ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ರಾಷ್ಟ್ರೀಯ ಉದ್ದೀಪನ ಮದ್ದು ತಡೆ (ಡೋಪಿಂಗ್ ವಿರೋಧಿ) ಕಾಯ್ದೆ 2022 ಮತ್ತು ತಿದ್ದುಪಡಿ ಕಾಯ್ದೆ 2025 ಜಾರಿಗೊಳಿಸುವ ಮೂಲಕ ಉದ್ದೀಪನ ಮುದ್ದು ತಡೆ (ಡೋಪಿಂಗ್ ವಿರೋಧಿ) ಚೌಕಟ್ಟನ್ನು ಬಲಪಡಿಸಿದ ಸರ್ಕಾರ
ಜಾಗತಿಕ ಉದ್ದೀಪನ ಮದ್ದು ತಡೆ ಮಾನದಂಡಗಳೊಂದಿಗೆ ಹೊಂದಿಕೆಯಾಗುವ ಜತೆಗೆ ಕ್ರೀಡಾಪಟುಗಳ ರಕ್ಷಣೆ
प्रविष्टि तिथि:
17 JUL 2026 12:58PM by PIB Bengaluru
ಭಾರತ ಸರ್ಕಾರವು ರಾಷ್ಟ್ರೀಯ ಉದ್ದೀಪನ ಮದ್ಧು ಸೇವನೆ ತಡೆ (ಡೋಪಿಂಗ್ ವಿರೋಧಿ) ಕಾಯ್ದೆ 2022 ಮತ್ತು ರಾಷ್ಟ್ರೀಯ ಡೋಪಿಂಗ್ ವಿರೋಧಿ (ತಿದ್ದುಪಡಿ) ಕಾಯ್ದೆ 2025ರ ಜಾರಿಯ ಕುರಿತು ಅಧಿಸೂಚನೆ ಹೊರಡಿಸಿದ್ದು, ಇದು ಶುದ್ಧ ಕ್ರೀಡೆಗಾಗಿ ಭಾರತದ ಕಾನೂನು ಮತ್ತು ಸಾಂಸ್ಥಿಕ ಚೌಕಟ್ಟನ್ನು ಬಲಪಡಿಸುವಲ್ಲಿ ಮಹತ್ವದ ಮೈಲಿಗಲ್ಲು ಎಂದು ಗುರುತಿಸಲಾಗುತ್ತಿದೆ. ಕ್ರೀಡೆಯಲ್ಲಿ ಉದ್ದೀಪನ ಮದ್ದು (ಡೋಪಿಂಗ್) ತಡೆಗಟ್ಟಲು, ಕ್ರೀಡಾಪಟುಗಳ ಹಕ್ಕುಗಳನ್ನು ರಕ್ಷಿಸಲು ಮತ್ತು ಅಂತಾರಾಷ್ಟ್ರೀಯವಾಗಿ ಅಂಗೀಕರಿಸಲ್ಪಟ್ಟ ಡೋಪಿಂಗ್ ವಿರೋಧಿ ಮಾನದಂಡಗಳಿಗೆ ಅನುಗುಣವಾಗಿ ಕ್ರೀಡಾ ಸ್ಪರ್ಧೆಯ ಸಮಗ್ರತೆಯನ್ನು ಎತ್ತಿಹಿಡಿಯಲು ಶಾಸನವು ಸಮಗ್ರ ಶಾಸನಬದ್ಧ ಬುನಾದಿಯನ್ನು ಹಾಕಿಕೊಡಲಿದೆ.
ಈ ಕಾಯಿದೆಗಳು ಭಾರತದ ಡೋಪಿಂಗ್ ವಿರೋಧಿ ಚೌಕಟ್ಟನ್ನು ವಿಶ್ವ ಡೋಪಿಂಗ್ ವಿರೋಧಿ ಸಂಹಿತೆಯೊಂದಿಗೆ ಸಂಯೋಜಿಸುತ್ತವೆ ಮತ್ತು ಕ್ರೀಡೆಯಲ್ಲಿ ಡೋಪಿಂಗ್ ವಿರುದ್ಧ ಯುನೆಸ್ಕೋ ಅಂತಾರಾಷ್ಟ್ರೀಯ ಸಮಾವೇಶದಡಿಯಲ್ಲಿ ಭಾರತದ ಬಾಧ್ಯತೆಗಳನ್ನು ಪೂರೈಸುತ್ತವೆ. ಶಾಸನವು ಸಾಂಸ್ಥಿಕ ಸ್ವಾತಂತ್ರ್ಯವನ್ನು ಬಲಪಡಿಸುತ್ತದೆ, ಕಾರ್ಯವಿಧಾನದ ಸುರಕ್ಷತೆಗಳನ್ನು ಹೆಚ್ಚಿಸುತ್ತದೆ, ವಿವಾದ ಪರಿಹಾರ ಕಾರ್ಯವಿಧಾನಗಳನ್ನು ಸುಗಮಗೊಳಿಸುತ್ತದೆ ಮತ್ತು ಭಾರತದ ಡೋಪಿಂಗ್ ವಿರೋಧಿ ಕಾರ್ಯಕ್ರಮದ ವಿಶ್ವಾಸಾರ್ಹತೆ ಮತ್ತು ಪರಿಣಾಮಕಾರಿತ್ವವನ್ನು ಬಲಪಡಿಸುತ್ತದೆ.
