ಉಪರಾಷ್ಟ್ರಪತಿಗಳ ಕಾರ್ಯಾಲಯ
ಬೆಂಗಳೂರಿನಲ್ಲಿ 'ನಶಾ ಮುಕ್ತ ಭಾರತ' ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿ
ಮಾದಕ ವ್ಯಸನ ಮುಕ್ತ ಭಾರತ ನಿರ್ಮಾಣಕ್ಕೆ ಇಡೀ ಸಮಾಜ ಕೈಜೋಡಿಸುವಂತೆ ಉಪರಾಷ್ಟ್ರಪತಿ ಕರೆ
‘ಮಾದಕ ದ್ರವ್ಯಗಳನ್ನು ತ್ಯಜಿಸುವುದು’ ರಾಷ್ಟ್ರವ್ಯಾಪಿ ಆಂದೋಲನವಾಗಿ ಬೆಳೆಯಬೇಕು: ಉಪರಾಷ್ಟ್ರಪತಿ
ವ್ಯಸನ ಮುಕ್ತಿ ವೈದ್ಯಕೀಯ ಮತ್ತು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆಗೆ ಉಪರಾಷ್ಟ್ರಪತಿ ಕರೆ
प्रविष्टि तिथि:
28 JUN 2026 2:33PM by PIB Bengaluru
ಮಾದಕ ವ್ಯಸನದ ವಿರುದ್ಧದ ಹೋರಾಟವು ಪ್ರತಿಯೊಬ್ಬ ವ್ಯಕ್ತಿಯಿಂದ ಪ್ರಾರಂಭವಾಗಿ ಅದೊಂದು ರಾಷ್ಟ್ರವ್ಯಾಪಿ ಚಳುವಳಿಯಾಗಿ ಬೆಳೆಯಬೇಕು ಎಂದು ತಿಳಿಸಿದ ಭಾರತದ ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು, 'ನಶಾ ಮುಕ್ತ ಭಾರತ'ವನ್ನು ನಿರ್ಮಿಸಲು ಶಿಕ್ಷಣ ಸಂಸ್ಥೆಗಳು, ಕುಟುಂಬಗಳು, ಆರೋಗ್ಯ ವೃತ್ತಿಪರರು, ಕಾನೂನು ಜಾರಿ ಸಂಸ್ಥೆಗಳು ಮತ್ತು ನಾಗರಿಕ ಸಮಾಜವು ಒಟ್ಟಾಗಿ ಶ್ರಮಿಸಬೇಕು ಎಂದು ಇಂದು ಕರೆ ನೀಡಿದರು.
ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (RGUHS) 31ನೇ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮತ್ತು ದಿಶಾ ಬೋಧ್ ಫೌಂಡೇಶನ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ 'ನಶಾ ಮುಕ್ತ ಭಾರತ ಸಮಾವೇಶ'ವನ್ನು ಉದ್ದೇಶಿಸಿ ಉಪರಾಷ್ಟ್ರಪತಿಗಳು ಮಾತನಾಡಿದರು. ಮಾದಕ ದ್ರವ್ಯ ವ್ಯಸನವು ಕೇವಲ ವ್ಯಕ್ತಿಯ ಆರೋಗ್ಯಕ್ಕೆ ಮಾತ್ರವಲ್ಲದೆ, ಶೈಕ್ಷಣಿಕ ಸಾಧನೆ, ಉತ್ಪಾದಕತೆ, ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರೀಯ ಅಭಿವೃದ್ಧಿಗೂ ಬೆದರಿಕೆಯೊಡ್ಡುತ್ತದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಆರ್.ಜಿ.ಯು.ಹೆಚ್.ಎಸ್ (RGUHS) ನ ಸಂಸ್ಥಾಪನಾ ದಿನದಂದು ವಿಶ್ವವಿದ್ಯಾಲಯವನ್ನು ಅಭಿನಂದಿಸಿದ ಅವರು, ಆರೋಗ್ಯ ಶಿಕ್ಷಣ, ಸಂಶೋಧನೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ವಿಶ್ವವಿದ್ಯಾಲಯವು ನೀಡಿದ ಮಹತ್ತರವಾದ ಕೊಡುಗೆಗಳಿಗಾಗಿ ಹಾಗೂ ರಾಷ್ಟ್ರ ಸೇವೆಗೆ ಸಮರ್ಪಿತರಾದ ಅನೇಕ ತಲೆಮಾರುಗಳ ಆರೋಗ್ಯ ವೃತ್ತಿಪರರನ್ನು ರೂಪಿಸಿದ್ದಕ್ಕಾಗಿ ಶ್ಲಾಘಿಸಿದರು.
