ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಜಾಗತಿಕ ಸ್ಪರ್ಧಾತ್ಮಕತೆ ಹೆಚ್ಚಿಸಲು ಮತ್ತು ದೇಶೀಯ ಮೌಲ್ಯವರ್ಧನೆಯನ್ನು ಬಲಪಡಿಸಲು ₹62,500 ಕೋಟಿ ಮೊಬೈಲ್ ಫೋನ್‌ ತಯಾರಿಕಾ ಯೋಜನೆಗೆ ಅಧಿಸೂಚನೆ


2027ರ ಮಧ್ಯಭಾಗದ ವೇಳೆಗೆ ಭಾರತದ ಮೊದಲ ಬಲಿಷ್ಠ ಸ್ವದೇಶಿ ಮೊಬೈಲ್‌ ಬ್ರ್ಯಾಂಡ್‌ ಹೊರಹೊಮ್ಮುವ ನಿರೀಕ್ಷೆ: ಅಶ್ವಿನಿ ವೈಷ್ಣವ್

ಮೊಬೈಲ್‌ ಫೋನ್‌ ಉತ್ಪಾದನಾ ಯೋಜನೆಯಿಂದ ಸುಮಾರು 60,000 ನೇರ ಉದ್ಯೋಗ ಸೃಷ್ಟಿ; ಒಟ್ಟಾರೆ ಸುಮಾರು ₹39 ಲಕ್ಷ ಕೋಟಿ ಮೌಲ್ಯದ ಉತ್ಪಾದನೆಗೆ ಉತ್ತೇಜನ

प्रविष्टि तिथि: 21 AUG 2026 7:14PM by PIB Bengaluru

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ₹62,500 ಕೋಟಿ ಬಜೆಟ್‌ ವೆಚ್ಚದ ಮೊಬೈಲ್‌ ಫೋನ್‌ ತಯಾರಿಕಾ ಯೋಜನೆ (ಎಂಪಿಎಂಎಸ್)ಗೆ ಅಧಿಸೂಚನೆ ಹೊರಡಿಸಿದೆ. ಉತ್ಪಾದನೆಯ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವುದು, ಹೆಚ್ಚಿನ ದೇಶೀಯ ಮೌಲ್ಯವರ್ಧನೆ (ಡಿವಿಎ) ಮೂಲಕ ಮೊಬೈಲ್‌ ತಯಾರಿಕಾ ಪೂರೈಕೆ ಸರಪಳಿಯನ್ನು ಇನ್ನಷ್ಟು ಬಲಪಡಿಸುವುದು ಹಾಗೂ ದೇಶೀಯ ಉತ್ಪಾದನಾ ಸಾಮರ್ಥ್ಯಗಳನ್ನು ವೃದ್ಧಿಸುವ ಮೂಲಕ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಭಾರತೀಯ ಮೊಬೈಲ್‌ ಫೋನ್‌ ಬ್ರ್ಯಾಂಡ್‌ ಗಳು ತಾಂತ್ರಿಕ ಸ್ವಾವಲಂಬನೆ ಸಾಧಿಸಲು, ಹೆಚ್ಚಿನ ಆರ್ಥಿಕ ಮೌಲ್ಯವನ್ನು ಸೃಷ್ಟಿಸಲು ಹಾಗೂ ವಿನ್ಯಾಸ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಭಾರತೀಯ ಪೇಟೆಂಟ್‌ ಗಳನ್ನು ಉತ್ತೇಜಿಸಲು ಎಂಪಿಎಂಎಸ್ ಬೆಂಬಲ ನೀಡಲಿದೆ. ಇದರ ಜೊತೆಗೆ ಉದ್ಯೋಗ ಸೃಷ್ಟಿಗೂ ಇದು ನೆರವಾಗಲಿದೆ.

