ಸಹಕಾರ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರಿಂದ ಮುಂಬೈನಲ್ಲಿ ಎನ್.ಯು.ಸಿ.ಎಫ್.ಡಿ.ಸಿ.ಯ ನೂತನ ಆವರಣದ ಉದ್ಘಾಟನೆ ಹಾಗೂ ‘ಸಹಕಾರ್ ನವ್-ಕ್ರಾಂತಿ’ ಕಾರ್ಯಕ್ರಮ ಉದ್ದೇಶಿಸಿ ಭಾಷಣ
2047ರ ವೇಳೆಗೆ 'ವಿಕಸಿತ ಭಾರತ' ನಿರ್ಮಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಗುರಿಯನ್ನು ತಲುಪಲು ಪ್ರತಿಯೊಬ್ಬ ಭಾರತೀಯರನ್ನು ಸಮೃದ್ಧಗೊಳಿಸಬೇಕು; ಇದಕ್ಕಾಗಿ ಬಲವಾದ ಸ್ವಯಂ ಉದ್ಯೋಗ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಬೇಕಾಗಿದೆ ಮತ್ತು ನಗರ ಸಹಕಾರಿ ಬ್ಯಾಂಕುಗಳು ಮಾತ್ರ ಈ ಕಾರ್ಯವನ್ನು ಸಾಧಿಸಬಲ್ಲವು
ಮುಖ್ಯ ಸಂಸ್ಥೆಯಾದ ಎನ್.ಯು.ಸಿ.ಎಫ್.ಡಿ.ಸಿಯು, ಬ್ಯಾಂಕುಗಳಿಗೆ ತಾಂತ್ರಿಕ ಬೆಂಬಲ, ರಿಸರ್ವ್ ಬ್ಯಾಂಕ್ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾದ ವ್ಯವಸ್ಥೆಗಳು, ಉದ್ಯೋಗಿಗಳಿಗೆ ತರಬೇತಿ ಮತ್ತು ʻಮ್ಯೂಲ್-ಹಂಟರ್' ನಂತಹ ಅತ್ಯಗತ್ಯ ತಂತ್ರಾಂಶಗಳನ್ನು ಒದಗಿಸುತ್ತದೆ
ಎನ್.ಯು.ಸಿ.ಎಫ್.ಡಿ.ಸಿಯ ಉದ್ದೇಶ ಲಾಭ ಗಳಿಸುವುದಲ್ಲ, ಬದಲಾಗಿ ನಗರ ಸಹಕಾರಿ ಬ್ಯಾಂಕುಗಳನ್ನು ಸುಗಮಗೊಳಿಸುವುದು ಮತ್ತು ಅವುಗಳನ್ನು ರಾಷ್ಟ್ರೀಯ ಹಾಗೂ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಶಕ್ತಗೊಳಿಸುವುದಾಗಿದೆ
ಸುಮಾರು 1,400 ನಗರ ಸಹಕಾರಿ ಬ್ಯಾಂಕುಗಳನ್ನು ಒಂದೇ ಮುಖ್ಯ ಸಂಸ್ಥೆಗೆ ಜೋಡಿಸುವ ಉದ್ದೇಶವೆಂದರೆ ತಂತ್ರಜ್ಞಾನ, ತರಬೇತಿ, ನಿಯಂತ್ರಣ ಬೆಂಬಲ ಮತ್ತು ಆಧುನಿಕ ಬ್ಯಾಂಕಿಂಗ್ ಸೌಲಭ್ಯಗಳಿಗೆ ಅವುಗಳ ಪ್ರವೇಶವನ್ನು ವಿಸ್ತರಿಸುವುದಾಗಿದೆ
ಇಂದು ಪ್ರಾರಂಭಿಸಲಾದ ‘ಬ್ಯಾಂಕ್ ಇನ್ ಎ ಬಾಕ್ಸ್’, ಪ್ರತಿಯೊಂದು ಶಾಖೆಗೆ ಕೋರ್ ಬ್ಯಾಂಕಿಂಗ್, ಡಿಜಿಟಲ್ ಪಾವತಿಗಳು, ಕ್ಲೌಡ್ ಮತ್ತು ಅನುಸರಣೆ ಸೇವೆಗಳನ್ನು ಕೈಗೆಟುಕುವ ದರದಲ್ಲಿ ಒಂದೇ ಕಡೆ ಒದಗಿಸಲಿದ್ದು, ಸಣ್ಣ ಬ್ಯಾಂಕುಗಳೂ ಸಹ ವಿಶ್ವ ದರ್ಜೆಯ ಬ್ಯಾಂಕಿಂಗ್ ಸೇವೆಗಳನ್ನು ನೀಡಲು ದಾರಿ ಸುಗಮಗೊಳಿಸುತ್ತದೆ
ಭದ್ರತಾ ಕಾರ್ಯಾಚರಣೆ ಕೇಂದ್ರ (ಎಸ್.ಒ.ಸಿ.), ಡಿಜಿಟಲ್ ಫೊರೆನ್ಸಿಕ್ಸ್, ಮ್ಯೂಲ್ ಹಂಟರ್ ಮತ್ತು ಸೈಬರ್ ಸೆಕ್ಯುರಿಟಿ ತರಬೇತಿಯಂತಹ ಜಂಟಿ ಸೌಲಭ್ಯಗಳು ನಗರ ಸಹಕಾರಿ ಬ್ಯಾಂಕುಗಳಿಗೆ ಸೈಬರ್ ವಂಚನೆಗಳನ್ನು ಗುರುತಿಸಲು, ಮೇಲ್ವಿಚಾರಣೆ ಮಾಡಲು ಮತ್ತು ಬೆಳೆಯುತ್ತಿರುವ ಡಿಜಿಟಲ್ ಅಪಾಯಗಳನ್ನು ಎದುರಿಸಲು ಆಧುನಿಕ ಸಾಮರ್ಥ್ಯಗಳೊಂದಿಗೆ ಸಜ್ಜುಗೊಳಿಸುತ್ತದೆ
ಎನ್.ಎಫ್.ಎಸ್.ಯು ಮತ್ತು ಪ್ರಧಾನ ಸಂಸ್ಥೆಯಾದ ಎನ್.ಯು.ಸಿ.ಎಫ್.ಡಿ.ಸಿ. ನಡುವಿನ ಒಪ್ಪಂದವು ಅತಿ ಸಣ್ಣ ನಗರ ಸಹಕಾರಿ ಬ್ಯಾಂಕುಗಳ ಆನ್‌ಲೈನ್ ಬ್ಯಾಂಕಿಂಗ್ ಕಾರ್ಯಾಚರಣೆಗಳಿಗೂ ವಿಧಿವಿಜ್ಞಾನ ವಿಜ್ಞಾನದ ಸುರಕ್ಷತೆಯನ್ನು ನೀಡುತ್ತದೆ
ಸಣ್ಣ ಮಟ್ಟದ ಬಂಡವಾಳ ಕೊಡುಗೆಗಳನ್ನು ಒಟ್ಟುಗೂಡಿಸಿ ದೊಡ್ಡ ಉದ್ಯಮಗಳನ್ನು ಕಟ್ಟುವುದು ಮತ್ತು ಇದರಿಂದ ಹೆಚ್ಚಿನ ಸಂಖ್ಯೆಯ ಜನರಿಗೆ ಅನುಕೂಲ ಕಲ್ಪಿಸುವುದೇ ಸಹಕಾರದ ಪರಿಕಲ್ಪನೆಯಾಗಿದೆ
‘ಸಹಕಾರ್ ಪಾಠಶಾಲೆ’ ಮತ್ತು ‘ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ’ಗಳು ಜಂಟಿಯಾಗಿ ನಗರ ಸಹಕಾರಿ ಬ್ಯಾಂಕುಗಳಿಗೆ ಕಾನೂನು ಮತ್ತು ತಾಂತ್ರಿಕ ಸಲಹಾ ವಿಷಯಗಳ ಕುರಿತು ತರಬೇತಿ ಕಾರ್ಯಕ್ರಮಗಳನ್ನು ನಡೆಸಲಿವೆ
ನಗರ ಸಹಕಾರಿ ಬ್ಯಾಂಕುಗಳಿಗಾಗಿ ಪ್ರಧಾನ ಸಂಸ್ಥೆಯನ್ನು ರಚಿಸುವುದು ಅತ್ಯಂತ ದೊಡ್ಡ ಸವಾಲಾಗಿತ್ತು; ನಾವು ₹300 ಕೋಟಿ ಬಂಡವಾಳವನ್ನು ಕ್ರೋಢೀಕರಿಸಿ, ಎಲ್ಲಾ ಕಾರ್ಯಕಾರಿ ಮೂಲಭೂತ ಕೆಲಸಗಳನ್ನು ಪೂರ್ಣಗೊಳಿಸಿ ಅದನ್ನು ಸಾಕಾರಗೊಳಿಸಿದ್ದೇವೆ
प्रविष्टि तिथि:
08 AUG 2026 6:23PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ʻಸಹಕಾರದಿಂದ ಸಮೃದ್ಧಿʼ ಪರಿಕಲ್ಪನೆಯನ್ನು ಮುಂದಕ್ಕೆ ಕೊಂಡೊಯ್ಯುತ್ತಾ, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ನೇತೃತ್ವದಲ್ಲಿ, ದೇಶದ ಸಹಕಾರಿ ಬ್ಯಾಂಕಿಂಗ್ ವಲಯವನ್ನು ಆಧುನಿಕ, ಪಾರದರ್ಶಕ, ಸುರಕ್ಷಿತ ಮತ್ತು ಸ್ಪರ್ಧಾತ್ಮಕವಾಗಿ ಮಾಡಲು ಮುಂಬೈನ ಬಿ.ಎಸ್.ಇ. ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ನಲ್ಲಿ ಇಂದು ‘ಸಹಕಾರ್ ನವ್-ಕ್ರಾಂತಿ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿದ್ದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನಗರ ಸಹಕಾರಿ ಬ್ಯಾಂಕುಗಳಿಗಾಗಿ ಭದ್ರತಾ ಕಾರ್ಯಾಚರಣೆ ಕೇಂದ್ರ ಹಾಗೂ ರಾಷ್ಟ್ರವ್ಯಾಪಿ ಸೇವಾ ಗುಚ್ಛಗಳ ಅಡಿಯಲ್ಲಿ ಕೋರ್ ಬ್ಯಾಂಕಿಂಗ್ ಮತ್ತು ಸಂಯೋಜಿತ ಸೇವೆಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಎನ್.ಯು.ಸಿ.ಎಫ್.ಡಿ.ಸಿ. ಮತ್ತು ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ (ಎನ್.ಎಫ್.ಎಸ್.ಯು.) ನಡುವೆ ತಿಳುವಳಿಕೆ ಒಪ್ಪಂದವನ್ನು ವಿನಿಮಯ ಮಾಡಿಕೊಳ್ಳಲಾಯಿತು. ಇದಕ್ಕೂ ಮೊದಲು, ಕೇಂದ್ರ ಗೃಹ ಹಾಗೂ ಸಹಕಾರ ಸಚಿವರು ಮುಂಬೈನ ಫೋರ್ಟ್ ನಲ್ಲಿರುವ ಶಾರದಾ ಸದನದಲ್ಲಿ ಎನ್.ಯು.ಸಿ.ಎಫ್.ಡಿ.ಸಿ.ಯ ನೂತನ ಕಚೇರಿ ಆವರಣವನ್ನು ಉದ್ಘಾಟಿಸಿದರು.
