ಗೃಹ ವ್ಯವಹಾರಗಳ ಸಚಿವಾಲಯ
ಮಾದಕವಸ್ತುಗಳ ವಿರುದ್ಧದ ಶೂನ್ಯ ಸಹಿಷ್ಣುತೆ ನೀತಿಯಲ್ಲಿ ಹೊಸ ಮೈಲಿಗಲ್ಲು: ತಲೆಮರೆಸಿಕೊಂಡಿದ್ದ ಡ್ರಗ್ ಕಿಂಗ್‌ಪಿನ್ ವೀರೇಂದ್ರ ಸಿಂಗ್ ಬಸೋಯಾನನ್ನು ʻಯುಎಇʼಯಿಂದ ಭಾರತಕ್ಕೆ ಮರಳಿ ತಂದ ʻಎನ್‌ಸಿಬಿʼ
ಬಸೋಯಾ ಬಂಧನದ ವಿವರಗಳನ್ನು ಹಂಚಿಕೊಂಡ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ, ವಿದೇಶದಲ್ಲಿ ಅಡಗಿರುವ ಮಾದಕವಸ್ತು ಕಳ್ಳಸಾಗಣೆದಾರರನ್ನು ಮೋದಿ ಸರ್ಕಾರ ಪಟ್ಟುಬಿಡದೆ ಪತ್ತೆಹಚ್ಚುತ್ತಿದೆ ಎಂದು ಹೇಳಿದರು
ಮೋದಿ ಸರ್ಕಾರವು ಕಠಿಣ ವಿಧಾನದ ಮೂಲಕ ಇಡೀ ಮಾದಕವಸ್ತು ಕಳ್ಳಸಾಗಣೆದಾರರ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ನಾಶಪಡಿಸುತ್ತಿದೆ
ಮಾದಕ ದ್ರವ್ಯ ಕಳ್ಳಸಾಗಣೆದಾರ ವೀರೇಂದ್ರ ಸಿಂಗ್ ಬಸೋಯಾನನ್ನು 'ಆಪರೇಷನ್ ಗ್ಲೋಬಲ್ ಹಂಟ್' ಅಡಿಯಲ್ಲಿ ಭಾರತಕ್ಕೆ ಕರೆತರಲಾಗಿದೆ
ಆಮೂಲಾಗ್ರ ತನಿಖಾ ವಿಧಾನದ ಮೂಲಕ ಅಪರಾಧಿಯನ್ನು ಪತ್ತೆಹಚ್ಚುವ ಮೂಲಕ, ಮಾದಕವಸ್ತು ಕಳ್ಳಸಾಗಣೆದಾರರು ಎಲ್ಲೇ ಅಡಗಿಕೊಂಡರೂ ಅವರು ಭಾರತೀಯ ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ನಮ್ಮ ಏಜೆನ್ಸಿಗಳು ಮತ್ತೊಮ್ಮೆ ಸಾಬೀತುಪಡಿಸಿವೆ
प्रविष्टि तिथि:
14 AUG 2026 12:31PM by PIB Bengaluru
ಅಂತಾರಾಷ್ಟ್ರೀಯ ಮಾದಕವಸ್ತು ಜಾಲಗಳ ವಿರುದ್ಧದ ಹೋರಾಟದಲ್ಲಿ ಮಹತ್ವದ ಯಶಸ್ಸು ಸಾಧಿಸಿರುವ ಮಾದಕವಸ್ತು ನಿಯಂತ್ರಣ ಬ್ಯೂರೋ (ಎನ್‌ಸಿಬಿ), ದೆಹಲಿಯ ಸರೋಜಿನಿ ನಗರದ ಪಿಲ್ಲಂಜಿ ನಿವಾಸಿಯಾದ ಮತ್ತು ತಲೆಮರೆಸಿಕೊಂಡಿದ್ದ ವಾಂಟೆಡ್ ಅಪರಾಧಿ ವೀರೇಂದ್ರ ಸಿಂಗ್ ಬಸೋಯಾ ಅಲಿಯಾಸ್ ವೀರು ಅಲಿಯಾಸ್ ಬಸೋಯಾನನ್ನು ಭಾರತಕ್ಕೆ ಮರಳಿ ತರುವಲ್ಲಿ ಯಶಸ್ವಿಯಾಗಿದೆ. ಇಂದು ಮುಂಜಾನೆ ನವದೆಹಲಿಯ ಐಜಿಐ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೂಡಲೇ ಆತನನ್ನು ವಶಕ್ಕೆ ಪಡೆಯಲಾಗಿದೆ.
