ಸಹಕಾರ ಸಚಿವಾಲಯ
azadi ka amrit mahotsav

ಕೋಲ್ಕತ್ತಾದ ಅಮುಲ್ ಬೆಂಗಾಲ್ ಡೈರಿ ಯೋಜನೆಯಡಿಯಲ್ಲಿ ವಿಶ್ವದ ಅತಿದೊಡ್ಡ ಮೊಸರು ಉತ್ಪಾದನಾ ಘಟಕಕ್ಕೆ ಭೂಮಿ ಪೂಜೆ ನೆರವೇರಿಸಿದ ಕೇಂದ್ರ ಗೃಹ  ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಸಮೃದ್ಧ, ಸುರಕ್ಷಿತ, ವಿದ್ಯಾವಂತ ಮತ್ತು ಸಾಂಸ್ಕೃತಿಕವಾಗಿ ಸಮೃದ್ಧವಾದ “ಸೋನಾರ್ ಬಾಂಗ್ಲಾ’’ ವನ್ನಾಗಿ ಪರಿವರ್ತಿಸುವ ಸಂಕಲ್ಪ ಸಾಕಾರಕ್ಕೆ ಕ್ರಮ

ಬಂಗಾಳದಲ್ಲಿಂದು ನಡೆದ ವಿಶ್ವದ ಅತಿದೊಡ್ಡ ಮೊಸರು ಉತ್ಪಾದನಾ ಘಟಕಕ್ಕೆ ಭೂಮಿ ಪೂಜೆ; ಈ ಘಟಕವು 10 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸಲಿದ್ದು, 1.20 ಲಕ್ಷ ಹಾಲು ಉತ್ಪಾದಿಸುವ ಜಾನುವಾರು ಸಾಕಣೆದಾರರಿಗೆ ಪ್ರಯೋಜನ

ಅಮುಲ್‌ಗೆ 30 ಎಕರೆ ಭೂಮಿ ಉಚಿತವಾಗಿ ಒದಗಿಸುವ ಮೂಲಕ, ಶ್ರೀ ಸುವೇಂದು ಅಧಿಕಾರಿ ಈ ಪ್ರಮುಖ ಘಟಕ ಕಾರ್ಯಾರಂಭಕ್ಕೆ ಅನುವು ಮಾಡಿ ಮತ್ತು ಜಾನುವಾರು ಸಾಕಾಣೆದಾರರು ತಮ್ಮ ಹಾಲಿಗೆ ಸಾಧ್ಯವಾದಷ್ಟು ಹೆಚ್ಚಿನ ಬೆಲೆ  ಪಡೆಯಲು ಸಹಾಯ

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮತ್ತು ಗುಜರಾತ್‌ನಿಂದ ಬಂಗಾಳದವರೆಗೆ, ಬಂಗಾಳದಲ್ಲಿ ತಯಾರಿಸಿದ ಮಿಶ್ತಿ ದೋಯಿ ಈಗ ದೇಶಾದ್ಯಂತ ಮನೆಗಳಲ್ಲಿ ಆನಂದ

ಸಹಕಾರದ ಬಲ ಎಷ್ಟಿದೆಯೆಂದರೆ, ಅಮುಲ್ ಗ್ರಾಹಕರು ಖರ್ಚು ಮಾಡುವ ಪ್ರತಿ ರೂಪಾಯಿಗೆ, 87 ಪೈಸೆ ನೇರ ಜಾನುವಾರು ಸಾಕಣೆದಾರರ ಖಾತೆಗಳಿಗೆ ವರ್ಗಾವಣೆ

ಭಾರತ ಸರ್ಕಾರದಿಂದ ಬಂಗಾಳದಲ್ಲಿ ಪ್ರಾಣಿ ತಳಿ ಸುಧಾರಣೆಗಾಗಿ ಲಿಂಗ-ವಿಂಗಡಿತ ವೀರ್ಯ ಸೌಲಭ್ಯದೊಂದಿಗೆ ಒಂದು ಉಪಕ್ರಮ ಆರಂಭ

ಸಹಕಾರ ಸಚಿವಾಲಯದ 70 ಕ್ಕೂ ಅಧಿಕ ರೈತ-ಕಲ್ಯಾಣ ಯೋಜನೆಗಳ ಪ್ರಯೋಜನಗಳು ಆರು ತಿಂಗಳೊಳಗೆ ಬಂಗಾಳದ ರೈತರಿಗೆ ಲಭ್ಯ

“ಸಾರಥಿ” ಪರಿಕಲ್ಪನೆಯಡಿಯಲ್ಲಿ, ಬಂಗಾಳದ ಟ್ಯಾಕ್ಸಿಗಳನ್ನು ಭಾರತ್ ಟ್ಯಾಕ್ಸಿಯೊಂದಿಗೆ ಸಂಪರ್ಕಿಸಲು ಒಂದು ಒಪ್ಪಂದಕ್ಕೆ ಸಹಿ ಹಾಕಿ; ಪ್ರತಿಯೊಬ್ಬ ಸಾರಥಿ ಎರಡೂ ವಾಹನಗಳ ಮಾಲೀಕರಾಗಲು ಅನುವು ಮಾಡಿಕೊಡುತ್ತದೆ

ಬಂಗಾಳವು ಹೇರಳವಾದ ನೀರು ಮತ್ತು ಫಲವತ್ತಾದ ಭೂಮಿ ಹೊಂದಿದೆ - ಮುಂದಿನ 15 ವರ್ಷಗಳಲ್ಲಿ, ಪ್ರತಿ ಜಾನುವಾರು ಸಾಕಾಣೆ ಮನೆಯು ಕನಿಷ್ಠ ಎರಡು ತಳಿಯ ಪ್ರಾಣಿಗಳನ್ನು ಹೊಂದಿದ್ದು, ಅವು ಶೇಕಡ 25 ರಷ್ಟು ಅಧಿಕ ಹಾಲು ನೀಡುತ್ತವೆ

