ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಆಮದು ಮಾಡಿಕೊಳ್ಳುವ ಔಷಧಿಗಳ ಉಳಿದಿರುವ ಶೆಲ್ಫ್-ಲೈಫ್ ಅಗತ್ಯತೆಯನ್ನು ತರ್ಕಬದ್ಧಗೊಳಿಸಲು ಕರಡು ತಿದ್ದುಪಡಿಯ ಕುರಿತು ಸಾರ್ವಜನಿಕ ಅಭಿಪ್ರಾಯಗಳನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಆಹ್ವಾನ
ಪ್ರಸ್ತಾವಿತ ತಿದ್ದುಪಡಿಯು ಸೂಕ್ತವಾದ ಶೆಲ್ಫ್-ಲೈಫ್ ಹೊಂದಿರುವ ಗುಣಮಟ್ಟದ ಔಷಧಿಗಳ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ, ವ್ಯಾಪಾರ ನಿರ್ವಹಣೆಯನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿದೆ
प्रविष्टि तिथि:
26 JUN 2026 10:22AM by PIB Bengaluru
ಆಮದು ಮಾಡಿಕೊಂಡ ಔಷಧಿಗಳ ಉಳಿದಿರುವ ಶೆಲ್ಫ್-ಲೈಫ್ ಅವಶ್ಯಕತೆಗಳನ್ನು ತರ್ಕಬದ್ಧಗೊಳಿಸುವ ಮತ್ತು ಔಷಧೀಯ ವಲಯದಲ್ಲಿ ವ್ಯವಹಾರವನ್ನು ಸುಲಭಗೊಳಿಸುವ ಉದ್ದೇಶದಿಂದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 1945ರ ಔಷಧ ನಿಯಮಗಳ ನಿಯಮ 31 ಕ್ಕೆ ತಿದ್ದುಪಡಿಗಳನ್ನು ಪ್ರಸ್ತಾಪಿಸುವ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ.
22 ಜೂನ್ 2026 ರ ಗೆಜೆಟ್ ಅಧಿಸೂಚನೆ ಜಿ.ಎಸ್.ಆರ್. 505 (ಇ) ಮೂಲಕ ಸಾರ್ವಜನಿಕರ ಸಮಾಲೋಚನೆಗಾಗಿ ಪ್ರಕಟಿಸಲಾದ ಕರಡು ತಿದ್ದುಪಡಿಯು, ಆಮದು ಮಾಡಿಕೊಳ್ಳುವ ಔಷಧಿಗಳಿಗೆ ಪ್ರಸ್ತುತ ಇರುವ ಕನಿಷ್ಠ ಶೇಕಡಾ 60 ಕ್ಕಿಂತ ಹೆಚ್ಚಿನ ಶೆಲ್ಫ್-ಲೈಫ್ ಅಗತ್ಯತೆಯನ್ನು, ಆಮದು ಮಾಡಿಕೊಳ್ಳುವ ಸಮಯದಲ್ಲಿ ಕನಿಷ್ಠ 12 ತಿಂಗಳ ಕನಿಷ್ಟ ಶೆಲ್ಫ್-ಲೈಫ್ ಇರಬೇಕು ಎಂದು ಪರಿಷ್ಕರಿಸಲು ಪ್ರಸ್ತಾಪಿಸಿದೆ. ಆದಾಗ್ಯೂ, ಜೈವಿಕ ಉತ್ಪನ್ನಗಳು ಮತ್ತು ರೇಡಿಯೋಫಾರ್ಮಾಸ್ಯುಟಿಕಲ್ಸ್ ಗಳ ವಿಶಿಷ್ಟ ಸ್ವರೂಪ ಮತ್ತು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ, ಅವುಗಳಿಗೆ ಪ್ರಸ್ತುತ ಇರುವ ಕನಿಷ್ಠ ಶೇಕಡಾ 60 ಕ್ಕಿಂತ ಹೆಚ್ಚಿನ ಶೆಲ್ಫ್-ಲೈಫ್ ಅಗತ್ಯತೆಯು ಮುಂದುವರಿಯುತ್ತದೆ.
