ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತದ ಪ್ರಧಾನಮಂತ್ರಿಯವರ ಇಂಡೋನೇಷ್ಯಾ ಅಧಿಕೃತ ಭೇಟಿಯ ಕುರಿತು ಭಾರತ-ಇಂಡೋನೇಷ್ಯಾ ಜಂಟಿ ಹೇಳಿಕೆ

प्रविष्टि तिथि: 07 JUL 2026 5:15PM by PIB Bengaluru

ಇಂಡೋನೇಷ್ಯಾ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಪ್ರಬೊವೊ ಸುಬಿಯಾಂಟೋ ಅವರ ಆಹ್ವಾನದ ಮೇರೆಗೆ, ಭಾರತ ಗಣರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಅವರು 2026 ರ ಜುಲೈ 6 ರಿಂದ 8 ರವರೆಗೆ ಇಂಡೋನೇಷ್ಯಾಕ್ಕೆ ಅಧಿಕೃತ ಭೇಟಿ ನೀಡಿದರು. 2025 ರ ಜನವರಿ 23 ರಿಂದ 26 ರವರೆಗೆ ಭಾರತದ 76 ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಅಧ್ಯಕ್ಷ ಪ್ರಬೊವೊ ಅವರು ಭಾರತಕ್ಕೆ ನೀಡಿದ್ದ ಅಧಿಕೃತ ಭೇಟಿಯ ಮುಂದುವರಿಕೆಯಾಗಿ, ಪ್ರಧಾನಮಂತ್ರಿ ಮೋದಿ ಅವರ ಭೇಟಿಯು ಭಾರತ-ಇಂಡೋನೇಷ್ಯಾ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವನ್ನು ಗಣನೀಯವಾಗಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಉಭಯ ನಾಯಕರ ಹಂಚಿಕೆಯ ಬದ್ಧತೆಯನ್ನು ಬಿಂಬಿಸುವ ಒಂದು ಪ್ರಮುಖ ಮೈಲಿಗಲ್ಲಾಗಿದೆ.

2. ಈ ಭೇಟಿಯ ಸಂದರ್ಭದಲ್ಲಿ, ಪ್ರಧಾನಮಂತ್ರಿ ಮೋದಿ ಅವರಿಗೆ ಜಕಾರ್ತದ ಇಸ್ತಾನಾ ಮೆರ್ಡೆಕಾದಲ್ಲಿ ಔಪಚಾರಿಕ ಸ್ವಾಗತವನ್ನು ನೀಡಲಾಯಿತು. ಇದರ ನಂತರ ಅಧ್ಯಕ್ಷ ಪ್ರಬೊವೊ ಮತ್ತು ಪ್ರಧಾನಮಂತ್ರಿ ಮೋದಿ ಅವರ ನಡುವೆ ವೈಯಕ್ತಿಕ (tête-à-tête) ಮತ್ತು ನಿಯೋಗ ಮಟ್ಟದ ದ್ವಿಪಕ್ಷೀಯ ಮಾತುಕತೆಗಳು ನಡೆದವು. ಅಧ್ಯಕ್ಷ ಪ್ರಬೊವೊ ಅವರು ಪ್ರಧಾನಮಂತ್ರಿ ಮೋದಿ ಅವರ ಗೌರವಾರ್ಥವಾಗಿ ಔತಣಕೂಟವನ್ನು ಸಹ ಏರ್ಪಡಿಸಿದ್ದರು. ಇಂಡೋನೇಷ್ಯಾ ಸಂಸತ್ತಿನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ ನ ಸ್ಪೀಕರ್ ಗೌರವಾನ್ವಿತ ಡಾ. ಪುವಾನ್ ಮಹಾರಾಣಿ ಅವರ ಆಹ್ವಾನದ ಮೇರೆಗೆ ಪ್ರಧಾನಮಂತ್ರಿಯವರು ಇಂಡೋನೇಷ್ಯಾ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿ ಮೋದಿ ಮತ್ತು ಅಧ್ಯಕ್ಷ ಪ್ರಬೊವೊ ಅವರು ಯೋಗ್ಯಕರ್ತಾದಲ್ಲಿರುವ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಪ್ರಂಬನನ್ ದೇವಾಲಯ ಸಂಕೀರ್ಣಗಳ ಪುನಃಸ್ಥಾಪನೆ ಮತ್ತು ಸಂರಕ್ಷಣಾ ಕಾಮಗಾರಿಗಳಿಗೆ ಚಾಲನೆ ನೀಡಿದರು. ಇಂಡೋನೇಷ್ಯಾದಲ್ಲಿರುವ ಭಾರತೀಯ ಸಮುದಾಯವು ಭೇಟಿ ನೀಡಿದ ಗಣ್ಯರ ಗೌರವಾರ್ಥವಾಗಿ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭದಲ್ಲೂ ಉಭಯ ನಾಯಕರು ಭಾಗವಹಿಸಿದ್ದರು.

ರಾಜಕೀಯ ಸಹಕಾರ

3. ಪ್ರಧಾನಮಂತ್ರಿ ಮೋದಿ ಮತ್ತು ಅಧ್ಯಕ್ಷ ಪ್ರಬೊವೊ ಅವರು 2026 ರ ಜುಲೈ 7 ರಂದು ಜಕಾರ್ತದ ಇಸ್ತಾನಾ ಮೆರ್ಡೆಕಾದಲ್ಲಿ ಅಧಿಕೃತ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ಅಧಿಕೃತ ಮಾತುಕತೆಗಳು ರಾಜಕೀಯ ತೊಡಗಿಸಿಕೊಳ್ಳುವಿಕೆ, ರಕ್ಷಣೆ ಮತ್ತು ಭದ್ರತಾ ಸಹಕಾರ, ಕಡಲ ಸಹಕಾರ, ವ್ಯಾಪಾರ ಮತ್ತು ಹೂಡಿಕೆ, ಡಿಜಿಟಲ್ ಆರ್ಥಿಕತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಬಾಹ್ಯಾಕಾಶ, ನಿರ್ಣಾಯಕ ಖನಿಜಗಳು, ಇಂಧನ, ಕೃಷಿ, ಆರೋಗ್ಯ, ಫಾರ್ಮಾ, ಶಿಕ್ಷಣ, ಸಂಸ್ಕೃತಿ, ಪ್ರವಾಸೋದ್ಯಮ, ಯುವ ವಿನಿಮಯ ಮತ್ತು ಜನರ ನಡುವಿನ ಬಾಂಧವ್ಯ ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ವ್ಯಾಪ್ತಿಯನ್ನು ಒಳಗೊಂಡಿದ್ದವು. ಇದರೊಂದಿಗೆ ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಕುರಿತು ಚರ್ಚಿಸಲಾಯಿತು. ಭಾರತ-ಇಂಡೋನೇಷ್ಯಾ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದ ಹಲವು ದ್ವಿಪಕ್ಷೀಯ ದಾಖಲೆಗಳ ವಿನಿಮಯಕ್ಕೂ ಅವರು ಸಾಕ್ಷಿಯಾದರು.

4. ಉಭಯ ದೇಶಗಳ ಕಾರ್ಯತಂತ್ರದ ತೊಡಗಿಸಿಕೊಳ್ಳುವಿಕೆಯ ತೀವ್ರತೆಯನ್ನು ಹೆಚ್ಚಿಸಲು ಮತ್ತು ಉನ್ನತ ಮಟ್ಟದ ವಿನಿಮಯಗಳನ್ನು ನಡೆಸುವ ಮಹತ್ವವನ್ನು ಅಂಗೀಕರಿಸಿದ ಉಭಯ ನಾಯಕರು, ಬಹುಪಕ್ಷೀಯ ಕಾರ್ಯಕ್ರಮಗಳೊಂದಿಗೆ ನಿಯಮಿತ ಶೃಂಗಸಭೆಗಳನ್ನು ನಡೆಸಲು ಒಪ್ಪಿಕೊಂಡರು.

5. ಪ್ರಸ್ತುತ ಇರುವ ಜಂಟಿ ಕಾರ್ಯಕಾರಿ ಗುಂಪು ಕಾರ್ಯವಿಧಾನಗಳನ್ನು ಬಲಪಡಿಸುವ ಮತ್ತು ಜಂಟಿ ಆಯೋಗದ ಸಭೆ (ಜೆಸಿಎಂ), ವಿದೇಶಾಂಗ ಕಚೇರಿ ಸಮಾಲೋಚನೆ (ಎಫ್‌ ಒ ಸಿ) ಮತ್ತು ಇತರ ಸಚಿವರ ಹಾಗೂ ಹಿರಿಯ ಅಧಿಕಾರಿಗಳ ಮಟ್ಟದ ಸಂವಾದ ಕಾರ್ಯವಿಧಾನಗಳು ಮತ್ತು ವಿನಿಮಯಗಳು ಸೇರಿದಂತೆ ನಿಯಮಿತ ದ್ವಿಪಕ್ಷೀಯ ಸಮಾಲೋಚನೆಗಳನ್ನು ಮುಂದುವರಿಸುವ ಮಹತ್ವವನ್ನು ಉಭಯ ನಾಯಕರು ಪ್ರತಿಪಾದಿಸಿದರು.

6. ತಮ್ಮ ತಮ್ಮ ಸಂಸತ್ತುಗಳಲ್ಲಿ ಭಾರತ-ಇಂಡೋನೇಷ್ಯಾ ಸಂಸದೀಯ ಸೌಹಾರ್ದ ಗುಂಪುಗಳ ಸ್ಥಾಪನೆಯನ್ನು ಉಭಯ ನಾಯಕರು ಸ್ವಾಗತಿಸಿದರು ಮತ್ತು ಉಭಯ ಸಂಸತ್ತುಗಳ ನಡುವೆ ನಿಯಮಿತ ನಿಯೋಗಗಳ ಭೇಟಿಯ ಮೂಲಕ ಎರಡು ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವೆ ಸಂಸದೀಯ ವಿನಿಮಯವನ್ನು ಹೆಚ್ಚಿಸುವ ಅಗತ್ಯವನ್ನು ಪ್ರತಿಪಾದಿಸಿದರು.

7. 2025 ರ ಏಪ್ರಿಲ್ 23 ರಂದು ಜಕಾರ್ತದಲ್ಲಿ ನಡೆದ 3 ನೇ ಭಾರತ-ಇಂಡೋನೇಷ್ಯಾ ನೀತಿ ಯೋಜನೆ ಸಂವಾದ, 2025 ರ ಸೆಪ್ಟೆಂಬರ್ 15-16 ರಂದು ಜಕಾರ್ತದಲ್ಲಿ ನಡೆದ 2 ನೇ ಭಾರತ-ಇಂಡೋನೇಷ್ಯಾ ಟ್ರ್ಯಾಕ್ 1.5 ಸಂವಾದ ಮತ್ತು 2025 ರ ಆಗಸ್ಟ್ 5-6 ರಂದು ಜಕಾರ್ತದಲ್ಲಿ ನಡೆದ ಜಕಾರ್ತ ಫ್ಯೂಚರ್ಸ್ ಫೋರಂ ಸೇರಿದಂತೆ ಉಭಯ ದೇಶಗಳ ಚಿಂತಕರ ಚಾವಡಿಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ನೀತಿ ತಜ್ಞರ ನಡುವೆ ಪರಸ್ಪರ ತಿಳುವಳಿಕೆ ಮತ್ತು ವರ್ಧಿತ ತೊಡಗಿಸಿಕೊಳ್ಳುವಿಕೆಯನ್ನು ಉಭಯ ನಾಯಕರು ಸ್ವಾಗತಿಸಿದರು.

ರಕ್ಷಣೆ ಮತ್ತು ಕಡಲ ಸಹಕಾರ

8. ಭಾರತ ಮತ್ತು ಇಂಡೋನೇಷ್ಯಾಗಳು ಕಡಲ ನೆರೆಹೊರೆಯವರು ಮತ್ತು ಬಲವಾದ ರಕ್ಷಣಾ ಸಹಕಾರವನ್ನು ಹೊಂದಿರುವ ಕಾರ್ಯತಂತ್ರದ ಪಾಲುದಾರರು ಎಂಬುದನ್ನು ಗುರುತಿಸುತ್ತಾ, ಮತ್ತು 2018 ರಲ್ಲಿ "ಇಂಡೋ-ಪೆಸಿಫಿಕ್‌ ನಲ್ಲಿ ಕಡಲ ಸಹಕಾರದ ಕುರಿತು ಭಾರತ-ಇಂಡೋನೇಷ್ಯಾದ ಹಂಚಿಕೆಯ ದೃಷ್ಟಿಕೋನ" ವನ್ನು ಅಳವಡಿಸಿಕೊಂಡಿದ್ದನ್ನು ಸ್ಮರಿಸುತ್ತಾ, ರಕ್ಷಣೆ ಮತ್ತು ಕಡಲ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸಲು ಮತ್ತು ವಿಸ್ತರಿಸಲು ಉಭಯ ನಾಯಕರು ತಮ್ಮ ಬಲವಾದ ಬದ್ಧತೆಯನ್ನು ಪುನರುಚ್ಚರಿಸಿದರು.

