ಕೃಷಿ ಸಚಿವಾಲಯ
ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದ ತೋತಾಪುರಿ ಮಾವು ಬೆಳೆಗಾರರಿಗೆ ಪರಿಹಾರ ನೀಡಲು ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರಿಂದ ಬೃಹತ್ ಉಪಕ್ರಮ
ರೈತರ ದೂರುಗಳ ಕುರಿತು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ರಚಿಸಿದ್ದ ಉನ್ನತ ಮಟ್ಟದ ಸಮಿತಿಯಿಂದ ವರದಿ ಸಲ್ಲಿಕೆ
ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಅವರ ಸೂಚನೆಯಂತೆ ತಳಮಟ್ಟದ ಪರಿಸ್ಥಿತಿಯನ್ನು ಪರಿಶೀಲಿಸಲು ಹೊಲಗಳು, ಮಂಡಿಗಳು ಮತ್ತು ಕಾರ್ಖಾನೆಗಳಿಗೆ ಭೇಟಿ ನೀಡಿದ ಸಮಿತಿ
ದೆಹಲಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ತಜ್ಞರ ಸಮಿತಿಯ ವರದಿಯ ಆಳವಾದ ಪರಾಮರ್ಶೆ ನಡೆಸಿದ ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್
ರೈತರು ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಮಾವಿನ ಹಣ್ಣು ಆಧಾರಿತ ಪಾನೀಯಗಳಲ್ಲಿ ಶೇ. 22-25 ರಷ್ಟು ನೈಜ ಪಲ್ಪ್ ಕಡ್ಡಾಯಗೊಳಿಸಲು ಶಿಫಾರಸು: ಶ್ರೀ ಶಿವರಾಜ್ ಸಿಂಗ್
ತೋತಾಪುರಿ ತೋಟಗಳಲ್ಲಿ ಹೊಸ ಮತ್ತು ಅತ್ಯುತ್ತಮ ತಳಿಗಳ ಮೂಲಕ ತೋಟಗಾರಿಕೆಯನ್ನು ಸುಧಾರಿಸಲು ಪ್ರಮುಖ ಯೋಜನೆ: ಶ್ರೀ ಶಿವರಾಜ್ ಸಿಂಗ್
ರೈತರಿಗಾಗಿ ವಲಯವಾರು ಖರೀದಿ, ಹಣ್ಣಿನ ಚೀಲಗಳು ಮತ್ತು ಎಫ್ ಪಿ ಒ ಆಧಾರಿತ ಸಂಸ್ಕರಣೆಗೆ ಒತ್ತು: ಶ್ರೀ ಶಿವರಾಜ್ ಸಿಂಗ್
ಕೇಂದ್ರ, ರಾಜ್ಯಗಳು, ಐಸಿಎಆರ್ ಮತ್ತು ಅಪೆಡಾ ಒಟ್ಟಾಗಿ ತೋತಾಪುರಿ ಮೌಲ್ಯ ಸರಪಳಿಗೆ ಹೊಸ ದಿಕ್ಸೂಚಿ ನೀಡಲಿವೆ: ಶ್ರೀ ಶಿವರಾಜ್ ಸಿಂಗ್ ಚೌಹಾಣ್
प्रविष्टि तिथि:
22 JUL 2026 6:26PM by PIB Bengaluru
ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ತೋತಾಪುರಿ ಮಾವು ಬೆಳೆಯುವ ರೈತರ ಆದಾಯ ಮತ್ತು ಮಂಡಿಗಳಲ್ಲಿ ಬೆಲೆ ಕುಸಿಯುತ್ತಿರುವ ಕುರಿತು ಸತತವಾಗಿ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮಿಂದ ರಚಿಸಲ್ಪಟ್ಟ ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳ ಕುರಿತು ಸುದೀರ್ಘ ಚರ್ಚೆಯ ನಂತರ ತೋತಾಪುರಿ ಮಾವಿನ ಬೇಸಾಯ, ಸಂಸ್ಕರಣೆ ಮತ್ತು ಮಾರುಕಟ್ಟೆ ವ್ಯವಸ್ಥೆಯಲ್ಲಿ ವ್ಯಾಪಕ ಸುಧಾರಣೆಗಳಿಗಾಗಿ ಸಮಗ್ರ ನಿರ್ದೇಶನಗಳನ್ನು ನೀಡಿದ್ದಾರೆ.
ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದ ತೋತಾಪುರಿ ಮಾವು ಬೆಳೆಯುವ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಲು ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ನವದೆಹಲಿಯ ಕೃಷಿ ಭವನದಲ್ಲಿ ಉನ್ನತ ಮಟ್ಟದ ಪರಾಮರ್ಶೆ ಸಭೆ ನಡೆಸಿದರು ಮತ್ತು ಉನ್ನತ ಮಟ್ಟದ ತಜ್ಞರ ಸಮಿತಿಯ ವರದಿಯ ಆಧಾರದ ಮೇಲೆ ತೋತಾಪುರಿ ಮಾವಿನ ಸಂಪೂರ್ಣ ಮೌಲ್ಯ ಸರಪಳಿಯನ್ನು ಬಲಪಡಿಸಲು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡರು. ಸಮಿತಿಯು ಹೊಲಗಳು, ಮಂಡಿಗಳು ಮತ್ತು ಪಲ್ಪ್ ತಯಾರಿಕಾ ಘಟಕಗಳಿಗೆ ಭೇಟಿ ನೀಡಿ ತಳಮಟ್ಟದ ಪರಿಸ್ಥಿತಿಯನ್ನು ಪ್ರಸ್ತುತಪಡಿಸಿತು, ಇದರ ಆಧಾರದ ಮೇಲೆ ಕೇಂದ್ರ ಸಚಿವರಾದ ಶ್ರೀ ಚೌಹಾಣ್ ಅವರು ವರದಿ ಸಿದ್ಧಪಡಿಸಿದ ನಂತರ ಕಡತವನ್ನು ಸುಮ್ಮನೆ ಮುಚ್ಚುವುದಿಲ್ಲ, ಬದಲಿಗೆ ನೀತಿ, ತಂತ್ರಜ್ಞಾನ ಮತ್ತು ಮಾರುಕಟ್ಟೆ ಎಂಬ ಮೂರೂ ಹಂತಗಳಲ್ಲಿ ನಿಖರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದ ತೋತಾಪುರಿ ಮಾವು ಬೆಳೆಯುವ ರೈತರ ಸಮಸ್ಯೆಗಳನ್ನು ಪರಿಶೀಲಿಸಲು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಇದರಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಮಹಾನಿರ್ದೇಶಕರಾದ ಡಾ. ಎಂ.ಎಲ್. ಜಾಟ್ ಸೇರಿದಂತೆ ಎಲ್ಲಾ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಸಮಿತಿಯ ಅಧ್ಯಕ್ಷರು ಮತ್ತು ಐಸಿಎಆರ್ – ಸಿ ಐ ಎಸ್ ಎಚ್ (ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಫಾರ್ ಸಬ್ಟ್ರಾಪಿಕಲ್ ಹಾರ್ಟಿಕಲ್ಚರ್, ಲಕ್ನೋ) ನಿರ್ದೇಶಕರಾದ ಡಾ. ಟಿ ದಾಮೋದರನ್ ಅವರು ವರದಿಯನ್ನು ಸಲ್ಲಿಸಿದರು. ತೋತಾಪುರಿ ಮಾವಿನ ಬೇಸಾಯ ಮತ್ತು ಬೆಲೆಗಳ ಕುಸಿತಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಲು ಮತ್ತು ಪರಿಹಾರಗಳನ್ನು ಸೂಚಿಸಲು ಭಾರತೀಯ ಕೃಷಿ ಸಂಶೋಧನಾ ಮಂಡಳಿ ಅಡಿಯಲ್ಲಿ ರಚಿಸಲಾದ ತಜ್ಞರ ಸಮಿತಿಯ ವರದಿಯ ಮೇಲೆ ಈ ಸಭೆಯು ಗಮನ ಕೇಂದ್ರೀಕರಿಸಿತ್ತು. ಸಮಿತಿಯನ್ನು ಜುಲೈ 2, 2026 ರ ಆದೇಶದಂತೆ ರಚಿಸಲಾಗಿತ್ತು, ಇದರಲ್ಲಿ ಐಸಿಎಆರ್ – ಸಿ ಐ ಎಸ್ ಎಚ್ (ಲಕ್ನೋ), ಐಸಿಎಆರ್ – ಐ ಐ ಎಚ್ ಆರ್ (ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಬೆಂಗಳೂರು), ಆಂಧ್ರಪ್ರದೇಶದ ಡಾ. ವೈಎಸ್‌ಆರ್ ತೋಟಗಾರಿಕಾ ವಿಶ್ವವಿದ್ಯಾಲಯದ ತಜ್ಞರು ಮತ್ತು ರಾಜ್ಯ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸೇರಿದ್ದರು.
ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ನಿರ್ದೇಶನದಂತೆ, ಸಮಿತಿಯು ಜುಲೈ 8 ರಿಂದ 10 ರವರೆಗೆ ಆಂಧ್ರಪ್ರದೇಶದ ತಿರುಪತಿ ಮತ್ತು ಚಿತ್ತೂರು ಜಿಲ್ಲೆಗಳಲ್ಲಿ ಕ್ಷೇತ್ರ ಭೇಟಿಗಳನ್ನು ನಡೆಸಿತು, ಅಲ್ಲಿ ಅದು ರೈತರು, ರೈತ ಉತ್ಪಾದಕ ಸಂಸ್ಥೆಗಳು (ಎಫ್ ಪಿ ಒ), ಮಂಡಿ ಪ್ರತಿನಿಧಿಗಳು, ಪಲ್ಪ್ ತಯಾರಿಕಾ ಘಟಕಗಳು, ರಫ್ತುದಾರರು ಮತ್ತು ಜಿಲ್ಲಾಡಳಿತವನ್ನು ಭೇಟಿಯಾಗಿ ತೋತಾಪುರಿ ಮಾವಿನ ಮೌಲ್ಯ ಸರಪಳಿಯ ಎಲ್ಲಾ ಹಂತಗಳನ್ನು ಪರಿಶೀಲಿಸಿತು.
ಸಭೆಯಲ್ಲಿ ತನ್ನ ವರದಿಯನ್ನು ಪ್ರಸ್ತುತಪಡಿಸಿದ ಸಮಿತಿಯು, ಈ ವರ್ಷ ತೋತಾಪುರಿ ಮಾವಿನ ಬೆಲೆ ಕುಸಿತಕ್ಕೆ ಪ್ರಮುಖ ಕಾರಣಗಳಲ್ಲಿ ಸಂಸ್ಕರಣಾ ಸಾಮರ್ಥ್ಯ ಮತ್ತು ಖರೀದಿ ವ್ಯವಸ್ಥೆಯಲ್ಲಿ ಸಕಾಲಿಕ ಸಮನ್ವಯದ ಕೊರತೆ, ದೇಶೀಯ ಮಾರುಕಟ್ಟೆಯಲ್ಲಿ ಮಾವಿನ ಹಣ್ಣು ಆಧಾರಿತ ಪಾನೀಯಗಳಲ್ಲಿ ನೈಜ ಪಲ್ಪ್ ನ ಪ್ರಮಾಣ ಕಡಿಮೆಯಿರುವುದು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳು ಸೇರಿವೆ ಎಂದು ತಿಳಿಸಿದೆ. ಮಾವಿನ ಋತು ಆರಂಭದಲ್ಲಿ ಅನೇಕ ಕಡೆಗಳಲ್ಲಿ ಕಾರ್ಖಾನೆಗಳಿಗೆ ಸಮಯಕ್ಕೆ ಸರಿಯಾಗಿ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ, ಅದೇ ಸಮಯದಲ್ಲಿ ರೈತರ ಬೆಳೆ ಒಂದೇ ಬಾರಿಗೆ ಮಂಡಿಗಳು ಮತ್ತು ಸಂಸ್ಕರಣಾ ಘಟಕಗಳನ್ನು ತಲುಪುತ್ತದೆ, ಇದರಿಂದಾಗಿ ದಿಢೀರ್ ಬೆಲೆ ಕುಸಿತ ಉಂಟಾಗಿ ರೈತರಿಗೆ ನಷ್ಟವಾಗುತ್ತಿದೆ ಎಂದು ಸಮಿತಿಯು ತಿಳಿಸಿದೆ.
