ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಭಾರತ-ಇಯು ಕೈಗಾರಿಕಾ ಮತ್ತು ತಂತ್ರಜ್ಞಾನ ಸಹಕಾರವನ್ನು ಬಲಪಡಿಸಲು ಬ್ರಸೆಲ್ಸ್ ನಲ್ಲಿ ಐರೋಪ್ಯ ಕೈಗಾರಿಕಾ ಮುಖಂಡರನ್ನು ಭೇಟಿ ಮಾಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್
प्रविष्टि तिथि:
15 JUL 2026 8:20PM by PIB Bengaluru
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು, ಭಾರತ-ಇಯು ವ್ಯಾಪಾರ ಮತ್ತು ತಂತ್ರಜ್ಞಾನ ಮಂಡಳಿ (ಟಿಟಿಸಿ) ಸಚಿವ ಮಟ್ಟದ ಸಭೆಯ ಸಂದರ್ಭದಲ್ಲಿ ಜುಲೈ 14–15, 2026 ರಂದು ಬ್ರಸೆಲ್ಸ್ ನಲ್ಲಿ ಉದ್ಯಮ-ಕೇಂದ್ರಿತ ಸರಣಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಜುಲೈ 14, 2026 ರಂದು, ಶ್ರೀ ಪಿಯೂಷ್ ಗೋಯಲ್ ಅವರು ಥಾಲೆಸ್ ಬೆಲ್ಜಿಯಂನ ಸಿಇಒ ಶ್ರೀ ಅಲೈನ್ ಕ್ವೆವೆರಿನ್ ಅವರನ್ನು ಭೇಟಿ ಮಾಡಿ, ಕೈಗಾರಿಕಾ ಸಹಕಾರವನ್ನು ಬಲಪಡಿಸುವ ಮತ್ತು ತಂತ್ರಜ್ಞಾನ ಪಾಲುದಾರಿಕೆಯ ಅವಕಾಶಗಳನ್ನು ಅನ್ವೇಷಿಸುವ ಕುರಿತು ಚರ್ಚಿಸಿದರು. ದ್ವಿಪಕ್ಷೀಯ ವ್ಯಾಪಾರ ಅವಕಾಶಗಳನ್ನು ವಿಸ್ತರಿಸುವ ಮತ್ತು ಕೈಗಾರಿಕಾ ಸಹಯೋಗವನ್ನು ಹೆಚ್ಚಿಸುವ ಕುರಿತು ಅವರು ಸಿಲಾಕ್ಸ್ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಜೀನ್ ಕ್ರಿಸ್ಟೋಫ್ ಬೊಗರ್ಟ್ ಅವರೊಂದಿಗೂ ಮಾತುಕತೆ ನಡೆಸಿದರು. ಈ ಸಭೆಗಳು ಬ್ರಸೆಲ್ಸ್ ನಲ್ಲಿ ಸಚಿವರ ಉದ್ಯಮ ಸಂಪರ್ಕ ಕಾರ್ಯಕ್ರಮದ ಆರಂಭವನ್ನು ಸೂಚಿಸಿದವು, ಇದು ಯುರೋಪಿಯನ್ ಕೈಗಾರಿಕಾ ಮುಖಂಡರೊಂದಿಗೆ ತೊಡಗಿಸಿಕೊಳ್ಳಲು ರಚನಾತ್ಮಕ ವೇದಿಕೆಯನ್ನು ಒದಗಿಸಿತು ಮತ್ತು ಮುಂದಿನ ಸಂವಾದಗಳಿಗೆ ವೇದಿಕೆಯಾಯಿತು.
ಜುಲೈ 15, 2026 ರಂದು, ಶ್ರೀ ಪಿಯೂಷ್ ಗೋಯಲ್ ಅವರು ವಿದೇಶಾಂಗ ವ್ಯವಹಾರಗಳ ಸಚಿವರು ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವರೊಂದಿಗೆ ಸೇರಿ, ಫೆಡರೇಶನ್ ಆಫ್ ಎಂಟರ್ಪ್ರೈಸಸ್ ಇನ್ ಬೆಲ್ಜಿಯಂ (ಎಫ್ ಇ ಬಿ) ಆಯೋಜಿಸಿದ್ದ ಬಿಸಿನೆಸ್ ರೌಂಡ್ ಟೇಬಲ್ (ದುಂಡುಮೇಜಿನ ಸಭೆ) ನಲ್ಲಿ ಭಾಗವಹಿಸಿದರು. ಈ ದುಂಡುಮೇಜಿನ ಸಭೆಯು ವ್ಯಾಪಾರ ಸರಳೀಕರಣ, ಹೂಡಿಕೆಯ ಹರಿವು, ಪೂರೈಕೆ ಸರಪಳಿ ಚೇತರಿಕೆ ಮತ್ತು ಡಿಜಿಟಲ್ ನಾವೀನ್ಯತೆಗಳ ಕುರಿತು ಚರ್ಚಿಸಲು ಪ್ರಮುಖ ಭಾರತೀಯ ಮತ್ತು ಐರೋಪ್ಯದ ಉದ್ಯಮ ಪ್ರತಿನಿಧಿಗಳನ್ನು ಒಂದೆಡೆ ಸೇರಿಸಿತು.