प्रविष्टि तिथि: 19 JUL 2026 9:02PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ "ಸಹಕಾರದಿಂದ ಸಮೃದ್ಧಿ"ಯ ದೂರದೃಷ್ಟಿ ಮತ್ತು "ಶ್ವೇತ ಕ್ರಾಂತಿ 2.0" ಗುರಿ  ಮುಂದಕ್ಕೆ ಕೊಂಡೊಯ್ಯುವ ಸಲುವಾಗಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಕೋಲ್ಕತ್ತಾದಲ್ಲಿಂದು ನ್ಯೂ ಟೌನ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಸಮಾರಂಭದಲ್ಲಿ ಅಮುಲ್ ಬೆಂಗಾಲ್ ಡೈರಿ ಯೋಜನೆಯಡಿಯಲ್ಲಿ ವಿಶ್ವದ ಅತಿದೊಡ್ಡ ಮೊಸರು ಉತ್ಪಾದನಾ ಘಟಕಕ್ಕೆ ಭೂಮಿ ಪೂಜೆ ನೆರವೇರಿಸಿದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಶ್ರೀ ಸುವೇಂದು ಅಧಿಕಾರಿ, ಗುಜರಾತ್ ವಿಧಾನಸಭೆಯ ಸ್ಪೀಕರ್ ಶ್ರೀ ಶಂಕರ್‌ಭಾಯಿ ಚೌಧರಿ, ಪಶ್ಚಿಮ ಬಂಗಾಳದ ಸಹಕಾರ ಸಚಿವ ಶ್ರೀ ಸ್ವಪನ್ ದಾಸ್‌ಗುಪ್ತ, ರಾಜ್ಯ ಹಣಕಾಸು ಸಚಿವ ಶ್ರೀ ತಪಸ್ ರಾಯ್, ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಡಾ. ಕಲ್ಯಾಣ್ ಚಕ್ರವರ್ತಿ, ಆಹಾರ ಸಂಸ್ಕರಣೆ ಮತ್ತು ತೋಟಗಾರಿಕೆ ಸಚಿವ ಶ್ರೀ ಶರದ್ವತ್ ಮುಖರ್ಜಿ, ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಶ್ರೀ ಮನೋಜ್ ಕುಮಾರ್ ಅಗರವಾಲ್, ಅಮುಲ್ ಡೈರಿಯ ಅಧ್ಯಕ್ಷ ಶ್ರೀ ಅಶೋಕ್ ಚೌಧರಿ, ಸಹಕಾರಿ ಕ್ಷೇತ್ರದ ಹಲವು ಗಣ್ಯರು ಮತ್ತು ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ, ಬಂಗಾಳ ವಿಧಾನಸಭಾ ಚುನಾವಣೆಯಲ್ಲಿನ ಗೆಲುವಿನ ನಂತರ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಪರವಾಗಿ ಬಂಗಾಳದ ಜನರಿಗೆ ಮಿಷ್ಟಿ ದೋಯಿಯೊಂದಿಗೆ ಸಿಹಿ ನೀಡಲು ತಾವು ಬಂದಿರುವುದಾಗಿ ಹೇಳಿದರು. ಬಂಗಾಳದ ಜನರು ತಂದ ಬದಲಾವಣೆಯು ಸ್ವಾತಂತ್ರ್ಯದ ನಂತರ ರಾಜ್ಯದಲ್ಲಿ ನಡೆದ ಎಲ್ಲಾ ವಿಧಾನಸಭಾ ಚುನಾವಣೆಗಳಿಗಿಂತ ಭಿನ್ನವಾಗಿದೆ ಮತ್ತು ಐತಿಹಾಸಿಕವಾಗಿದೆ ಎಂದು ಹೇಳಿದರು.

ಪಶ್ಚಿಮ ಬಂಗಾಳವು  ತಮ್ಮ ರಾಷ್ಟ್ರೀಯ ಜೀವನದ ಬಹುತೇಕ ಎಲ್ಲಾ ಕ್ಷೇತ್ರಗಳಿಗೆ ಸ್ಫೂರ್ತಿ ನೀಡಿದ ರಾಜ್ಯವಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಹಲವು ದಶಕಗಳಿಂದ ಪಶ್ಚಿಮ ಬಂಗಾಳವು ಶಿಕ್ಷಣದಲ್ಲಿ ದೇಶದ ಉಳಿದ ಭಾಗಗಳಿಗಿಂತ ಮುಂಚೂಣಿಯಲ್ಲಿತ್ತು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬಂಗಾಳವು ಒಬ್ಬರ ನಂತರ ಒಬ್ಬ ಮಹಾನ್ ಸ್ವಾತಂತ್ರ್ಯ ಹೋರಾಟಗಾರರನ್ನು ದೇಶಕ್ಕೆ ನೀಡಿದೆ. ನಂಬಿಕೆ, ಭಕ್ತಿ ಮತ್ತು ಸಂಕೀರ್ತನೆಯ ಕ್ಷೇತ್ರಗಳಲ್ಲಿ, ಚೈತನ್ಯ ಮಹಾಪ್ರಭು, ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ ಮತ್ತು ಮಹರ್ಷಿ ಅರಬಿಂದೋ ಅಸಾಧಾರಣ ಪರಂಪರೆಯನ್ನು ಸ್ಥಾಪಿಸಿದರು. ದೇಶಭಕ್ತಿ ಮತ್ತು ಸಮರ್ಪಣೆಯ ವಿಷಯಕ್ಕೆ ಬಂದಾಗ ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಖುದಿರಾಮ್ ಬೋಸ್‌ರಂತಹ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಮೂಲಕ ಬಂಗಾಳವು ಎಂದಿಗೂ ಸರ್ವೋಚ್ಚ ತ್ಯಾಗ ಮಾಡಲು ಹಿಂಜರಿಯಲಿಲ್ಲ.

