ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಕರ್ನಾಟಕದ ʻನೀಲಂʼ ಮತ್ತು ʻತೋತಾಪುರಿʼ ಮಾವಿನ ಹಣ್ಣುಗಳನ್ನು ಮೊಟ್ಟಮೊದಲ ಬಾರಿಗೆ ಮಾಲ್ಡೀವ್ಸ್‌ಗೆ ರವಾನಿಸಲು ಅನುವು ಮಾಡಿಕೊಟ್ಟ ʻಎಪಿಇಡಿಎʼ
ನೇರ ಜಾಗತಿಕ ಮಾರುಕಟ್ಟೆ ಸಂಪರ್ಕಗಳ ಮೂಲಕ ಮಾವಿನ ರಫ್ತಿನಿಂದ ರೈತರಿಗೆ ಶೇ.50 ಕ್ಕಿಂತ ಹೆಚ್ಚಿನ ಆದಾಯ ಬರಲಿದೆ
प्रविष्टि तिथि:
31 JUL 2026 12:15PM by PIB Bengaluru
ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಧೀನದಲ್ಲಿರುವ ʻಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರʼವು(ಎಪಿಇಡಿಎ) ʻನೀಲಂʼ ಮತ್ತು ʻತೋತಾಪುರಿʼ ಮಾವಿನ ಹಣ್ಣುಗಳನ್ನು ಮೊದಲ ಬಾರಿಗೆ ವಿಮಾನದ ಮೂಲಕ ಕರ್ನಾಟಕದಿಂದ ಮಾಲ್ಡೀವ್ಸ್‌ಗೆ ರಫ್ತು ಮಾಡಲು ಅನುಕೂಲ ಮಾಡಿಕೊಟ್ಟಿದೆ. 30 ಜುಲೈ 2026 ರಂದು ಹಸಿರು ನಿಶಾನೆ ತೋರಲಾದ ಈ ರಫ್ತು, ಕರ್ನಾಟಕದಲ್ಲಿ ಋತುವಿನ ಅಂತ್ಯಕ್ಕೆ ಬರುವ ಮಾವಿನ ಪ್ರಭೇದಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಉತ್ತೇಜಿಸುವಲ್ಲಿ ಮತ್ತು ಭಾರತದ ಮಾವಿನ ರಫ್ತು ಪ್ರಮಾಣವನ್ನು ಮತ್ತಷ್ಟು ಬಲಪಡಿಸುವಲ್ಲಿ ಮಹತ್ವದ ಮೈಲುಗಲ್ಲಾಗಿದೆ.
ʻಎಪಿಇಡಿಎʼ ಅಧ್ಯಕ್ಷರಾದ ಶ್ರೀ ಅಭಿಷೇಕ್ ದೇವ್ (ಐಎಎಸ್) ಅವರು ರಫ್ತು ಸಾಗಣೆಗೆ ಹಸಿರು ನಿಶಾನೆ ತೋರಿದರು. ಇದೇವೇಳೆ, ರಫ್ತುದಾರರು, ʻರೈತ ಉತ್ಪಾದಕ ಕಂಪನಿʼಗಳು(ಎಫ್‌ಪಿಸಿ), ಕೃಷಿಕರು ಮತ್ತು ರಫ್ತು ಸಾಧ್ಯವಾಗಿಸುವಲ್ಲಿ ಭಾಗಿಯಾಗಿರುವ ಎಲ್ಲಾ ಪಾಲುದಾರರ ಸಾಮೂಹಿಕ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು. ಇಂತಹ ಉಪಕ್ರಮಗಳು ಭಾರತೀಯ ಮಾವಿನ ಹಣ್ಣಿನ ಮಾರುಕಟ್ಟೆ ಪ್ರವೇಶವನ್ನು ಹೆಚ್ಚಿಸುತ್ತವೆ, ಋತುವಿನ ಅಂತ್ಯಕ್ಕೆ ಬರುವ ತಳಿಗಳಿಗೆ ಹೊಸ ರಫ್ತು ಅವಕಾಶಗಳನ್ನು ಸೃಷ್ಟಿಸುತ್ತವೆ ಮತ್ತು ರೈತರಿಗೆ ಸುಸ್ಥಿರ ಆದಾಯದ ಬೆಳವಣಿಗೆಗೆ ಕೊಡುಗೆ ನೀಡುತ್ತವೆ ಎಂದು ಹೇಳಿದರು.
