ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜೆ.ಪಿ. ನಡ್ಡಾ ಅವರು 2026ರ ಜೂನ್ 29 ರಂದು ʻಆರೋಗ್ಯ ಸೇತು 2.0ʼ ಮತ್ತು ಆರೋಗ್ಯ ವಲಯದ ಇತರ ಡಿಜಿಟಲ್ ಉಪಕ್ರಮಗಳಿಗೆ ಚಾಲನೆ ನೀಡಲಿದ್ದಾರೆ
ʻಆಯುಷ್ಮಾನ್ ಸಾರಥಿ ಚಾಟ್‌ಬೋಟ್ʼ, ʻಆಯುಷ್ಮಾನ್ ಆ್ಯಪ್ʼ, ʻಇ-ಸುಶ್ರುತ್ ಕ್ಲಿನಿಕ್ʼ, ʻಎನ್ಎಚ್‌ಸಿಎಕ್ಸ್ʼ, ʻಎಫ್ಎಚ್ಐಆರ್ʼ ಉದ್ದೇಶಕ್ಕಾಗಿ ವಿಮಾ ಯೋಜನೆ ಸೇರಿದಂತೆ ವಿವಿಧ ಆರೋಗ್ಯ ಉಪಕ್ರಮಗಳು ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಬಲಪಡಿಸಲಿವೆ
ಆರೋಗ್ಯ ಸೇವೆಯನ್ನು ಹೆಚ್ಚು ಜನರಿಗೆ ಲಭ್ಯವಾಗುವ, ಸಂಪರ್ಕಿತ ಮತ್ತು ಪರಿಣಾಮಕಾರಿಯನ್ನಾಗಿ ಮಾಡಲು ಹೊಸ ಡಿಜಿಟಲ್ ಉಪಕ್ರಮಗಳನ್ನು ಆರಂಭಿಸಲಾಗಿದೆ
ನಾಗರಿಕ-ಕೇಂದ್ರಿತ ತಂತ್ರಜ್ಞಾನಗಳು ಮತ್ತು ಪರಸ್ಪರ ಕಾರ್ಯಸಾಧ್ಯವಾಗುವಂತಹ ಆರೋಗ್ಯ ಜಾಲಗಳ ಮೂಲಕ ಆರೋಗ್ಯಕ್ಕಾಗಿ ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಬಲಪಡಿಸಲಾಗುತ್ತಿದೆ
ಆರೋಗ್ಯ ದಾಖಲೆಗಳಿಂದ ಆರೋಗ್ಯ ಹಕ್ಕುಗಳವರೆಗೆ: ಹೊಸ ಡಿಜಿಟಲ್ ಉಪಕ್ರಮಗಳು ಆರೋಗ್ಯ ವಿತರಣೆಯನ್ನು ಪರಿವರ್ತಿಸುತ್ತವೆ
प्रविष्टि तिथि:
27 JUN 2026 11:23AM by PIB Bengaluru
ಭಾರತದ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರು ಜೂನ್ 29ರ ಸೋಮವಾರದಂದು ನವದೆಹಲಿಯ ʻವಿಜ್ಞಾನ ಭವನʼದಲ್ಲಿ ಆರೋಗ್ಯ ಕ್ಷೇತ್ರಕ್ಕಾಗಿ ಸರಣಿ ಡಿಜಿಟಲ್ ಉಪಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್ಎಚ್ಎ) ಮತ್ತು ʻಇಎಚ್ಆರ್ʼ ಮಾನದಂಡಕ್ಕಾಗಿ ರಾಷ್ಟ್ರೀಯ ಸಂಪನ್ಮೂಲ ಕೇಂದ್ರ (ಎನ್ಆರ್‌ಸಿಇಎಸ್) ಆಶ್ರಯದಲ್ಲಿ ಅಭಿವೃದ್ಧಿಪಡಿಸಲಾದ ಈ ಉಪಕ್ರಮಗಳು ಆರೋಗ್ಯ ಸೇವೆಗಳಿಗೆ ಪ್ರವೇಶವನ್ನು ವಿಸ್ತರಿಸುವುದು, ಪರಸ್ಪರ ಕಾರ್ಯಸಾಧ್ಯತೆಯನ್ನು ಬಲಪಡಿಸುವುದು ಮತ್ತು ದೇಶಾದ್ಯಂತ ಆರೋಗ್ಯಕ್ಕಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಅಳವಡಿಕೆಯನ್ನು ವೇಗಗೊಳಿಸುವ ಗುರಿಯನ್ನು ಹೊಂದಿವೆ.