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು, ಮೊಬೈಲ್‌ ಫೋನ್‌ ತಯಾರಿಕಾ ಯೋಜನೆಯು ಭಾರತೀಯ ಒಡೆತನದ ಮೊಬೈಲ್‌ ಬ್ರ್ಯಾಂಡ್‌‌ ಗಳು, ಬೌದ್ಧಿಕ ಆಸ್ತಿ (ಐಪಿ) ಮತ್ತು ವಿನ್ಯಾಸ ಅಭಿವೃದ್ಧಿಗೆ ಮಹತ್ವದ ಉತ್ತೇಜನ ನೀಡಲಿದೆ ಎಂದು ಹೇಳಿದರು. ನೈಜ ಭಾರತೀಯ ಒಡೆತನದ ಮಹತ್ವವನ್ನು ಒತ್ತಿಹೇಳಿದ ಸಚಿವರು, ವಿನ್ಯಾಸ, ಬೌದ್ಧಿಕ ಆಸ್ತಿ ಮತ್ತು ಬ್ರ್ಯಾಂಡ್‌ ಭಾರತೀಯರ ಒಡೆತನದಲ್ಲಿದ್ದು, ಆಯಾ ಮಾರುಕಟ್ಟೆ ವಿಭಾಗದ ಅತ್ಯುತ್ತಮ ಉತ್ಪನ್ನಗಳೊಂದಿಗೆ ಸ್ಪರ್ಧಿಸುವ ಸಾಮರ್ಥ್ಯ ಹೊಂದಿರಬೇಕು ಎಂದು ತಿಳಿಸಿದರು. ಬೌದ್ಧಿಕ ಆಸ್ತಿ ನಿಜವಾಗಿಯೂ ಭಾರತೀಯರ ಒಡೆತನದಲ್ಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಸೂಕ್ಷ್ಮ ಪರಿಶೀಲನೆ ನಡೆಸಲಿದೆ. ಉದ್ಯಮದೊಂದಿಗೆ ಸಮಾಲೋಚಿಸಿ ಹಣಕಾಸೇತರ ಮತ್ತು ಇತರ ಬೆಂಬಲ ಕ್ರಮಗಳನ್ನು ರೂಪಿಸಲಾಗುವುದು ಎಂದೂ ಅವರು ಹೇಳಿದರು.

ಹಿನ್ನೆಲೆ

ಪ್ರಧಾನಮಂತ್ರಿ ಅವರ ‘ಮೇಕ್ ಇನ್ ಇಂಡಿಯಾ’ ದೃಷ್ಟಿಕೋನದ ಪರಿಣಾಮವಾಗಿ, 2014-15ರ ಆರ್ಥಿಕ ವರ್ಷದಿಂದ ಎಲೆಕ್ಟ್ರಾನಿಕ್ಸ್‌ ಉತ್ಪಾದನೆ ಏಳು ಪಟ್ಟು ಮತ್ತು ರಫ್ತು 11 ಪಟ್ಟು ಹೆಚ್ಚಾಗಿದೆ. ಎಲೆಕ್ಟ್ರಾನಿಕ್ಸ್‌ ಉತ್ಪಾದನಾ ಕ್ಷೇತ್ರವು ಪ್ರಮುಖ ಉದ್ಯೋಗದಾತ ಕ್ಷೇತ್ರವಾಗಿ ಹೊರಹೊಮ್ಮಿದ್ದು, ವಿಶೇಷವಾಗಿ ದೂರದ ಹಳ್ಳಿಗಳ ಯುವಕರು ಮತ್ತು ಯುವತಿಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಿದೆ. ಹಲವು ಉತ್ಪಾದನಾ ಘಟಕಗಳಲ್ಲಿ ಒಂದೇ ಸ್ಥಳದಲ್ಲಿ 5,000ಕ್ಕೂ ಹೆಚ್ಚು ಮಂದಿ ಉದ್ಯೋಗದಲ್ಲಿದ್ದು, ಕೆಲವು ಘಟಕಗಳಲ್ಲಿ ಉದ್ಯೋಗಿಗಳ ಸಂಖ್ಯೆ 20,000ರವರೆಗೂ ತಲುಪಿದೆ. ಈ ಬೆಳವಣಿಗೆಗೆ ಮುಖ್ಯವಾಗಿ ಮೊಬೈಲ್‌ ಫೋನ್‌ ಉತ್ಪಾದನೆಯೇ ಚಾಲನೆ ನೀಡಿದೆ. ಇಂದು ಭಾರತದ ಎಲೆಕ್ಟ್ರಾನಿಕ್ಸ್‌ ಉತ್ಪಾದನೆ ಮತ್ತು ರಫ್ತಿನಲ್ಲಿ ಮೊಬೈಲ್‌ ಫೋನ್‌ ಗಳು ಪ್ರಮುಖ ಪಾಲು ಹೊಂದಿದ್ದು, ಜಾಗತಿಕ ಮೌಲ್ಯ ಸರಪಳಿಗಳಲ್ಲಿ ಭಾರತದ ಸ್ಥಾನವನ್ನು ಬಲಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿವೆ.

