ಹಣಕಾಸು ಸಚಿವಾಲಯ
azadi ka amrit mahotsav

ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಸಾರ್ವಜನಿಕ ಹಣಕಾಸು ಸಂಸ್ಥೆಗಳಿಗಾಗಿ ಏಳು ವಿಷಯಾಧಾರಿತ ಕ್ಷೇತ್ರಗಳಲ್ಲಿ ಕಾರ್ಯಗತಗೊಳಿಸಬಹುದಾದ ಕಾರ್ಯತಂತ್ರಗಳೊಂದಿಗೆ 'ಪಿ ಎಸ್‌ ಬಿ ಕಾನ್‌ಫ್ಲುಯೆನ್ಸ್ 2026' ಮುಕ್ತಾಯ


2026ರ ಅಕ್ಟೋಬರ್ 2ರಿಂದ ಆರಂಭವಾಗುವ ಯುವಜನರಿಗಾಗಿ ಕೇಂದ್ರೀಕೃತವಾದ ಒಂದು ತಿಂಗಳ ಅಭಿಯಾನ ಕೈಗೊಳ್ಳುವಂತೆ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಕರೆ

ಯುವ ಗ್ರಾಹಕರೊಂದಿಗೆ ನಿರಂತರ ಸಂಬಂಧವನ್ನು ಬೆಳೆಸುವಂತೆ ಹಾಗೂ ಅವರ ಬದಲಾಗುತ್ತಿರುವ ಹಣಕಾಸು ಅಗತ್ಯಗಳಿಗೆ ಬೆಂಬಲ ನೀಡುವಂತೆ ಬ್ಯಾಂಕುಗಳಿಗೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಸೂಚನೆ

ಯುವಜನರನ್ನು ಬ್ಯಾಂಕಿಂಗ್ ಸೇವೆಗಳು ಮತ್ತು ಹಣಕಾಸು ಅವಕಾಶಗಳೊಂದಿಗೆ ಸಂಪರ್ಕಿಸಲು ಸಾಮಾನ್ಯ ಡಿಜಿಟಲ್ ವೇದಿಕೆಯ ಪರಿಕಲ್ಪನೆ

ವಿಕಸಿತ ಭಾರತ @2047ರತ್ತ ಭಾರತದ ಪಯಣದಲ್ಲಿ ಸಾಂಸ್ಥಿಕ ಸಾಮರ್ಥ್ಯವನ್ನು ಹೆಚ್ಚಿನ ಸ್ಪರ್ಧಾತ್ಮಕತೆ ಮತ್ತು ನಾಯಕತ್ವವಾಗಿ ಪರಿವರ್ತಿಸಿಕೊಳ್ಳುವಂತೆ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಸಾರ್ವಜನಿಕ ಹಣಕಾಸು ಸಂಸ್ಥೆಗಳಿಗೆ ಕರೆ

प्रविष्टि तिथि: 18 AUG 2026 7:52PM by PIB Bengaluru

ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆ (ಡಿ ಎಫ್‌ ಎಸ್) ಆಯೋಜಿಸಿದ್ದ ಎರಡು ದಿನಗಳ ಪಿ ಎಸ್‌ ಬಿ ಕಾನ್‌ಫ್ಲುಯೆನ್ಸ್ 2026, ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಮುಂದಿನ ಹಂತದ ಬೆಳವಣಿಗೆಗೆ ಸಂಬಂಧಿಸಿದ ಏಳು ವಿಷಯಾಧಾರಿತ ಕ್ಷೇತ್ರಗಳ ಕುರಿತು ಸಾರ್ವಜನಿಕ ವಲಯದ ಬ್ಯಾಂಕುಗಳು (ಪಿ ಎಸ್‌ ಬಿಗಳು), ಸಾರ್ವಜನಿಕ ಹಣಕಾಸು ಸಂಸ್ಥೆಗಳು (ಪಿ ಎಫ್‌ ಐಗಳು), ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ವಿಷಯ ತಜ್ಞರ ನಡುವೆ ನಡೆದ ವ್ಯಾಪಕ ಚರ್ಚೆಗಳ ಬಳಿಕ ಇಂದು ಮುಕ್ತಾಯಗೊಂಡಿತು.

