ಪ್ರಧಾನ ಮಂತ್ರಿಯವರ ಕಛೇರಿ
ಉಜ್ಬೆಕಿಸ್ತಾನ್ ಅಧ್ಯಕ್ಷರೊಂದಿಗೆ ಜಂಟಿ ಪತ್ರಿಕಾ ಗೋಷ್ಠಿಯ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ನೀಡಿದ ಮಾಧ್ಯಮ ಹೇಳಿಕೆಯ ಕನ್ನಡ ಅನುವಾದ
ಪ್ರಕಟಣಾ ದಿನಾಂಕ:
30 AUG 2026 4:41PM by PIB Bengaluru
ಘನತೆವೆತ್ತ ಮಹೋದಯರೇ, ನನ್ನ ಸ್ನೇಹಿತರೇ, ಅಧ್ಯಕ್ಷ ಶ್ರೀಯುತರೇ,
ಉಭಯ ದೇಶಗಳ ಪ್ರತಿನಿಧಿಗಳೇ,
ಮಾಧ್ಯಮ ಸ್ನೇಹಿತರೇ,
ನಮಸ್ಕಾರ!
ತಾಷ್ಕೆಂಟ್‌ನಲ್ಲಿ ನನಗೆ ಮತ್ತು ನನ್ನ ನಿಯೋಗಕ್ಕೆ ನೀಡಿದ ಆತ್ಮೀಯ ಹಾಗೂ ಪ್ರೀತಿಯ ಸ್ವಾಗತಕ್ಕಾಗಿ, ಅಧ್ಯಕ್ಷರಿಗೆ ಮತ್ತು ಉಜ್ಬೆಕಿಸ್ತಾನ್ ಜನರಿಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಇದು ನನ್ನ ನಾಲ್ಕನೇ ಉಜ್ಬೆಕಿಸ್ತಾನ್ ಭೇಟಿಯಾಗಿದೆ. ಇದು ನಮ್ಮ ಬಾಂಧವ್ಯದ ಸಾಮೀಪ್ಯ, ನಮ್ಮ ನಿಕಟ ಸಮನ್ವಯ ಮತ್ತು ನಮ್ಮ ಆಳವಾದ ಸ್ನೇಹವನ್ನು ಪ್ರತಿಬಿಂಬಿಸುತ್ತದೆ.
ಸುಮಾರು ಒಂದು ದಶಕದಿಂದ, ಅಧ್ಯಕ್ಷರೊಂದಿಗೆ ಕೆಲಸ ಮಾಡುವ ಭಾಗ್ಯ ನನಗೆ ಸಿಕ್ಕಿದೆ. ಈ ಅವಧಿಯಲ್ಲಿ, ಅವರನ್ನು ಹತ್ತಕ್ಕೂ ಹೆಚ್ಚು ಬಾರಿ ಭೇಟಿಯಾಗುವ ಅವಕಾಶ ನನಗೆ ಲಭಿಸಿದೆ.
ಅವರ ಸಕಾರಾತ್ಮಕ ಮತ್ತು ಭವಿಷ್ಯದ ಆಲೋಚನೆಯ ವಿಧಾನವು, ನಿರಂತರ ಕಲಿಕೆಯ ಅವರ ಮನೋಭಾವದೊಂದಿಗೆ ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ. ಭಾರತದ ಕಡೆಗಿನ ಅವರ ಆಳವಾದ ಸ್ನೇಹ ಮತ್ತು ನಮ್ಮ ಸಂಬಂಧದ ಬಗೆಗಿನ ಅವರ ಅಚಲ ಬದ್ಧತೆಗಾಗಿ ನಾನು ಅವರನ್ನು ಹೃತ್ಪೂರ್ವಕವಾಗಿ ಶ್ಲಾಘಿಸುತ್ತೇನೆ.
