ಗ್ರಾಮೀಣಾಭಿವೃದ್ಧಿ ಸಚಿವಾಲಯ
ರಾಷ್ಟ್ರೀಯ ಗ್ರಾಮೀಣ ವಿಕಾಸ ಸಮ್ಮೇಳನ 2026 ವಿಕಸಿತ ಭಾರತಕ್ಕೆ ಮಾರ್ಗಸೂಚಿಯನ್ನು ರೂಪಿಸುತ್ತದೆ; ಗ್ರಾಮೀಣ ಮಹಿಳಾ ನೇತೃತ್ವದ ಉದ್ಯಮಗಳನ್ನು ಉತ್ತೇಜಿಸಲು 'ಸರಸ್ ಶಕ್ತಿ' ಯ ಆರಂಭ
ಮಹಿಳಾ ಸ್ವಸಹಾಯ ಗುಂಪು ಉತ್ಪನ್ನಗಳ ವೈವಿಧ್ಯತೆ, ಗುಣಮಟ್ಟ ಮತ್ತು ಮಾರುಕಟ್ಟೆ ಸಾಮರ್ಥ್ಯವನ್ನು ಪ್ರದರ್ಶಿಸಲು 'ಸರಸ್ ಶಕ್ತಿ' ಪುಸ್ತಕವನ್ನು ಬಿಡುಗಡೆ ಮಾಡಲಾಯಿತು
प्रविष्टि तिथि:
30 JUN 2026 11:44AM by PIB Bengaluru
ಗ್ರಾಮೀಣಾಭಿವೃದ್ಧಿ ಸಚಿವಾಲಯವು ಆಯೋಜಿಸಿದ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಗ್ರಾಮೀಣ ಪರಿವರ್ತನೆಯ ದೃಷ್ಟಿಕೋನಕ್ಕೆ ಅನುಗುಣವಾಗಿ ನಡೆದ 'ರಾಷ್ಟ್ರೀಯ ಗ್ರಾಮೀಣ ವಿಕಾಸ ಸಮ್ಮೇಳನ (ಆರ್ ಜಿ ವಿ ಎಸ್) 2026' ಜೂನ್ 29, 2026 ರಂದು ಮುಕ್ತಾಯಗೊಂಡಿತು. ಬಲವಾದ ಕೇಂದ್ರ ಮತ್ತು ರಾಜ್ಯಗಳ ಸಹಯೋಗ, ಸಮುದಾಯ ನೇತೃತ್ವದ ಅಭಿವೃದ್ಧಿ ಮತ್ತು ತಂತ್ರಜ್ಞಾನ ಆಧಾರಿತ ಆಡಳಿತದ ಮೂಲಕ 'ವಿಕಸಿತ ಗ್ರಾಮ, ವಿಕಸಿತ ಭಾರತ'ದ ದೃಷ್ಟಿಕೋನವನ್ನು ವೇಗಗೊಳಿಸುವ ಹಂಚಿಕೆಯ ಬದ್ಧತೆಯೊಂದಿಗೆ ಈ ಸಮ್ಮೇಳನವು ಮುಕ್ತಾಯಗೊಂಡಿತು. ಈ ಎರಡು ದಿನಗಳ ರಾಷ್ಟ್ರೀಯ ಸಮಾವೇಶವು ಪ್ರಮುಖ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನವನ್ನು ಪರಿಶೀಲಿಸಲು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅತ್ಯುತ್ತಮ ಆಚರಣೆಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಗ್ರಾಮೀಣ ಪರಿವರ್ತನೆಯ ಮುಂದಿನ ಹಂತದ ಮಾರ್ಗಸೂಚಿಯ ಬಗ್ಗೆ ಚರ್ಚಿಸಲು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸಿತು.
ಸಮ್ಮೇಳನವನ್ನು ಗೌರವಾನ್ವಿತ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಹಾಗೂ ರೈತರ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಉದ್ಘಾಟಿಸಿದರು. ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಸಂವಹನ ಖಾತೆ ರಾಜ್ಯ ಸಚಿವರಾದ ಡಾ. ಚಂದ್ರಶೇಖರ್ ಪೆಮ್ಮಸಾನಿ ಮತ್ತು ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವರಾದ ಶ್ರೀ ಕಮಲೇಶ್ ಪಾಸ್ವಾನ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎರಡು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಗ್ರಾಮೀಣಾಭಿವೃದ್ಧಿ ಸಚಿವರು, ಹಿರಿಯ ಅಧಿಕಾರಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತಜ್ಞರು, ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ ಗಳ (ಎಸ್ ಆರ್ ಎಲ್ ಎಂ) ಪ್ರತಿನಿಧಿಗಳು ಮತ್ತು ಅಭಿವೃದ್ಧಿ ಪಾಲುದಾರರು ಒಂದೆಡೆ ಸೇರಿದ್ದರು.
