ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

4ನೇ ಭಾರತ-ಸಿಂಗಾಪುರ್ ಸಚಿವರ ದುಂಡುಮೇಜಿನ ಸಭೆ ಮತ್ತು 4ನೇ ಭಾರತ-ಸಿಂಗಾಪುರ್ ಉದ್ಯಮ ದುಂಡುಮೇಜಿನ ಸಭೆಯಲ್ಲಿ ಪಾಲ್ಗೊಳ್ಳಲು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಸಿಂಗಾಪುರಕ್ಕೆ ತೆರಳಿದ್ದಾರೆ


ಸಿಂಗಾಪುರ್ ನಲ್ಲಿ ಬಿ2ಬಿ, ಜಿ2ಬಿ ಮತ್ತು ಸಾಂಸ್ಥಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲಿರುವ ಸುಮಾರು 70 ಸದಸ್ಯರ ಭಾರತೀಯ ವ್ಯಾಪಾರ ನಿಯೋಗ

ಭಾರತೀಯ ಕೃಷಿ-ಆಹಾರ ರಫ್ತುಗಳನ್ನು ಉತ್ತೇಜಿಸಲು ಸರ್ಕಾರದಿಂದ ವ್ಯವಹಾರಕ್ಕೆ ಉನ್ನತ ಮಟ್ಟದ ಕಾರ್ಯಕ್ರಮಗಳನ್ನು ನಡೆಸಲು ಮತ್ತು ಎಪಿಇಡಿಎ–ಫೇರ್ಪ್ರೈಸ್ ಉಪಕ್ರಮಕ್ಕೆ ಭೇಟಿ ನೀಡಲಿರುವ ಶ್ರೀ ಗೋಯಲ್

प्रविष्टि तिथि: 19 AUG 2026 10:18AM by PIB Bengaluru

ಭಾರತ-ಸಿಂಗಾಪುರ್ ಸಚಿವರ ದುಂಡುಮೇಜಿನ ಸಭೆ (ಐಎಸ್ ಎಂ ಆರ್) ಚೌಕಟ್ಟಿನಡಿಯಲ್ಲಿ ಉನ್ನತ ಮಟ್ಟದ ತೊಡಗಿಸಿಕೊಳ್ಳಿಕೆಯ ಭಾಗವಾಗಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು 2026ರ ಆಗಸ್ಟ್ 19 ರಿಂದ 21 ರವರೆಗೆ ಸಿಂಗಾಪುರ್ ದೇಶಕ್ಕೆ ಭೇಟಿ ನೀಡುತ್ತಿದ್ದಾರೆ.

ಭಾರತ ಮತ್ತು ಸಿಂಗಾಪುರ್ ನಡುವಿನ ಆರ್ಥಿಕ ಮತ್ತು ವಾಣಿಜ್ಯ ಸಂಬಂಧಗಳನ್ನು ಬಲಪಡಿಸಲು ವಿವಿಧ ಕ್ಷೇತ್ರಗಳ ಸುಮಾರು 70 ಹಿರಿಯ ಉದ್ಯಮ ಮುಖಂಡರನ್ನೊಳಗೊಂಡ ಭಾರತೀಯ ವ್ಯಾಪಾರ ನಿಯೋಗವು ಶ್ರೀ ಪಿಯೂಷ್ ಗೋಯಲ್ ಅವರೊಂದಿಗೆ ಸಿಂಗಾಪುರ್ ಗೆ ಭೇಟಿ ನೀಡುತ್ತಿದೆ. ಈ ನಿಯೋಗದಲ್ಲಿ ತಂತ್ರಜ್ಞಾನ, ತಂತ್ರಾಂಶ  ಮತ್ತು ಕೃತಕ ಬುದ್ಧಿಮತ್ತೆ, ಉತ್ಪಾದನೆ ಮತ್ತು ಎಂಜಿನಿಯರಿಂಗ್, ಮೂಲಸೌಕರ್ಯ ಮತ್ತು ಸುಸ್ಥಿರತೆ, ಹಣಕಾಸು ಸೇವೆಗಳು ಮತ್ತು ಫಿನ್ ಟೆಕ್, ಆರೋಗ್ಯ ಮತ್ತು ಜೀವ ವಿಜ್ಞಾನ, ಆಹಾರ ಮತ್ತು ಕೃಷಿ, ಸಾಗಾಣಿಕೆ, ಸಾಗರ ಮತ್ತು ವ್ಯಾಪಾರ, ಹಾಗೂ ವೃತ್ತಿಪರ ಸೇವಾ ಕ್ಷೇತ್ರಗಳ ಪ್ರತಿನಿಧಿಗಳು ಇದ್ದಾರೆ.

