ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಆಗಸ್ಟ್ 1 ರಿಂದ 7ರವರೆಗೆ ದೇಶಾದ್ಯಂತ ʻವಿಶ್ವ ಸ್ತನ್ಯಪಾನ ಸಪ್ತಾಹ-2026ʼ ಆಚರಿಸಲಾಗುತ್ತಿದೆ
"ಜೀವನದಲ್ಲಿ ಸುಸ್ಥಿರ ಆರಂಭಕ್ಕಾಗಿ ಸ್ತನ್ಯಪಾನ: ಕಾರ್ಯಸಾಧ್ಯವಾದದ್ದನ್ನು ಬಲಪಡಿಸಿ" ವಿಷಯಾಧಾರಿತವಾಗಿ ಈ ಸಪ್ತಾಹ ಆಚರಿಸಲಾಗುತ್ತಿದೆ
ಪೋಷಣ್ ಅಭಿಯಾನದ ಅಡಿಯಲ್ಲಿ ಆಚರಣೆಯನ್ನು ಮುಂದುವರಿಸಲಾಗುತ್ತಿದೆ
प्रविष्टि तिथि:
05 AUG 2026 3:22PM by PIB Bengaluru
ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು "ಜೀವನದಲ್ಲಿ ಸುಸ್ಥಿರ ಆರಂಭಕ್ಕಾಗಿ ಸ್ತನ್ಯಪಾನ: ಕಾರ್ಯಸಾಧ್ಯವಾದದ್ದನ್ನು ಬಲಪಡಿಸಿ" ಎಂಬ ವಿಷಯಾಧಾರಿತವಾಗಿ ಆಗಸ್ಟ್ 1 ರಿಂದ 7 ರವರೆಗೆ ದೇಶಾದ್ಯಂತ ʻವಿಶ್ವ ಸ್ತನ್ಯಪಾನ ಸಪ್ತಾಹ-2026ʼ ಆಚರಿಸುತ್ತಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಅಂಗನವಾಡಿ ಕೇಂದ್ರಗಳು, ಆರೋಗ್ಯ ಸಂಸ್ಥೆಗಳು, ಸಮುದಾಯ ಸಂಪರ್ಕ ವೇದಿಕೆಗಳು ಮತ್ತು ಡಿಜಿಟಲ್ ಮಾಧ್ಯಮಗಳ ಮೂಲಕ ವಾರಪೂರ್ತಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪೋಷಣ್ ಅಭಿಯಾನದ ಅಡಿಯಲ್ಲಿ ಈ ಆಚರಣೆಯನ್ನು ಮುನ್ನಡೆಸಲಾಗುತ್ತಿದೆ.
ಈ ಅಭಿಯಾನವು ಮಗುವಿನ ಜೀವಿತಾವಧಿಯ ಮೊದಲ 1000 ದಿನಗಳತ್ತ- ಅಂದರೆ ಗರ್ಭಧಾರಣೆಯ ಅವಧಿ, ಜನನದ ನಂತರದ ಮೊದಲ ಆರು ತಿಂಗಳು ಮತ್ತು ಇಪ್ಪತ್ತನಾಲ್ಕು ತಿಂಗಳ ವಯಸ್ಸಿನವರೆಗಿನ ಅವಧಿಯತ್ತ ಗಮನ ಸೆಳೆಯುತ್ತದೆ. ಈ ಅವಧಿಯಲ್ಲಿ ದೊರೆಯುವ ಪೌಷ್ಟಿಕಾಂಶ, ಕಾಳಜಿ ಮತ್ತು ಪ್ರೀತಿಯು ಮಗುವಿನ ಮಿದುಳಿನ ಬೆಳವಣಿಗೆ, ರೋಗನಿರೋಧಕ ಶಕ್ತಿ, ದೈಹಿಕ ಬೆಳವಣಿಗೆ, ಕಲಿಯುವ ಸಾಮರ್ಥ್ಯ ಮತ್ತು ಆಜೀವ ಯೋಗಕ್ಷೇಮವನ್ನು ರೂಪಿಸುತ್ತದೆ. ಇದರಿಂದಾಗಿ ಮಗುವಿನ ಬದುಕುಳಿಯುವಿಕೆ ಮತ್ತು ಆರೋಗ್ಯಕರ ಬೆಳವಣಿಗೆಗೆ ಲಭ್ಯವಿರುವ ಅತ್ಯಂತ ಪರಿಣಾಮಕಾರಿ ಕ್ರಮಗಳಲ್ಲಿ ಸ್ತನ್ಯಪಾನವು ಒಂದಾಗಿದೆ.
ನವಜಾತ ಶಿಶುವಿಗೆ ಜನಿಸಿದ ಮೊದಲ ಗಂಟೆಯೊಳಗೆ ('ಗೋಲ್ಡನ್ ಅವರ್') ಎದೆಹಾಲು ಸಿಗುವುದನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ಪ್ರತಿಯೊಂದು ಕುಟುಂಬವನ್ನು ಒತ್ತಾಯಿಸುತ್ತದೆ. ʻಕೊಲೊಸ್ಟ್ರಮ್ʼ ಎಂದು ಕರೆಯಲಾಗುವ ಮೊದಲ ಹಾಲನ್ನು ಹೆಚ್ಚಾಗಿ ಮಗುವಿನ 'ಮೊದಲ ನೈಸರ್ಗಿಕ ಲಸಿಕೆ' ಎಂದು ವಿವರಿಸಲಾಗುತ್ತದೆ. ಇದು ಪ್ರತಿಕಾಯಗಳು (ಆಂಟಿಬಾಡಿಗಳು) ಮತ್ತು ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತದೆ. ಹಾಗಾಗಿ ಇದನ್ನು ಎಂದಿಗೂ ಎಸೆಯಬಾರದು. ತಾಯಿ ಮತ್ತು ಮಗುವಿನ ನಡುವಿನ ಆರಂಭಿಕ ಚರ್ಮ-ಚರ್ಮದ ಸಂಪರ್ಕವು ಸ್ತನ್ಯಪಾನವನ್ನು ಪ್ರಾರಂಭಿಸಲು ಬೆಂಬಲಿಸುತ್ತದೆ ಮತ್ತು ಅವರಿಬ್ಬರ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತದೆ.