ಉದ್ಘಾಟನಾ ಕಾರ್ಯಕ್ರಮವು ರಾಜ್ಯ ಪ್ರತಿನಿಧಿಗಳು, ಹಿರಿಯ ಸರ್ಕಾರಿ ಅಧಿಕಾರಿಗಳು, ಆರೋಗ್ಯ ನಾಯಕರು, ತಂತ್ರಜ್ಞಾನ ಪಾಲುದಾರರು, ಉದ್ಯಮ ಪ್ರತಿನಿಧಿಗಳು ಮತ್ತು ಆರೋಗ್ಯ ಪರಿಸರ ವ್ಯವಸ್ಥೆಯಾದ್ಯಂತ ಪ್ರಮುಖ ಮಧ್ಯಸ್ಥಗಾರರ ಉಪಸ್ಥಿತಿಗೆ ಸಾಕ್ಷಿಯಾಗಲಿದೆ. ಸಂಪರ್ಕಿತ ಮತ್ತು ಪರಸ್ಪರ ಕಾರ್ಯಸಾಧ್ಯವಾದ ಆರೋಗ್ಯ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಭಾರತದ ಪ್ರಯಾಣದಲ್ಲಿ ಇದು ಮತ್ತೊಂದು ಮೈಲಿಗಲ್ಲಾಗಿದೆ.
ಪ್ರಾರಂಭಿಸಲಾಗುತ್ತಿರುವ ಉಪಕ್ರಮಗಳಲ್ಲಿ ನಾಗರಿಕರನ್ನು ಬಳಸುವ ತಂತ್ರಾಂಶಗಳು, ಪೂರೈಕೆದಾರ-ಕೇಂದ್ರಿತ ಪರಿಹಾರಗಳು, ಪರಸ್ಪರ ಕಾರ್ಯಸಾಧ್ಯತೆಯ ನೀತಿಗಳು, ನೋಂದಾವಣೆಗಳು ಮತ್ತು ಡೇಟಾ ಮಾನದಂಡಗಳು ಸೇರಿವೆ. ಇವು ನಾಗರಿಕರು, ಆರೋಗ್ಯ ಪೂರೈಕೆದಾರರು, ವಿಮಾದಾರರು, ತಂತ್ರಜ್ಞಾನ ನಾವೀನ್ಯಕಾರರು ಮತ್ತು ನೀತಿ ನಿರೂಪಕರಿಗೆ ಸಮಾನವಾಗಿ ಪ್ರಯೋಜನವನ್ನು ನೀಡುವುದರ ಜೊತೆಗೆ ಆರೋಗ್ಯ ಪರಿಸರ ವ್ಯವಸ್ಥೆಯಾದ್ಯಂತ ಪ್ರವೇಶ, ದಕ್ಷತೆ ಮತ್ತು ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.
ಪ್ರಾರಂಭಿಸಲಿರುವ ಪ್ರಮುಖ ಉಪಕ್ರಮಗಳಲ್ಲಿ ನಾಗರಿಕರಿಗಾಗಿ ಸಮಗ್ರ ವೈಯಕ್ತಿಕ ಆರೋಗ್ಯ ದಾಖಲೆ ತಂತ್ರಾಂಶವಾದ (ಪಿಎಚ್ಆರ್) ʻಆರೋಗ್ಯ ಸೇತು 2.0ʼಸೇರಿದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಸ್ಥಾಪಿಸಲಾದ ನಂಬಿಕೆ ಮತ್ತು ವ್ಯಾಪ್ತಿಯ ತಳಹದಿಯ ಮೇಲೆ ಅಭಿವೃದ್ಧಿಪಡಿಸಲಾದ ಈ ಪರಿಷ್ಕೃತ ತಂತ್ರಾಂಶವು ಒಂದೇ ವೇದಿಕೆಯ ಮೂಲಕ ಅನೇಕ ಡಿಜಿಟಲ್ ಆರೋಗ್ಯ ಸೇವೆಗಳಿಗೆ ಹೆಬ್ಬಾಗಿಲನ್ನು ತೆರೆಯುತ್ತದೆ.