ಗುರುದೇವ್ ರವೀಂದ್ರನಾಥ ಟ್ಯಾಗೋರ್ ಜಾಗತಿಕ ಮನ್ನಣೆಯನ್ನು ಗಳಿಸಿದ್ದು, ಆಚಾರ್ಯ ಜಗದೀಶ್ ಚಂದ್ರ ಬೋಸ್ ಪ್ರಮುಖ ವೈಜ್ಞಾನಿಕ ಪ್ರಗತಿ ಸಾಧಿಸಿದ್ದು, ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರು "ಆನಂದಮಠ"ದಲ್ಲಿ "ವಂದೇ ಮಾತರಂ" ಅನ್ನು ರಚಿಸುವ ಮೂಲಕ ಸಾಂಸ್ಕೃತಿಕ ರಾಷ್ಟ್ರೀಯತೆಗೆ ಹೊಸ ದಿಕ್ಕನ್ನು ನೀಡಿದ್ದು ಈ ಬಂಗಾಳದಲ್ಲಿಯೇ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ದುರದೃಷ್ಟವಶಾತ್ ಬಂಗಾಳವು ದೀರ್ಘಕಾಲದವರೆಗೆ ವಿದೇಶಿ ಸಿದ್ಧಾಂತದಿಂದ ಪ್ರಭಾವಿತವಾಗಿತ್ತು ಮತ್ತು ಅದರಿಂದ ಹೊರಬಂದ ನಂತರ, ಸೈದ್ಧಾಂತಿಕ ನಿರ್ವಾತ, ಭ್ರಷ್ಟಾಚಾರ ಮತ್ತು ಅಪರಾಧದಲ್ಲಿ ಸಿಲುಕಿಕೊಂಡಿತು ಎಂದು ಹೇಳಿದರು. ಅದರ ಪರಿಣಾಮವಾಗಿ, ಗುರುದೇವ್ ರವೀಂದ್ರನಾಥ ಟ್ಯಾಗೋರ್ ಅವರು ಕಲ್ಪಿಸಿಕೊಂಡ "ಸೋನಾರ್ ಬಾಂಗ್ಲಾ" ಕನಸು ಕ್ರಮೇಣ ಮರೆಯಾಗಿತ್ತು ಎಂದರು.

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಮನವಿ ಮತ್ತು ದಶಕದ ಹೋರಾಟದ ನಂತರ ಮತ್ತು 2016 ರಿಂದ 2026 ರವರೆಗಿನ ಪಯಣದ ನಂತರ, "ಸೋನಾರ್ ಬಾಂಗ್ಲಾ" ಚಳವಳಿಯನ್ನು ಶ್ರೀ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಮತ್ತೊಮ್ಮೆ ಪುನರುಜ್ಜೀವನಗೊಳಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಜನರಿಗೆ ನೀಡಿದ ಪ್ರತಿಯೊಂದು ಭರವಸೆಯನ್ನು ಮತ್ತು ಅವರ ಮುಂದೆ ಇರಿಸಲಾದ "ಸೋನಾರ್ ಬಾಂಗ್ಲಾ" ಗಾಗಿ ಸಂಕಲ್ಪವನ್ನು ಸಾಕಾರಗೊಳಿಸಲು ಪರಿವರ್ತನೆ ಕೆಲಸ ಆರಂಭವಾಗಿದೆ ಎಂದು ಅವರು ಪಶ್ಚಿಮ ಬಂಗಾಳದ ಜನರಿಗೆ ಭರವಸೆ ನೀಡಿದರು. ಈ ಸಂಕಲ್ಪವು ಸಮೃದ್ಧ, ವಿದ್ಯಾವಂತ, ಸುರಕ್ಷಿತ ಮತ್ತು ಸಾಂಸ್ಕೃತಿಕವಾಗಿ ಸಮೃದ್ಧವಾದ ಪಶ್ಚಿಮ ಬಂಗಾಳವನ್ನು ನಿರ್ಮಿಸಲು ದಾರಿ ಮಾಡಿಕೊಡುತ್ತದೆ ಎಂದರು.

ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಇಂದು ಪಶ್ಚಿಮ ಬಂಗಾಳದ ರೈತರು ಮತ್ತು ಜಾನುವಾರು ಸಾಕಣೆದಾರರಿಗೆ ಅತ್ಯಂತ ಮಹತ್ವದ ದಿನವಾಗಿದೆ ಎಂದು ಹೇಳಿದರು. ವಿಶ್ವದ ಅತಿದೊಡ್ಡ ಮೊಸರು ಉತ್ಪಾದನಾ ಘಟಕಕ್ಕಾಗಿ ಅಮುಲ್ ಭೂಮಿ ಪೂಜೆಯನ್ನು ನಡೆಸಿದೆ. ಯೋಜನೆಯ ಮೊದಲ ಹಂತದಲ್ಲಿ, ಪ್ರತಿದಿನ 10 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸಲಾಗುವುದು, ಇದರಿಂದ ಸುಮಾರು 1.20 ಲಕ್ಷ ಸಣ್ಣ ಹಾಲು ಉತ್ಪಾದಕರು ಮತ್ತು ಜಾನುವಾರು ಸಾಕಣೆದಾರರಿಗೆ ಪ್ರಯೋಜನವಾಗುತ್ತದೆ.