9. 2025 ರ ನವೆಂಬರ್ 27 ರಂದು ಹೊಸ ದೆಹಲಿಯಲ್ಲಿ ನಡೆದ 3 ನೇ ರಕ್ಷಣಾ ಸಚಿವರ ಮಾತುಕತೆಯ ಸಭೆಯನ್ನು ಉಭಯ ನಾಯಕರು ಸ್ವಾಗತಿಸಿದರು ಮತ್ತು ನಿಯಮಿತ ರಕ್ಷಣಾ ಸಂವಾದ, ಜಂಟಿ ಸಮರಾಭ್ಯಾಸಗಳು, ಸಿಬ್ಬಂದಿ ಮಾತುಕತೆಗಳು, ಜಂಟಿ ಸಂಶೋಧನೆ ಮತ್ತು ಹೊಸ ರಕ್ಷಣಾ ತಂತ್ರಜ್ಞಾನಗಳ ಸಹ-ಉತ್ಪಾದನೆ, ಬಂದರು ಭೇಟಿಗಳು, ಶಾಂತಿಪಾಲನಾ ಚಟುವಟಿಕೆಗಳು, ಮಾಹಿತಿ ಹಂಚಿಕೆ, ಹೈಡ್ರೋಗ್ರಫಿ, ಸಾಮರ್ಥ್ಯ ವೃದ್ಧಿ, ಕೆಡೆಟ್ ತರಬೇತಿ ಮತ್ತು ವಿನಿಮಯಗಳು ಹಾಗೂ ರಕ್ಷಣಾ ಕೈಗಾರಿಕಾ ಸಹಕಾರ ಸೇರಿದಂತೆ ರಕ್ಷಣಾ ಸಹಕಾರದ ಸಾಂಪ್ರದಾಯಿಕ ಮತ್ತು ಉದಯೋನ್ಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಒಪ್ಪಿಕೊಂಡರು. ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆ ಮತ್ತು ಆಕಾಶದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ಸಹಕಾರ ಮೂಲಕ ರಕ್ಷಣಾ ಸಹಕಾರವನ್ನು ಉನ್ನತೀಕರಿಸಿರುವುದನ್ನು ಅವರು ಸ್ವಾಗತಿಸಿದರು.

10. ಉಭಯ ದೇಶಗಳ ಪರಸ್ಪರ ಹಿತಾಸಕ್ತಿ ಮತ್ತು ಆದ್ಯತೆಗಳ ಆಧಾರದ ಮೇಲೆ ಕಡಲ ವಲಯದ ಜಾಗೃತಿ (ಎಂ ಡಿ ಎ), ಕಡಲ ಸಂಪರ್ಕ, ಕರಾವಳಿ ಕಣ್ಗಾವಲು, ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (ಎಚ್‌ ಎ ಡಿ ಆರ್), ಮಾಲಿನ್ಯ ನಿಯಂತ್ರಣ ಮತ್ತು ಶೋಧ ಹಾಗೂ ರಕ್ಷಣಾ (ಎಸ್‌ ಎ ಆರ್) ಕಾರ್ಯಾಚರಣೆ ಸೇರಿದಂತೆ ನಿರಂತರ ಕಡಲ ಸಹಕಾರವನ್ನು ಉಭಯ ನಾಯಕರು ಸ್ವಾಗತಿಸಿದರು. ಇದು ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸಮೃದ್ಧಿಯನ್ನು ಒದಗಿಸಲು ಮತ್ತು ವಿಶಾಲವಾದ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಹೆಚ್ಚಿನ ಸ್ಥಿರತೆಗೆ ಕೊಡುಗೆ ನೀಡುತ್ತದೆ. ಕಡಲ ಸುರಕ್ಷತೆ ಮತ್ತು ಭದ್ರತಾ ಸಹಕಾರದ ಕುರಿತಾದ ತಿಳುವಳಿಕಾ ಒಪ್ಪಂದದ ನವೀಕರಣವನ್ನು ಮತ್ತು ಬಕಮ್ಲಾ ಆರ್‌‌ ಐ ಹಾಗೂ ಭಾರತೀಯ ಕರಾವಳಿ ರಕ್ಷಕ ಪಡೆ ನಡುವಿನ ಅನುಷ್ಠಾನದ ವ್ಯವಸ್ಥೆಯ ಮುಕ್ತಾಯವನ್ನು ಉಭಯ ನಾಯಕರು ಸ್ವಾಗತಿಸಿದರು.

11. ಜಂಟಿ ಸಮರಾಭ್ಯಾಸಗಳು ಮತ್ತು ರಕ್ಷಣಾ ತರಬೇತಿ ಕಾರ್ಯಕ್ರಮಗಳ ಕಾರ್ಯತಂತ್ರದ ಮತ್ತು ಕಾರ್ಯಾಚರಣೆಯ ಮಹತ್ವವನ್ನು ಉಭಯ ನಾಯಕರು ಗುರುತಿಸಿದರು ಮತ್ತು ಅಸ್ತಿತ್ವದಲ್ಲಿರುವ ನೌಕಾ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಒಪ್ಪಿದರು. ಆಯಾ ರಾಷ್ಟ್ರೀಯ ಕಾನೂನುಗಳು ಮತ್ತು ನಿಯಮಗಳು ಹಾಗೂ 1982 ರ UNCLOS ಸೇರಿದಂತೆ ಅಂತರರಾಷ್ಟ್ರೀಯ ಕಾನೂನಿನ ತತ್ವಗಳಿಗೆ ಅನುಗುಣವಾಗಿ, ಪರಸ್ಪರ ಹಿತಾಸಕ್ತಿಯ ಕಡಲ ವಿಷಯಗಳ ಕುರಿತು ರಚನಾತ್ಮಕ ಚರ್ಚೆಗಳನ್ನು ಮುಂದುವರಿಸುವ ಸಾಧ್ಯತೆಗಳನ್ನು ಅನ್ವೇಷಿಸುವ ಮಹತ್ವವನ್ನು ಉಭಯ ನಾಯಕರು ಗಮನಿಸಿದರು.

12. ಗುರುಗ್ರಾಮದ ಇನ್ಫರ್ಮೇಷನ್ ಫ್ಯೂಷನ್ ಸೆಂಟರ್ - ಇಂಡಿಯನ್ ಓಷನ್ ರೀಜನ್ (ಐ ಎಫ್‌ ಸಿ-ಐಒಆರ್) ನಲ್ಲಿ ಇಂಡೋನೇಷ್ಯಾದಿಂದ ಅಂತರರಾಷ್ಟ್ರೀಯ ಸಂಪರ್ಕ ಅಧಿಕಾರಿಯನ್ನು (ಐ ಎಲ್‌ ಒ) ನೇಮಕ ಮಾಡಿರುವುದನ್ನು ಉಭಯ ನಾಯಕರು ಸ್ವಾಗತಿಸಿದರು. ಕಡಲ ಭದ್ರತೆಯಲ್ಲಿ ಪರಸ್ಪರ ಪ್ರಯೋಜನಕಾರಿ ಸಹಕಾರದ ಕ್ಷೇತ್ರಗಳನ್ನು ಗುರುತಿಸಲು ಚರ್ಚೆಗಳನ್ನು ಮುಂದುವರಿಸಲು ಅವರು ಒಪ್ಪಿಕೊಂಡರು.

13. ಉಭಯ ನಾಯಕರು ರಕ್ಷಣಾ ಉದ್ಯಮ ಮತ್ತು ತಂತ್ರಜ್ಞಾನದಲ್ಲಿನ ಸಹಯೋಗವನ್ನು ಸಹಕಾರದ ಆದ್ಯತೆಯ ಕ್ಷೇತ್ರಗಳಲ್ಲಿ ಒಂದಾಗಿ ಗುರುತಿಸಿದರು. ಉಪಕರಣಗಳ ಜಂಟಿ ಉತ್ಪಾದನೆ, ತಂತ್ರಜ್ಞಾನ ವರ್ಗಾವಣೆ, ತಾಂತ್ರಿಕ ನೆರವು ಮತ್ತು ಸಾಮರ್ಥ್ಯ ವೃದ್ಧಿ, ಹಡಗು ನಿರ್ಮಾಣದಲ್ಲಿನ ಸಹಕಾರ ಸೇರಿದಂತೆ ರಕ್ಷಣಾ ಉಪಕರಣಗಳ ಸೋರ್ಸಿಂಗ್, ಸಮಾನ ರಕ್ಷಣಾ ವೇದಿಕೆಗಳಿಗಾಗಿ ಎಂ ಆರ್‌ ಒ ಸೌಲಭ್ಯಗಳ ಸ್ಥಾಪನೆ, ರಕ್ಷಣಾ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸ್ಥಾಪನೆಯನ್ನು ಅನ್ವೇಷಿಸುವುದು ಮತ್ತು ರಕ್ಷಣಾ ಪೂರೈಕೆ ಸರಪಳಿ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದಕ್ಕಾಗಿ ರಕ್ಷಣಾ ಕೈಗಾರಿಕೆಗಳ ನಡುವೆ ಪರಸ್ಪರ ಪ್ರಯೋಜನಕಾರಿ ಸಹಯೋಗವನ್ನು ವಿಸ್ತರಿಸಲು ಒಪ್ಪಿಕೊಂಡರು. ಸೇನಾ ಔಷಧಿಗಳ ಪೂರೈಕೆಯಲ್ಲಿ ಭಾರತ ಮತ್ತು ಇಂಡೋನೇಷ್ಯಾದ ಸಶಸ್ತ್ರ ಪಡೆಗಳ ವೈದ್ಯಕೀಯ ಸಂಸ್ಥೆಗಳ ನಡುವಿನ ಫಾರ್ಮಾಸ್ಯುಟಿಕಲ್ ಸಹಯೋಗದ ಪ್ರಗತಿಯನ್ನು ಉಭಯ ನಾಯಕರು ಸ್ವಾಗತಿಸಿದರು.

ಭಯೋತ್ಪಾದನೆ ನಿಗ್ರಹ ಮತ್ತು ಭದ್ರತಾ ಸಹಕಾರ

14. ನಾಯಕರು ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಬಲವಾಗಿ ಮತ್ತು ನಿಸ್ಸಂದಿಗ್ಧವಾಗಿ ಖಂಡಿಸಿದರು. ಭಯೋತ್ಪಾದನೆಯನ್ನು ಸಮಗ್ರ ಮತ್ತು ಸುಸ್ಥಿರ ರೀತಿಯಲ್ಲಿ ಹಾಗೂ ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಎದುರಿಸಲು ನಿರ್ಣಾಯಕ ಮತ್ತು ಸಂಘಟಿತ ಅಂತರರಾಷ್ಟ್ರೀಯ ಪ್ರಯತ್ನಗಳಿಗೆ ಅವರು ಕರೆ ನೀಡಿದರು. ಮತ್ತು ಸಂದರ್ಭದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ನಿರ್ಬಂಧಗಳ ಸಮಿತಿಯಲ್ಲಿ ಪಟ್ಟಿ ಮಾಡಲಾದ ಜಾಗತಿಕವಾಗಿ ನಿಷೇಧಿತ ಭಯೋತ್ಪಾದಕರು ಮತ್ತು ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕ್ರಮಕ್ಕೆ ಕರೆ ನೀಡಿದರು.

15. ಭಯೋತ್ಪಾದನೆಗೆ ಧನಸಹಾಯವನ್ನು ತಡೆಯುವ ಪ್ರಯತ್ನಗಳು, ಅಂತರರಾಷ್ಟ್ರೀಯ ಮಟ್ಟದಲ್ಲಿ ಹಣ ವರ್ಗಾವಣೆ ತಡೆ ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸುವಿಕೆ ನಿಗ್ರಹ (ಎಎಂಎಲ್/ಸಿ ಎಫ್‌ ಟಿ) ಮಾನದಂಡಗಳನ್ನು ಉತ್ತೇಜಿಸುವುದು, ಭಯೋತ್ಪಾದಕ ಉದ್ದೇಶಗಳಿಗಾಗಿ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ದುರುಪಯೋಗವನ್ನು ತಡೆಯುವುದು, ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಆನ್‌ಲೈನ್ ನೇಮಕಾತಿ ಸೇರಿದಂತೆ ಭಯೋತ್ಪಾದಕ ನೇಮಕಾತಿಯನ್ನು ಎದುರಿಸುವುದು ಮತ್ತು ಮುಲಭೂತವಾದದ ನಿಗ್ರಹ ಹಾಗೂ ಹಿಂಸಾತ್ಮಕ ಉಗ್ರವಾದ ತಡೆಗಟ್ಟುವಿಕೆ ಕಾರ್ಯಕ್ರಮಗಳ ಸಹಕಾರವನ್ನು ಬಲಪಡಿಸುವುದು ಸೇರಿದಂತೆ ಭಯೋತ್ಪಾದನೆ ಮತ್ತು ಹಿಂಸಾತ್ಮಕ ಉಗ್ರವಾದವನ್ನು ತಡೆಗಟ್ಟುವಲ್ಲಿ ಮತ್ತು ಎದುರಿಸುವಲ್ಲಿ ಸಹಕಾರವನ್ನು ಹೆಚ್ಚಿಸಲು ನಾಯಕರು ಒಪ್ಪಿಕೊಂಡರು.

