ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಷ್ಟ್ರೀಯ ವೈದ್ಯರ ದಿನದಂದು ವೈದ್ಯರಿಗೆ ಶುಭ ಕೋರಿದ ಪ್ರಧಾನಮಂತ್ರಿ


'ಆಪರೇಷನ್ ಅಮಿಸ್ಟಾಡ್' ಭಾಗವಾಗಿ ವೆನೆಜುವೆಲಾದಲ್ಲಿ ಅವಿಶ್ರಾಂತವಾಗಿ ಸೇವೆ ಸಲ್ಲಿಸುತ್ತಿರುವ ಭಾರತದ ಎಲ್ಲಾ ವೈದ್ಯಕೀಯ ವೃತ್ತಿಪರರನ್ನು ಶ್ಲಾಘಿಸಿದ ಪ್ರಧಾನಮಂತ್ರಿ

प्रविष्टि तिथि: 01 JUL 2026 12:22PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ದೇಶಾದ್ಯಂತದ ವೈದ್ಯರಿಗೆ ಶುಭ ಹಾರೈಸಿದರು ಮತ್ತು ರಾಷ್ಟ್ರದ ಪ್ರಗತಿಗಾಗಿ ಅವರ ಅಚಲ ಸೇವೆ, ಸಹಾನುಭೂತಿ ಮತ್ತು ಬದ್ಧತೆಗೆ ಕೃತಜ್ಞತೆ ಸಲ್ಲಿಸಿದರು.

ವೈದ್ಯರ ಕಠಿಣ ಪರಿಶ್ರಮ, ಸಹಾನುಭೂತಿ ಮತ್ತು ಸಮರ್ಪಣಾ ಮನೋಭಾವವು ಭಾರತದ ಆರೋಗ್ಯ  ವ್ಯವಸ್ಥೆಯ ಬೆನ್ನೆಲುಬಾಗಿದೆ ಎಂದು ಶ್ರೀ ಮೋದಿ ಹೇಳಿದರು. ಅತ್ಯಂತ ಕಠಿಣ ಸಂದರ್ಭಗಳಲ್ಲೂ ಅವರ  ದಣಿವರಿಯದ ಸೇವೆಗಳು ದೇಶದಾದ್ಯಂತ ಅಸಂಖ್ಯಾತ ಜನರ ವಿಶ್ವಾಸ ಮತ್ತು ಕೃತಜ್ಞತೆಯನ್ನು ಗಳಿಸಿವೆ ಎಂದು ಉಲ್ಲೇಖಿಸಿದರು.

ಕಳೆದ ದಶಕದಲ್ಲಿ ಆರೋಗ್ಯ ವಲಯದಲ್ಲಿ ಸಾಧಿಸಿದ ಪ್ರಗತಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಭಾರತವು ತನ್ನ ಆರೋಗ್ಯ ರಕ್ಷಣಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಗಣನೀಯ ಸಾಧನೆ ಮಾಡಿದೆ ಎಂದು ಹೇಳಿದರು. ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ, ಹಾಗೆಯೇ ಪದವಿ  ಮತ್ತು ಸ್ನಾತಕೋತ್ತರ ಪದವಿ  ವೈದ್ಯಕೀಯ ಸೀಟುಗಳು ಗಣನೀಯವಾಗಿ ವಿಸ್ತರಿಸಲ್ಪಟ್ಟಿವೆ ಎಂದು ಅವರು ಹೇಳಿದರು. ಈ ಅಭೂತಪೂರ್ವ ಬೆಳವಣಿಗೆಯು ಮಹತ್ವಾಕಾಂಕ್ಷಿ ವೈದ್ಯರಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುತ್ತಿದೆ, ಆರೋಗ್ಯ ರಕ್ಷಣಾ ಕಾರ್ಯಪಡೆಯನ್ನು ಬಲಪಡಿಸುತ್ತಿದೆ ಮತ್ತು ಗುಣಮಟ್ಟದ ವೈದ್ಯಕೀಯ ಸೇವೆಯು ದೇಶದ ಪ್ರತಿಯೊಂದು ಮೂಲೆಗೂ ತಲುಪುವುದನ್ನು ಖಚಿತಪಡಿಸುತ್ತಿದೆ ಎಂದು ಹೇಳಿದರು.

'ಆಪರೇಷನ್ ಅಮಿಸ್ಟಾಡ್'ನ  ಭಾಗವಾಗಿ ವೆನೆಜುವೆಲಾದಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರ ಸಮರ್ಪಣಾ ಮನೋಭಾವವನ್ನು ಶ್ರೀ ಮೋದಿ ಅವರು ಶ್ಲಾಘಿಸಿದರು. ಕಠಿಣ ಸಂದರ್ಭಗಳಲ್ಲಿ ಅವರ ಈ ನಿಸ್ವಾರ್ಥ ಸೇವೆಯು, ಸಮಾಜವು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿದಾಗಲೆಲ್ಲಾ ಆರೋಗ್ಯ ರಕ್ಷಣಾ ವೃತ್ತಿಪರರು ಸಂದರ್ಭಕ್ಕೆ ತಕ್ಕಂತೆ ಹೇಗೆ ಸದಾ ಮುಂಚೂಣಿಗೆ ಬಂದು ನಿಲ್ಲುತ್ತಾರೆ ಎಂಬುದನ್ನು ಪ್ರದರ್ಶಿಸುತ್ತದೆ ಎಂದರು.

