ಕೃಷಿ ಸಚಿವಾಲಯ
ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ ಗೆ ಚಾಲನೆ ನೀಡಿದರು
ಎನ್ ಎಸ್ ಪಿ-ಡಿಬಿಟಿ ಮೂಲಕ 6,000ಕ್ಕೂ ಹೆಚ್ಚು ಕೃಷಿ ವಿದ್ಯಾರ್ಥಿಗಳಿಗೆ ₹21.35 ಕೋಟಿ ವಿದ್ಯಾರ್ಥಿವೇತನ ಬಿಡುಗಡೆ
ಕೃಷಿ ಶಿಕ್ಷಣದಲ್ಲಿ ಪ್ರಾಯೋಗಿಕ ತರಬೇತಿ, ಸಕಾಲಿಕ ಬೆಂಬಲ ಮತ್ತು ನಾವೀನ್ಯತೆಗೆ ಒತ್ತು ನೀಡಬೇಕು: ಶ್ರೀ ಚೌಹಾಣ್
ಪರೀಕ್ಷೆಗಳು, ಪ್ರವೇಶಾತಿಗಳು ಮತ್ತು ಪಾವತಿಗಳು - ಇವೆಲ್ಲವೂ ಸಮಯಕ್ಕೆ ಸರಿಯಾಗಿ ನಡೆಯಬೇಕು; ಅದುವೇ ಪರಿಣಾಮಕಾರಿ ವ್ಯವಸ್ಥೆಯ ನಿಜವಾದ ಪರೀಕ್ಷೆ: ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಕೃಷಿಯಲ್ಲಿ ನಿಜವಾದ ದಕ್ಷತೆಯು ತರಗತಿಗಳಿಂದ ಮಾತ್ರ ಬರುವುದಿಲ್ಲ, ಪ್ರಾಯೋಗಿಕ ತರಬೇತಿಯ ಮೂಲಕವೂ ಬರುತ್ತದೆ: ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಹೊಲಗಳು, ರೈತರು ಮತ್ತು ವಿಜ್ಞಾನ ಒಟ್ಟಾಗಿ ಕೆಲಸ ಮಾಡುವುದರಿಂದ ಭಾರತದ ಆಹಾರ ಭದ್ರತೆ ಮತ್ತು ಸ್ವಾವಲಂಬನೆಯನ್ನು ಬಲಪಡಿಸಬಹುದು: ಶ್ರೀ ಶಿವರಾಜ್ ಸಿಂಗ್ ಚೌಹಾಣ್
“ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಕೃಷಿಯಲ್ಲಿ ಆಹಾರ ಭದ್ರತೆ, ಪೋಷಕಾಂಶ ಮತ್ತು ರೈತರ ಆದಾಯ ಭದ್ರತೆಗೆ ಆದ್ಯತೆ ನೀಡಲಾಗಿದೆ: ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಹರಿಯಾಳಿ ಅಮಾವಾಸ್ಯೆಯಂದು ದೇಶಾದ್ಯಂತ ಇರುವ ಐಸಿಎಆರ್ ಸಂಸ್ಥೆಗಳಲ್ಲಿ ಗಿಡ ನೆಡುವ ಅಭಿಯಾನಗಳನ್ನು ಕೈಗೊಳ್ಳಲು ಕೃಷಿ ವಿದ್ಯಾರ್ಥಿಗಳಿಗೆ ಶ್ರೀ ಚೌಹಾಣ್ ಮನವಿ
ಪ್ರಕಟಣಾ ದಿನಾಂಕ:
10 AUG 2026 8:42PM by PIB Bengaluru
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ಪೂಸಾದ ಐಸಿಎಆರ್-ಐ ಎ ಆರ್ ಐ ನಲ್ಲಿ ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ (ಎನ್ ಎಸ್ ಪಿ) ಮೂಲಕ ದೇಶಾದ್ಯಂತದ ಕೃಷಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಫೆಲೋಶಿಪ್ ನಿಧಿಯನ್ನು ಬಿಡುಗಡೆ ಮಾಡಿದರು. ಈ ಉಪಕ್ರಮದಡಿಯಲ್ಲಿ, 6,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೇರ ನಗದು ವರ್ಗಾವಣೆ (ಡಿಬಿಟಿ) ವ್ಯವಸ್ಥೆಯ ಮೂಲಕ ಒಟ್ಟು ₹21.35 ಕೋಟಿ ಹಣವನ್ನು ಪಡೆದುಕೊಂಡರು.
