ಹಣಕಾಸು ಸಚಿವಾಲಯ
azadi ka amrit mahotsav

ಭಾರತದ ಆರ್ಥಿಕ ಸೇರ್ಪಡೆ ಚಿತ್ರಣವನ್ನು ಪರಿವರ್ತಿಸುವಲ್ಲಿ 12 ವರ್ಷಗಳನ್ನು ಪೂರ್ಣಗೊಳಿಸಿದ 'ಪ್ರಧಾನಮಂತ್ರಿ ಜನ್ ಧನ್ ಯೋಜನೆ'


3.17 ಲಕ್ಷ ಕೋಟಿ ಠೇವಣಿಯೊಂದಿಗೆ 59.09 ಕೋಟಿ ಪಿಎಂ ಜನ್‌ಧನ್‌ ಯೋಜನಾ (ಪಿಎಂಜೆಡಿವೈ) ಖಾತೆಗಳ ಪ್ರಾರಂಭ

ಶೇ.56 ರಷ್ಟು ಖಾತೆದಾರರು ಮಹಿಳೆಯರು ಮತ್ತು ಶೇ.78 ಖಾತೆಗಳು ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿವೆ

ದೇಶಾದ್ಯಂತ ಡಿಜಿಟಲ್ ಪಾವತಿಗಳು ಮತ್ತು ಆರ್ಥಿಕ ಭದ್ರತೆಯ ಪ್ರವೇಶವನ್ನು ವಿಸ್ತರಣೆಯ ಭಾಗವಾಗಿ  41 ಕೋಟಿಗೂ ಹೆಚ್ಚು 'ರುಪೇ ಕಾರ್ಡ್‌'ಗಳ ವಿತರಣೆ

'ಜಾಮ್' (ಜನ್‌ಧನ್‌-ಆಧಾರ್‌-ಮೊಬೈಲ್‌) ತ್ರಿವಳಿಯು ಹಿಂದುಳಿದವರಿಗೆ ಕಲ್ಯಾಣ ಸವಲತ್ತುಗಳ ನೇರ, ಪಾರದರ್ಶಕ ಮತ್ತು ಸೋರಿಕೆರಹಿತ ವಿತರಣೆಯನ್ನು ಸಕ್ರಿಯಗೊಳಿಸುತ್ತದೆ

ಪ್ರಕಟಣಾ ದಿನಾಂಕ: 27 AUG 2026 12:13PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಸ್ಟ್ 28, 2014 ರಂದು ತಮ್ಮ ಚೊಚ್ಚಲ ಕಾರ್ಯಕ್ರಮಗಳಲ್ಲಿ ಒಂದಾಗಿ ಪ್ರಾರಂಭಿಸಿದ 'ಪ್ರಧಾನ ಮಂತ್ರಿ ಜನ ಧನ ಯೋಜನೆ'ಯು (ಪಿಎಂಜೆಡಿವೈ) 12 ವರ್ಷಗಳನ್ನು ಪೂರೈಸಿದೆ. 'ಪಿಎಂ ಜನ್‌ ಧನ್‌ ಯೋಜನೆ'ಯ ಈ 12 ವರ್ಷಗಳು ಭಾರತದ ಆರ್ಥಿಕ ಚಿತ್ರಣದಲ್ಲಿ ಒಂದು ರೂಪಾಂತರಕ್ಕೆ ಸಾಕ್ಷಿಯಾಗಿವೆ ಮತ್ತು ಈ ಯೋಜನೆಯು ವಿಶ್ವಾದ್ಯಂತ ಆರ್ಥಿಕ ಸೇರ್ಪಡೆಗೆ ದಾರಿದೀಪವಾಗಿದೆ. ವಿಶ್ವದ ಅತಿದೊಡ್ಡ ಆರ್ಥಿಕ ಸೇರ್ಪಡೆ ಉಪಕ್ರಮವಾಗಿ, ‘ಪಿಎಂಜೆಡಿವೈ’ ಎಲ್ಲಾ ಭಾರತೀಯರಿಗೆ ಬ್ಯಾಂಕಿಂಗ್ ಸೇವೆ ಲಭ್ಯತೆಯನ್ನು ಮರು ವ್ಯಾಖ್ಯಾನಿಸಿದೆ.