ಅಮುಲ್‌ಗೆ ತಲಾ 15 ಎಕರೆಗಳ ಎರಡು ಪ್ಲಾಟ್‌ಗಳನ್ನು ಒದಗಿಸಿದರೆ, ಪೂರ್ವ ಭಾರತಕ್ಕೆ ಹಾಲು ಉತ್ಪಾದನೆ, ಸಂಸ್ಕರಣೆ ಮತ್ತು ಮಾರುಕಟ್ಟೆಗಾಗಿ ಸಂಪೂರ್ಣ ವ್ಯವಸ್ಥೆಯನ್ನು ಪಶ್ಚಿಮ ಬಂಗಾಳದಿಂದ ನಿರ್ವಹಿಸಬಹುದು ಎಂದು ರಾಜ್ಯ ಮುಖ್ಯಮಂತ್ರಿಯನ್ನು ತಾವು ಈ ಹಿಂದೆ ವಿನಂತಿಸಿದ್ದೆವು ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಯೋಜನೆಯು ಗುಜರಾತ್‌ಗೆ ಅಲ್ಲ, ಪಶ್ಚಿಮ ಬಂಗಾಳದ ಜಾನುವಾರು ಸಾಕಣೆದಾರರು ಮತ್ತು ಹಾಲು ಉತ್ಪಾದಕರ ಕಲ್ಯಾಣಕ್ಕಾಗಿ ಇದ್ದರೂ, ಗುಜರಾತ್‌ಗೆ ಪಶ್ಚಿಮ ಬಂಗಾಳವನ್ನು ಪ್ರವೇಶಿಸಲು ಅವಕಾಶ ನೀಡಲಾಗುವುದಿಲ್ಲ ಎಂಬ ಕಾರಣದಿಂದ ಈ ಪ್ರಸ್ತಾವನೆಯನ್ನು ಈ ಹಿಂದೆ ತಿರಸ್ಕರಿಸಲಾಗಿತ್ತು ಎಂದು ಅವರು ಹೇಳಿದರು.

ರಾಜ್ಯದಲ್ಲಿನ ಬದಲಾವಣೆ ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಕೇಂದ್ರ ಗೃಹ  ಮತ್ತು ಸಹಕಾರ ಸಚಿವರು ಹೇಳಿದರು. ಅವರ ಕೋರಿಕೆಯ ಮೇರೆಗೆ ಮುಖ್ಯಮಂತ್ರಿ ಶ್ರೀ ಸುವೇಂದು ಅಧಿಕಾರಿ ಅಮುಲ್ ಫೆಡರೇಷನ್‌ಗೆ 30 ಎಕರೆ ಭೂಮಿಯನ್ನು ಉಚಿತವಾಗಿ ನೀಡಲು ನಿರ್ಧರಿಸಿದರು. ಈ ನಿರ್ಧಾರವು ಪಶ್ಚಿಮ ಬಂಗಾಳಕ್ಕೆ ಸುಮಾರು 100 ಪ್ರಮುಖ ಹೂಡಿಕೆಗಳು ಬರಲು ದಾರಿ ಮಾಡಿಕೊಟ್ಟಿದೆ. ಇದು ಸುಮಾರು 2.5 ಲಕ್ಷ ಜಾನುವಾರು ಸಾಕಣೆದಾರರು ಪೂರೈಸುವ ಹಾಲಿಗೆ ಸಾಧ್ಯವಾದಷ್ಟು ಹೆಚ್ಚಿನ ಬೆಲೆಯನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮತ್ತು ಗುಜರಾತ್‌ನಿಂದ ಬಂಗಾಳದವರೆಗೆ, ಅಮುಲ್ ಬಂಗಾಳ ಡೈರಿ ಯೋಜನೆಯಲ್ಲಿ ಉತ್ಪಾದಿಸುವ ಮಿಶ್ತಿ ದೋಯಿಯನ್ನು ದೇಶಾದ್ಯಂತ ಮನೆಗಳಲ್ಲಿ ಸೇವಿಸಲಾಗುತ್ತದೆ ಮತ್ತು ದೇಶಾದ್ಯಂತ ಜನರು ಪಶ್ಚಿಮ ಬಂಗಾಳವನ್ನು ಆಶೀರ್ವದಿಸುತ್ತಾರೆ ಎಂದು ಶ್ರೀ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು. ಸಹಕಾರಿ ಚಳವಳಿಯು ಜನರನ್ನು ಸಂಘಟಿಸಲು, ಆರ್ಥಿಕವಾಗಿ ಅವರನ್ನು ಸಬಲೀಕರಣಗೊಳಿಸಲು ಮತ್ತು ಅವರನ್ನು ಸಮೃದ್ಧಿಯೊಂದಿಗೆ ಸಂಪರ್ಕಿಸಲು ಅಪಾರ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರು

ಅಮುಲ್ ಅನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು, ಇಷ್ಟು ದೊಡ್ಡ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯು ಇಂದು ವಿಶ್ವದ ನಂಬರ್ 1 ಸಹಕಾರಿ ಸಂಸ್ಥೆಯಾಗಿದೆ ಎಂದು ಹೇಳಿದರು. ಸುಮಾರು 36 ಲಕ್ಷ ಮಹಿಳೆಯರು ಅಮುಲ್‌ನೊಂದಿಗೆ ಸಂಬಂಧ ಹೊಂದಿದ್ದಾರೆ. ಸಹಕಾರದ ಶಕ್ತಿ ಮತ್ತು ಅದರ ಆರ್ಥಿಕ ಸಾಮರ್ಥ್ಯಕ್ಕೆ ಇದು ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಅವರು ಹೇಳಿದರು.