ಈ ತಂತ್ರಾಂಶವು ʻಎಬಿಎಚ್ಎʼ (ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್) ಸೃಷ್ಟಿ, ಮತ್ತು ನಿರ್ವಹಣೆ, ಡಿಜಿಟಲ್ ಆರೋಗ್ಯ ದಾಖಲೆಗಳಿಗೆ ಪ್ರವೇಶ ಮತ್ತು ಹಂಚಿಕೆ, ಒಪ್ಪಿಗೆ ಆಧಾರಿತ ಆರೋಗ್ಯ ಮಾಹಿತಿ ವಿನಿಮಯ, ಕೃತಕ ಬುದ್ಧಿಮತ್ತೆ ಚಾಲಿತ ಆರೋಗ್ಯ ಒಳನೋಟಗಳು ಮತ್ತು ಸ್ಮಾರ್ಟ್ ಆರೋಗ್ಯ ವರದಿಗಳು, ಧರಿಸಬಹುದಾದ ಸಾಧನ ಏಕೀಕರಣ, ಸ್ಕ್ಯಾನ್ ಮತ್ತು ರಿಜಿಸ್ಟರ್ ಮೂಲಕ ʻಒಪಿಡಿʼ ನೋಂದಣಿ, ಸ್ಕ್ಯಾನ್ ಮತ್ತು ಪಾವತಿ ಮೂಲಕ ಆಸ್ಪತ್ರೆ ಪಾವತಿಗಳು, ಔಷಧಿ ತೆಗೆದುಕೊಳ್ಳಲು ರಿಮೈಂಡರ್‌ಗಳು ಮತ್ತು ಕುಟುಂಬ ಆರೋಗ್ಯ ನಿರ್ವಹಣೆಯನ್ನು ಸಕ್ರಿಯಗೊಳಿಸುತ್ತದೆ.
ಇದು ಹತ್ತಿರದ ಆರೋಗ್ಯ ಘಟಕಗಳು ಹಾಗೂ ವೈದ್ಯರು, ಆಂಬ್ಯುಲೆನ್ಸ್ ಸೇವೆಗಳು, ರಕ್ತ ಘಟಕಗಳ ಲಭ್ಯತೆಯನ್ನು ಸೂಚಿಸುವುದರ ಜೊತೆಗೆ ರಕ್ತ ನಿಧಿಗಳು ಮತ್ತು ಜನೌಷಧಿ ಕೇಂದ್ರಗಳ ಅನ್ವೇಷಣೆಯನ್ನು ಸಹ ಸುಗಮಗೊಳಿಸುತ್ತದೆ.
ಹೆಚ್ಚುವರಿಯಾಗಿ, ʻಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆʼ (ಪಿಎಂ-ಜೆಎವೈ) ನೋಂದಾಯಿತ ಆಸ್ಪತ್ರೆಗಳ ಹುಡುಕಾಟ, ʻಎಬಿ ಪಿಎಂ-ಜೆಎವೈ ವ್ಯಾಲೆಟ್ʼ ಮತ್ತು ʻಆಯುಷ್ಮಾನ್ ಸಿಎಪಿಎಫ್ʼ ನೀತಿ ವಿವರಗಳಿಗೆ ಪ್ರವೇಶ, ಇತರ ಆರೋಗ್ಯ ಸೇವೆಗಳಿಗೆ ತಡೆರಹಿತ ಪ್ರವೇಶ ಸೇರಿದಂತೆ ʻಪಿಎಂ-ಜೆಎವೈʼ ಸೇವೆಗಳಿಗೆ ಪ್ರವೇಶವನ್ನು ಈ ತಂತ್ರಾಂಶವು ಸುಗಮಗೊಳಿಸುತ್ತದೆ.