ಭಾರತವು ಈಗ ಉತ್ಪಾದನಾ ಪ್ರಮಾಣದ ಆಧಾರದ ಮೇಲೆ ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್‌ ಫೋನ್‌ ಉತ್ಪಾದಕ ರಾಷ್ಟ್ರವಾಗಿದೆ. ಇಂದು ಭಾರತದಲ್ಲಿ ಬಳಸಲಾಗುತ್ತಿರುವ ಮೊಬೈಲ್‌ ಫೋನ್‌ ಗಳಲ್ಲಿ ಶೇ.99.2 ರಷ್ಟು ಭಾರತದಲ್ಲೇ ಉತ್ಪಾದನೆಯಾಗಿವೆ. 2025ರಲ್ಲಿ ಸ್ಮಾರ್ಟ್‌ಫೋನ್‌ ಗಳು ಭಾರತದ ಅತಿದೊಡ್ಡ ಏಕೈಕ ರಫ್ತು ಉತ್ಪನ್ನ ವಿಭಾಗವಾಗಿ ಹೊರಹೊಮ್ಮಿದ್ದು, ಡೀಸೆಲ್‌ ಇಂಧನ ಮತ್ತು ಕತ್ತರಿಸಿದ ವಜ್ರಗಳಂತಹ ಸಾಂಪ್ರದಾಯಿಕ ಪ್ರಮುಖ ರಫ್ತು ಉತ್ಪನ್ನಗಳನ್ನು ಹಿಂದಿಕ್ಕಿವೆ.

ದೊಡ್ಡ ಪ್ರಮಾಣದ ಎಲೆಕ್ಟ್ರಾನಿಕ್ಸ್‌ ಉತ್ಪಾದನೆಗಾಗಿ ಜಾರಿಗೆ ತಂದ ಉತ್ಪಾದನೆ ಆಧಾರಿತ ಪ್ರೋತ್ಸಾಹಧನ (PLI-LSEM) ಯೋಜನೆಯು ಅತ್ಯಂತ ಯಶಸ್ವಿ ಪಿ ಎಲ್‌ ಐ ಯೋಜನೆಗಳಲ್ಲಿ ಒಂದಾಗಿದ್ದು, ಮೊಬೈಲ್‌ ಫೋನ್‌ ಉತ್ಪಾದನೆ ಮತ್ತು ರಫ್ತಿನ ಜಾಗತಿಕ ಕೇಂದ್ರವಾಗಿ ಭಾರತವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಯೋಜನೆಯ ಅವಧಿ 31 ಮಾರ್ಚ್ 2026ರಂದು ಮುಕ್ತಾಯಗೊಂಡಿದೆ. ಬೆಳವಣಿಗೆಯ ಈ ವೇಗವನ್ನು ಮುಂದುವರಿಸುವುದರ ಜೊತೆಗೆ ಮೊಬೈಲ್‌ ಫೋನ್‌ ಉತ್ಪಾದನೆಯನ್ನು ಮತ್ತಷ್ಟು ವಿಸ್ತರಿಸಲು ಸರ್ಕಾರ ಇದೀಗ ಮೊಬೈಲ್‌ ಫೋನ್‌ ಉತ್ಪಾದನಾ ಯೋಜನೆ (ಎಂಪಿಎಂಎಸ್)ಗೆ ಅಧಿಸೂಚನೆ ಹೊರಡಿಸಿದೆ.

