ಪ್ರಧಾನ ಮಂತ್ರಿಯವರ ಕಛೇರಿ
ಫ್ರಾನ್ಸ್‌ನಲ್ಲಿ ನಡೆದ ಭಾರತ್ ಇನ್ನೋವೇಟ್ಸ್ 2026 ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ
प्रविष्टि तिथि:
14 JUN 2026 4:36PM by PIB Bengaluru
ನನ್ನ ಪ್ರೀತಿಯ ಗೆಳೆಯ, ಗೌರವಾನ್ವಿತ ಅಧ್ಯಕ್ಷರಾದ ಮ್ಯಾಕ್ರನ್,
ವಿಸಿಗಳೇ, ಉದ್ಯಮ ಮುಖಂಡರು ಮತ್ತು ನಾವೀನ್ಯಕಾರರೇ,
ಶುಭ ದಿನ
ನಮಸ್ತೆ!
ಭಾರತ್ ಇನ್ನೋವೇಟ್ಸ್‌ನೊಂದಿಗೆ ಸಂಬಂಧಿಸಿದಂತೆ ಭಾಗವಹಿಸುವ ಎಲ್ಲರಿಗೂ ನಾನು ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಈ ಕಾರ್ಯಕ್ರಮದ ಯಶಸ್ಸಿಗಾಗಿ ಎಲ್ಲರಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.
ಸ್ನೇಹಿತರೇ,
ಪ್ರಪಂಚದಾದ್ಯಂತದ ದೇಶಗಳು ಪರಸ್ಪರ ವ್ಯಾಪಾರದಲ್ಲಿ ತೊಡಗಿಕೊಂಡಿವೆ ಮತ್ತು ರಾಷ್ಟ್ರಗಳ ನಡುವೆ ಕಾರ್ಯತಂತ್ರದ ಪಾಲುದಾರಿಕೆಗಳು ಸಹ ಅಸ್ತಿತ್ವದಲ್ಲಿವೆ. ಆದಾಗ್ಯೂ, ಕೆಲವು ಸಂಬಂಧಗಳು ಹಂಚಿಕೆಯ ಆಸಕ್ತಿಗಳಿಂದ ಮಾತ್ರವಲ್ಲದೆ ಹಂಚಿಕೆಯ ದೃಷ್ಟಿಕೋನದಿಂದಲೂ ನಡೆಸಲ್ಪಡುತ್ತವೆ. ಭಾರತ ಮತ್ತು ಫ್ರಾನ್ಸ್ ನಡುವಿನ ಸಂಬಂಧವು ಅಂತಹ ಪಾಲುದಾರಿಕೆಗಳಲ್ಲಿ ಒಂದಾಗಿದೆ.
ಈ ಸಂಬಂಧವು ಸಂಪರ್ಕ ಮತ್ತು ದೃಢನಿಶ್ಚಯ ಎರಡರಿಂದಲೂ ಗುರುತಿಸಲ್ಪಟ್ಟಿದೆ. ಇದು ನಾವೀನ್ಯತೆ ಮತ್ತು ಸ್ಫೂರ್ತಿ ಎರಡನ್ನೂ ಸಾಕಾರಗೊಳಿಸುತ್ತದೆ. ಇದು ಹಂಚಿಕೆಯ ಮೌಲ್ಯಗಳು ಮತ್ತು ಹಂಚಿಕೆಯ ದೃಷ್ಟಿಕೋನದ ಮೇಲೆ ಸ್ಥಾಪಿತವಾಗಿದೆ.
ಈ ಸಂಬಂಧದ ಅಡಿಪಾಯದ ಮೇಲೆ, ಕಳೆದ ವರ್ಷಗಳಲ್ಲಿ, ನಾವು ಜಂಟಿಯಾಗಿ ಹೊಸ ಉಪಕ್ರಮಗಳನ್ನು ಪ್ರಾರಂಭಿಸಿದ್ದೇವೆ, ಹೊಸ ಆಲೋಚನೆಗಳಿಗೆ ಮಾರ್ಗದರ್ಶನ ನೀಡಿದ್ದೇವೆ ಮತ್ತು ಜಾಗತಿಕ ಸವಾಲುಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದೇವೆ.