ʻಎನ್‌ಸಿಬಿʼಯ ಕೋರಿಕೆಯ ಮೇರೆಗೆ ಪ್ರಕಟಿಸಲಾದ ʻಇಂಟರ್‌ಪೋಲ್ ರೆಡ್ ನೋಟಿಸ್ʼ ಆಧಾರದ ಮೇಲೆ ಬಸೋಯಾನನ್ನು ಜೂನ್ 2026ರಲ್ಲಿ ʻಅರಬ್ ಸಂಯುಕ್ತ ಸಂಸ್ಥಾನದಲ್ಲಿ (ಯುಎಇ) ಬಂಧಿಸಲಾಗಿತ್ತು. ಭಾರತೀಯ ಏಜೆನ್ಸಿಗಳು ʻಯುಎಇʼ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸುವ ಮೂಲಕ ಆತನನ್ನು ಭಾರತಕ್ಕೆ ಮರಳಿ ತರುವಲ್ಲಿ ಯಶಸ್ವಿಯಾಗಿವೆ.
ʻಎಕ್ಸ್ʼ ವೇದಿಕೆಯಲ್ಲಿನ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು, "ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮಾದಕ ವಸ್ತು ಕಳ್ಳಸಾಗಣೆದಾರರನ್ನು ಮೋದಿ ಸರ್ಕಾರವು ಪಟ್ಟು ಬಿಡದೆ ಪತ್ತೆಹಚ್ಚುತ್ತಿದೆ ಮತ್ತು ಕಠಿಣ ಕ್ರಮದ ಮೂಲಕ ಅವರ ಇಡೀ ಪರಿಸರ ವ್ಯವಸ್ಥೆಯನ್ನು ನಾಶಪಡಿಸುತ್ತಿದೆ. ಮಾದಕವಸ್ತುಗಳ ವಿರುದ್ಧದ ಶೂನ್ಯ ಸಹಿಷ್ಣುತೆ ನೀತಿಯಲ್ಲಿ ಹೊಸ ಮೈಲುಗಲ್ಲನ್ನು ಸೃಷ್ಟಿಸಿರುವ ʻಎನ್‌ಸಿಬಿʼ, ತಲೆಮರೆಸಿಕೊಂಡಿದ್ದ ಡ್ರಗ್ ಕಿಂಗ್‌ಪಿನ್ ವೀರೇಂದ್ರ ಸಿಂಗ್ ಬಸೋಯಾನನ್ನು ʻಯುಎಇʼಯಿಂದ ಮರಳಿ ಕರೆತರುವಲ್ಲಿ ಯಶಸ್ವಿಯಾಗಿದೆ. ಸಮಗ್ರ ತನಿಖಾ ವಿಧಾನದ ಮೂಲಕ ಅಪರಾಧಿಯನ್ನು ಪತ್ತೆಹಚ್ಚುವ ಮೂಲಕ, ಮಾದಕವಸ್ತು ಕಳ್ಳಸಾಗಣೆದಾರರು ಎಲ್ಲೇ ಅಡಗಿದ್ದರೂ, ಅವರು ಭಾರತೀಯ ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ನಮ್ಮ ಏಜೆನ್ಸಿಗಳು ಮತ್ತೊಮ್ಮೆ ಸಾಬೀತುಪಡಿಸಿವೆ," ಎಂದು ಹೇಳಿದ್ದಾರೆ.