ಮಾವಿನ ಹಣ್ಣು ಆಧಾರಿತ ಪಾನೀಯಗಳ ವಿಷಯದಲ್ಲಿ, ಇಂತಹ ಎಲ್ಲಾ ಉತ್ಪನ್ನಗಳು ಶೇಕಡಾ 22 ರಿಂದ 25 ರಷ್ಟು ನೈಜ ನೈಸರ್ಗಿಕ ಮಾವಿನ ಪಲ್ಪ್ ಅನ್ನು ಹೊಂದುವುದನ್ನು ಕಡ್ಡಾಯಗೊಳಿಸಬೇಕು ಎಂದು ಸಮಿತಿಯು ಸೂಚಿಸಿದೆ. ಸಮಿತಿಯ ಅಭಿಪ್ರಾಯದಲ್ಲಿ, ನಿಗದಿತ ಮಿತಿಗಿಂತ ಹೆಚ್ಚಿನ ಪಲ್ಪ್ ಹೊಂದಿರುವ ಪಾನೀಯಗಳನ್ನು ಮಾತ್ರ ಸರಕು ಮತ್ತು ಸೇವಾ ತೆರಿಗೆಯ ಶೇಕಡಾ 5 ರ ರಿಯಾಯಿತಿ ವರ್ಗದಲ್ಲಿ ಇರಿಸಿದರೆ ಮತ್ತು ಕಡಿಮೆ ಪಲ್ಪ್ ಹೊಂದಿರುವ ಉತ್ಪನ್ನಗಳಿಗೆ ಹೆಚ್ಚಿನ ಜಿ ಎಸ್ ಟಿ ದರಗಳನ್ನು ಅನ್ವಯಿಸಿದರೆ, ಒಂದೆಡೆ ತೋತಾಪುರಿ ಮಾವಿನ ಪಲ್ಪ್ ಬಳಕೆ ಹೆಚ್ಚಾಗುತ್ತದೆ, ಮತ್ತು ಇನ್ನೊಂದೆಡೆ ಗ್ರಾಹಕರಿಗೆ ಹೆಚ್ಚು ಪೌಷ್ಟಿಕ ಮತ್ತು ನೈಜ ಹಣ್ಣಿನ ಆಧಾರಿತ ಪಾನೀಯಗಳು ಸಿಗುತ್ತವೆ.
ಈ ಪ್ರಸ್ತಾಪವನ್ನು ಪರಿಗಣಿಸಿದ ಕೇಂದ್ರ ಸಚಿವರಾದ ಶ್ರೀ ಚೌಹಾಣ್ ಅವರು ಅಗತ್ಯ ಮಾನದಂಡಗಳು ಮತ್ತು ತೆರಿಗೆ ರಚನೆಯ ಕುರಿತು ಒಮ್ಮತವನ್ನು ತಲುಪಲು ಸಂಬಂಧಪಟ್ಟ ಸಚಿವಾಲಯಗಳಾದ - ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (ಎಫ್ ಎಸ್ ಎಸ್ ಎ ಐ), ಜಿ ಎಸ್ ಟಿ ಮಂಡಳಿ, ಹಣಕಾಸು ಸಚಿವಾಲಯ, ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯ, ಕೃಷಿ ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯಗಳ ನಡುವೆ ಅಂತರ-ಸಚಿವಾಲಯ ಸಭೆಯನ್ನು ಕರೆಯಲು ನಿರ್ದೇಶಿಸಿದರು.