ಈ 'ಸಹಕಾರ್ ನವ್-ಕ್ರಾಂತಿ' ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವಿಸ್, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ, ಕೇಂದ್ರ ಸಹಕಾರ ರಾಜ್ಯ ಸಚಿವರಾದ ಶ್ರೀ ಕ್ರಿಷನ್ ಪಾಲ್ ಗುರ್ಜರ್, ಕೇಂದ್ರ ಸಹಕಾರ ಮತ್ತು ನಾಗರಿಕ ವಿಮಾನಯಾನ ರಾಜ್ಯ ಸಚಿವರಾದ ಶ್ರೀ ಮುರಳೀಧರ್ ಮೊಹೋಲ್, ಮಹಾರಾಷ್ಟ್ರದ ಸಹಕಾರ ಸಚಿವರಾದ ಶ್ರೀ ಬಾಬಾಸಾಹೇಬ್ ಪಾಟೀಲ್, ಮಹಾರಾಷ್ಟ್ರ ಸರ್ಕಾರದ ಸಚಿವರಾದ ಶ್ರೀ ಜಯಕುಮಾರ್ ರಾವಲ್ ಮತ್ತು ಶ್ರೀ ಆಶಿಶ್ ಶೆಲಾರ್, ಸಹಕಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಆಶಿಶ್ ಕುಮಾರ್ ಭುತಾನಿ, ಎನ್.ಯು.ಸಿ.ಎಫ್.ಡಿ.ಸಿ. ಅಧ್ಯಕ್ಷ ಶ್ರೀ ಜ್ಯೋತಿಂಧ್ರ ಮೆಹ್ತಾ, ವಿವಿಧ ರಾಜ್ಯಗಳ ನಗರ ಸಹಕಾರಿ ಬ್ಯಾಂಕ್ ಒಕ್ಕೂಟಗಳ ಪ್ರತಿನಿಧಿಗಳು ಮತ್ತು ದೇಶಾದ್ಯಂತದ ನಗರ ಸಹಕಾರಿ ಬ್ಯಾಂಕುಗಳ ಹಲವು ಗಣ್ಯರು ಉಪಸ್ಥಿತರಿದ್ದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು, ನಗರ ಸಹಕಾರಿ ಬ್ಯಾಂಕುಗಳಿಗೆ ಬಹು ನಿರೀಕ್ಷಿತ ಪ್ರಧಾನ ಸಂಸ್ಥೆಯು (Umbrella Organisation) ಈಗ ಭಾರತೀಯ ರಿಸರ್ವ್ ಬ್ಯಾಂಕಿನ ಮಾನ್ಯತೆ, ಅಗತ್ಯ ಬಂಡವಾಳ ಮತ್ತು ತನ್ನದೇ ಆದ ನೂತನ ಕಚೇರಿಯೊಂದಿಗೆ ಸಾಕಾರಗೊಂಡಿದೆ ಎಂದು ಹೇಳಿದರು. ಈ ಕಾರ್ಯಕ್ರಮ ನಡೆಯುತ್ತಿರುವ ಸ್ಥಳಕ್ಕೂ ತನ್ನದೇ ಆದ ವಿಶೇಷ ಐತಿಹಾಸಿಕ ಮಹತ್ವವಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಪ್ರಸ್ತುತ ಇದನ್ನು ಸಭಾಂಗಣವಾಗಿ ಬಳಸಲಾಗುತ್ತಿದ್ದರೂ, ಸುಮಾರು 100 ವರ್ಷಗಳ ಕಾಲ ಈ ಸ್ಥಳವು ಭಾರತದ ಶೇರು ಮಾರುಕಟ್ಟೆಯ ಕೇಂದ್ರಬಿಂದುವಾಗಿತ್ತು ಮತ್ತು ಸ್ವಾತಂತ್ರ್ಯಕ್ಕೆ ಮುಂಚಿತವಾಗಿ ಹಾಗೂ ನಂತರದಲ್ಲಿ ದೇಶದ ಆರ್ಥಿಕ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಬಲವಾದ ಅಡಿಪಾಯ ಹಾಕುವಲ್ಲಿ ಪ್ರಮುಖ ಕೊಡುಗೆ ನೀಡಿದೆ. ಭಾರತದ ಪುನರ್ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ಹಲವಾರು ದೊಡ್ಡ ಕಂಪನಿಗಳ ಪ್ರಯಾಣಕ್ಕೆ ಬಿಎಸ್ ಇಯ ಈ ಐತಿಹಾಸಿಕ ಟ್ರೇಡಿಂಗ್ ಹಾಲ್ ಸಾಕ್ಷಿಯಾಗಿದೆ. ಇಂದು, ಅದೇ ಐತಿಹಾಸಿಕ ಸ್ಥಳವು ನಗರ ಸಹಕಾರಿ ಬ್ಯಾಂಕಿಂಗ್ ವಲಯದಲ್ಲಿ ಒಂದು ನೂತನ ರೂಪಾಂತರಕ್ಕೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದರು.
ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿಪಡಿಸಿದ ಅನುಸರಣೆ ಮಾನದಂಡಗಳನ್ನು ಪೂರೈಸಲು ನಗರ ಸಹಕಾರಿ ಬ್ಯಾಂಕುಗಳಿಗೆ ಅಗತ್ಯ ಮಾರ್ಗದರ್ಶನವನ್ನು ಈ ಪ್ರಧಾನ ಸಂಸ್ಥೆಯು ಒದಗಿಸುತ್ತದೆ ಹಾಗೂ ಅವುಗಳ ಸುಗಮ ಕಾರ್ಯನಿರ್ವಹಣೆಗೆ ತಾಂತ್ರಿಕ ಮತ್ತು ಸಾಂಸ್ಥಿಕ ಬೆಂಬಲವನ್ನು ನೀಡುತ್ತದೆ ಎಂದು ಶ್ರೀ ಅಮಿತ್ ಶಾ ತಿಳಿಸಿದರು. ಇದರ ಮೂಲಕ ಬ್ಯಾಂಕಿಂಗ್ ವಲಯದ ಹೊಸ ಸುಧಾರಣೆಗಳು ಮತ್ತು ನಿಯಂತ್ರಕ ಬದಲಾವಣೆಗಳ ಮಾಹಿತಿಯು ನಗರ ಸಹಕಾರಿ ಬ್ಯಾಂಕುಗಳಿಗೆ ಸಮಯಕ್ಕೆ ಸರಿಯಾಗಿ ತಲುಪುತ್ತದೆ. ಈ ವಲಯಕ್ಕೆ ತೀವ್ರವಾಗಿ ಅಗತ್ಯವಿರುವ ʻಮ್ಯೂಲ್ ಹಂಟರ್ʼ ನಂತಹ ಅತ್ಯಗತ್ಯ ತಂತ್ರಾಂಶಗಳು, ಆಧುನಿಕ ತಾಂತ್ರಿಕ ಪರಿಹಾರಗಳು ಮತ್ತು ಉದ್ಯೋಗಿ ತರಬೇತಿ ಸೌಲಭ್ಯಗಳನ್ನು ಸಹ ಈ ಪ್ರಧಾನ ಸಂಸ್ಥೆಯ ಮೂಲಕ ಲಭ್ಯಗೊಳಿಸಲಾಗುವುದು. ಪಾರದರ್ಶಕತೆಯನ್ನು ಹೆಚ್ಚಿಸುವ ಮೂಲಕ ಸಾರ್ವಜನಿಕರು ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಎರಡರ ವಿಶ್ವಾಸವನ್ನು ಬಲಪಡಿಸುವ ಹಾದಿಯನ್ನು ಈ ಸಂಸ್ಥೆಯು ತೋರಿಸುತ್ತದೆ, ಇದರಿಂದ ನಗರ ಸಹಕಾರಿ ಬ್ಯಾಂಕುಗಳು ಆಧುನಿಕ ಬ್ಯಾಂಕಿಂಗ್ ಸ್ಪರ್ಧೆಯಲ್ಲಿ ಇತರ ಬ್ಯಾಂಕುಗಳಿಗೆ ಸಮಾನವಾಗಿ ನಿಲ್ಲಲು ಸಾಧ್ಯವಾಗುತ್ತದೆ. ಈ ಸೇವೆಗಳನ್ನು ಒದಗಿಸುವುದರ ಹೊರತಾಗಿ, ಈ ಪ್ರಧಾನ ಸಂಸ್ಥೆಯು ನಗರ ಸಹಕಾರಿ ಬ್ಯಾಂಕಿಂಗ್ ಚಳವಳಿಗೆ ಹೊಸ ಜೀವವನ್ನು ನೀಡುತ್ತದೆ, ಅದರ ವ್ಯಾಪ್ತಿಯನ್ನು ವಿಸ್ತರಿಸುತ್ತದೆ ಮತ್ತು ಬ್ಯಾಂಕಿಂಗ್ ಸೇವೆಗಳನ್ನು ಆಧುನಿಕ, ಪಾರದರ್ಶಕ ಹಾಗೂ ವಿಶ್ವಾಸಾರ್ಹವನ್ನಾಗಿಸುತ್ತದೆ.
