ಸಹಕಾರ ಸಚಿವಾಲಯ
azadi ka amrit mahotsav

ನವದೆಹಲಿಯಲ್ಲಿ ʻನಾಫೆಡ್ʼನ ಹರಾಜು ಪೋರ್ಟಲ್ 'NAFEX.in'ಗೆ (ನಾಫೆಕ್ಸ್‌.ಇನ್‌)ಚಾಲನೆ ನೀಡಲಿರುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ


ಶ್ರೀ ಅಮಿತ್ ಶಾ ಅವರು ರೈತರ ಮಕ್ಕಳಿಗಾಗಿ ʻನಾಫೆಡ್-ಕಲ್ಯಾಣ್ʼ ವಿದ್ಯಾರ್ಥಿವೇತನ, ದಾಸ್ತಾನು ನಿರ್ವಹಣಾ ಪೋರ್ಟಲ್ ʻ ದೃಷ್ಟಿʼ ಮತ್ತು ʻಇಆರ್‌ಪಿʼ ಪೋರ್ಟಲ್‌ಗೆ ಚಾಲನೆ ನೀಡಲಿದ್ದಾರೆ

ಕೃಷಿ ಉತ್ಪನ್ನ ಹರಾಜಿನಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಡಿಜಿಟಲ್ ಪ್ರಕ್ರಿಯೆಗಳನ್ನು NAFEX.in ಬಲಪಡಿಸಲಿದೆ

प्रविष्टि तिथि: 22 JUN 2026 2:26PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನಾಳೆ , 23 ಜೂನ್ 2026 ರಂದು ನವದೆಹಲಿಯ ಅಟಲ್ ಅಕ್ಷಯ್ ಊರ್ಜಾ ಭವನದಲ್ಲಿ ʻಭಾರತದ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದ (ನಾಫೆಡ್) ಹರಾಜು ಪೋರ್ಟಲ್ 'NAFEX.in' ಗೆ ಚಾಲನೆ ನೀಡಲಿದ್ದಾರೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ʻನಾಫೆಡ್ʼ ಅಧ್ಯಕ್ಷ ಶ್ರೀ ಜೇತಾಭಾಯಿ ಅಹಿರ್, ನಾಫೆಡ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ದೀಪಕ್ ಅಗರ್ವಾಲ್ ಮತ್ತು ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.

ಕಾರ್ಯಕ್ರಮದಲ್ಲಿ ಶ್ರೀ ಅಮಿತ್ ಶಾ ಅವರು ʻನಾಫೆಡ್ʼನ ಹಲವಾರು ಪ್ರಮುಖ ಡಿಜಿಟಲ್ ಮತ್ತು ರೈತ ಕೇಂದ್ರಿತ ಉಪಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.  ಇವುಗಳಲ್ಲಿ ರೈತರ ಮಕ್ಕಳಿಗೆ ʻನಾಫೆಡ್-ಕಲ್ಯಾಣ್ ವಿದ್ಯಾರ್ಥಿವೇತನʼ, ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳ ದಾಸ್ತಾನು ನಿರ್ವಹಣೆಗಾಗಿ ʻದೃಷ್ಟಿʼ ಪೋರ್ಟಲ್, ಉದ್ಯಮ  ಸಂಪನ್ಮೂಲ ಯೋಜನೆಯನ್ನು ಬಲಪಡಿಸಲು ʻಇಆರ್‌ಪಿʼ ಪೋರ್ಟಲ್ ಮತ್ತು ಆನ್‌ಲೈನ್‌ ಹರಾಜು ವೇದಿಕೆಯಾಗಿ ಕಾರ್ಯನಿರ್ವಹಿಸಲಿರುವ NAFEX.in ಪೋರ್ಟಲ್ ಸೇರಿವೆ. ಕಾರ್ಯಕ್ರಮದಲ್ಲಿ ಹರಾಜು ಪೋರ್ಟಲ್‌ನಲ್ಲಿ ನೇರ ನೋಂದಣಿ ಪ್ರಾತ್ಯಕ್ಷಿಕೆ ಜತೆಗೆ ಹರಾಜು ಪ್ರಕ್ರಿಯೆಗೂ ಚಾಲನೆಯೂ ನಡೆಯಲಿದೆ.