ಬೆಂಗಳೂರು, ಕರ್ನಾಟಕ ಮತ್ತು ಅಂತಿಮವಾಗಿ ಇಡೀ ಭಾರತವನ್ನು ಮಾದಕ ವ್ಯಸನ ಮುಕ್ತವನ್ನಾಗಿ ಮಾಡಲು ಪ್ರತಿಜ್ಞೆ ಮಾಡಿದ ಬೃಹತ್ ವಿದ್ಯಾರ್ಥಿ ಸಮೂಹವನ್ನು ಕಂಡು ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು ಸಂತಸ ವ್ಯಕ್ತಪಡಿಸಿದರು. "ನಶಾ ಮುಕ್ತ ಭಾರತ" ಎಂದರೆ ಕೇವಲ ಮಾದಕ ದ್ರವ್ಯಗಳಿಲ್ಲದಿರುವುದು ಮಾತ್ರವಲ್ಲ, ಬದಲಾಗಿ ಆರೋಗ್ಯಕರ ಆಯ್ಕೆಗಳು, ತಿಳುವಳಿಕೆಯುಕ್ತ ನಿರ್ಧಾರಗಳು, ಬೆಂಬಲ ನೀಡುವ ಕುಟುಂಬಗಳು ಮತ್ತು ಸದೃಢ ಸಮುದಾಯಗಳನ್ನು ಉತ್ತೇಜಿಸುವುದಾಗಿದೆ ಎಂದು ಅವರು ಹೇಳಿದರು. ಪ್ರತಿಯೊಬ್ಬ ವ್ಯಕ್ತಿಯು ತನ್ನ ಸ್ವಂತ ಮನಸ್ಸಿನ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರಬೇಕು ಎಂದು ಒತ್ತಿಹೇಳಿದ ಅವರು, ಮಾದಕ ದ್ರವ್ಯಗಳು ಮನಸ್ಸನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಾಗ, ವ್ಯಕ್ತಿಯು ತನ್ನ ಸ್ವಂತ ಜೀವನದ ಮೇಲಿನ ನಿಯಂತ್ರಣವನ್ನೇ ಕಳೆದುಕೊಳ್ಳುತ್ತಾನೆ ಎಂದು ಅಭಿಪ್ರಾಯಪಟ್ಟರು.
ವ್ಯಸನಕ್ಕೆ ಬಲಿಯಾಗುವ ಪ್ರತಿ ಯುವ ಜೀವವೂ ರಾಷ್ಟ್ರದ ಸಾಮರ್ಥ್ಯದ ನಷ್ಟವನ್ನು ಪ್ರತಿನಿಧಿಸುತ್ತದೆ ಎಂದು ಉಪರಾಷ್ಟ್ರಪತಿಯವರು ಹೇಳಿದರು. ಮಾದಕವಸ್ತು ವ್ಯಸನದ ಸಮಸ್ಯೆಯನ್ನು ನಿವಾರಿಸಲು ಜಾಗೃತಿಯ ರಾಯಭಾರಿಗಳಾಗುವಂತೆ ಮತ್ತು ತಡೆಗಟ್ಟುವಿಕೆ, ಚಿಕಿತ್ಸೆ, ಸಂಶೋಧನೆ ಹಾಗೂ ಸಾಕ್ಷ್ಯಾಧಾರಿತ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಅವರು ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಭಾವಿ ವೈದ್ಯರು, ದಾದಿಯರು, ಔಷಧ ವಿಜ್ಞಾನಿಗಳು, ಮನೋವಿಜ್ಞಾನಿಗಳು, ಸಂಶೋಧಕರು ಮತ್ತು ಸಾರ್ವಜನಿಕ ಆರೋಗ್ಯ ವೃತ್ತಿಪರರಿಗೆ ಕರೆ ನೀಡಿದರು.