ಅದು ಅಂತರರಾಷ್ಟ್ರೀಯ ಸೌರ ಒಕ್ಕೂಟವಾಗಿರಲಿ, ಎ.ಐ.ಗೆ ಸಂಬಂಧಿಸಿದ ಸಂವಾದವಾಗಲಿ ಅಥವಾ ಭದ್ರತೆಯಿಂದ ಸುಸ್ಥಿರತೆಯವರೆಗಿನ ನಮ್ಮ ಸಹಕಾರವಾಗಲಿ, ಮಾನವೀಯತೆಗೆ ಸಂಬಂಧಿಸಿದ ಸವಾಲುಗಳಿಗೆ ಪರಿಹಾರಗಳನ್ನು ಒದಗಿಸಲು ನಮ್ಮ ಎರಡೂ ರಾಷ್ಟ್ರಗಳು ನಿರಂತರವಾಗಿ ಒಟ್ಟಾಗಿ ಕೆಲಸ ಮಾಡಿವೆ.
ಈ ಫೆಬ್ರವರಿ ಆರಂಭದಲ್ಲಿ, ಭಾರತ-ಫ್ರಾನ್ಸ್ ನಾವೀನ್ಯತೆ ವರ್ಷವನ್ನು ಪ್ರಾರಂಭಿಸಲಾಯಿತು. ಇಂದು, ಫ್ರಾನ್ಸ್‌ನ ಸಹಭಾಗಿತ್ವದಲ್ಲಿ ಭಾರತ್ ಇನ್ನೋವೇಟ್ಸ್‌ನ ಆರಂಭವನ್ನು ಸಹ ಕೈಗೊಳ್ಳಲಾಗುತ್ತಿದೆ ಎಂಬುದರಿಂದ ನಮಗೆ ಅಷ್ಟೇ ಸಂತೋಷವಾಗಿದೆ.
ಈ ಸಂದರ್ಭದಲ್ಲಿ ಇಲ್ಲಿ ಉಪಸ್ಥಿತರಿದ್ದದ್ದಕ್ಕಾಗಿ ನನ್ನ ಸ್ನೇಹಿತ ಅಧ್ಯಕ್ಷ ಮ್ಯಾಕ್ರನ್ ಅವರಿಗೆ ನಾನು ನನ್ನ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಧ್ಯಕ್ಷ ಮ್ಯಾಕ್ರನ್, ಈ ಶತಮಾನದ ಸವಾಲುಗಳನ್ನು ಎದುರಿಸಲು ಭಾರತ ಮತ್ತು ಫ್ರಾನ್ಸ್ ಒಟ್ಟಾಗಿ ಬರಬೇಕು ಎಂದು ನೀವು ಹೇಳಿದ್ದೀರಿ. ಇಂದು, ಈ ಉಪಕ್ರಮವು ಆ ದಿಕ್ಕಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ.
ಭಾರತ್ ಇನ್ನೋವೇಟ್ಸ್ ವೇದಿಕೆಯು ಭಾರತೀಯ ಪ್ರತಿಭೆ ಮತ್ತು ಯುರೋಪಿಯನ್ ಬಂಡವಾಳದ ನಡುವಿನ ಸೇತುವೆಯಾಗಿ ಹೊರಹೊಮ್ಮುತ್ತಿದೆ. ಇದು ಭಾರತದ ಯುವ ಮನಸ್ಸುಗಳು ಯುರೋಪಿಯನ್ ಪರಿಣತಿಯೊಂದಿಗೆ ಸಂಪರ್ಕ ಸಾಧಿಸಲು ಅವಕಾಶವನ್ನು ಪಡೆಯುತ್ತಿರುವ ವೇದಿಕೆಯಾಗಿದೆ.