ಎರಡನೇ ದಿನದ ಚರ್ಚೆಗಳು ಕೃಷಿ ಮತ್ತು ತೋಟಗಾರಿಕೆ ಮೌಲ್ಯ ಸರಪಳಿ ಮೂಲಸೌಕರ್ಯ, ಆದ್ಯತಾ ವಲಯಕ್ಕೆ ಸಾಲ ನೀಡಿಕೆ ಹಾಗೂ ಕ್ರೆಡಿಟ್ ಕಾರ್ಡ್ ವ್ಯವಹಾರದ ಮರುಕಲ್ಪನೆಯ ಮೇಲೆ ಕೇಂದ್ರೀಕೃತವಾಗಿದ್ದವು. ಇದರ ನಂತರ ನಡೆದ ಸಮಾರೋಪ ಪರಿಶೀಲನಾ ಸಭೆಗಳಲ್ಲಿ, ವಿಷಯಾಧಾರಿತ ಗುಂಪುಗಳು ಏಳು ವಿಷಯಗಳ ಕುರಿತಾದ ಚರ್ಚೆಗಳಿಂದ ಹೊರಹೊಮ್ಮಿದ ಕಾರ್ಯಗತಗೊಳಿಸಬಹುದಾದ ಕಾರ್ಯತಂತ್ರಗಳು ಮತ್ತು ನವೀನ ಪರಿಹಾರಗಳನ್ನು ಪ್ರಸ್ತುತಪಡಿಸಿದವು.

ಸಮಾರೋಪ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ಚರ್ಚೆಗಳನ್ನು ಸ್ಪಷ್ಟವಾದ ಫಲಿತಾಂಶಗಳಾಗಿ ಪರಿವರ್ತಿಸುವ ಅಗತ್ಯವನ್ನು ಒತ್ತಿಹೇಳಿದರು. ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಸಾರ್ವಜನಿಕ ಹಣಕಾಸು ಸಂಸ್ಥೆಗಳು ತಮ್ಮ ಸಾಂಸ್ಥಿಕ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿಕೊಳ್ಳಬೇಕು, ಉದಯೋನ್ಮುಖ ಅವಕಾಶಗಳನ್ನು ಮುಂಚಿತವಾಗಿ ಗುರುತಿಸಬೇಕು ಹಾಗೂ ಭಾರತದ ಬದಲಾಗುತ್ತಿರುವ ಆರ್ಥಿಕ ಅಗತ್ಯಗಳನ್ನು ಪೂರೈಸಲು ಅಗತ್ಯವಾದ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಅವರು ಕರೆ ನೀಡಿದರು.

ಯುವಜನರಿಗಾಗಿ ಬ್ಯಾಂಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಹಣಕಾಸು ಸಚಿವರು, 16 ವರ್ಷಕ್ಕಿಂತ ಮೇಲ್ಪಟ್ಟ ಯುವಜನರನ್ನು ಗಮನದಲ್ಲಿಟ್ಟುಕೊಂಡು, ಔಪಚಾರಿಕ ಹಣಕಾಸು ವ್ಯವಸ್ಥೆಗೆ ಪ್ರವೇಶಿಸುತ್ತಿರುವ ಯುವ ನಾಗರಿಕರೊಂದಿಗೆ ಸಂಪರ್ಕವನ್ನು ಬಲಪಡಿಸುವ ಉದ್ದೇಶದಿಂದ, ಭಾರತೀಯ ಬ್ಯಾಂಕುಗಳ ಸಂಘದ (ಐಬಿಎ) ಸಮನ್ವಯದೊಂದಿಗೆ 2026ರ ಅಕ್ಟೋಬರ್ 2ರಿಂದ ಆರಂಭವಾಗುವಂತೆ ಯುವಜನ ಕೇಂದ್ರಿತ ಒಂದು ತಿಂಗಳ ಅಭಿಯಾನವನ್ನು ಕೈಗೊಳ್ಳುವಂತೆ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಕರೆ ನೀಡಿದರು. ಈ ಉಪಕ್ರಮವು ಯುವ ಗ್ರಾಹಕರೊಂದಿಗೆ ನಿರಂತರ ಸಂಬಂಧವನ್ನು ಬೆಳೆಸುವ ಜೊತೆಗೆ, ಅವರು ಶಿಕ್ಷಣ, ಉದ್ಯೋಗ, ಉದ್ಯಮಶೀಲತೆ, ಹೂಡಿಕೆ ಮತ್ತು ಸಂಪತ್ತು ಸೃಷ್ಟಿಯ ವಿವಿಧ ಹಂತಗಳಲ್ಲಿ ಮುನ್ನಡೆಯುವ ಸಂದರ್ಭದಲ್ಲಿ ಅವರ ಬದಲಾಗುತ್ತಿರುವ ಹಣಕಾಸು ಅಗತ್ಯಗಳಿಗೆ ಬ್ಯಾಂಕುಗಳು ಬೆಂಬಲ ನೀಡಲು ನೆರವಾಗಲಿದೆ.