ಈ ನಿಯೋಗವು ಬಿ2ಬಿ, ಜಿ2ಬಿ ಮತ್ತು ಸಾಂಸ್ಥಿಕ ವ್ಯವಹಾರಗಳನ್ನು ಕೈಗೊಳ್ಳಲಿದ್ದು, ಸಿಂಗಾಪುರ್ ನ ಪ್ರಮುಖ ಶ್ರೇಷ್ಠತಾ ಕೇಂದ್ರಗಳು (ಸಿಒಇಗಳು) ಮತ್ತು ಕೌಶಲ್ಯ ಸಂಸ್ಥೆಗಳಿಗೆ ಭೇಟಿ ನೀಡಲಿದೆ. ಈ ಕಾರ್ಯಕ್ರಮಗಳು ಪಾಲುದಾರಿಕೆ, ಹೂಡಿಕೆ, ಮಾರುಕಟ್ಟೆ ಪ್ರವೇಶ, ತಂತ್ರಜ್ಞಾನ ಸಹಯೋಗ ಮತ್ತು ಪ್ರತಿಭಾ ವಿಕಸನದ ಮೇಲೆ ಗಮನ ಹರಿಸಲಿವೆ. ಭಾರತ-ಸಿಂಗಾಪುರ್ ಸಚಿವರ ದುಂಡುಮೇಜಿನ ಸಭೆ ಮತ್ತು ಭಾರತ-ಸಿಂಗಾಪುರ್ ಉದ್ಯಮ ದುಂಡುಮೇಜಿನ ಸಭೆಗಳ ಸಂದರ್ಭದಲ್ಲಿ ಈ ಭೇಟಿಯನ್ನು ಆಯೋಜಿಸಲಾಗಿದೆ.

ಈ ಭೇಟಿಯ ಸಂದರ್ಭದಲ್ಲಿ, ಶ್ರೀ ಪಿಯೂಷ್ ಗೋಯಲ್ ಅವರು ಆಗಸ್ಟ್ 20, 2026ರಂದು ನಡೆಯಲಿರುವ 4 ನೇ ಭಾರತ-ಸಿಂಗಾಪುರ್ ಸಚಿವರ ದುಂಡುಮೇಜಿನ ಸಭೆಯಲ್ಲಿ (ಐ ಎಸ್ ಎಂ ಆರ್) ಭಾಗವಹಿಸಲಿದ್ದಾರೆ. ಐಎಸ್ ಎಂ ಆರ್ ಸಂಸ್ಥೆಯು ಭಾರತ-ಸಿಂಗಾಪುರ್ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು (ಸಿ ಎಸ್ ಪಿ) ಮುನ್ನಡೆಸುವ ಅತ್ಯುನ್ನತ ಸಚಿವರ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ದುಂಡುಮೇಜಿನ ಸಭೆಯು 4ನೇ ಭಾರತ-ಸಿಂಗಾಪುರ್ ಉದ್ಯಮ ದುಂಡುಮೇಜಿನ ಸಭೆಯೊಂದಿಗೆ (ಐ ಎಸ್ ಬಿ ಆರ್) ಜಂಟಿಯಾಗಿ ನಡೆಯಲಿದ್ದು, ನಂತರ ತಿಳುವಳಿಕಾ ಒಪ್ಪಂದಗಳಿಗೆ  ಸಹಿ ಹಾಕುವ ಸಮಾರಂಭ ಮತ್ತು ಐ ಎಸ್ ಎಂ ಆರ್ ಹಾಗೂ ಐಎಸ್ ಬಿ ಆರ್ ನ ಎಲ್ಲಾ ಪ್ರತಿನಿಧಿಗಳಿಗೆ ಸಿಂಗಾಪುರ್ ನ ಉಪ ಪ್ರಧಾನ ಮಂತ್ರಿಯವರು ಆಯೋಜಿಸುವ ಮಧ್ಯಾಹ್ನದ ಭೋಜನಕೂಟ ನಡೆಯಲಿದೆ.