ಸ್ನೇಹಿತರೇ,
ಇಂದು, 21ನೇ ಶತಮಾನದಲ್ಲಿ ಭಾರತವು ಆಳವಾದ ಪರಿವರ್ತನೆಯ ಅವಧಿಗೆ ಒಳಗಾಗುತ್ತಿದೆ. ಭಾರತವು ನವೋದ್ಯಮ ಕ್ರಾಂತಿಗೆ ಸಾಕ್ಷಿಯಾಗುತ್ತಿದೆ. ಈ ಕ್ರಾಂತಿಯಲ್ಲಿ, ಹೊಸ ಮನಸ್ಥಿತಿಯೊಂದಿಗೆ ಭಾರತದ ಯುವಜನರು ಮಾನವೀಯತೆಯ ಪ್ರಯೋಜನಕ್ಕಾಗಿ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುತ್ತಿದ್ದಾರೆ. ನಮ್ಮ ಯುವ ನಾವೀನ್ಯಕಾರರು ಅಭಿವೃದ್ಧಿಪಡಿಸಿದ ವಿಶ್ವ ದರ್ಜೆಯ ಪರಿಹಾರಗಳನ್ನು ಜಾಗತಿಕ ವೇದಿಕೆಗೆ ತರಲು ಭಾರತ್ ಇನ್ನೋವೇಟ್ಸ್ ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ನನ್ನ ಸ್ನೇಹಿತ, ಐಐಟಿ ದೆಹಲಿಯ ಮಂಡಳಿಯ ಅಧ್ಯಕ್ಷರಾದ ಶ್ರೀ ಹರೀಶ್ ಸಾಳ್ವೆ ಅವರು ಈ ಉಪಕ್ರಮದ ಸಂಘಟನೆಗೆ ಮಹತ್ವದ ಕೊಡುಗೆ ನೀಡಿದ್ದಾರೆ ಮತ್ತು ನಾನು ಅವರನ್ನು ಮತ್ತು ಅವರ ಇಡೀ ತಂಡವನ್ನು ಅವರ ಪ್ರಯತ್ನಗಳಿಗಾಗಿ ಅಭಿನಂದಿಸುತ್ತೇನೆ. ಸ್ನೇಹಿತರೇ,
ಇಂದು ಇಲ್ಲಿ ಹೆಚ್ಚಿನ ಸಂಖ್ಯೆಯ ಯುವ ಉದ್ಯಮಿಗಳು ಸೇರಿದ್ದಾರೆ. ಅವರಲ್ಲಿ, ಭಾರತದ ಭವಿಷ್ಯದ ಒಂದು ನೋಟವನ್ನು ನೋಡಬಹುದು. ಭಾರತದ ಯುವಜನರ ಆತ್ಮವಿಶ್ವಾಸವನ್ನು ನೋಡಬಹುದು. ನವ ಭಾರತದ ಶಕ್ತಿಯನ್ನು ಸಹ ನೋಡಬಹುದು.
ಕೇವಲ ಪರಿಹಾರಗಳ ಗ್ರಾಹಕನಾಗಿ ಮಾತ್ರವಲ್ಲದೆ, ಪರಿಹಾರಗಳ ಕೊಡುಗೆದಾರನಾಗಿಯೂ ಹೊರಹೊಮ್ಮುತ್ತಿದೆ ಭಾರತ. ಇಲ್ಲಿ, ಕೆಲವರು ಎ.ಐ. ಮೂಲಕ ಗ್ರಾಮೀಣ ಜೀವನವನ್ನು ಪರಿವರ್ತಿಸಲು ಕೆಲಸ ಮಾಡುತ್ತಿದ್ದಾರೆ, ಇತರರು ರೈತರನ್ನು ಬೆಂಬಲಿಸಲು ಉಪಗ್ರಹ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಕೆಲವು ಯುವ ನಾವೀನ್ಯಕಾರರು ಸ್ಮಾರ್ಟ್ ಸಿಟಿಗಳು, ಸುಧಾರಿತ ಉತ್ಪಾದನೆ ಮತ್ತು ಹೊಸ ವಸ್ತುಗಳ ಮೂಲಕ ಭವಿಷ್ಯವನ್ನು ರೂಪಿಸುತ್ತಿದ್ದಾರೆ. ಇತರರು ಹಸಿರು ಹೈಡ್ರೋಜನ್, ವಿದ್ಯುತ್ ಚಲನಶೀಲತೆ ಮತ್ತು ಬ್ಯಾಟರಿ ತಂತ್ರಜ್ಞಾನಗಳ ಮೂಲಕ ಸುಸ್ಥಿರ ಭವಿಷ್ಯವನ್ನು ಖಚಿತಪಡಿಸುತ್ತಿದ್ದಾರೆ. ಅದೇ ಸಮಯದಲ್ಲಿ, ಹಲವಾರು ಸ್ಟಾರ್ಟ್-ಅಪ್‌ಗಳು ರಕ್ಷಣೆ ಮತ್ತು ಭದ್ರತಾ ಕ್ಷೇತ್ರಗಳಲ್ಲಿ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿವೆ.