16. ಭಯೋತ್ಪಾದನೆಯನ್ನು ಎದುರಿಸಲು ಶೂನ್ಯ-ಸಹಿಷ್ಣುತೆ ಧೋರಣೆಗೆ ನಾಯಕರು ಕರೆ ನೀಡಿದರು. ಭಯೋತ್ಪಾದನೆಗೆ ಧನಸಹಾಯದ ಮಾರ್ಗಗಳನ್ನು ಅಡ್ಡಿಪಡಿಸಲು ಸಕ್ರಿಯ ಕ್ರಮಗಳನ್ನು ಕೈಗೊಳ್ಳುವುದನ್ನು ಮುಂದುವರಿಸಲು ಮತ್ತು ವಿಶ್ವಸಂಸ್ಥೆ ಹಾಗೂ ಎಫ ಟಿ ಎಫ್‌ ಸೇರಿದಂತೆ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಹಕಾರವನ್ನು ಬಲಪಡಿಸಲು ತಮ್ಮ ದೃಢ ಬದ್ಧತೆಯನ್ನು ಪುನರುಚ್ಚರಿಸಿದರು.

17. ಭಯೋತ್ಪಾದನೆ ಮತ್ತು ಅಂತರರಾಷ್ಟ್ರೀಯ ಸಂಘಟಿತ ಅಪರಾಧಗಳ ನಡುವಿನ ಸಂಪರ್ಕವನ್ನು ಗುರುತಿಸುತ್ತಾ, ಉಭಯ ನಾಯಕರು ಆಯಾ ದೇಶೀಯ ಕಾನೂನುಗಳು ಮತ್ತು ಅಂತರರಾಷ್ಟ್ರೀಯ ಜವಾಬ್ದಾರಿಗಳಿಗೆ ಅನುಗುಣವಾಗಿ ಮಾಹಿತಿ ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ ಮೂಲಕ ಸಹಕಾರವನ್ನು ಹೆಚ್ಚಿಸಲು ಒಪ್ಪಿಕೊಂಡರು. ನಾಯಕರು ಮುಂದಿನ ದಿನಗಳಲ್ಲಿ ಸಹಿ ಮಾಡಲಿರುವ ಉಭಯ ದೇಶಗಳ ನಡುವಿನ ಭಯೋತ್ಪಾದನೆ ನಿಗ್ರಹ ಸಹಕಾರದ ತಿಳುವಳಿಕಾ ಒಪ್ಪಂದದ ಶೀಘ್ರ ಮುಕ್ತಾಯವನ್ನು ಸ್ವಾಗತಿಸಿದರು.

18. ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ಸಮಗ್ರ ರೀತಿಯಲ್ಲಿ ಚರ್ಚಿಸಲು 3 ನೇ ಭಾರತ-ಇಂಡೋನೇಷ್ಯಾ ಭದ್ರತಾ ಸಂವಾದವನ್ನು (ಐ ಎಸ್‌ ಡಿ) ಆಯೋಜಿಸುವ ಯೋಜನೆಯನ್ನು ನಾಯಕರು ಸ್ವಾಗತಿಸಿದರು. ಈ ಸಂವಾದದ ಮೂಲಕ, ಭಯೋತ್ಪಾದನೆ ನಿಗ್ರಹ, ಸಂಘಟಿತ ಮತ್ತು ಅಂತರರಾಷ್ಟ್ರೀಯ ಅಪರಾಧ, ಉದಯೋನ್ಮುಖ ತಂತ್ರಜ್ಞಾನ ಮತ್ತು ಸೈಬರ್ ಭದ್ರತೆ ಹಾಗೂ ರಕ್ಷಣಾ ಉದ್ಯಮ, ಕಡಲ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಗಮನಾರ್ಹವಾಗಿ ಹೆಚ್ಚಿಸಲು ಉಭಯ ದೇಶಗಳು ನಿರ್ಧರಿಸಿದವು.

19. ಸೈಬರ್ ವಲಯದಲ್ಲಿ ನೀತಿ ಸಂವಾದ, ಸಾಮರ್ಥ್ಯ ವೃದ್ಧಿ, ಉತ್ತಮ ಅಭ್ಯಾಸಗಳ ಹಂಚಿಕೆ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ), ಹಣಕಾಸು ತಂತ್ರಜ್ಞಾನ (ಫಿನ್‌ ಟೆಕ್), ಡಿಜಿಟಲ್ ಆರ್ಥಿಕತೆ, ಕೃತಕ ಬುದ್ಧಿಮತ್ತೆ, ಡಿಜಿಟಲ್ ಫೋರೆನ್ಸಿಕ್ಸ್ ಮತ್ತು ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿ ಆರ್‌ ಟಿ) ಸಹಕಾರ, ನಿರ್ಣಾಯಕ ಮಾಹಿತಿ ಮೂಲಸೌಕರ್ಯಗಳ ರಕ್ಷಣೆ ಮತ್ತು ಡಿಜಿಟಲ್ ಕೌಶಲ್ಯಗಳ ಸಾಮರ್ಥ್ಯ ವೃದ್ಧಿ ಕುರಿತು ತಜ್ಞರ ವಿನಿಮಯ ಸೇರಿದಂತೆ ಸಂಭಾವ್ಯ ಸಹಕಾರದ ಬಗ್ಗೆ ಮತ್ತಷ್ಟು ಚರ್ಚಿಸಲು ಉಭಯ ನಾಯಕರು ಒಪ್ಪಿಕೊಂಡರು.

ಆರ್ಥಿಕ ಮತ್ತು ವ್ಯಾಪಾರ ಸಹಕಾರ

20. ಆರ್ಥಿಕ ಮತ್ತು ವ್ಯಾಪಾರ ಸಹಕಾರವು ಭಾರತ-ಇಂಡೋನೇಷ್ಯಾದ ಕ್ರಿಯಾತ್ಮಕ ಸಂಬಂಧಗಳ ಪ್ರಮುಖ ಸ್ತಂಭವಾಗಿ ಮುಂದುವರಿದಿದೆ ಎಂದು ನಾಯಕರು ಒತ್ತಿಹೇಳಿದರು. ಭಾರತದ ‘ವಿಕಸಿತ ಭಾರತ 2047’ ದೃಷ್ಟಿಕೋನ ಮತ್ತು ಇಂಡೋನೇಷ್ಯಾದ ‘ಇಂಡೋನೇಷ್ಯಾ ಎಮಾಸ್ 2045’ ನಡುವಿನ ವ್ಯಾಪಕ ಆರ್ಥಿಕ ಮತ್ತು ಅಭಿವೃದ್ಧಿ ಸಮನ್ವಯಗಳನ್ನು ಹಾಗೂ ಹೆಚ್ಚಿನ ಆರ್ಥಿಕ ಅವಕಾಶಗಳನ್ನು ಮುಕ್ತಗೊಳಿಸಲು ಉಭಯ ದೇಶಗಳ ನಡುವಿನ ವಿಶಾಲ ಮತ್ತು ಆಳವಾದ ಆರ್ಥಿಕ ಏಕೀಕರಣದ ಪಾತ್ರವನ್ನು ಉಭಯ ನಾಯಕರು ಒಪ್ಪಿಕೊಂಡರು. ಇದಕ್ಕಾಗಿ, ಸಮತೋಲಿತ, ಪರಸ್ಪರ ಲಾಭದಾಯಕ ಮತ್ತು ಸುಗಮ ವ್ಯಾಪಾರ ವಾತಾವರಣಕ್ಕಾಗಿ ಆಸಿಯಾನ್ ಭಾರತ ಸರಕುಗಳ ವ್ಯಾಪಾರ ಒಪ್ಪಂದದ (AITIGA) ಪರಿಶೀಲನೆಯನ್ನು ಸಕಾಲದಲ್ಲಿ ಪೂರ್ಣಗೊಳಿಸಲು ನಾಯಕರು ಆಶಿಸಿದರು, ನಂತರ ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸಲು ಸಮಗ್ರ ಆಳವಾದ ದ್ವಿಪಕ್ಷೀಯ ವ್ಯಾಪಾರ ತೊಡಗಿಸಿಕೊಳ್ಳುವಿಕೆಯನ್ನು ಕೈಗೊಳ್ಳಲು ಬಯಸಿದರು.

21. 2026 ರಲ್ಲಿ ವ್ಯಾಪಾರ ಮತ್ತು ಹೂಡಿಕೆ ಮೇಲಿನ ಕಾರ್ಯಕಾರಿ ಗುಂಪಿನ (ಡಬ್ಲ್ಯುಜಿಟಿಐ) 2 ನೇ ಸಭೆ, 4 ನೇ ದ್ವೈವಾರ್ಷಿಕ ವ್ಯಾಪಾರ ಸಚಿವರ ವೇದಿಕೆ (ಬಿಟಿಎಂಎಫ್) ಮತ್ತು ಜಂಟಿ ಆರ್ಥಿಕ ಮತ್ತು ಹಣಕಾಸು ಸಂವಾದದ (ಇ ಎಫ್‌ ಡಿ) ಮೊದಲನೇ ಸಭೆಯನ್ನು ಆಯೋಜಿಸುವುದು ಸೇರಿದಂತೆ ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಆರ್ಥಿಕ ಕಾರ್ಯವಿಧಾನಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಮತ್ತು ಬಲಪಡಿಸುವ ಅಗತ್ಯವನ್ನು ಉಭಯ ನಾಯಕರು ಒತ್ತಿಹೇಳಿದರು. ಈ ಕಾರ್ಯವಿಧಾನಗಳು ಬಾಕಿ ಉಳಿದಿರುವ ಸುಂಕ ಮತ್ತು ಸುಂಕೇತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ, ಮಾರುಕಟ್ಟೆ ಪ್ರವೇಶವನ್ನು ಸುಧಾರಿಸುವಲ್ಲಿ, ವ್ಯಾಪಾರ ಮತ್ತು ಹೂಡಿಕೆಯನ್ನು ಸುಗಮಗೊಳಿಸುವಲ್ಲಿ ಮತ್ತು ಪ್ರತಿ ದೇಶದ ದೇಶೀಯ ನಿಯಮಗಳು ಹಾಗೂ ಅಭಿವೃದ್ಧಿ ಆದ್ಯತೆಗಳನ್ನು ಗೌರವಿಸುತ್ತಾ ಹಣಕಾಸು, ಡಿಜಿಟಲ್ ಆರ್ಥಿಕತೆ, ಉದ್ಯಮ ಮತ್ತು ಪೂರೈಕೆ ಸರಪಳಿಗಳಲ್ಲಿ ಸಹಕಾರವನ್ನು ಮುನ್ನಡೆಸುವಲ್ಲಿ ದೃಢವಾದ ಮತ್ತು ವ್ಯವಹಾರ-ಆಧಾರಿತ ಫಲಿತಾಂಶಗಳನ್ನು ಸಾಧಿಸಲು ಕೆಲಸ ಮಾಡಬೇಕು ಎಂದು ಅವರು ಗಮನಿಸಿದರು.