ಸ್ನೇಹಿತರೇ,
ಉಜ್ಬೆಕಿಸ್ತಾನ್ ಮಧ್ಯ ಏಷ್ಯಾದ ಹೃದಯಭಾಗದಲ್ಲಿದೆ ಮತ್ತು ಈ ಪ್ರದೇಶದೊಂದಿಗಿನ ಭಾರತದ ತೊಡಗಿಸಿಕೊಳ್ಳುವಿಕೆಯ ಕೇಂದ್ರಬಿಂದುವಾಗಿದೆ. ಭಾರತ ಮತ್ತು ಉಜ್ಬೆಕಿಸ್ತಾನ್ ನ ವಿಚಾರಗಳು ಮತ್ತು ಆಕಾಂಕ್ಷೆಗಳಲ್ಲಿ, ಆಳವಾದ ಒಮ್ಮತವನ್ನು ಹಂಚಿಕೊಳ್ಳುತ್ತವೆ. “ಯಂಗಿ ಉಜ್ಬೆಕಿಸ್ತಾನ್” (Yangi Uzbekistan) ಮತ್ತು “ವಿಕಸಿತ ಭಾರತ 2047” ಈ ಎರಡರ ಕೇಂದ್ರಬಿಂದುವಾಗಿ, ನಮ್ಮ ಯುವಜನತೆ, ನಾವೀನ್ಯತೆ, ಅಂತರ್ಗತ ಬೆಳವಣಿಗೆ ಮತ್ತು ಆಧುನಿಕ ತಂತ್ರಜ್ಞಾನಗಳಿವೆ. ಈ ಹಂಚಿಕೆಯ ದೃಷ್ಟಿಕೋನದಿಂದ ಮಾರ್ಗದರ್ಶಿಸಲ್ಪಟ್ಟು, ನಾವು ಉಭಯ ದೇಶಗಳ ಜನರ ಕಲ್ಯಾಣ ಮತ್ತು ಸಮೃದ್ಧಿಗಾಗಿ ಕೆಲಸ ಮಾಡುತ್ತಿದ್ದೇವೆ.
ಈ ವರ್ಷ ನಮ್ಮ ಕಾರ್ಯತಂತ್ರದ ಪಾಲುದಾರಿಕೆಯ 15 ನೇ ವಾರ್ಷಿಕೋತ್ಸವವಾಗಿದೆ. ಈ ವಿಶೇಷ ಸಂದರ್ಭದಲ್ಲಿ, ನಾವು ನಮ್ಮ ಬಾಂಧವ್ಯವನ್ನು 'ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ'ಯ ಮಟ್ಟಕ್ಕೆ ಏರಿಸಲು ನಿರ್ಧರಿಸಿದ್ದೇವೆ.
ಇಂದು, ನಾವು ಈ ಹೊಸ ಚೌಕಟ್ಟಿನಲ್ಲಿ ಹೆಚ್ಚಿನ ವೇಗ ಮತ್ತು ಸ್ಪಷ್ಟ ಫಲಿತಾಂಶಗಳೊಂದಿಗೆ ನಮ್ಮ ಪಾಲುದಾರಿಕೆಯನ್ನು ಮುನ್ನಡೆಸಲು ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಿದ್ಧಪಡಿಸಿದ್ದೇವೆ.
ನಮ್ಮ ದ್ವಿಪಕ್ಷೀಯ ವ್ಯಾಪಾರವು ಒಂದು ಬಿಲಿಯನ್ ಡಾಲರ್‌ಗಳನ್ನು ದಾಟಿದೆ. ನಾವು ಈಗ 2030 ರ ವೇಳೆಗೆ ಐದು ಬಿಲಿಯನ್ ಡಾಲರ್ ದ್ವಿಪಕ್ಷೀಯ ವ್ಯಾಪಾರದ ಗುರಿಯನ್ನು ನಿಗದಿಪಡಿಸಿದ್ದೇವೆ. ಇದನ್ನು ಸಾಧಿಸಲು, ನಾವು ಮಾರುಕಟ್ಟೆ ಅವಕಾಶಗಳು, ಸಂಪರ್ಕ, ಬ್ಯಾಂಕಿಂಗ್ ಮತ್ತು ಪಾವತಿ ವ್ಯವಸ್ಥೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ವ್ಯವಸ್ಥಿತವಾಗಿ ಪರಿಹರಿಸುತ್ತೇವೆ.
ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಪರಸ್ಪರ ಲಾಭದಾಯಕ ಸಹಕಾರವನ್ನು ಹೆಚ್ಚಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಕೃತಕ ಬುದ್ಧಿಮತ್ತೆ, ನಿರ್ಣಾಯಕ ಖನಿಜಗಳು, ಸ್ವಚ್ಛ ಇಂಧನ, ಬಾಹ್ಯಾಕಾಶ ಮತ್ತು ಪರಮಾಣು ಇಂಧನದಲ್ಲಿನ ಸಹಕಾರವು ನಮ್ಮ ಬಾಂಧವ್ಯವನ್ನು ಭವಿಷ್ಯಕ್ಕೆ ಸಜ್ಜುಗೊಳಿಸುತ್ತಿದೆ.
ಸ್ನೇಹಿತರೇ,
ಕೃಷಿ ಮತ್ತು ಆರೋಗ್ಯ ರಕ್ಷಣೆಯಲ್ಲಿನ ನಮ್ಮ ಸಾಮರ್ಥ್ಯಗಳು ಒಂದಕ್ಕೊಂದು ಪೂರಕವಾಗಿವೆ. ತೋಟಗಾರಿಕೆಯಲ್ಲಿ ಉಜ್ಬೆಕಿಸ್ತಾನ್‌ನ ಪ್ರವೀಣತೆಯನ್ನು ಭಾರತದ ಆಧುನಿಕ ಕೃಷಿ ಪದ್ಧತಿಗಳೊಂದಿಗೆ ಸಂಯೋಜಿಸುವ ಮೂಲಕ, ನಾವು ಉಭಯ ದೇಶಗಳ ಆಹಾರ ಭದ್ರತೆಗೆ ಕೊಡುಗೆ ನೀಡುತ್ತೇವೆ.
ಉಜ್ಬೆಕಿಸ್ತಾನ್‌ನ ಗಿಡಮೂಲಿಕೆಗಳು ಮತ್ತು ಆಯುರ್ವೇದದಲ್ಲಿ ಭಾರತದ ಪ್ರವೀಣತೆಯು ನೈಸರ್ಗಿಕ ಸಂಯೋಜನೆಯಾಗಿದೆ. ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳ ಕುರಿತು ಇಂದು ತಲುಪಿದ ಒಪ್ಪಂದವು ಈ ಕ್ಷೇತ್ರದಲ್ಲಿ ನಮ್ಮ ಜಂಟಿ ಪ್ರಯತ್ನಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತದೆ.
ನಮ್ಮ ಪಾಲುದಾರಿಕೆಯು ಕೇವಲ ನಮ್ಮೆರಡು ರಾಜಧಾನಿಗಳಿಗೆ ಸೀಮಿತವಾಗಿರಬಾರದು ಎಂಬುದು ನಮ್ಮ ಪ್ರಯತ್ನವಾಗಿದೆ. ಆದ್ದರಿಂದ, ನಾವು ನಮ್ಮ ನಗರಗಳು ಮತ್ತು ರಾಜ್ಯಗಳ ನಡುವೆ ಪಾಲುದಾರಿಕೆಯನ್ನು ಸ್ಥಾಪಿಸುವತ್ತ ಕೆಲಸ ಮಾಡುತ್ತಿದ್ದೇವೆ. ಈ ಪಾಲುದಾರಿಕೆಗಳು ನಗರ ನಿರ್ವಹಣೆ, ಉದ್ಯಮ, ಶಿಕ್ಷಣ, ಪ್ರವಾಸೋದ್ಯಮ ಮತ್ತು ಸಂಸ್ಕೃತಿಯಂತಹ ಕ್ಷೇತ್ರಗಳಲ್ಲಿ ಸುಸ್ಥಿರ ನೇರ ಸಂಪರ್ಕಗಳನ್ನು ಬೆಳೆಸಲು ಸಹಾಯ ಮಾಡುತ್ತವೆ.