'ವಿಬಿ-ಗ್ರಾಮ್ ಕಾಯ್ದೆ, 2025' ರ ಪರಿಣಾಮಕಾರಿ ಅನುಷ್ಠಾನವು ಸಮ್ಮೇಳನದ ಪ್ರಮುಖ ವಿಷಯವಾಗಿತ್ತು. ಈ ವೇದಿಕೆಯು ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ್, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಡಿಎವೈ-ಎನ್ ಆರ್ ಎಲ್ ಎಂ), ಗ್ರಾಮೀಣ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ ಸೇರಿದಂತೆ ಪ್ರಮುಖ ಗ್ರಾಮೀಣಾಭಿವೃದ್ಧಿ ಉಪಕ್ರಮಗಳ ಸಮಗ್ರ ಪರಿಶೀಲನೆಯನ್ನು ಆಯೋಜಿಸಿತು.
ಗ್ರಾಮೀಣಾಭಿವೃದ್ಧಿ ಯೋಜನೆಯನ್ನು ಬಲಪಡಿಸುವುದು, ಗ್ರಾಮ ಪಂಚಾಯತಿಗಳನ್ನು ಸಬಲೀಕರಣಗೊಳಿಸುವುದು, ಮಹಿಳಾ ನೇತೃತ್ವದ ಜೀವನೋಪಾಯವನ್ನು ವಿಸ್ತರಿಸುವುದು, ಗ್ರಾಮೀಣ ವಸತಿ ಮತ್ತು ಸಂಪರ್ಕವನ್ನು ಸುಧಾರಿಸುವುದು ಹಾಗೂ ಹವಾಮಾನ-ಚೇತರಿಕೆಯ ಜೀವನೋಪಾಯವನ್ನು ಉತ್ತೇಜಿಸುವ ಬಗ್ಗೆ ಚರ್ಚೆಗಳು ನಡೆದವು. 2029 ರ ವೇಳೆಗೆ 6 ಕೋಟಿ 'ಲಖ್ ಪತಿ ದೀದಿ'ಯರನ್ನು ಸೃಷ್ಟಿಸುವ ನಿಟ್ಟಿನಲ್ಲಿ ಪ್ರಗತಿಯನ್ನು ವೇಗಗೊಳಿಸಲು ಡಿಜಿಟಲ್ ಮಧ್ಯಸ್ಥಿಕೆಗಳ ರೂಪರೇಷೆಗಳನ್ನು ಸಹ ಚರ್ಚಿಸಲಾಯಿತು. ದೇಶಾದ್ಯಂತ ವ್ಯಾಪಕವಾಗಿ ಅಳವಡಿಸಿಕೊಳ್ಳಬಹುದಾದ ವಿವಿಧ ರಾಜ್ಯಗಳ ನವೀನ ಮಾದರಿಗಳನ್ನು ಇಲ್ಲಿ ಎತ್ತಿ ತೋರಿಸಲಾಯಿತು.
ಈ ಮಿಷನ್ ಪ್ರಸ್ತುತ ಸ್ವ-ಸಹಾಯ ಗುಂಪುಗಳಾಗಿ (ಎಸ್ ಎಚ್ ಜಿ) ಸಂಘಟಿತವಾಗಿರುವ 10 ಕೋಟಿಗೂ ಹೆಚ್ಚು ಮಹಿಳೆಯರನ್ನು ಬೆಂಬಲಿಸುತ್ತದೆ. ಮಹಿಳಾ ನೇತೃತ್ವದ ಉದ್ಯಮಗಳನ್ನು ಬಲಪಡಿಸಲು, ಡಿಎವೈ-ಎನ್ ಆರ್ ಎಲ್ ಎಂ ಅಡಿಯಲ್ಲಿ ಉದ್ಯಮ ಹಣಕಾಸು, ಡಿಜಿಟಲ್ ನಾವೀನ್ಯತೆ, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ಪ್ರವೇಶದ ಮೇಲೆ ಸಂವಾದವು ಗಮನ ಹರಿಸಿತು.
