ರೈಲ್ವೇ ಸಚಿವಾಲಯ
azadi ka amrit mahotsav

ಭಾರತೀಯ ರೈಲ್ವೆಯು ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಜೂನ್ 2026ರಲ್ಲಿ ಸರಕು ಸಾಗಣೆಯಲ್ಲಿ 4% ಮತ್ತು ಪ್ರಯಾಣಿಕರ ಸಂಚಾರದಲ್ಲಿ ಸ್ಥಿರ ಬೆಳವಣಿಗೆ ದಾಖಲು


ದೇಶದ ಬೆಳವಣಿಗೆಯ ಇಂಜಿನ್ ಆಗಿ ತನ್ನ ಪಾತ್ರವನ್ನು ಬಲಪಡಿಸುತ್ತಾ, ಜೂನ್ 2026 ರಲ್ಲಿ 142 ದಶಲಕ್ಷ  ಟನ್ ಸರಕು ಸಾಗಿಸಿದ ಭಾರತೀಯ ರೈಲ್ವೆ

ಕಳೆದ ತಿಂಗಳು ರಸಗೊಬ್ಬರಗಳ ಲೋಡಿಂಗ್ 19.1%, ಇತರ ಸರಕುಗಳು 17.3% ರಷ್ಟು 17.3%, ಕಬ್ಬಿಣದ ಅದಿರು 9.4%ರಷ್ಟು ಮತ್ತು ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆ 7%ರಷ್ಟು ಹೆಚ್ಚಳ

2026-27ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 419 ದಶಲಕ್ಷ ಟನ್ ಗಳಿಗಿಂತ ಹೆಚ್ಚು ಸರಕು ಸಾಗಣೆ; ಇದು 2025-26ರ ಮೊದಲ ತ್ರೈಮಾಸಿಕದ ಸಾಧನೆಯನ್ನು ಮೀರಿಸಿದೆ

ಬೇಸಿಗೆಯ ಅವಧಿಯಲ್ಲಿ ಸಾರ್ವಜನಿಕರಿಗೆ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಕೈಗೆಟುಕುವ ಪ್ರಯಾಣವನ್ನು ಒದಗಿಸಿದ 164 ವಂದೇ ಭಾರತ್ ಮತ್ತು 72 ಅಮೃತ್ ಭಾರತ್ ಸೇವೆಗಳು; ಸುಮಾರು 64 ಕೋಟಿಗೆ ತಲುಪಿದ ಪ್ರಯಾಣಿಕರ ಸಂಖ್ಯೆ

प्रविष्टि तिथि: 02 JUL 2026 3:29PM by PIB Bengaluru

ಭಾರತೀಯ ರೈಲ್ವೆಯು ಜೂನ್ 2026 ರ ಅವಧಿಯಲ್ಲಿ ಸರಕು ಸಾಗಣೆ ಮತ್ತು ಪ್ರಯಾಣಿಕರ ಸೇವೆಗಳೆರಡರಲ್ಲೂ ಸ್ಥಿರವಾದ ಬೆಳವಣಿಗೆಯನ್ನು ದಾಖಲಿಸುವ ಮೂಲಕ ತನ್ನ ಬಲವಾದ ಕಾರ್ಯಾಚರಣೆಯ ಪ್ರದರ್ಶನವನ್ನು ಮುಂದುವರೆಸಿದೆ. ಹೆಚ್ಚಿನ ಸರಕು ಸಾಗಣೆ, ಹೆಚ್ಚಿದ ಪ್ರಯಾಣಿಕರ ಸಂಚಾರ ಮತ್ತು ಪ್ರಯಾಣಿಕರ ಸೇವೆಗಳ ನಿರಂತರ ವಿಸ್ತರಣೆಯು, ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು, ಲಾಜಿಸ್ಟಿಕ್ಸ್ (ಸಾಗಾಣಿಕೆ) ವ್ಯವಸ್ಥೆಯನ್ನು ಬಲಪಡಿಸಲು ಮತ್ತು ದೇಶಾದ್ಯಂತ ಅನುಕೂಲಕರ ಪ್ರಯಾಣದ ಆಯ್ಕೆಗಳನ್ನು ಒದಗಿಸಲು ಭಾರತೀಯ ರೈಲ್ವೆ ಕೈಗೊಳ್ಳುತ್ತಿರುವ ನಿರಂತರ ಪ್ರಯತ್ನಗಳನ್ನು ಬಿಂಬಿಸುತ್ತದೆ.

