ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಗ್ರಾಹಕ ವ್ಯವಹಾರಗಳ ಇಲಾಖೆಯು ಕಾನೂನು ಮಾಪನಶಾಸ್ತ್ರ (ಭಾರತೀಯ ಪ್ರಮಾಣಿತ ಸಮಯ) ನಿಯಮಗಳು-2026 ಅನ್ನು ಪ್ರಕಟಿಸಿದೆ


ಭಾರತೀಯ ಪ್ರಮಾಣಿತ ಸಮಯವನ್ನು ದೇಶಾದ್ಯಂತ ಸಾಮಾನ್ಯ ಸಮಯದ ಉಲ್ಲೇಖವಾಗಿ ನಿಗದಿಪಡಿಸುವ ನಿಯಮಗಳು

180 ದಿನಗಳ ನಂತರ ಜಾರಿಗೆ ಬರಲಿರುವ ನಿಯಮಗಳು

ಪ್ರಕಟಣಾ ದಿನಾಂಕ: 30 AUG 2026 11:27AM by PIB Bengaluru

ಗ್ರಾಹಕ ವ್ಯವಹಾರಗಳ ಇಲಾಖೆಯು 27 ಆಗಸ್ಟ್ 2026ರಂದು ಕಾನೂನು ಪನಶಾಸ್ತ್ರ (ಭಾರತೀಯ ಪ್ರಮಾಣಿತ ಸಮಯ) ನಿಯಮಗಳು-2026 ಅನ್ನು ಅಧಿಸೂಚನೆ ರೂಪದಲ್ಲಿ ಹೊರಡಿಸಿದೆ. ನಿಯಮಗಳು ಅಧಿಕೃತ ಗೆಜೆಟ್‌ನಲ್ಲಿ  ಪ್ರಕಟವಾದ ದಿನಾಂಕದಿಂದ 180 ದಿನಗಳ ನಂತರ ಜಾರಿಗೆ ಬರುತ್ತವೆ.

ಕಾನೂನು, ಆಡಳಿತಾತ್ಮಕ, ವಾಣಿಜ್ಯ ಮತ್ತು ಇತರ ಅಧಿಕೃತ ಉದ್ದೇಶಗಳಿಗಾಗಿ ದೇಶಾದ್ಯಂತ ಭಾರತೀಯ ಪ್ರಮಾಣಿತ ಕಾಲಮಾನವನ್ನು (IST)ಏಕರೂಪದ ಸಮಯದ ಉಲ್ಲೇಖವನ್ನಾಗಿ ಈ ನಿಯಮಗಳು ನಿಗದಿಪಡಿಸುತ್ತವೆ. ನಿಯಮಗಳು ಜಾರಿಗೆ ಬರುವ ಮುನ್ನ ಸರ್ಕಾರಿ ಇಲಾಖೆಗಳು, ವ್ಯಾಪಾರ ಸಂಸ್ಥೆಗಳು ಹಾಗೂ ಇತರ ಸಂಸ್ಥೆಗಳು ತಮ್ಮ ವ್ಯವಸ್ಥೆಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಲು ಈ 180 ದಿನಗಳ ಕಾಲಾವಕಾಶ ನೆರವಾಗಲಿದೆ.

ಡಿಜಿಟಲ್ ಮತ್ತು ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳ ಬಳಕೆ ಹೆಚ್ಚುತ್ತಿರುವಂತೆ, ಏಕರೂಪದ ಸಮಯದ ಉಲ್ಲೇಖದ ಅಗತ್ಯತೆಯೂ ಹೆಚ್ಚಾಗಿದೆ. ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿಗಳು, ದೂರಸಂಪರ್ಕ, ರೈಲ್ವೆ, ವಿದ್ಯುತ್ ವ್ಯವಸ್ಥೆಗಳು, ಕಂಪ್ಯೂಟರ್ ನೆಟ್‌ವರ್ಕ್‌ಗಳು ಮತ್ತು ಸರ್ಕಾರದ ದಾಖಲೆಗಳು ನಿಖರವಾದ ಸಮಯ ಹಾಗೂ ಟೈಮ್‌ಸ್ಟ್ಯಾಂಪ್‌ಗಳ ಮೇಲೆ ಅವಲಂಬಿತವಾಗಿವೆ. ಬೇರೆ ಬೇರೆ ಸಮಯದ ಮೂಲಗಳ ನಡುವಿನ ವ್ಯತ್ಯಾಸಗಳು ಇಂತಹ ಚಟುವಟಿಕೆಗಳ ಸಮನ್ವಯ ಮತ್ತು ದಾಖಲಾತಿಯ ಮೇಲೆ ಪರಿಣಾಮ ಬೀರಬಹುದು. ದೇಶಾದ್ಯಂತ ಇರುವ ಪ್ರಮುಖ ವ್ಯವಸ್ಥೆಗಳು ನಿಖರ ಮತ್ತು ಸ್ಥಿರವಾದ ಭಾರತೀಯ ಪ್ರಮಾಣಿತ ಕಾಲಮಾನವನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳುವುದು ಈ ನಿಯಮಗಳ ಮುಖ್ಯ ಉದ್ದೇಶವಾಗಿದೆ.