ಕರ್ನಾಟಕದ ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ʻಮೆಸರ್ಸ್ ಪ್ರಕೃತಿಮಯ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ʼಗೆ ಸಂಬಂಧಿಸಿದ ರೈತರಿಂದ ಒಂದು ಮೆಟ್ರಿಕ್ ಟನ್ ʻನೀಲಂʼ ಮತ್ತು ʻತೋತಾಪುರಿʼ ಮಾವಿನ ಹಣ್ಣುಗಳನ್ನು ರಫ್ತು ಮಾಡಲಾಗಿದೆ. ಹೊಸದಾಗಿ ನೋಂದಾಯಿತ ಮಹಿಳಾ ಉದ್ಯಮಿ ಮತ್ತು ರಫ್ತುದಾರರಾದ ʻಮೆಸರ್ಸ್ ಅಹಲ್ಯಾ ದೇವಿ ವೆಂಚರ್ಸ್ʼನ ನಿರ್ದೇಶಕರಾದ ಶ್ರೀಮತಿ ಅಶ್ವಿನಿ ಎ ಅವರು ಭಾರತದ ಕೃಷಿ-ರಫ್ತು ಪರಿಸರ ವ್ಯವಸ್ಥೆಯಲ್ಲಿ ಹೆಚ್ಚುತ್ತಿರುವ ಮಹಿಳಾ ಉದ್ಯಮಿಗಳ ಭಾಗವಹಿಸುವಿಕೆಯನ್ನು ಉಲ್ಲೇಖಿಸಿದರು.
ʻನೀಲಂʼ ಮಾವಿನ ಹಣ್ಣು ಅದರ ಸಿಹಿ, ರಸಭರಿತ ತಿರುಳು, ಸಮೃದ್ಧ ಘಮಲಿಗಾಗಿ ಹೆಸರುವಾಸಿಯಾಗಿದೆ. ಸಿಹಿತಿಂಡಿಗಳು, ಸ್ಮೂಥಿಗಳು ಮತ್ತು ಪಾನೀಯಗಳಿಗೆ ಇದರ ಸೂಕ್ತತೆಗಾಗಿ ವ್ಯಾಪಕವಾಗಿ ಪ್ರಶಂಸಿಸಲಾಗುತ್ತದೆ. ʻತೋತಾಪುರಿʼ ಮಾವು ಅದರ ವಿಶಿಷ್ಟ ಆಕಾರ, ಸಿಹಿ-ಹುಳಿ ರುಚಿ, ಪರಿಮಳ ಮತ್ತು ತಾಜಾ ಬಳಕೆ ಹಾಗೂ ಸಂಸ್ಕರಣೆ ಉದ್ದೇಶ ಸೇರಿದಂತೆ ಬಹುಮುಖತೆಗೆ ಹೆಸರುವಾಸಿಯಾಗಿದೆ. ಜೂನ್ ಅಂತ್ಯದಿಂದ ಜುಲೈ ಅಂತ್ಯದವರೆಗೆ ಕೊಯ್ಲು ಮಾಡಲಾಗುವ ಈ ಋತು ಅಂತ್ಯದ ಪ್ರಭೇದಗಳು ಭಾರತದ ಮಾವಿನ ರಫ್ತು ಋತುವನ್ನು ವಿಸ್ತರಿಸಲು ಮತ್ತು ಗರಿಷ್ಠ ಕೊಯ್ಲಿನ ಅವಧಿಯನ್ನು ಮೀರಿ ಅಂತಾರಾಷ್ಟ್ರೀಯ ಬೇಡಿಕೆಯನ್ನು ಪೂರೈಸಲು ಅವಕಾಶವನ್ನು ಒದಗಿಸುತ್ತವೆ.
ಈ ವಿಮಾನ ಸಾಗಣೆಯು ಕರ್ನಾಟಕದ ತೋಟಗಾರಿಕೆ ಕ್ಷೇತ್ರದ ಬೆಳೆಯುತ್ತಿರುವ ರಫ್ತು ಸಾಮರ್ಥ್ಯವನ್ನು ಉಲ್ಲೇಖಿಸುತ್ತದೆ. ಇದೇವೇಳೆ, ಸಂಘಟಿತ ಒಟ್ಟುಗೂಡಿಸುವಿಕೆ, ಗುಣಮಟ್ಟದ ಉತ್ಪನ್ನ ಮತ್ತು ರಫ್ತು ಆಧಾರಿತ ಪೂರೈಕೆ ಸರಪಳಿಗಳ ಮೂಲಕ ಜಾಗತಿಕ ಮಾರುಕಟ್ಟೆಗಳೊಂದಿಗೆ ರೈತರನ್ನು ಸಂಪರ್ಕಿಸುವಲ್ಲಿ ರೈತ ಉತ್ಪಾದಕ ಕಂಪನಿಗಳು ಹೇಗೆ ಪ್ರಮುಖ ಪಾತ್ರ ವಹಿಸುತ್ತಿವೆ ಎಂಬುದನ್ನು ತೋರಿಸುತ್ತದೆ.