ಸಚಿವರು ತಮ್ಮ ಸಹೋದ್ಯೋಗಿಗಳಾದ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್; ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವರಾದ ಡಾ. ಸುಬ್ರಹ್ಮಣ್ಯಂ ಜೈಶಂಕರ್; ಮತ್ತು ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ, ಹಾಗೂ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರೊಂದಿಗೆ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಭೇಟಿಯ ಸಮಯದಲ್ಲಿ ಸಚಿವರು ಸಿಂಗಾಪುರ್ ನ ತಮ್ಮ ಸಹವರ್ತಿಗಳು ಮತ್ತು ಇತರ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ.

ಶ್ರೀ ಪಿಯೂಷ್ ಗೋಯಲ್ ಅವರು ಇಸ್ತಾನಾದಲ್ಲಿ ಸಿಂಗಾಪುರ್ ನ  ಪ್ರಧಾನ ಮಂತ್ರಿ ಶ್ರೀ ಲಾರೆನ್ಸ್ ವಾಂಗ್ ಅವರನ್ನು ಭೇಟಿ ಮಾಡಲಿದ್ದಾರೆ.

ಕಾರ್ಯಕ್ರಮದ ನಡುವೆ, ಶ್ರೀ ಗೋಯಲ್ ಅವರು ಗ್ಲೋಬಲ್ ಫೈನಾನ್ಸ್ & ಟೆಕ್ನಾಲಜಿ ನೆಟ್ ವರ್ಕ್, ವೈಪಿಒ ಗ್ಲೋಬಲ್, ಮಿಲ್ಕೆನ್ ಇನ್ ಸ್ಟಿಟ್ಯೂಟ್, ಕೆಪ್ಪೆಲ್ ಇನ್ ಫ್ರಾಸ್ಟ್ರಕ್ಚರ್, ಟೆಮಾಸೆಕ್ ಹೋಲ್ಡಿಂಗ್ಸ್ ಮತ್ತು ಐಹೆಚ್ ಹೆಚ್ ಹೆಲ್ತ್ ಕೇರ್, ಸಿಂಗಾಪುರ ಬಿಸಿನೆಸ್ ಫೆಡರೇಶನ್ (ಎಸ್ ಬಿ ಎಫ್) ಅಧ್ಯಕ್ಷರ ನೇತೃತ್ವದ ನಿಯೋಗ, ಟರ್ನರ್ & ಟೌನ್ಸೆಂಡ್ ಮತ್ತುಎಸ್ ಟಿಟಿ ಜಿಡಿಸಿಯ ಹಿರಿಯ ಪ್ರತಿನಿಧಿಗಳೊಂದಿಗೆ ಹಲವು ಜಿ2ಬಿ ಚರ್ಚೆಗಳನ್ನು ನಡೆಸಲಿದ್ದಾರೆ. ಈ ಸಭೆಗಳ ನಂತರ ಫ್ಯಾಮಿಲಿ ಆಫೀಸ್ ದುಂಡುಮೇಜಿನ ಸಭೆ ನಡೆಯಲಿದೆ.