ಸುಧಾರಿತ ಆಯುಷ್ಮಾನ್ ಆಪ್ ತಂತ್ರಾಂಶವು ʻಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆʼ ಫಲಾನುಭವಿಗಳಿಗೆ ಒಂದೇ ಸೂರಿನಡಿ ಸಮಗ್ರ ಸೇವೆಗಳ ಡಿಜಿಟಲ್ ವೇದಿಕೆಯಾಗಿಯೂ ಕಾರ್ಯನಿರ್ವಹಿಸುತ್ತದೆ. ನವೀಕರಿಸಿದ ತಂತ್ರಾಂಶವು ಫಲಾನುಭವಿಗಳಿಗೆ ಅರ್ಹತೆ ಪರಿಶೀಲನೆ, ಆಯುಷ್ಮಾನ್ ಕಾರ್ಡ್ ಸೇವೆಗಳು, ಚಿಕಿತ್ಸಾ ಇತಿಹಾಸ, ಆಸ್ಪತ್ರೆ ಅನ್ವೇಷಣೆ, ಕುಂದುಕೊರತೆ ಪರಿಹಾರ ಮತ್ತು ಫಲಾನುಭವಿಗಳ ಬೆಂಬಲ ಸೇರಿದಂತೆ ಅಗತ್ಯ ಯೋಜನೆ-ಸಂಬಂಧಿತ ಸೇವೆಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.
ಮತ್ತೊಂದು ಪ್ರಮುಖ ಉಪಕ್ರಮವೆಂದರೆ ಆಯುಷ್ಮಾನ್ ಸಾರಥಿ. ಇದು ʻಆಯುಷ್ಮಾನ್ ಭಾರತ್ ಪಿಎಂ-ಜೆಎವೈʼ ಫಲಾನುಭವಿಗಳಿಗಾಗಿ ವಾಟ್ಸ್‌ಆಪ್ ಚಾಟ್‌ಬಾಟ್ ಆಗಿದೆ. ಸರಳ ಸಂಭಾಷಣೆಯ ಮೂಲಕ ʻಪಿಎಂ-ಜೆಎವೈʼ ಸೇವೆಗಳನ್ನು ತಲುಪಿಸಲು ವಿನ್ಯಾಸಗೊಳಿಸಲಾದ ʻಆಯುಷ್ಮಾನ್ ಸಾರಥಿʼಯು ನಾಗರಿಕರಿಗೆ ಪ್ರಮುಖ ಯೋಜನೆ-ಸಂಬಂಧಿತ ಸೇವೆಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ, ಆ ಮೂಲಕ ಪ್ರವೇಶವನ್ನು ಸುಧಾರಿಸುತ್ತದೆ ಮತ್ತು ಕೊನೆಯ ಮೈಲಿ ಸೇವಾ ವಿತರಣೆಯನ್ನು ಬಲಪಡಿಸುತ್ತದೆ.
ನಾಗರಿಕರು ನೇರವಾಗಿ ಬಳಸಬಹುದಾದ ತಂತ್ರಾಂಶಗಳ ಜೊತೆಗೆ, ಆರೋಗ್ಯ ವಿತರಣೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಡಿಜಿಟಲ್ ಆರೋಗ್ಯ ಮತ್ತು ಪರಸ್ಪರ ಕಾರ್ಯಸಾಧ್ಯತೆಯ ಉಪಕ್ರಮಗಳ ಸರಣಿಯನ್ನು ಕೇಂದ್ರ ಆರೋಗ್ಯ ಸಚಿವ ಶ್ರೀ ಜೆ.ಪಿ. ನಡ್ಡಾ ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ತಡೆರಹಿತ ಆರೋಗ್ಯ ಹಕ್ಕುಗಳ ಪ್ರಕ್ರಿಯೆಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವಾದ ರಾಷ್ಟ್ರೀಯ ಆರೋಗ್ಯ ಹಕ್ಕುಗಳ ವಿನಿಮಯ (ಎನ್ಎಚ್ಸಿಎಕ್ಸ್), ಉಪಕ್ರಮವು ಸಾರ್ವಜನಿಕ ಮತ್ತು ಖಾಸಗಿ ಆರೋಗ್ಯ ವಿಮಾ ಯೋಜನೆಗಳಿಗೆ ಸಂಬಂಧಿಸಿದಂತೆ ಪೂರೈಕೆದಾರರು ಮತ್ತು ಪಾವತಿದಾರರ ನಡುವೆ ಆರೋಗ್ಯ ಹಕ್ಕುಗಳ ಮಾಹಿತಿಯ ಪ್ರಮಾಣೀಕೃತ ವಿನಿಮಯವನ್ನು ಸಕ್ರಿಯಗೊಳಿಸುತ್ತದೆ. ಆ ಮೂಲಕ ಆಡಳಿತಾತ್ಮಕ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ತ್ವರಿತ ಹಾಗೂ ಹೆಚ್ಚು ಪರಿಣಾಮಕಾರಿ ಕ್ಲೈಮುಗಳ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ.
