ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ನಾಡಪ್ರಭು ಶ್ರೀ ಕೆಂಪೇಗೌಡರ 517ನೇ ಜಯಂತ್ಯುತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ಉಪರಾಷ್ಟ್ರಪತಿಗಳಿಂದ ಗೌರವ ನಮನ


‘ಮಿನಿ ಭಾರತ’ ಎಂದೇ ಗುರುತಿಸಿಕೊಳ್ಳುತ್ತಿರುವ ಬೆಂಗಳೂರು, ಕೆಂಪೇಗೌಡರ ದೂರದೃಷ್ಟಿಗೆ ಸಾಕ್ಷಿ: ಉಪರಾಷ್ಟ್ರಪತಿ

ಸುಸ್ಥಿರ ಅಭಿವೃದ್ಧಿ, ಸಾಮಾಜಿಕ ಸಾಮರಸ್ಯ ಮತ್ತು ಅಂತರ್ಗತ ಆಡಳಿತದ ಕೆಂಪೇಗೌಡರ ದೃಷ್ಟಿಕೋನ ಆಧುನಿಕ ಭಾರತಕ್ಕೆ ಸ್ಫೂರ್ತಿಯಾಗಿದೆ: ಉಪರಾಷ್ಟ್ರಪತಿ

ತಮ್ಮ ಜೀವಿತಾವಧಿಯನ್ನು ಮೀರಿ ಆಲೋಚಿಸುವವರಿಂದಲೇ ಮಹಾನ್ ರಾಷ್ಟ್ರಗಳು ನಿರ್ಮಾಣವಾಗುತ್ತವೆ: ಕೆಂಪೇಗೌಡ ಜಯಂತಿ ಸಮಾರಂಭದಲ್ಲಿ ಉಪರಾಷ್ಟ್ರಪತಿಗಳ ನುಡಿ

प्रविष्टि तिथि: 27 JUN 2026 7:59PM by PIB Bengaluru

ಭಾರತದ ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು ಇಂದು ಬೆಂಗಳೂರಿನಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ 517ನೇ ಜಯಂತ್ಯೋತ್ಸವದಲ್ಲಿ ಪಾಲ್ಗೊಂಡು, ಬೆಂಗಳೂರಿನ ನಿರ್ಮಾತೃಗಳಿಗೆ ಭವ್ಯ ನಮನ ಸಲ್ಲಿಸಿದರು. ಕೆಂಪೇಗೌಡರನ್ನು ದೂರದೃಷ್ಟಿಯುಳ್ಳ ಆಡಳಿತಗಾರ, ನಗರ ನಿರ್ಮಾತೃ, ಪರಿಸರವಾದಿ ಮತ್ತು ಸಮಾಜ ಸುಧಾರಕ ಎಂದು ಬಣ್ಣಿಸಿದ ಉಪರಾಷ್ಟ್ರಪತಿಗಳು, ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸನ್ಮಾನ್ಯ ಉಪರಾಷ್ಟ್ರಪತಿಗಳು, ಶ್ರೀ ಕೆಂಪೇಗೌಡರನ್ನು ಕೇವಲ ಒಬ್ಬ ಆಡಳಿತಗಾರನಾಗಿ ಮಾತ್ರವಲ್ಲದೆ, ಜನರ ಕಲ್ಯಾಣಕ್ಕಾಗಿ ದೂರದೃಷ್ಟಿಯಿಂದ ಆಡಳಿತ ನಡೆಸಿದ ನಾಯಕನಾಗಿ ಸ್ಮರಿಸಲಾಗುತ್ತಿದೆ ಎಂದು ಹೇಳಿದರು. ರೈತರು, ವ್ಯಾಪಾರಿಗಳು, ಕುಶಲಕರ್ಮಿಗಳು, ವಿದ್ವಾಂಸರು ಮತ್ತು ವಿವಿಧ ಧರ್ಮಗಳ ಜನರು ಒಟ್ಟಾಗಿ ಬದುಕುವ ಮತ್ತು ಅಭಿವೃದ್ಧಿ ಹೊಂದಬಲ್ಲ ಅಂತರ್ಗತ ನಗರವನ್ನು ಕೆಂಪೇಗೌಡರು ಕಲ್ಪಿಸಿಕೊಂಡಿದ್ದರು. ಇಂದಿನ ಬೆಂಗಳೂರು ನಿಜಕ್ಕೂ "ಮಿನಿ ಭಾರತ"ದ ರೂಪದಲ್ಲಿ ಆ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಂಪೇಗೌಡರ ಅಸಾಧಾರಣ ದೂರದೃಷ್ಟಿಯನ್ನು ಕೊಂಡಾಡಿದ ಶ್ರೀ ಸಿ. ಪಿ. ರಾಧಾಕೃಷ್ಣನ್, ವ್ಯವಸ್ಥಿತ ಮಾರುಕಟ್ಟೆಗಳು, ಬಡಾವಣೆಗಳು, ಜಲಮೂಲಗಳು ಮತ್ತು ಸಾರ್ವಜನಿಕ ಸ್ಥಳಗಳ ಮೂಲಕ ಅವರು ಯೋಜಿತ ನಗರಾಭಿವೃದ್ಧಿಗೆ ಅಡಿಪಾಯ ಹಾಕಿದರು ಎಂದು ಹೇಳಿದರು. ಕೆಂಪೇಗೌಡರು ನಿರ್ಮಿಸಿದ ಕೆರೆಗಳು ಮತ್ತು ಕಾಲುವೆಗಳ ಜಾಲ, ಜೊತೆಗೆ ಬೃಹತ್ ಪ್ರಮಾಣದ ಮರಗಳನ್ನು ನೆಡುವ ಕಾರ್ಯವು, ಸುಸ್ಥಿರ ಅಭಿವೃದ್ಧಿಯ ಬಗ್ಗೆ ಭಾರತದ ಪ್ರಾಚೀನ ಜ್ಞಾನವನ್ನು ಪ್ರದರ್ಶಿಸುತ್ತದೆ. ನೀರಿನ ಅಭಾವ ಮತ್ತು ಹವಾಮಾನ ಬದಲಾವಣೆಯಂತಹ ಇಂದಿನ ಸವಾಲುಗಳನ್ನು ಎದುರಿಸಲು ಇದು ಅಮೂಲ್ಯವಾದ ಪಾಠಗಳನ್ನು ನೀಡುತ್ತದೆ ಎಂದು ಹೇಳುವ ಮೂಲಕ ಅವರು ಎಲ್ಲರ ಗಮನಸೆಳೆದರು.