ಸಿಂಗಾಪುರ್ ನ  ವಿದೇಶಾಂಗ ವ್ಯವಹಾರಗಳು ಹಾಗೂ ವ್ಯಾಪಾರ ಮತ್ತು ಕೈಗಾರಿಕಾ ರಾಜ್ಯ ಸಚಿವರಾದ ಶ್ರೀಮತಿ ಗನ್ ಸಿಯೋ ಹುವಾಂಗ್ ಅವರೊಂದಿಗೆ ಸಚಿವರು ಸಿಟಿ ಸ್ಕ್ವೇರ್ ಮಾಲ್ನಲ್ಲಿ ಆಯೋಜಿಸಲಾದ ಎಪಿಇಡಿಎ -ಫೇರ್ಪ್ರೈಸ್  ಉಪಕ್ರಮಕ್ಕೆ ಜಂಟಿ ಭೇಟಿ ನೀಡಲಿದ್ದಾರೆ. ಭಾರತೀಯ ಕೃಷಿ-ಆಹಾರ ರಫ್ತನ್ನು ಉತ್ತೇಜಿಸುವುದು ಮತ್ತು ಸಿಂಗಾಪುರದ ಚಿಲ್ಲರೆ ಮಾರುಕಟ್ಟೆಯಲ್ಲಿ ಅವುಗಳ ಉಪಸ್ಥಿತಿಯನ್ನು ಬಲಪಡಿಸುವುದು ಈ ಯೋಜನೆಯ ಉದ್ದೇಶವಾಗಿದ್ದು, ಇದು ಎರಡೂ ದೇಶಗಳ ನಡುವಿನ ಆಳವಾದ ಕೃಷಿ-ವ್ಯಾಪಾರ ಸಂಪರ್ಕಗಳನ್ನು  ಪ್ರತಿಬಿಂಬಿಸುತ್ತದೆ.

ಇನ್ ಸೀಡ್ ಏಷ್ಯಾ ಕ್ಯಾಂಪಸ್ ನಲ್ಲಿ ಎಫ್ ಐ ಸಿ ಸಿ ಆಯೋಜಿಸಿರುವ ಭಾರತ-ಸಿಂಗಾಪುರ್ ವ್ಯಾಪಾರ ವೇದಿಕೆಯಲ್ಲಿಯೂ ಶ್ರೀ ಪಿಯೂಷ್ ಗೋಯಲ್ ಭಾಗವಹಿಸಲಿದ್ದು, “ಹೊಸ ಜಾಗತಿಕ ಬೆಳವಣಿಗೆಯ ಸಮೀಕರಣದಲ್ಲಿ ಭಾರತ: ಏಷ್ಯಾ ಮತ್ತು ವಿಶ್ವದ ಉದ್ಯಮಗಳಿಗೆ ಬೆಳವಣಿಗೆ ಮತ್ತು ಅವಕಾಶಗಳು” ಎಂಬ ವಿಷಯದ ಕುರಿತ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಭಾರತೀಯ ಮತ್ತು ಸಿಂಗಾಪುರ್ ನ ಉದ್ಯಮ ಸಮುದಾಯದೊಂದಿಗೆ ನೆಟ್ ವರ್ಕಿಂಗ್ ಭೋಜನಕೂಟ ನಡೆಯಲಿದೆ.

ಮರೀನಾ ಬೇ ಸ್ಯಾಂಡ್ಸ್ ಎಕ್ಸ್ ಪೋ ಮತ್ತು ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿರುವ ಐಸಿಎಐ ಆಸಿಯಾನ್ ಸಮ್ಮೇಳನ 2026ರಲ್ಲಿ ಸಚಿವರ ಪ್ರಮುಖ ಭಾಷಣದೊಂದಿಗೆ ಈ ಭೇಟಿಯು ಮುಕ್ತಾಯಗೊಳ್ಳಲಿದೆ.