ನಿಮ್ಮ ಸಾಮರ್ಥ್ಯಗಳನ್ನು ನೋಡಿದರೆ, ನಾನು ಹೇಳುತ್ತೇನೆ: ಭಾರತ್ ಪ್ರಮಾಣ ಮತ್ತು ವೇಗದೊಂದಿಗೆ ನಾವೀನ್ಯತೆಯನ್ನು ಪಡೆಯುತ್ತದೆ. ಭಾರತ್ ಸುಸ್ಥಿರ ಭವಿಷ್ಯಕ್ಕಾಗಿ ನಾವೀನ್ಯತೆಯನ್ನು ಹೊಂದುತ್ತದೆ. ಮತ್ತು ಭಾರತ್ ಇಡೀ ಜಗತ್ತಿಗಾಗಿ ನಾವೀನ್ಯತೆಯನ್ನು ಅನ್ವೇಷಿಸುತ್ತದೆ.
ಸ್ನೇಹಿತರೇ,
ಇಂದು, ಅನೇಕ ಸಾಹಸೋದ್ಯಮ (ವೆಂಚರ್) ಬಂಡವಾಳಗಾರರು ಮತ್ತು ಕೈಗಾರಿಕಾ ಮುಖಂಡರು ಸಹ ಈ ಕಾರ್ಯಕ್ರಮದ ಭಾಗವಾಗಿದ್ದಾರೆ. ಅವರ ಸಮ್ಮುಖದಲ್ಲಿ, ಭಾರತದಿಂದ ಬಂದಿರುವ ಈ ಯುವ ಭಾಗವಹಿಸುವವರನ್ನು ನಾನು ವಿಶೇಷವಾಗಿ ಶ್ಲಾಘಿಸಲು ಬಯಸುತ್ತೇನೆ.
ಇಲ್ಲಿಗೆ ಬಂದಿರುವವರೆಲ್ಲರೂ ಸಾಂಪ್ರದಾಯಿಕ ಮಾರ್ಗವನ್ನು ಅನುಸರಿಸದಿರಲು ನಿರ್ಧರಿಸಿದವರು. ಬದಲಾಗಿ, ಅವರು ಹೊಸ ಹಾದಿಯನ್ನು ರೂಪಿಸಿದರು ಮತ್ತು ತಮಗಾಗಿ ಹೊಸ ದಿಕ್ಕನ್ನು ಸೃಷ್ಟಿಸಿಕೊಂಡರು. ಇಲ್ಲಿ, ನೀವು ಸುಮಾರು 100 ರಿಂದ 125 ಸ್ಟಾರ್ಟ್-ಅಪ್‌ಗಳನ್ನು ನೋಡುತ್ತಿರಬಹುದು, ಆದರೆ ಇಂದು ಭಾರತವು 200,000 ಕ್ಕೂ ಹೆಚ್ಚು ಅಂತಹ ಸ್ಟಾರ್ಟ್-ಅಪ್‌ಗಳ ವಿಶಾಲ ಗುಂಪನ್ನು ಹೊಂದಿದೆ. ಈ ಸ್ಟಾರ್ಟ್-ಅಪ್‌ಗಳು ಈಗ ಭಾರತೀಯ ಮತ್ತು ಜಾಗತಿಕ ಆರ್ಥಿಕತೆಯ ಬೆಳವಣಿಗೆಗೆ ನವೀಕೃತ ಶಕ್ತಿಯೊಂದಿಗೆ ಕೊಡುಗೆ ನೀಡುತ್ತಿವೆ.
ಸ್ನೇಹಿತರೇ,
ಜಗತ್ತಿಗೆ, ಈ ದಶಕವು ಅಡ್ಡಿ ಆತಂಕ ಮತ್ತು ಅಭಿವೃದ್ಧಿ ಎರಡರ ದಶಕವಾಗಿದೆ. ನಡೆಯುತ್ತಿರುವ ಸಂಘರ್ಷಗಳು ಮತ್ತು ಹವಾಮಾನ ಬದಲಾವಣೆಯ ಹೆಚ್ಚುತ್ತಿರುವ ಪ್ರಭಾವದ ಮಧ್ಯೆ, ಜಗತ್ತು ಅಭೂತಪೂರ್ವ ಕ್ರಾಂತಿಯ ಅವಧಿಯನ್ನು ಎದುರಿಸುತ್ತಿದೆ., ಇಂದು ಮಾನವೀಯತೆ ಎದುರಿಸುತ್ತಿರುವ ಸವಾಲುಗಳು ಅಪಾರವಾಗಿದ್ದರೂ, ನಮ್ಮ ಮುಂದಿರುವ ಅವಕಾಶಗಳು ಅಷ್ಟೇ ಗಮನಾರ್ಹವಾಗಿವೆ.
ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್, ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನಗಳು ಮತ್ತು ಸುಧಾರಿತ ವಸ್ತುಗಳು ಇವೆಲ್ಲವೂ ಮಾನವೀಯತೆಯ ಭವಿಷ್ಯವನ್ನು ರೂಪಿಸುವ ತಂತ್ರಜ್ಞಾನಗಳಾಗಿವೆ. ಅವು ಮಾನವ ನಾಗರಿಕತೆಯ ಮುಂದಿನ ಅಧ್ಯಾಯವನ್ನು ಪ್ರತಿನಿಧಿಸುತ್ತವೆ.
ಪ್ರತಿಯೊಂದು ತಾಂತ್ರಿಕ ಕ್ರಾಂತಿಯು ಮಾನವೀಯತೆಗೆ ಹೊಸ ಅವಕಾಶವನ್ನು ಒದಗಿಸುತ್ತದೆ. ಮತ್ತು ಪ್ರತಿಯೊಂದು ಅವಕಾಶವು ಅದರೊಂದಿಗೆ ಹೊಸ ಜವಾಬ್ದಾರಿಯನ್ನು ತರುತ್ತದೆ. ಇಂದು, ಜಗತ್ತು ವಿಶ್ವಾಸಾರ್ಹ, ಎಲ್ಲರನ್ನೂ ಒಳಗೊಳ್ಳುವ, ಮಾನವ ಕೇಂದ್ರಿತ ಮತ್ತು ಜಾಗತಿಕ ಒಳಿತನ್ನು ಗುರಿಯಾಗಿರಿಸಿಕೊಂಡ ತಂತ್ರಜ್ಞಾನಗಳತ್ತ ನೋಡುತ್ತಿದೆ. ಅಂತಹ ಸಮಯದಲ್ಲಿ, ಭಾರತದ ಆದ್ಯತೆಯು ಮಾನವೀಯತೆಗಾಗಿ ತಂತ್ರಜ್ಞಾನ; ಮಾನವ ಕೇಂದ್ರಿತ ನಾವೀನ್ಯತೆ.
ಸ್ನೇಹಿತರೇ,
ಈ ಮಂತ್ರವು ನಮ್ಮ ಡಿಜಿಟಲ್ ಕ್ರಾಂತಿಯ ತಿರುಳಾಗಿದೆ. ಇದು ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಸಾರವನ್ನು ಸಹ ಪ್ರತಿಬಿಂಬಿಸುತ್ತದೆ. ನಮ್ಮ ಎ.ಐ. ದೃಷ್ಟಿಕೋನದ ಮೂಲಭೂತ ತತ್ವವು ಅದೇ ಆಗಿರುತ್ತದೆ - ಎಲ್ಲರಿಗೂ ಎ.ಐ. - ಎಲ್ಲರ ಕಲ್ಯಾಣ ಮತ್ತು ಯೋಗಕ್ಷೇಮಕ್ಕಾಗಿ. ಇದು ದೆಹಲಿಯಲ್ಲಿ ನಡೆದ ಎ.ಐ. ಇಂಪ್ಯಾಕ್ಟ್ ಶೃಂಗಸಭೆಯ ಕೇಂದ್ರ ಶೀರ್ಷಿಕೆಯೂ ಆಗಿತ್ತು.
ಸ್ನೇಹಿತರೇ,
ಭಾರತವು ನಾವೀನ್ಯತೆ ಮತ್ತು ಸೇರ್ಪಡೆ ಪರಸ್ಪರ ವಿರುದ್ಧವಾಗಿಲ್ಲ, ಬದಲಾಗಿ ಪೂರಕವಾಗಿದೆ ಎಂಬುದನ್ನು ಪ್ರದರ್ಶಿಸಿದೆ. ಇದರರ್ಥ ಯಾವುದೇ ನಾವೀನ್ಯತೆಯ ಶ್ರೇಷ್ಠತೆಯು ಅದರ ಮೌಲ್ಯಮಾಪನದಲ್ಲಿ ಮಾತ್ರ ಇರುವುದಿಲ್ಲ, ಅದರ ನಿಜವಾದ ಶ್ರೇಷ್ಠತೆಯು ಅದರ ಮಾನವ ಪ್ರಭಾವದಲ್ಲಿದೆ.