ನಮ್ಮ ಉಭಯ ದೇಶಗಳ ನಡುವಿನ ನಿಕಟ ರಕ್ಷಣೆ ಮತ್ತು ಭದ್ರತಾ ಸಹಕಾರವು ನಮ್ಮ ಸಂಬಂಧಕ್ಕೆ ಆಧಾರವಾಗಿರುವ ಆಳವಾದ ಪರಸ್ಪರ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಮುಂಬರುವ ದಿನಗಳಲ್ಲಿ, ನಾವು ನಮ್ಮ ಉಭಯ ದೇಶಗಳ ರಕ್ಷಣಾ ಉದ್ಯಮಗಳ ನಡುವೆ ನೇರ ಸಂಪರ್ಕ, ಜಂಟಿ ಉತ್ಪಾದನೆ ಮತ್ತು ಜಂಟಿ ಅಭಿವೃದ್ಧಿಯನ್ನು ಪ್ರೋತ್ಸಾಹಿಸುತ್ತೇವೆ.
ಭಯೋತ್ಪಾದನೆ, ತೀವ್ರವಾದ ಮತ್ತು ಪ್ರತ್ಯೇಕತಾವಾದಗಳು ಇಡೀ ಪ್ರದೇಶಕ್ಕೆ ತೀವ್ರ ಸವಾಲುಗಳನ್ನು ಒಡ್ಡುತ್ತವೆ ಎಂದು ನಾವು ನಂಬುತ್ತೇವೆ.
ಅವುಗಳ ವಿರುದ್ಧ ಶೂನ್ಯ ಸಹಿಷ್ಣುತೆ (zero tolerance) ನೀತಿಯನ್ನು ಅಳವಡಿಸಿಕೊಳ್ಳುವ ನಮ್ಮ ಒಮ್ಮತದ ಸಂಕಲ್ಪವು ದೃಢವಾಗಿದೆ ಮತ್ತು ಎಂದೆಂದಿಗೂ ಅಚಲವಾಗಿರುತ್ತದೆ.
ಸ್ನೇಹಿತರೇ,
ನಮ್ಮ ಸಂಬಂಧದ ಅತ್ಯಂತ ಆಳವಾದ ಬೇರುಗಳು ನಾವು ಹಂಚಿಕೊಂಡ ಪರಂಪರೆಯಲ್ಲಿದೆ. ಇಂದು, ನಾವು ಈ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲು ವಿಶೇಷ ಒತ್ತು ನೀಡಿದ್ದೇವೆ.
ಉಜ್ಬೆಕಿಸ್ತಾನ್‌ನ ಬೌದ್ಧ ಪರಂಪರೆಯ ತಾಣಗಳ ಸಂರಕ್ಷಣೆಗಾಗಿ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ನಮ್ಮ ಉಭಯ ದೇಶಗಳ ಯುವಕರ ನಡುವೆ, ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ವೃತ್ತಿಪರರ ನಡುವೆ ವಿನಿಮಯವನ್ನು ಪ್ರೋತ್ಸಾಹಿಸುವುದು ನಮಗೆ ಹೆಚ್ಚಿನ ಆದ್ಯತೆಯಾಗಿದೆ. ಇಂದು, ನಾವು ಉಭಯ ದೇಶಗಳ ನಡುವೆ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಲು ಸಹಕಾರ ಕಾರ್ಯಕ್ರಮಕ್ಕೆ ಸಮ್ಮತಿಸಿದ್ದೇವೆ. ಇಂದು ನಾವು ಉಜ್ಬೆಕಿಸ್ತಾನ್‌ನಲ್ಲಿ ಹಿಂದಿ ಭಾಷೆಯನ್ನು ಪ್ರೋತ್ಸಾಹಿಸಲು ವಿದ್ಯಾರ್ಥಿವೇತನವನ್ನು ಘೋಷಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ.