ʻNAFEX.inʼ ಪೋರ್ಟಲ್‌ನ ಪ್ರಾರಂಭವು  ಹರಾಜು ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಕಾರ್ಯಾಚರಣೆಗಳನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ರೈತರು, ಸದಸ್ಯ ಸಂಸ್ಥೆಗಳು ಮತ್ತು ಪಾಲುದಾರರ ಹಿತದೃಷ್ಟಿಯಿಂದ ಹರಾಜು ಸಂಬಂಧಿತ ಚಟುವಟಿಕೆಗಳನ್ನು ಸುವ್ಯವಸ್ಥಿತಗೊಳಿಸಲು ಮತ್ತು ನಾಫೆಡ್‌ನ ಒಟ್ಟಾರೆ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಈ ಪೋರ್ಟಲ್ ಡಿಜಿಟಲ್ ವೇದಿಕೆಯನ್ನು ಒದಗಿಸಲಿದೆ.

ಈ ಸಂದರ್ಭದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ರೈತರ ಮಕ್ಕಳಿಗೆ ʻನಾಫೆಡ್-ಕಲ್ಯಾಣ್ ವಿದ್ಯಾರ್ಥಿವೇತನʼದ ಚೆಕ್‌ಗಳನ್ನು ವಿತರಿಸಲಿದ್ದಾರೆ. ಈ ಉಪಕ್ರಮವು ರೈತರ ಕಲ್ಯಾಣ ಮತ್ತು ರೈತರ ಮಕ್ಕಳ ಶಿಕ್ಷಣವನ್ನು ಬೆಂಬಲಿಸುವ ನಿಟ್ಟಿನಲ್ಲಿ ʻನಾಫೆಡ್ʼನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ನಂತರ, ಶ್ರೀ ಅಮಿತ್ ಶಾ ಅವರು ʻನಾಫೆಡ್ʼ ನಿರ್ದೇಶಕರ ಮಂಡಳಿಯ ಸದಸ್ಯರನ್ನು ಭೇಟಿ ಮಾಡಲಿದ್ದಾರೆ. ಸಭೆಯಲ್ಲಿ, ಕೇಂದ್ರ ಸಚಿವರು ತಮ್ಮ ಹಿಂದಿನ ಭೇಟಿಯ ಸಮಯದಲ್ಲಿ ನೀಡಿದ ನಿರ್ದೇಶನಗಳ ಮೇಲೆ ಕೈಗೊಂಡ ಕ್ರಮಗಳು ಮತ್ತು ʻನಾಫೆಡ್‌ʼನ ಭವಿಷ್ಯದ ಮಾರ್ಗಸೂಚಿ ಸೇರಿದಂತೆ ಅದರ ಚಟುವಟಿಕೆಗಳು ಮತ್ತು ಪ್ರಗತಿಯ ಬಗ್ಗೆ ಪ್ರಾತ್ಯಕ್ಷಿಕೆಯನ್ನು ʻನಾಫೆಡ್ʼ ಪ್ರಸ್ತುತಪಡಿಸಲಿದೆ.

ರೈತರು, ಕೃಷಿ ಮಾರುಕಟ್ಟೆ, ಖರೀದಿ ಮತ್ತು ಸಹಕಾರಿ ಆಧಾರಿತ ಕೃಷಿ ವ್ಯಾಪಾರವನ್ನು ಬೆಂಬಲಿಸುವಲ್ಲಿ ʻನಾಫೆಡ್ʼ ಮಹತ್ವದ ಪಾತ್ರ ವಹಿಸುತ್ತದೆ. ಈ ಡಿಜಿಟಲ್ ಮತ್ತು ಕಲ್ಯಾಣ ಉಪಕ್ರಮಗಳ ಪ್ರಾರಂಭವು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ "ಸಹಕಾರ್ ಸೇ ಸಮೃದ್ಧಿ" ದೃಷ್ಟಿಕೋನ  ಹಾಗೂ ತಂತ್ರಜ್ಞಾನ, ಪಾರದರ್ಶಕತೆ ಮತ್ತು ರೈತ ಕೇಂದ್ರಿತ ಸುಧಾರಣೆಗಳ ಮೂಲಕ ಸಹಕಾರಿ ಸಂಸ್ಥೆಗಳನ್ನು ಬಲಪಡಿಸುವ ಸರ್ಕಾರದ ಪ್ರಯತ್ನಗಳನ್ನು ಸೂಚಿಸುತ್ತದೆ.

 

*****


(रिलीज़ आईडी: 2276577) आगंतुक पटल : 8
इस विज्ञप्ति को इन भाषाओं में पढ़ें: English , Urdu , हिन्दी , Bengali , Bengali-TR , Punjabi , Gujarati , Tamil , Telugu