ಸಹಕಾರ ಸಚಿವಾಲಯದ ಅಧಿಕಾರ ವಹಿಸಿಕೊಂಡ ನಂತರ, ನಬಾರ್ಡ್ ಮತ್ತು ಸಂಬಂಧಿತ ಅಧಿಕಾರಿಗಳೊಂದಿಗೆ ನಡೆಸಿದ ಮೊದಲ ಸಭೆಯಲ್ಲಿ ನಗರ ಸಹಕಾರಿ ಬ್ಯಾಂಕುಗಳಿಗಾಗಿ ಪ್ರಧಾನ (ಅಂಬ್ರೆಲಾ) ಸಂಸ್ಥೆಯನ್ನು ಸ್ಥಾಪಿಸುವುದು ಅತ್ಯಂತ ದೊಡ್ಡ ಸವಾಲು ಮತ್ತು ಅಸಾಧ್ಯವಾದ ಕೆಲಸದಂತೆ ತೋರುತ್ತಿತ್ತು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಆದರೆ, ನಗರ ಸಹಕಾರಿ ಬ್ಯಾಂಕುಗಳು ಮತ್ತು ಸಹಕಾರ ವಲಯದ ಎಲ್ಲಾ ಪಾಲುದಾರರ ಸಹಕಾರದೊಂದಿಗೆ ಅತ್ಯಂತ ಕಡಿಮೆ ಸಮಯದಲ್ಲಿ ₹306 ಕೋಟಿ ಬಂಡವಾಳವನ್ನು ಕ್ರೋಢೀಕರಿಸಲಾಯಿತು ಹಾಗೂ ಸಂಸ್ಥೆಯ ಹಲವಾರು ಸೇವೆಗಳು ಮತ್ತು ಚಟುವಟಿಕೆಗಳನ್ನು ಯಶಸ್ವಿಯಾಗಿ ಪ್ರಾರಂಭಿಸಲಾಯಿತು. ಒಂದು ಕಾಲದಲ್ಲಿ ಅತ್ಯಂತ ಕಠಿಣ ಪರಿಕಲ್ಪನೆಯಾಗಿ ಕಂಡಿದ್ದು ಇಂದು ಸಾಕಾರಗೊಂಡು, ನಗರ ಸಹಕಾರಿ ಬ್ಯಾಂಕಿಂಗ್ ವಲಯವನ್ನು ಬಲಪಡಿಸಲು ಶ್ರಮಿಸುತ್ತಿದೆ ಎಂದರು.
ಇಂದು ನಗರ ಸಹಕಾರಿ ಬ್ಯಾಂಕಿಂಗ್ ವಲಯಕ್ಕೆ ಅತ್ಯಂತ ಪ್ರಮುಖವಾದ ದಿನವಾಗಿದೆ, ಏಕೆಂದರೆ 'ಬ್ಯಾಂಕ್ ಇನ್ ಎ ಬಾಕ್ಸ್' ಸೇವೆಯನ್ನು ಪ್ರಾರಂಭಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇದರ ಮೂಲಕ, ನಗರ ಸಹಕಾರಿ ಬ್ಯಾಂಕುಗಳು ಕೋರ್ ಬ್ಯಾಂಕಿಂಗ್, ಡಿಜಿಟಲ್ ಪಾವತಿಗಳು, ಕ್ಲೌಡ್ ಸೇವೆಗಳು, ನಿಯಂತ್ರಕ ಅನುಸರಣೆ ಮತ್ತು ಹಲವಾರು ಆಧುನಿಕ ಬ್ಯಾಂಕಿಂಗ್ ಸೌಲಭ್ಯಗಳನ್ನು ಒಂದೇ ಸಂಯೋಜಿತ ವೇದಿಕೆಯಲ್ಲಿ ಪಡೆಯುತ್ತವೆ. ಇದು ಸಣ್ಣ, ಒಂದೇ ಶಾಖೆಯನ್ನು ಹೊಂದಿರುವ ನಗರ ಸಹಕಾರಿ ಬ್ಯಾಂಕ್ ಕೂಡ ಹೆಚ್ಚಿನ ವೆಚ್ಚವಿಲ್ಲದೆ ತನ್ನ ಗ್ರಾಹಕರಿಗೆ ಆಧುನಿಕ ಮತ್ತು ವಿಶ್ವದರ್ಜೆಯ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸಲು ಅನುವು ಮಾಡಿಕೊಡುತ್ತದೆ. ಈ ಉಪಕ್ರಮವು ಸಣ್ಣ ಬ್ಯಾಂಕುಗಳನ್ನು ತಾಂತ್ರಿಕವಾಗಿ ಸಬಲೀಕರಣಗೊಳಿಸಲು ಮತ್ತು ಸ್ಪರ್ಧಾತ್ಮಕ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಸಂಯೋಜಿಸಲು ಹಾದಿ ಸುಗಮಗೊಳಿಸುತ್ತದೆ.
ಇಂದಿನ ಆನ್ ಲೈನ್ ಬ್ಯಾಂಕಿಂಗ್ ಯುಗದಲ್ಲಿ, ವಿಧಿವಿಜ್ಞಾನದ ಬೆಂಬಲವಿಲ್ಲದೆ ಬ್ಯಾಂಕುಗಳು ಅಥವಾ ಅವುಗಳ ಗ್ರಾಹಕರು ಸಂಪೂರ್ಣವಾಗಿ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಈ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ (ಎನ್.ಎಫ್.ಎಸ್.ಯು) ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಎನ್.ಯು.ಸಿ.ಎಫ್.ಡಿ.ಸಿ.ಗೆ ಸಲಹೆ ನೀಡಲಾಗಿತ್ತು. ಎನ್.ಎಫ್.ಎಸ್.ಯು ಸೈಬರ್ ಸುರಕ್ಷತೆ ಮತ್ತು ಡಿಜಿಟಲ್ ವಿಧಿವಿಜ್ಞಾನದಲ್ಲಿ ವಿಶ್ವದರ್ಜೆಯ ಪರಿಣತಿಯನ್ನು ಅಭಿವೃದ್ಧಿಪಡಿಸಿದೆ ಮತ್ತು ದೇಶದ ಹಲವಾರು ಬ್ಯಾಂಕುಗಳಿಗೆ ವೃತ್ತಿಪರ ಸೇವೆಗಳನ್ನು ಒದಗಿಸುತ್ತಿದೆ. ಎನ್.ಯು.ಸಿ.ಎಫ್.ಡಿ.ಸಿ. ಮತ್ತು ಎನ್.ಎಫ್.ಎಸ್.ಯು ನಡುವಿನ ಸಹಕಾರವು ನಗರ ಸಹಕಾರಿ ಬ್ಯಾಂಕುಗಳು ಮತ್ತು ಅವುಗಳ ಗ್ರಾಹಕರ ಡಿಜಿಟಲ್ ಸುರಕ್ಷತೆಯನ್ನು ಇನ್ನಷ್ಟು ಬಲಪಡಿಸುತ್ತದೆ.
ಎನ್.ಯು.ಸಿ.ಎಫ್.ಡಿ.ಸಿ. ಮತ್ತು ಎನ್.ಎಫ್.ಎಸ್.ಯು. ನಡುವಿನ ಒಪ್ಪಂದದ ಮೂಲಕ ಸೈಬರ್ ಸುರಕ್ಷತೆ ಮತ್ತು ಡಿಜಿಟಲ್ ವಿಧಿವಿಜ್ಞಾನಕ್ಕೆ ಸಂಬಂಧಿಸಿದ ಸೌಲಭ್ಯಗಳನ್ನು ಅತಿ ಸಣ್ಣ ನಗರ ಸಹಕಾರಿ ಬ್ಯಾಂಕಿನ ಪ್ರತಿಯೊಂದು ಶಾಖೆಗೂ ಅತ್ಯಂತ ಕಡಿಮೆ ವೆಚ್ಚದಲ್ಲಿ ತಲುಪಿಸಲಾಗುವುದು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ತಿಳಿಸಿದರು. 'ಬ್ಯಾಂಕ್ ಇನ್ ಎ ಬಾಕ್ಸ್' ಮೂಲಕ ಸೈಬರ್ ಸುರಕ್ಷತೆ, ಡಿಜಿಟಲ್ ವಿಧಿವಿಜ್ಞಾನ ವಿಜ್ಞಾನ, ಈ ಕ್ಷೇತ್ರಗಳಲ್ಲಿ ಉದ್ಯೋಗಿಗಳ ತರಬೇತಿ ಮತ್ತು ಸಂಶೋಧನಾ ಸೌಲಭ್ಯಗಳನ್ನು ಸಂಯೋಜಿತ ರೀತಿಯಲ್ಲಿ ಲಭ್ಯಗೊಳಿಸಲಾಗುವುದು. ಕಾರ್ಯಕ್ರಮದಲ್ಲಿ ಪ್ರಾರಂಭಿಸಲಾದ ಪ್ರಾರಂಭಿಸಲಾದ ಭದ್ರತಾ ಕಾರ್ಯಾಚರಣೆ ಕೇಂದ್ರವು, ನಗರ ಸಹಕಾರಿ ಬ್ಯಾಂಕುಗಳಿಗೆ 24x7 ಸೈಬರ್ ಮೇಲ್ವಿಚಾರಣೆ, ತಕ್ಷಣದ ಮಾರ್ಗದರ್ಶನ ಮತ್ತು ಸುರಕ್ಷತೆಯನ್ನು ಒದಗಿಸುತ್ತದೆ. ಡಿಜಿಟಲ್ ಬೆದರಿಕೆಗಳಿಂದ ಬ್ಯಾಂಕುಗಳು, ಗ್ರಾಹಕರು ಮತ್ತು ಠೇವಣಿದಾರರ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ನಗರ ಸಹಕಾರಿ ಬ್ಯಾಂಕುಗಳು ಈ ಕೇಂದ್ರದ ಸದಸ್ಯರಾಗುವುದು ಅವಶ್ಯಕವಾಗಿದೆ ಎಂದು ಹೇಳಿದರು.
