ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಕಳೆದ 12 ವರ್ಷಗಳಲ್ಲಿ ಹುಲಿಗಳ ಸಂಖ್ಯೆ ಮತ್ತು ಹುಲಿ ಮೀಸಲು ಪ್ರದೇಶ ಗಮನಾರ್ಹ ಏರಿಕೆ: ಶ್ರೀ ಭೂಪೇಂದರ್ ಯಾದವ್


ನವದೆಹಲಿಯಲ್ಲಿ ನಡೆದ ಜಾಗತಿಕ ಹುಲಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಪರಿಸರ ಸಚಿವರು, ಪ್ರಕೃತಿಯನ್ನು ಗೌರವಿಸುವಂತೆ ಜನತೆಗೆ  ಪ್ರೋತ್ಸಾಹದ ಕರೆ

ವನ್ಯಜೀವಿ ಸಂರಕ್ಷಣಾ ಕಥೆಗಳು ದತ್ತಾಂಶಗಳನ್ನು ಮೀರಿವೆ; ಅವು ಸಾಂಪ್ರದಾಯಿಕ ಜ್ಞಾನ, ಭಾವನೆಗಳು, ಉತ್ಸಾಹ ಮತ್ತು ವರ್ಷಗಳ ಅನುಭವ ಒಗ್ಗೂಡಿಸುತ್ತವೆ: ಶ್ರೀ ಯಾದವ್

2026ರ ಜಾಗತಿಕ ಹುಲಿ ದಿನದಂದು ಎನ್ ಟಿಎಸಿ ಪರಿಸರ ಪ್ರವಾಸೋದ್ಯಮ ವೆಬ್‌ಪುಟ ಅನಾವರಣ; ಹುಲಿ ಸಂರಕ್ಷಣೆ ಮತ್ತು ಸಂರಕ್ಷಿತ ಪ್ರದೇಶ ನಿರ್ವಹಣೆಗೆ ಅನುಕರಣೀಯ ಕೊಡುಗೆಗಳನ್ನು ಗೌರವಿಸುವ ಎನ್ ಟಿ ಎ ಸಿ ಪ್ರಶಸ್ತಿಗಳು

प्रविष्टि तिथि: 29 JUL 2026 12:21PM by PIB Bengaluru

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರು ನವದೆಹಲಿಯಲ್ಲಿಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ ಟಿ ಎ ಸಿ) ಆಯೋಜಿಸಿದ್ದ 2026ರ ಜಾಗತಿಕ ಹುಲಿ ದಿನಾಚರಣೆ ಉದ್ದೇಶಿಸಿ ಮಾತನಾಡಿದರು. ಪ್ರಕೃತಿಯೊಂದಿಗೆ ಆಳವಾದ ಸಾಮಾಜಿಕ ಸಂಪರ್ಕ ಮತ್ತು ಸಂರಕ್ಷಣೆ-ಆಧಾರಿತ ಜೀವನಶೈಲಿಗೆ ಸಚಿವರು ಕರೆ ನೀಡಿದರು. ಹುಲಿ ಸಂರಕ್ಷಣೆಯಲ್ಲಿ ಭಾರತದ ಸಾಧನೆಗಳನ್ನು ಸಂಭ್ರಮಿಸಲು ಮತ್ತು ಹುಲಿಗಳು ಮತ್ತು ಅವುಗಳ ಆವಾಸಸ್ಥಾನಗಳನ್ನು ರಕ್ಷಿಸುವ ಸಾಮೂಹಿಕ ಬದ್ಧತೆಯನ್ನು ಪುನರುಚ್ಚರಿಸಲು ನಡೆದ ಈ ಕಾರ್ಯಕ್ರಮದಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ರಾಜ್ಯ ಖಾತೆ ಸಚಿವರಾದ (ಇಎಫ್‌ಸಿಸಿ) ಶ್ರೀ ಕೀರ್ತಿ ವರ್ಧನ್ ಸಿಂಗ್, ಹಿರಿಯ ಸರ್ಕಾರಿ ಅಧಿಕಾರಿಗಳು, ವನ್ಯಜೀವಿ ತಜ್ಞರು, ಮುಂಚೂಣಿ ಅರಣ್ಯ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಇತರ ಪಾಲುದಾರರು ಭಾಗವಹಿಸಿದ್ದರು.