ಈ ಹೊಸ ಉಪಕ್ರಮದೊಂದಿಗೆ, ಕೃಷಿ ವಿದ್ಯಾರ್ಥಿಗಳು ಈಗ ಪ್ರತಿ ತಿಂಗಳು ನೇರವಾಗಿ ಡಿಬಿಟಿ ಮೂಲಕ ತಮ್ಮ ವಿದ್ಯಾರ್ಥಿವೇತನವನ್ನು ಸ್ವೀಕರಿಸಲಿದ್ದು, ಸಕಾಲಿಕ ಮತ್ತು ತೊಂದರೆ-ರಹಿತ ಆರ್ಥಿಕ ನೆರವನ್ನು ಖಚಿತಪಡಿಸುತ್ತದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಕೃಷಿ ಸಚಿವರಾದ ಶ್ರೀ ಚೌಹಾಣ್, ವಿದ್ಯಾರ್ಥಿವೇತನವು ಕೇವಲ ಆರ್ಥಿಕ ನೆರವಿನ ರೂಪವಲ್ಲ, ಬದಲಿಗೆ ಕೃಷಿ ಶಿಕ್ಷಣವನ್ನು ಬಲಪಡಿಸುವ ಮತ್ತು ಅದನ್ನು ಪ್ರಾಯೋಗಿಕ ಕಲಿಕೆ ಹಾಗೂ ಹೆಚ್ಚಿನ ಅವಕಾಶಗಳೊಂದಿಗೆ ಜೋಡಿಸುವ ಪ್ರಮುಖ ಮಾಧ್ಯಮವಾಗಿದೆ ಎಂದು ಹೇಳಿದರು. ಡಿಬಿಟಿ ವ್ಯವಸ್ಥೆಯು ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಆರ್ಥಿಕ ಬೆಂಬಲವನ್ನು ತಲುಪಿಸುವುದನ್ನು ಖಚಿತಪಡಿಸುತ್ತದೆ ಮತ್ತು ಸಾಂಪ್ರದಾಯಿಕ ವ್ಯವಸ್ಥೆಗಳಿಗೆ ಸಂಬಂಧಿಸಿದ ವಿಳಂಬಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಚೌಹಾಣ್, ಕೃಷಿ ಶಿಕ್ಷಣದಲ್ಲಿ ಪ್ರಾಯೋಗಿಕ ತರಬೇತಿಯ ಮಹತ್ವವನ್ನು ಒತ್ತಿ ಹೇಳಿದರುರು. ಕೇವಲ ತರಗತಿ ಆಧಾರಿತ ಕಲಿಕೆಯಿಂದ ಉತ್ತಮ ರೈತರು, ವಿಜ್ಞಾನಿಗಳು ಅಥವಾ ಕೃಷಿ ಉದ್ಯಮಿಗಳನ್ನು ರೂಪಿಸಲು ಸಾಧ್ಯವಿಲ್ಲ ಹಾಗೂ ಕೃಷಿ ಕ್ಷೇತ್ರದಲ್ಲಿ ನಿಜವಾದ ದಕ್ಷತೆಯನ್ನು ಬೆಳೆಸಿಕೊಳ್ಳಲು ಪ್ರಾಯೋಗಿಕ ತರಬೇತಿ ಅತ್ಯಗತ್ಯ ಎಂದು ಹೇಳಿದರು. ವ್ಯವಸ್ಥೆಯಲ್ಲಿ ಮಾಡಬೇಕಾದ ಸುಧಾರಣೆಗಳಿಗಾಗಿ ತಮ್ಮ ಸಲಹೆಗಳು ಮತ್ತು ಆಲೋಚನೆಗಳನ್ನು ಹಂಚಿಕೊಳ್ಳುವಂತೆಯೂ ಅವರು ವಿದ್ಯಾರ್ಥಿಗಳಿಗೆ ಒತ್ತಾಯಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ, ಸರ್ಕಾರವು ಕೃಷಿ ಕ್ಷೇತ್ರದಲ್ಲಿ ಆಹಾರ ಭದ್ರತೆ, ಪೋಷಕಾಂಶ ಮತ್ತು ರೈತರ ಆದಾಯ ಭದ್ರತೆಗೆ ಆದ್ಯತೆ ನೀಡುತ್ತಿದೆ ಎಂದು ಶ್ರೀ ಚೌಹಾಣ್ ಹೇಳಿದರು. ಐಸಿಎಆರ್ ವಿಜ್ಞಾನಿಗಳ ಕೊಡುಗೆಯನ್ನು ಶ್ಲಾಘಿಸಿದ ಅವರು, ಅವರ ಸಂಶೋಧನೆಯು ರೈತರ ಶ್ರಮದೊಂದಿಗೆ ಸೇರಿ ದೇಶದ ಆಹಾರ ಧಾನ್ಯದ ದಾಸ್ತಾನನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
ಯುವಜನತೆಯು ತಮ್ಮ ವೃತ್ತಿಜೀವನವನ್ನು ಮೀರಿದ ದೊಡ್ಡ ಗುರಿಗಳನ್ನು ಹೊಂದಲು ಮತ್ತು ರಾಷ್ಟ್ರಕ್ಕೆ ಅರ್ಥಪೂರ್ಣ ಕೊಡುಗೆ ನೀಡಲು ಕೇಂದ್ರ ಸಚಿವರು ಕರೆ ನೀಡಿದರು. ಕೃಷಿ ವಿದ್ಯಾರ್ಥಿಗಳು ಕೇವಲ ಉದ್ಯೋಗ ಅರಸುವುದಕ್ಕೆ ಸೀಮಿತವಾಗದೆ, ಕೃಷಿ ಕ್ಷೇತ್ರದಲ್ಲಿ ನಾವೀನ್ಯತೆ, ನವೋದ್ಯಮಗಳು ಮತ್ತು ಸಂಶೋಧನೆಗಳಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಅವರು ಹೇಳಿದರು.