ಎಲ್ಲಾ ನಗರ ಸಹಕಾರಿ ಬ್ಯಾಂಕುಗಳು ಪ್ರಧಾನ ಸಂಸ್ಥೆ ಮತ್ತು ಅದರ ಭದ್ರತಾ ಕಾರ್ಯಾಚರಣೆ ಕೇಂದ್ರದ ಸದಸ್ಯರಾಗಬೇಕೆಂದು ಶ್ರೀ ಅಮಿತ್ ಶಾ ಕರೆ ನೀಡಿದರು. ಬ್ಯಾಂಕಿನ ಶಾಖೆಗಳ ಸಂಖ್ಯೆಗೆ ಅನುಗುಣವಾಗಿ ಸದಸ್ಯತ್ವ ಶುಲ್ಕವನ್ನು ನಿಗದಿಪಡಿಸಬೇಕು, ಇದರಿಂದ ಸಣ್ಣ, ಒಂದೇ ಶಾಖೆಯ ಬ್ಯಾಂಕ್ ಕೂಡ ಸದಸ್ಯರಾಗಬಹುದು. ಪ್ರಧಾನ ಸಂಸ್ಥೆಯ ಉದ್ದೇಶ ಲಾಭ ಗಳಿಸುವುದಲ್ಲ, ಬದಲಾಗಿ ನಗರ ಸಹಕಾರಿ ಬ್ಯಾಂಕುಗಳನ್ನು ಸುಗಮಗೊಳಿಸುವುದು, ಅವುಗಳನ್ನು ರಾಷ್ಟ್ರೀಯ ಮತ್ತು ಜಾಗತಿಕವಾಗಿ ಸ್ಪರ್ಧಿಸಲು ಸಿದ್ಧಗೊಳಿಸುವುದು ಮತ್ತು ಬಿಕ್ಕಟ್ಟಿನ ಸಮಯದಲ್ಲಿ ಅವುಗಳಿಗೆ ನೆರವಾಗುವುದಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ದೇಶಾದ್ಯಂತ ಇರುವ ಸುಮಾರು 1,400 ನಗರ ಸಹಕಾರಿ ಬ್ಯಾಂಕುಗಳಲ್ಲಿ ಸುಮಾರು ₹6 ಲಕ್ಷ ಕೋಟಿ ಠೇವಣಿ ಇದೆ ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಈ ಬ್ಯಾಂಕುಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಸಣ್ಣ ವ್ಯಾಪಾರಿಗಳು, ಸಣ್ಣ ವರ್ತಕರು, ಗುಡಿ ಕೈಗಾರಿಕೆಗಳು, ಎಂಎಸ್ ಎಂಇ ಗಳು, ಸ್ಥಳೀಯ ಉದ್ಯಮಿಗಳು, ಮಹಿಳಾ ಸ್ವಸಹಾಯ ಸಂಘಗಳು ಮತ್ತು ಮಧ್ಯಮ ವರ್ಗದವರ ಆಕಾಂಕ್ಷೆಗಳನ್ನು ಈಡೇರಿಸಲು ನಗರ ಸಹಕಾರಿ ಬ್ಯಾಂಕುಗಳು ಸಣ್ಣ ಸಾಲಗಳನ್ನು ಪರಿಣಾಮಕಾರಿಯಾಗಿ ಒದಗಿಸುತ್ತವೆ. ದೊಡ್ಡ ವಾಣಿಜ್ಯ ಬ್ಯಾಂಕುಗಳು ಸಮಾಜದ ಈ ವರ್ಗಗಳನ್ನು ಇಷ್ಟೊಂದು ಸಾಮಿಪ್ಯದಿಂದ ಮತ್ತು ಸಂವೇದನಾಶೀಲತೆಯಿಂದ ತಲುಪಲು ಸಾಧ್ಯವಿಲ್ಲ. ತಾಲೂಕು ಮಟ್ಟದಲ್ಲಿ ಸ್ಥಾಪಿತವಾದ ನಗರ ಸಹಕಾರಿ ಬ್ಯಾಂಕ್ ಇಡೀ ಪ್ರದೇಶದ ಉದ್ಯೋಗ ಮತ್ತು ಸ್ವಯಂ ಉದ್ಯೋಗದಲ್ಲಿ ತೊಡಗಿರುವ ಜನರ ಆರ್ಥಿಕ ಅಗತ್ಯಗಳನ್ನು ಪೂರೈಸುವ ಸಾಧನವಾಗುತ್ತದೆ ಎಂದು ಹೇಳಿದರು.
ನಗರ ಸಹಕಾರಿ ಬ್ಯಾಂಕೊಂದರ ಅಧ್ಯಕ್ಷರಾಗಿದ್ದ ತಮ್ಮ ಅನುಭವವನ್ನು ಉಲ್ಲೇಖಿಸಿದ ಶ್ರೀ ಅಮಿತ್ ಶಾ, ಸಣ್ಣ ಸಾಲಗಳ ವಿಷಯದಲ್ಲಿ ಮರುಪಾವತಿ ಅತ್ಯಂತ ಪ್ರಬಲವಾಗಿರುತ್ತದೆ, ಏಕೆಂದರೆ ಸಾಧಾರಣ ಮತ್ತು ಕಡಿಮೆ ಆದಾಯದ ಸಾಲಗಾರರು ತಮ್ಮ ಜವಾಬ್ದಾರಿಗಳನ್ನು ಪೂರೈಸುವಲ್ಲಿ ಹೆಚ್ಚು ಪ್ರಾಮಾಣಿಕರಾಗಿರುತ್ತಾರೆ. ಗ್ಯಾರಂಟಿ ಅಥವಾ ಭದ್ರತೆ ಇಲ್ಲದೆ ₹2.5 ಲಕ್ಷದವರೆಗಿನ ಸಾಲವನ್ನು ನೀಡಲು ತಮ್ಮ ಬ್ಯಾಂಕ್ ನಿರ್ಧರಿಸಿತ್ತು ಎಂದು ಅವರು ಹೇಳಿದರು.
ಗ್ಯಾರಂಟಿ ಅಥವಾ ಭದ್ರತೆ ಇಲ್ಲದೆ ಸಣ್ಣ ಸಾಲಗಳನ್ನು ನೀಡುವ ತಮ್ಮ ಬ್ಯಾಂಕಿನ ಯೋಜನೆ ಇಂದಿಗೂ ಮುಂದುವರಿದಿದೆ ಮತ್ತು ಮಿತಿಯನ್ನು ₹2.5 ಲಕ್ಷದಿಂದ ₹5 ಲಕ್ಷಕ್ಕೆ ಏರಿಸಲಾಗಿದೆ ಎಂದು ಸಚಿವರು ತಿಳಿಸಿದರು. ಈ ಯೋಜನೆಯಡಿ ವಿತರಿಸಲಾದ ಬಹುತೇಕ ಇಡೀ ಮೊತ್ತವು ಬಡ್ಡಿ ಸಹಿತ ವಾಪಸ್ ಬಂದಿದೆ. ಮರುಪಾವತಿಯಾಗದ ಅತ್ಯಲ್ಪ ಪ್ರಕರಣಗಳಲ್ಲೂ ಸಾಲಗಾರನ ಸಾವು ಸಂಭವಿಸಿದಂತಹ ಬಲವಾದ ಕಾರಣಗಳಿದ್ದವು. ಸಾಲ ಎಷ್ಟು ಚಿಕ್ಕದಾಗಿದೆಯೋ, ಅದರ ವಸೂಲಾತಿ ಅಷ್ಟೇ ಉತ್ತಮವಾಗಿರುತ್ತದೆ ಮತ್ತು ಸಣ್ಣ ಸಾಲಗಾರರು ತಮ್ಮ ಆರ್ಥಿಕ ಜವಾಬ್ದಾರಿಗಳನ್ನು ಪೂರೈಸುವಲ್ಲಿ ಅತ್ಯಂತ ಪ್ರಾಮಾಣಿಕರಾಗಿರುತ್ತಾರೆ ಎಂಬುದಕ್ಕೆ ಈ ಅನುಭವವೇ ಸಾಕ್ಷಿಯಾಗಿದೆ ಎಂದು ಹೇಳಿದರು.