ಸರಕು ಸಾಗಣೆಯಲ್ಲಿ ಭರ್ಜರಿ ಬೆಳವಣಿಗೆ

ಭಾರತೀಯ ರೈಲ್ವೆಯು ಜೂನ್ 2026 ರಲ್ಲಿ 142.21 ದಶಲಕ್ಷ ಟನ್ ಸರಕನ್ನು ಸಾಗಿಸಿದೆ. ಕಳೆದ ವರ್ಷದ ಇದೇ ತಿಂಗಳಲ್ಲಿ ಇದು 136.71 ದಶಲಕ್ಷ ಟನ್ ಹೋಲಿಸಿದರೆ, ಈ ಬಾರಿ ಶೇಕಡಾ 4 ರಷ್ಟು ಬೆಳವಣಿಗೆ ದಾಖಲಾಗಿದೆ. ಸರಕು ಸಾಗಣೆಯ ಆದಾಯದಲ್ಲೂ ಸಹ ಆರೋಗ್ಯಕರ ಬೆಳವಣಿಗೆ ದಾಖಲಾಗಿದೆ, ಜೂನ್ 2025 ಕ್ಕೆ ಹೋಲಿಸಿದರೆ ಶೇಕಡಾ 3 ರಷ್ಟು ಹೆಚ್ಚಳದೊಂದಿಗೆ ಸುಮಾರು ₹430 ಕೋಟಿ ಹೆಚ್ಚುವರಿ ಆದಾಯ ಗಳಿಸಿದೆ.

ಈ ತಿಂಗಳಿನಲ್ಲಿ ಹಲವಾರು ಪ್ರಮುಖ ಸರಕುಗಳ ಸಾಗಣೆಯಲ್ಲಿ ಉತ್ತೇಜನಕಾರಿ ಬೆಳವಣಿಗೆ ಕಂಡುಬಂದಿದೆ. ರಸಗೊಬ್ಬರ ಲೋಡಿಂಗ್ ಶೇಕಡಾ 19.1 ರಷ್ಟು, ಇತರ ಸರಕುಗಳು   ಶೇಕಡಾ 17.3 ರಷ್ಟು, ಕಬ್ಬಿಣದ ಅದಿರು ಶೇಕಡಾ 9.4 ರಷ್ಟು, ದೇಶೀಯ ಕಲ್ಲಿದ್ದಲು ಶೇಕಡಾ 4.9 ರಷ್ಟು, ಒಟ್ಟು ಕಲ್ಲಿದ್ದಲು ಶೇಕಡಾ 3.6 ರಷ್ಟು ಮತ್ತು ಕ್ಲಿಂಕರ್ ಶೇಕಡಾ 7.2 ರಷ್ಟು ಹೆಚ್ಚಳವಾಗಿದ್ದು, ಇದು ದೇಶದ ಪ್ರಮುಖ ಆರ್ಥಿಕ ವಲಯಗಳಿಂದ ಇರುವ ನಿರಂತರ ಬೇಡಿಕೆಯನ್ನು ತೋರಿಸುತ್ತದೆ.