18,600 ಕ್ಕೂ ಅಧಿಕ ಗ್ರಾಮೀಣ ಡೈರಿ ಸಹಕಾರಿ ಸಂಘಗಳು ಪ್ರಸ್ತುತ ಅಮುಲ್‌ನೊಂದಿಗೆ ಸಂಬಂಧ ಹೊಂದಿವೆ ಮತ್ತು ಅಮುಲ್ ಉತ್ಪನ್ನಗಳು ದೇಶದ ಬಹುತೇಕ ಪ್ರತಿಯೊಂದು ರಾಜ್ಯವನ್ನು ತಲುಪುತ್ತವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಅಮುಲ್ ಉತ್ಪನ್ನಗಳನ್ನು ಬಳಸುವ ಪ್ರತಿಯೊಬ್ಬ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಗ್ರಾಹಕರು ಅಮುಲ್ ಉತ್ಪನ್ನಕ್ಕೆ 100 ರೂ. ಖರ್ಚು ಮಾಡಿದಾಗ, ಸುಮಾರು 87 ರೂ. ನೇರವಾಗಿ ರೈತ ಮತ್ತು ಜಾನುವಾರು ಸಾಕಣೆದಾರರಿಗೆ ಹೋಗುತ್ತದೆ ಎಂದು ಹೇಳಿದರು

ಈ ಹಣವು ಕೈಗಾರಿಕೋದ್ಯಮಿ ಅಥವಾ ದೊಡ್ಡ ವ್ಯವಹಾರ ಸಂಸ್ಥೆಗೆ ಹೋಗುವುದಿಲ್ಲ ಎಂದು ಅವರು ಹೇಳಿದರು. ಅಮುಲ್‌ನ ಒಟ್ಟು ವಹಿವಾಟಿನ ಸುಮಾರು ಶೇ. 87 ರಷ್ಟು ನೇರವಾಗಿ ಮತ್ತು ಪಾರದರ್ಶಕವಾಗಿ ಜಾನುವಾರು ಸಾಕಣೆದಾರರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಇದು ನಿಜವಾದ ಸಹಕಾರಿ ಮಾದರಿಯಾಗಿದ್ದು, ಇದರಡಿಯಲ್ಲಿ ಉತ್ಪನ್ನವನ್ನು ಉತ್ಪಾದಿಸುವ ವ್ಯಕ್ತಿಯು ವ್ಯವಹಾರ ಲಾಭದ ಅತಿದೊಡ್ಡ ಪಾಲನ್ನು ಪಡೆಯುತ್ತಾನೆ.

ಅಮುಲ್ ವಿಸ್ತರಣೆ ಮತ್ತು ಸಹಕಾರಿ ಡೈರಿ ವಲಯಕ್ಕಾಗಿ ಹೆಚ್ಚುವರಿ ಭೂಮಿ  ಒದಗಿಸುವಂತೆ ಮುಖ್ಯಮಂತ್ರಿ ಶ್ರೀ ಸುವೇಂದು ಅಧಿಕಾರಿ ಅವರನ್ನು ಕೋರಿರುವುದಾಗಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಭಾರತ ಸರ್ಕಾರವು ಪಶ್ಚಿಮ ಬಂಗಾಳದಲ್ಲಿ ಪ್ರಾಣಿ ತಳಿ ಸುಧಾರಣೆಗೆ ಪ್ರಮುಖ ಕೇಂದ್ರವನ್ನು ಸ್ಥಾಪಿಸಲಿದೆ. ಇದು ಹಾಲು ಉತ್ಪಾದಕರು ಹೆಚ್ಚಿನ ಹಾಲು ಇಳುವರಿಯೊಂದಿಗೆ ಪ್ರಾಣಿಗಳ ಸುಧಾರಿತ ತಳಿಗಳನ್ನು ಹೊಂದಲು ಅನುವು ಮಾಡಿಕೊಡುತ್ತದೆ. ರಾಜ್ಯದಲ್ಲಿ ಲಿಂಗ-ವಿಂಗಡಿತ ವೀರ್ಯ ಸೌಲಭ್ಯವನ್ನು ಸಹ ಸ್ಥಾಪಿಸಲಾಗುವುದು, ಇದು ಹಾಲು ಪ್ರಾಣಿಗಳ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಡೈರಿ ಉತ್ಪಾದಕತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದರು.

ಸಹಕಾರಿ ಚಳವಳಿಯ ಮೂಲಕ ಬಂಗಾಳದ ರೈತರಿಗೆ ಸಮೃದ್ಧಿ ತರುವ ಉದ್ದೇಶದಿಂದ, ಮುಖ್ಯಮಂತ್ರಿ ಶ್ರೀ ಸುವೇಂದು ಅಧಿಕಾರಿ ಅವರಿಗೆ ಪತ್ರ ಬರೆದಿರುವುದಾಗಿ ಶ್ರೀ ಅಮಿತ್ ಶಾ ಹೇಳಿದರು. ಮುಖ್ಯಮಂತ್ರಿ ಕಾರ್ಯನಿರ್ವಹಣೆಯ ವೇಗವನ್ನು ನೋಡಿ ತಮಗೆ ಆಶ್ಚರ್ಯವಾಗಿದೆ ಎಂದು ಅವರು ಹೇಳಿದರು. ಸಂಜೆ ಅವರ ಇಮೇಲ್ ಬಂದಿತು ಮತ್ತು ಅದೇ ದಿನ ರಾತ್ರಿ 9 ಗಂಟೆಯ ಹೊತ್ತಿಗೆ, ಪಶ್ಚಿಮ ಬಂಗಾಳ ಸರ್ಕಾರವು ಸಂಪರ್ಕ ಅಧಿಕಾರಿ ನೇಮಿಸಿತು ಮತ್ತು ಅಧಿಕಾರಿ ಸಹಕಾರ ಸಚಿವಾಲಯದೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ರೈತರ ಕಲ್ಯಾಣಕ್ಕೆ ಸಂಬಂಧಿಸಿದ 70ಕ್ಕೂ ಅಧಿಕ ಯೋಜನೆಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಹಕಾರ ಸಚಿವಾಲಯಕ್ಕೆ ವಹಿಸಿದ್ದಾರೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಮುಖ್ಯಮಂತ್ರಿ ಶ್ರೀ ಸುವೇಂದು ಅಧಿಕಾರಿ ರಚಿಸಿದ ಪರಿಣಾಮಕಾರಿ ಸಮನ್ವಯ ಕಾರ್ಯವಿಧಾನದಿಂದಾಗಿ ಈ ಎಲ್ಲಾ ಯೋಜನೆಗಳ ಪ್ರಯೋಜನಗಳು ಮುಂದಿನ ಆರು ತಿಂಗಳೊಳಗೆ ಪಶ್ಚಿಮ ಬಂಗಾಳದ ರೈತರನ್ನು ತಲುಪಲಿವೆ ಎಂದರು.