ಈ ಕಾಯಿದೆಗಳು ಪರೀಕ್ಷೆ, ಫಲಿತಾಂಶ ನಿರ್ವಹಣೆ, ಶಿಕ್ಷಣ, ಗುಪ್ತಚರ ಮತ್ತು ತನಿಖೆಗಳನ್ನು ನಿಯಂತ್ರಿಸುವ ದೃಢವಾದ ಕಾನೂನು ಚೌಕಟ್ಟನ್ನು ಸ್ಥಾಪಿಸುವ ಮೂಲಕ ಎಲ್ಲಾ ಕ್ರೀಡೆಗಳಲ್ಲಿ ಡೋಪಿಂಗ್ ವಿರೋಧಿ ಕ್ರಮಗಳಿಗೆ ಶಾಸನಬದ್ಧ ಬೆಂಬಲವನ್ನು ಒದಗಿಸುತ್ತವೆ. ಕ್ರೀಡಾಪಟುಗಳ ಹಕ್ಕುಗಳ ರಕ್ಷಣೆಯನ್ನು ಖಾತ್ರಿಪಡಿಸಿಕೊಳ್ಳುವಾಗ ಅವು ಹೆಚ್ಚಿನ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸರಿಯಾದ ಪ್ರಕ್ರಿಯೆಯನ್ನು ಉತ್ತೇಜಿಸುತ್ತವೆ.
ರಾಷ್ಟ್ರೀಯ ಡೋಪಿಂಗ್ ವಿರೋಧಿ (ತಿದ್ದುಪಡಿ) ಕಾಯಿದೆ, 2025 ಸಾಂಸ್ಥಿಕ ಸ್ವಾಯತ್ತತೆಯನ್ನು ಬಲಪಡಿಸುವ ಮೂಲಕ ಮತ್ತು ಭಾರತದ ಡೋಪಿಂಗ್ ವಿರೋಧಿ ಚೌಕಟ್ಟನ್ನು ಅಂತಾರಾಷ್ಟ್ರೀಯ ಅತ್ಯುತ್ತಮ ಪದ್ಧತಿಗಳೊಂದಿಗೆ ಹತ್ತಿರಕ್ಕೆ ತರುವ ಮೂಲಕ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುತ್ತದೆ. ದೇಶದಲ್ಲಿ ಡೋಪಿಂಗ್ ನಿಗ್ರಹ ಆಡಳಿತದ ಪರಿಣಾಮಕಾರಿತ್ವ, ನ್ಯಾಯಸಮ್ಮತತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಗುರಿಯನ್ನು ಈ ತಿದ್ದುಪಡಿಗಳು ಹೊಂದಿವೆ.
ಈ ಕಾಯಿದೆಗಳು ಜಾರಿಗೆ ಬರುತ್ತಿರುವುದು ಪಾರದರ್ಶಕ, ನ್ಯಾಯಯುತ ಮತ್ತು ಕ್ರೀಡಾಪಟು-ಕೇಂದ್ರಿತ ಡೋಪಿಂಗ್ ವಿರೋಧಿ ಪೂರಕ ವ್ಯವಸ್ಥೆಯನ್ನು ಬೆಳೆಸುವ ಸರ್ಕಾರದ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಬಲಪಡಿಸಿದ ಕಾನೂನು ಚೌಕಟ್ಟು ಕ್ರೀಡೆಯಲ್ಲಿ ಸಮಗ್ರತೆ, ನ್ಯಾಯಯುತ ಆಟ ಮತ್ತು ಶ್ರೇಷ್ಠತೆಯ ಮೌಲ್ಯಗಳನ್ನು ಉತ್ತೇಜಿಸುವ ಭಾರತದ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಭಾರತೀಯ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸ್ಪರ್ಧೆಗಳನ್ನು ಸಮಾನವಾಗಿ ಎದುರಿಸುವುದನ್ನು ಖಾತ್ರಿಪಡಿಸುತ್ತದೆ.
*****
(रिलीज़ आईडी: 2285693)
आगंतुक पटल : 9