22. ದುರ್ಬಲತೆಗಳನ್ನು ಕಡಿಮೆ ಮಾಡಲು ಮತ್ತು ಆರ್ಥಿಕ ಭದ್ರತೆಯನ್ನು ಬಲಪಡಿಸಲು ದೇಶೀಯ ಉತ್ಪಾದನಾ ಕೈಗಾರಿಕೆಗಳ ಬೆಳವಣಿಗೆಗೆ ಅಗತ್ಯವಾದ ವೈವಿಧ್ಯಮಯ ಮತ್ತು ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳನ್ನು ನಿರ್ಮಿಸುವತ್ತ ಗಮನಹರಿಸಿ, ನಿರ್ಣಾಯಕ ಖನಿಜಗಳು ಮತ್ತು ಅಪರೂಪದ ಭೂಮಿಯ ಖನಿಜಗಳು ಸಹಯೋಗವನ್ನು ಮತ್ತಷ್ಟು ಬಲಪಡಿಸುವ ಮಹತ್ವವನ್ನು ಉಭಯ ನಾಯಕರು ಒತ್ತಿಹೇಳಿದರು. ಅಪರೂಪದ ಭೂಮಿ ಖನಿಜಗಳ ಕುರಿತು ಉಭಯ ದೇಶಗಳ ನಡುವೆ ಬೆಳೆಯುತ್ತಿರುವ ಸಹಯೋಗವನ್ನು ನಾಯಕರು ಶ್ಲಾಘಿಸಿದರು ಮತ್ತು ನಿಟ್ಟಿನಲ್ಲಿ ನಾನ್-ಫೆರಸ್ ಮೆಟೀರಿಯಲ್ಸ್ ಟೆಕ್ನಾಲಜಿ ಡೆವಲಪ್‌ಮೆಂಟ್ ಸೆಂಟರ್ (NFTDC), ಮಿಡ್‌ವೆಸ್ಟ್ ಲಿಮಿಟೆಡ್ ಮತ್ತು ಪಿಟಿ ಪೆರುಸಾಹಾನ್ ಮಿನರಲ್ ನ್ಯಾಶನಲ್ (PERMINAS) ನಡುವೆ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಸ್ವಾಗತಿಸಿದರು.

23. ಖನಿಜಗಳು ಮತ್ತು ಉಕ್ಕು ಪೂರೈಕೆ ಸರಪಳಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಸಹಕಾರದ ಕುರಿತಾದ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ನಾಯಕರು ಸ್ವಾಗತಿಸಿದರು. ಇಂಡೋನೇಷ್ಯಾದಲ್ಲಿ ಸ್ಟೇನ್‌ಲೆಸ್-ಸ್ಟೀಲ್ ಸ್ಲ್ಯಾಬ್ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸುವ ಸಾಧ್ಯತೆಯನ್ನು ಅನ್ವೇಷಿಸಲು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ಮತ್ತು ಪಿಟಿ ಕ್ರಾಕಟೌ ಸ್ಟೀಲ್ ನಡುವಿನ ಕಾರ್ಯತಂತ್ರದ ಜಂಟಿ ಉದ್ಯಮವನ್ನು ಅವರು ಸ್ವಾಗತಿಸಿದರು.

24. ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಬ್ಯಾಂಕ್ ಇಂಡೋನೇಷ್ಯಾ ನಡುವೆ ಸ್ಥಳೀಯ ಕರೆನ್ಸಿ ವಹಿವಾಟು (ಎಲ್‌ ಸಿ ಟಿ) ಮಾರ್ಗಸೂಚಿಗಳ ಕಾರ್ಯಾಚರಣೆಯ ಪ್ರಗತಿಯನ್ನು ಉಭಯ ನಾಯಕರು ಸ್ವಾಗತಿಸಿದರು ಮತ್ತು ಇದು ಭಾರತ ಮತ್ತು ಇಂಡೋನೇಷ್ಯಾ ನಡುವಿನ ವ್ಯಾಪಾರ ಮತ್ತು ಹೂಡಿಕೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ ಮತ್ತು ಉಭಯ ಆರ್ಥಿಕತೆಗಳ ನಡುವಿನ ಹಣಕಾಸು ಏಕೀಕರಣವನ್ನು ಆಳಗೊಳಿಸುತ್ತದೆ ಎಂದು ಗಮನಿಸಿದರು.

ಆರೋಗ್ಯ, ಫಾರ್ಮಾ, ಆಹಾರ ಮತ್ತು ಇಂಧನ ಭದ್ರತೆ

25. ಆಯಾ ದೇಶೀಯ ಕಾನೂನುಗಳು ಮತ್ತು ನಿಬಂಧನೆಗಳಿಗೆ ಅನುಗುಣವಾಗಿ, ಉಭಯ ದೇಶಗಳಿಂದ ಔಷಧಗಳು ಮತ್ತು ವೈದ್ಯಕೀಯ ಉತ್ಪನ್ನಗಳನ್ನು ತಲುಪಿಸಲು ಇಂಡೋನೇಷ್ಯಾದಲ್ಲಿ ಸಂಭಾವ್ಯ ಲಾಜಿಸ್ಟಿಕಲ್ ವಿತರಣಾ ವೇದಿಕೆಯಾಗಿ ರೆಡ್ ಅಂಡ್ ವೈಟ್ ಕೋಆಪರೇಟಿವ್ ನೆಟ್‌ವರ್ಕ್ ಮಹತ್ವವನ್ನು ಉಭಯ ನಾಯಕರು ಗಮನಿಸಿದರು.

26. ಆರೋಗ್ಯ ಕ್ಷೇತ್ರದ ಸಹಕಾರವನ್ನು ಬಲಪಡಿಸುವ ತಮ್ಮ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು ಮತ್ತು ವೃತ್ತಿಪರ ಆರೋಗ್ಯ ಕಾರ್ಯಪಡೆ ಅಭಿವೃದ್ಧಿಯ ಅನುಷ್ಠಾನ ವ್ಯವಸ್ಥೆಗೆ ಸಹಿ ಹಾಕಿರುವುದನ್ನು ಸ್ವಾಗತಿಸಿದರು. ಈ ವ್ಯವಸ್ಥೆಯು ವೃತ್ತಿಪರರಿಗೆ ಫೆಲೋಶಿಪ್ ಕಾರ್ಯಕ್ರಮಗಳು ಮತ್ತು ಕೌಶಲ್ಯ ವರ್ಧನೆ ಕಾರ್ಯಕ್ರಮಗಳ ಸುಗಮಗೊಳಿಸುವಿಕೆ, ವಿಶೇಷ ವೈದ್ಯಕೀಯ ಕ್ಷೇತ್ರಗಳಲ್ಲಿ ಪ್ರಾಯೋಗಿಕ ಕ್ಲಿನಿಕಲ್ ತರಬೇತಿ, ಆರೋಗ್ಯ ವೃತ್ತಿಪರರು ಮತ್ತು ತಜ್ಞರ ವಿನಿಮಯ, ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳಲ್ಲಿ ಉತ್ತಮ ಅಭ್ಯಾಸಗಳ ಹಂಚಿಕೆ ಮತ್ತು ಇತರ ಪರಸ್ಪರ ಒಪ್ಪಿಗೆಯ ಸಹಯೋಗದ ಚಟುವಟಿಕೆಗಳ ಮೂಲಕ ಸಹಕಾರವನ್ನು ಬಲಪಡಿಸುತ್ತದೆ. ಸಂಸ್ಕರಿಸಿದ ಆಹಾರ ಉತ್ಪನ್ನಗಳ ಕ್ಷೇತ್ರದಲ್ಲಿ ನಿಯಂತ್ರಕ ಸಹಕಾರದ ಕುರಿತು ಬಿಪಿಒಎಂ ಮತ್ತು ಎಫ್‌ ಎಸ್‌ ಎಸ್‌ ಎ ನಡುವಿನ ತಿಳುವಳಿಕಾ ಒಪ್ಪಂದದ ಶೀಘ್ರ ಮುಕ್ತಾಯಕ್ಕೆ ಅವರು ಒತ್ತಾಯಿಸಿದರು.

27. ಪ್ರತಿ ದೇಶದ ದೇಶೀಯ ನೀತಿಗಳನ್ನು ಗೌರವಿಸುತ್ತಾ, ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶದಲ್ಲಿ ಸಹಕಾರವನ್ನು ಆಳಗೊಳಿಸಲು ನಾಯಕರು ಒಪ್ಪಿಕೊಂಡರು. ಸುಸ್ಥಿರ ಮತ್ತು ಸ್ಥಿತಿಸ್ಥಾಪಕ ಆಹಾರ ವ್ಯವಸ್ಥೆಗಳನ್ನು ಬೆಂಬಲಿಸಲು ಆಹಾರ ಮತ್ತು ಕೃಷಿ ವ್ಯಾಪಾರ, ಜಂಟಿ ಅಧ್ಯಯನಗಳು, ನಾವೀನ್ಯತೆ ಮತ್ತು ಜ್ಞಾನ ಹಂಚಿಕೆ ಸೇರಿದಂತೆ ಕೃಷಿ ಮತ್ತು ಆಹಾರ ಭದ್ರತೆಯಲ್ಲಿ ಸಹಕಾರವನ್ನು ಹೆಚ್ಚಿಸುವ ಪ್ರಯತ್ನಗಳನ್ನು ಅವರು ಸ್ವಾಗತಿಸಿದರು. ಕೃಷಿ ಮತ್ತು ಪೂರಕ ಕ್ಷೇತ್ರಗಳ ಸಹಕಾರದ ಕುರಿತಾದ ತಿಳುವಳಿಕಾ ಒಪ್ಪಂದದ ಶೀಘ್ರ ಮುಕ್ತಾಯ ಮತ್ತು ಕಡಲ ಮತ್ತು ಮೀನುಗಾರಿಕೆ ಸಹಕಾರ ಕ್ಷೇತ್ರದ ತಿಳುವಳಿಕಾ ಒಪ್ಪಂದದ ಶೀಘ್ರ ನವೀಕರಣವನ್ನು ನಾಯಕರು ಎದುರು ನೋಡುತ್ತಿದ್ದಾರೆ.

28. ಔಷಧಗಳು ಮತ್ತು ವೈದ್ಯಕೀಯ ಉತ್ಪನ್ನಗಳ ಕ್ಷೇತ್ರದಲ್ಲಿ ನಡೆಯುತ್ತಿರುವ ಸಹಯೋಗವನ್ನು ನಾಯಕರು ಸ್ವಾಗತಿಸಿದರು. ವೈದ್ಯಕೀಯ ಉತ್ಪನ್ನಗಳ ನಿಯಂತ್ರಣ ಕ್ಷೇತ್ರದಲ್ಲಿ ಸಹಕಾರದ ಕುರಿತು ಸಿ ಡಿ ಎಸ್‌ ಸಿ ಮತ್ತು ಬಿಪಿಒಎಂ ನಡುವೆ ತಿಳುವಳಿಕಾ ಒಪ್ಪಂದಕ್ಕೆ ಸಹಿ... ಹಾಕಿರುವುದನ್ನು ಅವರು ಸ್ವಾಗತಿಸಿದರು.

29. ರಸಗೊಬ್ಬರ ವಲಯದಲ್ಲಿ ಸಹಕಾರವನ್ನು ಬಲಪಡಿಸಲು ನಾಯಕರು ಒಪ್ಪಿಕೊಂಡರು ಮತ್ತು ವಿಕಸನಗೊಳ್ಳುತ್ತಿರುವ ಜಾಗತಿಕ ಮಾರುಕಟ್ಟೆ ಪರಿಸ್ಥಿತಿಗಳ ನಡುವೆ ಸ್ಥಿರ, ಕೈಗೆಟುಕುವ ಮತ್ತು ವಿಶ್ವಾಸಾರ್ಹ ರಸಗೊಬ್ಬರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಮಹತ್ವವನ್ನು ಒತ್ತಿಹೇಳಿದರು.

30. ಪರಸ್ಪರ ಒಪ್ಪಿಗೆಯ ಮೇರೆಗೆ ಸಾಂಪ್ರದಾಯಿಕ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸೇರಿದಂತೆ ಇಂಧನ ಭದ್ರತೆಯ ಕ್ಷೇತ್ರದಲ್ಲಿ ಸಹಕಾರ, ಜಂಟಿ ಅಧ್ಯಯನಗಳು ಮತ್ತು ಸಾಮರ್ಥ್ಯ ವೃದ್ಧಿಯನ್ನು ಬಲಪಡಿಸುವ ತಮ್ಮ ಬದ್ಧತೆಯನ್ನು ಉಭಯ ಪಕ್ಷಗಳು ಪುನರುಚ್ಚರಿಸಿದವು ಮತ್ತು ಎಲ್‌ ಎನ್‌ ಜಿ, ಹಸಿರು ಹೈಡ್ರೋಜನ್, ಜೈವಿಕ ಇಂಧನ, ಸೌರ ಇಂಧನ ಮತ್ತು ಇಂಧನ ದಕ್ಷತೆಯ ತಂತ್ರಜ್ಞಾನಗಳಂತಹ ಕ್ಷೇತ್ರಗಳಲ್ಲಿ ವರ್ಧಿತ ಸಹಯೋಗವನ್ನು ಸ್ವಾಗತಿಸಿದವು.