ಸಂರಕ್ಷಣೆ ಎಂದರೆ ಕೇವಲ ವನ್ಯಜೀವಿಗಳನ್ನು ರಕ್ಷಿಸುವುದು ಮಾತ್ರವಲ್ಲ, ಪ್ರಕೃತಿಯೊಂದಿಗೆ ಗೌರವಯುತ ಸಂಬಂಧವನ್ನು ಬೆಳೆಸಿಕೊಳ್ಳುವುದು ಕೂಡ ಆಗಿದೆ ಎಂದು ಒತ್ತಿ ಹೇಳಿದ ಶ್ರೀ ಯಾದವ್, "ಪ್ರಕೃತಿ ಪ್ರವಾಸೋದ್ಯಮ ಅಥವಾ ಮನರಂಜನೆಯ ಮೂಲ ಮಾತ್ರವಲ್ಲ, ಅದನ್ನು ಗೌರವಿಸಬೇಕು ಮತ್ತು ಜನರು ಅದರಿಂದ ಶಾಂತಿಯನ್ನು ಪಡೆಯಬೇಕು" ಎಂದು ಹೇಳಿದರು. ಜನರು ಪ್ರಕೃತಿಯಿಂದ ಸ್ಫೂರ್ತಿ ಪಡೆದು ಪರಿಸರ ಸಂರಕ್ಷಣೆಗೆ ತಮ್ಮ ಜೀವನಶೈಲಿಯನ್ನು ಮುಡಿಪಾಗಿಡಬೇಕು ಎಂದು ಅವರು ಪ್ರೋತ್ಸಾಹಿಸಿದರು.

ಭಾರತದ ವನ್ಯಜೀವಿ ಸಂರಕ್ಷಣಾ ಸಾಧನೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಸಚಿವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಹುಲಿಗಳ ಸಂಖ್ಯೆ (3682) ಮತ್ತು ಹುಲಿ ಮೀಸಲು ಪ್ರದೇಶಗಳು (58) ಗಮನಾರ್ಹ ಏರಿಕೆ ಕಂಡಿವೆ ಎಂದು ಹೇಳಿದರು. ಕಳೆದ 12 ವರ್ಷಗಳಲ್ಲಿ ಆನೆ ಮೀಸಲು ಪ್ರದೇಶಗಳು, ರಾಷ್ಟ್ರೀಯ ಉದ್ಯಾನವನಗಳು, ವನ್ಯಜೀವಿ ಅಭಯಾರಣ್ಯಗಳು, ಸಂರಕ್ಷಿತ ಪ್ರದೇಶಗಳು, ಸಮುದಾಯ ಮೀಸಲು ಪ್ರದೇಶಗಳು ಮತ್ತು ಜೌಗು ಪ್ರದೇಶಗಳ ಸಂಖ್ಯೆಯೂ ಹೆಚ್ಚಾಗಿದೆ ಎಂದು ಅವರು ಹೇಳಿದರು.

ಎನ್ ಟಿ ಎ ಸಿ ಪರಿಸರ ಪ್ರವಾಸೋದ್ಯಮ ವೆಬ್‌ಪುಟವನ್ನು ಲೋಕಾರ್ಪಣೆ ಮಾಡಿದ  ಶ್ರೀ ಯಾದವ್ ಅವರು ಎಲ್ಲಾ ಹುಲಿ ಮೀಸಲು ಪ್ರದೇಶಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ತಂದಿದ್ದಕ್ಕಾಗಿ ಎನ್ ಟಿ ಎ ಸಿ ಅನ್ನು ಅಭಿನಂದಿಸಿದರು. ಇದು ಸಫಾರಿ ಮತ್ತು ವಸತಿ ಬುಕಿಂಗ್‌ಗಳಿಗಾಗಿ ಎಲ್ಲಾ ಹುಲಿ ಮೀಸಲು ಪ್ರದೇಶಗಳ ಅಧಿಕೃತ ವೆಬ್‌ಸೈಟ್‌ಗಳಿಗೆ ನೇರ ಲಿಂಕ್‌ಗಳನ್ನು ಒದಗಿಸುತ್ತದೆ, ಜವಾಬ್ದಾರಿಯುತ ಮತ್ತು ಸುಸ್ಥಿರ ಪ್ರಕೃತಿ ಆಧಾರಿತ ಪ್ರವಾಸೋದ್ಯಮವನ್ನು ಉತ್ತೇಜಿಸುವಾಗ ಮಾಹಿತಿಯನ್ನು ಹೆಚ್ಚು ಲಭ್ಯವಾಗುವಂತೆ ಮಾಡುತ್ತದೆ. (ಲಿಂಕ್: https://ntca.gov.in/eco-tourism/)