ತೋತಾಪುರಿ ಮಾವಿನ ಮೌಲ್ಯ ಸರಪಳಿಯನ್ನು ಸ್ಥಿರಗೊಳಿಸಲು ಮತ್ತು ವ್ಯವಸ್ಥಿತಗೊಳಿಸಲು, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದಂತಹ ಪ್ರಮುಖ ಉತ್ಪಾದಕ ರಾಜ್ಯಗಳಿಗೆ ಅತ್ಯುನ್ನತ ಸಾಂಸ್ಥಿಕ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುವ ಕೇಂದ್ರ ಸಮನ್ವಯ ಮತ್ತು ಬೆಲೆ ಸ್ಥಿರೀಕರಣ ಸಮಿತಿಯನ್ನು ರಚಿಸಲು ಸಮಿತಿಯು ಶಿಫಾರಸು ಮಾಡಿದೆ. ಪ್ರತಿ ಮಾವಿನ ಋತುವಿಗೆ ಮೊದಲು, ಈ ಸಮಿತಿಯು ಬೆಳೆಯ ಅಂದಾಜುಗಳು, ಸಂಸ್ಕರಣೆ ಮತ್ತು ರಫ್ತು ಬೇಡಿಕೆ, ಕೃಷಿ ವೆಚ್ಚಗಳು ಮತ್ತು ಮಾರುಕಟ್ಟೆ ಪರಿಸ್ಥಿತಿಗಳನ್ನು ಪರಿಶೀಲಿಸುತ್ತದೆ ಮತ್ತು ರೈತರಿಗೆ ತೋಟದಲ್ಲಿಯೇ ಲಾಭದಾಯಕ ಖರೀದಿ ಬೆಲೆಗಳನ್ನು ಮತ್ತು ಮಾವಿನ ಪಲ್ಪ್ ಗೆ ಉಲ್ಲೇಖಿತ ಬೆಲೆಗಳನ್ನು ನಿರ್ಧರಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ರೈತರು ಮತ್ತು ಉದ್ಯಮ ಇಬ್ಬರಿಗೂ ಮುಂಚಿತವಾಗಿಯೇ ಸ್ಪಷ್ಟ ಸುಳಿವುಗಳು ಲಭ್ಯವಾಗುತ್ತವೆ.

ಆಂಧ್ರಪ್ರದೇಶದ ಚಿತ್ತೂರು, ತಿರುಪತಿ, ಅನ್ನಮಯ್ಯ ಮತ್ತು ಕಡಪ ಜಿಲ್ಲೆಗಳಲ್ಲಿ ತೋತಾಪುರಿ ಮಾವು ಬೇಸಾಯದ ಬಹುದೊಡ್ಡ ಪ್ರದೇಶವು ಹಳೆಯ ತೋಟಗಳನ್ನು ಒಳಗೊಂಡಿದ್ದು, ಅವುಗಳ ಉತ್ಪಾದಕತೆ ಮತ್ತು ಗುಣಮಟ್ಟ ಎರಡೂ ಕುಸಿದಿವೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಈ ಪರಿಸ್ಥಿತಿಯನ್ನು ಎದುರಿಸಲು, ಸಮಿತಿಯು ಉನ್ನತ ತಂತ್ರಜ್ಞಾನದ ಮೂಲಕ ತೋಟಗಳ ಕಾಯಕಲ್ಪಕ್ಕೆ ಶಿಫಾರಸು ಮಾಡಿದೆ, ಇದರ ಅಡಿಯಲ್ಲಿ ನೀಲಂ, ಅಲ್ಫೋನ್ಸೋ, ಹಿಮಾಯತ್, ಬಂಗಾನಪಲ್ಲಿ ಮತ್ತು ಇತರ ಹೆಚ್ಚಿನ ಮೌಲ್ಯದ ತಳಿಗಳ ಸಸಿಗಳ ಕಸಿ ಕಡ್ಡಿಗಳನ್ನು ಪ್ರಸ್ತುತ ಇರುವ ಮರಗಳಿಗೆ ಕಸಿ ಮಾಡಬಹುದು, ಮತ್ತು ಎರಡು ಮೂರು ವರ್ಷಗಳಲ್ಲಿ ಹೊಸ, ಹೆಚ್ಚು ಮೌಲ್ಯಯುತವಾದ ಬೆಳೆಯನ್ನು ಪಡೆಯಬಹುದು. ಇದರೊಂದಿಗೆ, ಕ್ಲಸ್ಟರ್ ಮಟ್ಟದಲ್ಲಿ ಉತ್ತಮ ಕೃಷಿ ಪದ್ಧತಿಗಳನ್ನು ಜಾರಿಗೆ ತರುವುದು ಮತ್ತು ರೈತರಿಗೆ ತರಬೇತಿ, ಪ್ರಾತ್ಯಕ್ಷಿಕಾ ತೋಟಗಳು ಮತ್ತು ತಾಂತ್ರಿಕ ನೆರವು ನೀಡುವುದಕ್ಕೂ ಒತ್ತು ನೀಡಲಾಯಿತು.