ಭಾರತದ ಆರ್ಥಿಕತೆಯಲ್ಲಿ ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಸಹಕಾರ ವಲಯವು ಪ್ರಮುಖ ಪಾತ್ರವನ್ನು ಹೊಂದಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಬೃಹತ್ ಉದ್ಯಮವನ್ನು ನಿರ್ಮಿಸಲು ಒಬ್ಬನೇ ವ್ಯಕ್ತಿಯಿಂದ ಹೆಚ್ಚಿನ ಬಂಡವಾಳವು ಅನಿವಾರ್ಯವಲ್ಲ ಸಣ್ಣ ಜನರನ್ನು ಸಹಕಾರದ ಮೂಲಕ ಒಂದೆಡೆ ತಂದು, ಅವರ ಸಣ್ಣ ಪ್ರಮಾಣದ ಕೊಡುಗೆಗಳನ್ನು ಕ್ರೋಢೀಕರಿಸುವ ಮೂಲಕ ಬೃಹತ್ ಬಂಡವಾಳವನ್ನು ಸೃಷ್ಟಿಸಬಹುದು ಮತ್ತು ಆ ಅಡಿಪಾಯದ ಮೇಲೆ ದೊಡ್ಡ ವ್ಯಾಪಾರ ಸಂಸ್ಥೆಗಳನ್ನು ನಿರ್ಮಿಸಬಹುದು. ಇದು ಸಹಕಾರದ ಮೂಲಭೂತ ಶಕ್ತಿಯಾಗಿದೆ ಎಂದು ಹೇಳಿದರು.
ಅಮುಲ್ , ಇಫ್ಕೋ , ಕ್ರಿಬ್ಕೊ ಮತ್ತು ಲಿಜ್ಜತ್ ಪಾಪಡ್ ಗಳ ಉದಾಹರಣೆಗಳನ್ನು ನೀಡಿದ ಅವರು, ಇವುಗಳ ಯಶಸ್ಸು ಒಬ್ಬ ದೊಡ್ಡ ಹೂಡಿಕೆದಾರನ ಹೂಡಿಕೆಯ ಫಲವಲ್ಲ, ಬದಲಾಗಿ ಲಕ್ಷಾಂತರ ಸಣ್ಣ ಸದಸ್ಯರ ಸಾమూಹಿಕ ಭಾಗವಹಿಸುವಿಕೆಯ ಫಲವಾಗಿದೆ ಎಂದರು. ಅಮುಲ್ ಇಂದು ಸುಮಾರು ₹1.25 ಲಕ್ಷ ಕೋಟಿ ವಹಿವಾಟು ಹೊಂದಿದ್ದು, ಸುಮಾರು 33 ಲಕ್ಷ ಮಹಿಳೆಯರು ಇದರಲ್ಲಿ ಪಾಲುದಾರರಾಗಿದ್ದಾರೆ. ಸಹಕಾರವು ಸಣ್ಣ ಬಂಡವಾಳ ಮತ್ತು ವ್ಯಾಪಕ ಸಾರ್ವಜನಿಕ ಭಾಗವಹಿಸುವಿಕೆಯನ್ನು ಸಂಯೋಜಿಸಿ ಒಂದು ಪ್ರಮುಖ ಆರ್ಥಿಕ ಶಕ್ತಿಯಾಗಿ ಹೇಗೆ ಮಾರ್ಪಡಬಲ್ಲದು ಎಂಬುದಕ್ಕೆ ಇದು ನಿದರ್ಶನವಾಗಿದೆ. ಡಿಜಿಟಲ್ ಬ್ಯಾಂಕಿಂಗ್, ರಿಯಲ್ ಟೈಮ್ ಪಾವತಿಗಳು, ಸೈಬರ್ ಮತ್ತು ದತ್ತಾಂಶ ಭದ್ರತೆ, ಎಐ ಆಧಾರಿತ ವಂಚನೆ ತಡೆಗಟ್ಟುವ ವ್ಯವಸ್ಥೆಗಳು ಮತ್ತು ಆಧುನಿಕ ಬ್ಯಾಂಕಿಂಗಿಗೆ ಅಗತ್ಯವಿರುವ ನಿಯಂತ್ರಕ ಮಾನದಂಡಗಳ ಅನುಸರಣೆಯಲ್ಲಿ ಪ್ರಧಾನ ಸಂಸ್ಥೆಯು ನಗರ ಸಹಕಾರಿ ಬ್ಯಾಂಕುಗಳಿಗೆ ನೆರವಾಗಲಿದೆ.
ಮಹಾರಾಷ್ಟ್ರವು ದೇಶದಲ್ಲೇ ಅತ್ಯಂತ ಹೆಚ್ಚು ನಗರ ಸಹಕಾರಿ ಬ್ಯಾಂಕುಗಳನ್ನು ಹೊಂದಿದ್ದು, 449 ನಗರ ಸಹಕಾರಿ ಬ್ಯಾಂಕುಗಳನ್ನು ಹೊಂದಿದೆ ಎಂದು ಶ್ರೀ ಅಮಿತ್ ಶಾ ತಿಳಿಸಿದರು. ಮಹಾರಾಷ್ಟ್ರ, ಗುಜರಾತ್, ಗೋವಾ ಮತ್ತು ಕರ್ನಾಟಕ ರಾಜ್ಯಗಳು ಒಟ್ಟಾಗಿ ದೇಶದ ಬಹುಪಾಲು ನಗರ ಸಹಕಾರಿ ಬ್ಯಾಂಕುಗಳನ್ನು ಪ್ರತಿನಿಧಿಸುತ್ತವೆ. ಈ ವಲಯದ ಪ್ರಮಾಣ ಮತ್ತು ವ್ಯಾಪಕ ಉಪಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎನ್.ಯು.ಸಿ.ಎಫ್.ಡಿ.ಸಿ.ಯ ಪ್ರಧಾನ ಕಚೇರಿಯನ್ನು ದೆಹಲಿಯಿಂದ ಮಹಾರಾಷ್ಟ್ರಕ್ಕೆ ಸ್ಥಳಾಂತರಿಸಲಾಗುವುದು ಎಂದು ಅವರು ಹೇಳಿದರು.
ಪ್ರಧಾನ (ಅಂಬ್ರೆಲಾ) ಸಂಸ್ಥೆಯ ಪರಿಕಲ್ಪನೆಯು ಸಂಪೂರ್ಣವಾಗಿ ಸ್ಪಷ್ಟವಾಗಿದೆ -ನಗರ ಸಹಕಾರಿ ಬ್ಯಾಂಕುಗಳಿಗೆ ತಾಂತ್ರಿಕ ಮೂಲಸೌಕರ್ಯ, ಸೈಬರ್ ಸುರಕ್ಷತೆ, ಪಾವತಿ ವ್ಯವಸ್ಥೆಗಳು ಮತ್ತು ಆಧುನಿಕ ಬ್ಯಾಂಕಿಂಗ್ ಸೌಲಭ್ಯಗಳನ್ನು ಅತ್ಯಂತ ಕೈಗೆಟುಕುವ ವೆಚ್ಚದಲ್ಲಿ ಒದಗಿಸುವುದು. ದೇಶದ ಎಲ್ಲಾ 1,400 ನಗರ ಸಹಕಾರಿ ಬ್ಯಾಂಕುಗಳು ಈ ಸೇವೆಗಳು, ತಂತ್ರಾಂಶ ಮತ್ತು ತಾಂತ್ರಿಕ ವ್ಯವಸ್ಥೆಗಳನ್ನು ಪ್ರತ್ಯೇಕವಾಗಿ ಖರೀದಿಸಿ ಸ್ವತಂತ್ರವಾಗಿ ನಿರ್ವಹಿಸಿದರೆ, ವೆಚ್ಚವು ಅತ್ಯಂತ ಹೆಚ್ಚಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಅಂಬ್ರೆಲಾ ಸಂಸ್ಥೆಯು ಎಲ್ಲಾ ಬ್ಯಾಂಕುಗಳ ಪರವಾಗಿ ಸಾಮೂಹಿಕ ಒಪ್ಪಂದಗಳನ್ನು ಮಾಡಿಕೊಳ್ಳುತ್ತದೆ, ಅಗತ್ಯ ತಂತ್ರಾಂಶ ಪಡೆದುಕೊಳ್ಳುತ್ತದೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತದೆ, ಇದರಿಂದ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಮತ್ತು ಸಣ್ಣ ಬ್ಯಾಂಕುಗಳು ಆಧುನಿಕ ತಂತ್ರಜ್ಞಾನದ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.