ನಂತರ, ಶ್ರೀ ಪಿಯೂಷ್ ಗೋಯಲ್ ಅವರು ಸ್ಟೀಗನ್ ಬರ್ಗರ್ ಹೋಟೆಲ್ ನಲ್ಲಿ ಎಫ್ ಐ ಸಿ ಸಿ ಐ ನಿಯೋಗದ ಸದಸ್ಯರೊಂದಿಗೆ ಸಂವಾದ ನಡೆಸಿದರು. ಭಾರತೀಯ ಉದ್ಯಮದ ಪ್ರತಿನಿಧಿಗಳು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು, ನಿಯಂತ್ರಕ ಸವಾಲುಗಳನ್ನು ಎದುರಿಸುವುದು ಮತ್ತು ಟಿಟಿಸಿ ಚೌಕಟ್ಟಿನಡಿಯಲ್ಲಿ ಅವಕಾಶಗಳನ್ನು ಬಳಸಿಕೊಳ್ಳುವ ಕುರಿತು ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡರು. ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸಲು ಮತ್ತು ನಾವೀನ್ಯತೆ ಆಧಾರಿತ ಪಾಲುದಾರಿಕೆಗಳನ್ನು ಉತ್ತೇಜಿಸಲು ಭಾರತೀಯ ಉದ್ಯಮಕ್ಕೆ ಬೆಂಬಲ ನೀಡುವ ಸರ್ಕಾರದ ಬದ್ಧತೆಯನ್ನು ಸಚಿವರು ಪುನರುಚ್ಚರಿಸಿದರು.
ಬ್ರಸೆಲ್ಸ್ನಲ್ಲಿ ಶ್ರೀ ಪಿಯೂಷ್ ಗೋಯಲ್ ಅವರ ಕಾರ್ಯಕ್ರಮಗಳು ಉದ್ಯಮ ನೇತೃತ್ವದ ಬೆಳವಣಿಗೆಗೆ ಭಾರತ ನೀಡುತ್ತಿರುವ ಆದ್ಯತೆಯನ್ನು ಒತ್ತಿಹೇಳಿದವು ಮತ್ತು ಭಾರತ-ಇಯು ಆರ್ಥಿಕ ಸಹಕಾರವನ್ನು ಮುನ್ನಡೆಸುವಲ್ಲಿ ವ್ಯಾಪಾರ ಮತ್ತು ಉದ್ಯಮದ ನಿರ್ಣಾಯಕ ಪಾತ್ರವನ್ನು ಉಲ್ಲೇಖಿಸಿದವು. ಭಾರತ-ಇಯು ಟಿಟಿಸಿ ಸಚಿವ ಮಟ್ಟದ ಸಭೆಯ ಸಂದರ್ಭದಲ್ಲಿ ನಡೆದ ಈ ಸಂವಾದಗಳು, ಕೈಗಾರಿಕಾ ಪಾಲುದಾರಿಕೆಯನ್ನು ಬಲಪಡಿಸಲು, ನಾವೀನ್ಯತೆಯನ್ನು ಉತ್ತೇಜಿಸಲು, ಹೆಚ್ಚಿನ ಮಾರುಕಟ್ಟೆ ಪ್ರವೇಶವನ್ನು ಸುಲಭಗೊಳಿಸಲು ಮತ್ತು ಯುರೋಪ್ ನಲ್ಲಿ ಭಾರತೀಯ ಉದ್ಯಮಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲು ಸರ್ಕಾರದ ಬದ್ಧತೆಯನ್ನು ಮತ್ತೊಮ್ಮೆ ದೃಢೀಕರಿಸಿದವು.
*****
(रिलीज़ आईडी: 2285276)
आगंतुक पटल : 11