ಆರೋಗ್ಯ ಹಕ್ಕುಗಳ ಪರಿಸರ ವ್ಯವಸ್ಥೆಯೊಳಗೆ ಪರಸ್ಪರ ಕಾರ್ಯಸಾಧ್ಯತೆಯನ್ನು ಬಲಪಡಿಸಲು, ಪಾವತಿದಾರರ ವಿಮಾ ಯೋಜನೆಗಳನ್ನು ಪ್ರಮಾಣೀಕೃತ ʻಎಫ್ಎಚ್ಐಆರ್ʼ ಬಂಡಲ್‌ಗಳಾಗಿ ಪರಿವರ್ತಿಸಲು ಅನುವು ಮಾಡಿಕೊಡುವ ಅನುಕೂಲವನ್ನು ʻಎನ್ಎಚ್ಎʼ ಪರಿಚಯಿಸುತ್ತದೆ. ಈ ಸೌಕರ್ಯವು ಪಾವತಿದಾರರಾದ್ಯಂತ ವಿಮಾ ಯೋಜನೆಯ ಮಾಹಿತಿಯನ್ನು ಏಕರೂಪದ ಮತ್ತು ದೋಷರಹಿತವಾಗಿ ರಚಿಸಲು, ಸ್ಥಿರತೆಯನ್ನು ಸುಧಾರಿಸಲು, ಮಾನವಚಾಲಿತ ಪ್ರಯತ್ನವನ್ನು ಕಡಿಮೆ ಮಾಡಲು ಮತ್ತು ಆರೋಗ್ಯ ಕ್ಲೇಮ್‌ಗಳ ಪ್ರಕ್ರಿಯೆಯನ್ನು ಮತ್ತಷ್ಟು ಪರಿಣಾಮಕಾರಿ ಬೆಂಬಲಿಸಲು ಅನುಕೂಲ ಮಾಡಿಕೊಡುತ್ತದೆ.
ಮುಕ್ತ ಮತ್ತು ಪರಸ್ಪರ ಕಾರ್ಯಸಾಧ್ಯವಾದ ಜಾಲದ ಮೂಲಕ ಆರೋಗ್ಯ ಸೇವೆಯ ಲಭ್ಯತೆಯನ್ನು ಮತ್ತಷ್ಟು ಬಲಪಡಿಸಲು, ಏಕೀಕೃತ ಆರೋಗ್ಯ ಇಂಟರ್ಫೇಸ್ (ಯುಎಚ್ಐ) ಅನ್ನು ಸಹ ರಾಷ್ಟ್ರಕ್ಕೆ ಸಮರ್ಪಿಸಲಾಗುತ್ತಿದೆ. ಸಾಮಾನ್ಯ ಪರಸ್ಪರ ಕಾರ್ಯಸಾಧ್ಯವಾದ ನೀತಿಯ ಮೂಲಕ ನಾಗರಿಕರನ್ನು ಆರೋಗ್ಯ ಸೇವಾ ಪೂರೈಕೆದಾರರೊಂದಿಗೆ ಸಂಪರ್ಕಿಸಲು ʻಯುಎಚ್ಐʼ ಉಪಕ್ರಮವು ಎಲ್ಲಾ ಡಿಜಿಟಲ್ ತಂತ್ರಾಂಶಗಳನ್ನು ಸಕ್ರಿಯಗೊಳಿಸುತ್ತದೆ. ಆರೋಗ್ಯ ಸೇವೆಗಳಿಗೆ ಸುಲಭ ಅನ್ವೇಷಣೆ ಮತ್ತು ಪ್ರವೇಶವನ್ನು ಇದು ಸುಗಮಗೊಳಿಸುತ್ತದೆ.