ಪ್ರಕರಣದ ಹಿನ್ನೆಲೆ
ಫೆಬ್ರವರಿ 2024ರಲ್ಲಿ ಪುಣೆ ನಗರ ಪೊಲೀಸರು 500 ಗ್ರಾಂ ʻಮೆಫೆಡ್ರೋನ್ʼ ಅನ್ನು ವಶಪಡಿಸಿಕೊಳ್ಳುವುದರೊಂದಿಗೆ ಈ ಪ್ರಕರಣವು ಪ್ರಾರಂಭವಾಯಿತು. ನಂತರ, ಸಮಗ್ರ ತನಿಖಾ ವಿಧಾನವನ್ನು ಅಳವಡಿಸಿಕೊಂಡು, ಸಂಪೂರ್ಣ ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಗುರುತಿಸಲು ಮತ್ತು ಭೇದಿಸಲು ತನಿಖೆಯನ್ನು ವಿಸ್ತರಿಸಲಾಯಿತು. ನಂತರದ ತನಿಖೆ ಮತ್ತು ಕಾರ್ಯಾಚರಣೆಗಳ ಪರಿಣಾಮವಾಗಿ ಪುಣೆಯಿಂದ ಸರಿಸುಮಾರು 867 ಕೆ.ಜಿ ಮತ್ತು ದೆಹಲಿಯಿಂದ 970 ಕೆ.ಜಿ ʻಮೆಫೆಡ್ರೋನ್ʼ ವಶಪಡಿಸಿಕೊಳ್ಳಲಾಯಿತು. ಇದರೊಂದಿಗೆ ಒಟ್ಟು ಸರಿಸುಮಾರು 1,837 ಕೆ.ಜಿ ʻಮೆಫೆಡ್ರೋನ್ʼ ವಶಪಡಿಸಿಕೊಂಡಂತಾಯಿತು. ಮುಂದಿನ ತನಿಖೆಗಾಗಿ ಪ್ರಕರಣವನ್ನು ʻಎನ್‌ಸಿಬಿʼಯ ಮುಂಬೈ ವಲಯ ಘಟಕಕ್ಕೆ ವರ್ಗಾಯಿಸಲಾಯಿತು.
ಬಸೋಯಾ ಪ್ರಮುಖ ಸಾಗರೋತ್ತರ ಆಪರೇಟಿವ್ ಮತ್ತು ವಿದೇಶದಿಂದ ಸಿಂಡಿಕೇಟ್ ಚಟುವಟಿಕೆಗಳನ್ನು ಸಂಯೋಜಿಸುತ್ತಿದ್ದ ಹಾಗೂ ಭಾರತದಿಂದ ಇತರ ದೇಶಗಳಿಗೆ ಮೆಫೆಡ್ರೋನ್ ರವಾನಿಸಲು ಅನುಕೂಲ ಮಾಡಿಕೊಡುತ್ತಿದ್ದ ಸಂಚುಕೋರ ಎಂದು ತನಿಖೆಯ ವೇಳೆ ಗುರುತಿಸಲಾಯಿತು. ದೆಹಲಿಯಲ್ಲಿ ವಶಪಡಿಸಿಕೊಳ್ಳಲಾದ ಸರಿಸುಮಾರು 970 ಕೆ.ಜಿ.ಯಷ್ಟು ʻಮೆಫೆಡ್ರೋನ್ʼನ ದೊಡ್ಡ ಸಂಗ್ರಹವನ್ನು, ಆತನಿಗೆ ಸಂಬಂಧಿಸಿದ ಕೊರಿಯರ್ ಚಾನೆಲ್‌ಗಳ ಮೂಲಕ ರಫ್ತು ಮಾಡಲು ಸಿದ್ಧತೆ ನಡೆಸಿದ್ದ ಎಂದು ಆರೋಪಿಸಲಾಗಿದೆ. ದೇಶೀಯ ತಯಾರಿಕೆ ಮತ್ತು ಕಳ್ಳಸಾಗಣೆ ಜಾಲವನ್ನು ಅದರ ಸಾಗರೋತ್ತರ ವಿತರಣಾ ಮಾರ್ಗಗಳೊಂದಿಗೆ ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿ ಆತ ಪಾತ್ರ ವಹಿಸುತ್ತಿದ್ದದ್ದು ತಿಳಿದುಬಂದಿದೆ.