ಮೂಲಸೌಕರ್ಯ ಮತ್ತು ಸಂಪರ್ಕ

31. ಉಭಯ ದೇಶಗಳ ನಡುವೆ ವರ್ಧಿತ ಕಡಲ ಮತ್ತು ವಾಯು ಸಂಪರ್ಕದ ಮಹತ್ವವನ್ನು ಉಭಯ ನಾಯಕರು ಒತ್ತಿಹೇಳಿದರು ಮತ್ತು ಹೆಚ್ಚಿನ ವಾಯು ಸಂಪರ್ಕ ಮತ್ತು ಬಂದರಿನಿಂದ ಬಂದರಿಗೆ ಸಂಪರ್ಕಕ್ಕೆ ಕರೆ ನೀಡಿದರು. ಉಭಯ ನಾಯಕರು 2026 ರ ದ್ವಿತೀಯಾರ್ಧದಲ್ಲಿ ಆಯೋಜಿಸಲಿರುವ ಅಂಡಮಾನ್-ಏಸೆ ಸಂಪರ್ಕದ (Andaman-Aceh Connectivity) 3 ನೇ ಜಂಟಿ ಕಾರ್ಯಪಡೆ ಸಭೆಯನ್ನು ಮತ್ತು ಕ್ರಿಯಾ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸುವುದನ್ನು ಎದುರು ನೋಡುತ್ತಿದ್ದಾರೆ.

32. ಸಬಾಂಗ್ ಬಂದರಿನ ಸಮಗ್ರ ಅಭಿವೃದ್ಧಿಯಲ್ಲಿ ಪಾಲುದಾರರಾಗಲು ಭಾರತದ ಆಸಕ್ತಿಯನ್ನು ಅಧ್ಯಕ್ಷ ಪ್ರಬೊವೊ ಸ್ವಾಗತಿಸಿದರು. ಕ್ರೂಸ್ ಮತ್ತು ಸಾಗರ-ಪ್ರವಾಸೋದ್ಯಮ ಸೌಲಭ್ಯಗಳು, ಕಡಲ ಕೈಗಾರಿಕೆಗಳು (ಹಡಗು ದುರಸ್ತಿ ಮತ್ತು ಹಡಗು ನಿರ್ಮಾಣ) ಮತ್ತು ಅಂಡಮಾನ್ ಸಮುದ್ರದಲ್ಲಿ ಕಡಲಾಚೆಯ ಇಂಧನ ಚಟುವಟಿಕೆಗಳನ್ನು ಬೆಂಬಲಿಸುವ ತೀರ-ಆಧಾರಿತ ಸೇವೆಗಳನ್ನು ಒಳಗೊಂಡಿರುವ ಇಂತಹ ಪಾಲುದಾರಿಕೆಯು — ಭಾರತದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಸುಮಾತ್ರಾ ದ್ವೀಪ ಪ್ರಾಂತ್ಯಗಳ ನಡುವೆ ಸಾಂಸ್ಥಿಕ, ಭೌತಿಕ, ಡಿಜಿಟಲ್ ಮತ್ತು ಜನರ ಹಾಗೂ ಸರಕುಗಳ ಹರಿವನ್ನು ಉತ್ತೇಜಿಸುತ್ತದೆ ಎಂದು ಉಭಯ ನಾಯಕರು ಗುರುತಿಸಿದರು. ಇದು ಹೂಡಿಕೆ, ಉದ್ಯೋಗ ಸೃಷ್ಟಿ, ತಂತ್ರಜ್ಞಾನ ವರ್ಗಾವಣೆ ಮತ್ತು ಹಂಚಿಕೆಯ ಪ್ರಾದೇಶಿಕ ಸಮೃದ್ಧಿಯನ್ನು ಉಂಟುಮಾಡಲು ಕೊಡುಗೆ ನೀಡುತ್ತದೆ. ಇಂಡೋನೇಷ್ಯಾದ ಅಭಿವೃದ್ಧಿ ಯೋಜನೆಗಳು ಮತ್ತು ಅನ್ವಯವಾಗುವ ನಿಯಮಗಳಿಗೆ ಅನುಗುಣವಾಗಿ, ಕಾಲಮಿತಿಯ ಮತ್ತು ಪರಸ್ಪರ ಲಾಭದಾಯಕ ರೀತಿಯಲ್ಲಿ ಯೋಜನೆಯ ವ್ಯಾಪ್ತಿ, ವಿಧಾನಗಳು ಮತ್ತು ಹಣಕಾಸು ಒದಗಿಸುವಿಕೆಯನ್ನು ರೂಪಿಸಲು ಉಭಯ ನಾಯಕರು ತಮ್ಮ ಸಂಬಂಧಿತ ಅಧಿಕಾರಿಗಳಿಗೆ ಕರೆ ನೀಡಿದರು.

33. ಡಿಜಿಟಲ್ ನೆಟ್‌ವರ್ಕ್‌ ಗಳ ಮೂಲಕ ಡಿಜಿಟಲ್ ಆರ್ಥಿಕತೆಯಲ್ಲಿ ಇಂಡೋನೇಷ್ಯಾದ ಎಂ ಎಸ್‌ ಎಂ ಗಳ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಭಾರತದ ಎನ್‌ ಡಿ ಸಿ) ಆರ್ಕಿಟೆಕ್ಚರ್ ಆಧಾರಿತ ಇಂಡೋನೇಷ್ಯಾ ಓಪನ್ ನೆಟ್‌ವರ್ಕ್ (ಐಒಎನ್) ಪ್ರಾರಂಭವನ್ನು ಉಭಯ ನಾಯಕರು ಸ್ವಾಗತಿಸಿದರು.

34. ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಬ್ಯಾಂಕ್ ಇಂಡೋನೇಷ್ಯಾ ನಡುವೆ ಒಪ್ಪಿಗೆಯಾದಂತೆ ಭಾರತ ಮತ್ತು ಇಂಡೋನೇಷ್ಯಾ ನಡುವೆ ಗಡಿಯಾಚೆಗಿನ ಕ್ಯೂಆರ್ ಪಾವತಿ ಸಂಪರ್ಕ ಅನುಷ್ಠಾನದ ಪ್ರಗತಿಯನ್ನು ಉಭಯ ನಾಯಕರು ಸ್ವಾಗತಿಸಿದರು. ಈ ಉಪಕ್ರಮಗಳು ಇಂಡೋನೇಷ್ಯಾ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಪಾವತಿ ಸಂಪರ್ಕವನ್ನು ಬಲಪಡಿಸುವಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಈ ಸಂಪರ್ಕವು ವಹಿವಾಟಿನ ದಕ್ಷತೆಯನ್ನು ಹೆಚ್ಚಿಸುತ್ತದೆ, ಹಣಕಾಸಿನ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುತ್ತದೆ ಮತ್ತು ವಿಶೇಷವಾಗಿ ಎಂ ಎಸ್‌ ಎಂ ಗಳು, ಪ್ರವಾಸೋದ್ಯಮ ಮತ್ತು ವಿದ್ಯಾರ್ಥಿಗಳನ್ನು ಬೆಂಬಲಿಸುವ ಮೂಲಕ ಸಮಗ್ರ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

35. ಭಾರತ ಮತ್ತು ಇಂಡೋನೇಷ್ಯಾ ನಡುವೆ ದೂರಸಂಪರ್ಕ ತಂತ್ರಜ್ಞಾನಗಳು ಮತ್ತು ಸೇವೆಗಳ ಕ್ಷೇತ್ರದಲ್ಲಿ ಸಹಕಾರದ ಕುರಿತಾದ ತಿಳುವಳಿಕಾ ಒಪ್ಪಂದದ ಮುಕ್ತಾಯವನ್ನು ಉಭಯ ನಾಯಕರು ಸ್ವಾಗತಿಸಿದರು. ಇದು ಸಮಗ್ರ ಆರ್ಥಿಕ ಬೆಳವಣಿಗೆ ಮತ್ತು ಡಿಜಿಟಲ್ ರೂಪಾಂತರವನ್ನು ಬೆಂಬಲಿಸಲು ದೂರಸಂಪರ್ಕ ತಂತ್ರಜ್ಞಾನಗಳು ಮತ್ತು ಡಿಜಿಟಲ್ ಸಂಪರ್ಕದಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುತ್ತದೆ.

ಜೀವವೈವಿಧ್ಯ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ

36. ಜೀವವೈವಿಧ್ಯ ಸಂರಕ್ಷಣೆ ಕ್ಷೇತ್ರದಲ್ಲಿ ಭಾರತ ವಹಿಸಿದ ಪ್ರಮುಖ ಪಾತ್ರವನ್ನು ಅಧ್ಯಕ್ಷ ಪ್ರಬೊವೊ ಶ್ಲಾಘಿಸಿದರು ಮತ್ತು ಪ್ರಧಾನಮಂತ್ರಿ ಮೋದಿಯವರ ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ ಅಲಯನ್ಸ್ (ಐಬಿಸಿಎ) ಉಪಕ್ರಮವನ್ನು ಶ್ಲಾಘಿಸಿದರು. ಸಂಬಂಧಿತ ದೇಶೀಯ ಕಾರ್ಯವಿಧಾನಕ್ಕೆ ಅನುಗುಣವಾಗಿ ಇಂಡೋನೇಷ್ಯಾ ಐಬಿಸಿಎಗೆ ಸೇರುವ ಉದ್ದೇಶವನ್ನು ಪ್ರಧಾನಮಂತ್ರಿ ಮೋದಿ ಸ್ವಾಗತಿಸಿದರು, ಅದೇ ಸಮಯದಲ್ಲಿ ಇಂಡೋನೇಷ್ಯಾದ ಉಪಕ್ರಮಗಳಾದ ವರ್ಲ್ಡ್ ಮ್ಯಾಂಗ್ರೋವ್ ಸೆಂಟರ್ (ಡಬ್ಲ್ಯುಎಂಸಿ) ಮತ್ತು ಇಂಟರ್ನ್ಯಾಷನಲ್ ಟ್ರಾಪಿಕಲ್ ಪೀಟ್‌ಲ್ಯಾಂಡ್ ಸೆಂಟರ್ (ಐಟಿಪಿಸಿ) ಅನ್ನು ಉಲ್ಲೇಖಿಸಿದರು. ಇದು ಜೀವವೈವಿಧ್ಯ, ಕಾಂಡ್ಲಾ ಮತ್ತು ಪೀಟ್‌ಲ್ಯಾಂಡ್ ಸಂರಕ್ಷಣೆಯ ಕುರಿತು ಜಾಗತಿಕ ಸಹಕಾರವನ್ನು ಬಲಪಡಿಸುವ ಹಂಚಿಕೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

37. ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಪತ್ತುಗಳಿಗೆ ಉಭಯ ದೇಶಗಳ ದುರ್ಬಲತೆಯನ್ನು ಗುರುತಿಸುತ್ತಾ, ನಾಯಕರು ವಿಪತ್ತು ನಿರ್ವಹಣಾ ಸಹಕಾರವನ್ನು ಬಲಪಡಿಸುವ ಅಗತ್ಯವನ್ನು ಒತ್ತಿಹೇಳಿದರು. ಉಭಯ ದೇಶಗಳ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಗಳ ನಡುವೆ ವಿಪತ್ತು ನಿರ್ವಹಣೆಯಲ್ಲಿ ಸಹಕಾರದ ಕುರಿತಾದ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಉಭಯ ನಾಯಕರು ಸ್ವಾಗತಿಸಿದರು. ಇದು ಮಾಹಿತಿ, ಅನುಭವಗಳು ಮತ್ತು ಉತ್ತಮ ಅಭ್ಯಾಸಗಳ ವಿನಿಮಯದ ಮೂಲಕ ಸಹಕಾರವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ, ಜೊತೆಗೆ ವಿಪತ್ತು ಪ್ರತಿಕ್ರಿಯೆ, ಸ್ಥಿತಿಸ್ಥಾಪಕತೆ, ತಗ್ಗಿಸುವಿಕೆ ಮತ್ತು ಸನ್ನದ್ಧತೆ, ಪರಿಣಾಮಕಾರಿ ವಿಪತ್ತು ತಗ್ಗಿಸುವಿಕೆ ಮತ್ತು ವಿಪತ್ತು ನಿರೋಧಕ ಮೂಲಸೌಕರ್ಯಕ್ಕಾಗಿ ದತ್ತಾಂಶ ಅನ್ವಯಕ್ಕಾಗಿ ಸಾಮರ್ಥ್ಯ ವೃದ್ಧಿ ಮತ್ತು ತರಬೇತಿಯನ್ನು ಒಳಗೊಂಡಿದೆ. ವಿಪತ್ತು ಅಪಾಯ ಕಡಿತ ಮತ್ತು ಸ್ಥಿತಿಸ್ಥಾಪಕತ್ವದಲ್ಲಿ ಅಂತರರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸುವಲ್ಲಿ ವಿಪತ್ತು ನಿರೋಧಕ ಮೂಲಸೌಕರ್ಯಗಳ ಒಕ್ಕೂಟದ (ಸಿ ಡಿ ಆರ್‌ ಐ) ಮಹತ್ವವನ್ನು ನಾಯಕರು ಗಮನಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನ, ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು ಸೇರಿದಂತೆ ಬಾಹ್ಯಾಕಾಶ

38. 2025ರ ಆಗಸ್ಟ್ 12 ರಂದು ವಿಜ್ಞಾನ ಮತ್ತು ತಂತ್ರಜ್ಞಾನದ ಉದ್ಘಾಟನಾ ಜಂಟಿ ಆಯೋಗದ ಸಭೆಯನ್ನು ಆಯೋಜಿಸಿರುವುದನ್ನು ಮತ್ತು ಭಾರತ ಮತ್ತು ಇಂಡೋನೇಷ್ಯಾ ನಡುವೆ ಸಂಶೋಧನೆ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಹಕಾರದ ಕುರಿತಾದ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ನಾಯಕರು ಸ್ವಾಗತಿಸಿದರು.

39. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ರಾಷ್ಟ್ರೀಯ ಸಂಶೋಧನೆ ಮತ್ತು ನಾವೀನ್ಯತೆ ಸಂಸ್ಥೆ (ಬ್ರಿನ್) ನಡುವೆ ನಡೆಯುತ್ತಿರುವ ಬಾಹ್ಯಾಕಾಶ ಸಹಕಾರ ಹಾಗೂ 2026 ರ ಜೂನ್ 24-25 ರಂದು ಭಾರತದ ಬೆಂಗಳೂರಿನಲ್ಲಿ ನಡೆದ ಬಾಹ್ಯಾಕಾಶ ಸಹಕಾರದ ಕುರಿತಾದ 6 ನೇ ಜಂಟಿ ಆಯೋಗದ ಸಭೆಯ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಭಾರತ ಮತ್ತು ಇಂಡೋನೇಷ್ಯಾ ನಡುವೆ ಶಾಂತಿಯುತ ಉದ್ದೇಶಗಳಿಗಾಗಿ ಬಾಹ್ಯಾಕಾಶದ ಅನ್ವೇಷಣೆ ಮತ್ತು ಬಳಕೆಯಲ್ಲಿನ ಸಹಕಾರದ ಚೌಕಟ್ಟು ಒಪ್ಪಂದದ ವಿಸ್ತರಣೆಗೆ ಸಹಿ ಹಾಕಿರುವುದನ್ನು ಅವರು ಸ್ವಾಗತಿಸಿದರು.

40. ಭಾರತದ ಉಪಗ್ರಹ ಮತ್ತು ಉಡಾವಣಾ ವಾಹನಗಳ ಕಾರ್ಯಕ್ರಮಗಳಿಗೆ ಹಾಗೂ ಬಿಲ್ಕ್ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ (ಟಿಟಿಸಿ) ಸೌಲಭ್ಯಗಳು ಮತ್ತು ಬ್ರಿನ್-ಇಸ್ರೋ ನಡುವಿನ ಸಹಯೋಗದ ವ್ಯವಸ್ಥೆಗಳ ಮೂಲಕ ಭಾರತದ ಗಗನಯಾನ್ ಮಿಷನ್‌‌ ಗೆ ಇಂಡೋನೇಷ್ಯಾ ನೀಡುತ್ತಿರುವ ನಿರಂತರ ಸಹಕಾರಕ್ಕಾಗಿ ಪ್ರಧಾನಮಂತ್ರಿ ಮೋದಿ ಅವರು ಅಧ್ಯಕ್ಷ ಪ್ರಬೊವೊ ಅವರಿಗೆ ಧನ್ಯವಾದ ಅರ್ಪಿಸಿದರು. ಇಂಡೋನೇಷ್ಯಾದ ಉಪಗ್ರಹಗಳ ಉಡಾವಣೆ ಮತ್ತು ಏಷ್ಯಾ ಮತ್ತು ಪೆಸಿಫಿಕ್‌ ನ ಬಾಹ್ಯಾಕಾಶ ವಿಜ್ಞಾನ ತಂತ್ರಜ್ಞಾನ ಶಿಕ್ಷಣ ಕೇಂದ್ರ (CSSTEAP) ಮತ್ತು ಆಸಿಯಾನ್-ಭಾರತ ಬಾಹ್ಯಾಕಾಶ ಸಹಕಾರ ಸೇರಿದಂತೆ ಇಂಡೋನೇಷ್ಯಾ ಅಧಿಕಾರಿಗಳ ತರಬೇತಿಗಾಗಿ ಭಾರತ ನೀಡಿದ ಬೆಂಬಲವನ್ನು ಅಧ್ಯಕ್ಷ ಪ್ರಬೊವೊ ಶ್ಲಾಘಿಸಿದರು. ಇಂಡೋನೇಷ್ಯಾದಲ್ಲಿ ಬಾಹ್ಯಾಕಾಶ ನಿಲ್ದಾಣ ಯೋಜನೆಯಲ್ಲಿ ಉಭಯ ದೇಶಗಳ ನಡುವಿನ ಬಾಹ್ಯಾಕಾಶ ಪರಿಸರ ವ್ಯವಸ್ಥೆಯ ಮಟ್ಟದ ಸಹಯೋಗವನ್ನು ಅಧ್ಯಕ್ಷ ಪ್ರಬೊವೊ ಸ್ವಾಗತಿಸಿದರು.

41. ಉಭಯ ದೇಶಗಳ ನಡುವೆ ಪರಮಾಣು ಶಕ್ತಿಯ ಶಾಂತಿಯುತ ಬಳಕೆಯಲ್ಲಿನ ಸಹಕಾರಕ್ಕಾಗಿ ನಡೆಯುತ್ತಿರುವ ಚರ್ಚೆಗಳನ್ನು ಉಭಯ ನಾಯಕರು ಗಮನಿಸಿದರು, ಇದು ಸಂಶೋಧನೆ, ಸಾಮರ್ಥ್ಯ ವೃದ್ಧಿ ಮತ್ತು ಪರಮಾಣು ಸುರಕ್ಷತೆಯಲ್ಲಿ ಸಹಯೋಗವನ್ನು ಮತ್ತಷ್ಟು ಬಲಪಡಿಸುತ್ತದೆ. ನಾಗರಿಕ ಪರಮಾಣು ಶಕ್ತಿಯ ಬಳಕೆಯನ್ನು ಉತ್ತೇಜಿಸುವ ಪ್ರಯತ್ನಗಳನ್ನು ಅವರು ಸ್ವಾಗತಿಸಿದರು, ಇದರಲ್ಲಿ ಸಂಬಂಧಿತ ನಿಯಂತ್ರಕ ಮತ್ತು ತಾಂತ್ರಿಕ ಪ್ರಗತಿಗಳು ಮತ್ತು ಕೈಗಾರಿಕೆ, ಪರಮಾಣು ಔಷಧ, ಕೃಷಿ ಮತ್ತು ಜಲ ನಿರ್ವಹಣೆಯಲ್ಲಿನ ಅನ್ವಯಗಳು ಸೇರಿವೆ.

ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಜನರ ನಡುವಿನ ವಿನಿಮಯ

42. ಭಾರತೀಯ ಪುರಾತತ್ವ ಇಲಾಖೆ (ಎ ಎಸ್‌ ಐ) ಯಿಂದ ಯೋಗ್ಯಕರ್ತಾದಲ್ಲಿರುವ ಯುನೆಸ್ಕೋ ವಿಶ್ವ ಪರಂಪರೆಯ ಪ್ರಂಬನನ್ ದೇವಸ್ಥಾನ ಸಂಕೀರ್ಣಗಳ ಪುನಃಸ್ಥಾಪನೆ ಮತ್ತು ಸಂರಕ್ಷಣೆಗಾಗಿ ಭಾರತ ಬೆಂಬಲಿತ ಯೋಜನೆಯ ಉದ್ಘಾಟನೆಯನ್ನು ಉಭಯ ನಾಯಕರು ಸ್ವಾಗತಿಸಿದರು. ಭಾರತದ ರಾಷ್ಟ್ರೀಯ ವಸ್ತುಸಂಗ್ರಹಾಲಯದಿಂದ ಸುಮಾರು ಕ್ರಿ.ಶ 860 ರ ಅವಧಿಯ ದೇವನಾಗರಿ ಲಿಪಿ ಮತ್ತು ಸಂಸ್ಕೃತ ಭಾಷೆಯಲ್ಲಿ ಕೆತ್ತಲಾದ ಮೂಲ ನಳಂದ ತಾಮ್ರದ ಫಲಕದ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿರುವುದನ್ನು ಇಂಡೋನೇಷ್ಯಾ ಶ್ಲಾಘಿಸಿತು, ಇದನ್ನು ಈಗ ಮುಯಾರಾ ಜಂಬಿಯ ಹೊಸ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ. ಆಗಸ್ಟ್ 2023 ರಲ್ಲಿ ವಾರಾಣಸಿಯಲ್ಲಿ ನಡೆದ ಜಿ20 ಸಾಂಸ್ಕೃತಿಕ ಸಚಿವರ ಸಭೆಯಲ್ಲಿ ಅಳವಡಿಸಿಕೊಳ್ಳಲಾದ "ಕಾಶಿ ಸಾಂಸ್ಕೃತಿಕ ಮಾರ್ಗ"ದಲ್ಲಿರುವ ತತ್ವಗಳನ್ನು ಅವರು ಸ್ಮರಿಸಿದರು ಮತ್ತು ಸಾಂಸ್ಕೃತಿಕ ಪರಂಪರೆಯ ವಿಷಯಗಳ ಕುರಿತು ಆಯಾ ಕಾನೂನುಗಳು ಮತ್ತು ಕಾರ್ಯವಿಧಾನಗಳಿಗೆ ಅನುಗುಣವಾಗಿ ಹಾಗೂ ಸೌಹಾರ್ದತೆ ಮತ್ತು ಪರಸ್ಪರ ಗೌರವದ ಮನೋಭಾವದಿಂದ ಉಭಯ ಸರ್ಕಾರಗಳ ನಡುವೆ ನಿರಂತರ ಸಮಾಲೋಚನೆಗಳ ಮಹತ್ವವನ್ನು ಗಮನಿಸಿದರು.

43. ರವೀಂದ್ರನಾಥ ಟ್ಯಾಗೋರ್ ಮತ್ತು ಕಿ ಹಜಾರ್ ದೇವಂತರಾ ಅವರ ಶಾಶ್ವತ ಬೌದ್ಧಿಕ ಪರಂಪರೆ ಮತ್ತು ಸಮಾನ ಶೈಕ್ಷಣಿಕ ದೃಷ್ಟಿಕೋನವನ್ನು ಉಭಯ ನಾಯಕರು ಗುರುತಿಸಿದರು, ಅವರ ವಿನಿಮಯಗಳು ಭಾರತ ಮತ್ತು ಇಂಡೋನೇಷ್ಯಾ ನಡುವಿನ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ದೃಷ್ಟಿಕೋನದ ಬಾಂಧವ್ಯಕ್ಕೆ ಪ್ರಮುಖ ಅಡಿಪಾಯ ಹಾಕಲು ಸಹಾಯ ಮಾಡಿತು ಮತ್ತು 2026–2027 ಅನ್ನು "ಭಾರತ-ಇಂಡೋನೇಷ್ಯಾ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ರಾಜತಾಂತ್ರಿಕತೆಯ ಟ್ಯಾಗೋರ್-ದೇವಂತರಾ ವರ್ಷ" ಎಂದು ಆಚರಿಸಲು ಅವರು ಒಪ್ಪಿಕೊಂಡರು. ಈ ಸ್ಮರಣಾರ್ಥವು 1927 ರಲ್ಲಿ ರವೀಂದ್ರನಾಥ ಟ್ಯಾಗೋರ್ ಅವರು ಇಂಡೋನೇಷ್ಯಾಕ್ಕೆ ನೀಡಿದ ಭೇಟಿಯ ಶತಮಾನೋತ್ಸವವನ್ನು ಉಭಯ ದೇಶಗಳಲ್ಲಿ ವರ್ಷವಿಡೀ ಜಂಟಿ ಸಾಂಸ್ಕೃತಿಕ, ಶೈಕ್ಷಣಿಕ, ಶೈಕ್ಷಣಿಕ ಮತ್ತು ಜನರ ನಡುವಿನ ಉಪಕ್ರಮಗಳ ಕಾರ್ಯಕ್ರಮದ ಮೂಲಕ ಆಚರಿಸಲಿದೆ.