ಸಂರಕ್ಷಣಾ ಅನುಭವವನ್ನು ದಾಖಲಿಸುವ ಮಹತ್ವದ ಬಗ್ಗೆ ಮಾತನಾಡಿದ ಸಚಿವರು, "ಕಾಡುಗಳ ಕಥೆಗಳು ಬರಿಯ ದತ್ತಾಂಶವಲ್ಲ, ಆದರೆ ಇದು ಸಾಂಪ್ರದಾಯಿಕ ಜ್ಞಾನ, ಭಾವನೆಗಳು, ವನ್ಯಜೀವಿ ಸಂರಕ್ಷಣೆಯ ಬಗೆಗಿನ ಉತ್ಸಾಹ ಮತ್ತು ವನ್ಯಜೀವಿ ಅಧಿಕಾರಿಗಳು, ಸಂರಕ್ಷಣಾಕಾರರ ವರ್ಷಗಳ ಅನುಭವಗಳನ್ನು ಒಳಗೊಂಡಿದೆ" ಎಂದು ಹೇಳಿದರು. ವನ್ಯಜೀವಿ ಸಂರಕ್ಷಣೆಯ ಬಗ್ಗೆ ಮತ್ತಷ್ಟು ಬರೆಯಲು ಮತ್ತು ಪ್ರಾಯೋಗಿಕ ಮತ್ತು ಜಾರಿಗೊಳಿಸಬಹುದಾದ ನೀತಿ ಪರಿಹಾರಗಳಿಗೆ ಕೊಡುಗೆ ನೀಡುವ ರೀತಿಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಅರಣ್ಯ ಅಧಿಕಾರಿಗಳಿಗೆ ಕರೆ ನೀಡಿದರು.  

ಜಾಗತಿಕ ಅತ್ಯುತ್ತಮ ಪದ್ಧತಿಗಳನ್ನು ಸೇರಿಸುವ ಮೂಲಕ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಾಮರ್ಥ್ಯ ವೃದ್ಧಿಯ ಅಗತ್ಯತೆಯನ್ನು ಶ್ರೀ ಯಾದವ್ ಬಲವಾಗಿ ಪ್ರತಿಪಾದಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಜ್ಞಾನ ಹಂಚಿಕೆಯನ್ನು ಜಗತ್ತಿಗೆ ಕೊಂಡೊಯ್ಯುವಲ್ಲಿ ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲೈಯನ್ಸ್ (ಐಬಿಸಿಎ) ಪಾತ್ರವನ್ನು ಅವರು ಪ್ರಮುಖವಾಗಿ ಉಲ್ಲೇಖಿಸಿದರು.

ಹುಲಿ ಸಂರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿರುವವರ ಕೊಡುಗೆಯನ್ನು ಗುರುತಿಸಿ, ವನ್ಯಜೀವಿ ಅಧಿಕಾರಿಗಳು ಮತ್ತು ಹುಲಿ ಸಂರಕ್ಷಣೆ ಮತ್ತು ಸಂರಕ್ಷಿತ ಪ್ರದೇಶ ನಿರ್ವಹಣೆಯಲ್ಲಿ ಅನುಕರಣೀಯ ಕೆಲಸಕ್ಕಾಗಿ ಇತರ ಕೊಡುಗೆದಾರರಿಗೆ ಎನ್ ಟಿ ಸಿ ಎ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ವನ್ಯಜೀವಿ ಸಂರಕ್ಷಣೆಗೆ ಕೇಂದ್ರಬಿಂದುವಾಗಿರುವ ಮುಂಚೂಣಿ ಸಿಬ್ಬಂದಿಯ ಕೊಡುಗೆಯನ್ನು ಗುರುತಿಸಲು ಈ ಆಚರಣೆಗಳು ವೇದಿಕೆಯನ್ನು ಒದಗಿಸಿದವು.