ಹಣ್ಣಿನ ಗುಣಮಟ್ಟವನ್ನು ಸುಧಾರಿಸಲು ಮತ್ತು ಪ್ರೀಮಿಯಂ ದೇಶೀಯ ಮಾರುಕಟ್ಟೆಗಳಿಗೆ ಪ್ರವೇಶವನ್ನು ಹೆಚ್ಚಿಸಲು, ಚಿತ್ತೂರು, ತಿರುಪತಿ, ಅನ್ನಮಯ್ಯ ಮತ್ತು ಕಡಪ ಜಿಲ್ಲೆಗಳ ಸುಮಾರು 23,333 ಹೆಕ್ಟೇರ್ ಪ್ರದೇಶದಲ್ಲಿ ಆರಂಭಿಕ ಹಂತದಲ್ಲಿ ಹಣ್ಣಿನ ಚೀಲಗಳನ್ನು (ಫ್ರೂಟ್ ಕವರ್) ಒದಗಿಸುವಂತೆ ಸಮಿತಿಯು ಸೂಚಿಸಿದೆ, ಇದರಿಂದಾಗಿ ಹಣ್ಣಿನ ಬಾಹ್ಯ ರಚನೆಯು ಉತ್ತಮವಾಗಿರುತ್ತದೆ, ಕೀಟಗಳ ಹಾನಿ ಕಡಿಮೆಯಾಗುತ್ತದೆ ಮತ್ತು ತೋತಾಪುರಿ ಮಾವು ಹೆಚ್ಚಿನ ಬೆಲೆಯ ಮಂಡಿಗಳನ್ನು ತಲುಪಬಹುದು. ಇದರೊಂದಿಗೆ, ವಲಯವಾರು ಖರೀದಿ ಮತ್ತು ಆರಂಭಿಕ ಸಂಸ್ಕರಣಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಶಿಫಾರಸು ಮಾಡಲಾಗಿದೆ, ಇದರ ಅಡಿಯಲ್ಲಿ ತೋಟಗಾರಿಕಾ ಇಲಾಖೆ, ಸಂಸ್ಕರಣಾ ಉದ್ಯಮ ಮತ್ತು ರೈತ ಉತ್ಪಾದಕ ಸಂಸ್ಥೆಗಳು ಜಂಟಿಯಾಗಿ ವಾರ್ಷಿಕ ಖರೀದಿ ಯೋಜನೆಯನ್ನು ಸಿದ್ಧಪಡಿಸಲಿವೆ.
ಆಂಧ್ರಪ್ರದೇಶ ಸರ್ಕಾರಕ್ಕೆ, ಎಲ್ಲಾ ನೋಂದಾಯಿತ ಸಂಸ್ಕರಣಾ ಘಟಕಗಳು ಪ್ರತಿ ವರ್ಷ ಮೇ 15 ರಿಂದ ಖರೀದಿ ಮತ್ತು ಪಲ್ಪ್ ಉತ್ಪಾದನೆಯನ್ನು ಪ್ರಾರಂಭಿಸುವುದನ್ನು ಕಡ್ಡಾಯಗೊಳಿಸುವ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು (ಎಸ್ ಒ ಪಿ) ಹೊರಡಿಸಬೇಕೆಂದು ಶಿಫಾರಸು ಮಾಡಲಾಗಿದೆ.
ಸಭೆಯಲ್ಲಿ, ರೈತರ ನೇತೃತ್ವದ ಸಂಸ್ಕರಣಾ ಘಟಕಗಳು ಮತ್ತು ರೈತ ಉತ್ಪಾದಕ ಸಂಸ್ಥೆ ಆಧಾರಿತ ಮೌಲ್ಯವರ್ಧನೆ ಮಾದರಿಗಳ ಕುರಿತು ಚರ್ಚೆ ನಡೆಯಿತು. ಐಸಿಎಆರ್-ಸಿ ಐ ಎಸ್ ಎಚ್ ಮತ್ತು ಐ ಐ ಎಚ್ ಆರ್ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳನ್ನು ಬಳಸಿಕೊಂಡು, ಮಾವಿನ ಓಟೆಯಿಂದ 'ಮ್ಯಾಂಗೋ ಬಟರ್' ಮತ್ತು ಇತರ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಸಾಧ್ಯತೆಗಳ ಮೇಲೆ ಒತ್ತು ನೀಡಲಾಯಿತು, ಇದರಿಂದಾಗಿ ತೋತಾಪುರಿ ಮಾವಿನ ಓಟೆಗಳು ಮತ್ತು ಉಪ-ಉತ್ಪನ್ನಗಳು ರೈತರಿಗೆ ಹೆಚ್ಚುವರಿ ಆದಾಯದ ಮೂಲವಾಗಬಹುದು.