ಛತ್ರಿ ಚೌಕಟ್ಟಿನ (ಅಂಬ್ರೆಲಾ ಫ್ರೇಂ ವರ್ಕ್) ಅಭಿವೃದ್ಧಿ ಮತ್ತು ನೂತನ ಕಚೇರಿಯ ಉದ್ಘಾಟನೆಯೊಂದಿಗೆ 'ಸಹಕಾರ್ ಸಿಬಿಎಸ್, ಹಂಚಿಕೆಯ ಪಾವತಿ ಸೇವೆಗಳು, ಸಾಲ ವಿತರಣಾ ವ್ಯವಸ್ಥೆ, 'ಸಹಕಾರ್ ಕ್ಲೌಡ್' ಮತ್ತು ಭದ್ರತಾ ಕಾರ್ಯಾಚರಣೆ ಕೇಂದ್ರದಂತಹ ಹಲವಾರು ಸೇವೆಗಳನ್ನು ಏಕಕಾಲದಲ್ಲಿ ಕೊಂಡೊಯ್ಯಲಾಗುವುದು ಎಂದು ಶ್ರೀ ಅಮಿತ್ ಶಾ ಹೇಳಿದರು. ಇದರ ಜೊತೆಗೆ, ಮ್ಯೂಲ್ ಹಂಟರ್ ಮತ್ತು ಇತರ ಎಐ ಆಧಾರಿತ ವ್ಯವಸ್ಥೆಗಳು, ಗ್ರೂಪ್ ಸೈಬರ್ ಇನ್ಶೂರೆನ್ಸ್, ಎನ್.ಎಫ್.ಎಸ್.ಯು ಬೆಂಬಲದೊಂದಿಗೆ ಅತಿ ಸಣ್ಣ ಬ್ಯಾಂಕ್ಗೂ ಡಿಜಿಟಲ್ ವಿಧಿವಿಜ್ಞಾನದ ಸಾಮರ್ಥ್ಯಗಳ ವಿಸ್ತರಣೆ, ಆಧಾರ ಆಧಾರಿತ ಸೇವೆಗಳು, ನಿಯಂತ್ರಕ ಅನುಸರಣೆಯ ಆಟೋಮೇಷನ್ ಮತ್ತು ಆಧುನಿಕ ಅಪಾಯ-ನಿರ್ವಹಣಾ ಚೌಕಟ್ಟನ್ನು ಅಭಿವೃದ್ಧಿಪಡಿಸಲಾಗುವುದು. ಈ ಎಲ್ಲಾ ಉಪಕ್ರಮಗಳು ನಗರ ಸಹಕಾರಿ ಬ್ಯಾಂಕುಗಳನ್ನು ಹೆಚ್ಚು ಸುರಕ್ಷಿತ, ಸಮರ್ಥ, ಪಾರದರ್ಶಕ ಮತ್ತು ಸ್ಪರ್ಧಾತ್ಮಕವಾಗಿಸಲಿವೆ.
ಕಳೆದ ಐದು ವರ್ಷಗಳಲ್ಲಿ, ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ನಡುವಿನ ವಿಶ್ವಾಸ ಮತ್ತು ಸಂವಾದದ ಆಧಾರದ ಮೇಲೆ ನಗರ ಸಹಕಾರಿ ಬ್ಯಾಂಕುಗಳಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು ಸಚಿವರು ಹೇಳಿದರು. ಪ್ರತ್ಯೇಕ ಅನುಮತಿಯಿಲ್ಲದೆ ಶೇಕಡಾ 15 ರಷ್ಟು ಹೆಚ್ಚುವರಿ ಶಾಖೆಗಳನ್ನು ತೆರೆಯಲು ಅನುಮತಿ ನೀಡುವುದು, ಮನೆಬಾಗಿಲಿಗೆ ಬ್ಯಾಂಕಿಂಗ್ , ಅರ್ಹ ಟೈರ್-3 ಬ್ಯಾಂಕುಗಳಿಗೆ ಶೆಡ್ಯೂಲ್ಡ್ ಬ್ಯಾಂಕ್ ಸ್ಥಾನಮಾನ ಪಡೆಯುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುವುದು, ಆರ್ ಬಿಐನಲ್ಲಿ ನೋಡಲ್ ಅಧಿಕಾರಿಯ ನೇಮಕ, ಆದ್ಯತಾ ವಲಯದ ಸಾಲದ ಗುರಿಯನ್ನು ಶೇಕಡಾ 75 ರಿಂದ ಶೇಕಡಾ 60 ಕ್ಕೆ ಇಳಿಸುವುದು, ಗೃಹ ಸಾಲದ ಮಿತಿಗಳ ಹೆಚ್ಚಳ ಮತ್ತು ಒಂದುಬಾರಿ ಇತ್ಯರ್ಥ ಸೌಲಭ್ಯದ ವಿಸ್ತರಣೆ ಇವುಗಳಲ್ಲಿ ಸೇರಿವೆ.
ನಗರ ಸಹಕಾರಿ ಬ್ಯಾಂಕುಗಳು ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ನಡುವಿನ ಪರಸ್ಪರ ಅಪನಂಬಿಕೆಯ ಹಳೆಯ ಪರಿಸ್ಥಿತಿಯಿಂದ ಹೊರಬರುವುದು ಅಗತ್ಯವಾಗಿತ್ತು ಎಂದು ಶ್ರೀ ಅಮಿತ್ ಶಾ ಹೇಳಿದರು. ಸಹಕಾರ ಸಚಿವರಾಗಿ ತಮ್ಮ ಐದು ವರ್ಷಗಳ ಅನುಭವದಲ್ಲಿ, ಸಹಕಾರ ವಲಯವು ವಿಶ್ವಾಸ ಮತ್ತು ಪಾರದರ್ಶಕತೆಯಿಂದ ಮುನ್ನಡೆದಾಗಲೆಲ್ಲಾ ಭಾರತೀಯ ರಿಸರ್ವ್ ಬ್ಯಾಂಕ್ ಸಕ್ರಿಯ ಬೆಂಬಲವನ್ನು ನೀಡಿದೆ ಎಂಬುದನ್ನು ಕಂಡುಕೊಂಡಿದ್ದೇನೆ. ನಗರ ಸಹಕಾರಿ ಬ್ಯಾಂಕುಗಳಿಗಾಗಿ ಪ್ರಧಾನ (ಅಂಬ್ರೆಲಾ) ಸಂಸ್ಥೆಯ ಸ್ಥಾಪನೆಯು ಈ ವಿಶ್ವಾಸ ಆಧಾರಿತ ಸಹಕಾರಕ್ಕೆ ಅತಿ ದೊಡ್ಡ ಉದಾಹರಣೆಯಾಗಿದೆ ಎಂದು ಹೇಳಿದರು.
ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಮಾತನ್ನು ಮುಂದುವರೆಸುತ್ತಾ, ನಗರ ಸಹಕಾರಿ ಬ್ಯಾಂಕುಗಳು ವರ್ಷಗಳಿಂದ ಹೊಸ ಶಾಖೆಗಳನ್ನು ತೆರೆಯಲು ತೊಂದರೆಗಳನ್ನು ಎದುರಿಸುತ್ತಿದ್ದವು, ಆದರೆ ಈಗ ಅವುಗಳಿಗೆ ಪ್ರತ್ಯೇಕ ಅನುಮತಿಯಿಲ್ಲದೆ ತಮ್ಮ ಶಾಖಾ ಜಾಲವನ್ನು ಶೇಕಡಾ 15 ರಷ್ಟು ವಿಸ್ತರಿಸಲು ಅನುಮತಿಸಲಾಗಿದೆ ಎಂದು ತಿಳಿಸಿದರು. ಹಿಂದೆ, ಶೆಡ್ಯೂಲ್ಡ್ ಬ್ಯಾಂಕುಗಳನ್ನು ಹೊರತುಪಡಿಸಿ ಇತರ ನಗರ ಸಹಕಾರಿ ಬ್ಯಾಂಕುಗಳಿಗೆ ಮನೆಬಾಗಿಲಿಗೆ ಬ್ಯಾಂಕಿಂಗ್ ಸೌಲಭ್ಯ ಲಭ್ಯವಿರಲಿಲ್ಲ, ಆದರೆ ಈಗ ಅವು ಡಿಮ್ಯಾಂಡ್ ಡ್ರಾಫ್ಟ್ ಗಳು ಮತ್ತು ಜೀವಿತ ಪ್ರಮಾಣಪತ್ರಗಳಂತಹ ಸೇವೆಗಳನ್ನು ಗ್ರಾಹಕರ ಮನೆ ಬಾಗಿಲಲ್ಲಿಯೇ ಒದಗಿಸಬಹುದು. ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆಯ ಎರಡನೇ ಶೆಡ್ಯೂಲ್ ನಲ್ಲಿ ಸೇರ್ಪಡೆಗೊಳ್ಳುವ ಮೂಲಕ ಅರ್ಹ ಟೈರ್-3 ಸಹಕಾರಿ ಬ್ಯಾಂಕುಗಳು ಶೆಡ್ಯೂಲ್ಡ್ ಬ್ಯಾಂಕ್ ಸ್ಥಾನಮಾನವನ್ನು ಪಡೆಯುವ ಮಾರ್ಗವನ್ನು ಸಹ ಸರಳೀಕರಿಸಲಾಗಿದೆ ಎಂದು ಹೇಳಿದರು.
ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಸ್ಥಾಪನೆಯ ನಂತರ ಇದೇ ಮೊದಲ ಬಾರಿಗೆ ನಗರ ಸಹಕಾರಿ ಬ್ಯಾಂಕಿಂಗ್ ವಲಯದೊಂದಿಗೆ ನಿಯಮಿತ ಸಂವಾದಕ್ಕಾಗಿ ನೋಡಲ್ ಅಧಿಕಾರಿಯನ್ನು ನೇಮಿಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಆದ್ಯತಾ ವಲಯದ ಸಾಲದ (ಪಿ ಎಸ್ ಎಲ್) ಗುರಿಯನ್ನು ಶೇಕಡಾ 75 ರಿಂದ ಶೇಕಡಾ 60 ಕ್ಕೆ ಇಳಿಸಲಾಗಿದೆ ಮತ್ತು ನಗರ ಸಹಕಾರಿ ಬ್ಯಾಂಕುಗಳ ಗೃಹ ಸಾಲದ ಮಿತಿಯನ್ನು ಹೆಚ್ಚಿಸಲಾಗಿದೆ. ಮಹಿಳಾ ಸಾಲಗಾರರಿಗೆ ನಿಗದಿಪಡಿಸಲಾಗಿದ್ದ ₹2 ಲಕ್ಷ ಮಿತಿ ಮತ್ತು ಚಿನ್ನದ ಸಾಲಕ್ಕೆ ಅನ್ವಯವಾಗುವ ಮಿತಿಯನ್ನು ಸಹ ತೆಗೆದುಹಾಕಲಾಗಿದೆ.