ಅಂತಾರಾಷ್ಟ್ರೀಯ ಕೊಕೇನ್ ಕಳ್ಳಸಾಗಣೆಗೆ ಸಂಬಂಧಿಸಿದ ಪ್ರತ್ಯೇಕ ದೆಹಲಿ ಪೊಲೀಸ್ ವಿಶೇಷ ಸೆಲ್ ಪ್ರಕರಣದಲ್ಲಿಯೂ ಬಸೋಯಾ ಹೆಸರು ಕೇಳಿಬಂದಿದೆ. ಅಕ್ಟೋಬರ್ 2024ರಲ್ಲಿ, ದೆಹಲಿ ಪೊಲೀಸರ ವಿಶೇಷ ಸೆಲ್ ಪ್ರಮುಖ ಡ್ರಗ್ ಕಳ್ಳಸಾಗಣೆ ಜಾಲವೊಂದನ್ನು ಭೇದಿಸಿತ್ತು. ಇದು ದೆಹಲಿ, ಹಾಪುರ್ ಮತ್ತು ಗಾಜಿಯಾಬಾದ್‌ನ ಗೋದಾಮುಗಳು ಮತ್ತು ಇತರ ಕಡೆಗಳಿಂದ ಹಾಗೂ ಗುಜರಾತ್‌ನ ಅಂಕಲೇಶ್ವರದ ಕಾರ್ಖಾನೆಯಿಂದ ಅನೇಕ ವಸ್ತುಗಳನ್ನು ವಶಪಡಿಸಿಕೊಳ್ಳಲು ನೆರವಾಯಿತು. ಈ ಸಮನ್ವಯ ಕಾರ್ಯಾಚರಣೆಗಳ ಪರಿಣಾಮವಾಗಿ 1,300 ಕೆ.ಜಿ.ಗೂ ಹೆಚ್ಚು ʻಕೊಕೇನ್ʼ, ʻಮೆಫೆಡ್ರೋನ್ʼ ಮತ್ತು ʻಹೈಡ್ರೋಪೋನಿಕ್ ವೀಡ್ʼ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಜಾಲದ ತನಿಖೆಯು ʻಕೊಕೇನ್ʼ ಮತ್ತು ಇತರ ಮಾದಕ ವಸ್ತುಗಳ ಖರೀದಿ, ಸಾಗಾಟ, ಸಂಗ್ರಹಣೆ ಮತ್ತು ವಿತರಣೆಯನ್ನು ಸಂಘಟಿಸುವಲ್ಲಿ ಬಸೋಯಾನ ಪಾತ್ರವನ್ನು ಬಹಿರಂಗಪಡಿಸಿತ್ತು.