ಈ ಉಪಕ್ರಮದ ಭಾಗವಾಗಿ, ಯುವಜನರಿಗೆ ಬ್ಯಾಂಕಿಂಗ್ ಸೇವೆಗಳು ಹಾಗೂ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಗೆ ಸಂಬಂಧಿಸಿದ ಅವಕಾಶಗಳ ಕುರಿತು ಸರಳ ಮತ್ತು ಪ್ರಸ್ತುತ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಒದಗಿಸಲು ಸಾಮಾನ್ಯ ಆನ್‌ಲೈನ್ ಪೋರ್ಟಲ್/ಅಪ್ಲಿಕೇಶನ್ ರೂಪಿಸುವ ಪರಿಕಲ್ಪನೆಯನ್ನು ಹೊಂದಲಾಗಿದೆ. ಈ ಉಪಕ್ರಮಕ್ಕೆ ಕಾಲೇಜುಗಳು, ವಿಶ್ವವಿದ್ಯಾಲಯಗಳು, ಕೌಶಲ್ಯ ತರಬೇತಿ ಸಂಸ್ಥೆಗಳು ಮತ್ತು ಇತರ ಕ್ಯಾಂಪಸ್‌ ಗಳ ಮೂಲಕ ಭೌತಿಕ ಸಂಪರ್ಕ ಕಾರ್ಯಕ್ರಮಗಳು ಹಾಗೂ ಯುವಜನ ಕೇಂದ್ರಿತ ಸಂವಾದ ವೇದಿಕೆಗಳ ಮೂಲಕ ಪೂರಕ ಬೆಂಬಲ ಒದಗಿಸಲಾಗುವುದು.

ಆದ್ಯತಾ ವಲಯಕ್ಕೆ ಸಾಲ ನೀಡಿಕೆಯ (ಪಿ ಎಸ್‌ ಎಲ್) ಮಹತ್ವವನ್ನು ಒತ್ತಿಹೇಳಿದ ಹಣಕಾಸು ಸಚಿವರು, ಪ್ರತ್ಯೇಕ ಗುರಿಗಳು ಮತ್ತು ಉಪಗುರಿಗಳಲ್ಲಿನ ಕೊರತೆಗಳ ಬಗ್ಗೆ ಸೂಕ್ಷ್ಮ ಗಮನ ಹರಿಸುವ ಅಗತ್ಯವನ್ನು ಪ್ರತಿಪಾದಿಸಿದರು. ಉದ್ದೇಶಿತ ಫಲಾನುಭವಿಗಳಿಗೆ ನೈಜ ಮತ್ತು ಉತ್ಪಾದಕ ಸಾಲದ ಹರಿವಿನ ಮೂಲಕ ಗುರಿಗಳಲ್ಲಿನ ಕೊರತೆಯನ್ನು ಸಾಧ್ಯವಾದಷ್ಟು ಕಡಿಮೆಗೊಳಿಸುವ ಉದ್ದೇಶದಿಂದ, ಸೂಕ್ಷ್ಮ ಮಟ್ಟದ ಮೇಲ್ವಿಚಾರಣೆ, ಉದಯೋನ್ಮುಖ ಕೊರತೆಗಳನ್ನು ಮುಂಚಿತವಾಗಿಯೇ ಗುರುತಿಸುವುದು ಮತ್ತು ಸೂಕ್ತ ವ್ಯವಹಾರ ಕಾರ್ಯತಂತ್ರಗಳನ್ನು ಅನುಸರಿಸುವ ಮೂಲಕ ಸಾರ್ವಜನಿಕ ವಲಯದ ಬ್ಯಾಂಕುಗಳು ಆದ್ಯತಾ ವಲಯಕ್ಕೆ ಸಾಲ ನೀಡಿಕೆಯ ಮೇಲೆ ತಮ್ಮ ದೃಢ ಗಮನವನ್ನು ಮುಂದುವರಿಸಬೇಕು ಎಂದು ಕರೆ ನೀಡಿದರು.