ರೋಗಿಗಳಿಗೆ ಗುಣಮಟ್ಟದ ಔಷಧಿಗಳ ಲಭ್ಯತೆಯನ್ನು ಕಾಪಾಡಿಕೊಳ್ಳುವಾಗ ಔಷಧೀಯ ಪೂರೈಕೆ ಸರಪಳಿಯಲ್ಲಿ ದಕ್ಷತೆಯನ್ನು ಹೆಚ್ಚಿಸುವುದು ಪ್ರಸ್ತಾವಿತ ತಿದ್ದುಪಡಿಯ ಉದ್ದೇಶವಾಗಿದೆ. ದೇಶಕ್ಕೆ ಪ್ರವೇಶಿಸುವ ಆಮದು ಮಾಡಿಕೊಂಡ ಔಷಧಿಗಳು ಕನಿಷ್ಠ ಹನ್ನೆರಡು ತಿಂಗಳುಗಳ ಶೆಲ್ಫ್-ಲೈಫ್ (ಜೀವಿತಾವಧಿ)ಅನ್ನು ಹೊಂದಿವೆ ಎಂದು ಖಚಿತಪಡಿಸಿಕೊಳ್ಳುವ ಮೂಲಕ, ಪ್ರಸ್ತಾವನೆಯು ಅವಧಿ ಮುಗಿಯುವ ಮೊದಲು ವಿತರಣೆ ಮತ್ತು ಬಳಕೆಗೆ ಸಾಕಷ್ಟು ಸಮಯವನ್ನು ಅನುಮತಿಸುತ್ತದೆ, ಇದರಿಂದಾಗಿ ರೋಗಿಗಳು ಸಾಕಷ್ಟು ಬಳಸಬಹುದಾದ ಸಮಯದ ಚೌಕಟ್ಟಿನೊಂದಿಗೆ ಔಷಧಿಗಳನ್ನು ಪಡೆಯುತ್ತಾರೆ ಎನ್ನುವುದನ್ನು ಖಚಿತಪಡಿಸುತ್ತದೆ.
ನಿರ್ಬಂಧಿತ ಉಳಿಕೆ ಶೆಲ್ಫ್-ಲೈಫ್ ಅಗತ್ಯತೆಗಳಿಂದಾಗಿ ಉಂಟಾಗುವ ಔಷಧಿಗಳ ಅನಗತ್ಯ ವ್ಯರ್ಥವನ್ನು ಕಡಿಮೆ ಮಾಡುವ ಮೂಲಕ, ಈ ತಿದ್ದುಪಡಿಯು ಪೂರೈಕೆ ಸರಪಳಿಯುದ್ದಕ್ಕೂ ಔಷಧೀಯ ದಾಸ್ತಾನುಗಳ ಉತ್ತಮ ಬಳಕೆಯನ್ನು ಸುಧಾರಿಸುವ ನಿರೀಕ್ಷೆಯಿದೆ. ಇದು ಪ್ರತಿಯಾಗಿ, ಪೂರೈಕೆ ನಿರ್ವಹಣೆಯನ್ನು ಉತ್ತಮಗೊಳಿಸಲು, ವೆಚ್ಚವನ್ನು ಕಡಿಮೆ ಮಾಡಲು ಮತ್ತು ದೇಶದಲ್ಲಿ ಅಗತ್ಯ ಔಷಧಿಗಳ ಲಭ್ಯತೆಯನ್ನು ಬಲಪಡಿಸಲು ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಪ್ರಸ್ತಾವಿತ ತಿದ್ದುಪಡಿಯು ಔಷಧಿಗಳನ್ನು ಆಮದು ಮಾಡಿಕೊಳ್ಳುವ ಸಮಯದಲ್ಲಿ ಉಳಿದ ಶೆಲ್ಫ್ ಜೀವಿತಾವಧಿಗೆ ಸಂಬಂಧಿಸಿದ ಅವಶ್ಯಕತೆಗೆ ಮಾತ್ರ ಸಂಬಂಧಿಸಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಈ ಪ್ರಸ್ತಾವನೆಯು ಔಷಧಗಳು ಮತ್ತು ಸೌಂದರ್ಯವರ್ಧಕ ಕಾಯ್ದೆ, 1940 ಮತ್ತು ಔಷಧ ನಿಯಮಗಳು, 1945 ರ ಅಡಿಯಲ್ಲಿ ಔಷಧಿಗಳ ಗುಣಮಟ್ಟ, ಸುರಕ್ಷತೆ ಅಥವಾ ಪರಿಣಾಮಕಾರಿತ್ವಕ್ಕೆ ಸಂಬಂಧಿಸಿದ ಯಾವುದೇ ಇತರ ನಿಯಂತ್ರಕ ಅವಶ್ಯಕತೆಗಳನ್ನು ಬದಲಾಯಿಸುವುದಿಲ್ಲ.
ಈ ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ ಸಚಿವಾಲಯವು ಎಲ್ಲಾ ಪಾಲುದಾರರಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಿದೆ. ನಿಗದಿತ ಅವಧಿಯೊಳಗೆ ಅಭಿಪ್ರಾಯಗಳನ್ನು ಅಧೀನ ಕಾರ್ಯದರ್ಶಿ (ಔಷಧಗಳು), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರ, ಯು-6, ವರ್ಕ್ ಹಾಲ್-ಸಿ ವಿಂಗ್, ಮೊದಲ ಮಹಡಿ, ಕರ್ತವ್ಯ ಭವನ-1, ನವದೆಹಲಿ-110001ಕ್ಕೆ ಅಥವಾ drugsdiv-mohfw[at]gov[dot]in ಗೆ ಇಮೇಲ್ ಮೂಲಕ ಸಲ್ಲಿಸಬಹುದು .
ಕರಡು ಗೆಜೆಟ್ ಅಧಿಸೂಚನೆಯನ್ನು ಇಲ್ಲಿ ಓದಬಹುದು: https://egazette.gov.in/WriteReadData/2026/273833.pdf
*****
(रिलीज़ आईडी: 2278252)
आगंतुक पटल : 7