ಇದು ಭಾರತ್ ಇನ್ನೋವೇಟ್ಸ್‌ನ ಉತ್ಸಾಹ. ಇದು ಭಾರತದ ದೃಷ್ಟಿಕೋನ. ಇಲ್ಲಿರುವ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯ ಜೊತೆಗೆ, ಇದು ನಿಮ್ಮೆಲ್ಲರಿಗೂ ಸ್ಫೂರ್ತಿಯ ಸಮಾನ ಮೂಲವಾಗಿ ಕಾರ್ಯನಿರ್ವಹಿಸುತ್ತದೆ.
ಸ್ನೇಹಿತರೇ,
ಭಾರತದ ಡಿಎನ್‌ಎಯಲ್ಲಿ ನಾವೀನ್ಯತೆ ಇದೆ. ಸಾವಿರಾರು ವರ್ಷಗಳಿಂದ, ಭಾರತವು ತನ್ನ ಜ್ಞಾನ ಮತ್ತು ನಾವೀನ್ಯತೆಯ ಮೂಲಕ ಜಗತ್ತಿಗೆ ಹೊಸ ದಿಕ್ಕನ್ನು ಒದಗಿಸಿದೆ. ಗಣಿತದಿಂದ ಖಗೋಳಶಾಸ್ತ್ರದವರೆಗೆ, ಔಷಧದಿಂದ ಯೋಗದವರೆಗೆ, ಭಾರತದ ಕೊಡುಗೆಗಳು ಎಲ್ಲಾ ಮಾನವೀಯತೆಯ ಪ್ರಗತಿಯ ಅಡಿಪಾಯವನ್ನು ರೂಪಿಸಿವೆ. ಇಂದು, ನಾವು ಈ ಪರಂಪರೆಗೆ ಹೊಸ ವೇಗ ಮತ್ತು ಹೊಸ ದಿಕ್ಕನ್ನು ನೀಡಿದ್ದೇವೆ.
ಸ್ನೇಹಿತರೇ,
ಕಳೆದ 11 - 12 ವರ್ಷಗಳಲ್ಲಿ, ಭಾರತವು ನಾವೀನ್ಯತೆಗಾಗಿ ಬಲವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸಿದೆ. ಪೇಟೆಂಟ್ ಸಲ್ಲಿಕೆಯಿಂದ ಇನ್‌ಕ್ಯುಬೇಶನ್ ನೆಟ್‌ವರ್ಕ್‌ಗಳವರೆಗೆ, ಸ್ಟಾರ್ಟ್‌ಅಪ್ ಇಂಡಿಯಾದಿಂದ ನೀತಿ ಬೆಂಬಲದವರೆಗೆ, ಈ ಸಂಪೂರ್ಣ ಪ್ರಯಾಣವು ಆಂದೋಲನದೋಪಾದಿಯಲ್ಲಿ (ಮಿಷನ್ ಮೋಡ್‌ನಲ್ಲಿ) ಮುಂದುವರೆದಿದೆ.
ಇಂದು, ಭಾರತವು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯಾಗಿದೆ. ನಮ್ಮ ದೃಷ್ಟಿಕೋನವು ಪ್ರಮುಖ ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ. ನಾವೀನ್ಯತೆಯನ್ನು ತಳಮಟ್ಟಕ್ಕೆ ಕೊಂಡೊಯ್ಯಲು ನಾವು ಕೆಲಸ ಮಾಡಿದ್ದೇವೆ.
ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ಸ್ಥಾಪಿಸಲಾಗಿದೆ, ಯುವಜನರು ಹ್ಯಾಕಥಾನ್‌ಗಳು ಮತ್ತು ನಾವೀನ್ಯತೆ ಸವಾಲುಗಳೊಂದಿಗೆ ಸಂಪರ್ಕ ಹೊಂದುತ್ತಿದ್ದಾರೆ, ಇನ್ಕ್ಯುಬೇಟರ್‌ಗಳು ಮತ್ತು ಸಂಶೋಧನಾ ಸಂಸ್ಥೆಗಳನ್ನು ದೇಶಾದ್ಯಂತ ವಿಸ್ತರಿಸಲಾಗುತ್ತಿದೆ ಮತ್ತು ವಿಶೇಷವಾಗಿ ಮಹಿಳಾ ನಾವೀನ್ಯಕಾರರನ್ನು ವ್ಯಾಪಕ ಶ್ರೇಣಿಯ ಹೊಸ ತಂತ್ರಜ್ಞಾನಗಳೊಂದಿಗೆ ಸಂಪರ್ಕಿಸಲಾಗುತ್ತಿದೆ.