ಹಣಕಾಸು ಸೇರ್ಪಡೆಯ ವಿಸ್ತರಣೆ:

ದೃಢವಾದ ಹಣಕಾಸು ಸೇರ್ಪಡೆ ಯೋಜನೆಗಳು ಮತ್ತು ವ್ಯಾಪ್ತಿ ವಿಸ್ತರಣೆ ಮೂಲಕ ಅಂಚಿನಲ್ಲಿರುವ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳನ್ನು ಬೆಂಬಲಿಸಲು ಹಣಕಾಸು ಸಚಿವಾಲಯ ಬದ್ಧವಾಗಿದೆ. ಯಾವುದೇ ಕನಿಷ್ಠ ಬ್ಯಾಲೆನ್ಸ್ ಅಗತ್ಯವಿಲ್ಲದೆ ಮತ್ತು ಯಾವುದೇ ನಿರ್ವಹಣಾ ಶುಲ್ಕಗಳಿಲ್ಲದೆ ಇದುವರೆಗೂ ಬ್ಯಾಂಕಿಂಗ್ ಸೌಲಭ್ಯವಿಲ್ಲದ ಪ್ರತಿಯೊಬ್ಬ ವಯಸ್ಕನು ಮೂಲ ಬ್ಯಾಂಕ್ ಖಾತೆಗೆ ಪ್ರವೇಶವನ್ನು ಪಡೆಯುವುದನ್ನು ಎಂದು 'ಪಿಎಂಜೆಡಿವೈ' ಖಚಿತಪಡಿಸುತ್ತದೆ.

ಪ್ರತಿ ಖಾತೆಯು ಉಚಿತ ರುಪೇ ಡೆಬಿಟ್ ಕಾರ್ಡ್ ನೊಂದಿಗೆ ಬರುತ್ತದೆ, 2 ಲಕ್ಷ ರೂ.ಗಳ ಅಪಘಾತ ವಿಮಾ ರಕ್ಷಣೆಯನ್ನು ಹೊಂದಿದೆ. ಇದು ಡಿಜಿಟಲ್ ವಹಿವಾಟು ಮತ್ತು ಆರ್ಥಿಕ ಭದ್ರತೆಯನ್ನು ಉತ್ತೇಜಿಸುತ್ತದೆ. ಖಾತೆದಾರರು 10,000 ರೂ.ವರೆಗಿನ ಓವರ್‌ಡ್ರಾಫ್ಟ್ ಸೌಲಭ್ಯಕ್ಕೆ ಅರ್ಹರಾಗಿದ್ದು, ತುರ್ತು ಸಂದರ್ಭಗಳಲ್ಲಿ ಇದು ಸುರಕ್ಷತಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ.