ಕ್ರೀಡೆಯೂ ನಮ್ಮ ಸಹಕಾರದ ಪ್ರಮುಖ ಆಯಾಮವಾಗಿ ಹೊರಹೊಮ್ಮುತ್ತಿದೆ. ಕಳೆದ ವರ್ಷ, 20 ವರ್ಷದ ಉಜ್ಬೆಕ್ ಗ್ರಾಂಡ್‌ಮಾಸ್ಟರ್ ಸಿಂಡಾರೋವ್ ಗೋವಾದಲ್ಲಿ ನಡೆದ ಫಿಡೆ (FIDE) ವಿಶ್ವಕಪ್ ಗೆದ್ದರು. ಅವರು ಈಗ ನವೆಂಬರ್‌ನಲ್ಲಿ ಭಾರತದ 20 ವರ್ಷದ ಚೆಸ್ ಚಾಂಪಿಯನ್ ಗುಕೇಶ್ ಅವರನ್ನು ಎದುರಿಸಲು ಸಜ್ಜಾಗಿದ್ದಾರೆ. ಈ ಇಬ್ಬರು ಯುವ ನಕ್ಷತ್ರಗಳು ಚೆಸ್ ಬೋರ್ಡ್‌ನಲ್ಲಿ ಎದುರಾದಾಗ, ಇಡೀ ಜಗತ್ತು ಈ ರೋಚಕ ಸ್ಪರ್ಧೆಯನ್ನು ವೀಕ್ಷಿಸುತ್ತದೆ. ಮುಂದಿನ ತಿಂಗಳು ಸಮರ್‌ಕಂಡ್‌ನಲ್ಲಿ ನಡೆಯಲಿರುವ ಚೆಸ್ ಒಲಿಂಪಿಯಾಡ್‌ಗೆ ನಾನು ನನ್ನ ಶುಭಾಶಯಗಳನ್ನು ಕೋರುತ್ತೇನೆ. ಮುಂಬರುವ ದಿನಗಳಲ್ಲಿ ಕುರಾಶ್ ಮತ್ತು ಕಬಡ್ಡಿಯಂತಹ ಸಾಂಪ್ರದಾಯಿಕ ಕ್ರೀಡೆಗಳು ನಮ್ಮ ಕ್ರೀಡಾ ಪಾಲುದಾರಿಕೆಗೆ ಹೊಸ ಚೈತನ್ಯವನ್ನು ತರಲಿವೆ.
ಇಂದಿನ ಚರ್ಚೆಗಳು ನಮ್ಮ ಸಂಬಂಧಗಳ ಭವಿಷ್ಯಕ್ಕೆ ಸ್ಪಷ್ಟ ದಾರಿಯನ್ನು ರೂಪಿಸಿವೆ. ಬಲವಾದ ಭಾರತ-ಉಜ್ಬೆಕಿಸ್ತಾನ್ ಪಾಲುದಾರಿಕೆಯು ಮಧ್ಯ ಏಷ್ಯಾದಲ್ಲಿ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗೆ ಶಕ್ತಿಯುತ ಶಕ್ತಿಯಾಗಲಿದೆ.
ಘನತೆವೆತ್ತರೇ,
ಮತ್ತೊಮ್ಮೆ, ನಿಮ್ಮ ಸ್ನೇಹಕ್ಕಾಗಿ ಮತ್ತು ಇಂದು ನಾವು ನಡೆಸಿದ ಫಲಪ್ರದ ಚರ್ಚೆಗಳಿಗಾಗಿ ನಿಮಗೆ ತುಂಬಾ ಧನ್ಯವಾದಗಳು.
ಎರಡು ದಿನಗಳಲ್ಲಿ, ಉಜ್ಬೆಕಿಸ್ತಾನ್ ತನ್ನ 35 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಿದೆ. ಭಾರತದ 140 ಕೋಟಿ ಜನರ ಪರವಾಗಿ, ನಾನು ನಿಮಗೆ ಮತ್ತು ಉಜ್ಬೆಕಿಸ್ತಾನ್‌ನ ಎಲ್ಲಾ ನಾಗರಿಕರಿಗೆ ಈ ಸಂದರ್ಭದಲ್ಲಿ ನನ್ನ ಅತ್ಯಂತ ಆತ್ಮೀಯ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಕೋರುತ್ತೇನೆ.
ಅನಂತ ಧನ್ಯವಾದಗಳು.
*****
(ಪ್ರಕಟಣೆ ಐ.ಡಿ.: 2304878)
ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Telugu