44. ಜನರ ನಡುವಿನ ಬಾಂಧವ್ಯದ ಪ್ರೇರಕಶಕ್ತಿಯಾಗಿ ಪ್ರವಾಸೋದ್ಯಮದ ಸಾಮರ್ಥ್ಯವನ್ನು ಒತ್ತಿಹೇಳುತ್ತಾ, ಉಭಯ ನಾಯಕರು ಪ್ರವಾಸೋದ್ಯಮ ಸಹಕಾರವನ್ನು ಮತ್ತಷ್ಟು ಆಳಗೊಳಿಸಲು ಮತ್ತು ಉಭಯ ದೇಶಗಳ ನಡುವೆ ಪರಸ್ಪರ ಸಂದರ್ಶಕರ ಹರಿವನ್ನು ಹೆಚ್ಚಿಸಲು ತಮ್ಮ ಹಂಚಿಕೆಯ ಬದ್ಧತೆಯನ್ನು ವ್ಯಕ್ತಪಡಿಸಿದರು. ಪ್ರತಿ ಕಡೆಯಲ್ಲಿ ಪ್ರಯಾಣದ ಸುಲಭತೆ ಮತ್ತು ವೀಸಾ ಸುಗಮಗೊಳಿಸುವಿಕೆಯನ್ನು ಸುವ್ಯವಸ್ಥಿತಗೊಳಿಸುವ ಮಾರ್ಗಗಳನ್ನು ಮತ್ತಷ್ಟು ಚರ್ಚಿಸಲು ಅವರು ಒಪ್ಪಿಕೊಂಡರು.

45. ಶಿಕ್ಷಣ ಕ್ಷೇತ್ರದ ಕ್ಷೇತ್ರದಲ್ಲಿ ನಡೆಯುತ್ತಿರುವ ಸಹಕಾರವನ್ನು ನಾಯಕರು ಗಮನಿಸಿದರು ಮತ್ತು ವಿದ್ಯಾರ್ಥಿ ವಿನಿಮಯ ಸೇರಿದಂತೆ ಹೆಚ್ಚಿನ ಶೈಕ್ಷಣಿಕ ಮತ್ತು ಸಾಂಸ್ಥಿಕ ಸಹಯೋಗದ ಕಡೆಗೆ ಕೆಲಸ ಮಾಡಲು ಉಭಯ ಕಡೆಯವರನ್ನು ಪ್ರೋತ್ಸಾಹಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕ್ಷೇತ್ರದಲ್ಲಿ ಸಹಕಾರದ ಕುರಿತಾದ ತಿಳುವಳಿಕಾ ಒಪ್ಪಂದದ ಶೀಘ್ರ ಮುಕ್ತಾಯವನ್ನು ನಾಯಕರು ಪ್ರೋತ್ಸಾಹಿಸಿದರು.

46. ಉನ್ನತ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ತಮ್ಮ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು. ಶೈಕ್ಷಣಿಕ ಚಲನಶೀಲತೆ, ಜಂಟಿ ಸಂಶೋಧನೆ, ಜ್ಞಾನ ವಿನಿಮಯ, ಸಾಮರ್ಥ್ಯ ವೃದ್ಧಿ, ಸಾಂಸ್ಥಿಕ ಸಹಯೋಗ ಮತ್ತು ಮಾನವ ಬಂಡವಾಳ ಅಭಿವೃದ್ಧಿಯನ್ನು ಬೆಂಬಲಿಸುವ ಇತರ ಉಪಕ್ರಮಗಳ ಮೂಲಕ ಪರಸ್ಪರ ಪ್ರಯೋಜನಕಾರಿ ಪಾಲುದಾರಿಕೆಗಳ ವಿಸ್ತರಣೆಯನ್ನು ಅವರು ಪ್ರೋತ್ಸಾಹಿಸಿದರು. ಉನ್ನತ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರದ ಕುರಿತಾದ ತಿಳುವಳಿಕಾ ಒಪ್ಪಂದದ ಶೀಘ್ರ ಮುಕ್ತಾಯವನ್ನು ಅವರು ಎದುರು ನೋಡುತ್ತಿದ್ದಾರೆ. ಇಂಡೋನೇಷ್ಯಾದಲ್ಲಿ ಶಾಖಾ ಕ್ಯಾಂಪಸ್‌ ಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಹೆಸರಾಂತ ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳ ಬೆಳೆಯುತ್ತಿರುವ ಆಸಕ್ತಿಯನ್ನು ಅಧ್ಯಕ್ಷ ಪ್ರಬೊವೊ ಸ್ವಾಗತಿಸಿದರು. ಇಂಡೋನೇಷ್ಯಾದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಬೆಂಗಳೂರು ವತಿಯಿಂದ ಕ್ಯಾಂಪಸ್ ಸ್ಥಾಪಿಸುವ ಪ್ರಸ್ತಾವನೆಯನ್ನು ಉಭಯ ನಾಯಕರು ಸ್ವಾಗತಿಸಿದರು.

47. ಮಾನವ ಸಂಪನ್ಮೂಲ ಅಭಿವೃದ್ಧಿ, ಸುಧಾರಿತ ನಿರ್ವಹಣೆ ಮತ್ತು ಚುನಾವಣೆಗಳ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆಯ ನಿಟ್ಟಿನಲ್ಲಿ ಭಾರತದ ಚುನಾವಣಾ ಆಯೋಗ (ಇಸಿಐ) ಮತ್ತು ಇಂಡೋನೇಷ್ಯಾದ ಸಾಮಾನ್ಯ ಚುನಾವಣಾ ಆಯೋಗ (ಕೆಪಿಯು) ನಡುವೆ ನಡೆಯುತ್ತಿರುವ ಸಹಯೋಗವನ್ನು ನಾಯಕರು ಗಮನಿಸಿದರು. ಚುನಾವಣೆಗಳಲ್ಲಿ ನಿರ್ವಹಣೆ ಮತ್ತು ತಂತ್ರಜ್ಞಾನ ಬಳಕೆಯ ಕ್ಷೇತ್ರದಲ್ಲಿ ಸಹಕಾರದ ಕುರಿತು ಇಸಿಐ ಮತ್ತು ಕೆಪಿಯು ನಡುವೆ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಅವರು ಸ್ವಾಗತಿಸಿದರು.

48. ಭಾರತದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಮತ್ತು ಸ್ಟ್ಯಾಟಿಸ್ಟಿಕ್ಸ್ ಇಂಡೋನೇಷ್ಯಾ ನಡುವೆ ಅಧಿಕೃತ ಅಂಕಿಅಂಶಗಳು, ಸಾಮರ್ಥ್ಯ ವೃದ್ಧಿ ಮತ್ತು ಕಾರ್ಯತಂತ್ರದ ಸಹಯೋಗದ ಕ್ಷೇತ್ರದಲ್ಲಿ ಪ್ರಸ್ತಾವಿತ ಸಹಕಾರವನ್ನು ನಾಯಕರು ಸ್ವಾಗತಿಸಿದರು.

ಪ್ರಾದೇಶಿಕ ಮತ್ತು ಬಹುಪಕ್ಷೀಯ ಸಹಕಾರ

49. ಪ್ರಸ್ತುತ ಭೌಗೋಳಿಕ ರಾಜಕೀಯ ಪರಿಸ್ಥಿತಿ, ಆರ್ಥಿಕ ಮತ್ತು ಪೂರೈಕೆ ಸರಪಳಿ ಅಡೆತಡೆಗಳು ಮತ್ತು ಜಾಗತಿಕ ಪರಸ್ಪರ ಕಾಳಜಿಯ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ಅಂತರರಾಷ್ಟ್ರೀಯ ಕಾನೂನಿನ ಮೇಲೆ ಆಧಾರಿತವಾದ, ಪ್ರಾದೇಶಿಕ ಮತ್ತು ಅದರಾಚೆಗಿನ ಶಾಂತಿ, ಸ್ಥಿರತೆ, ಸಹಕಾರ ಮತ್ತು ಸಮೃದ್ಧಿಯಲ್ಲಿ ನೆಲೆಗೊಂಡಿರುವ ಹೆಚ್ಚು ಸಮತೋಲಿತ ಮತ್ತು ಪ್ರಾತಿನಿಧಿಕ ವಿಶ್ವ ವ್ಯವಸ್ಥೆಯ ಕಡೆಗೆ ವಿಶ್ವಸಂಸ್ಥೆ ಮತ್ತು ಅದರ ವಿಶೇಷ ಏಜೆನ್ಸಿಗಳು ಸೇರಿದಂತೆ ಬಹುಪಕ್ಷೀಯ ಮತ್ತು ಪ್ರಾದೇಶಿಕ ವೇದಿಕೆಗಳಲ್ಲಿ ಭಾರತ ಮತ್ತು ಇಂಡೋನೇಷ್ಯಾ ನಡುವೆ ಹೆಚ್ಚಿನ ಕಾರ್ಯತಂತ್ರ ಮತ್ತು ನಿಕಟ ಸಮನ್ವಯದ ಅಗತ್ಯವನ್ನು ಉಭಯ ನಾಯಕರು ಒತ್ತಿಹೇಳಿದರು. ಉಭಯ ಕಡೆಯವರು ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ತಮ್ಮ ಸಮಾನ ಗೌರವವನ್ನು ಪುನರುಚ್ಚರಿಸಿದರು ಮತ್ತು ಪ್ರಾದೇಶಿಕ ಮತ್ತು ಅದರಾಚೆಗಿನ ಶಾಂತಿ, ಸ್ಥಿರತೆ ಮತ್ತು ಪರಸ್ಪರ ಪ್ರಯೋಜನಕಾರಿ ಸಹಕಾರದ ಅಡಿಪಾಯವಾಗಿ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯತೆ, ಬಹುತ್ವ ಮತ್ತು ಕಾನೂನಿನ ನಿಯಮವನ್ನು ಎತ್ತಿಹಿಡಿಯುವ ಮಹತ್ವವನ್ನು ಒತ್ತಿಹೇಳಿದರು. ಇದಕ್ಕಾಗಿ, ಉಭಯ ನಾಯಕರು ದಕ್ಷಿಣ-ದಕ್ಷಿಣ ಸಹಕಾರದ ಹೆಚ್ಚುತ್ತಿರುವ ಪಾತ್ರವನ್ನು ಒಪ್ಪಿಕೊಂಡರು ಮತ್ತು ಜಾಗತಿಕ ದಕ್ಷಿಣದ ಧ್ವನಿಯನ್ನು ಬಲಪಡಿಸುವಲ್ಲಿ ಸಹಕಾರವನ್ನು ಹೆಚ್ಚಿಸಲು ಒಪ್ಪಿಕೊಂಡರು.

50. ಸಮಕಾಲೀನ ಭೌಗೋಳಿಕ ರಾಜಕೀಯ ವಾಸ್ತವತೆಗಳನ್ನು ಪ್ರತಿಬಿಂಬಿಸುವ ಮತ್ತು ಜಾಗತಿಕ ದಕ್ಷಿಣದ ಆಕಾಂಕ್ಷೆಗಳಿಗೆ ಸ್ಪಂದಿಸುವ ಅಂತರರಾಷ್ಟ್ರೀಯ ಸಂಸ್ಥೆಗಳ ಅರ್ಥಪೂರ್ಣ ಸುಧಾರಣೆಗಳ ಕಡೆಗೆ ಕೆಲಸ ಮಾಡಲು ಉಭಯ ನಾಯಕರು ಒಪ್ಪಿಕೊಂಡರು. ಪಠ್ಯ-ಆಧಾರಿತ ಮಾತುಕತೆಗಳು ಸೇರಿದಂತೆ ಒಳಗೊಳ್ಳುವ ಮತ್ತು ಸದಸ್ಯ ರಾಷ್ಟ್ರ-ಚಾಲಿತ ಅಂತರ-ಸರ್ಕಾರಿ ಮಾತುಕತೆಗಳ ಮೂಲಕ ಕಾಯಂ ಮತ್ತು ಕಾಯಮೇತರ ಸದಸ್ಯತ್ವದ ವಿಭಾಗಗಳೆರಡರಲ್ಲೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಮಗ್ರ ಸುಧಾರಣೆ ಮತ್ತು ವಿಸ್ತರಣೆಯ ಅಗತ್ಯವನ್ನು ಉಭಯ ಕಡೆಯವರು ಪುನರುಚ್ಚರಿಸಿದರು. ಬಹುಪಕ್ಷೀಯ ವೇದಿಕೆಗಳಲ್ಲಿ ಪರಸ್ಪರ ಬೆಂಬಲದ ಬಲವಾದ ಮನೋಭಾವವನ್ನು ಪ್ರತಿಬಿಂಬಿಸುತ್ತಾ, ಉಭಯ ನಾಯಕರು ವಿವಿಧ ಅಂತರರಾಷ್ಟ್ರೀಯ ಉಮೇದುವಾರಿಕೆಗಳಿಗೆ ಪರಸ್ಪರ ಬೆಂಬಲದ ಬಗ್ಗೆ ಚರ್ಚಿಸಿದರು.

