಿ 30.08/01.09.2026 ರಂದು, ಡಿಆರ್‌ಐ ಅಧಿಕಾರಿಗಳು, ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸಿ, ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ವಿಭಿನ್ನ ವಿಮಾನಗಳಲ್ಲಿ ಶ್ರೀಲಂಕಾದಿಂದ ಆಗಮಿಸಿದ ಇಬ್ಬರು ಪ್ರಯಾಣಿಕರನ್ನು ತಡೆದರು. ಗುದನಾಳದಲ್ಲಿ ಇಟ್ಟಿದ್ದ ಪೇಸ್ಟ್ ರೂಪದಲ್ಲಿ ಚಿನ್ನವನ್ನು ಹೊಂದಿದ್ದ ಎಂಟು ಕ್ಯಾಪ್ಸುಲ್‌ಗಳನ್ನು ವಶಪಡಿಸಿಕೊಳ್ಳಲಾಯಿತು; ಅದರಿಂದ 2.5 ಕೆಜಿ 24-ಕ್ಯಾರಟ್ ಚಿನ್ನವನ್ನು ಹೊರತೆಗೆಯಲಾಗಿದೆ. ತನಿಖೆಯಿಂದ ವಿಮಾನ ನಿಲ್ದಾಣದ ಸಿಬ್ಬಂದಿಯ ಒಳಸಂಚು ಬಹಿರಂಗವಾಗಿದೆ. ಈ ಪ್ರಕರಣದಲ್ಲಿ ಇಬ್ಬರು ವಿದೇಶಿ ಪ್ರಯಾಣಿಕರು ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ.

ಚೆನ್ನೈನಲ್ಲಿ ವಶಪಡಿಸಿಕೊಂಡ 8 ಕ್ಯಾಪ್ಸುಲ್‌ಗಳು
01-02.09.2026 ರಂದು ಕ್ಯಾಲಿಕಟ್‌ನಲ್ಲಿ ನಡೆದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಡಿಆರ್‌ಐ ಅಧಿಕಾರಿಗಳು 1.7 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಕ್ಯಾಲಿಕಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಒಂದು ಪ್ರಕರಣದಲ್ಲಿ, ಪ್ರಯಾಣಿಕನ ಮಗು ಧರಿಸಿದ್ದ ಡೈಪರ್‌ನೊಳಗೆ ಅಡಗಿಸಿಟ್ಟಿದ್ದ ಎರಡು ಕ್ಯಾಪ್ಸುಲ್‌ಗಳು ಮತ್ತು ಪ್ಯಾಕೆಟ್‌ನಲ್ಲಿದ್ದ ಚಿನ್ನದ ಮಿಶ್ರಣದಿಂದ 770 ಗ್ರಾಂ ಚಿನ್ನವನ್ನು ಹೊರತೆಗೆಯಲಾಗಿದೆ. ಮತ್ತೊಂದು ಪ್ರಕರಣದಲ್ಲಿ, ದುಬೈನಿಂದ ಆಗಮಿಸಿದ ಪ್ರಯಾಣಿಕನೊಬ್ಬ ಚೆಕ್-ಇನ್ ಬ್ಯಾಗೇಜ್‌ನಲ್ಲಿ ತಂದಿದ್ದ ಕಾಫಿ ಯಂತ್ರದ ಭಾರೀ ಲೋಹದ ರಿಂಗ್ ಭಾಗದಿಂದ ಸುಮಾರು 1 ಕೆಜಿ ತೂಕದ 24-ಕ್ಯಾರಟ್ ಚಿನ್ನದ ತುಂಡನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರನ್ನು ಬಂಧಿಸಲಾಗಿದೆ.

ಕ್ಯಾಲಿಕಟ್‌ನಲ್ಲಿ ಕಾಫಿ ಯಂತ್ರದಲ್ಲಿ ಮರೆಮಾಚಲಾಗಿದ್ದ ಚಿನ್ನ
ಡಿಆರ್‌ಐನ ಗುಪ್ತಚರ ಮಾಹಿತಿ ಆಧಾರಿತ ಹಾಗೂ ಸಮನ್ವಯದೊಂದಿಗೆ ನಡೆಯುತ್ತಿರುವ ಜಾರಿ ಕಾರ್ಯಾಚರಣೆಗಳು ಚಿನ್ನದ ಕಳ್ಳಸಾಗಣೆ ಸರಪಳಿಯ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಟಿತ ಚಿನ್ನ ಕಳ್ಳಸಾಗಣೆ ಜಾಲಗಳನ್ನು ನಿರಂತರವಾಗಿ ಭೇದಿಸುತ್ತಿವೆ ಮತ್ತು ಅಮೂಲ್ಯ ಲೋಹಗಳನ್ನು ಅಕ್ರಮವಾಗಿ ದೇಶದೊಳಗೆ ಸಾಗಿಸುವುದನ್ನು ತಡೆಯುತ್ತಿವೆ.
******
(ಪ್ರಕಟಣೆ ಐ.ಡಿ.: 2308896)
ವಿಸಿಟರ್ ಕೌಂಟರ್ : 9