ಈ ಎಲ್ಲಾ ಪ್ರಯತ್ನಗಳ ಪರಿಣಾಮವಾಗಿ, ಭಾರತವು ದೊಡ್ಡ ಪ್ರಮಾಣದಲ್ಲಿ ಪರಿವರ್ತನಾತ್ಮಕ ಬದಲಾವಣೆಗೆ ಸಾಕ್ಷಿಯಾಗಿದೆ. ಇಂದು, ಡ್ರೋನ್ ದಿದೀಸ್‌ನಿಂದ ಸ್ಟಾರ್ಟ್-ಅಪ್‌ಗಳ ಸ್ಥಾಪಕರವರೆಗೆ, ನಮ್ಮ ಮಹಿಳಾ ಶಕ್ತಿ ಹೊಸ ಯಶಸ್ಸಿನ ಕಥೆಗಳನ್ನು ಬರೆಯುತ್ತಿದೆ.
ಸ್ನೇಹಿತರೇ,
ನಮ್ಮ ಯುವಜನರ ಶಕ್ತಿಯನ್ನು ಮತ್ತಷ್ಟು ಬಳಸಿಕೊಳ್ಳಲು, ಭಾರತದ ರಕ್ಷಣಾ ವಲಯವನ್ನು ನಾವೀನ್ಯತೆಗೆ ಮುಕ್ತಗೊಳಿಸಲಾಗಿದೆ. ಇಂದು, ರಕ್ಷಣಾ ಮತ್ತು ಬಾಹ್ಯಾಕಾಶ ಕ್ಷೇತ್ರಗಳಿಗೆ ಸಂಬಂಧಿಸಿದ ನೂರಾರು ಸ್ಟಾರ್ಟ್-ಅಪ್‌ಗಳು ಭಾರತದಲ್ಲಿ ಗಮನಾರ್ಹ ಕೆಲಸ ಮಾಡುತ್ತಿವೆ.
ಇತ್ತೀಚೆಗೆ, ಭಾರತವು ಪರಮಾಣು ಇಂಧನ ವಲಯದಲ್ಲಿಯೂ ಗಮನಾರ್ಹ ಸುಧಾರಣೆಗಳನ್ನು ಕೈಗೊಂಡಿದೆ. ಈ ಸುಧಾರಣೆಗಳು ಶುದ್ಧ ಇಂಧನ, ಸುಧಾರಿತ ರಿಯಾಕ್ಟರ್‌ಗಳು ಮತ್ತು ಮುಂಚೂಣಿ ಸಂಶೋಧನೆಯ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಲು ಸಜ್ಜಾಗಿವೆ.
ಈ ಸುಧಾರಣೆಗಳ ವೇಗ ನಿಲ್ಲುವುದಿಲ್ಲ; ಇದು ನಿರಂತರವಾಗಿ ಮುಂದುವರಿಯುತ್ತದೆ. ಮತ್ತು ಭಾರತದಿಂದ ಹೊರಹೊಮ್ಮುತ್ತಿರುವ ಸ್ಟಾರ್ಟ್-ಅಪ್‌ಗಳ ಸಂಖ್ಯೆ ಹಲವು ಪಟ್ಟು ಬೆಳೆಯುತ್ತಲೇ ಇರುತ್ತದೆ.