ರಾಜ್ಯದಲ್ಲಿರುವ ಸಹಕಾರ ಸಂಘಗಳ ನೋಂದಣಿ ಕಚೇರಿಯನ್ನು ಇಂದು ಸಂಪೂರ್ಣವಾಗಿ ಗಣಕೀಕರಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಕೆಲಸವು ಬಹಳ ದಿನಗಳಿಂದ ಬಾಕಿ ಉಳಿದಿತ್ತು, ಆದರೆ ಹೊಸ ಸರ್ಕಾರವು ಕೇವಲ ಒಂಬತ್ತು ವಾರಗಳಲ್ಲಿ ಅದನ್ನು ಪೂರ್ಣಗೊಳಿಸಿತು. ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳು ಈಗ ತಮ್ಮ ಮೊಬೈಲ್ ಫೋನ್‌ಗಳ ಮೂಲಕ ನೋಂದಣಿ ಕಚೇರಿಯ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಇದು ಸಹಕಾರಿ ಕ್ಷೇತ್ರದ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ, ದಕ್ಷತೆ ಮತ್ತು ವೇಗವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಈ ಕಾರ್ಯಕ್ರಮದ ಸಂದರ್ಭದಲ್ಲಿ, ಒಟ್ಟು 1,400 ಮೆಟ್ರಿಕ್ ಟನ್ ಸಾಮರ್ಥ್ಯದ 10 ಸಹಕಾರಿ ಗೋದಾಮುಗಳು ಮತ್ತು ಗೋದಾಮುಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು ಎಂದು ಕೇಂದ್ರ ಗೃಹ  ಮತ್ತು ಸಹಕಾರ ಸಚಿವರು ಹೇಳಿದರು. ಈ ಗೋದಾಮುಗಳು ರೈತರು ಮತ್ತು ಸಹಕಾರಿ ಸಂಸ್ಥೆಗಳಿಗೆ ತಮ್ಮ ಉತ್ಪನ್ನಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಸೌಲಭ್ಯಗಳನ್ನು ಒದಗಿಸುತ್ತವೆ ಮತ್ತು ಕಡಿಮೆ ಬೆಲೆಯಲ್ಲಿ ಮಾರಾಟವನ್ನು ತಗ್ಗಿಸಲು ಸಹಾಯ ಮಾಡುತ್ತವೆ ಎಂದರು.

ಪಶ್ಚಿಮ ಬಂಗಾಳದಲ್ಲಿ ಇಂದು ಮತ್ತೊಂದು ಮಹತ್ವದ ಹೊಸ ಅಧ್ಯಾಯತವನ್ನು ಆರಂಭ ಮಾಡಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಪ್ರಸ್ತುತ, ಟ್ಯಾಕ್ಸಿ ಚಾಲಕರನ್ನು ಹಲವು ಖಾಸಗಿ ಅಗ್ರಿಗೇಟರ್ ಕಂಪನಿಗಳು ಶೋಷಿಸುತ್ತಿವೆ. “ಭಾರತ್ ಟ್ಯಾಕ್ಸಿ”ಮೂಲಕ, ಕೇಂದ್ರ ಸರ್ಕಾರವು “ಸಾರಥಿ”ಪರಿಕಲ್ಪನೆ ಪರಿಚಯಿಸಿದೆ. ಈ ವ್ಯವಸ್ಥೆಯಡಿಯಲ್ಲಿ ವಾಹನ ನಿರ್ವಾಹಕರು ಕೇವಲ ಚಾಲಕರಾಗಿ ಉಳಿಯುವುದಿಲ್ಲ, ಆದರೆ ವಾಹನ ಮತ್ತು ಕಂಪನಿ ಎರಡರ ಮಾಲೀಕರು ಮತ್ತು ಷೇರುದಾರರಾಗಿರುತ್ತಾರೆ. ಪಶ್ಚಿಮ ಬಂಗಾಳದ ಟ್ಯಾಕ್ಸಿಗಳನ್ನು “ಭಾರತ್ ಟ್ಯಾಕ್ಸಿ’’ ಗಳೊಂದಿಗೆ ಸಂಯೋಜಿಸಲು ಇಂದು ತಿಳವಳಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ ಎಂದು ಹೇಳಿದರು. ಪರಿಣಾಮವಾಗಿ, ಪಶ್ಚಿಮ ಬಂಗಾಳದಲ್ಲಿ ಯಾವುದೇ ಸಾರಥಿ ಕೇವಲ ಚಾಲಕನಾಗಿ ಉಳಿಯುವುದಿಲ್ಲ; ಪ್ರತಿಯೊಬ್ಬರೂ ಕಂಪನಿಯ ಷೇರುದಾರರಾಗುತ್ತಾರೆ ಮತ್ತು ಕಂಪನಿಯು ಗಳಿಸಿದ ಲಾಭದ ಪಾಲನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಈ ವ್ಯವಸ್ಥೆಯು ಟ್ಯಾಕ್ಸಿ ಚಾಲಕರಿಗೆ ಘನತೆ, ಮಾಲೀಕತ್ವ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ ಎಂದರು.