ಡಿಎವೈ-ಎನ್ ಆರ್ ಎಲ್ ಎಂ ನ ರಾಷ್ಟ್ರೀಯ ಮಾರುಕಟ್ಟೆ ಉಪಕ್ರಮವಾದ 'ಸರಸ್ ಆಜೀವಿಕಾ' ಬೆಳೆಯುತ್ತಿರುವ ಪ್ರಮಾಣವನ್ನು ಸಮ್ಮೇಳನವು ಎತ್ತಿ ತೋರಿಸಿತು. 1999 ರ ಮೊದಲ ಸರಸ್ ಮೇಳದ ನಂತರ, ಈ ಉಪಕ್ರಮವು 25 ಕ್ಕೂ ಹೆಚ್ಚು ರಾಜ್ಯ ಬ್ರ್ಯಾಂಡ್ ಗಳನ್ನು ಒಳಗೊಂಡಿರುವ ಮತ್ತು ವಾರ್ಷಿಕ ಮೇಳ ವ್ಯವಹಾರದಲ್ಲಿ ₹200 ಕೋಟಿಗೂ ಹೆಚ್ಚು ಆದಾಯವನ್ನು ಗಳಿಸುವ ದೇಶವ್ಯಾಪಿ ಮಾರುಕಟ್ಟೆ ಪರಿಸರ ವ್ಯವಸ್ಥೆಯಾಗಿ ವಿಕಸನಗೊಂಡಿದೆ.
ಕಾರ್ಯಕ್ರಮದ ಭಾಗವಾಗಿ, ಬ್ರ್ಯಾಂಡ್ ನ ರಾಷ್ಟ್ರೀಯ ಗುರುತನ್ನು ಬಲಪಡಿಸಲು ಸಚಿವಾಲಯವು 'ಸರಸ್ ಶಕ್ತಿ ಕಲೆಕ್ಷನ್ '(SARAS Shakti Collection) ಅನ್ನು ಪ್ರಾರಂಭಿಸಿತು ಮತ್ತು 'ಸರಸ್ ಶಕ್ತಿʼ ಪುಸ್ತಕವನ್ನು ಅನಾವರಣಗೊಳಿಸಿತು. ಸರಸ್ ಶಕ್ತಿ ಸರಣಿಯು ದೇಶಾದ್ಯಂತದ ಮಹಿಳಾ ಸ್ವಸಹಾಯ ಗುಂಪುಗಳು ತಯಾರಿಸಿದ ಪ್ರೀಮಿಯಂ ಉತ್ಪನ್ನಗಳ ವಿಶೇಷವಾಗಿ ಆಯ್ದ ಪ್ರದರ್ಶನವನ್ನು ಒಳಗೊಂಡಿದೆ, ಜೊತೆಗೆ 'ಸರಸ್ ಶಕ್ತಿʼ ಪುಸ್ತಕವು ಈ ಉದ್ಯಮಗಳ ವೈವಿಧ್ಯತೆ, ಗುಣಮಟ್ಟ ಮತ್ತು ಮಾರುಕಟ್ಟೆಯ ಉಪಸ್ಥಿತಿಯನ್ನು ದಾಖಲಿಸುತ್ತದೆ. ಈ ಎರಡೂ ಉಪಕ್ರಮಗಳು ಮಾರುಕಟ್ಟೆಯನ್ನು ವಿಸ್ತರಿಸಲು ಮತ್ತು ಪ್ರೀಮಿಯಂ ಸಾಂಸ್ಥಿಕ ಹಾಗೂ ವ್ಯಾಪಕ ಗ್ರಾಹಕ ಮಾರುಕಟ್ಟೆಗಳಲ್ಲಿ ಗ್ರಾಮೀಣ ಉತ್ಪನ್ನಗಳನ್ನು ಪ್ರಸ್ತುತಪಡಿಸಲು ಸಚಿವಾಲಯದ ಪ್ರಯತ್ನಗಳನ್ನು ಬಲಪಡಿಸುತ್ತವೆ.