'ಪಿಎಂ ಜೀವನ್ ಜ್ಯೋತಿ ಬಿಮಾ ಯೋಜನೆ' ಮತ್ತು 'ಪಿಎಂ ಸುರಕ್ಷಾ ಬಿಮಾ ಯೋಜನೆ'ಯಂತಹ ಜನ ಸುರಕ್ಷಾ ಯೋಜನೆಗಳ ಮೂಲಕ ಅಸಂಘಟಿತ ವಲಯದ ಲಕ್ಷಾಂತರ ಕಾರ್ಮಿಕರಿಗೆ ಜೀವ ಮತ್ತು ಅಪಘಾತ ವಿಮೆಯನ್ನು ವಿಸ್ತರಿಸುವಲ್ಲಿ 'ಪಿಎಂಜೆಡಿ'ವೈ ಖಾತೆಗಳು ಪ್ರಮುಖ ಪಾತ್ರ ವಹಿಸಿವೆ.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಖಾತೆ ಸಹಾಯ ಸಚಿವ ಶ್ರೀ ಪಂಕಜ್ ಚೌಧರಿ ಅವರು, "ಆಗಸ್ಟ್ 28, 2014 ರಂದು, ಗೌರವಾನ್ವಿತ ಪ್ರಧಾನ ಮಂತ್ರಿಗಳು' ಪ್ರಧಾನ ಮಂತ್ರಿ ಜನ್ ಧನ್ ಯೋಜನೆ’(ಪಿಎಂಜೆಡಿವೈ) ಎಂದು ಜನಪ್ರಿಯವಾಗಿರುವ ಆರ್ಥಿಕ ಸೇರ್ಪಡೆಯ ರಾಷ್ಟ್ರೀಯ ಉಪಕ್ರಮಕ್ಕೆ ಚಾಲನೆ ನೀಡಿದರು. ಇಂದು, ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ) ತನ್ನ 12ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವುದು ನನಗೆ ಸಂತೋಷ ತಂದಿದೆ. ನಾವು 'ಪಿಎಂಜೆಡಿವೈ' ಅನ್ನು ಕೇವಲ 59 ಕೋಟಿಗೂ ಹೆಚ್ಚು ಖಾತೆಗಳನ್ನು ತೆರೆಯುವುದು, 3.17 ಲಕ್ಷ ಕೋಟಿ ರೂ.ಗಳ ಠೇವಣಿ ಬ್ಯಾಲೆನ್ಸ್ ಸಂಗ್ರಹಿಸುವುದು ಅಥವಾ 41.29 ಕೋಟಿ ಉಚಿತ ರುಪೇ ಕಾರ್ಡ್‌ಗಳ  ವಿತರಣೆಯ ದೃಷ್ಟಿಯಿಂದ ನೋಡಬಾರದು. ಬದಲಿಗೆ, ದೇಶದ ಬ್ಯಾಂಕಿಂಗ್ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಅದು ತಂದಿರುವ ರೂಪಾಂತರದ ಮೂಲಕ ನೋಡಬೇಕು.  ಇದರಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೆ,  ಕಡುಬಡವರಿಗೆ  ವಿಳಂಬವಿಲ್ಲದೆ  ಅಥವಾ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ಹಣಕಾಸು ಸೇವೆಗಳನ್ನು ತಲುಪಿಸುವುದು  ಸಾಧ್ಯವಾಗಿದೆ,’’ ಎಂದು ಹೇಳಿದರು.

ಪಿಎಂಜೆಡಿವೈ ಅಡಿಯಲ್ಲಿ, 78% ಖಾತೆಗಳನ್ನು ಗ್ರಾಮೀಣ ಅಥವಾ ಅರೆ-ನಗರ ಪ್ರದೇಶಗಳಲ್ಲಿ ತೆರೆಯಲಾಗಿದೆ ಮತ್ತು ಸರಿಸುಮಾರು 56% ಖಾತೆಗಳು ಮಹಿಳೆಯರ ಒಡೆತನದಲ್ಲಿವೆ. ದೇಶದ ದೂರದ ಪ್ರದೇಶಗಳಲ್ಲಿ ವಾಸಿಸುವ ಅವಕಾಶ ವಂಚಿತರನ್ನು ಔಪಚಾರಿಕ ಹಣಕಾಸು ವಲಯಕ್ಕೆ ತರುವ ಯೋಜನೆಯ ಆದ್ಯತೆಯನ್ನು ಇದು ಚಿತ್ರಿಸುತ್ತದೆ.