ಪಶ್ಚಿಮ ಬಂಗಾಳವು ಕೃಷಿ ಮತ್ತು ಪಶುಸಂಗೋಪನೆಯಲ್ಲಿ ಅಪಾರ ಸಾಮರ್ಥ್ಯವನ್ನು ಹೊಂದಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಗುಜರಾತ್‌ನ ಹಲವು ಭಾಗಗಳಲ್ಲಿ, ನೀರಾವರಿ ಮತ್ತು ಕುಡಿಯುವ ಉದ್ದೇಶಗಳಿಗಾಗಿ ಒಮ್ಮೆ 1,200 ಅಡಿ ಆಳದಿಂದ ನೀರನ್ನು ತೆಗೆದುಕೊಳ್ಳಬೇಕಾಗಿತ್ತು, ಆದರೆ ಪಶ್ಚಿಮ ಬಂಗಾಳವು ಗಂಗಾ ಮಾತೆಯ ವಿಶೇಷ ಆಶೀರ್ವಾದವನ್ನು ಅನುಭವಿಸುತ್ತದೆ. ಇಲ್ಲಿನ ಹೆಚ್ಚಿನ ಸ್ಥಳಗಳಲ್ಲಿ, ಕೇವಲ 100 ರಿಂದ 200 ಅಡಿ ಆಳದಲ್ಲಿ ಸಾಕಷ್ಟು ನೀರು ಲಭ್ಯವಿದೆ. ರಾಜ್ಯವು ಫಲವತ್ತಾದ ಭೂಮಿಯನ್ನು ಹೊಂದಿದೆ ಮತ್ತು ಪಶುಸಂಗೋಪನೆಯ ವಿಸ್ತರಣೆಗೆ ಅಪರಿಮಿತ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು.

ದುರದೃಷ್ಟವೆಂದರೆ ಈ ಸಾಧ್ಯತೆಗಳನ್ನು ಈ ಹಿಂದೆ ಸಂಪೂರ್ಣವಾಗಿ ಬಳಸಿಕೊಳ್ಳಲಾಗಲಿಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಶ್ರೀ ಸುವೇಂದು ಅಧಿಕಾರಿ ಪರವಾಗಿ, ಪಶ್ಚಿಮ ಬಂಗಾಳದ ಎಲ್ಲಾ ಜಾನುವಾರು ಸಾಕಣೆದಾರರಿಗೆ ಮುಂದಿನ 15 ವರ್ಷಗಳಲ್ಲಿ ರಾಜ್ಯದ ಪ್ರತಿಯೊಂದು ಕುಟುಂಬವು ಕನಿಷ್ಠ ಎರಡು ಹಾಲು ನೀಡುವ ಪ್ರಾಣಿಗಳನ್ನು ಹೊಂದಿರುವಂತೆ ಮತ್ತು ಈ ಪ್ರಾಣಿಗಳು ಉತ್ಪಾದಿಸುವ ಹಾಲನ್ನು ಡೈರಿ ಸಹಕಾರಿ ಸಂಸ್ಥೆಗಳ ಮೂಲಕ ಸಂಗ್ರಹಿಸಲಾಗುವುದು ಎಂದು ಭರವಸೆ ನೀಡಿದರು. ಜಾನುವಾರು ಸಾಕಣೆದಾರರಿಗೆ ಪ್ರಸ್ತುತಕ್ಕಿಂತ ಕನಿಷ್ಠಶೇ 25 ಕ್ಕಿಂತ ಅಧಿಕ ಹಾಲು ಉತ್ಪಾದಿಸುವ ಸಾಮರ್ಥ್ಯವಿರುವ ಸುಧಾರಿತ ತಳಿಯ ಪ್ರಾಣಿಗಳನ್ನು ಒದಗಿಸಲಾಗುವುದು ಎಂದು ಹೇಳಿದರು. ಇದು ಪಶುಸಂಗೋಪನೆಯನ್ನು ಗ್ರಾಮೀಣ ಕುಟುಂಬಗಳಿಗೆ ನಿಗದಿತ ಮತ್ತು ವಿಶ್ವಾಸಾರ್ಹ ಆದಾಯದ ಮೂಲವನ್ನಾಗಿ ಮಾಡುತ್ತದೆ ಮತ್ತು ಪಶ್ಚಿಮ ಬಂಗಾಳದಲ್ಲಿ ಹೊಸ ಶ್ವೇತ ಕ್ರಾಂತಿಗೆ ದಾರಿ ಮಾಡಿಕೊಡುತ್ತದೆ ಎಂದರು.

ಕಳೆದ ಮೂರು ದಿನಗಳಿಂದ ತಾವು ಪಶ್ಚಿಮ ಬಂಗಾಳದಲ್ಲಿರುವುದಾಗಿ ಹೇಳಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು, ಈ ಅವಧಿಯಲ್ಲಿ ಬಂಗಾಳವನ್ನು ಒಳನುಸುಳುವಿಕೆ ಮುಕ್ತಗೊಳಿಸಲು, ಹೊಸ ಒಳನುಸುಳುವಿಕೆಯನ್ನು ತಡೆಯಲು, ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸಲು ಮತ್ತು ತಾಯಂದಿರು ಮತ್ತು ಸಹೋದರಿಯರ ಸುರಕ್ಷತೆ ಖಾತ್ರಿಪಡಿಸಿಕೊಳ್ಳಲು ಹಲವು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮುಖ್ಯಮಂತ್ರಿ ಶ್ರೀ ಸುವೇಂದು ಅಧಿಕಾರಿ ಕಾರ್ಯಶೈಲಿ ಮತ್ತು ಕಾರ್ಯನಿರ್ವಹಣೆಯ ವೇಗವನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ ಮತ್ತು ಪಶ್ಚಿಮ ಬಂಗಾಳವು ತನ್ನ ಶಕ್ತಿಯನ್ನು ಮರಳಿ ಪಡೆಯಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸರ್ಕಾರವು ರಾಜ್ಯದ ಜನರ ಎಲ್ಲಾ ನಿರೀಕ್ಷೆಗಳನ್ನು ಈಡೇರಿಸುತ್ತದೆ ಮತ್ತು ಗುರುದೇವ್ ರವೀಂದ್ರನಾಥ ಟ್ಯಾಗೋರ್ ಅವರ "ಸೋನಾರ್ ಬಾಂಗ್ಲಾ" ಕನಸನ್ನು ನನಸಾಗಿಸುವ ಕಾರ್ಯವನ್ನು ಖಂಡಿತವಾಗಿಯೂ ಸಾಧಿಸುತ್ತದೆ ಎಂದು ಅವರು ರಾಜ್ಯದ ಜನರಿಗೆ ಭರವಸೆ ನೀಡಿದರು.