ಗುಜರಾತ್, ಒಡಿಶಾ, ಪಶ್ಚಿಮ ಬಂಗಾಳ, ಮೇಘಾಲಯ, ಬಿಹಾರ, ಕೇರಳ ಮತ್ತು ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಗ್ರಾಮೀಣಾಭಿವೃದ್ಧಿ ಸಚಿವರು ಹಾಗೂ ಪ್ರತಿನಿಧಿಗಳು 'ಸರಸ್ ಆಜೀವಿಕಾ ಗ್ಯಾಲರಿ'ಗೆ ಭೇಟಿ ನೀಡಿದರು. ಈ ಗ್ಯಾಲರಿಯು ಕೈಮಗ್ಗಗಳು, ಜವಳಿಗಳು, ಗೃಹಾಲಂಕಾರ ವಸ್ತುಗಳು, ವೆಲ್ನೆಸ್ ಉತ್ಪನ್ನಗಳು ಮತ್ತು ಸಾಂಪ್ರದಾಯಿಕ ಆಹಾರಗಳ ಕ್ಯುರೇಟೆಡ್ ಸಂಗ್ರಹವನ್ನು ಪ್ರದರ್ಶಿಸಿತು. ಇದು ಪಂಜಾಬ್ನ ಫುಲ್ಕರಿ, ಜಮ್ಮು ಮತ್ತು ಕಾಶ್ಮೀರದ ಪಶ್ಮಿನಾ, ತೆಲಂಗಾಣದ ಇಕತ್ ಮತ್ತು ತೇಲಿಯಾ ಜವಳಿಗಳು ಮತ್ತು ಮಿಜೋರಾಂನ ಪೌಂಚೆ ಒಳಗೊಂಡಂತೆ ಪ್ರಾದೇಶಿಕ ಕಲಾತ್ಮಕತೆಯನ್ನು ಪ್ರದರ್ಶಿಸಿತು, ಜೊತೆಗೆ ಮೀನಾಕರಿ, ಡೋಕ್ರಾ, ಹಿತ್ತಾಳೆ ಕೆಲಸ ಮತ್ತು ಮರದ ಕರಕುಶಲತೆಯಂತಹ ಸಂಕೀರ್ಣವಾದ ಕರಕುಶಲ ವಸ್ತುಗಳನ್ನು ಒಳಗೊಂಡಿತ್ತು. ಯಶಸ್ವಿ ಗ್ರಾಮೀಣ ಉದ್ಯಮಗಳನ್ನು ಪ್ರತಿನಿಧಿಸುವ ಲಕ್ಷಾಧಿಪತಿ ದೀದಿಯರು ಸಹ ಈ ಗ್ಯಾಲರಿಯಲ್ಲಿದ್ದರು. ವ್ಯವಸ್ಥಿತ ಬ್ರ್ಯಾಂಡಿಂಗ್, ಉತ್ಪನ್ನ ಅಭಿವೃದ್ಧಿ ಮತ್ತು ಮಾರುಕಟ್ಟೆ ಸಂಪರ್ಕಗಳು ಮಹಿಳಾ ಉದ್ಯಮಿಗಳಿಗೆ ಸುಸ್ಥಿರ ವ್ಯವಹಾರಗಳನ್ನು ನಿರ್ಮಿಸಲು ಹೇಗೆ ಅನುವು ಮಾಡಿಕೊಡುತ್ತದೆ ಎಂಬುದನ್ನು ಅವರು ಪ್ರದರ್ಶಿಸಿದರು.
ರಾಷ್ಟ್ರೀಯ ಗ್ರಾಮೀಣ ವಿಕಾಸ ಸಮ್ಮೇಳನವು ಸಮುದಾಯ ಸಂಸ್ಥೆಗಳನ್ನು ನಿರ್ಮಿಸುವುದು, ಸುಸ್ಥಿರ ಜೀವನೋಪಾಯಗಳನ್ನು ವಿಸ್ತರಿಸುವುದು ಮತ್ತು ವ್ಯಾಪಕ ಮಾರುಕಟ್ಟೆ ಅವಕಾಶಗಳನ್ನು ಸೃಷ್ಟಿಸುವ ಸಚಿವಾಲಯದ ಬದ್ಧತೆಯನ್ನು ಪುನರುಚ್ಚರಿಸಿತು. ಅಭಿವೃದ್ಧಿ ಗುರಿಗಳನ್ನು ಸಮಗ್ರ, ಸ್ವಾವಲಂಬಿ ಗ್ರಾಮೀಣ ಆರ್ಥಿಕ ಬೆಳವಣಿಗೆಯಾಗಿ ಪರಿವರ್ತಿಸುವಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಹಯೋಗದ ಕ್ರಮದ ಪ್ರಾಮುಖ್ಯತೆಯನ್ನು ಚರ್ಚೆಗಳು ಒತ್ತಿಹೇಳಿದವು.



*****
(रिलीज़ आईडी: 2279403)
आगंतुक पटल : 8