ಎಂಪಿಎಂಎಎಸ್‌ ನ ಪ್ರಮುಖ ಅಂಶಗಳು

ಯೋಜನೆಯು ಎರಡು ಗುರಿ ವಿಭಾಗಗಳನ್ನು ಹೊಂದಿದೆ:

  • ಗುರಿ ವಿಭಾಗ 1 (TS1): ಮೊಬೈಲ್‌ ಫೋನ್‌ ಉತ್ಪಾದನೆಗೆ ಪ್ರೋತ್ಸಾಹಧನ.
  • ಗುರಿ ವಿಭಾಗ 2 (TS2): ಭಾರತೀಯ ಮೊಬೈಲ್‌ ಫೋನ್‌ ಬ್ರ್ಯಾಂಡ್‌ ಗಳಿಗೆ ಬೆಂಬಲ.

ಯೋಜನೆಯ ಅವಧಿ 5 ವರ್ಷಗಳಾಗಿದ್ದು, 2026-27ರಿಂದ 2030-31ರ ಆರ್ಥಿಕ ವರ್ಷದವರೆಗೆ ಜಾರಿಯಲ್ಲಿರಲಿದೆ. TS2 ಅಡಿಯಲ್ಲಿ ಅರ್ಜಿದಾರರಿಗೆ ಒಂದು ವರ್ಷದ ಸಿದ್ಧತಾ ಅವಧಿಯನ್ನು ನೀಡಬಹುದಾಗಿದೆ. TS1 ಅಡಿಯಲ್ಲಿ ಶೇ.2.25 ರಿಂದ ಶೇ.5 ರವರೆಗೆ ವಿಭಿನ್ನ ದರದ ಪ್ರೋತ್ಸಾಹಧನ ಒದಗಿಸಲಾಗುತ್ತದೆ. TS2 ಅಡಿಯಲ್ಲಿ ಭಾರತೀಯ ಬ್ರ್ಯಾಂಡ್‌ ಗಳಿಗೆ ಶೇ.5 ಪ್ರೋತ್ಸಾಹಧನ ಹಾಗೂ ಭಾರತೀಯ ವಿನ್ಯಾಸ ಮತ್ತು ಸಂಶೋಧನೆ & ಅಭಿವೃದ್ಧಿಗೆ ಹೆಚ್ಚುವರಿಯಾಗಿ ಶೇ.3 ಪ್ರೋತ್ಸಾಹಧನ ನೀಡಲಾಗುತ್ತದೆ. ಇದಲ್ಲದೆ, ಭಾರತೀಯ ಬ್ರ್ಯಾಂಡ್‌ ಗಳಿಗೆ ಹಣಕಾಸೇತರ ಬೆಂಬಲವನ್ನೂ ಯೋಜನೆಯಡಿ ಒದಗಿಸಲಾಗುತ್ತದೆ.

ಯೋಜನೆಯ ಎರಡೂ ಗುರಿ ವಿಭಾಗಗಳ ಅಡಿಯಲ್ಲಿ ಪ್ರಮುಖ ಘಟಕಗಳು/ಉಪಘಟಕಗಳನ್ನು ದೇಶೀಯವಾಗಿ ಖರೀದಿಸುವುದಕ್ಕೆ ಹೆಚ್ಚುವರಿಯಾಗಿ ಶೇ.1.5ರವರೆಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ಯೋಜನೆಯಡಿ ಅರ್ಜಿ ಸಲ್ಲಿಸುವವರು ಭಾರತದಲ್ಲಿ ನೋಂದಾಯಿತ ಮೊಬೈಲ್‌ ಫೋನ್‌ ಉತ್ಪಾದಕರಾಗಿರಬೇಕು. ಇದರಲ್ಲಿ ಎಲೆಕ್ಟ್ರಾನಿಕ್ಸ್‌ ಮ್ಯಾನುಫ್ಯಾಕ್ಚರಿಂಗ್‌ ಸರ್ವಿಸಸ್‌ (ಇಎಂಎಸ್) ಪೂರೈಕೆದಾರರೂ ಸೇರಿದ್ದಾರೆ. ಅರ್ಜಿದಾರರಿಗೆ ಸಂಬಂಧಿಸಿದ ಮಾರಾಟ ಮತ್ತು ಪಾವತಿಸಬೇಕಾದ ಪ್ರೋತ್ಸಾಹಧನವನ್ನು ಬ್ರ್ಯಾಂಡ್‌‌ ವಾರು ಲೆಕ್ಕಹಾಕಲಾಗುತ್ತದೆ.