ಪೂರೈಕೆದಾರರ ಮಟ್ಟದಲ್ಲಿ ಡಿಜಿಟಲ್ ಆರೋಗ್ಯ ತಂತ್ರಜ್ಞಾನಗಳ ಅಳವಡಿಕೆಯನ್ನು ಬೆಂಬಲಿಸುವ ಇ-ಸುಶ್ರುತ್ ಕ್ಲಿನಿಕ್ ಅನ್ನು ಸಹ ಅನಾವರಣಗೊಳಿಸಲಾಗುವುದು. ಇದೊಂದು ʻಪ್ಲಗ್-ಅಂಡ್-ಪ್ಲೇʼ ಮಾದರಿಯ ಕ್ಲಿನಿಕ್ ನಿರ್ವಹಣಾ ಪರಿಹಾರವಾಗಿ ಕಾರ್ಯನಿರ್ವಹಿಸಲಿದೆ. ಇದು ಆರೋಗ್ಯ ಪೂರೈಕೆದಾರರಿಗೆ ಕ್ಲಿನಿಕಲ್ ಕೆಲಸದ ಹರಿವುಗಳನ್ನು ಡಿಜಿಟಲೀಕರಣಗೊಳಿಸಲು, ಎಲೆಕ್ಟ್ರಾನಿಕ್ ಆರೋಗ್ಯ ದಾಖಲೆಗಳನ್ನು ನಿರ್ವಹಿಸಲು ಮತ್ತು ʻಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ʼ ವ್ಯವಸ್ಥೆಯೊಂದಿಗೆ ತಡೆರಹಿತವಾಗಿ ಸಂಯೋಜಿಸಲು ಅನುವು ಮಾಡಿಕೊಡುತ್ತದೆ. ಡಿಜಿಟಲ್ ಆರೋಗ್ಯ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಮತ್ತು ಹೆಚ್ಚು ಪರಿಣಾಮಕಾರಿ ರೋಗಿಗಳ ಆರೈಕೆಯನ್ನು ತಲುಪಿಸುವಲ್ಲಿ ಈ ವೇದಿಕೆಯು ಆರೋಗ್ಯ ಕೇಂದ್ರಗಳಿಗೆ ನೆರವಾಗುವ ನಿರೀಕ್ಷೆಯಿದೆ.
ಆರೋಗ್ಯ ಪರಿಸರ ವ್ಯವಸ್ಥೆಯಾದ್ಯಂತ ಔಷಧ ಸಂಬಂಧಿತ ಮಾಹಿತಿಯನ್ನು ಪ್ರಮಾಣೀಕರಿಸುವ ಉದ್ದೇಶದಿಂದ ಔಷಧ ರಿಜಿಸ್ಟ್ರಿ ಸಹ ಪ್ರಾರಂಭಿಸಲಾಗುವುದು. ಡಿಜಿಟಲ್ ಆರೋಗ್ಯ ತಂತ್ರಾಂಶಗಳಾದ್ಯಂತ ಔಷಧಿಗಳ ಏಕರೂಪದ ಕೋಡಿಂಗ್ ಅನ್ನು ಸಕ್ರಿಯಗೊಳಿಸುವ ಮೂಲಕ, ಈ ರಿಜಿಸ್ಟ್ರಿಯು ಆರೋಗ್ಯ ವ್ಯವಸ್ಥೆಗಳಾದ್ಯಂತ ಪರಸ್ಪರ ಕಾರ್ಯಸಾಧ್ಯತೆಯನ್ನು ಸುಧಾರಿಸುವುದರ ಜೊತೆಗೆ ಶಿಫಾರಸು, ವಿತರಣೆ ಮತ್ತು ಆರೋಗ್ಯ ದತ್ತಾಂಶ ವಿನಿಮಯವನ್ನು ಬಲಪಡಿಸುತ್ತದೆ.