ಮೊದಲ ಆರು ತಿಂಗಳವರೆಗೆ ಕೇವಲ ಸ್ತನ್ಯಪಾನವನ್ನು ಮಾಡಿಸುವುದು ಎಂದರೆ, ಶಿಶುವಿಗೆ ನೀರು, ಜೇನುತುಪ್ಪ, ಗುಟ್ಟಿ, ಗ್ಲೂಕೋಸ್ ಅಥವಾ ಫಾರ್ಮುಲಾ ಹಾಲನ್ನು ನೀಡದೆ ಕೇವಲ ಎದೆಹಾಲನ್ನು ಮಾತ್ರ ನೀಡುವುದಾಗಿದೆ. ಏಕೆಂದರೆ ಈ ಅವಧಿಯಲ್ಲಿ ಎದೆಹಾಲು ಮಾತ್ರ ಮಗುವಿನ ಎಲ್ಲಾ ಪೌಷ್ಟಿಕಾಂಶ ಮತ್ತು ಜಲಸಂಚಯನದ ಅಗತ್ಯಗಳನ್ನು ಪೂರೈಸುತ್ತದೆ ಮತ್ತು ಸೋಂಕಿನಿಂದ ಶಿಶುವನ್ನು ರಕ್ಷಿಸುತ್ತದೆ. ಆರು ತಿಂಗಳ ನಂತರ, ಸ್ತನ್ಯಪಾನವನ್ನು ಎರಡು ವರ್ಷ ಮತ್ತು ಅದಕ್ಕೂ ಮೀರಿದ ಅವಧಿಯವರೆಗೆ ಮುಂದುವರಿಸುವುದರ ಜೊತೆಗೆ ವಯಸ್ಸಿಗೆ ಸೂಕ್ತವಾದ ಪೂರಕ ಆಹಾರಗಳನ್ನು ಪರಿಚಯಿಸಬೇಕು.
ತಾಯಂದಿರಿಗೆ ಸರಿಯಾದ ಭಂಗಿ ಮತ್ತು ಮಗುವನ್ನು ಎದೆಗೆ ಅವಚಿಕೊಳ್ಳುವಿಕೆ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತಿದೆ ಮತ್ತು ಅವರಿಗೆ ಹಾಗೂ ಅವರ ಮಗುವಿಗೆ ಅತ್ಯಂತ ಆರಾಮದಾಯಕವಾದ ಭಂಗಿಯನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ. ಮಗುವಿಗೆ ಹಸಿವಾದಾಗಲೆಲ್ಲಾ ಆಗಾಗ್ಗೆ ಹಾಲುಣಿಸುವುದು ಮತ್ತು ಯಾವುದೇ ತೊಂದರೆ ಎದುರಾದಾಗ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಅಥವಾ ಹತ್ತಿರದ ಆರೋಗ್ಯ ಕೇಂದ್ರದಿಂದ ಬೆಂಬಲ ಪಡೆಯುವುದರ ಬಗ್ಗೆ ಈ ವಾರದಲ್ಲಿ ಒತ್ತು ನೀಡಲಾಗುತ್ತಿದೆ. ಕೆಲಸಕ್ಕೆ ಹಿಂದಿರುಗುವ ತಾಯಂದಿರಿಗೆ, ಸ್ತನ್ಯಪಾನವು ಅಡಚಣೆಯಿಲ್ಲದೆ ಮುಂದುವರಿಯಲು ಅನುಕೂಲವಾಗುವಂತೆ ಎದೆಹಾಲನ್ನು ತೆಗೆದು ಸುರಕ್ಷಿತವಾಗಿ ಸಂಗ್ರಹಿಸುವ ಕುರಿತು ಸಲಹೆಗಳನ್ನು ನೀಡಲಾಗುತ್ತಿದೆ. ಇದರಿಂದ ಹಾಲುಣಿಸುವಿಕೆ ತಡೆರಹಿತವಾಗಿ ಮುಂದುವರಿಯುತ್ತದೆ.
ಪ್ರತಿಯೊಬ್ಬ ತಾಯಿಯೂ ಸ್ತನ್ಯಪಾನ ಮಾಡಿಸಲು ಸಶಕ್ತಳಾಗುವಂತಹ ಮತ್ತು ಪ್ರತಿಯೊಂದು ಮಗುವು ತನ್ನ ಜೀವನದಲ್ಲಿ ಸಾಧ್ಯವಾದಷ್ಟು ಅತ್ಯುತ್ತಮ ಆರಂಭವನ್ನು ಪಡೆಯುವಂತಹ ಪೂರಕ ವಾತಾವರಣವನ್ನು ಸೃಷ್ಟಿಸಲು ಆರೋಗ್ಯ ವೃತ್ತಿಪರರು, ಸಮುದಾಯ ಕಾರ್ಯಕರ್ತರು, ಕುಟುಂಬಗಳು ಮತ್ತು ನಾಗರಿಕರಿಗೆ ಸಚಿವಾಲಯವು ಕರೆ ನೀಡುತ್ತದೆ.
*****
(रिलीज़ आईडी: 2294962)
आगंतुक पटल : 20