ಪ್ರಧಾನ ಮಂತ್ರಿ ಜನ ಧನ ಯೋಜನೆಯು ಲಕ್ಷಾಂತರ ಜನರನ್ನು, ವಿಶೇಷವಾಗಿ ಅಂಚಿನಲ್ಲಿರುವ ವರ್ಗಗಳನ್ನು ತಮ್ಮ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳ ಸುಧಾರಣೆಗಾಗಿ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು ಪ್ರವೇಶಿಸಲು  ಸಬಲೀಕರಣಗೊಳಿಸಿದೆ. ಖಾತೆಯ ಮಾಲೀಕತ್ವವು ಸಾಮಾನ್ಯ ಮನುಷ್ಯನಿಗೆ ವಿಮೆ ಮತ್ತು ಪಿಂಚಣಿ ರಕ್ಷಣೆಯನ್ನು ಹೊಂದಲು ಅನುವು ಮಾಡಿಕೊಟ್ಟಿದೆ. ಪ್ರತಿಯೊಂದು ರಾಜ್ಯ ಮತ್ತು ಜಿಲ್ಲೆಯಾದ್ಯಂತ ನಿರಂತರ ಅಭಿಯಾನಗಳ ಮೂಲಕ, ನಾವು ಬ್ಯಾಂಕ್ ಖಾತೆಗಳನ್ನು ಬಹುತೇಕ ಸಾರ್ವತ್ರಿಕವಾಗಿ ಎಲ್ಲರಿಗೂ ತಲುಪಿಸುವ ಮಟ್ಟಕ್ಕೆ  ಸಾಗಿದ್ದೇವೆ. ಜೊತೆಗೆ,  ವಿಮೆ ಮತ್ತು ಪಿಂಚಣಿ ಯೋಜನೆಗಳ  ಅಗತ್ಯ ಹೆಚ್ಚಾಗಿರುವವರಿಗೆ ಅವುಗ ವ್ಯಾಪ್ತಿಯನ್ನು ಸ್ಥಿರವಾಗಿ ವಿಸ್ತರಿಸಿದ್ದೇವೆ.

12ನೇ ವಾರ್ಷಿಕೋತ್ಸವದ ಈ ಸಂದರ್ಭದಲ್ಲಿ, ಪಿಎಂಜೆಡಿವೈ ಯೋಜನೆಯನ್ನು ಸಾಮಾನ್ಯ ಜನರ ಬಳಿಗೆ ಕೊಂಡೊಯ್ಯುವಲ್ಲಿ ಮತ್ತು ಅದನ್ನು ಯಶಸ್ವಿಗೊಳಿಸುವಲ್ಲಿ ಬ್ಯಾಂಕರ್‌ಗಳು ಮತ್ತು ದೇಶಾದ್ಯಂತ ನಿಯೋಜಿಸಲಾದ ವ್ಯಾಪಾರ ಪ್ರತಿನಿಧಿಗ ಪ್ರಯತ್ನಗಳನ್ನು ನಾನು ಶ್ಲಾಘಿಸುತ್ತೇನೆ.

'ಜಾಮ್' ತ್ರಿವಳಿ: ಕ್ರಾಂತಿಕಾರಿ ಬದಲಾವಣೆ

ಪಿಎಂ ಜನ್‌ಧನ್‌ ಯೋಜನೆಯ ಹೃದಯಭಾಗವಾಗಿರುವ 'ಜನಧನ್-ಆಧಾರ್-ಮೊಬೈಲ್'(ಜಾಮ್‌) ತ್ರಿವಳಿಯು ಹಣಕಾಸಿನ ನೆರವಿನ ನೇರ ವಿತರಣೆಗೆ ಸೋರಿಕೆ ರಹಿತ ವ್ಯವಸ್ಥೆ ಎಂದು ಸಾಬೀತಾಗಿದೆ. ‘ಜಾಮ್’ ಮೂಲಕ, ಸರ್ಕಾರವು ಮಧ್ಯವರ್ತಿಗಳನ್ನು ಮತ್ತು ವಿಳಂಬವನ್ನು ನಿವಾರಿಸಿ ಹಿಂದುಳಿದವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಕಲ್ಯಾಣ ಸವಲತ್ತುಗಳನ್ನು ಯಶಸ್ವಿಯಾಗಿ ವರ್ಗಾಯಿಸಿದೆ.