ವ್ಯಸನ ಮುಕ್ತಿ ವೈದ್ಯಕೀಯ (ಅಡಿಕ್ಷನ್ ಮೆಡಿಸಿನ್), ಮಾನಸಿಕ ಆರೋಗ್ಯ, ನಡವಳಿಕೆ ವಿಜ್ಞಾನಗಳು ಮತ್ತು ಸಮುದಾಯ ಆಧಾರಿತ ಮಧ್ಯಸ್ಥಿಕೆಗಳ ಕುರಿತು ಹೆಚ್ಚಿನ ಸಂಶೋಧನೆಗೆ ಕರೆ ನೀಡಿದ ಅವರು, ನೈಜ ಪುರಾವೆಗಳು ಕಾರ್ಯಗಳಿಗೆ ಮಾರ್ಗದರ್ಶನ ನೀಡಬೇಕು ಮತ್ತು ಸಂಶೋಧನೆಯು ನೀತಿ-ನಿರೂಪಣೆಗೆ ಆಧಾರವಾಗಬೇಕು ಎಂದು ಒತ್ತಿಹೇಳಿದರು. ಮಾದಕವಸ್ತು ಬಳಕೆಯ ಅಸ್ವಸ್ಥತೆಗಳನ್ನು ನಿವಾರಿಸುವಲ್ಲಿ ತಂತ್ರಜ್ಞಾನ, ಕೌನ್ಸೆಲಿಂಗ್ ಸೇವೆಗಳು ಮತ್ತು ಸಮಾನಸ್ಕರ ಬೆಂಬಲ ಜಾಲಗಳನ್ನು (ಪೀರ್ ಸಪೋರ್ಟ್ ನೆಟ್‌ವರ್ಕ್) ಸದುಪಯೋಗಪಡಿಸಿಕೊಳ್ಳುವ ಪ್ರಾಮುಖ್ಯತೆಯನ್ನೂ ಅವರು ಒತ್ತಿ ಹೇಳಿದರು.
ಮಾದಕ ವ್ಯಸನ ಮುಕ್ತ ಶಿಕ್ಷಣ ಸಂಸ್ಥೆಗಳಿಗೆ ತಾವು ನೀಡುತ್ತಿರುವ ನಿರಂತರ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು, ಮೂರು ಕೇಂದ್ರೀಯ ವಿಶ್ವವಿದ್ಯಾಲಯಗಳ ಕುಲಪತಿಯಾಗಿ, ತಾವು ಸದಾ ಮಾದಕ ವ್ಯಸನ ಮುಕ್ತ ಕ್ಯಾಂಪಸ್ ಗಳಿಗಾಗಿ ನಿರಂತರವಾಗಿ ಧ್ವನಿಯೆತ್ತಿರುವುದಾಗಿ ತಿಳಿಸಿದರು. ಈ ವರ್ಷದ ಆರಂಭದಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾರಂಭಿಸಲಾದ 'ಮಾದಕ ವ್ಯಸನ ಮುಕ್ತ ಕ್ಯಾಂಪಸ್ ಅಭಿಯಾನ' ಮತ್ತು 'ಇ-ಪ್ರತಿಜ್ಞಾ' (e-pledge) ವೇದಿಕೆಯನ್ನು ಉಲ್ಲೇಖಿಸಿದ ಅವರು, ಈ ಉಪಕ್ರಮವು ಕ್ಯಾಂಪಸ್ ನಲ್ಲಿ ಮಾದಕ ವ್ಯಸನ ಮುಕ್ತ ವಾತಾವರಣವನ್ನು ನಿರ್ಮಿಸಲು ನೆರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ, ಉಪರಾಷ್ಟ್ರಪತಿಗಳು ಕರ್ನಾಟಕದ 'ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ'ದ ಭಾಗವಾಗಿ ಶಿಶುಗಳಿಗೆ ಪೋಲಿಯೋ ಲಸಿಕೆ ಹನಿಗಳನ್ನು ಹಾಕಿದರು. ಹಾಗೆಯೇ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಬೆಳವಣಿಗೆ ಮತ್ತು ಪ್ರಗತಿಗೆ ವರ್ಷಗಳಿಂದಲೂ ನೀಡಿದ ಅಮೂಲ್ಯವಾದ ಕೊಡುಗೆಗಳನ್ನು ಸ್ಮರಿಸಿ, ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳನ್ನು ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕದ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್, ಆಂಧ್ರಪ್ರದೇಶದ ರಾಜ್ಯಪಾಲರಾದ ನ್ಯಾಯಮೂರ್ತಿ (ನಿವೃತ್ತ) ಸೈಯದ್ ಅಬ್ದುಲ್ ನಜೀರ್, ಕರ್ನಾಟಕದ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣ್ ಪ್ರಕಾಶ್ ಆರ್. ಪಾಟೀಲ್, ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಯು.ಟಿ. ಖಾದರ್ ಫರೀದ್, RGUHS ಉಪಕುಲಪತಿ ಡಾ. ಭಗವಾನ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.



*****
(रिलीज़ आईडी: 2278610)
आगंतुक पटल : 18