ಸಾಂಪ್ರದಾಯಿಕ ಮಾರುಕಟ್ಟೆ ಮಾರ್ಗಗಳಿಗೆ ಹೋಲಿಸಿದರೆ ರೈತ ಉತ್ಪಾದಕ ಕಂಪನಿಗೆ ಸಂಬಂಧಿಸಿದ ರೈತರು ಈ ರಫ್ತು ಉಪಕ್ರಮದ ಮೂಲಕ ಶೇಕಡಾ 50 ಕ್ಕಿಂತ ಹೆಚ್ಚು ಆದಾಯವನ್ನು ಪಡೆದಿದ್ದಾರೆ. ಈ ಸಾಧನೆಯು ನೇರ ಸಂಗ್ರಹಣೆ, ರಫ್ತು ಮಾರುಕಟ್ಟೆ ಸಂಪರ್ಕಗಳು ಮತ್ತು ರೈತರ ಆದಾಯವನ್ನು ಹೆಚ್ಚಿಸುವಲ್ಲಿ ಸಂಘಟಿತ ಒಟ್ಟುಗೂಡಿಸುವಿಕೆಯ ಮೌಲ್ಯವನ್ನು ಒತ್ತಿಹೇಳುತ್ತದೆ. ರಫ್ತು-ಆಧಾರಿತ ಕೃಷಿ ಪದ್ಧತಿಗಳ ವ್ಯಾಪಕ ಅಳವಡಿಕೆಯನ್ನು ಉತ್ತೇಜಿಸುತ್ತದೆ.
ಈ ರಫ್ತು ಕರ್ನಾಟಕದ ಮಾವಿನ ರಫ್ತು ಪಯಣದಲ್ಲಿ ಒಂದು ಹೊಸ ಅಧ್ಯಾಯವನ್ನು ಸಂಕೇತಿಸುತ್ತದೆ. ಉತ್ಕೃಷ್ಟ ತೋಟಗಾರಿಕೆ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳನ್ನು ಪಡೆಯುವಲ್ಲಿ ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ), ರೈತ ಉತ್ಪಾದಕ ಕಂಪನಿಗಳು (ಎಫ್‌ಪಿಸಿ), ರಫ್ತುದಾರರು ಮತ್ತು ಕೃಷಿ-ಉದ್ಯಮಿಗಳ ಹೆಚ್ಚಿನ ಭಾಗವಹಿಸುವಿಕೆಯನ್ನು ಇದು ಉತ್ತೇಜಿಸುವ ನಿರೀಕ್ಷೆಯಿದೆ.
ರಫ್ತು ಮೂಲಸೌಕರ್ಯವನ್ನು ಬಲಪಡಿಸಲು, ಜಾಗತಿಕ ಮಾರುಕಟ್ಟೆ ಪ್ರವೇಶವನ್ನು ಸುಗಮಗೊಳಿಸಲು ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಭಾರತದ ಉತ್ಕೃಷ್ಟ ಹಣ್ಣುಗಳನ್ನು ಉತ್ತೇಜಿಸಲು ರಾಜ್ಯ ಸರ್ಕಾರಗಳು, ರಫ್ತುದಾರರು, ರೈತ ಉತ್ಪಾದಕ ಸಂಸ್ಥೆಗಳು, ರೈತ ಉತ್ಪಾದಕ ಕಂಪನಿಗಳು ಹಾಗೂ ಇತರ ಮಧ್ಯಸ್ಥಗಾರರೊಂದಿಗೆ ʻಎಪಿಇಡಿಎʼ ನಿಕಟವಾಗಿ ತೊಡಗಿಸಿಕೊಳ್ಳುವುದನ್ನು ಮುಂದುವರಿಸಿದೆ. ಇಂತಹ ಉಪಕ್ರಮಗಳು ರೈತರು ಮತ್ತು ತೋಟಗಾರಿಕೆ ಕ್ಷೇತ್ರಕ್ಕೆ ಸುಸ್ಥಿರ ಅವಕಾಶಗಳನ್ನು ಸೃಷ್ಟಿಸುವ ಜೊತೆಗೆ ಭಾರತದ ಕೃಷಿ ರಫ್ತುಗಳ ವೈವಿಧ್ಯೀಕರಣಕ್ಕೆ ಕೊಡುಗೆ ನೀಡುತ್ತವೆ.
*****
(रिलीज़ आईडी: 2292270)
आगंतुक पटल : 50