ಸಮಾಜ ಸುಧಾರಣೆ, ಸಾಂಸ್ಕೃತಿಕ ಸಾಮರಸ್ಯ ಮತ್ತು ಮಾನವ ಘನತೆಯ ಬಗೆಗಿನ ಕೆಂಪೇಗೌಡರ ಬದ್ಧತೆಯನ್ನು ಸನ್ಮಾನ್ಯ ಉಪರಾಷ್ಟ್ರಪತಿಗಳು ಶ್ಲಾಘಿಸಿದರು. ಕನ್ನಡ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದ್ದರೂ, ಕೆಂಪೇಗೌಡರು ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಅಪ್ಪಿಕೊಂಡಿದ್ದರು. ಒಂದು ಮಹಾನ್ ನಗರವು ಶಿಕ್ಷಣ, ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳನ್ನು ಪೋಷಿಸಬೇಕು ಎಂದು ಅವರು ನಂಬಿದ್ದರು ಎಂದು ಸನ್ಮಾನ್ಯ ಉಪರಾಷ್ಟ್ರಪತಿಯವರು ಹೇಳಿದರು.

ಬೆಂಗಳೂರು ಭಾರತದ ತಂತ್ರಜ್ಞಾನ ಮತ್ತು ನಾವೀನ್ಯತೆಯ ರಾಜಧಾನಿಯಾಗಿ ಹೊರಹೊಮ್ಮಿದೆ ಎಂದು ಉಲ್ಲೇಖಿಸಿದ ಸನ್ಮಾನ್ಯ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು, ಇದರ ಯಶಸ್ಸು ಸುಮಾರು ಐದು ಶತಮಾನಗಳ ಹಿಂದೆ ಕೆಂಪೇಗೌಡರು ಹಾಕಿಕೊಟ್ಟ ಬಲವಾದ ಅಡಿಪಾಯದ ಮೇಲೆ ನಿಂತಿದೆ ಎಂದರು. ದೀರ್ಘಕಾಲೀನ ಯೋಜನೆ, ಸುಸ್ಥಿರತೆ ಮತ್ತು ಸಂಸ್ಥೆಗಳ ನಿರ್ಮಾಣದ ಕೆಂಪೇಗೌಡರ ಆದರ್ಶಗಳು 'ವಿಕಸಿತ ಭಾರತ'ದ ದೃಷ್ಟಿಕೋನದತ್ತ ಭಾರತದ ಪಯಣಕ್ಕೆ ಮಾರ್ಗದರ್ಶನ ನೀಡುತ್ತಿವೆ ಎಂದು ತಿಳಿಸಿದರು.

ಯುವಜನರು ಕೆಂಪೇಗೌಡರ ಜೀವನದಿಂದ ಸ್ಫೂರ್ತಿ ಪಡೆಯಬೇಕು ಎಂದು ಕರೆ ನೀಡಿದ ಸನ್ಮಾನ್ಯ ಉಪರಾಷ್ಟ್ರಪತಿಗಳು, ಸಮಾಜ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅರ್ಥಪೂರ್ಣ ಕೊಡುಗೆ ನೀಡುವಂತೆ ಪ್ರೇರೇಪಿಸಿದರು. ಜಲ ಸಂರಕ್ಷಣೆಯ ಮಹತ್ವವನ್ನು ಒತ್ತಿಹೇಳಿದ ಅವರು, ದೇಶಾದ್ಯಂತ ರೈತರ ಅನುಕೂಲಕ್ಕಾಗಿ ಜಲ ಸಂಪನ್ಮೂಲಗಳನ್ನು ಸೂಕ್ತವಾಗಿ ಬಳಸಿಕೊಳ್ಳಲು ನದಿಗಳ ಜೋಡಣೆಯನ್ನು ಸಮರ್ಥಿಸಿಕೊಂಡರು.

ಈ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಪಾಲರಾದ ಮಾನ್ಯ ಶ್ರೀ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಶ್ರೀ ಎಚ್. ಡಿ. ಕುಮಾರಸ್ವಾಮಿ, ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ, ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ಆರ್. ಅಶೋಕ, ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕರಾದ ಡಾ. ಸಿ. ಎನ್. ಅಶ್ವತ್ಥನಾರಾಯಣ, ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ನಾಡಪ್ರಭು ಶ್ರೀ ಕೆಂಪೇಗೌಡ ಫೌಂಡೇಶನ್‌ನ ಅಧ್ಯಕ್ಷರಾದ ಪ್ರೊ. ಎಂ. ಕೃಷ್ಣೇಗೌಡ ಮತ್ತು ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮೊದಲಾದವರು ಉಪಸ್ಥಿತರಿದ್ದರು.


*****


(रिलीज़ आईडी: 2278487) आगंतुक पटल : 26
इस विज्ञप्ति को इन भाषाओं में पढ़ें: English , Urdu , हिन्दी , Gujarati , Tamil