ಸಭೆಯಲ್ಲಿ, ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ (ಅಪೆಡಾ) ಪ್ರತಿನಿಧಿಗಳು ತೋತಾಪುರಿ ಮತ್ತು ಇತರ ಭಾರತೀಯ ಮಾವಿನ ಹಣ್ಣುಗಳಿಗೆ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ವಿಸ್ತರಿಸುವ ಪ್ರಯತ್ನಗಳ ಬಗ್ಗೆ ಮಾಹಿತಿ ನೀಡಿದರು, ವಿಶೇಷವಾಗಿ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಹೊಸ ತಾಣಗಳಿಗೆ ಪ್ರವೇಶವನ್ನು ಹೆಚ್ಚಿಸಲು ಸಮುದ್ರ ಮಾರ್ಗಗಳ ಮೂಲಕ ರಫ್ತು ಮಾಡುವ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಶಿವರಾಜ್ ಚೌಹಾಣ್, ಅಪೆಡಾ, ಐಸಿಎಆರ್ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ತೋತಾಪುರಿ ಆಧಾರಿತ ಸಂಸ್ಕರಿಸಿದ ಉತ್ಪನ್ನಗಳು ಮತ್ತು ತಾಜಾ ಮಾವಿನ ಹಣ್ಣುಗಳಿಗಾಗಿ ಸಮಗ್ರ ರಫ್ತು ಮತ್ತು ಮಾರುಕಟ್ಟೆ ತಂತ್ರವನ್ನು ಸಿದ್ಧಪಡಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಕೇಂದ್ರ ಸರ್ಕಾರವು ಇಡೀ ತೋತಾಪುರಿ ಮಾವಿನ ಮೌಲ್ಯ ಸರಪಳಿಯನ್ನು ರೈತ-ಕೇಂದ್ರೀಕೃತವಾಗಿ ಮಾಡಲು ಬಯಸುತ್ತದೆ ಎಂದು ಸ್ಪಷ್ಟಪಡಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಐಸಿಎಆರ್, ಅಪೆಡಾ, ರೈತ ಉತ್ಪಾದಕ ಸಂಸ್ಥೆಗಳು ಮತ್ತು ಸಂಸ್ಕರಣಾ ಉದ್ಯಮಗಳು ಜವಾಬ್ದಾರಿಯನ್ನು ಹಂಚಿಕೊಳ್ಳಲಿವೆ, ಮತ್ತು ಜಿ ಎಸ್ ಟಿ, ಆಹಾರ ಸುರಕ್ಷತೆ ಮಾನದಂಡಗಳು ಮತ್ತು ರಾಜ್ಯ ನೀತಿಗಳನ್ನು ಸಮನ್ವಯಗೊಳಿಸುವ ಮೂಲಕ ಸ್ಪಷ್ಟವಾದ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗುವುದು ಎಂದು ಅವರು ಹೇಳಿದರು. ಸೂಚಿಸಲಾದ ಕ್ರಮಗಳನ್ನು ಸಮಗ್ರವಾಗಿ ಜಾರಿಗೆ ತಂದರೆ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದ ತೋತಾಪುರಿ ಮಾವು ಬೆಳೆಯುವ ರೈತರ ಆದಾಯದಲ್ಲಿ ಶಾಶ್ವತ ಹೆಚ್ಚಳವಾಗಲಿದೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಮಾವು ಇನ್ನೂ ಬಲವಾದ ಗುರುತನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
******
(रिलीज़ आईडी: 2288028)
आगंतुक पटल : 34