ಜೂನ್ 2026 ರ ಈ ಅತ್ಯುತ್ತಮ ಕಾರ್ಯಕ್ಷಮತೆಯು, 2026-27ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) ದಾಖಲಾದ ನಿರಂತರ ಬೆಳವಣಿಗೆಯ ಮುಂದುವರಿದ ಭಾಗವಾಗಿದೆ. ಈ ತ್ರೈಮಾಸಿಕದಲ್ಲಿ ಭಾರತೀಯ ರೈಲ್ವೆಯು 419.08 ದಶಲಕ್ಷ ಟನ್ ಸರಕನ್ನು ಸಾಗಿಸಿದ್ದು, 2025-26ರ ಇದೇ ಅವಧಿಯಲ್ಲಿ ಇದು 413.05 ದಶಲಕ್ಷ ಟನ್ ಆಗಿತ್ತು. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ತ್ರೈಮಾಸಿಕದಲ್ಲಿ ಕಬ್ಬಿಣದ ಅದಿರು ಲೋಡಿಂಗ್ ಶೇಕಡಾ 7.44, ಕ್ಲಿಂಕರ್ ಶೇಕಡಾ 6.54 ಮತ್ತು ಇತರ ಸರಕುಗಳ ಲೋಡಿಂಗ್ ಶೇಕಡಾ 12.16 ರಷ್ಟು ಬೆಳವಣಿಗೆಯನ್ನು ಕಂಡಿದೆ.

ಬೇಸಿಗೆಯ ವಿಸ್ತೃತವಾದ ಅವಧಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳ ಹೆಚ್ಚಿದ ಅಗತ್ಯವನ್ನು ಪೂರೈಸಲು, ಭಾರತೀಯ ರೈಲ್ವೆಯು ದೇಶೀಯ ಕಲ್ಲಿದ್ದಲು ಸಾಗಣೆಯನ್ನು ಚುರುಕುಗೊಳಿಸಿದೆ. ಜೂನ್ 2025 ಕ್ಕೆ ಹೋಲಿಸಿದರೆ ಜೂನ್ 2026 ರಲ್ಲಿ ವಿದ್ಯುತ್ ಸ್ಥಾವರಗಳಿಗೆ ಶೇಕಡಾ 7 ರಷ್ಟು ಹೆಚ್ಚು ಕಲ್ಲಿದ್ದಲನ್ನು ಪೂರೈಸಲಾಗಿದ್ದು,  ಇದರಿಂದಾಗಿ ದೇಶಾದ್ಯಂತ ಅಡೆತಡೆಯಿಲ್ಲದ ವಿದ್ಯುತ್ ಉತ್ಪಾದನೆಗೆ ಬೆಂಬಲ ನೀಡಿದೆ.

ಪ್ರಯಾಣಿಕರ ಸಂಚಾರದಲ್ಲಿ ನಿರಂತರ ಪ್ರಗತಿ

ಜೂನ್ 2026 ರಲ್ಲಿ ಪ್ರಯಾಣಿಕರ ಸಂಚಾರದಲ್ಲೂ ಸ್ಥಿರವಾದ ಬೆಳವಣಿಗೆ ಕಂಡುಬಂದಿದೆ. ಕಳೆದ ವರ್ಷದ ಇದೇ ತಿಂಗಳಲ್ಲಿ 62.37 ಕೋಟಿ ಪ್ರಯಾಣಿಕರನ್ನು ಸಾಗಿಸಿದ್ದರೆ, ಈ ಬಾರಿ ಭಾರತೀಯ ರೈಲ್ವೆಯು 63.81 ಕೋಟಿ ಪ್ರಯಾಣಿಕರನ್ನು  ಸಾಗಿಸಿವೆ .

ಕಡಿಮೆ ಮತ್ತು ದೂರದ ಪ್ರಯಾಣವನ್ನು ಒಳಗೊಂಡಿರುವ  ಉಪನಗರವಲ್ಲದ (ನಾನ್-ಸಬರ್ಬನ್) ವಿಭಾಗವು ಶೇಕಡಾ 3.9 ರಷ್ಟು ಬೆಳವಣಿಗೆ ದಾಖಲಿಸಿದ್ದು, ಪ್ರಯಾಣಿಕರ ಸಂಖ್ಯೆ 28.90 ಕೋಟಿಯಿಂದ 30.04 ಕೋಟಿಗೆ ಏರಿಕೆಯಾಗಿದೆ.  ಉಪನಗರ (ಸಬರ್ಬನ್) ವಿಭಾಗವು ಸಹ ಶೇಕಡಾ 0.9 ರಷ್ಟು ಧನಾತ್ಮಕ ಬೆಳವಣಿಗೆಯನ್ನು ದಾಖಲಿಸಿದ್ದು, ಪ್ರಯಾಣಿಕರ ಸಂಖ್ಯೆ 33.46 ಕೋಟಿಯಿಂದ 33.77 ಕೋಟಿಗೆ ಹೆಚ್ಚಾಗಿದೆ.

