ವಾರ್ತಾ ಮತ್ತು ಪ್ರಸಾರ ಸಚಿವಾಲಯ
ರಾಷ್ಟ್ರಪತಿ ಅವರು ಸೆಪ್ಟೆಂಬರ್ 22 ರಂದು ಗುಜರಾತ್‌ನ ಕೇವಡಿಯಾದ ಏಕತಾ ನಗರದಲ್ಲಿ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ
ಪ್ರಕಟಣಾ ದಿನಾಂಕ:
08 SEP 2026 1:55PM by PIB Bengaluru
ರಾಷ್ಟ್ರಪತಿ ಅವರು 2026ರ ಸೆಪ್ಟೆಂಬರ್ 22 ರಂದು ಗುಜರಾತ್‌ನ ಏಕತಾ ನಗರದಲ್ಲಿ (ಕೇವಡಿಯಾ) 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಈ ಸಮಾರಂಭವು 2024ನೇ ಸಾಲಿನ ಭಾರತೀಯ ಚಿತ್ರರಂಗದ ಅತ್ಯುತ್ತಮ ಸಾಧನೆಗಳನ್ನು ಆಚರಿಸಲು ದೇಶದಾದ್ಯಂತದ ಚಲನಚಿತ್ರ ನಿರ್ಮಾತೃಗಳು, ನಟರು, ತಂತ್ರಜ್ಞರು ಮತ್ತು ಇತರ ಕಲಾವಿದರನ್ನು ಒಂದೆಡೆ ಸೇರಿಸಲಿದೆ.
1954ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸಿನಿಮಾರಂಗದ ಶ್ರೇಷ್ಠ ಸಾಧನೆಗಾಗಿ ನೀಡಲಾಗುವ ದೇಶದ ಅತ್ಯಂತ ಗೌರವಾನ್ವಿತ ಸನ್ಮಾನಗಳಾಗಿವೆ. ಏಳು ದಶಕಗಳಿಗೂ ಹೆಚ್ಚು ಕಾಲದಿಂದ, ಈ ಪ್ರಶಸ್ತಿಗಳು ಭಾರತೀಯ ಚಲನಚಿತ್ರ ರಂಗದ ಶ್ರೀಮಂತ ಭಾಷಿಕ, ಸಾಂಸ್ಕೃತಿಕ ಮತ್ತು ಪ್ರಾದೇಶಿಕ ವೈವಿಧ್ಯತೆಯನ್ನು ಎತ್ತಿಹಿಡಿಯುವುದರ ಜೊತೆಗೆ ಫೀಚರ್ ಮತ್ತು ನಾನ್-ಫೀಚರ್ ಫಿಲ್ಮ್‌ಗಳು ಹಾಗೂ ಸಿನಿಮಾ ಕುರಿತಾದ ಬರಹಗಳಲ್ಲಿನ ಅತ್ಯುತ್ತಮ ಸೃಜನಶೀಲ ಮತ್ತು ತಾಂತ್ರಿಕ ಸಾಧನೆಗಳನ್ನು ಗುರುತಿಸಿ ಗೌರವಿಸುತ್ತಾ ಬಂದಿವೆ.
ಒಂದು ಪ್ರಮುಖ ನೀತಿ ಉಪಕ್ರಮದಲ್ಲಿ, ವಾರ್ತಾ ಮತ್ತು ಪ್ರಸಾರ ಸಚಿವಾಲಯವು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ರಾಷ್ಟ್ರೀಯ ರಾಜಧಾನಿಯಿಂದ ಆಚೆಗೆ ದೇಶದ ವಿವಿಧ ಭಾಗಗಳಲ್ಲಿ ನಡೆಸಲು ನಿರ್ಧರಿಸಿದೆ. ಈ ವರ್ಷ ಏಕತಾ ನಗರದಲ್ಲಿ ನಡೆಯಲಿರುವ ಸಮಾರಂಭವು ಭಾರತದಾದ್ಯಂತದ ಸಿನೆಮಾ ಪ್ರತಿಭೆಗಳನ್ನು ಒಂದೆಡೆ ತರಲಿದ್ದು, 'ಏಕ್ ಭಾರತ್, ಶ್ರೇಷ್ಠ ಭಾರತ್' ಪರಿಕಲ್ಪನೆಯ ಸ್ಪೂರ್ತಿಯನ್ನು ಸಾಕಾರಗೊಳಿಸಲಿದೆ.