ಈ ಏಕರೂಪದ ಸಮಯದ ಉಲ್ಲೇಖವು ಈ ಕೆಳಗಿನವುಗಳಿಗೆ ನೆರವಾಗಲಿದೆ:

  • ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿ ವಹಿವಾಟುಗಳ ನಿಖರವಾದ ಟೈಮ್‌ ಸ್ಟ್ಯಾಂಪಿಂಗ್;
  • ರೈಲ್ವೆ, ವಿಮಾನ ನಿಲ್ದಾಣಗಳು ಮತ್ತು ಇತರ ಸಾರಿಗೆ ವ್ಯವಸ್ಥೆಗಳ ಸಮನ್ವಯತೆ;
  • ದೂರಸಂಪರ್ಕ ಮತ್ತು ಇಂಟರ್ನೆಟ್ ನೆಟ್‌ವರ್ಕ್‌ಗಳ ವಿಶ್ವಾಸಾರ್ಹ ಕಾರ್ಯನಿರ್ವಹಣೆ;
  • ವಿದ್ಯುತ್ ವ್ಯವಸ್ಥೆಗಳಲ್ಲಿ ನಿಖರವಾದ ಸಮಯ ನಿರ್ವಹಣೆ;
  • ಸರ್ಕಾರಿ ಮತ್ತು ಕಾನೂನು ದಾಖಲೆಗಳ ನಿರ್ವಹಣೆ; ಮತ್ತು
  • ತುರ್ತು ಹಾಗೂ ಸಮಯ-ಸೂಕ್ಷ್ಮ ಸೇವೆಗಳ ಸಮನ್ವಯತೆ.

ಭಾರತೀಯ ಸಮಯದ ಮೂಲಗಳ ಬಳಕೆ

ಭಾರತೀಯ ಸಂಸ್ಥೆಗಳು ಮತ್ತು ಕಾನೂನು ಮಾಪನಶಾಸ್ತ್ರ ಪ್ರಯೋಗಾಲಯಗಳ ಮೂಲಕ ದೇಶಾದ್ಯಂತ ನಿಖರವಾದ ಭಾರತೀಯ ಪ್ರಮಾಣಿತ ಕಾಲಮಾನವನ್ನು ಪ್ರಸಾರ ಮಾಡಲು ಸರ್ಕಾರವು ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುತ್ತಿದೆ. ವಿಶ್ವಾಸಾರ್ಹ ಮತ್ತು ಸುರಕ್ಷಿತ ಸಮಯ ಪ್ರಸರಣಕ್ಕಾಗಿ ಭಾರತದ ಉಪಗ್ರಹ ನ್ಯಾವಿಗೇಷನ್ ವ್ಯವಸ್ಥೆಯಾದ ಭಾರತದ ಉಪಗ್ರಹ ಪಥನಿರ್ದೇಶನ ವ್ಯವಸ್ಥೆ (NavIC) ಹಾಗೂ ಇತರ ಅನುಮೋದಿತ ಭಾರತೀಯ ಸಮಯದ ಮೂಲಗಳನ್ನು ಬಳಸಲು ಈ ನಿಯಮಗಳು ಅವಕಾಶ ಕಲ್ಪಿಸುತ್ತವೆ.

ಪ್ರಸ್ತುತ, ಹಲವಾರು ವ್ಯವಸ್ಥೆಗಳು ವಿದೇಶಿ ಉಪಗ್ರಹ ಆಧಾರಿತ ಸಮಯದ ಮೂಲಗಳನ್ನು ಬಳಸುತ್ತಿವೆ. ಭಾರತೀಯ ಸಮಯ ಪ್ರಸರಣ ಮೂಲಸೌಕರ್ಯದ ಅಭಿವೃದ್ಧಿಯು ನಿರ್ಣಾಯಕ ವ್ಯವಸ್ಥೆಗಳಿಗೆ ಪರ್ಯಾಯ ಆಯ್ಕೆಗಳನ್ನು ಒದಗಿಸುತ್ತದೆ ಮತ್ತು ಬಾಹ್ಯ ಸಮಯದ ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.