51. ಜಾಗತಿಕ ಹಣಕಾಸು ಸಂರಚನೆಯಲ್ಲಿ ತರಬೇಕಾದ ಸುಧಾರಣೆಗಳ ಅಗತ್ಯತೆಯನ್ನು ಉಭಯ ನಾಯಕರು ಅಂಗೀಕರಿಸಿದರು. ಹಾಗೆಯೇ, ಮಾರುಕಟ್ಟೆಯೇತರ ಹಿತಾಸಕ್ತಿಗಳು, ಪೂರೈಕೆ ಸರಪಳಿಗಳ ಏಕಸ್ವಾಮ್ಯ ಹಾಗೂ ಮಾರುಕಟ್ಟೆ ಪ್ರವೇಶದ ಅನಿಶ್ಚಿತತೆಯ ಸವಾಲುಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ, ವಿಶ್ವ ವ್ಯಾಪಾರ ಸಂಸ್ಥೆಯ ಆಶಯದಂತೆ ನಿಯಮಬದ್ಧ, ನ್ಯಾಯಸಮ್ಮತ, ಮುಕ್ತ ಮತ್ತು ಸರ್ವಸಮ್ಮತ ಅಂತರರಾಷ್ಟ್ರೀಯ ವ್ಯಾಪಾರ ವ್ಯವಸ್ಥೆಯನ್ನು ಬಲಪಡಿಸುವ ಮಹತ್ವವನ್ನು ಅವರು ಪ್ರತಿಪಾದಿಸಿದರು.

52. 2026ರ ಭಾರತದ ಬ್ರಿಕ್ಸ್ ಅಧ್ಯಕ್ಷೀಯ ಜವಾಬ್ದಾರಿಗೆ ಇಂಡೋನೇಷ್ಯಾ ತನ್ನ ಪೂರ್ಣ ಬೆಂಬಲವನ್ನು ದೃಢೀಕರಿಸಿತು ಮತ್ತು ಬ್ರಿಕ್ಸ್ ಸದಸ್ಯ ದೇಶವಾಗಿ ಇಂಡೋನೇಷ್ಯಾದ ಪಾತ್ರವನ್ನು ಬೆಂಬಲಿಸಲು ಭಾರತ ತನ್ನ ಬದ್ಧತೆಯನ್ನು ಪ್ರಕಟಿಸಿತು. ನ್ಯಾಯಸಮ್ಮತ ಜಾಗತಿಕ ಆಡಳಿತ ಹಾಗೂ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸುವ ನಿಟ್ಟಿನಲ್ಲಿ, ಬ್ರಿಕ್ಸ್, ಜಿ20 ಮತ್ತು ಐ ಒ ಆರ್‌ ಎ ನಂತಹ ಪ್ರಮುಖ ಅಂತರರಾಷ್ಟ್ರೀಯ ವೇದಿಕೆಗಳ ಮೂಲಕ ರಾಜತಾಂತ್ರಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಉಭಯ ನಾಯಕರು ನಿರ್ಧರಿಸಿದರು.

53. 2018ರಲ್ಲಿ ಘೋಷಿಸಲಾದ ಇಂಡೋ-ಪೆಸಿಫಿಕ್‌ನಲ್ಲಿ ಭಾರತ-ಇಂಡೋನೇಷ್ಯಾ ಕಡಲ ಸಹಕಾರದ ಹಂಚಿಕೆಯ ದೃಷ್ಟಿಕೋನವನ್ನು ಸ್ಮರಿಸುತ್ತಾ, ಉಭಯ ನಾಯಕರು ಮುಕ್ತ, ಪಾರದರ್ಶಕ, ನಿಯಮ-ಆಧಾರಿತ, ಶಾಂತಿಯುತ, ಸಮೃದ್ಧ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್ ಪ್ರದೇಶದ ಕಡೆಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

54. ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಅಖಂಡತೆಗೆ ಪರಸ್ಪರ ಗೌರವ ನೀಡುವುದು, 1982ರ ವಿಶ್ವಸಂಸ್ಥೆಯ ಕಡಲ ಕಾನೂನು ಒಪ್ಪಂದ (UNCLOS) ಸೇರಿದಂತೆ ಅಂತರರಾಷ್ಟ್ರೀಯ ನಿಯಮಗಳಿಗೆ ಬದ್ಧರಾಗಿರುವುದು, ಹಾಗೂ ಕಡಲ ಮತ್ತು ವಾಯು ಸಂಚಾರದ ಸ್ವಾತಂತ್ರ್ಯವನ್ನು ಕಾಪಾಡುವ ಅಗತ್ಯತೆಯನ್ನು ಉಭಯ ನಾಯಕರು ಪ್ರತಿಪಾದಿಸಿದರು. ಯಾವುದೇ ರೀತಿಯ ಸೇನಾ ಬಲಪ್ರಯೋಗ ಅಥವಾ ಬೆದರಿಕೆಯನ್ನು ನಿರಾಕರಿಸುತ್ತಾ, ಶಾಂತಿಯುತ ಸಂವಾದ ಮತ್ತು ಪರಸ್ಪರ ಸಹಕಾರಕ್ಕೆ ಅವರು ಒತ್ತು ನೀಡಿದರು.

55. ಪ್ರಾದೇಶಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ವಿಕಸನಗೊಳ್ಳುತ್ತಿರುವ ಪ್ರಾದೇಶಿಕ ವ್ಯವಸ್ಥೆಯಲ್ಲಿ ಆಸಿಯಾನ್ ಐಕ್ಯತೆ ಮತ್ತು ಆಸಿಯಾನ್ ಕೇಂದ್ರಿತತೆಗೆ ಭಾರತ ನೀಡುತ್ತಿರುವ ನಿರಂತರ ಬೆಂಬಲವನ್ನು ಅಧ್ಯಕ್ಷ ಪ್ರಬೊವೊ ಶ್ಲಾಘಿಸಿದರು. ಆಯಾ ಸದಸ್ಯ ರಾಷ್ಟ್ರಗಳೊಂದಿಗಿನ ದ್ವಿಪಕ್ಷೀಯ ಬಾಂಧವ್ಯಕ್ಕೆ ಪೂರಕವಾಗಿರುವ 'ಆಸಿಯಾನ್-ಭಾರತ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವ'ವನ್ನು ಮತ್ತಷ್ಟು ಬಲಪಡಿಸಲು ಉಭಯ ಕಡೆಯವರು ಒಪ್ಪಿಗೆ ಸೂಚಿಸಿದರು. ಇದರೊಂದಿಗೆ, ಇಂಡೋನೇಷ್ಯಾದ 'ಶಾಂತಿ, ಸ್ಥಿರತೆ ಮತ್ತು ಪ್ರಾದೇಶಿಕ ಸಮೃದ್ಧಿಗಾಗಿ ಇಂಡೋ-ಪೆಸಿಫಿಕ್ ಕುರಿತ ಆಸಿಯಾನ್ ದೃಷ್ಟಿಕೋನ' (ಎಒಐಪಿ) ಮತ್ತು ಭಾರತದ 'ಇಂಡೋ-ಪೆಸಿಫಿಕ್ ಸಾಗರಗಳ ಉಪಕ್ರಮ' (ಐಪಿಒಐ) ನಡುವೆ ಸದೃಢ ಯೋಜನೆಗಳ ಮೂಲಕ ಪರಸ್ಪರ ಸಮನ್ವಯತೆಯನ್ನು ಆಳಗೊಳಿಸಲು ಉಭಯ ನಾಯಕರು ಕರೆ ನೀಡಿದರು.

56. ಭಾರತ-ಇಂಡೋನೇಷ್ಯಾ-ಆಸ್ಟ್ರೇಲಿಯಾ ನಡುವಿನ ಪರಿಣಾಮಕಾರಿ ತ್ರಿಪಕ್ಷೀಯ ಕಾರ್ಯವಿಧಾನದ ಸಹಕಾರವನ್ನು ಉಭಯ ನಾಯಕರು ಸ್ವಾಗತಿಸಿದರು. ಕಡಲ ವಲಯದ ಜಾಗೃತಿ (ಎಂಡಿಎ), ಕಡಲ ಮಾಲಿನ್ಯ ನಿಯಂತ್ರಣ, ನೀಲಿ ಆರ್ಥಿಕತೆ ಕ್ಷೇತ್ರಗಳಲ್ಲಿ ಹಾಗೂ ಪೂರ್ವ ಏಷ್ಯಾ ಶೃಂಗಸಭೆ (ಇಎಎಸ್), ಇಂಡೋ-ಪೆಸಿಫಿಕ್ ಸಾಗರಗಳ ಉಪಕ್ರಮ (ಐಪಿಒಐ) ಮತ್ತು ಹಿಂದೂ ಮಹಾಸಾಗರ ಪ್ರಾಂತೀಯ ದೇಶಗಳ ಒಕ್ಕೂಟದ (ಐ ಒ ಆರ್‌ ಎ) ಚೌಕಟ್ಟುಗಳ ಅಡಿಯಲ್ಲಿ ಜಂಟಿ ಸಹಯೋಗದ ಅವಕಾಶಗಳನ್ನು ಅನ್ವೇಷಿಸಲು ಅವರು ಒಪ್ಪಿಕೊಂಡರು.

57. ಪಶ್ಚಿಮ ಏಷ್ಯಾ/ಮಧ್ಯಪ್ರಾಚ್ಯದ ಪರಿಸ್ಥಿತಿ ಮತ್ತು ಅದರ ಜಾಗತಿಕ ಪರಿಣಾಮಗಳ ಕುರಿತು ಉಭಯ ನಾಯಕರು ತೀವ್ರ ಕಳವಳ ವ್ಯಕ್ತಪಡಿಸಿದರು. ಹಾಗೆಯೇ, 2026ರ ಜೂನ್ 17 ರಂದು ಸಹಿ ಮಾಡಲಾದ ತಿಳುವಳಿಕಾ ಒಪ್ಪಂದವನ್ನು ಅವರು ಸ್ವಾಗತಿಸಿದರು. ಉದ್ವಿಗ್ನತೆಯನ್ನು ಶಮನಗೊಳಿಸುವ ಮಹತ್ವವನ್ನು ಒತ್ತಿಹೇಳಿದ ನಾಯಕರು, ಎಲ್ಲಾ ಸಮಸ್ಯೆಗಳನ್ನು ಕೇವಲ ಶಾಂತಿಯುತ ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕವೇ ಬಗೆಹರಿಸಿಕೊಳ್ಳಬೇಕು ಎಂದು ಪುನರುಚ್ಚರಿಸಿದರು. ಇದರೊಂದಿಗೆ, ಅಂತರರಾಷ್ಟ್ರೀಯ ಕಾನೂನುಗಳು ಮತ್ತು UNCLOS ನಿಬಂಧನೆಗಳಿಗೆ ಅನುಗುಣವಾಗಿ ಮುಕ್ತ ನೌಕಾಯಾನದ ಹಕ್ಕನ್ನು ಗೌರವಿಸುವುದು, ಜಾಗತಿಕ ವಾಣಿಜ್ಯದ ಸುಗಮ ಹರಿವನ್ನು ಕಾಪಾಡುವುದು ಮತ್ತು ಹಾರ್ಮುಜ್ ಜಲಸಂಧಿಯ ಮೂಲಕ ಸಾರಿಗೆ ಮಾರ್ಗವನ್ನು ಮುಕ್ತವಾಗಿಡುವುದು ಅತ್ಯಗತ್ಯ ಎಂಬ ಸಮಾನ ಅಭಿಪ್ರಾಯವನ್ನು ಅವರು ಹಂಚಿಕೊಂಡರು.

58. ತಮ್ಮ ಈ ಅಧಿಕೃತ ಭೇಟಿಯ ಸಂದರ್ಭದಲ್ಲಿ ತಮಗೆ ಮತ್ತು ತಮ್ಮ ನಿಯೋಗಕ್ಕೆ ನೀಡಿದ ಆತ್ಮೀಯ ಸ್ವಾಗತ ಹಾಗೂ ಅತ್ಯುತ್ತಮ ಆತಿಥ್ಯಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಧ್ಯಕ್ಷ ಪ್ರಬೊವೊ ಸುಬ್ಯಾಂಟೊ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಇಂಡೋನೇಷ್ಯಾದ ಸ್ನೇಹಪರ ಜನತೆಗೆ ಸಮೃದ್ಧಿ ಮತ್ತು ಪ್ರಗತಿಯನ್ನು ಹಾರೈಸಿದ ಪ್ರಧಾನಮಂತ್ರಿ ಮೋದಿ ಅವರು, ಪರಸ್ಪರ ಅನುಕೂಲಕರ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಅಧ್ಯಕ್ಷ ಪ್ರಬೊವೊ ಸುಬ್ಯಾಂಟೊ ಅವರಿಗೆ ಹೃತ್ಪೂರ್ವಕ ಆಹ್ವಾನವನ್ನು ನೀಡಿದರು.

 

*****

 


(रिलीज़ आईडी: 2282349) आगंतुक पटल : 7
इस विज्ञप्ति को इन भाषाओं में पढ़ें: Malayalam , English , Urdu , हिन्दी , Bengali , Assamese , Gujarati , Odia , Tamil , Telugu