ಎರಡನೇ ದಿನದ ಚರ್ಚೆಗಳಲ್ಲಿ, ರೈತ ಉತ್ಪಾದಕರ ಸಂಘಟನೆಗಳು (ಎಫ್‌ ಪಿ ಒಗಳು), ಸಂಗ್ರಹಣೆ, ಸಂಸ್ಕರಣೆ, ಲಾಜಿಸ್ಟಿಕ್ಸ್ ಮತ್ತು ಮಾರುಕಟ್ಟೆ ಸಂಪರ್ಕ ಸೇರಿದಂತೆ ಕೃಷಿ ಮತ್ತು ತೋಟಗಾರಿಕೆ ಮೌಲ್ಯ ಸರಪಳಿಯಾದ್ಯಂತ ಹಣಕಾಸು ನೆರವನ್ನು ಬಲಪಡಿಸುವ ಅವಕಾಶಗಳನ್ನು ಗುರುತಿಸಲಾಯಿತು. ಕ್ರೆಡಿಟ್ ಕಾರ್ಡ್ ವ್ಯವಹಾರದ ಮರುಕಲ್ಪನೆ ಕುರಿತ ಚರ್ಚೆಗಳಲ್ಲಿ ಡಿಜಿಟಲ್ ಆನ್‌ಬೋರ್ಡಿಂಗ್, ಅಸ್ತಿತ್ವದಲ್ಲಿರುವ ಗ್ರಾಹಕ ವರ್ಗಕ್ಕೆ ಹೆಚ್ಚಿನ ಕ್ರಾಸ್-ಸೆಲ್ ಅವಕಾಶಗಳನ್ನು ಒದಗಿಸುವುದು ಹಾಗೂ ರುಪೇ-ಯುಪಿಐ ಏಕೀಕರಣದಿಂದ ಉಂಟಾಗುವ ಅವಕಾಶಗಳನ್ನು ಬಳಸಿಕೊಳ್ಳುವ ಕಾರ್ಯತಂತ್ರಗಳನ್ನು ಪರಿಶೀಲಿಸಲಾಯಿತು. ಕೃಷಿ ಮತ್ತು ತೋಟಗಾರಿಕೆ ಮೌಲ್ಯ ಸರಪಳಿ ಮೂಲಸೌಕರ್ಯ ವಿಷಯದ ಕುರಿತು ವಿ ಎನ್‌ ಆರ್ ಸಮೂಹದ ನಿರ್ದೇಶಕ ಶ್ರೀ ಅರವಿಂದ್ ಅಗರವಾಲ್ ಹಾಗೂ ಆದ್ಯತಾ ವಲಯಕ್ಕೆ ಸಾಲ ನೀಡಿಕೆ ವಿಷಯದ ಕುರಿತು ಟಾಯ್ ಝೋನ್‌ ನ ನಿರ್ದೇಶಕ ಶ್ರೀ ಸಂಜಯ್ ಮೆಹಂದಿರತ್ತ ಅವರು ತಮ್ಮ ಉದ್ಯಮಶೀಲ ಪಯಣದ ನೈಜ ಅನುಭವಗಳನ್ನು ಹಂಚಿಕೊಂಡಿದ್ದು, ಚರ್ಚೆಗಳಿಗೆ ಪ್ರಾಯೋಗಿಕ ದೃಷ್ಟಿಕೋನವನ್ನು ನೀಡಿತು.

ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿಗಳು, ಈ ಕಾನ್‌ಫ್ಲುಯೆನ್ಸ್ ಏಳು ವಿಷಯಾಧಾರಿತ ಕ್ಷೇತ್ರಗಳ ಆದ್ಯತೆಗಳನ್ನು ಹೆಚ್ಚು ಸ್ಪಷ್ಟವಾಗಿ ಗುರುತಿಸಲು ಹಾಗೂ ಕಾರ್ಯಗತಗೊಳಿಸಬಹುದಾದ ಕ್ರಮಗಳನ್ನು ಸ್ಪಷ್ಟಪಡಿಸಲು ನೆರವಾಗಿದೆ ಎಂದು ಹೇಳಿದರು. ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಸಾರ್ವಜನಿಕ ಹಣಕಾಸು ಸಂಸ್ಥೆಗಳು ಇದೀಗ ಸ್ಪಷ್ಟ ಹೊಣೆಗಾರಿಕೆ ಮತ್ತು ವಾಸ್ತವಿಕ ಕಾಲಮಿತಿಯೊಂದಿಗೆ ಇವುಗಳನ್ನು ಅನುಷ್ಠಾನಕ್ಕೆ ತರಬೇಕಿದ್ದು, ಯಶಸ್ವಿಯಾದ ಸಾಂಸ್ಥಿಕ ಮಾದರಿಗಳನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳುವ ಸಾಧ್ಯತೆಯನ್ನೂ ಪರಿಶೀಲಿಸಬಹುದು ಎಂದು ಅವರು ತಿಳಿಸಿದರು.

ಪಿ ಎಸ್‌ ಬಿ ಕಾನ್‌ಫ್ಲುಯೆನ್ಸ್ 2026, ಬ್ಯಾಂಕಿಂಗ್‌ ನ ಭವಿಷ್ಯಕ್ಕೆ ನಿರ್ಣಾಯಕವಾಗಿರುವ ಕ್ಷೇತ್ರಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು, ಸಾರ್ವಜನಿಕ ಹಣಕಾಸು ಸಂಸ್ಥೆಗಳು, ಸರ್ಕಾರ ಮತ್ತು ವಿಷಯ ತಜ್ಞರ ಸಾಮೂಹಿಕ ಅನುಭವ ಹಾಗೂ ಸಾಮರ್ಥ್ಯಗಳನ್ನು ಒಂದೆಡೆ ಸೇರಿಸಿತು. ಕಾನ್‌ಫ್ಲುಯೆನ್ಸ್‌ ನಿಂದ ಹೊರಹೊಮ್ಮಿದ ಕಾರ್ಯಗತಗೊಳಿಸಬಹುದಾದ ಕಾರ್ಯತಂತ್ರಗಳನ್ನು ಇದೀಗ ಸಂಬಂಧಪಟ್ಟ ಸಂಸ್ಥೆಗಳು ಸೂಕ್ತ ಅನುಸರಣಾ ಕ್ರಮಗಳು ಮತ್ತು ಅನುಷ್ಠಾನದ ಮೂಲಕ ಮುಂದಕ್ಕೆ ಕೊಂಡೊಯ್ಯಲಿವೆ. ಭಾರತವು ವಿಕಸಿತ ಭಾರತ @2047ರತ್ತ ಮುನ್ನಡೆಯುತ್ತಿರುವ ಸಂದರ್ಭದಲ್ಲಿ, ಹಣಕಾಸು ಸೇರ್ಪಡೆಯನ್ನು ಮತ್ತಷ್ಟು ವಿಸ್ತರಿಸುವಲ್ಲಿ, ಉದಯೋನ್ಮುಖ ಅವಕಾಶಗಳಿಗೆ ಹಣಕಾಸು ಒದಗಿಸುವಲ್ಲಿ ಹಾಗೂ ದೇಶದ ಮುಂದಿನ ಹಂತದ ಬೆಳವಣಿಗೆಗೆ ಬೆಂಬಲ ನೀಡುವಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಸಾರ್ವಜನಿಕ ಹಣಕಾಸು ಸಂಸ್ಥೆಗಳು ಮಹತ್ವದ ಪಾತ್ರವನ್ನು ಮುಂದುವರಿಸಲಿವೆ.

 

*****

 


(रिलीज़ आईडी: 2301028) आगंतुक पटल : 10
इस विज्ञप्ति को इन भाषाओं में पढ़ें: English , Urdu , Marathi , Gujarati