ಎನ್ ಎ ಸ್‌ಪಿ-ಡಿಬಿಟಿ ವ್ಯವಸ್ಥೆಯು ವಿದ್ಯಾರ್ಥಿವೇತನ ವಿತರಣೆಯನ್ನು ಹೆಚ್ಚು ಪಾರದರ್ಶಕ, ವೇಗ ಮತ್ತು ತಡೆರಹಿತವಾಗಿಸಲಿದೆ ಎಂದು ಶ್ರೀ ಚೌಹಾಣ್ ಹೇಳಿದರು. ಸಕಾಲಿಕ ಆರ್ಥಿಕ ನೆರವು ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣದತ್ತ ಹೆಚ್ಚು ಪರಿಣಾಮಕಾರಿಯಾಗಿ ಗಮನಹರಿಸಲು ಅನುವು ಮಾಡಿಕೊಡುತ್ತದೆ. ಭವಿಷ್ಯದ ಸವಾಲುಗಳನ್ನು ಉತ್ತಮವಾಗಿ ಎದುರಿಸಲು ಕೃಷಿ ಶಿಕ್ಷಣವನ್ನು ತಂತ್ರಜ್ಞಾನ, ತರಬೇತಿ ಮತ್ತು ಉದ್ಯಮದ ದೃಷ್ಟಿಕೋನದೊಂದಿಗೆ ಸಂಯೋಜಿಸಬೇಕು ಎಂದೂ ಅವರು ಒತ್ತಿ ಹೇಳಿದರು.
ಹರಿಯಾಳಿ ಅಮಾವಾಸ್ಯೆಯ ಸಂದರ್ಭದಲ್ಲಿ, ದೇಶಾದ್ಯಂತ ಇರುವ ಐಸಿಎಆರ್ ಸಂಸ್ಥೆಗಳ ಕೃಷಿ ವಿದ್ಯಾರ್ಥಿಗಳು ಗಿಡ ನೆಡುವ ಅಭಿಯಾನಗಳಲ್ಲಿ ಭಾಗವಹಿಸುವಂತೆ ಶ್ರೀ ಚೌಹಾಣ್ ಮನವಿ ಮಾಡಿದರು. ಹಸಿರು ಉಪಕ್ರಮಗಳು ಕೃಷಿ ಮತ್ತು ಪರಿಸರ ಎರಡರ ಕಡೆಗೂ ಇರುವ ನಮ್ಮ ಸಾಮುದಾಯಿಕ ಜವಾಬ್ದಾರಿಯ ಭಾಗವಾಗಿದೆ ಎಂದು ಅವರು ಹೇಳಿದರು.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ಶ್ರೀ ಭಗೀರಥ್ ಚೌಧರಿ, ಐಸಿಎಆರ್ ಮಹಾನಿರ್ದೇಶಕರಾದ ಡಾ. ಎಂ.ಎಲ್. ಜಾಟ್, ಐಸಿಎಆರ್ ಕಾರ್ಯದರ್ಶಿ ಶ್ರೀ ಜ್ಞಾನೇಂದ್ರ ತ್ರಿಪಾಠಿ, ಡಿಡಿಜಿ ಡಾ. ಯಶ್‌ಪಾಲ್ ಸಿಂಗ್ ಮಲಿಕ್ ಮತ್ತು ಐ ಎ ಆರ್ ಐ ನಿರ್ದೇಶಕರಾದ ಡಾ. ಸಿ. ಶ್ರೀನಿವಾಸ ರಾವ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಐಸಿಎಆರ್ ಮತ್ತು ಐ ಎ ಆರ್ ಐ ನ ಹಿರಿಯ ಅಧಿಕಾರಿಗಳು ಮತ್ತು ವಿಜ್ಞಾನಿಗಳು, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳೊಂದಿಗೆ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಹಾಗೂ ಸಾವಿರಾರು ವಿದ್ಯಾರ್ಥಿಗಳು ವರ್ಚುವಲ್ ಆಗಿ ಭಾಗವಹಿಸಿದ್ದರು.
*****
(ಪ್ರಕಟಣೆ ಐ.ಡಿ.: 2297418)
ವಿಸಿಟರ್ ಕೌಂಟರ್ : 93