ಆಧುನಿಕ ಪ್ರಯಾಣಿಕ ಸೇವೆಗಳ ವಿಸ್ತರಣೆ

ಭಾರತೀಯ ರೈಲ್ವೆಯು ಪ್ರೀಮಿಯಂ ರೈಲು ಕಾರ್ಯಾಚರಣೆಗಳ ವಿಸ್ತರಣೆಯೊಂದಿಗೆ ಪ್ರಯಾಣಿಕರ ಸೇವೆಗಳನ್ನು ಆಧುನೀಕರಿಸುವುದನ್ನು ಮುಂದುವರೆಸಿದೆ. ಇತ್ತೀಚೆಗೆ ಹೌರಾ ಮತ್ತು ಕಾಮಾಕ್ಯ ನಡುವೆ ಆರಂಭಿಸಲಾದ ವಂದೇ ಭಾರತ್ ಸ್ಲೀಪರ್ ಸೇವೆ ಸೇರಿದಂತೆ ವಂದೇ ಭಾರತ್ ಸೇವೆಗಳ ಸಂಖ್ಯೆ 164 ಕ್ಕ್ಕೆ ಏರಿದೆ. ಅಮೃತ್ ಭಾರತ್ ರೈಲು ಸೇವೆಗಳ ಸಂಖ್ಯೆ 72 ಕ್ಕೆ ತಲುಪಿದ್ದು, ಜೂನ್ 2026 ರ ಅವಧಿಯಲ್ಲಿ ನಾಲ್ಕು ಹೊಸ ಸೇವೆಗಳಿಗೆ ಚಾಲನೆ ನೀಡಲಾಗಿದೆ. ಇದು ದೇಶಾದ್ಯಂತ ಕೈಗೆಟುಕುವ ಮತ್ತು ಆಧುನಿಕ ದೂರದ ಪ್ರಯಾಣದ ಸಂಪರ್ಕವನ್ನು ಮತ್ತಷ್ಟು ಬಲಪಡಿಸಿದೆ.

ಸರಕು ಸಾಗಣೆ ಮತ್ತು ಪ್ರಯಾಣಿಕರ ಸಂಚಾರದಲ್ಲಿನ ಈ ನಿರಂತರ ಬೆಳವಣಿಗೆಯು ಸಮರ್ಥ ಸಾಗಾಣಿಕೆ, ವಿಶ್ವಾಸಾರ್ಹ ಪ್ರಯಾಣಿಕ ಸೇವೆಗಳು ಮತ್ತು ಆಧುನಿಕ ರೈಲ್ವೆ ಮೂಲಸೌಕರ್ಯವನ್ನು ಒದಗಿಸುವಲ್ಲಿ ಭಾರತೀಯ ರೈಲ್ವೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಸಾಮರ್ಥ್ಯದ ನಿರಂತರ ಹೆಚ್ಚಳ, ಸುಧಾರಿತ ಕಾರ್ಯಾಚರಣಾ ದಕ್ಷತೆ ಮತ್ತು ಗ್ರಾಹಕಸ್ನೇಹಿ ಉಪಕ್ರಮಗಳ ಮೂಲಕ ಭಾರತೀಯ ರೈಲ್ವೆಯು ದೇಶದ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುವ ಜೊತೆಗೆ, ದೇಶಾದ್ಯಂತ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಪ್ರಯಾಣಿಕ ಸ್ನೇಹಿ ಸಾರಿಗೆ ಸೇವೆಗಳನ್ನು ನೀಡಲು ಬದ್ಧವಾಗಿದೆ.

 

*****


(रिलीज़ आईडी: 2280360) आगंतुक पटल : 13
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Gujarati , Odia , Tamil , Telugu