ಸಿಂಗಾಪುರ್ ದೇಶವು ಭಾರತದ ಪ್ರಮುಖ ಆರ್ಥಿಕ ಪಾಲುದಾರ ಹಾಗೂ ಭಾರತಕ್ಕೆ ವಿದೇಶಿ ಹೂಡಿಕೆಯ ದೊಡ್ಡ ಮೂಲವಾಗಿ ಉಳಿದಿದೆ. 2025-26 ರ ಹಣಕಾಸು ವರ್ಷದಲ್ಲಿ, ಸಿಂಗಾಪುರ್ 19.8 ಶತಕೋಟಿ ಅಮೆರಿಕನ್ ಡಾಲರ್ ವಿದೇಶೀ ನೇರ ಹೂಡಿಕೆ (ಎಫ್ ಡಿ ಐ) ಹರಿವಿನೊಂದಿಗೆ ಭಾರತದಲ್ಲಿ ಅತಿ ದೊಡ್ಡ ವಿದೇಶಿ ನೇರ ಹೂಡಿಕೆದಾರ ರಾಷ್ಟ್ರವಾಗಿ ಹೊರಹೊಮ್ಮಿದೆ. ಏಪ್ರಿಲ್ 2000 ರಿಂದ ಮಾರ್ಚ್ 2026 ರವರೆಗಿನ ಒಟ್ಟು ಎಫ್ ಡಿ ಐ ಹರಿವು 194.68 ಶತಕೋಟಿ ಅಮೆರಿಕನ್ ಡಾಲರ್ ತಲುಪಿದ್ದು, ಇದು ಭಾರತದ ಒಟ್ಟು ಎಫ್ ಡಿ ಐ ಹರಿವಿನ 24.72% ರಷ್ಟಿದೆ.

ಸಿಂಗಾಪುರ್ ದೇಶವು ಆಸಿಯಾನ್ ಒಕ್ಕೂಟದಲ್ಲಿ ಭಾರತದ ಅತಿ ದೊಡ್ಡ ವ್ಯಾಪಾರ ಪಾಲುದಾರನಾಗಿದ್ದು, ಬಾಹ್ಯ ವಾಣಿಜ್ಯ ಸಾಲಗಳು ಮತ್ತು ವಿದೇಶಿ ಪೋರ್ಟ್ ಫೋಲಿಯೋ ಹೂಡಿಕೆಯ ಪ್ರಮುಖ ಮೂಲವಾಗಿದೆ. ಭಾರತ-ಸಿಂಗಾಪುರ್ ಸಮಗ್ರ ಆರ್ಥಿಕ ಸಹಕಾರ ಒಪ್ಪಂದದ (ಸಿಇಸಿಎ) ನಂತರ ದ್ವಿಪಕ್ಷೀಯ ವ್ಯಾಪಾರವು ಗಣನೀಯವಾಗಿ ವಿಸ್ತರಿಸಿದ್ದು, 2004-05 ರ ಹಣಕಾಸು ವರ್ಷದಲ್ಲಿದ್ದ 6.7 ಶತಕೋಟಿ ಅಮೆರಿಕನ್ ಡಾಲರ್ನಿಂದ 2025-26 ರ ಹಣಕಾಸು ವರ್ಷದಲ್ಲಿ 36.1 ಶತಕೋಟಿ ಅಮೆರಿಕನ್ ಡಾಲರ್ ಗೆ ಏರಿಕೆಯಾಗಿದೆ.

ಈ ಭೇಟಿಯು ಸಿಂಗಾಪುರ್ ನೊಂದಿಗಿನ ವ್ಯಾಪಾರ, ಹೂಡಿಕೆ ಮತ್ತು ಜನರ ಸಂಪರ್ಕವನ್ನು ಬಲಪಡಿಸುವ ಭಾರತದ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಸಿಂಗಾಪುರ್ ಭಾರತದ ಅತ್ಯಂತ ದೊಡ್ಡ ಎಫ್‌ಡಿಐ ಮೂಲಗಳಲ್ಲಿ ಒಂದಾಗಿದ್ದು, ಸುಧಾರಿತ ಉತ್ಪಾದನೆ, ಡಿಜಿಟಲೀಕರಣ, ಕೌಶಲ್ಯ ಅಭಿವೃದ್ಧಿ ಮತ್ತು ಹಸಿರು ಆರ್ಥಿಕತೆ   ಕ್ಷೇತ್ರಗಳಲ್ಲಿ ಪ್ರಮುಖ ಪಾಲುದಾರ ದೇಶವಾಗಿದೆ.

 

*****


(रिलीज़ आईडी: 2301147) आगंतुक पटल : 5
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Bengali , Bengali-TR , Gujarati