ದೆಹಲಿ-ಎನ್‌ಸಿಆರ್‌ನಾದ್ಯಂತ ಶಾಲಾ ಮಕ್ಕಳಿಗಾಗಿ 'ಹುಲಿ ಉಳಿಸಿ' ಎಂಬ ವಿಷಯದ ಮೇಲೆ ಆಯೋಜಿಸಲಾದ ಚಿತ್ರಕಲೆ, ರೇಖಾಚಿತ್ರ, ಘೋಷಣೆ-ಬರವಣಿಗೆ ಮತ್ತು ಮುಖವಾಡ ತಯಾರಿಕೆ ಸ್ಪರ್ಧೆಗಳಿಂದ ಅತ್ಯುತ್ತಮವಾದವುಗಳ ಪ್ರದರ್ಶನವನ್ನು ಸಚಿವರು ವೀಕ್ಷಿಸಿದರು. ಅಲ್ಲದೆ, ಸಚಿವಾಲಯದ ಪರಿಸರ ಶಿಕ್ಷಣ ಕಾರ್ಯಕ್ರಮದ ಅಡಿಯಲ್ಲಿ, ಹುಲಿ ಮೀಸಲು ಪ್ರದೇಶಗಳ ಬಳಿ ಇರುವ ಶಾಲೆಗಳ ಮೇಲೆ ವಿಶೇಷ ಗಮನ ಹರಿಸಿ, ಪರಿಸರ ಕ್ಲಬ್‌ಗಳ ಮೂಲಕ ರಾಷ್ಟ್ರವ್ಯಾಪಿ ಹುಲಿ ಸಂರಕ್ಷಣಾ ಜಾಗೃತಿ ಅಭಿಯಾನವನ್ನು ಸಹ ಆಯೋಜಿಸಲಾಯಿತು.

ಆಚರಣೆಯ ಸಂದರ್ಭದಲ್ಲಿ ಐದು ಪ್ರಕಟಣೆಗಳನ್ನು ಬಿಡುಗಡೆ ಮಾಡಲಾಯಿತು, ಇವು ವಿಜ್ಞಾನ ಆಧಾರಿತ ಸಂರಕ್ಷಣೆ, ಜ್ಞಾನ ಹಂಚಿಕೆ ಮತ್ತು ಸಾರ್ವಜನಿಕ ಜಾಗೃತಿಗೆ ಎನ್ ಟಿ ಎ ಸಿ ಯ ನಿರಂತರ ಒತ್ತು ಪ್ರತಿಬಿಂಬಿಸುತ್ತದೆ. ಇವುಗಳಲ್ಲಿ ಎನ್ ಟಿಎಸಿಯ ಜನಸಂಪರ್ಕ ಜರ್ನಲ್ - ಸ್ಟ್ರೈಪ್ಸ್‌ನ ಜುಲೈ 2026 ಆವೃತ್ತಿ; 24 ಹುಲಿ ಮೀಸಲು ಪ್ರದೇಶಗಳ ಭದ್ರತಾ ಲೆಕ್ಕಪರಿಶೋಧನಾ ವರದಿ; ಭಾರತದಲ್ಲಿನ ಹುಲಿ ಆಯಾಮ ಸ್ಲಾತ್ ಕರಡಿಗಳಿಗೆ ಆವಾಸಸ್ಥಾನ ಸೂಕ್ತತೆಯ ಮೌಲ್ಯಮಾಪನದ ವರದಿ; ಐಬಿಸಿಎ ಮತ್ತು ಜಿಟಿಎಫ್ ಪ್ರಕಟಿಸಿದ ಟೈಗರ್ಸ್ ಆಫ್ ದಿ ವರ್ಲ್ಡ್; ಮತ್ತು ಶ್ರೀ ಚಂದ್ರ ಪ್ರಕಾಶ್ ಗೋಯಲ್ ಮತ್ತು ಶ್ರೀ ಸತ್ಯ ಪ್ರಕಾಶ್ ಯಾದವ್ ಅವರ ದಿ ರೆಹಮಾನ್ ಖೇರಾ ಟೈಗರ್ ಸೇರಿವೆ

2026ರ ಜಾಗತಿಕ ಹುಲಿ ದಿನ ಆಚರಣೆಯು ಭಾರತದ ಶ್ರೇಷ್ಠತೆ, ವೈಜ್ಞಾನಿಕ ನಿರ್ವಹಣೆ, ಸಾಮರ್ಥ್ಯ ವೃದ್ಧಿ, ಜವಾಬ್ದಾರಿಯುತ ಪರಿಸರ ಪ್ರವಾಸೋದ್ಯಮ, ಜ್ಞಾನ ಹಂಚಿಕೆ ಮತ್ತು ದೇಶದ ಶ್ರೀಮಂತ ನೈಸರ್ಗಿಕ ಪರಂಪರೆಯನ್ನು ರಕ್ಷಿಸುವಲ್ಲಿ ಹೆಚ್ಚಿನ ಸಾರ್ವಜನಿಕ ಭಾಗವಹಿಸುವಿಕೆಯನ್ನು ಗುರುತಿಸುವ ಮೂಲಕ ಹುಲಿ ಸಂರಕ್ಷಣೆಗೆ ಭಾರತದ ನಿರಂತರ ಬದ್ಧತೆಯನ್ನು ಪುನರುಚ್ಚರಿಸಿತು.