ಸಾಮಾನ್ಯ ಮಾನದಂಡಗಳೇ ಪರಸ್ಪರ ಕಾರ್ಯಸಾಧ್ಯತೆಯ ಮೂಲಾಧಾರ ಎಂಬುದನ್ನು ಗುರುತಿಸಿ, ಸರ್ಕಾರವು ʻಕಾಮನ್ ಎಲ್ಒಐಎನ್‌ಸಿ ಕೋಡ್ಸ್ ಫಾರ್ ಇಂಡಿಯಾ (ಸಿಎಲ್‌ಸಿಐ) ಅನ್ನು ಪ್ರಾರಂಭಿಸಲಿದೆ. ಇದು ಭಾರತೀಯ ಆರೋಗ್ಯ ಅಗತ್ಯಗಳಿಗೆ ಅನುಗುಣವಾಗಿ ಅಂತಾರಾಷ್ಟ್ರೀಯ ಪ್ರಯೋಗಾಲಯ ಮಾನದಂಡಗಳನ್ನು ರಾಷ್ಟ್ರೀಯವಾಗಿ ಪರಿಷ್ಕರಿಸಿದ ಉಪಕ್ರಮವಾಗಿದೆ. ಇದನ್ನು ʻಎನ್ಆಸಿಆರ್‌ಇಎಸ್ʼ ಅಭಿವೃದ್ಧಿಪಡಿಸಿದೆ. ಪ್ರಯೋಗಾಲಯ ಅವಲೋಕನಗಳು ಮತ್ತು ರೋಗನಿರ್ಣಯ ಮಾಹಿತಿಯ ಪ್ರಮಾಣೀಕೃತ ಪ್ರಾತಿನಿಧ್ಯವನ್ನು ಸಕ್ರಿಯಗೊಳಿಸುವ ಮೂಲಕ, ಆಸ್ಪತ್ರೆಗಳು, ಪ್ರಯೋಗಾಲಯಗಳು ಮತ್ತು ಡಿಜಿಟಲ್ ಆರೋಗ್ಯ ವೇದಿಕೆಗಳಾದ್ಯಂತ ಪ್ರಯೋಗಾಲಯ ದತ್ತಾಂಶದ ತಡೆರಹಿತ ವಿನಿಮಯವನ್ನು ʻಸಿಎಲ್‌ಸಿಇಐʼ ಬೆಂಬಲಿಸುತ್ತದೆ. ಜೊತೆಗೆ ಪ್ರಕ್ರಿಯೆಗಳಲ್ಲಿ ಸ್ಥಿರತೆ, ದತ್ತಾಂಶ ಗುಣಮಟ್ಟ ಮತ್ತು ಕ್ಲಿನಿಕಲ್ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಸುಧಾರಿಸುತ್ತದೆ.
ಈ ಪ್ರಯತ್ನಗಳಿಗೆ ಪೂರಕವಾಗಿ, ʻಎನ್ಆರ್‌ಸಿಇಎಸ್ʼ ಅಭಿವೃದ್ಧಿಪಡಿಸಿದ ಭಾರತ್ ಹೆಲ್ತ್ ಟರ್ಮಿನಾಲಜಿ ಸರ್ವೀಸ್ (ಬಿಎಚ್‌ಟಿಎಸ್) ಉಪಕ್ರಮವನ್ನು ಆರಂಭಿಸಲಾಗುವುದು. ಇದು ಸ್ಥಿರವಾದ ವ್ಯಾಖ್ಯಾನ ಮತ್ತು ಆರೋಗ್ಯ ಮಾಹಿತಿಯ ವಿನಿಮಯವನ್ನು ಸಕ್ರಿಯಗೊಳಿಸುವ ಮೂಲಕ ಡಿಜಿಟಲ್ ಆರೋಗ್ಯ ವ್ಯವಸ್ಥೆಗಳಾದ್ಯಂತ ಶಬ್ದಾರ್ಥದ ಪರಸ್ಪರ ಕಾರ್ಯಸಾಧ್ಯತೆಯನ್ನು ಬೆಂಬಲಿಸಲಿದೆ. ಪ್ರಮಾಣೀಕೃತ ಆರೋಗ್ಯ ಪರಿಭಾಷೆಗಳು, ಕೋಡ್ ವ್ಯವಸ್ಥೆಗಳು ಮತ್ತು ಮೌಲ್ಯ ಸೆಟ್ಗಳಿಗೆ ಪ್ರವೇಶವನ್ನು ಒದಗಿಸುತ್ತದೆ.
