ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಭಾರತದ ಟಿವಿ ವೀಕ್ಷಕರ ಸಂಖ್ಯೆ ಮಾಪನ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಸ್ವಾಯತ್ತತೆ ಮತ್ತು ಹೊಣೆಗಾರಿಕೆಯನ್ನು ಬಲಪಡಿಸಲು ಟೆಲಿವಿಷನ್ ರೇಟಿಂಗ್ ನೀತಿ, 2026
ಹೊಸ ನೀತಿಯು ನಿವ್ವಳ ಮೌಲ್ಯದ ಅಗತ್ಯತೆಯನ್ನು ಕಡಿಮೆ ಮಾಡುತ್ತದೆ, ಮೀಟರ್ ಅಳವಡಿಸಿದ ಮನೆಗಳ ಸಂಖ್ಯೆಯನ್ನು ವಿಸ್ತರಿಸುತ್ತದೆ ಮತ್ತು ಆವರ್ತಕ ಸ್ಥಾಪನೆ ಸಮೀಕ್ಷೆಗಳನ್ನು ಪರಿಚಯಿಸುತ್ತದೆ
ವಿಶ್ವಾಸಾರ್ಹ ಟಿವಿ ವೀಕ್ಷಕರ ಸಂಖ್ಯೆ ಮಾಪನವನ್ನು ಖಚಿತಪಡಿಸಿಕೊಳ್ಳಲು ಸ್ವತಂತ್ರ ಆಡಿಟ್‌ಗಳು, ಕ್ರಾಸ್-ಹೋಲ್ಡಿಂಗ್ ನಿರ್ಬಂಧಗಳು ಮತ್ತು ಶ್ರೇಣೀಕೃತ ದಂಡಗಳನ್ನು ಕಡ್ಡಾಯಗೊಳಿಸುವ ನೀತಿ
प्रविष्टि तिथि:
24 JUL 2026 3:50PM by PIB Bengaluru
ವಾರ್ತಾ ಮತ್ತು ಪ್ರಸಾರ ಸಚಿವಾಲಯವು (MIB) 'ಟಿವಿ ರೇಟಿಂಗ್ಸ್ ನೀತಿ 2026' ಅನ್ನು ಬಿಡುಗಡೆ ಮಾಡಿದ್ದು, ಇದು ಭಾರತದಲ್ಲಿ ಟೆಲಿವಿಷನ್ ರೇಟಿಂಗ್‌ಗಳನ್ನು ನಿಯಂತ್ರಿಸಲು ಸಮಗ್ರ ಮಾರ್ಗಸೂಚಿಗಳನ್ನು ಒದಗಿಸುತ್ತದೆ. ವೀಕ್ಷಕರ ಸಂಖ್ಯೆಯ ಮಾಪನದಲ್ಲಿ ಪಾರದರ್ಶಕತೆ, ಸ್ವಾಯತ್ತತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸುವ ಉದ್ದೇಶದಿಂದ, ಟಿವಿ ರೇಟಿಂಗ್ ಸೇವೆಗಳನ್ನು ಒದಗಿಸುವ ಸಂಸ್ಥೆಗಳ ನೋಂದಣಿ, ಕಾರ್ಯಾಚರಣೆ, ತನಿಖೆ (ಆಡಿಟ್) ಮತ್ತು ಮೇಲ್ವಿಚಾರಣೆಗಾಗಿ ಈ ನೀತಿಯು ಸ್ಪಷ್ಟ ಮಾನದಂಡಗಳನ್ನು ವ್ಯಾಖ್ಯಾನಿಸುತ್ತದೆ.
2014 ರ ಜನವರಿ 16 ರಂದು ಜಾರಿಗೆತರಲಾಗಿದ್ದ ಭಾರತದಲ್ಲಿನ ಟಿವಿ ರೇಟಿಂಗ್ ಏಜೆನ್ಸಿಗಳ ಮಾರ್ಗಸೂಚಿಗಳನ್ನು ಟಿವಿ ರೇಟಿಂಗ್ ನೀತಿ 2026, ಬದಲಾಯಿಸಿದೆ.