ಎನ್.ಪಿ.ಎ. ಖಾತೆಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ಅನುಸರಿಸಲು ನಗರ ಸಹಕಾರಿ ಬ್ಯಾಂಕುಗಳಿಗೆ ಹಂತ ಹಂತದ 'ಗ್ಲೈಡ್ ಪಾತ್' ಒದಗಿಸಲಾಗಿದೆ, ಇದರಿಂದ ಇಡೀ ಆರ್ಥಿಕ ಹೊರೆ ಒಂದೇ ವರ್ಷದಲ್ಲಿ ಬ್ಯಾಂಕುಗಳ ಮೇಲೆ ಬೀಳುವುದಿಲ್ಲ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಈ ಹಿಂದೆ ವಾಣಿಜ್ಯ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಮಾತ್ರ ಲಭ್ಯವಿದ್ದ ಒಂದು ಬಾರಿ ಇತ್ಯರ್ಥ (ಒನ್ ಟೈಮ್ ಸೆಟಲ್ ಮೆಂಟ್ - ಒ.ಟಿ.ಎಸ್.) ಸೌಲಭ್ಯವನ್ನು ಈಗ ನಗರ ಸಹಕಾರಿ ಬ್ಯಾಂಕುಗಳಿಗೂ ವಿಸ್ತರಿಸಲಾಗಿದೆ. ವ್ಯಕ್ತಿಗತ ಗೃಹ ಸಾಲದ ಮಿತಿ ಹೆಚ್ಚಳದ ಜೊತೆಗೆ ಪರವಾನಗಿ ಸಂಬಂಧಿತ ಶುಲ್ಕವನ್ನೂ ಕಡಿಮೆ ಮಾಡಲಾಗಿದೆ.
ನಗರ ಸಹಕಾರಿ ಬ್ಯಾಂಕುಗಳು, ರಾಜ್ಯ ಸಹಕಾರಿ ಬ್ಯಾಂಕುಗಳು ಮತ್ತು ಜಿಲ್ಲಾ ಸಹಕಾರಿ ಬ್ಯಾಂಕುಗಳಿಗೆ ‘ಸಾಲ ನೀಡುವ ಸದಸ್ಯ ಸಂಸ್ಥೆʼಯ ಸ್ಥಾನಮಾನ ನೀಡಲಾಗಿದ್ದು, ಶೇಕಡಾ 85 ರಷ್ಟು ಅಪಾಯದ ರಕ್ಷಣೆ ಮತ್ತು ಭದ್ರತೆ ರಹಿತ ಸಾಲಗಳನ್ನು ಒದಗಿಸಲು ಅನುವು ಮಾಡಿಕೊಡಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಹೆಚ್ಚುವರಿಯಾಗಿ, ಸಹಕಾರ ಸಂಘಗಳಿಗೆ ಆದ್ಯತಾ ವಲಯದ ಸಾಲದ ಮಿತಿಯನ್ನು ₹5 ಲಕ್ಷದಿಂದ ₹10 ಕೋಟಿಗೆ ಹೆಚ್ಚಿಸಲಾಗಿದೆ. ಈ ಸುಧಾರಣೆಗಳು ನಗರ ಸಹಕಾರಿ ಬ್ಯಾಂಕುಗಳಿಗೆ ತಮ್ಮ ಆರ್ಥಿಕ ವ್ಯಾಪ್ತಿಯನ್ನು ವಿಸ್ತರಿಸಲು, ಗ್ರಾಹಕರಿಗೆ ಉತ್ತಮ ಸಾಲ ಸೌಲಭ್ಯಗಳನ್ನು ಒದಗಿಸಲು ಮತ್ತು ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪರಿಣಾಮಕಾರಿಯಾಗಿ ಸ್ಪರ್ಧಿಸಲು ಅನುವು ಮಾಡಿಕೊಡುತ್ತವೆ ಎಂದು ಅವರು ಹೇಳಿದರು.
ಕಳೆದ ಐದು ವರ್ಷಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನೊಂದಿಗೆ ಸಮನ್ವಯದ ಮೂಲಕ, ಶಾಖೆಗಳನ್ನು ತೆರೆಯಲು ಅನುಮತಿ ಮತ್ತು ಆರ್ಥಿಕ ಅರ್ಹತಾ ಮಾನದಂಡಗಳ ಸಡಿಲಿಕೆ ಸೇರಿದಂತೆ ನಗರ ಸಹಕಾರಿ ಬ್ಯಾಂಕುಗಳಿಗೆ ಸಂಬಂಧಿಸಿದ ಹಲವಾರು ಬಾಕಿ ಇದ್ದ ವಿಷಯಗಳನ್ನು ಪರಿಹರಿಸಲಾಗಿದೆ ಎಂದು ಶ್ರೀ ಅಮಿತ್ ಶಾ ತಿಳಿಸಿದರು. ಬ್ಯಾಂಕುಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ, ನಿಯಮಗಳ ಪ್ರಕಾರ ನಡೆಯುವಂತೆ ಮತ್ತು ಠೇವಣಿದಾರರ ಹಣವನ್ನು ಸಂಪೂರ್ಣವಾಗಿ ಸುರಕ್ಷಿತವಾಗಿರಿಸುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ನಿಯಂತ್ರಕವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಹೊಂದಿದೆ ಎಂಬುದನ್ನು ಸಹ ಅರಿಯಬೇಕು. ಈ ಉದ್ದೇಶಕ್ಕಾಗಿಯೇ ನಗರ ಸಹಕಾರಿ ಬ್ಯಾಂಕುಗಳ ಪ್ರಧಾನ (ಅಂಬ್ರೆಲಾ) ಸಂಸ್ಥೆಯನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
ದೇಶದ ಎಲ್ಲಾ 1,400 ನಗರ ಸಹಕಾರಿ ಬ್ಯಾಂಕುಗಳು ಅಂಬ್ರೆಲಾ ಸಂಸ್ಥೆಯ ಸದಸ್ಯರಾಗಬೇಕು ಎಂದು ಶ್ರೀ ಅಮಿತ್ ಶಾ ಹೇಳಿದರು. ಬ್ಯಾಂಕುಗಳು ತಮ್ಮ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ತರಬೇಕು, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು, ತಮ್ಮ ಸಿಬ್ಬಂದಿಗೆ ತರಬೇತಿ ನೀಡಬೇಕು ಮತ್ತು ತಮ್ಮ ಗ್ರಾಹಕರಿಗೆ ಎಲ್ಲಾ ರೀತಿಯ ಆಧುನಿಕ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸಬೇಕು, ಇದರಿಂದ ಅವು ಸ್ಪರ್ಧಾತ್ಮಕವಾಗಿ ಉಳಿಯಲು ಮತ್ತು ತಮ್ಮ ಕಾರ್ಯಾಚರಣೆಯನ್ನು ವಿಸ್ತರಿಸಲು ಸಾಧ್ಯವಾಗುತ್ತದೆ. ಪ್ರಸ್ತುತ, 1,400 ನಗರ ಸಹಕಾರಿ ಬ್ಯಾಂಕುಗಳಲ್ಲಿ 650 ಬ್ಯಾಂಕುಗಳು ಪ್ರಧಾನ ಸಂಸ್ಥೆಯ ಸದಸ್ಯರಾಗಿದ್ದು, ಸದಸ್ಯತ್ವವು ಸುಮಾರು ಶೇಕಡಾ 50 ರಷ್ಟಿದೆ ಎಂದು ಅವರು ಹೇಳಿದರು. ಎನ್.ಯು.ಸಿ.ಎಫ್.ಡಿ.ಸಿ ತನ್ನ ಸದಸ್ಯತ್ವ ಶುಲ್ಕವನ್ನು ಸಣ್ಣ ಮತ್ತು ಒಂದೇ ಶಾಖೆಯ ಬ್ಯಾಂಕುಗಳಿಗೆ ಇನ್ನಷ್ಟು ಕೈಗೆಟುಕುವಂತೆ ಮಾಡುತ್ತದೆ ಎಂದು ಅವರು ಹೇಳಿದರು. ಮುಂದಿನ ಒಂದು ವರ್ಷದೊಳಗೆ ಶೇಕಡಾ 100 ರಷ್ಟು ನಗರ ಸಹಕಾರಿ ಬ್ಯಾಂಕುಗಳನ್ನು ಪ್ರಧಾನ ಸಂಸ್ಥೆಯ ಜಾಲಕ್ಕೆ ತರುವ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಶ್ರೀ ಅಮಿತ್ ಶಾ ಅವರು ದೇಶಾದ್ಯಂತದ ನಗರ ಸಹಕಾರಿ ಬ್ಯಾಂಕ್ ಒಕ್ಕೂಟಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಕರೆ ನೀಡಿದರು.
2047ರ ವೇಳೆಗೆ ಭಾರತವನ್ನು ಜಾಗತಿಕ ಸಮೃದ್ಧಿಯ ಉತ್ತುಂಗಕ್ಕೆ ಕೊಂಡೊಯ್ಯುವ ಮತ್ತು ಪ್ರತಿಯೊಂದು ವಲಯದಲ್ಲೂ ನಂಬರ್ ಒನ್ ಮಾಡುವುದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಗುರಿಯಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಭಾರತವನ್ನು ಸಮೃದ್ಧಗೊಳಿಸಲು ಪ್ರತಿಯೊಬ್ಬ ಭಾರತೀಯನೂ ಸಮೃದ್ಧನಾಗಬೇಕು ಮತ್ತು ಇದಕ್ಕಾಗಿ ಸ್ವಯಂ ಉದ್ಯೋಗದ ಬಲವಾದ ವ್ಯವಸ್ಥೆಯನ್ನು ನಿರ್ಮಿಸಬೇಕು. ಈ ಗುರಿಯನ್ನು ತಲುಪುವಲ್ಲಿ ನಗರ ಸಹಕಾರಿ ಬ್ಯಾಂಕುಗಳು ಪ್ರಮುಖ ಪಾತ್ರ ವಹಿಸುತ್ತವೆ. 'ಸಹಕಾರದಿಂದ ಸಮೃದ್ಧಿ' ಎಂದರೆ ಬ್ಯಾಂಕುಗಳನ್ನು ಮಾತ್ರ ಶ್ರೀಮಂತಗೊಳಿಸುವುದಲ್ಲ; ಬ್ಯಾಂಕುಗಳು ಮತ್ತು ಸ್ವಯಂ ಉದ್ಯೋಗವನ್ನು ಸೃಷ್ಟಿಸುವ ಅವುಗಳ ಗ್ರಾಹಕರು ಇಬ್ಬರ ಸಮೃದ್ಧಿಯನ್ನು ಖಚಿತಪಡಿಸುವುದು.