ಅರ್ಹತಾ ಮಾನದಂಡಗಳು

TS1 ಅಡಿಯಲ್ಲಿ ಭಾರತದಲ್ಲಿ ನೋಂದಾಯಿತ ಮೊಬೈಲ್‌ ಫೋನ್‌ ಉತ್ಪಾದಕರು ಹಾಗೂ ಇಎಂಎಸ್ ಕಂಪನಿಗಳು ಅರ್ಹರಾಗಿದ್ದು, 2025-26ರ ಆರ್ಥಿಕ ವರ್ಷದಲ್ಲಿ ಕನಿಷ್ಠ ₹10,000 ಕೋಟಿ ವಹಿವಾಟು ಹೊಂದಿರಬೇಕು. ಈಗಾಗಲೇ ಅಸ್ತಿತ್ವದಲ್ಲಿರುವ ಬ್ರ್ಯಾಂಡ್‌ ಗಳು 2025-26ರ ಮಾರಾಟದ ಮಟ್ಟಕ್ಕಿಂತ ಹೆಚ್ಚುವರಿಯಾಗಿ ಪ್ರತಿವರ್ಷ ಕನಿಷ್ಠ ₹₹5,000 ಕೋಟಿ ವಾರ್ಷಿಕ ಮಾರಾಟದ ಮಿತಿಯನ್ನು ಪೂರೈಸಬೇಕು. ಹೊಸ ಬ್ರ್ಯಾಂಡ್‌ ಭಾರತದಲ್ಲಿ ಒಟ್ಟು ವಾರ್ಷಿಕ ಮಾರಾಟ ₹₹10,000 ಕೋಟಿಯನ್ನು ತಲುಪಿದ ನಂತರವೇ ಅರ್ಹತೆ ಪಡೆಯಲಿದೆ. ನಂತರ ಪ್ರತಿವರ್ಷ ₹₹5,000 ಕೋಟಿಯ ವಾರ್ಷಿಕ ಮಾರಾಟದ ಮಿತಿಯನ್ನು ಪೂರೈಸಬೇಕು.

TS2 ಅಡಿಯಲ್ಲಿ ಭಾರತದಲ್ಲಿ ನೋಂದಾಯಿತ ಮೊಬೈಲ್‌ ಫೋನ್‌ ಉತ್ಪಾದಕರು ಹಾಗೂ ಇಎಂಎಸ್ ಕಂಪನಿಗಳು ಅರ್ಹರಾಗಿದ್ದು, 2025-26ರ ಆರ್ಥಿಕ ವರ್ಷದಲ್ಲಿ ಕನಿಷ್ಠ ‌₹1,000 ಕೋಟಿ ವಹಿವಾಟು ಹೊಂದಿರಬೇಕು. ಜೊತೆಗೆ ‘ಭಾರತೀಯ ಬ್ರ್ಯಾಂಡ್‌ ’ಗೆ ನಿಗದಿಪಡಿಸಿರುವ ಎಲ್ಲ ಮಾನದಂಡಗಳನ್ನು ಪೂರೈಸಬೇಕು. ಅವುಗಳೆಂದರೆ: ಭಾರತದಲ್ಲಿ ನೋಂದಣಿಯಾಗಿರಬೇಕು/ಸ್ಥಾಪಿತವಾಗಿರಬೇಕು; ಬೌದ್ಧಿಕ ಆಸ್ತಿ ಮತ್ತು ಟ್ರೇಡ್‌ಮಾರ್ಕ್‌ ಭಾರತದಲ್ಲೇ ಹೊಂದಿರಬೇಕು; ನಿರ್ವಹಣಾ ನಿಯಂತ್ರಣ ಭಾರತೀಯ ನಾಗರಿಕರ ಕೈಯಲ್ಲಿರಬೇಕು; ಶೇ.51ಕ್ಕಿಂತ ಹೆಚ್ಚು ಷೇರುಪಾಲು ಭಾರತೀಯ ನಾಗರಿಕರ ಒಡೆತನದಲ್ಲಿರಬೇಕು; ಭಾರತದಲ್ಲಿ ಸ್ವಂತ ಆರ್&ಡಿ ಮತ್ತು ವಿನ್ಯಾಸ ಸಾಮರ್ಥ್ಯ ಹೊಂದಿರಬೇಕು.