ಈ ನೀತಿಯಡಿ ಪರಿಚಯಿಸಲಾದ ಪ್ರಮುಖ ಸುಧಾರಣೆಗಳು:
i. ನಿವ್ವಳ ಮೌಲ್ಯದ (Net worth) ಮಾನದಂಡವನ್ನು ₹20 ಕೋಟಿಯಿಂದ ₹5 ಕೋಟಿಗೆ ಇಳಿಕೆ;
ii. ಕನೆಕ್ಟೆಡ್ ಟಿವಿಗಳು ಮತ್ತು ಒಟಿಟಿ (OTT) ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುವ ಟಿವಿ ಚಾನೆಲ್‌ಗಳು ಸೇರಿದಂತೆ ವಿವಿಧ ಪ್ಲಾಟ್‌ಫಾರ್ಮ್‌ಗಳಾದ್ಯಂತ ತಂತ್ರಜ್ಞಾನ-ತಟಸ್ಥ ವೀಕ್ಷಕರ ಮಾಪನ;
iii. ಮೀಟರ್ ಅಳವಡಿಸಿದ ಮನೆಗಳನ್ನು 50,000 ದಿಂದ 80,000 ಕ್ಕೆ ವಿಸ್ತರಿಸುವ ಮೂಲಕ ಮಾದರಿ ಸಂಖ್ಯೆಯ ಹೆಚ್ಚಳ;
iv. ಪ್ರತಿ ಮೂರು ವರ್ಷಗಳಿಗೊಮ್ಮೆ ಆವರ್ತಕ ಸ್ಥಾಪನೆ ಸಮೀಕ್ಷೆಗಳು;
v. ವೀಕ್ಷಕರ ಸಂಖ್ಯೆಯ ಅಂಕಿ-ಅಂಶಗಳ ಲೆಕ್ಕಾಚಾರದಲ್ಲಿ ಲ್ಯಾಂಡಿಂಗ್ ಪುಟದ ಹೊರತುಪಡಿಸುವಿಕೆ;
vi. ವಾರ್ಷಿಕ ಸ್ವತಂತ್ರ ಆಡಿಟ್‌ಗಳು; ಮತ್ತು
vii. ನಿಯಮ ಉಲ್ಲಂಘನೆಗೆ ಶ್ರೇಣೀಕೃತ ದಂಡದ ಚೌಕಟ್ಟು.
ರೇಟಿಂಗ್ ಏಜೆನ್ಸಿಗಳ ಕಾರ್ಯಾತ್ಮಕ ಮತ್ತು ಕಾರ್ಯಾಚರಣೆಯ ಸ್ವಾಯತ್ತತೆಯನ್ನು ಖಚಿತಪಡಿಸಿಕೊಳ್ಳಲು ಕ್ರಾಸ್-ಹೋಲ್ಡಿಂಗ್ ನಿರ್ಬಂಧಗಳು, ಏಜೆನ್ಸಿಯ ಮಂಡಳಿಯಲ್ಲಿ ಕನಿಷ್ಠ 33% ಸ್ವತಂತ್ರ ನಿರ್ದೇಶಕರ ಅಗತ್ಯತೆ, ಹಿತಾಸಕ್ತಿ ಸಂಘರ್ಷಗಳನ್ನು ಉಂಟುಮಾಡಬಹುದಾದ ಸಲಹಾ ಚಟುವಟಿಕೆಗಳ ನಿಷೇಧ, ಭದ್ರತಾ ಅನುಮತಿಯ ಅಗತ್ಯತೆಗಳು, ಆಡಿಟ್ ಮತ್ತು ಪಾರದರ್ಶಕತೆಯ ಬಾಧ್ಯತೆಗಳು ಸೇರಿದಂತೆ ನಿರ್ದಿಷ್ಟಪಡಿಸಿದ ರಕ್ಷಣೋಪಾಯಗಳನ್ನು ಸೇರಿಸಲಾಗಿದೆ.
ಈ ನೀತಿಯಡಿಯಲ್ಲಿ, ಭಾರತದಲ್ಲಿ ಟೆಲಿವಿಷನ್ ರೇಟಿಂಗ್ ವ್ಯವಹಾರದಲ್ಲಿರುವ ಯಾವುದೇ ಸಂಸ್ಥೆಯು ಕೆಲವು ಹೆಚ್ಚುವರಿ ಅಗತ್ಯತೆಗಳನ್ನು ಪೂರೈಸಬೇಕು ಮತ್ತು ಹೊಸ ನೀತಿಯಡಿಯಲ್ಲಿ ನೋಂದಾಯಿಸಿಕೊಳ್ಳಬೇಕು.
ಇಂದಿನವರೆಗೆ, ಹೊಸ ನೀತಿಯಡಿಯಲ್ಲಿ ಯಾವುದೇ ಸಂಸ್ಥೆಯು ನೋಂದಾಯಿಸಲ್ಪಟ್ಟಿಲ್ಲ. ಟೆಲಿವಿಷನ್ ರೇಟಿಂಗ್ಸ್ ನೀತಿ, 2026 ಟಿವಿ ರೇಟಿಂಗ್ ಸೇವೆಗಳನ್ನು ಒದಗಿಸಲು ನೋಂದಾಯಿಸಬಹುದಾದ ಏಜೆನ್ಸಿಗಳ ಸಂಖ್ಯೆಯ ಮೇಲೆ ಯಾವುದೇ ನಿರ್ಬಂಧವನ್ನು ಹೇರುವುದಿಲ್ಲ.
ರಾಜ್ಯಸಭೆಯಲ್ಲಿ ಡಾ. ಜಾನ್ ಬ್ರಿಟ್ಟಾಸ್ ಅವರು ಕೇಳಿದ ಬಗೆಹರಿಯದ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ, ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಈ ಮಾಹಿತಿಯನ್ನು ಒದಗಿಸಿದ್ದಾರೆ.
*****
(रिलीज़ आईडी: 2288921)
आगंतुक पटल : 19