ಸಾಗರೋತ್ತರ ವ್ಯಾಪ್ತಿಯಿಂದ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಮಾದಕವಸ್ತು ಕಳ್ಳಸಾಗಣೆದಾರರು ಮತ್ತು ಪರಾರಿಯಾದವರನ್ನು ಗುರುತಿಸಲು, ಪತ್ತೆಹಚ್ಚಲು ಮತ್ತು ಹಿಡಿಯಲು ಪ್ರಾರಂಭಿಸಲಾದ ʻಆಪರೇಷನ್ ಗ್ಲೋಬಲ್-ಹಂಟ್ʼಅಡಿಯಲ್ಲಿ ʻಎನ್‌ಸಿಬಿʼಯ ನಿರಂತರ ಪ್ರಯತ್ನಗಳ ಭಾಗವಾಗಿ ಬಸೋಯಾನನ್ನು ಮರಳಿ ಕರೆತರಲಾಗಿದೆ. ಈ ಉಪಕ್ರಮವು ʻಇಂಟರ್‌ಪೋಲ್ ರೆಡ್ ನೋಟಿಸ್ʼಗಳಂತಹ ಅಂತಾರಾಷ್ಟ್ರೀಯ ಸಹಕಾರ ಕಾರ್ಯವಿಧಾನಗಳನ್ನು ಬಳಸಿಕೊಂಡಿದೆ. ಜೊತೆಗೆ ಭಾರತೀಯ ಹಾಗೂ ವಿದೇಶಿ ಕಾನೂನು ಜಾರಿ ಸಂಸ್ಥೆಗಳ ನಡುವೆ ಕಾರ್ಯಾಚರಣೆಯ ಸಮನ್ವಯವನ್ನು ಬಲಪಡಿಸಿದೆ. ಈ ಹಿಂದೆ ಟರ್ಕಿಯಿಂದ ಮೊಹಮ್ಮದ್ ಸಲೀಂ ದೋಲಾ ಮತ್ತು ಮಲೇಷ್ಯಾದಿಂದ ನವೀನ್ ಚಿಚ್ಕರ್ ಸೇರಿದಂತೆ ಇತರ ವಾಂಟೆಡ್ ಡ್ರಗ್ ಕಳ್ಳಸಾಗಣೆದಾರರನ್ನು ಕೂಡ ಇದೇ ಉಪಕ್ರಮದ ಅಡಿಯಲ್ಲಿನ ಯಶಸ್ವಿಯಾಗಿ ಕರೆ ತಂದಿದ್ದು ಗಮನಾರ್ಹ ಸಾಧನೆ.
ಪರಾರಿಯಾದವರನ್ನು ಅವರ ಅಪರಾಧಗಳ ಕಾನೂನು ಪರಿಣಾಮಗಳನ್ನು ಎದುರಿಸಲು ಭಾರತಕ್ಕೆ ಕರೆತರುವುದು ಮಾನ್ಯ ಕೇಂದ್ರ ಗೃಹ ಸಚಿವರು ಅನಾವರಣಗೊಳಿಸಿದ ʻಡ್ರಗ್ಸ್ ನಿಯಂತ್ರಣ ಕುರಿತ ಮುನ್ನೋಟ ದಾಖಲೆ-2026-2029ʼರ ಮುಂದುವರಿದ ಭಾಗವಾಗಿದೆ. ಈ ಮಾರ್ಗಸೂಚಿಯ ಭಾಗವಾಗಿ, ಇತರ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಏಜೆನ್ಸಿಗಳೊಂದಿಗೆ ಸಮನ್ವಯದ ಮೂಲಕ ವಿದೇಶದಿಂದ ಕಾರ್ಯನಿರ್ವಹಿಸುತ್ತಿರುವ ಇತರ ಪ್ರಮುಖ ಮಾದಕವಸ್ತು ಅಪರಾಧಿಗಳನ್ನು ಗುರುತಿಸಲು, ಪತ್ತೆಹಚ್ಚಲು ಮತ್ತು ಮರಳಿ ತರಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಮಾದಕವಸ್ತು ಕಳ್ಳಸಾಗಣೆ ವಿರುದ್ಧದ ಭಾರತ ಸರ್ಕಾರದ ʻಶೂನ್ಯ ಸಹಿಷ್ಣುತೆʼ ನೀತಿಗೆ ʻಎನ್‌ಸಿಬಿʼ ಬದ್ಧವಾಗಿದೆ.
ʻಎನ್‌ಸಿಬಿʼಯು ಭಾರತದ ಒಳಗೆ ಅಥವಾ ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಡ್ರಗ್ ಕಿಂಗ್‌ಪಿನ್‌ಗಳು, ಹಣಕಾಸು ಪೂರೈಕೆದಾರರು, ನಿರ್ವಾಹಕರು ಮತ್ತು ಪರಾರಿಯಾಗಿರುವವರ ಬೇಟೆಯನ್ನು ಮುಂದುವರಿಸಲಿದೆ. ಜೊತೆಗೆ ಸಂಪೂರ್ಣ ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ನಾಶಮಾಡಲು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡಲಿದೆ.
*****
(रिलीज़ आईडी: 2299377)
आगंतुक पटल : 5