ದೇಶೀಯ ಖರೀದಿಗೆ ಹೆಚ್ಚುವರಿ ಪ್ರೋತ್ಸಾಹಧನ

ಭಾರತೀಯ ಮೊಬೈಲ್‌ ಫೋನ್‌ ಉತ್ಪಾದನಾ ಪರಿಸರ ವ್ಯವಸ್ಥೆಯಲ್ಲಿ ದೇಶೀಯ ಉತ್ಪಾದನೆಯನ್ನು ಮತ್ತಷ್ಟು ವೇಗಗೊಳಿಸುವ ಮತ್ತು ಆತ್ಮನಿರ್ಭರತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ, ಪ್ರಮುಖ ಘಟಕಗಳು ಮತ್ತು ಉಪಘಟಕಗಳನ್ನು ದೇಶೀಯವಾಗಿ ಖರೀದಿಸುವುದಕ್ಕೆ ಶೇ.1.5ರವರೆಗೆ ಹೆಚ್ಚುವರಿ ಪ್ರೋತ್ಸಾಹಧವನ್ನು ಯೋಜನೆ ಒದಗಿಸುತ್ತದೆ.

ಒಂದು ಆರ್ಥಿಕ ವರ್ಷದಲ್ಲಿ ಉತ್ಪಾದಿಸಲಾದ ಒಟ್ಟು ಮೊಬೈಲ್ ಫೋನ್ ಯುನಿಟ್‌ ಗಳಲ್ಲಿ ಕನಿಷ್ಠ ಶೇ. 25 ರಷ್ಟು ಇಂತಹ ಘಟಕಗಳನ್ನು ದೇಶೀಯವಾಗಿ ಬಳಸಿದ್ದರೆ ಮಾತ್ರ ಈ ಸೌಲಭ್ಯ ಸಿಗುತ್ತದೆ. ಈ ಹೆಚ್ಚುವರಿ ಪ್ರೋತ್ಸಾಹಕವನ್ನು ನೈಜ, ಆಳವಾದ ದೇಶೀಯ ಉತ್ಪಾದನೆಗೆ ಪ್ರತಿಫಲ ನೀಡಲು ಮತ್ತು ಬಲಪಡಿಸಲು ವಿನ್ಯಾಸಗೊಳಿಸಲಾಗಿದೆ.

ನಿರೀಕ್ಷಿತ ಫಲಿತಾಂಶಗಳು

ಯೋಜನೆಯ ಅವಧಿಯಲ್ಲಿ ದೇಶದ ಒಟ್ಟಾರೆ ಮೊಬೈಲ್‌ ಫೋನ್‌ ಉತ್ಪಾದನೆಯ ಮೌಲ್ಯವು ಸುಮಾರು ₹39 ಲಕ್ಷ ಕೋಟಿಗೆ ತಲುಪುವ ನಿರೀಕ್ಷೆಯಿದೆ. ಮೊಬೈಲ್‌ ಫೋನ್‌ ರಫ್ತಿನಲ್ಲಿಯೂ ಗಣನೀಯ ಹೆಚ್ಚಳವಾಗುವ ನಿರೀಕ್ಷೆಯಿದೆ.

ಎಂಪಿಎಂಎಸ್ ಯೋಜನೆಯಿಂದ ಸುಮಾರು 60,000 ನೇರ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದ್ದು, ಇದು ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಹಾಗೂ ಜಾಗತಿಕ ಎಲೆಕ್ಟ್ರಾನಿಕ್ಸ್‌ ಉತ್ಪಾದನಾ ಕೇಂದ್ರವಾಗಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸಲು ನೆರವಾಗಲಿದೆ.

 

*****

 


(रिलीज़ आईडी: 2302161) आगंतुक पटल : 6
इस विज्ञप्ति को इन भाषाओं में पढ़ें: Odia , English , Urdu , Marathi , हिन्दी , Gujarati , Tamil