ವೈಟ್‌ ರಾಬಿಟ್‌ ತಂತ್ರಜ್ಞಾನ ಪ್ರದರ್ಶನ

‘ಒಂದು ರಾಷ್ಟ್ರ, ಒಂದು ಸಮಯ’ (One Nation, One Time) ಉಪಕ್ರಮದ ಭಾಗವಾಗಿ, ಜುಲೈ 2026ರಲ್ಲಿ ಬೆಂಗಳೂರಿನ ಪ್ರಾದೇಶಿಕ ಉಲ್ಲೇಖ ಗುಣಮಟ್ಟ ಪ್ರಯೋಗಾಲಯದಲ್ಲಿ (RRSL) 'ವೈಟ್ ರಾಬಿಟ್‌ ತಂತ್ರಜ್ಞಾನ' ಆಧಾರಿತ ಭಾರತೀಯ ಪ್ರಮಾಣಿತ ಕಾಲಮಾನ ಪ್ರಸರಣ ಪ್ರಾತ್ಯಕ್ಷಿಕೆ ಜಾಲವನ್ನು  ಪ್ರಾರಂಭಿಸಲಾಗಿದೆ.

ಈ ವ್ಯವಸ್ಥೆಯು ಬ್ಯಾಂಕಿಂಗ್, ದೂರಸಂಪರ್ಕ, ವಿದ್ಯುತ್, ಸಾರಿಗೆ ಮತ್ತು ಡಿಜಿಟಲ್ ಆಡಳಿತ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಭಾರತೀಯ ಪ್ರಮಾಣಿತ ಕಾಲಮಾನದ ಪ್ರಸರಣವನ್ನು ಪ್ರದರ್ಶಿಸಿದೆ. ಗ್ರಾಹಕ ವ್ಯವಹಾರಗಳ ಇಲಾಖೆಯು ಸಿಎಸ್‌ಐಆರ್-ಎನ್‌ಪಿಎಲ್‌, ಇಸ್ರೊ, ಸೆಬಿ, ಎನ್‌ಎಸ್‌ಇ, ಬಿಎಸ್‌ಎನ್‌ಎಲ್‌ ಹಾಗೂ ಇತರ ಪಾಲುದಾರರ ಸಹಯೋಗದೊಂದಿಗೆ `ಆರ್‌ಆರ್‌ಎಸ್‌ಎಲ್‌’  ಬೆಂಗಳೂರು ಮತ್ತು 'ಎನ್‌ಎಸ್‌ಇ’  ಚೆನ್ನೈ ನಡುವೆ ‘ಐಎಸ್‌ಟಿ’ಯ ಸುರಕ್ಷಿತ ಪ್ರಸರಣವನ್ನು ಸಹ ಪ್ರದರ್ಶಿಸಿದೆ.

ನಿಯಮಗಳು ಪ್ರಾರಂಭವಾಗುವ ಮೊದಲು 180 ದಿನಗಳ ಅವಧಿಯು ಮಧ್ಯಸ್ಥಗಾರರಿಗೆ ತಮ್ಮ ಅಸ್ತಿತ್ವದಲ್ಲಿರುವ ವ್ಯವಸ್ಥೆಗಳನ್ನು ಪರಿಶೀಲಿಸಲು, ಅಗತ್ಯ ತಾಂತ್ರಿಕ ಬದಲಾವಣೆಗಳನ್ನು ಕೈಗೊಳ್ಳಲು ಮತ್ತು ಅನುಷ್ಠಾನಕ್ಕೆ ಸಿದ್ಧರಾಗಲು ಸಮಯವನ್ನು ಒದಗಿಸುತ್ತದೆ. ಕಾನೂನು ಮಾಪನಶಾಸ್ತ್ರ (ಭಾರತೀಯ ಪ್ರಮಾಣಿತ ಸಮಯ) ನಿಯಮಗಳು, 2026 ದೇಶಾದ್ಯಂತ ಸಮಯ-ಅವಲಂಬಿತ ವ್ಯವಸ್ಥೆಗಳು ಮತ್ತು ಅಧಿಕೃತ ಉದ್ದೇಶಗಳಿಗಾಗಿ ಸಾಮಾನ್ಯ ಭಾರತೀಯ ಪ್ರಮಾಣಿತ ಸಮಯದ ಉಲ್ಲೇಖವನ್ನು ಒದಗಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2304638) ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Gujarati , Tamil