ಒಟ್ಟಾಗಿ, ʻಡ್ರಗ್ ರಿಜಿಸ್ಟ್ರಿʼ, ʻಸಿಎಲ್‌ಸಿಐʼ ಮತ್ತು ʻಬಿಎಚ್‌ಟಿಎಸ್ ʼಭಾರತದಲ್ಲಿ ಡಿಜಿಟಲ್ ಆರೋಗ್ಯ ರಕ್ಷಣೆಗಾಗಿ ಸಾಮಾನ್ಯ ಭಾಷೆಯನ್ನು ಸ್ಥಾಪಿಸಲಿವೆ. ಆರೋಗ್ಯ ಪೂರೈಕೆದಾರರು, ಪ್ರಯೋಗಾಲಯಗಳು, ವಿಮೆದಾರರು ಮತ್ತು ಡಿಜಿಟಲ್ ವೇದಿಕೆಗಳು ಆರೋಗ್ಯ ಮಾಹಿತಿಯನ್ನು ತಡೆರಹಿತವಾಗಿ ವಿನಿಮಯ ಮಾಡಿಕೊಳ್ಳಲು ಮತ್ತು ವ್ಯಾಖ್ಯಾನಿಸಲು ಅನುವು ಮಾಡಿಕೊಡುತ್ತದೆ.
ಈ ಉಪಕ್ರಮಗಳು ಪರಸ್ಪರ ಕಾರ್ಯಸಾಧ್ಯತೆ ಸುಧಾರಿಸುವ ಜೊತೆಗೆ, ಪ್ರಮಾಣೀಕರಣ ಮತ್ತು ಮಧ್ಯಸ್ಥಗಾರರ ನಡುವೆ ಆರೋಗ್ಯ ಮಾಹಿತಿಯ ತಡೆರಹಿತ ವಿನಿಮಯದ ಮೂಲಕ ಭಾರತದ ಡಿಜಿಟಲ್ ಆರೋಗ್ಯ ಸಾರ್ವಜನಿಕ ಮೂಲಸೌಕರ್ಯವನ್ನು ಬಲಪಡಿಸುವ ನಿರೀಕ್ಷೆಯಿದೆ. ಹೆಚ್ಚು ಸಂಪರ್ಕಿತ, ಪರಿಣಾಮಕಾರಿ ಮತ್ತು ಪರಸ್ಪರ ಕಾರ್ಯಸಾಧ್ಯವಾದ ಆರೋಗ್ಯ ವಿತರಣೆಯನ್ನು ಸಕ್ರಿಯಗೊಳಿಸುವ ಮೂಲಕ, ಎಲ್ಲರಿಗೂ ಲಭ್ಯವಾಗುವ, ಕೈಗೆಟುಕುವ ಮತ್ತು ಸಮಗ್ರ ಆರೋಗ್ಯ ರಕ್ಷಣೆಯನ್ನು ಒದಗಿಸುವ ಸರ್ಕಾರದ ದೃಷ್ಟಿಕೋನವನ್ನು ಇವು ಬೆಂಬಲಿಸುತ್ತವೆ.
ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ಎಬಿಡಿಎಂ) ಕುರಿತು
ʻಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ʼ ಇದು ದೇಶದ ಸಮಗ್ರ ಡಿಜಿಟಲ್ ಆರೋಗ್ಯ ಮೂಲಸೌಕರ್ಯವನ್ನು ಬೆಂಬಲಿಸಲು ಅಗತ್ಯವಾದ ಬೆನ್ನೆಲುಬನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಡಿಜಿಟಲ್ ಹೆದ್ದಾರಿಗಳ ಮೂಲಕ ಆರೋಗ್ಯ ಪರಿಸರ ವ್ಯವಸ್ಥೆಯ ಮಧ್ಯಸ್ಥಗಾರರ ನಡುವೆ ಅಸ್ತಿತ್ವದಲ್ಲಿರುವ ಅಂತರವನ್ನು ಕಡಿಮೆ ಮಾಡಲು ʻಎಬಿಡಿಎಂʼ ಪ್ರಯತ್ನಿಸುತ್ತದೆ. ಆ ಮೂಲಕ ಎಲ್ಲಾ ನಾಗರಿಕರಿಗೆ ಸುಲಭವಾಗಿ ಲಭ್ಯವಾಗುವ, ಅಗ್ಗದ ದರದ ಮತ್ತು ಪರಿಣಾಮಕಾರಿ ಆರೋಗ್ಯ ಸೇವೆಗಳನ್ನು ಸಕ್ರಿಯಗೊಳಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ, ಭೇಟಿ ನೀಡಿ: https://abdm.gov.in/
*****
(रिलीज़ आईडी: 2278414)
आगंतुक पटल : 24