ಪ್ರಧಾನಮಂತ್ರಿಯವರು 'ಎಕ್ಸ್' ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

ವೈದ್ಯರ ದಿನದಂದು, ನಮ್ಮ ಸಮರ್ಪಿತ ವೈದ್ಯರಿಗೆ ಶುಭ ಹಾರೈಕೆಗಳು. ಅವರ ಕಠಿಣ ಪರಿಶ್ರಮ, ಸಹಾನುಭೂತಿ ಮತ್ತು ಬದ್ಧತೆಯು ಭಾರತದ ಆರೋಗ್ಯ ರಕ್ಷಣಾ ವ್ಯವಸ್ಥೆಯ ಬೆನ್ನೆಲುಬಾಗಿದೆ. ಅತ್ಯಂತ ಕಠಿಣ ಸಂದರ್ಭಗಳಲ್ಲೂ ಅವರು ನೀಡುತ್ತಿರುವ ಅವಿಶ್ರಾಂತ ಸೇವೆಗಳು  ಅಸಂಖ್ಯಾತ ಜನರ ವಿಶ್ವಾಸ ಮತ್ತು ಕೃತಜ್ಞತೆಯನ್ನು ಗಳಿಸಿವೆ.

ಕಳೆದ ದಶಕದಲ್ಲಿ, ಭಾರತವು ತನ್ನ ಆರೋಗ್ಯ ರಕ್ಷಣಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ವೈದ್ಯಕೀಯ ಕಾಲೇಜುಗಳ ಸಂಖ್ಯೆ ದುಪ್ಪಟ್ಟಿಗಿಂತ ಹೆಚ್ಚಾಗಿದೆ, ಹಾಗೆಯೇ ಪದವಿ ಮತ್ತು ಸ್ನಾತಕೋತ್ತರ ಪದವಿ ವೈದ್ಯಕೀಯ ಸೀಟುಗಳು ಗಣನೀಯವಾಗಿ ವಿಸ್ತರಿಸಲ್ಪಟ್ಟಿವೆ. ಈ ಅಭೂತಪೂರ್ವ ಬೆಳವಣಿಗೆಯು ಮಹತ್ವಾಕಾಂಕ್ಷಿ ವೈದ್ಯರಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುತ್ತಿದೆ, ಬಲವಾದ ಆರೋಗ್ಯ ರಕ್ಷಣಾ ಕಾರ್ಯಪಡೆಯನ್ನು ನಿರ್ಮಿಸುತ್ತಿದೆ ಮತ್ತು ಗುಣಮಟ್ಟದ ವೈದ್ಯಕೀಯ ಸೇವೆಯು ದೇಶದ ಪ್ರತಿಯೊಂದು ಮೂಲೆಗೂ ತಲುಪುವುದನ್ನು ಖಚಿತಪಡಿಸುತ್ತಿದೆ.

ನಾವು 'ವಿಕಸಿತ ಭಾರತ'ದ ನಿರ್ಮಾಣದೆಡೆಗೆ ಕೆಲಸ ಮಾಡುತ್ತಿರುವಾಗ, ತಡೆಗಟ್ಟುವ ಆರೋಗ್ಯ ರಕ್ಷಣೆಯನ್ನು ಉತ್ತೇಜಿಸುವಲ್ಲಿ, ವೈದ್ಯಕೀಯ ಸಂಶೋಧನೆಯನ್ನು ಮುನ್ನಡೆಸುವಲ್ಲಿ, ನಾವೀನ್ಯತೆಯನ್ನು ಅಳವಡಿಸಿಕೊಳ್ಳುವಲ್ಲಿ ಮತ್ತು ಎಲ್ಲರಿಗೂ ಕೈಗೆಟುಕುವ ಹಾಗೂ ಸುಲಭವಾಗಿ ಸಿಗುವ ಆರೋಗ್ಯ ಸೇವೆಯನ್ನು ತಲುಪಿಸುವಲ್ಲಿ ನಮ್ಮ ವೈದ್ಯರು ಪ್ರಮುಖ ಪಾತ್ರ ವಹಿಸುವುದನ್ನು ಮುಂದುವರಿಸಲಿದ್ದಾರೆ.

#NationalDoctorsDay

ಇಂದು ನಾವು ವೈದ್ಯರ ದಿನವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, '#OperationAmistad ಅಡಿಯಲ್ಲಿ ವೆನೆಜುವೆಲಾದಲ್ಲಿ ಅವಿಶ್ರಾಂತವಾಗಿ ಸೇವೆ ಸಲ್ಲಿಸುತ್ತಿರುವ  ಭಾರತದ ಎಲ್ಲಾ ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರನ್ನು ನಾನು ಅಭಿನಂದಿಸಲು ಬಯಸುತ್ತೇನೆ. ಇಂತಹ ಕಠಿಣವಾದ ಸಮಯದಲ್ಲಿ, ಸಂಕಷ್ಟದಲ್ಲಿರುವವರಿಗೆ ಸೇವೆ ಸಲ್ಲಿಸುತ್ತಿರುವ ಅವರ ಈ ಪ್ರಯತ್ನಗಳು, ನಮ್ಮ ಸಮಾಜವು ಯಾವುದೇ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿದಾಗಲೆಲ್ಲಾ ಆರೋಗ್ಯ ರಕ್ಷಣಾ ವೃತ್ತಿಪರರು ಸಂದರ್ಭಕ್ಕೆ ತಕ್ಕಂತೆ ಹೇಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಾರೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆಗಳಾಗಿವೆ.

 

*****


(रिलीज़ आईडी: 2279780) आगंतुक पटल : 10
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Bengali-TR , Manipuri , Assamese , Punjabi , Gujarati , Odia , Tamil , Telugu , Malayalam