ಸಾಧನೆಗಳು ಮತ್ತು ಮೈಲುಗಲ್ಲುಗಳು:

ಎ. ಪಿಎಂಜೆಡಿವೈ ಖಾತೆಗಳು: 59.09 ಕೋಟಿ (ಆಗಸ್ಟ್ 19, 2026 ರಂತೆ)

ಆಗಸ್ಟ್ 19, 2026 ರಂತೆ, ಒಟ್ಟು ಪಿಎಂಜೆಡಿವೈ ಖಾತೆಗಳ ಸಂಖ್ಯೆ 59.09 ಕೋಟಿ; ಜನ್ ಧನ್ ಖಾತೆದಾರರಲ್ಲಿ ಶೇ.55.7 (32.92 ಕೋಟಿ) ಮಹಿಳೆಯರಾಗಿದ್ದು, 77.8% (45.95 ಕೋಟಿ) ಜನ್ ಧನ್ ಖಾತೆಗಳು ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿವೆ.

ಬಿ. ಪಿಎಂಜೆಡಿವೈ ಖಾತೆಗಳ ಅಡಿಯಲ್ಲಿ ಠೇವಣಿ - ₹ 3.17 ಲಕ್ಷ ಕೋಟಿ (ಆಗಸ್ಟ್ 19, 2026 ರಂತೆ)

ಪಿಎಂಜೆಡಿವೈ ಖಾತೆಗಳ ಅಡಿಯಲ್ಲಿ ಒಟ್ಟು ಠೇವಣಿ ಬ್ಯಾಲೆನ್ಸ್ 3,16,514 ಕೋಟಿ ರೂ. ಇದ್ದು, ಠೇವಣಿಗಳು ಪ್ರಮಾಣ ಸುಮಾರು 12.8 ಪಟ್ಟು ಹೆಚ್ಚಾಗಿದೆ. ಕಳೆದ 12 ವರ್ಷಗಳಲ್ಲಿ ಖಾತೆಗಳ ಸಂಖ್ಯೆ 2.3 ಪಟ್ಟು ಹೆಚ್ಚಾಗಿದೆ (ಆಗಸ್ಟ್ '26 / ಆಗಸ್ಟ್ '15).

ಸಿ. ಪ್ರತಿ ಪಿಎಂಜೆಡಿವೈ ಖಾತೆಗೆ ಸರಾಸರಿ ಠೇವಣಿ - ₹5,356 (19 ಆಗಸ್ಟ್ 2026 ರಂತೆ)

19.08.2026 ರಂತೆ ಪ್ರತಿ ಖಾತೆಯ ಸರಾಸರಿ ಠೇವಣಿ ₹ 5,356 ಆಗಿದೆ. ಕಳೆದ 12 ವರ್ಷಗಳಲ್ಲಿ (ಆಗಸ್ಟ್ '26 / ಆಗಸ್ಟ್ '15) ಪ್ರತಿ ಖಾತೆಯ ಸರಾಸರಿ ಠೇವಣಿ 3.4 ಪಟ್ಟು ಹೆಚ್ಚಾಗಿದೆ. ಸರಾಸರಿ ಠೇವಣಿಯಲ್ಲಿನ ಈ ಏರಿಕೆಯು ಖಾತೆಗಳ ಹೆಚ್ಚಿದ ಬಳಕೆ ಮತ್ತು ಖಾತೆದಾರರಲ್ಲಿ ಉಳಿತಾಯ ಮಾಡುವ ಅಭ್ಯಾಸವನ್ನು ಅಳವಡಿಸಿಕೊಳ್ಳುತ್ತಿರುವುದರ ಮತ್ತೊಂದು ಸೂಚನೆಯಾಗಿದೆ.