ಸ್ನೇಹಿತರೇ,
ಒಂದು ದಶಕದ ಹಿಂದಿನವರೆಗೂ, ಜಗತ್ತು ಭಾರತವನ್ನು ತಂತ್ರಜ್ಞಾನ ಅಳವಡಿಸಿಕೊಳ್ಳುವ ದೇಶವಾಗಿ ನೋಡುತ್ತಿತ್ತು. ಇಂದು, ಭಾರತವು ತಂತ್ರಜ್ಞಾನ ಪೂರೈಕೆದಾರರಾಗಿ ಹೊರಹೊಮ್ಮುತ್ತಿದೆ. ಭಾರತವು ಏನೇ ಹೊಸತನವನ್ನು ತಂದರೂ, ಯಾವುದೇ ಪರಿಹಾರಗಳನ್ನು ನೀಡಿದರೂ, ಮಾನವೀಯತೆಯ ದೊಡ್ಡ ವರ್ಗಕ್ಕೆ ಪ್ರಯೋಜನವಾಗುತ್ತದೆ. ಇದು ಭಾರತ್ ಇನ್ನೋವೇಟ್ಸ್‌ನ ಉದ್ದೇಶವೂ ಆಗಿದೆ.
ಭಾರತ್ ಇನ್ನೋವೇಟ್ಸ್ ಭಾರತದೊಂದಿಗೆ ಜಾಗತಿಕ ನಾವೀನ್ಯತೆಯಲ್ಲಿ ಮುಂದಿನ ಅಧ್ಯಾಯವನ್ನು ಸಹ-ಸೃಷ್ಟಿಸಲು ಜಗತ್ತಿಗೆ ಆಹ್ವಾನವಾಗಿದೆ.
ಮುಂದಿನ ಮೂರು ದಿನಗಳಲ್ಲಿ ನಿಮ್ಮ ಅಧಿವೇಶನಗಳು ಮತ್ತು ಚರ್ಚೆಗಳಿಗೆ ನಾನು ನನ್ನ ಶುಭಾಶಯಗಳನ್ನು ಕೋರುತ್ತೇನೆ. ನಾವು ಪಾಲುದಾರಿಕೆಯನ್ನು ಬಯಸುತ್ತೇವೆ. ನಾವು ಸಹ-ಅಭಿವೃದ್ಧಿಯನ್ನು ಬಯಸುತ್ತೇವೆ. ನಾವು ಜಂಟಿ ಸಂಶೋಧನೆಯನ್ನು ಬಯಸುತ್ತೇವೆ. ನಾವು ಹಂಚಿಕೆಯ ಉತ್ಪಾದನೆಯನ್ನು ಬಯಸುತ್ತೇವೆ. ಮತ್ತು ನಾವು ದೀರ್ಘಕಾಲೀನ ಸಹಯೋಗವನ್ನು ಬಯಸುತ್ತೇವೆ.
ಇಂದು ಇಲ್ಲಿ ಉಪಸ್ಥಿತರಿರುವ ಪ್ರತಿಯೊಬ್ಬ ಹೂಡಿಕೆದಾರರು, ಪ್ರತಿ ವಿಶ್ವವಿದ್ಯಾಲಯ, ಪ್ರತಿ ಸಂಶೋಧನಾ ಸಂಸ್ಥೆ ಮತ್ತು ಪ್ರತಿಯೊಬ್ಬ ಉದ್ಯಮಿಗಳನ್ನು ನಾನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಭಾರತಕ್ಕೆ ಬನ್ನಿ. ನಮ್ಮೊಂದಿಗೆ ಒಟ್ಟಾಗಿ ಕೆಲಸ ಮಾಡಿ. ಭಾರತದಲ್ಲಿ ವಿನ್ಯಾಸ ಮಾಡಿ. ಭಾರತದಲ್ಲಿ ಅಭಿವೃದ್ಧಿಪಡಿಸಿ. ಮತ್ತು ಜಗತ್ತಿಗೆ ಪರಿಹಾರಗಳನ್ನು ರೂಪಿಸಿ.
ತುಂಬಾ ಧನ್ಯವಾದಗಳು.
ಘೋಷಣೆ - ಇದು ಪ್ರಧಾನಮಂತ್ರಿ ಅವರ ಹೇಳಿಕೆಗಳ ಸರಿಸುಮಾರಾದ ಅನುವಾದವಾಗಿದೆ. ಮೂಲ ಹೇಳಿಕೆಗಳನ್ನು ಹಿಂದಿಯಲ್ಲಿ ನೀಡಲಾಗಿದೆ.
*****
(रिलीज़ आईडी: 2272931)
आगंतुक पटल : 10
इस विज्ञप्ति को इन भाषाओं में पढ़ें:
English
,
Urdu
,
हिन्दी
,
Manipuri
,
Bengali
,
Bengali-TR
,
Assamese
,
Punjabi
,
Gujarati
,
Odia
,
Telugu
,
Malayalam