ಅಮುಲ್ ಪಶ್ಚಿಮ ಬಂಗಾಳದ ಹೌರಾ ಫುಡ್ ಪಾರ್ಕ್‌ನಲ್ಲಿ ಸುಮಾರು 700 ಕೋಟಿ ರೂ. ಹೂಡಿಕೆಯೊಂದಿಗೆ ಅಮುಲ್ ಬೆಂಗಾಲ್ ಡೈರಿ ಯೋಜನೆಯನ್ನು ಸ್ಥಾಪಿಸುತ್ತಿದೆ. ಯೋಜನೆಯು ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದ ನಂತರ ದಿನಕ್ಕೆ ಸುಮಾರು 30 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿರಲಿದೆ. ಈ ಘಟಕವು ಪ್ರತಿದಿನ ಸುಮಾರು 1,000 ಮೆಟ್ರಿಕ್ ಟನ್ ಅಥವಾ 10 ಲಕ್ಷ ಕಿಲೋಗ್ರಾಂಗಳಷ್ಟು ಮೊಸರು ಮತ್ತು ಇತರ ಕೃಷಿ ಮಾಡಿದ ಡೈರಿ ಉತ್ಪನ್ನಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಸಾಮರ್ಥ್ಯದೊಂದಿಗೆ, ಇದು ವಿಶ್ವದ ಅತಿದೊಡ್ಡ ಮೊಸರು ಉತ್ಪಾದನಾ ಘಟಕವಾಗಲಿದೆ. ಈ ಯೋಜನೆಯ ಉದ್ದೇಶಿತ ಯೋಜನೆಯು ದೈನಂದಿನ ಉತ್ಪಾದನಾ ಸಾಮರ್ಥ್ಯವು 10 ಲಕ್ಷ ಲೀಟರ್ ಪ್ಯಾಕ್ ಮಾಡಿದ ಹಾಲು, ಎರಡು ಲಕ್ಷ ಲೀಟರ್ ಯುಎಚ್‌ಟಿ ಹಾಲು, ಒಂದು ಲಕ್ಷ ಲೀಟರ್ ಐಸ್ ಕ್ರೀಮ್, 20 ಮೆಟ್ರಿಕ್ ಟನ್ ಪನೀರ್, 10 ಮೆಟ್ರಿಕ್ ಟನ್ ತುಪ್ಪ ಮತ್ತು 10 ಮೆಟ್ರಿಕ್ ಟನ್ ಸಿಹಿತಿಂಡಿಗಳನ್ನು ಒಳಗೊಂಡಿದೆ. ಇದರ ಜೊತೆಗೆ, ಈ ಘಟಕವು ಪ್ರತಿದಿನ ಸುಮಾರು 2.5 ಲಕ್ಷ ಪ್ಯಾಕ್ ಸುವಾಸನೆಯ ಹಾಲನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಅಮುಲ್ ಬೆಂಗಾಲ್ ಡೈರಿ ಯೋಜನೆಯು ಪಶ್ಚಿಮ ಬಂಗಾಳದ ಡೈರಿ ವಲಯದಲ್ಲಿ ಆಧುನಿಕ ಸಂಸ್ಕರಣೆ, ಮೌಲ್ಯವರ್ಧನೆ, ಕೋಲ್ಡ್-ಚೈನ್ ಮತ್ತು ಮಾರುಕಟ್ಟೆ ಸೌಲಭ್ಯಗಳನ್ನು ವಿಸ್ತರಿಸುತ್ತದೆ. ಇದು ಹಾಲು ಉತ್ಪಾದಿಸುವ ರೈತರು ಮತ್ತು ಜಾನುವಾರು ಸಾಕಾಣೆದಾರರಿಗೆ ಅವರ ಉತ್ಪನ್ನಗಳಿಗೆ ಉತ್ತಮ, ಪಾರದರ್ಶಕ ಮತ್ತು ಸ್ಥಿರವಾದ ಮಾರುಕಟ್ಟೆ ಒದಗಿಸುತ್ತದೆ ಮತ್ತು ಅವರ ಆದಾಯವನ್ನು ವೃದ್ಧಿಸಲು ಸಹಾಯ ಮಾಡುತ್ತದೆ. ಈ ಯೋಜನೆಯು ಪಶ್ಚಿಮ ಬಂಗಾಳದಲ್ಲಿ ಡೈರಿ ಸಹಕಾರಿ ಸಂಘಗಳನ್ನು ಬಲಪಡಿಸುವಲ್ಲಿ, ಗ್ರಾಮೀಣ ಆರ್ಥಿಕತೆಯಲ್ಲಿ ಹೊಸ ಉದ್ಯೋಗ ಮತ್ತು ಆದಾಯದ ಅವಕಾಶಗಳನ್ನು ಸೃಷ್ಟಿಸುವಲ್ಲಿ ಮತ್ತು ರಾಜ್ಯದಲ್ಲಿ ಶ್ವೇತ ಕ್ರಾಂತಿಯ ಹೊಸ ಅಧ್ಯಾಯ ಆರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

 

*****


(रिलीज़ आईडी: 2286489) आगंतुक पटल : 13
इस विज्ञप्ति को इन भाषाओं में पढ़ें: English , Urdu , हिन्दी , Assamese , Bengali , Bengali-TR , Gujarati , Odia , Malayalam