2026 ಜಾಗತಿಕ ಹುಲಿ ದಿನದ ಹಿನ್ನೆಲೆ:

ಒಂದು ಶತಮಾನದ ಹಿಂದೆ ಅಂದಾಜು 100,000 ಕಾಡು ಹುಲಿಗಳು ಏಷ್ಯಾದಾದ್ಯಂತ ಅಲೆದಾಡುತ್ತಿದ್ದವು. ಇಂದು, ಅವು ತಮ್ಮ ಐತಿಹಾಸಿಕ ವ್ಯಾಪ್ತಿಯ ಶೇ.8ಕ್ಕಿಂತ ಕಡಿಮೆ ಭಾಗವನ್ನು ಆಕ್ರಮಿಸಿಕೊಂಡಿವೆ ಮತ್ತು ಮೂರು ಉಪಜಾತಿಗಳು - ಬಾಲಿ, ಜಾವಾನ್ ಮತ್ತು ಕ್ಯಾಸ್ಪಿಯನ್ ಹುಲಿಗಳು - ಅಳಿದುಹೋಗಿವೆ. ಬೇಟೆಯಾಡುವುದು, ಅಕ್ರಮ ವನ್ಯಜೀವಿ ವ್ಯಾಪಾರ, ಆವಾಸಸ್ಥಾನ ನಷ್ಟ ಮತ್ತು ವಿಘಟನೆ, ಮಾನವ-ವನ್ಯಜೀವಿ ಸಂಘರ್ಷ ಮತ್ತು ಹವಾಮಾನ ಬದಲಾವಣೆಯಿಂದಾಗಿ ಹುಲಿಗಳ ಜನಸಂಖ್ಯೆಯಲ್ಲಿನ ಕುಸಿತ ಉಂಟಾಗಿದೆ.

ಸಾಮೂಹಿಕ ಕ್ರಮದ ತುರ್ತು ಅಗತ್ಯವನ್ನು ಗುರುತಿಸಿ, 13 ಹುಲಿ ಶ್ರೇಣಿಯ ದೇಶಗಳ ನಾಯಕರು 2010 ರಲ್ಲಿ ಸೇಂಟ್ ಪೀಟರ್ಸ್‌ಬರ್ಗ್ ಹುಲಿ ಶೃಂಗಸಭೆಯಲ್ಲಿ ಒಟ್ಟಾಗಿ ಸೇರಿ ಜಾಗತಿಕ ಹುಲಿ ಚೇತರಿಕೆ ಕಾರ್ಯಕ್ರಮ (GTRP) ಅನ್ನು ಆರಂಭಿಸಿದರು. 2022 ರ ವೇಳೆಗೆ ಜಾಗತಿಕ ಕಾಡು ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಮಹತ್ವಾಕಾಂಕ್ಷೆಯ TX2 ಗುರಿಯೊಂದಿಗೆ, ವಾರ್ಷಿಕವಾಗಿ ಜುಲೈ 29 ರಂದು ಆಚರಿಸಲಾಗುವ ಜಾಗತಿಕ ಹುಲಿ ದಿನವನ್ನು ಶೃಂಗಸಭೆ ಸ್ಥಾಪಿಸಿತು.

ಅಂದಿನಿಂದ, ಜಾಗತಿಕ ಹುಲಿ ದಿನವು ಹುಲಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು, ಅಂತಾರಾಷ್ಟ್ರೀಯ ಸಹಕಾರವನ್ನು ಬಲವರ್ಧನೆಗೊಳಿಸಲು, ಸಾರ್ವಜನಿಕ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ಮತ್ತು ಹುಲಿಗಳು ಮತ್ತು ಅವುಗಳ ಆವಾಸಸ್ಥಾನಗಳನ್ನು ರಕ್ಷಿಸುವಲ್ಲಿ ಪ್ರಗತಿಯನ್ನು ಪರಿಶೀಲಿಸಲು ಜಾಗತಿಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ.

 

*****


(रिलीज़ आईडी: 2291010) आगंतुक पटल : 17
इस विज्ञप्ति को इन भाषाओं में पढ़ें: English , Urdu , हिन्दी , Bengali , Assamese , Gujarati , Tamil , Telugu , Malayalam