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ವಿವಿಧ ಭಾಷೆಗಳು, ಶೈಲಿಗಳು ಮತ್ತು ಸಿನಿಮಾ ಪ್ರಕಾರಗಳಾದ್ಯಂತ ಈ ವೈವಿಧ್ಯತೆಯನ್ನು ಆಚರಿಸುತ್ತವೆ. 'ಆರ್ಟಿಕಲ್ 370' ಅತ್ಯುತ್ತಮ ಫೀಚರ್ ಫಿಲ್ಮ್ ಆಗಿ ಗೌರವಿಸಲ್ಪಡಲಿದೆ. ಜ್ಯೂರಿಯು 'ಭಂಗಾರ್' ಅನ್ನು ಅತ್ಯುತ್ತಮ ನಾನ್-ಫೀಚರ್ ಫಿಲ್ಮ್ ಎಂದು ಮತ್ತು 'ರಾಮ್-ನಾಮಿ' ಯನ್ನು ಅತ್ಯುತ್ತಮ ಸಾಕ್ಷ್ಯಚಿತ್ರ ಎಂದು ಆಯ್ಕೆ ಮಾಡಿದೆ. 'ಭ್ರಮಾಯುಗಂ' ಚಿತ್ರಕ್ಕಾಗಿ ಮಮ್ಮುಟ್ಟಿ ಮತ್ತು 'ಚಂದೂ ಚಾಂಪಿಯನ್' ಚಿತ್ರಕ್ಕಾಗಿ ಕಾರ್ತಿಕ್ ಆರ್ಯನ್ ಅವರಿಗೆ ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು ಘೋಷಿಸಲಾಗಿದೆ, ಹಾಗೂ ಯಾಮಿ ಗೌತಮ್ ಅವರು 'ಆರ್ಟಿಕಲ್ 370' ಚಿತ್ರಕ್ಕಾಗಿ ಅತ್ಯುತ್ತಮ ನಾಯಕಿ ನಟಿ ಪ್ರಶಸ್ತಿಯಿಂದ ಗೌರವಿಸಲ್ಪಡಲಿದ್ದಾರೆ. ರಣದೀಪ್ ಹೂಡಾ ಅವರು 'ಸ್ವಾತಂತ್ರ್ಯ ವೀರ್ ಸಾವರ್ಕರ್' ಚಿತ್ರಕ್ಕಾಗಿ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ಈ ಪ್ರಶಸ್ತಿಗಳು ಕನ್ನಡ, ತುಳು, ಮರಾಠಿ, ಸಂತಾಲಿ, ತಮಿಳು, ಮಲಯಾಳಂ, ತೆಲುಗು ಮತ್ತು ಗಢವಾಲಿ ಸೇರಿದಂತೆ ಹಲವು ಭಾಷೆಗಳು ಮತ್ತು ಪ್ರಕಾರಗಳ ಚಲನಚಿತ್ರಗಳ ಶ್ರೇಷ್ಠತೆಯನ್ನು ಗುರುತಿಸುತ್ತವೆ. 'ಕಲ್ಕಿ 2898 ಎಡಿ', 'ಅಮರನ್', 'ಪುಷ್ಪ: ದಿ ರೂಲ್ ಪಾರ್ಟ್-02', 'ಭೂಲ್ ಭುಲೈಯಾ 3' ಮತ್ತು 'ಸ್ತ್ರೀ 2' ಸೇರಿದಂತೆ ಹಲವಾರು ಚಿತ್ರಗಳು ವಿವಿಧ ವಿಭಾಗಗಳಲ್ಲಿ ಗೌರವಗಳನ್ನು ಪಡೆಯಲಿವೆ. ಮೊದಲ ಬಾರಿಗೆ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ನಾನ್-ಫೀಚರ್ ಫಿಲ್ಮ್ ವಿಭಾಗದಲ್ಲಿ ಸಂತಾಲಿ ಭಾಷೆಯ ಚಿತ್ರವೊಂದನ್ನು ಗೌರವಿಸಲಾಗುತ್ತಿದೆ.
ಸಿನಿಮಾ ಕುರಿತಾದ ಅತ್ಯುತ್ತಮ ಬರವಣಿಗೆ ವಿಭಾಗದಲ್ಲಿ, ಸಂಜೀವ್ ಶ್ರೀವಾಸ್ತವ ಅವರಿಗೆ ಅತ್ಯುತ್ತಮ ಚಲನಚಿತ್ರ ವಿಮರ್ಶಕ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಸಿನಿಮಾ ಕುರಿತಾದ ಅತ್ಯುತ್ತಮ ಪುಸ್ತಕ ಪ್ರಶಸ್ತಿಯನ್ನು ಡಾ. ಪ್ರದೀಪ್ ಕೆಂಚನೂರು ಅವರು ಬರೆದು ಮಿರರ್ ಪುಸ್ತಕ ಪ್ರಕಾಶನದಿಂದ ಪ್ರಕಟವಾದ 'ನಾನಿರುವುದೇ ನಿಮಗಾಗಿ ನಾಡಿರುವುದೇ ನನಗಾಗಿ: ಕನ್ನಡ ಸಿನೆಮಾದ ತತ್ವ ಮತ್ತು ರಾಜಕೀಯ' ಪುಸ್ತಕಕ್ಕೆ ನೀಡಲಾಗುವುದು.
*****
(ಪ್ರಕಟಣೆ ಐ.ಡಿ.: 2307803)
ವಿಸಿಟರ್ ಕೌಂಟರ್ : 30