ಡಿ. ಪಿಎಂಜೆಡಿವೈ ಖಾತೆದಾರರಿಗೆ ನೀಡಲಾದ 'ರುಪೇ ಕಾರ್ಡ್‌'ಗಳು: 41.29 ಕೋಟಿ (ಆಗಸ್ಟ್ 19, 2026 ರಂತೆ)

ಪಿಎಂಜೆಡಿವೈ ಖಾತೆದಾರರಿಗೆ 41.29 ಕೋಟಿ 'ರುಪೇ ಕಾರ್'ಡ್‌ಗಳನ್ನು ನೀಡಲಾಗಿದೆ. 'ರುಪೇ ಕಾರ್'ಡ್‌ಗಳ ಸಂಖ್ಯೆ ಮತ್ತು ಬಳಕೆ ಕಾಲಾನಂತರದಲ್ಲಿ ಹೆಚ್ಚಾಗಿದೆ.

ಪಿಎಂಜೆಡಿವೈ ಯಶಸ್ಸು ಅದರ ಸಮರೋಪಾದಿಯ ಕಾರ್ಯವಿಧಾನ, ನಿಯಂತ್ರಕ ಬೆಂಬಲ, ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮತ್ತು ಬಯೋಮೆಟ್ರಿಕ್ ಪರಿಶೀಲನೆಗಾಗಿ ಆಧಾರ್‌ನಂತಹ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಏಕೀಕರಣದಿಂದ ಪ್ರೇರಿತವಾಗಿದೆ. ಇದು ಆರ್ಥಿಕ ಸೇರ್ಪಡೆಯತ್ತ ಮೊದಲ ಹೆಜ್ಜೆಯಾಗಿ ಮುಂದುವರೆದಿದೆ, ಜೊತೆಗೆ ಹಿಂದೆ ಔಪಚಾರಿಕ ಹಣಕಾಸಿನಿಂದ ಹೊರಗುಳಿದಿದ್ದವರಿಗೆ ಉಳಿತಾಯ ಮತ್ತು ಸಾಲದ ಸೌಲಭ್ಯವನ್ನು ಒದಗಿಸುವ  ಮೂಲಕ ಹೆಚ್ಚಿನ ಪ್ರಗತಿಯನ್ನು ಸಾಧಿಸಲಾಗುತ್ತಿದೆ. ಗೋಚರಿಸುವ ಉಳಿತಾಯ ಮಾದರಿಗಳೊಂದಿಗೆ, ಖಾತೆದಾರರು ಈಗ 'ಮುದ್ರಾ' ಸಾಲಗಳು ಸೇರಿದಂತೆ ವಿವಿಧ ಸಾಲ ಸೌಲಭ್ಯಗಳಿಗೆ ಅರ್ಹರಾಗಿದ್ದಾರೆ. ಇದು ವ್ಯಕ್ತಿಗಳಿಗೆ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಮತ್ತು ಆರ್ಥಿಕ ಸ್ಥಿರತೆಯನ್ನು ಹೊಂದಲು ಅವಕಾಶ ನೀಡುತ್ತದೆ.

ಪಿಎಂಜೆಡಿವೈ ತನ್ನ 13ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಮಯದಲ್ಲಿ,

ಇದು ಅಂತರ್ಗತ ಬೆಳವಣಿಗೆ, ಡಿಜಿಟಲ್ ನಾವೀನ್ಯತೆ ಮತ್ತು ಆರ್ಥಿಕ ಸಬಲೀಕರಣದ ದಾರಿದೀಪವಾಗಿ ಮುಂದುವರೆದಿದೆ. ಇದರ ನಿರಂತರ ಯಶಸ್ಸು, ಆರ್ಥಿಕ ಯೋಗಕ್ಷೇಮದ ಪ್ರಯಾಣದಲ್ಲಿ ಯಾವುದೇ ನಾಗರಿಕರು ಹಿಂದುಳಿಯದಂತೆ ನೋಡಿಕೊಳ್ಳುವ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2303705) ವಿಸಿಟರ್ ಕೌಂಟರ್ : 20
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali-TR , Assamese , Bengali , Punjabi , Gujarati , Tamil , Telugu , Malayalam