ಈ ಪ್ರಧಾನ (ಅಂಬ್ರೆಲಾ) ಸಂಸ್ಥೆಯು ಅತ್ಯಂತ ಸಣ್ಣ ನಗರಗಳಿಗೂ ಅಭಿವೃದ್ಧಿಯ ವಾಹಕವಾಗಲಿದೆ ಮತ್ತು 'ಸಹಕಾರದಿಂದ ಸಮೃದ್ಧಿ' ಕ್ರಾಂತಿಗೆ ಹೊಸ ವೇಗವನ್ನು ನೀಡುತ್ತದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಭರವಸೆ ವ್ಯಕ್ತಪಡಿಸಿದರು. ಪ್ರಧಾನ ಸಂಸ್ಥೆಯ ಕನಸನ್ನು ನನಸು ಮಾಡಲು ಕೊಡುಗೆ ನೀಡಿದ ನಗರ ಸಹಕಾರಿ ಬ್ಯಾಂಕುಗಳ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರಿಗೆ ಅವರು ಧನ್ಯವಾದ ತಿಳಿಸಿದರು.
2047ರ ವೇಳೆಗೆ—ಭಾರತದ ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆಗೆ—ದೇಶವು ವಿಶ್ವದ ಸಮೃದ್ಧಿಯ ಉತ್ತುಂಗವನ್ನು ತಲುಪಬೇಕು ಮತ್ತು ಪ್ರತಿಯೊಂದು ವಲಯದಲ್ಲೂ ಪ್ರಥಮ ಸ್ಥಾನವನ್ನು ಪಡೆಯಬೇಕು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂಕಲ್ಪ ಮಾಡಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಭಾರತವು ಸಮೃದ್ಧವಾಗಬೇಕಾದರೆ ಪ್ರತಿಯೊಬ್ಬ ಭಾರತೀಯನೂ ಸಮೃದ್ಧನಾಗಬೇಕು. ಬಂಡವಾಳ ಮಾರುಕಟ್ಟೆಯಿಂದ ಮಾತ್ರ ಸಮೃದ್ಧಿ ಪ್ರತಿಯೊಬ್ಬ ಪ್ರಜೆಗೂ ತಲುಪಲು ಸಾಧ್ಯವಿಲ್ಲ; ದೇಶದಲ್ಲಿ ವ್ಯಾಪಕ ಮತ್ತು ಬಲವಾದ ಸ್ವಯಂ ಉದ್ಯೋಗ ವ್ಯವಸ್ಥೆಯನ್ನು ಸಹ ನಿರ್ಮಿಸಬೇಕು. ಸಣ್ಣ ವ್ಯಾಪಾರಿಗಳು, ಉದ್ಯಮಿಗಳು ಮತ್ತು ಸ್ವಯಂ ಉದ್ಯೋಗದಲ್ಲಿ ತೊಡಗಿರುವ ಜನರಿಗೆ ಆರ್ಥಿಕ ಬೆಂಬಲವನ್ನು ನೀಡುವ ಮೂಲಕ ಈ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ನಗರ ಸಹಕಾರಿ ಬ್ಯಾಂಕುಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ನಗರ ಸಹಕಾರಿ ಬ್ಯಾಂಕುಗಳ ವಿಷಯದಲ್ಲಿ, ಸರ್ಕಾರದ ಮಟ್ಟದಲ್ಲಿ 'ಸಮೃದ್ಧಿ' ಎಂದರೆ ಬ್ಯಾಂಕುಗಳನ್ನು ಆರ್ಥಿಕವಾಗಿ ಬಲಗೊಳಿಸುವುದು ಮಾತ್ರವಲ್ಲ; ಸ್ವಯಂ ಉದ್ಯೋಗ ಮತ್ತು ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವ ಗ್ರಾಹಕರನ್ನು ಸಮೃದ್ಧರನ್ನಾಗಿ ಮಾಡುವುದು. ಗ್ರಾಹಕ ಮತ್ತು ಬ್ಯಾಂಕ್ ಇಬ್ಬರ ಸಮೃದ್ಧಿಯೇ 'ಸಹಕಾರದಿಂದ ಸಮೃದ್ಧಿ'ಯ ನಿಜವಾದ ಆಶಯವಾಗಿದೆ. ನಗರ ಸಹಕಾರಿ ಬ್ಯಾಂಕುಗಳ ಪ್ರಧಾನ ಸಂಸ್ಥೆಯು ಈ ಪವಿತ್ರ ಉದ್ದೇಶವನ್ನು ಸಾಧಿಸಲು ವೇಗವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಮುಂಬರುವ ಅವಧಿಯಲ್ಲಿ ಅದರ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸಲಾಗುವುದು. ಮಹಾರಾಷ್ಟ್ರದ ಅನುಕೂಲಕರ ಸ್ಥಳದಲ್ಲಿ ತನ್ನ ಪ್ರಧಾನ ಕಚೇರಿಯನ್ನು ಸ್ಥಾಪಿಸುವುದರಿಂದ ಸಂಸ್ಥೆಯ ಕಾರ್ಯಾಚರಣೆಯ ದಕ್ಷತೆ ಸುಧಾರಿಸುತ್ತದೆ ಮತ್ತು ನಗರ ಸಹಕಾರಿ ಬ್ಯಾಂಕುಗಳಿಗೆ ಇನ್ನಷ್ಟು ಪರಿಣಾಮಕಾರಿ ಬೆಂಬಲವನ್ನು ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪ್ರಧಾನ (ಅಂಬ್ರೆಲಾ) ಸಂಸ್ಥೆಯ ಕನಸನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಕೊಡುಗೆ ನೀಡಿದ ದೇಶಾದ್ಯಂತದ ನಗರ ಸಹಕಾರಿ ಬ್ಯಾಂಕುಗಳ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಸದಸ್ಯರಿಗೆ ಶ್ರೀ ಅಮಿತ್ ಶಾ ಕೃತಜ್ಞತೆ ಸಲ್ಲಿಸಿದರು. ಅವರ ಸಹಕಾರವಿಲ್ಲದೆ ಸಂಸ್ಥೆಯನ್ನು ಸ್ಥಾಪಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳಿದರು. ಆಗಸ್ಟ್ ಕ್ರಾಂತಿಯ ಐತಿಹಾಸಿಕ ದಿನದಂದು ಅಂಬ್ರೆಲಾ ಸಂಸ್ಥೆಯು ತನ್ನ ನೂತನ ಕಚೇರಿಗೆ ಪ್ರವೇಶಿಸುತ್ತಿರುವುದನ್ನು ಉಲ್ಲೇಖಿಸಿದ ಶ್ರೀ ಅಮಿತ್ ಶಾ, ಈ ಸ್ಥಳದಿಂದಲೇ 'ಸಹಕಾರದಿಂದ ಸಮೃದ್ಧಿ' ಕ್ರಾಂತಿಯು ಹೊಸ ವೇಗವನ್ನು ಪಡೆಯುತ್ತದೆ ಮತ್ತು ನಗರ ಸಹಕಾರಿ ಬ್ಯಾಂಕುಗಳು ದೇಶದ ಅತಿ ಸಣ್ಣ ನಗರಗಳಿಗೂ ಅಭಿವೃದ್ಧಿ ಮತ್ತು ಸಮೃದ್ಧಿಯ ವಾಹಕಗಳಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ, ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಉಪ ಮಹಾನಿರ್ದೇಶಕ ಶ್ರೀ ಜಿ. ಪಿ. ಮಿಸ್ತ್ರಿ ಅವರು ಬರೆದಿರುವ 'ಆಪರೇಷನಲ್ ರಿಸ್ಕ್ ಮ್ಯಾನೇಜ್ಮೆಂಟ್ – ಎ ಪ್ರಾಕ್ಟಿಕಲ್ ಗೈಡ್ ಟು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ಸ್' ಪುಸ್ತಕವನ್ನು ಹಾಗೂ ಭಾರತದಲ್ಲಿ ಸಹಕಾರಿ ಬ್ಯಾಂಕಿಂಗ್ ನ ಐತಿಹಾಸಿಕ ಪ್ರಯಾಣದ ಕುರಿತಾದ ಕಾಫಿ ಟೇಬಲ್ ಪುಸ್ತಕವನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಬಿಡುಗಡೆ ಮಾಡಿದರು. ಶ್ರೀ ಅಮಿತ್ ಶಾ ಅವರು 'ಸಹಕಾರ್ ಸಿಬಿಎಸ್' ಗೆ ಯಶಸ್ವಿಯಾಗಿ ಸೇರ್ಪಡೆಯಾದ ಮೊದಲ ಆರು ನಗರ ಸಹಕಾರಿ ಬ್ಯಾಂಕುಗಳ ಪ್ರತಿನಿಧಿಗಳನ್ನು ಸನ್ಮಾನಿಸಿದರು.
*****
(रिलीज़ आईडी: 2296709)
आगंतुक पटल : 11